ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಪುರದಲ್ಲಿ 'ಕನ್ನಡ ಡಿಂಡಿಮ' - ದೀಪೋತ್ಸವ 2015

By ವಸಂತ ಕುಲಕರ್ಣಿ, ಸಿಂಗಪುರ
|
Google Oneindia Kannada News

8ನೇ ನವೆಂಬರ್ 2015ರಂದು ಬೆಳಿಗ್ಗೆ ಸಿಂಗಪುರ ಪಾಲಿಟೆಕ್ನಿಕ್ ನ ಸಭಾಂಗಣದಲ್ಲಿ ಉತ್ಸವದ ಕಂಪು, ಸಭಾಂಗಣದ ಹೊರಗೆ ಕನ್ನಡಿಗರ ಸಂಸ್ಕೃತಿಯ ಸುಗಂಧ ಎಲ್ಲೆಡೆ ಹರಡಿತ್ತು. ಸೀರೆಯುಟ್ಟ ನೀರೆಯರು ಸಭಾಂಗಣದ ಸುತ್ತಮುತ್ತ ಸಡಗರದಿಂದ ಓಡಾಡುತಿದ್ದರೆ, ಕನ್ನಡ ಸಂಘದ ಸ್ವಯಂ ಸೇವಕರು ಗಡಿಬಿಡಿಯಿಂದ ಸಭಾಂಗಣವನ್ನು ಸಜ್ಜುಗೊಳಿಸುತ್ತಿದ್ದರು.

ಕನ್ನಡ ಸಂಘದ ಅಧ್ಯಕ್ಷರಾದಿಯಾಗಿ ಎಲ್ಲ ಪದಾಧಿಕಾರಿಗಳು ಬಂದಂತಹ ಅತಿಥಿ ಮಹೋದಯರ ಸ್ವಾಗತದಲ್ಲಿ ಮತ್ತು ಅವರನ್ನು ಸುಖಾಸನದಲ್ಲಿ ಕೂರಿಸಲು ಆತುರದಿಂದ ಹೆಜ್ಜೆಗಳನ್ನು ಹಾಕುತ್ತಿದ್ದರು. ಇದೇನು ಸಮಾರಂಭ ಎನ್ನುತ್ತೀರಾ? ಅದೇ ನಮ್ಮ ಕನ್ನಡ ಸಂಘ (ಸಿಂಗಪುರ)ದ ದೀಪಾವಳಿ ಹಬ್ಬ ಮತ್ತು ರಾಜ್ಯೋತ್ಸವದ ನಿಮಿತ್ತವಾಗಿ ಏರ್ಪಡಿಸಿದಂತಹ "ಕನ್ನಡ ಡಿಂಡಿಮ" ದೀಪೋತ್ಸವ ಕಾರ್ಯಕ್ರಮ.

ಸಂಗೀತ ಮತ್ತು ಚಿಂತನಗಳ ಅಪೂರ್ವ ಸಂಗಮ : ಯಕ್ಷಗಾನದ ವಸ್ತ್ರಗಳನ್ನುಟ್ಟ ಪುತ್ಥಳಿಗಳು ಸಭಾವೇದಿಕೆಯ ಮೇಲೆ ಕಂಗೊಳಿಸುತ್ತಿದ್ದರೆ, ಕನ್ನಡ ಸಂಘದ ಬ್ಯಾನರುಗಳು ವೇದಿಕೆಯ ಮೇಲಿನಿಂದ ಹರಡಿ ಕನ್ನಡದ ಉತ್ಸವಕ್ಕೆ ಮೆರುಗು ನೀಡಿದ್ದವು. ಇಂದಿನ ದಿನ ಪೂರ್ತಿ ನಡೆಯುವ ಕನ್ನಡದ ಈ ಹಬ್ಬದಲ್ಲಿ ಪಾಲ್ಗೊಳ್ಳಲು ಬಂದ ಮಹನೀಯರು ಯಾರು ಅಂತೀರಾ? ಖ್ಯಾತ ಕವಿಗಳಾದ ದೊಡ್ಡರಂಗೇಗೌಡರು ಮತ್ತು ಎಂ.ಎನ್. ವ್ಯಾಸರಾವ್, ವಾಗ್ಮಿ ಮತ್ತು ಪ್ರಖರ ಚಿಂತಕ ಚಕ್ರವರ್ತಿ ಸೂಲಿಬೆಲೆ, ಭಾವಗೀತೆಗಳ ಪ್ರಖ್ಯಾತ ಗಾಯಕರಾದ ಪಂಚಮ್ ಹಳಿಬಂಡಿ, ಕಿಕ್ಕೇರಿ ಕೃಷ್ಣಮೂರ್ತಿ, ಮುದ್ದುಕೃಷ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹನುಮಂತಯ್ಯ ಮುಂತಾದವರು. ದೀಪೋತ್ಸವದ ಇಂದಿನ ದಿನ ಕನ್ನಡ ಸಾಹಿತ್ಯ, ಸಂಗೀತ ಮತ್ತು ಚಿಂತನಗಳ ಅಪೂರ್ವ ಸಂಗಮವನ್ನು ಸಿಂಗಪುರದ ಈ ಕರ್ಮಭೂಮಿಯಲ್ಲಿ ಕಾಣಲು ಸಿಂಗನ್ನಡಿಗರಲ್ಲ ಆತುರದಿಂದ ಕಾದಿದ್ದರು ಎಂಬುದರಲ್ಲಿ ಸಂಶಯವಿಲ್ಲ. [ದೇಶಭಕ್ತಿ ಬಡಿದೆಬ್ಬಿಸಿದ ಸೂಲಿಬೆಲೆ 'ಜಾಗೋ ಭಾರತ್']

