ಕುವೈತ್ ಕನ್ನಡ ಕೂಟದಿಂದ ಸುಂದರ ರಸಸಂಜೆ

ಸುಂದರ ಸಂಜೆಯ ಮನೋರಂಜನ ಕಾರ್ಯಕ್ರಮವನ್ನು ವಸಂತಾ ಅಶೋಕ್ ಕುಮಾರ್ ಮತ್ತು ಮಾಧವಿ ಕುಲಕರ್ಣಿ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಕಾರ್ಯಕ್ರಮದ ಮೊದಲ ಭಾಗದಲ್ಲಿ ವಿದ್ವಾನ್ ವಾಗೀಶ್ ಭಟ್ ತಮ್ಮ ಸುಶ್ರಾವ್ಯ ಭಕ್ತಿ ಸಂಗೀತ ಮತ್ತು ನಾಡಗೀತೆಯ ಗಾಯನದಿಂದ ಸದಸ್ಯರನ್ನು ಭಕ್ತಿ ಪರವಶವಾಗುವಂತೆ ಮಾಡಿದರು.
ವಚನಗಳ ಆಯ್ಕೆ, ಭಕ್ತಿ ತುಂಬಿದ ಗಾಯನದಿಂದ ವಾಗೀಶ್ ಹಾಡುತ್ತಿದ್ದರೆ, ಪಕ್ಕವಾದ್ಯ ಸಹಕಾರ ನೀಡಿದ ಸಿತಾರ್ ಕಲಾವಿದರಾದ ವಿದ್ವಾನ್ ಶ್ರೀನಿವಾಸ್, ತಬಲ ವಾದಕ ವಿದ್ವಾನ್ ಸುದತ್ತ ಹಾಗೂ ಕೂಟದ ಸದಸ್ಯರಾದ ಶ್ರೀಧರ್ ಅವರ ಸಂಗೀತಕ್ಕೂ ಸದಸ್ಯರು ತಲೆದೂಗುತ್ತಾ ಸಂಗೀತ ಲೋಕದಲ್ಲಿ ವಿಹರಿಸಿದರು.
ಕಾರ್ಯಕ್ರಮದ ಎರಡನೇ ಭಾಗಕ್ಕೆ ಕುಂದಾಪುರದ ರೂಪಕಲಾ ನಾಟಕ ಮಂಡಳಿಯ ಸದಸ್ಯರು 'ಮೂರು ಮುತ್ತುಗಳು' ಹಾನ್ಯ ನಾಟಕ ಮೂಲಕ ನಗುವಿನ ಅಲೆ ಎಬ್ಬಿಸಿದರು. ಪ್ರಶಸ್ತಿ ವಿಜೇತ ನಾಟಕಕಾರ ದಿವಂಗತ ಬಾಲಕೃಷ್ಣ ಪೈ ಅವರು 1994ರಲ್ಲಿ ಬರೆದಿದ್ದ ಈ ನಾಟಕವನ್ನು ಪ್ರಸ್ತುತ ಅವರ ಪುತ್ರ ಸತೀಶ್ ಪೈ ನಿರ್ದೇಶಿಸಿದ್ದಾರೆ.
ಭಾರತ ಮತ್ತು ವಿದೇಶಗಳಲ್ಲಿ ಸುಮಾರು 882 ಪ್ರದರ್ಶನ ಕಂಡಿರುವ ಈ ನಾಟಕವು, ಕುವೈತ್ ನಲ್ಲಿ ಪ್ರಥಮವಾಗಿ ಪ್ರದರ್ಶನ ಕಂಡಿತು. ಕನ್ನಡ ಕೂಟದ ಸದಸ್ಯರಾದ ಮೋಹನ್ ದಾಸ್ ಕಾಮತ್, ಶ್ರೀನಿವಾಸ ಪ್ರಭು ಹಾಗೂ ಸುರೇಶ್ ನೆರಂಬಳ್ಳಿ ಬಣ್ಣಹಚ್ಚಿ ನಾಟಕದಲ್ಲಿ ಅಭಿನಯಿಸಿದ್ದು ವಿಶೇಷವಾಗಿತ್ತು.
ಸುಮಧುರ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸದಸ್ಯರನ್ನು ಕೂಟದ 2013ನೇ ಸಾಲಿನ ಅಧ್ಯಕ್ಷರಾದ ದಿನೇಶ್ ಸ್ವಾಗತಿಸಿದರು. ಕೂಟದ ಸಾಂಸ್ಕೃತಿಕ ಸಮಿತಿಯವರು ಸಮರ್ಥವಾಗಿ ನಿರ್ವಹಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಪಿ.ರಮೇಶ್ ಅವರ ವಂದನಾರ್ಪಣೆಯೊಂದಿಗೆ ಮುಕ್ತಾಯಗೊಳಿಸಲಾಯಿತು.












Click it and Unblock the Notifications