ಸಿಂಗಪುರದಲ್ಲಿ ಕನ್ನಡದ ಕಂಪು ಸಂಗೀತದ ಇಂಪು

ಕರ್ನಾಟಕದಿಂದಾಚೆಗೆ ನಮ್ಮ ಸುಂದರ ಕನ್ನಡದ ದಾಸಸಾಹಿತ್ಯದ ಸಂಗೀತ ಕಲಿಸುವವರು ಹಾಗೂ ಕಲಿಯುವವರು ಕಡಿಮೆ ಎಂದೇ ಹೇಳಬಹುದು. ಅದರಲ್ಲೂ ವಿದೇಶದಲ್ಲಿ ಈ ಸಮಸ್ಯೆ ಬೇರೆ ರೂಪವನ್ನೇ ಪಡೆದುಕೊಳ್ಳುತ್ತದೆ. ಕಲಿಸುವವರು ಹಾಗೂ ಕಲಿಯುವವರು ಇದ್ದರೂ ಅವರ ಶಾಲೆ, ಆಫೀಸ್ ಕೆಲಸ; ವಿವಿಧ ವಿಶೇಷ ತರಗತಿಗಳು ಇತ್ಯಾದಿ ಹಲವಾರು ಕಾರಣಗಳಿಂದ ಸಮಯ ಹೊಂದಾಣಿಕೆಯಾಗುವುದು ಬಹಳ ಕಷ್ಟ. ಆದರೆ ಇಂಥದೊಂದು ಪ್ರಯತ್ನದ ಫಲವಾಗಿ ಮೊಟ್ಟಮೊದಲ "ದಾಸಸಾಹಿತ್ಯ ಸಂಗೀತ ಶಿಬಿರ" ಸಿಂಗಪುರದಲ್ಲಿ ನಡೆದಿದೆ. ಈ ಕಾರ್ಯಕ್ರಮದ ರೂವಾರಿ ವಿದುಷಿ ಅಶ್ವಿನಿ ಸತೀಶ್.

ಸಂಗೀತ ಶಿಬಿರದ ಹಿನ್ನೆಲೆ : ಈ ಮೊದಲು ದುಬೈನಲ್ಲಿ ಕಡಿಮೆ ಅವಧಿಯ ಹಲವಾರು ಸಂಗೀತ ಶಿಬಿರಗಳನ್ನು ಆಯೋಜಿಸಿದ್ದ ಅಶ್ವಿನಿಯವರು ತಮ್ಮ ಈಗಿನ ನೆಲೆಯಾದ ಸಿಂಗಪುರದಲ್ಲೂ ಇಂಥದೊಂದು ಶಿಬಿರವನ್ನು ನಡೆಸುವ ಕನಸು ಹೊತ್ತು, ಸೆಪ್ಟೆಂಬರ್ 15, 2013ರಂದು ಸಂಗೀತಾಸಕ್ತ ಮಕ್ಕಳು, ಮಹಿಳೆಯರು ಹಾಗೂ ಪುರುಷರನ್ನು ಒಂದುಗೂಡಿಸಿ ಸಿಂಗಪುರದಲ್ಲಿ ಮೊಟ್ಟ ಮೊದಲ "ದಾಸಸಾಹಿತ್ಯ ಸಂಗೀತ ಶಿಬಿರ"ವನ್ನು ಆಯೋಜಿಸಿದರು. ಸುಮಾರು ಹತ್ತು ವಾರಾಂತ್ಯಗಳಲ್ಲಿ ಕನ್ನಡದ ಪ್ರಖ್ಯಾತ ದಾಸಶ್ರೇಷ್ಠರ ಹಾಗೂ ಅಷ್ಟೇನೂ ಪ್ರಚಲಿತರಾಗಿಲ್ಲದ ಹಲವಾರು ಕನ್ನಡ ಹರಿದಾಸರ ಕೃತಿಗಳನ್ನು ಸಂಗೀತಾರ್ಥಿಗಳಿಗೆ ಹೇಳಿಕೊಟ್ಟರು.

Dasa sahitya music workshop in Singapore

ಸಂಗೀತ ಕಾರ್ಯಕ್ರಮ : ಹತ್ತು ವಾರಗಳ ತರಬೇತಿಯು 17-ನವೆಂಬರ್ 2013ರಂದು ಒಂದು ಚಿಕ್ಕ, ಚೊಕ್ಕ ಸಂಗೀತ ಕಚೇರಿಯ ಮೂಲಕ ಸಮಾಪ್ತಿಗೊಂಡಿತು. ಸುಮಾರು 30 ವರ್ಷಗಳ ಹಿಂದೆ ಸಿಂಗಪುರಕ್ಕೆ ಬಂದು ನೆಲೆಯೂರಿ ಕನ್ನಡ ಹಾಗೂ ಕರ್ನಾಟಕ ಸಂಗೀತವನ್ನು ಬೆಳೆಸಿದ ಖ್ಯಾತ ಸಂಗೀತ ಕಲಾವಿದೆ, ನಾದನಿಧಿ ಭಾಗ್ಯಮೂರ್ತಿಯವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ಸಂಗೀತಾರ್ಥಿಗಳಿಗೆ ಪ್ರೋತ್ಸಾಹ ಮತ್ತು ಹಿತವಚನ ನೀಡಿದರು.