Deepotsava 2015 by Singapore Kannada Sangha

ಸಭಾಂಗಣದ ಹೊರಗಡೆ ಸಿಂಗನ್ನಡಿಗರ ವಿವಿಧ ಬಗೆಯ ಮಳಿಗೆಗಳ ಪ್ರದರ್ಶನ, ಮಕ್ಕಳಿಗೆ ಚಿತ್ರಕಲೆಯ ಸ್ಪರ್ಧೆಗಳು, ರಂಗೋಲಿ ಸ್ಪರ್ಧೆಗಳು, ಪ್ರಾಯೋಜಕರ ಮಳಿಗೆಗಳು ಇನ್ನೂ ಅನೇಕ ಚಟುವಟಿಕೆಗಳು ನಾಡಹಬ್ಬ ಆಚರಣೆಯ ಮೆರುಗನ್ನು ಹೆಚ್ಚಿಸಿದ್ದವು. ಕಾರ್ಯಕ್ರಮದ ಮುಂಚೆ, "ಜಯ ಹೇ ಕನ್ನಡ ಮಾತೆ" ಎಂಬ ಎಚ್.ಎಸ್.ವೆಂಕಟೇಶಮೂರ್ತಿ ವಿರಚಿತ ಕವನಕ್ಕೆ ಸಂಗಮಿಸಿದ ಕನ್ನಡ ನಾಡಿನ ಜೀವ ವೈವಿಧ್ಯದ ಚಿತ್ರಸುರುಳಿಯನ್ನು ನೋಡಿ ನೆರೆದಿದ್ದ ಕನ್ನಡಿಗರೆಲ್ಲ ರೋಮಾಂಚಿತರಾದರು.

ಬಂದಂತಹ ಮಹನೀಯರೆಲ್ಲರಿಗೂ ಸ್ವಾಗತ ಕೋರುತ್ತ, ಅವರು ದೀಪವನ್ನು ಬೆಳಗಿಸುವದರೊಂದಿಗೆ ಆರಂಭವಾಯಿತು. ನಂತರ ವಿದುಷಿ ಅಶ್ವಿನಿ ಸತೀಶ್ ಅವರ ನಿರ್ದೇಶನದಲ್ಲಿ ಶ್ರೀ ನಿಜಗುಣ ಶಿವಯೋಗಿ ವಿರಚಿತ "ಜ್ಯೋತಿ ಬೆಳಗುತಿದೆ" ಎಂಬ ಸಮೂಹಗೀತೆ ಸುಂದರವಾಗಿ ಪ್ರಸ್ತುತಗೊಳಿಸಲ್ಪಟ್ಟಿತು. ವೇದಿಕೆಯ ಮೇಲೆ ಆಗಮಿಸಿದ ನಾಡಿನ ಖ್ಯಾತ ಗಾಯಕರೆಲ್ಲ ಕಲಾಶ್ರೀ ವೈ.ಕೆ. ಮುದ್ದುಕೃಷ್ಣ ಅವರ ನೇತೃತ್ವದಲ್ಲಿ "ಒಂದೇ, ಒಂದೇ ಕರ್ನಾಟಕ ಒಂದೇ" ಎಂಬ ಗೀತೆಯನ್ನು ಭವ್ಯವಾಗಿ ಹಾಡಿ ಜನರ ನಾಡ ಭಕ್ತಿಯ ನಾಡಿಯನ್ನು ಮಿಡಿದರು. ನಂತರ ಡಿ.ಎಸ್. ಕರ್ಕಿಯವರ ಸದಾ ಹಸಿರು ಗೀತೆಯಾದ "ಹಚ್ಚೇವು ಕನ್ನಡದ ದೀಪ"ವನ್ನು ತಂಡ ಹಾಡಿದಾಗ ಜನರ ಮನದಲ್ಲಿ ಕನ್ನಡದ ಡಿಂಡಿಮ ಮೊಳಗುತ್ತಿತ್ತು.

