ಅಮೆರಿಕ ಸೇನೆಯ 'ಹಮ್ ವೀ' ಜೊತೆಗೊಂದಿಷ್ಟು ಹಮ್ಮಿಂಗ್

By: ಜಯಶ್ರೀ ದೇಶಪಾಂಡೆ
Subscribe to Oneindia Kannada

ಎಲ್ಲೆಲ್ಲೋ ಸುತ್ತಿ ದಣಿದು ಬಂದು ವಿಶ್ರಾಂತಿ ಪಡೆಯುತ್ತಾ ಕೂತ ಸೀನಿಯರ್ ಸಿಟಿಜನ್ ಒಬ್ಬ ತನ್ನೆಡಬಲಕ್ಕೆ ಕಾಲಿಟ್ಟವರನ್ನು ಕರೆದು ಮಾತಾಡಿಸುವಂತೆ ಮೌನದಲ್ಲೇ ಕರೆದು ತನ್ನ ಕತೆ ಹೇಳುವ 'ಹಮ್ ವೀ' ಜೊತೆ ಇತ್ತೀಚೆಗೆ ನಾ ಇನ್ನೊಂದು ಮುಲಾಕಾತ್ ನಡೆಸಿದೆ.

ಬಾಯಿ ಬಿಡದೆಯೂ ತನ್ನ ಸಾಹಸವನ್ನ ತಲೆಯ ಮೇಲೆ ಹೊತ್ತ ಮಾನಿಟರಿನಲ್ಲಿ ನೋಡಿ, ಕೇಳು ಅಂತ ಆಹ್ವಾನ ನೀಡಿ ರಣರಂಗದಲ್ಲಿ ತಾನು ಗೈದ ಸಾಹಸಗಳ ಸಾರೋದ್ಧಾರ ಸಂಗತಿಗಳನ್ನು ಮತ್ತೆ ಮತ್ತೆ ಚೆಲ್ಲುತ್ತಿದ್ದ ಹಮ್ ವೀ/ ಹಮ್ಮರ್ ಎದುರಿನಲ್ಲೇ ಪ್ರತ್ಯಕ್ಷವಾಗಿ ಮೊದಲು ಒಂದಿಷ್ಟು ತಲೆ ಕೆಡಸಿ ತರ್ಕಾತರ್ಕಗಳ ಚಕ್ರವ್ಯೂಹವನ್ನು ಹೊಕ್ಕು ಬರುವಂತೆ ನನ್ನ ಕೆಣಕಿತ್ತು... (ಅತಿಥಿಗಳ ಆದರಾತಿಥ್ಯಕ್ಕೆ 'ಅಕ್ಕ' ಆತಿಥ್ಯ ತಂಡ ಸಜ್ಜು)

Article on Humvee Military light Truck war vehicle of USA

ಹೌದು, 'ಯುದ್ಧಸ್ಯ ವಾರ್ತಾ ರಮ್ಯಾ:' ಅಂತ ಮಾತಿದೆ. ಆದರಿಲ್ಲಿ ಧೃತರಾಷ್ಟ್ರನಿಗೆ ಭಾರತ ಯುದ್ಧವನ್ನು ಕಣ್ಣಿಗೆ ಕಟ್ಟುವಂತೆ 'ದಿವ್ಯ ದೃಷ್ಟಿಯಿಂದ ಕಂಡು' ವರ್ಣಿಸಿದ ಸಂಜಯನ ಪಾತ್ರವಹಿಸಿರುವುದು ಒಂದು ವಾಹನ! ರಣರಂಗದಲ್ಲಿ ಯಾಕೆ... ಎಲ್ಲಿ, ಯಾರ ನಡುವೆ, ಹೇಗೆಗಳ ನಡುವೆ ಈ ಯುದ್ಧ ಅಗತ್ಯವಿತ್ತೇ? ಎನ್ನುವ ಮೂಲಪ್ರಶ್ನೆ ಎಲ್ಲೋ ಕಳೆದು ಹೋಗುತ್ತದೆ.

ಹೆಣ್ಣು, ಹೊನ್ನು, ಮಣ್ಣಿಗಾಗಿ, ಸ್ವಾರ್ಥಕ್ಕಾಗಿ, ಇತ್ತೀಚೆಗೆ 'ಧರ್ಮ' ವೆಂಬ ಮತ್ತಿಗಾಗಿ, ಮತಾಂಧತೆಯೇ ಮೂಲವಾಗಿ ನಡೆವ ಕಾಳಗಗಳಲ್ಲಿ ಈ ಭೂಮಿ ಅವರ್ಣನೀಯ ಯಾತನೆ ಮತ್ತು ರಕ್ತಪಾತಗಳಿಗೆ ಅಸಹಾಯಕ ಸಾಕ್ಷಿಯಾಗಿ ಕಣ್ಣೀರಿಟ್ಟಿದ್ದನ್ನು ಯಾರೂ ಕಂಡವರಿಲ್ಲ. ವೀರನನ್ನು ಉದ್ಘೋಷಿಸುತ್ತ ಹಿಗ್ಗುವ ಸೈನಿಕರ ಕಣ್ಣೊಳಗೆ ಸಾಯುವ ವೈರಿಯ ಕುಸಿಯುವ ಉಸಿರಿನ ನಿರ್ದಯ ಕ್ಷಣಗಳು...