ಕಾರ್ಯಕ್ರಮವು ಕನಕದಾಸರ ಸುಪ್ರಸಿದ್ಧ ರಚನೆ "ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ" ಸಮೂಹಗಾನದೊಂದಿಗೆ ಪ್ರಾರಂಭಗೊಂಡಿತು. ಮುಂದೆ ಸುಮಾರು 1 ಗಂಟೆಯ ಕಾಲ ಈ ಸಂಗೀತ ಶಿಬಿರದ ವಿದ್ಯಾರ್ಥಿಗಳು ಪುರಂದರದಾಸರು, ಶ್ರೀಪಾದರಾಜರು, ಅಪರೂಪದ ಮಹಿಳಾ ಹರಿದಾಸರಾದ ಅಂಬಾಬಾಯಿ, ವಾದಿರಾಜರು ಮತ್ತು ಬಳ್ಳಾರಿ ಶೇಷಗಿರಿ ಆಚಾರ್‌ ಅವರ ಹಾಡುಗಳನ್ನು ರಸವತ್ತಾಗಿ ಹಾಡಿದರು.

Dasa sahitya music workshop in Singapore

ವೈವಿಧ್ಯಮಯ ರಾಗಗಳ ಹಾಗೂ ಸುಂದರ ಸಾಹಿತ್ಯದ ಹಾಡುಗಳ ಆಯ್ಕೆ; ಕನ್ನಡವನ್ನು ಓದಲು, ಬರೆಯಲು, ನಿರರ್ಗಳವಾಗಿ ಮಾತನಾಡಲು ಬರದಿದ್ದರೂ ಹಾಡಲು ಕಲಿತ ಮಕ್ಕಳ ಪರಿಶ್ರಮ ಹಾಗೂ ಯಾವುದೇ ಅಬ್ಬರ-ಆಡಂಬರಗಳಿಲ್ಲದ ಸರಳ ಕಾರ್ಯಕ್ರಮ ಎಲ್ಲ ಸಭಿಕರ ಮೆಚ್ಚುಗೆ ಗಳಿಸಿತು.

ಸಂಗೀತಾರ್ಥಿಗಳು ತಮ್ಮ ಅನುಭವ-ಅನಿಸಿಕೆಗಳನ್ನು ಹಂಚಿಕೊಂಡರಲ್ಲದೇ ಇದೇ ರೀತಿ ಸಂಗೀತಾಭ್ಯಾಸವನ್ನು ಮುಂದುವರೆಸಿಕೊಂಡು ಹೋಗುವ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮವು ಕರ್ನಾಟಕದ ದಾಸಸಾಹಿತ್ಯಕ್ಕೆ ಅಪಾರ ಕೊಡುಗೆ ಇತ್ತ ಕೆಲವೇ ಮಹಿಳೆಯರಲ್ಲೊಬ್ಬರಾದ "ಹರಪನಹಳ್ಳಿ ಭೀಮವ್ವ" ಅವರ ರಚನೆಯ "ಮಂಗಳಾರತಿ ತಂದು ಬೆಳಗಿರೆ" ಹಾಡಿನೊಂದಿಗೆ ಸಂಪನ್ನವಾಯಿತು.

Dasa sahitya music workshop in Singapore

ಅಶ್ವಿನಿ ಸತೀಶ್ ಅವರ ಬಗ್ಗೆ : ಆಕಾಶವಾಣಿ ಬೆಂಗಳೂರಿನ B HIGH ಶ್ರೇಣಿಯಲ್ಲಿ ಕರ್ನಾಟಕ ಶಾಸ್ತ್ರೀಯ, ಲಘು ಶಾಸ್ತ್ರೀಯ ಸಂಗೀತ ಹಾಗೂ ಲಘು ಸಂಗೀತ ಕಲಾವಿದೆಯಾದ ಅಶ್ವಿನಿ ಸತೀಶ್ ಅವರು ದುಬೈನಲ್ಲಿ ಕೆಲವು ವರ್ಷಗಳಿದ್ದು, ಸಿಂಗಪುರಕ್ಕೆ ಬಂದದ್ದು 2012ರ ಉತ್ತರಾರ್ಧದಲ್ಲಿ. ವಿದುಷಿ ಡಾ.ಟಿ. ಎಸ್. ಸರಸ್ವತಿ ಅವರ ಬಳಿ ಸಂಗೀತ ಕಲಿತ ಅಶ್ವಿನಿ ಅವರು ಉದಯ, ಚಂದನ, ಈ-ಟಿವಿ, ಸುವರ್ಣ ಮೊದಲಾದ ಕನ್ನಡ ದೂರದರ್ಶನ ಚಾನೆಲ್‌ಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಭಾರತ, ದುಬೈ, ಬರ್ಮಿಂಗ್‌ಹ್ಯಾಮ್ ಮತ್ತು ಸಿಂಗಪುರದಲ್ಲಿ ಹಲವಾರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಲ್ಲದೆ, ತಮ್ಮದೇ ಹಲವಾರು ಸಂಗೀತ ಸುರುಳಿಗಳನ್ನೂ ಬಿಡುಗಡೆ ಮಾಡಿದ್ದಾರೆ. ಸಿಂಗಪುರದಲ್ಲಿ ಅವರು ಕನ್ನಡ ಸಂಘ ಸಿಂಗಪುರ ಮತ್ತು Singapore Indian Fine Arts Society (SIFAS) ಸಂಸ್ಥೆಗಳು ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಾಗೂ ಸಿಂಗಪುರದ ಹಲವಾರು ದೇವಸ್ಥಾನಗಳಲ್ಲಿ ಆಯೋಜಿಸಿದ ಸಂಗೀತ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. (ಚಿತ್ರಗಳು : ವೃಂದಾ ಕುಲಕರ್ಣಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+