ಕನ್ನಡ ಸಂಘ ಸಿಂಗಪುರದ ಅಧ್ಯಕ್ಷ ವಿಜಯ ರಂಗ ಪ್ರಸಾದ್ ಅವರು ಸಿಂಗನ್ನಡಿಗರನ್ನು ಉದ್ದೇಶಿಸಿ ಮಾತನಾಡುತ್ತ ಕನ್ನಡ ನಾಡಿನಿಂದ ಬಂದ ಸಾಹಿತಿಗಳು ಮತ್ತು ಕಲಾವಿದರಿಗೆ ಸ್ವಾಗತ ಕೋರಿದರು. "ನಮ್ಮವರು ಗಳಿಸಿದ ಹೆಸರುಳಿಸಲು ಎಲ್ಲಾರೂ ಒಂದುಗೂಡೇವು" ಎಂದು ಕರೆಕೊಟ್ಟು ಕಾರ್ಯಕ್ರಮದ ಯಶಸ್ಸಿಗೆ ಸದಾ ಬದ್ಧರಾದ ಸಿಂಗನ್ನಡಿಗರಿಗೆ ಸ್ವಾಗತ ಕೋರಿದರು.

ಖ್ಯಾತ ವಿದುಷಿ ನಾಗಲಕ್ಷ್ಮಿ ಕೆ ರಾವ್ ಅವರು "ಭೋ ಶಂಭೋ, ಶಿವ ಶಂಭೋ, ಸ್ವಯಂಭೋ" ಗೀತೆಗೆ ಅಮೋಘವಾದ ಸ್ವಾಗತ ನೃತ್ಯವನ್ನು ಪ್ರಸ್ತುತಪಡಿಸಿದರು. ನಂತರ ಕಲಾಶ್ರೀ ವೈ.ಕೆ. ಮುದ್ದುಕೃಷ್ಣ ಅವರ ನೇತೃತ್ವದಲ್ಲಿ ಕಾರ್ಯಕ್ರಮದ ಮುಖ್ಯ ಅಂಗವಾದ "ಕವಿಯ ನೋಡಿ ಕವಿತೆ ಕೇಳು" ಆರಂಭವಾಯಿತು. ನಾಡಿನ ಸುಪ್ರಸಿದ್ಧ ಕವಿಗಳನ್ನು ವೇದಿಕೆಯ ಮೇಲೆ ಕೂರಿಸಿ ಅವರ ಸಮ್ಮುಖದಲ್ಲಿಯೇ ಅವರು ಮತ್ತು ಇತರ ಖ್ಯಾತರು ರಚಿಸಿದ ಭಾವಗೀತೆಗಳನ್ನು ಹಾಡುವದನ್ನು ನೋಡುವ ಸೌಭಾಗ್ಯ ಸಿಂಗನ್ನಡಿಗರದಾಗಿತ್ತು.

