ಸಿಂಗಪುರ ಕನ್ನಡ ಸಂಘಕ್ಕೆ ಮೊದಲ ಮಹಿಳಾ ಅಧ್ಯಕ್ಷೆ

ಕನ್ನಡ ಸಂಘದ 17ನೇ ವಾರ್ಷಿಕ ಮಹಾಸಭೆಯು 30ನೇ ಜೂನ್ 2013ರಂದು ನಡೆಯಿತು. ಕನ್ನಡ ಸಂಘದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಿಂಗನ್ನಡಿಗರು ಎರಡು ವರ್ಷಕ್ಕೊಮ್ಮೆ ಕಾತರದಿಂದ ಎದುರು ನೋಡುವ ಸಿಂಗಾರ ಪತ್ರಿಕೆಯ 10ನೇ ಸಂಚಿಕೆಯನ್ನು ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಬಿಡುಗಡೆ ಮಾಡಲಾಯಿತು.

ಈ ವಾರ್ಷಿಕ ಮಹಾಸಭೆಯು ಸಂಘದ 2012-2013ರ ಅಧ್ಯಕ್ಷರಾದ ಡಾ.ವಿಜಯ ಕುಮಾರ್ ಅವರ ಸ್ವಾಗತ ಭಾಷಣದೊಂದಿಗೆ ಪ್ರಾರಂಭಗೊಂಡು, 16ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿಗಳ ಅನುಮೋದನೆ, 2012-2013ರ ಅವಧಿಯ ಸಂಘದ ಚಟುವಟಿಕೆಗಳ ವಾರ್ಷಿಕ ವರದಿ ಮತ್ತು ಪರಿಶೋಧಿತ ಲೆಕ್ಕ ಪತ್ರದ ವರದಿ, 2013-2015ರ ಅವಧಿಯ ಸಂಘದ ಪದಾಧಿಕಾರಿಗಳ ಚುನಾವಣೆ/ನೇಮಕಾತಿ, 2013-2014ರ ಸಾಲಿನ ಲೆಕ್ಕ ಪತ್ರ ಪರಿಶೋಧಕರ ನೇಮಕಾತಿ ಮತ್ತು ಪ್ರಶ್ನೋತ್ತರಗಳ ನಂತರ ಕೊನೆಗೊಂಡಿತು.

Singapore Kannada Sangha election

ಕಳೆದ ಕೆಲವಾರು ವರ್ಷಗಳಂತೆ ಈ ಬಾರಿಯೂ ಚುನಾವಣೆಯಲ್ಲಿ ಸಂಘದ ಹೊಸ ಕಾರ್ಯಕಾರಿ ಸಮಿತಿಯ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡರು. ಈ ಬಾರಿಯ ಚುನಾವಣೆಯಲ್ಲಿ ಒಂದು ವಿಶೇಷವೆಂದರೆ ಇದೇ ಮೊದಲ ಬಾರಿಗೆ ನಾಲ್ಕು ಮಂದಿ ಮಹಿಳೆಯರು ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿರುವುದು ಮತ್ತು ಇದೇ ಮೊದಲ ಬಾರಿಗೆ ಸಂಘದ ಅಧ್ಯಕ್ಷ ಸ್ಥಾನಕ್ಕೆ ಮಹಿಳೆ ಅಭ್ಯರ್ಥಿಯ (ವಿಶಾಲಾಕ್ಷಿ ವೈದ್ಯ) ನೇಮಕ ವಾಗಿರುವುದು.

ಎರಡು ವರ್ಷಕ್ಕೊಮ್ಮೆ ಬರುವ ಚುನಾವಣೆಯಲ್ಲಿ ಕೆಲವು ವರ್ಷಗಳ ಹಿಂದೆ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಲು ಅಭ್ಯರ್ಥಿಗಳ ಕೊರತೆಯಿತ್ತು. ವಾರ್ಷಿಕ ಮಹಾಸಭೆಗೆ ಬರುವ ಸದಸ್ಯರನ್ನೇ ಕಾಡಿಬೇಡಿ, ಒತ್ತಾಯಿಸುವ ಪರಿಸ್ಥಿತಿಯಿತ್ತು. ಆದರೆ ವರ್ಷಗಳು ಕಳೆದಂತೆ, ಸಂಘ ಬೆಳೆದಂತೆ ಸಂಘಕ್ಕೆ ಸೇರಿ ಸೇವೆ ಸಲ್ಲಿಸುವ ಸ್ವಯಂಸೇವಕರ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ಸಂತೋಷದ ಸುದ್ದಿ.

ಸಿನಿಮಾ ಆಧಾರಿತ ಕಾರ್ಯಕ್ರಮಗಳಿಗೆ ಹಿಂಡುಹಿಂಡಾಗಿ ಬರುವ ನಮ್ಮ ಕನ್ನಡಿಗರು ಕಳೆದ ಕೆಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ ಸಂಘದ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಲು, ಹೊಸ ಕಾರ್ಯಕರ್ತರನ್ನು ಸ್ವಾಗತಿಸಲು ಕನಿಷ್ಠ ಮೂವತ್ತು ಸಂಖ್ಯೆಯಲ್ಲಿ (ಸದಸ್ಯರು) ವಾರ್ಷಿಕ ಮಹಾಸಭೆಗೆ ಬರದಿದ್ದುದು ಹಾಗೂ ಕೋರಮ್ ಇಲ್ಲದ ಕಾರಣಕ್ಕಾಗಿ ಸಂಘದ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಪ್ರಯತ್ನ ಕೈಗೂಡದಿದ್ದುದು ವಿಷಾದಕರ.