ಪ್ರಪಂಚದ ಎಲ್ಲೆಲ್ಲೂ ಇದೇ ಕತೆ...ಆದರೂ ಯುದ್ಧಗಳು ಆ ಉಸಿರಾಟದಷ್ಟೇ ಸಹಜ...ಮನುಷ್ಯರಿರುವವರೆಗೆ ಈ 'ವಾರ್' ಎಂಬ ಯುದ್ಧ ನಡೆದೇ ನಡೆದಾವು.. ನೇರ, ಪರೋಕ್ಷ..ಗೆರಿಲ್ಲಾ, ಸ್ಕೈ ವಾರ್, ಸ್ಪೇಸ್ ವಾರ್ ಅನ್ನುತ್ತಾ ಏನೆಲ್ಲಾ ಬಗೆಯ ಯುದ್ಧಗಳನ್ನು ಹುಟ್ಟು ಹಾಕಿಯೂ ಗೆದ್ದಿದ್ದಾನೆಯೇ ಮನುಷ್ಯ ? ಅಂತ್ಯ ತಿಳಿದಿದ್ದೂ ಇಳಿಯುತ್ತಿರುವ ಈ ಕಮರಿಗೆ ತಳವಿಲ್ಲ. ಮನುಷ್ಯನೇ ಮುಗಿದ ಮೇಲೆ ಯುದ್ಧ ಎಲ್ಲಿ ಉಳಿದೀತು?

ಆಲೋಚನೆಗಳ ಪೂರ ಕ್ಷಣಾರ್ಧದಲ್ಲಿ ಹೀಗೆ ನನ್ನ ಮಸ್ತಿಷ್ಕಕ್ಕೊಂದು ದಾಳಿಯಿಟ್ಟು ಹೋಗಿದ್ದು ಅಟ್ಲಾಂಟಾ ಸಿಎನ್ಎನ್ ಸೆಂಟರಿನ ಆ ಯುದ್ಧವಾರ್ತಾ ಪ್ರಸಾರಿ ವಾಹನದೆದುರು ನಿಂತಾಗ! ಹಿಂದೊಮ್ಮೆ ಬಂದಾಗ ಅದನ್ನು ಸುಮ್ಮನೆ ದಾಟಿಕೊಂಡು ಹೋಗಿದ್ದು ನೆನಪಾಗಿ ಅದೇನು ಹೇಳ್ತಾ ಇದೆ ನೋಡಬೇಕಲ್ಲಾ ಅನಿಸಿ ಮಾತಾಡಿಸದೆ ಮುಂದೆ ಹೋಗಬಾರದೆನಿಸಿದ್ದು ಖರೆ...ಇರಾಕಿನಲ್ಲಿನ ತನ್ನ ಪರಾಕ್ರಮದ ಸಂಗತಿಯನ್ನು ನೋಡು ಅಂತ ಕರೆದಿತ್ತು ಆ ಯುದ್ಧವಾಹನ. (ಅಕ್ಕ ಸಮ್ಮೇಳನದಲ್ಲಿ ಹಲವಾರು ವಿಶೇಷತೆ)

ಇರಾಕನ್ನು ಸದೆಬಡೆಯಬೇಕು ಅಂತ ಅಮೆರಿಕ ನಿರ್ಧರಿಸಿಕೊಂಡ ಮೇಲೆ ಹಾಗೆ ಮಾಡದೆ ಇರುವ ದೇಶವೇ ಅದು? ಯುದ್ಧಕ್ಕಿಳಿಯಲು ಇರುವ ಕಾರಣವನ್ನು ಯುದ್ಧ ಮಾಡುವ ದೇಶಗಳು ತರ್ಕಾತೀತವಾಗಿಯೇ ಜಗತ್ತಿನೆದುರು ಇಟ್ಟು ತೋಳೇರಿಸಿ ನಿಂತಾಗ ದೈತ್ಯರ ಕುಸ್ತಿಯಲ್ಲಿ ಜಗತ್ತು ನಿರ್ವೀರ್ಯ !

ಆದರೂ ಈ ಹಮ್ ವೀ ಆ ಹೊತ್ತಿನಲ್ಲಿ ಮಾಡಿದ ಕಾರ್ಯವು ಸಣ್ಣದೇನಲ್ಲ, 'ಸೇನಯೋರುಭ್ಯೋರ್ಮಧ್ಯೇ ಸ್ಥಾಪಿತ ರಥ'ವಾಗಿ ಪರಾಕ್ರಮಪೇಶಿಯ ಆಂಖೊ ದೇಖಾ ಹಾಲ್ ಪ್ರಸ್ತುತಪಡಿಸುವುದು ತಮಾಷೆಯಲ್ಲ... (The Persian Gulf War (2 August 1990 - 28 February 1991) ಮುಂದಿನ ಪುಟ ಕ್ಲಿಕ್ಕಿಸಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Article on Humvee Military light Truck war vehicle of USA by Jayashree Deshpande - Part 1.
Please Wait while comments are loading...