Deepotsava 2015 by Singapore Kannada Sangha

ಮೊದಲು ಬಿ.ಆರ್. ಲಕ್ಷ್ಮಣರಾವ್ ಅವರ "ಕರ್ನಾಟಕ ಬರೀ ನಾಡಲ್ಲ, ನಮ್ಮ ಸಂಸ್ಕೃತಿಯ ದಾಟು" ಎಂಬ ಸೊಗಸಾದ ಹಾಡಿನ ಮೂಲಕ ಶುರುವಾದ ಈ ಕಾರ್ಯಕ್ರಮ ನಂತರ ದೊಡ್ಡರಂಗೇಗೌಡ ಅವರ "ಚಿತ್ತಾರ ಬಿಡಿಸ್ಯಾವೆ, ಮುಂಗಾರ ಮಳೆ ನೋಡ" ಗೀತೆ ಶ್ರೀನಿವಾಸ ಉಡುಪ" ಅವರ ಕಂಚಿನ ಕಂಠದಲ್ಲಿ ಮೂಡಿ ಬಂದಿತು. ಎಂ. ಎನ್. ವ್ಯಾಸರಾವ್ ಅವರ "ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ ನನ್ನದೆಯ ಕಡಲೇಕೆ ಬೀಗುತಿಹುದು" ಗೀತೆಯನ್ನು ಸೀಮಾ ರಾಯ್ಕರ್ ಅವರು ತಮ್ಮ ಸುಶ್ರಾವ್ಯ ಕಂಠದಿಂದ ಹಾಡಿ ರಂಜಿಸಿದರು. ಕುವೆಂಪುರವರ "ಕನ್ನಡವೇ ಸತ್ಯ, ಕನ್ನಡವೇ ನಿತ್ಯ" ಅವರ ಗೀತೆಯನ್ನು ಡಾ.ಕಿಕ್ಕೇರಿ ಕೃಷ್ಣಮೂರ್ತಿ ಅವರು ಅಮೋಘವಾಗಿ ಹಾಡಿ ಪುಳಕಿತಗೊಳಿಸಿದರು. ಡಾ. ಮುದ್ದು ಮೋಹನ್ ಅವರು ಜಿ.ಎಸ್.ಶಿವರುದ್ರಪ್ಪ ಅವರ "ಹೃದಯಾಂತರಾಳದಲ್ಲಿ ಹುದುಗಿ ಹೊಮ್ಮುವ ನೋವ" ಹಾಡನ್ನು ಭಾವಪೂರ್ಣವಾಗಿ ಹಾಡಿದರು.

ಈ ಕಾರ್ಯಕ್ರಮದ ನಂತರ ಡಾ.ಭಾಗ್ಯ ಮೂರ್ತಿ ಅವರ ನಿರ್ದೇಶನದಲ್ಲಿ ಎಂ.ಎಸ್. ವ್ಯಾಸರಾವ್ ಅವರು ರಚಿಸಿದ "ನಮ್ಮ ನೆಲವಿದು ಹೊನ್ನ ನೆಲವಿದು ಚೆಲುವ ಕನ್ನಡ ನಾಡು" ಎಂಬ ಹಾಡನ್ನು ಪ್ರಸ್ತುತಗೊಳಿಸಿದವರು ಸಿಂಗನ್ನಡಿಗ ಹವ್ಯಾಸಿ ಗಾಯನ ತಂಡದವರು.

ವಿವಿಧ ಸ್ಪರ್ಧೆಗಳ ಫಲಿತಾಂಶ : ಸಿಂಚನ ಮಾಸಪತ್ರಿಕೆಯ ಚಿತ್ರಸುರುಳಿಯ (ಸಂಕಲನ: ಶ್ರೀ ಜಯಪ್ರಕಾಶ್ ರಾವ್) ಪ್ರದರ್ಶನದ ನಂತರ ಸಿಂಚನ ಸಾಹಿತ್ಯ ಸ್ಪರ್ಧೆಯ ಫಲಿತಾಂಶಗಳನ್ನು ಪ್ರಕಟಿಸಿ ಸಿಂಗಪುರದ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಸಿಂಗಾರ ಪುರಸ್ಕಾರ, ಸಿಂಗಾರ ಅವಧಾನಿ ಪುರಸ್ಕಾರ. ಹಾಗೂ ಕನ್ನಡ ಕಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಡಾ.ಹನುಮಂತಯ್ಯ ಮತ್ತು ಡಾ.ಮುರಳಿಧರ್ ಅವರು ಈ ಪ್ರಶಸ್ತಿ ವಿತರಣೆ ಮಾಡಿದರು. ನಂತರ ಡಾ.ಹನುಮಂತಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡ ಭಾಷೆ ಕೇವಲ ಭಾಷೆ ಮಾತ್ರವಲ್ಲ. ಅದು ಒಂದು ವಿಶಿಷ್ಟ ಸಂಸ್ಕೃತಿ ಮತ್ತು ಶ್ರೀಮಂತ ಪರಂಪರೆ, ಆದುದರಿಂದ ಅದನ್ನು ಉಳಿಸಿ ಬೆಳೆಸುವದು ಕನ್ನಡಿಗರೆಲ್ಲರ ಕರ್ತವ್ಯ ಎಂದು ಅವರು ಹೇಳಿದರು.