ಸಿಂಗಪುರದ ಮಕ್ಕಳಿಗೆ ಕನ್ನಡ ಕಲಿಸುವ ಧ್ಯೇಯದ "ಕನ್ನಡ ಕಲಿ"; ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ನೀಡುವ "ಸಿಂಗಾರ ಉತ್ಸವ, ರಾಗಾಂಜಲಿ"; ಸ್ಥಳೀಯರಿಂದ ಕರ್ನಾಟಕದ ಸಾಹಿತ್ಯ ಮತ್ತು ಸಂಗೀತಗಾರರ ಕೊಡುಗೆಯನ್ನು ಮೆಲುಕು ಹಾಕುವ "ವಚನಾಂಜಲಿ, ಪುರಂದರ ನಮನ"; ಕ್ರೀಡೋತ್ಸಾಹಿಗಳಿಗೆ ಉತ್ತೇಜನ ನೀಡುವ "ಬೋಲಿಂಗ್, ಬ್ಯಾಡ್ಮಿಂಟನ್"; ಸ್ಥಳೀಯ ಸಂಘ-ಸಂಸ್ಥೆಗಳೊಂದಿಗೆ ಕೈಜೋಡಿಸಿ ನಡೆಸುವ "ಸಂಕ್ರಾಂತಿ, ರಕ್ಷಾಬಂಧನ"; ಕರ್ನಾಟಕದ ಕಲಾವಿದರನ್ನು, ಕಲಾಪ್ರಕಾರವನ್ನು ಸಿಂಗಪುರದಲ್ಲಿ ಪರಿಚಯಿಸುವ ಯಕ್ಷಗಾನ, ಸಂಗೀತ, ನೃತ್ಯ ಕಾರ್ಯಕ್ರಮಗಳು - ಹೀಗೆ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನೀಡಿದ ಸಂತೃಪ್ತಿಯೊಂದಿಗೆ ಹಿಂದಿನ ಕಾರ್ಯಕಾರಿ ಸಮಿತಿಯು ಹೊಸ ಕಾರ್ಯಕಾರಿ ಸಮಿತಿಗೆ ಸಂಘದ ಕಾರ್ಯನಿರ್ವಹಣೆಯ ಜವಾಬ್ದಾರಿಯನ್ನು ವರ್ಗಾಯಿಸಿತು.

ಮಹಿಳೆಯರಿಗೆ ಸಮಾನತೆ, ಮೀಸಲಾತಿ ಎಂದೆಲ್ಲಾ ಬಾರೀ ಭಾಷಣ ಬಿಗಿಯುವ ಭಾರತದ ರಾಜಕೀಯ ಪಕ್ಷಗಳು ಇನ್ನೂ ತಮ್ಮ ಮಾತನ್ನು ಕಾರ್ಯರೂಪಕ್ಕೆ ತರಲು ವಿಫಲರಾಗಿರುವಾಗ ನಮ್ಮ ಭಾರತದಿಂದ ಕಾರ್ಯನಿಮಿತ್ತ ವಲಸೆ ಬಂದ ಕನ್ನಡಿಗರು ಸಿಂಗಪುರದಲ್ಲಿ ಯಾವುದೇ ಭಾಷಣ, ಪ್ರಚಾರ, ಅಬ್ಬರಗಳಿಲ್ಲದೇ ನಮ್ಮ ಸಂಘದಲ್ಲಿ ಅನುಷ್ಠಾನಕ್ಕೆ ತಂದಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಹೊಸ ಕಾರ್ಯಕಾರೀ ಸಮಿತಿಗೆ ಶುಭಾಶಯ.

ಸಂಘದ 2013-15 ಸಾಲಿನ ಪದಾಧಿಕಾರಿಗಳ ಪಟ್ಟಿ ಮತ್ತು ಛಾಯಾಚಿತ್ರ:

ಸಾಧ್ವಿ ಸಂಧ್ಯಾ, ಕವಿತ ರಾಘವೇಂದ್ರ (ಉಪಾಧ್ಯಕ್ಷರು), ವಿಜಯಾ ಹಲಗೇರಿ, ಉಮೇಶ್ ಮೂರ್ತಿ, ರಾಮ ಪ್ರಸಾದ್, ವಿಶಾಲಾಕ್ಷಿ ವೈದ್ಯ (ಅಧ್ಯಕ್ಷರು), ವೆಂಕಟ್ ಆರ್. (ಕಾರ್ಯದರ್ಶಿ), ಕನಕೇಶ್ ಕೆ. ಎ.(ಖಜಾಂಚಿ), ಕಿಶೋರ್ ಕೃಷ್ಣಮೂರ್ತಿ (ಸಹಕಾರ್ಯದರ್ಶಿ), ವೆಂಕಟೇಶ್ ಜಿ. ಚಿತ್ರದಲ್ಲಿ ಇಲ್ಲದಿರುವವರು: ವೆಂಕಟೇಶ ಮೂರ್ತಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+