ಭೋಜನ ವಿರಾಮದ ನಂತರ ಮಲಬಾರ್ ಗೋಲ್ಡ್ ಅವರು ಪ್ರಾಯೋಜಿಸಿದ ಅದೃಷ್ಟ ಚೀಟಿಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ನಂತರ ಶೋಭಾ ರಘು ಅವರ ನಿರ್ದೇಶನದಲ್ಲಿ ಡಾ. ಸಿದ್ಧಯ್ಯ ಪುರಾಣಿಕರ "ಹೊತ್ತಿತೋ ಹೊತ್ತಿತು ಕನ್ನಡದ ದೀಪ" ಗೀತೆಯನ್ನು ಸ್ಥಳೀಯ ಹವ್ಯಾಸಿ ಗಾಯನ ತಂಡದವರು ಭಾವಪೂರ್ಣವಾಗಿ ಹಾಡಿದರು.

ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು. "ಚಿತ್ರಕಲೆ ಸ್ಪರ್ಧೆಗಳ ವಿಭಾಗ -ಎ"ದಲ್ಲಿ ತನುಷಾ ಹರೀಶ್ (ಪ್ರಥಮ), ನೈನಿಕಾ (ದ್ವಿತೀಯ), ಸ್ಪೂರ್ತಿ (ತೃತೀಯ) ಹಾಗೂ "ವಿಭಾಗ-ಬಿ"ನಲ್ಲಿ ವೇದಭಟ್ (ಪ್ರಥಮ), ಅಮೋಘ್ ಆತ್ರೇಯ (ದ್ವಿತೀಯ), ಮೇಘನ ನಿಯೋಗಿ(ತೃತೀಯ), ಹಿರಿಯರಿಗೆಂದು ನಡೆದ "ಪರಿಸರ ಸ್ನೇಹಿ ರಂಗೋಲಿ ಸ್ಪರ್ಧೆಗಳಲ್ಲಿ ಚಿನ್ಮಯಿ ನಾಡಿಗೇರ್ (ಪ್ರಥಮ) ಹಾಗೂ ಶುಭಾ ಎಚ್.ಎನ್ (ದ್ವಿತೀಯ) ಬಹುಮಾನಗಳನ್ನು ಪಡೆದರು.

ಸಿಂಗಾರ ಅಜೀವ ಸಾಧನೆ ಪುರಸ್ಕಾರವನ್ನು ನೃತ್ಯ ಪಟು ಡಾ. ಸಿರಿ ರಾಮ ಅವರಿಗೆ ಕಲಾ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಕಾಣಿಕೆಯನ್ನು ಗುರುತಿಸಿ ನೀಡಲಾಯಿತು. ರಾಮ್ ಪ್ರಸಾದ್ ಮತ್ತು ಸಂಧ್ಯಾ ರಾಮ ಪ್ರಸಾದ್ ಅವರಿಗೆ ಸಮಾಜಸೇವೆ ಕಾರ್ಯಕ್ಕಾಗಿ ನೀಡಲಾಯಿತು.

ಸಿಂಗಾರ ಸಾಹಿತ್ಯ ರತ್ನ ಪ್ರಶಸ್ತಿ : ಕವಿವರ್ಯ ಡಾ. ದೊಡ್ಡರಂಗೇಗೌಡ ಅವರ ಬದುಕು ಸಾಧನೆಗಳನ್ನು ಸುಂದರವಾಗಿ ಮೂಡಿಸಿದ ಚಿತ್ರಸುರುಳಿಯನ್ನು (ಸಂಕಲನ: ಗಿರೀಶ್ ಜಮದಗ್ನಿ) ತೋರಿಸಿದಾಗ ನೆರೆದ ಸಭಿಕರೆಲ್ಲ ಚಪ್ಪಾಳೆ ತಟ್ಟಿ ಅಭಿನಂದನೆಗಳನ್ನು ಸಲ್ಲಿಸಿದರು. ಅವರಿಗೆ ಕನ್ನಡ ಸಂಘ ಸಿಂಗಾರ ಸಾಹಿತ್ಯ ರತ್ನ ಪ್ರಶಸ್ತಿ ನೀಡಲಾಯಿತು. ಶಾಲು ಹೊದಿಸಿ ಪೇಟ ತೊಡಿಸಿ ಸನ್ಮಾನ ಮಾಡಿದಾಗ ಇಡೀ ಸಭೆ ಎದ್ದು ನಿಂತು ಗೌರವ ಸಲ್ಲಿಸಿತು. ವಿನುತಾ ಭಟ್ ಮತ್ತು ತಂಡದವರಿಂದ ಸಮೂಹ ಗಾಯನ. ಉಪಾಸನಾ ಮೋಹನ್ ಅವರ ಸಂಯೋಜನೆಯ ಹಾಡುಗಳ ಗುಚ್ಚ "ಭಾವಗುಚ್ಚ"ವನ್ನು ತಮ್ಮ ಸುಶ್ರಾವ್ಯವಾಗಿ ಕನ್ನಡ ಜನತೆಗೆ ಪ್ರಸ್ತುತಪಡಿಸಿದ ಈ ತಂಡ ಜನರ ಮನವನ್ನು ಗೆದ್ದಿತು.

ಸೂಲಿಬೆಲೆ ಅಮೋಘ ಭಾಷಣ : ಜನರೆಲ್ಲ ಕಾಯುತ್ತಿದ್ದ ಚಕ್ರವರ್ತಿ ಸೂಲಿಬೆಲೆ ಅವರ "ದೇಶ ಕಟ್ಟುವಲ್ಲಿ ಕನ್ನಡಿಗರ ಪಾತ್ರ" ಎಂಬ ವಿಷಯದ ಮೇಲಿನ ಚಿಂತನಶೀಲ ಪ್ರವಚನ ಆರಂಭವಾಯಿತು. ಕನ್ನಡ ಮತ್ತು ಭಾರತೀಯರ ಸಂಪ್ರದಾಯಗಳ ಹಿರಿಮೆಯನ್ನು ಗಂಟೆಗೂ ಮೀರಿ ನಿರರ್ಗಳವಾಗಿ ಮಾತನಾಡಿದ ಚಕ್ರವರ್ತಿ ಸಭಿಕರನ್ನು ಸೆಳೆದಿಟ್ಟು ಚಿಂತನೆಗೆ ಒಳಪಡಿಸಿದರು. ಸಾವಿರಾರು ವರ್ಷಗಳ ಅಪ್ರತಿಮ ಇತಿಹಾಸ, ಸಂಸ್ಕೃತಿಗಳನ್ನು ಹೊಂದಿದ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಬೀಗುವಂತೆ ಮಾಡಿದರು. ಇಡೀ ವಿಶ್ವಕ್ಕೇ ಗುರುವಾಗುವಂತಹ ರಾಷ್ಟ್ರ ನಮ್ಮ ಭಾರತ, ವಿಶ್ವಕ್ಕೆ ಭಾರತ ನೀಡಿದ ಪ್ರತಿಭೆಯ ಕೊಡುಗೆ ನೀವೆಲ್ಲ ಎಂದಾಗ ಇಡೀ ಸಭೆಯೇ ಚಪ್ಪಾಳೆ ತಟ್ಟಿ ಸ್ವಾಗತಿಸಿತು. ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ ಎಂದು ನಮ್ಮೆಲ್ಲರಿಗೂ ಮತ್ತೊಮ್ಮೆ ನೆನಪು ಮಾಡಿಕೊಟ್ಟ ಚಕ್ರವರ್ತಿಯವರಿಗೆ ಕನ್ನಡ ಸಂಘ ಶಾಲು ಹೊದಿಸಿ ಪೇಟ ತೊಡಿಸಿ ಗೌರವಿಸಿತು.

ಮಲಬಾರ್ ಗೋಲ್ಡ್ ಅವರು ಪ್ರಾಯೋಜಿಸಿದ ಅಂತಿಮ ಸುತ್ತಿನ ಅದೃಷ್ಟ ಚೀಟಿಯಲ್ಲಿ ಗೆದ್ದವರಿಗೆ ವಜ್ರದ ಲೋಲಕದ ಬಹುಮಾನವನ್ನು ಪ್ರಾಯೋಜಕರಾಲ್ಲೊಬ್ಬರಾದ "ಮಲಬಾರ್ ಚಿನ್ನ ಮತ್ತು ವಜ್ರ"ದ ಭರಣಿಯವರು ನೀಡಿದರು. ಭಾರ್ಗವಿ ಆನಂದ್ ಮತ್ತು ಅರುಣ್ ರಾಮಕೃಷ್ಣ ಅವರ ನಿರೂಪಣೆ ಉನ್ನತ ಮಟ್ಟದ್ದಾಗಿದ್ದರೆ, ಅವರಿಗೆ ತೆರೆಮರೆಯಲ್ಲಿ ಉನ್ನತ ಮಟ್ಟದ ಸಹಕಾರ ನೀಡಿದವರು ಸಾಧ್ವಿ ಸಂಧ್ಯಾ. ಸಮಾರಂಭದ ಕೊನೆಯಲ್ಲಿ ಸಿಂಗನ್ನಡಿಗರ ಪರವಾಗಿ ಸಂಘದ ಅಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರು ಆಹ್ವಾನಿತ ಕಲಾವಿದರಿಗೆ ಮತ್ತು ಪ್ರಾಯೋಜಕರಿಗೆ ಗೌರವ ಕಾಣಿಕೆಯನ್ನರ್ಪಿಸಿದರು. ವೆಂಕಟ್ ಅವರು ಎಲ್ಲಾ ಕಲಾವಿದರಿಗೆ, ಮುಖ್ಯ ಪ್ರಾಯೋಜಕರಾದ ಡಿಪ್ಲೋರ, ಸಹಕಾರವನ್ನು ನೀಡಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಸಹ ಪ್ರಾಯೋಜಕರಾದ ಎಸ್.ಬಿ.ಐ ಸಿಂಗಪುರ, ಮಲಬಾರ್ ಗೋಲ್ಡ್ ಮತ್ತು ಡೈಮಂಡ್, ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಎಲ್ಲಾ ಸ್ವಯಂ ಸೇವಕರಿಗೆ ವಂದನಾರ್ಪಣೆ ಮಾಡಿದರು.

ಸಿಂಗಾರ ಪುರಸ್ಕಾರ : ಕನ್ನಡ ಸಂಘದಿಂದ ಪ್ರತಿ ವರ್ಷ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಾಧನೆಯನ್ನು ಗೈಯ್ದ ಮಕ್ಕಳನ್ನು ಗುರುತಿಸಿ ನೀಡುವ ಪುರಸ್ಕಾರಗಳಲ್ಲಿ ಈ ಬಾರಿ ಹೊಸದಾಗಿ "ಸಿಂಗಾರ ಅವಧಾನಿ ಪುರಸ್ಕಾರ" ಸೇರ್ಪಡೆಯಾಗಿದೆ. ಈ ಬಾರಿಯ ಸಿಂಗಾರ ಪುರಸ್ಕಾರ ಚಿ.ನಾಗರಾಜ್ ಅರ್ಚಕ್ - 12ನೇ ತರಗತಿ (CBSE), ಕುಮಾರಿ ಶರಣ್ಯ ಗಿರೀಶ್- 12ನೇ ತರಗತಿ (CBSE)ಯಲ್ಲಿ ಉನ್ನತ ದರ್ಜೆ ಗಳಿಸಿದ್ದುದಕ್ಕಾಗಿ ಹಾಗೂ ಕುಮಾರಿ ನಿಕಿತಾ ಪ್ರಸಾದ್ - 10ನೇ ತರಗತಿ (CBSE), ಕುಮಾರಿ ಜ್ಯೋತ್ಸ್ನಾರಾಮಕೃಷ್ಣ (P.S.L.E) ಉನ್ನತ ಸಾಧನೆಯನ್ನು ಗುರುತಿಸಿ "ಸಿಂಗಾರ ಅವಧಾನಿ ಪುರಸ್ಕಾರ"ವನ್ನು ನೀಡಿ ಅಭಿನಂದಿಸಲಾಯಿತು.

ಸಿಂಚನ ಸಾಹಿತ್ಯ ಸ್ಪರ್ಧೆ -2015 : ವರುಷದಿಂದ ವರುಷಕ್ಕೆ ಪ್ರಪಂಚದಾದ್ಯಂತ ಸಾಹಿತ್ಯಾಸಕ್ತರಲ್ಲಿ ಜನಪ್ರಿಯವಾಗುತ್ತಿದೆ ನಮ್ಮ ಕನ್ನಡ ಸಂಘ (ಸಿಂಗಪುರ)ದ ವಾರ್ಷಿಕ ಸಿಂಚನ ಸಾಹಿತ್ಯ ಸ್ಪರ್ಧೆ. ಕಳೆದ ಮೂರು ವರ್ಷಗಳಲ್ಲಿ ಬಹಳ ಯಶಸ್ವಿಯಾಗಿದ್ದ ಈ ಸ್ಪರ್ಧೆಯ ನಾಲ್ಕನೆಯ ವರ್ಷದ ಸ್ಪರ್ಧೆಗೆ ಆಗಸ್ಟ್ ತಿಂಗಳಲ್ಲಿ ಕಥೆ ಮತ್ತು ಕವನಗಳನ್ನು ವಿಶ್ವಕನ್ನಡಿಗರಿಂದ ಆಹ್ವಾನಿಸಲಾಗಿತ್ತು. ಕಳೆದ ವರ್ಷಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಥೆ, ಕವನಗಳು ಬಂದದ್ದು ಸಿಂಚನ ಸಾಹಿತ್ಯ ಸ್ಪರ್ಧೆಯ ಜನಪ್ರಿಯತೆಗೆ ಹಿಡಿದ ಕನ್ನಡಿ.

ಈ ವರ್ಷ ವಿಶೇಷವಾಗಿ ಅನಿವಾಸಿ ಬರಹಗಾರರಿಗೆ ಪ್ರತ್ಯೇಕ ವಿಭಾಗದಲ್ಲಿ ಬರಹಗಳನ್ನು ಕಳುಹಿಸುವ ಅವಕಾಶ ನೀಡಲಾಗಿತ್ತು. ಇಂದಿನ ಕಾರ್ಯಕ್ರಮದಲ್ಲಿ ಸಿಂಚನ ಸಾಹಿತ್ಯ ಸ್ಪರ್ಧೆಗಳ ಸಮಿತಿಯ ಸದಸ್ಯರಾದ ಗಿರೀಶ್ ಜಮದಗ್ನಿ ಹಾಗೂ ವೆಂಕಟ್, ಸಿಂಚನ ಪತ್ರಿಕೆಯ ಪ್ರಧಾನ ಸಂಪಾದಕಿ ಅರ್ಚನ ಪ್ರಕಾಶ್, ಹಿರಿಯ ಕವಿಗಳಾದ ದೊಡ್ಡರಂಗೇಗೌಡ ಹಾಗೂ ಎಂ.ಎಸ್.ವ್ಯಾಸರಾವ್ ಅವರ ಸಮ್ಮುಖದಲ್ಲಿ ವಿಜೇತರ ಹೆಸರನ್ನು ಘೋಷಿಸಲಾಯಿತು.

ಈ ಕಾರ್ಯಕ್ರಮದ ಕೊನೆಯ ಭಾಗದಲ್ಲಿ ವೈ ಕೆ ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಅವರ ತಂಡ ಜನಪ್ರಿಯ ಗೀತೆಗಳನ್ನು ಹಾಡಿ ಸಭಿಕರನ್ನು ರಂಜಿಸಿತು. ನಾಡಗೀತೆಯೊಂದಿಗೆ ಮುಕ್ತಾಯವಾದ ಈ ಕಾರ್ಯಕ್ರಮ ಹಬ್ಬದ ವಾತಾವರಣ ಹಾಗೂ ದೇಶ ಮತ್ತು ಭಾಷಾಪ್ರೇಮವನ್ನು ಪುನಃ ಬಡಿದೆಬ್ಬಿಸುವಲ್ಲಿ ಯಶಸ್ವಿಯಾಗಿತ್ತು. [ವರದಿ : ವಸಂತ ಕುಲಕರ್ಣಿ (ಸಿಂಗಪುರ), ಛಾಯಾಚಿತ್ರ : ಕನ್ನಡ ಸಂಘ (ಸಿಂಗಪುರ)]

English summary
Deepotsava 2015 was celebrated in Singapore by Kannada Sangha recently. Laureates Doddarange Gowda, MN Vyasarao, orator Chakravarti Sulibele, Pancham Halibandi, YK Muddukrishna were part of this mega Kannada event. Many prices were also distributed to the winners of various competitions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X