ಪಂಡಿತ್ ಜಯತೀರ್ಥ ಮೇವುಂಡಿ ಸಂದರ್ಶನ (ಭಾಗ 4)

ಜಯತೀರ್ಥ : ಟಿ ವಿ ಮಾಧ್ಯಮ ಒಂದು ಪ್ರಬಲ ಮಾಧ್ಯಮ. ಅನೇಕ ಹಿರಿಯ ಕಲಾವಿದರು ತಮ್ಮ ಪ್ರಭಾವವನ್ನು ಉಪಯೋಗಿಸಿ ಒಂದು ಪ್ರತ್ಯೇಕ ಟಿ.ವಿ. ಚಾನೆಲ್ ಅನ್ನು ಆರಂಭಿಸಿ ಶಾಸ್ತ್ರೀಯ ಗಾಯನಕ್ಕೆ ಮತ್ತು ಗಾಯಕರಿಗೆ ಒಂದು ಮಂಚವನ್ನೊದಗಿಸಬೇಕು. ಟಿ.ವಿ. ಮಾಧ್ಯಮಗಳು ಸಿನೇಮಾ ಸಂಗೀತ ಹಾಡುವವರಿಗೇ ಆಗಲಿ ಅಥವಾ "ರಿಯಾಲಿಟಿ ಶೋ"ಗಳಲ್ಲಿ ಭಾಗವಹಿಸುವವರಿಗೆ ಆಗಲಿ ಕೊಡುವ ಪ್ರೋತ್ಸಾಹ ಮತ್ತು ಮನ್ನಣೆಯನ್ನು ಶಾಸ್ತ್ರೀಯ ಸಂಗೀತಗಾರರಿಗೆ ಏಕೆ ಕೊಡುತ್ತಿಲ್ಲ? ಅವರಿಗೂ ತಕ್ಕ ಮನ್ನಣೆ ಸಿಗಲಿ ಎಂದು ನನ್ನ ಆಶಯ. ಶಾಸ್ತ್ರೀಯ ಸಂಗೀತಗಾರರಿಗೆ ಒಳ್ಳೆಯ ಮನ್ನಣೆ ದೊರಕತೊಡಗಿದರೆ ಮತ್ತು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಮಂಚವೊದಗತೊಡಗಿದರೆ, ಅನೇಕರು ಮುಂದೆ ಬಂದು ಕಲಿಯಲಾರಂಭಿಸುತ್ತಾರೆ. ಇದರಿಂದ ನಮ್ಮ ಸಂಗೀತದ ಭವಿಷ್ಯ ಉಜ್ವಲವಾಗುತ್ತದೆ. ಇಲ್ಲದಿದ್ದರೆ ರಿಯಾಲಿಟಿ ಶೋಗಳ ಗ್ಲಾಮರ್‌ನಿಂದಾಗಿ ಒಳ್ಳೆಯ ಪ್ರತಿಭಾವಂತರೂ ಕೂಡ ಸಿನೆಮಾ ಮತ್ತು ಲಘು ಗಾಯನದತ್ತಲೇ ಒಲಿಯುತ್ತಾರೆ. ಇದರಿಂದ ಶಾಸ್ತ್ರೀಯ ಗಾಯನಕ್ಕೆ ತುಂಬಾ ನಷ್ಟವಾಗುತ್ತದೆ.
ಪ್ರಶ್ನೆ : (ಈ ಪ್ರಶ್ನೆ ಹಾರ್ಮೋನಿಯಂ ಸಾಥೀದಾರ ಮತ್ತು ಮಂಗಳೂರಿನ ಪ್ರಸಿದ್ಧ ಎಕ್ಸ್‍ಪರ್ಟ್ ವಿದ್ಯಾ ಸಂಸ್ಥೆಯ ಶ್ರೀ ನರೇಂದ್ರ ನಾಯಕರಿಗೆ), ನರೇಂದ್ರರೇ, ದೊಡ್ಡ ವಿದ್ಯಾ ಸಂಸ್ಥೆಯೊಂದನ್ನು ನಡೆಸುತ್ತಿರುವ ನೀವು ಈ ಬಗ್ಗೆ ಏನು ಹೇಳುತ್ತೀರಿ?
ನರೇಂದ್ರ : ಮಕ್ಕಳಲ್ಲಿ ಮತ್ತು ಯುವ ಜನರಲ್ಲಿ ಸಂಗೀತದ ಆಸಕ್ತಿ ಉಂಟು ಮಾಡಲು ಮೊದಲ ಮತ್ತು ಅತೀ ಮುಖ್ಯ ಪ್ರಯತ್ನ ತಂದೆ ತಾಯಿಯರಿಂದಲೇ ಶುರುವಾಗಬೇಕು. ಮಕ್ಕಳು ಸ್ವಲ್ಪ ಮಟ್ಟಿನ ವಿರೋಧ ವ್ಯಕ್ತ ಮಾಡಿದಾಗ ನಾವು ಅವರ ತಂಟೆಗೇ ಹೋಗುವದನ್ನು ಬಿಟ್ಟು ಬಿಡುತ್ತೇವೆ. ಇದರಿಂದ ದೊಡ್ಡ ನಷ್ಟ ನಮಗೇ ಅಲ್ಲವೇ? ಮಕ್ಕಳಿಗೆ ತಿಳಿ ಹೇಳಿ, ನಮ್ಮ ಸಂಗೀತದ ಮಹತ್ವವನ್ನು ತಿಳಿಸಿದರೆ ಕ್ರಮೇಣ ಅವರು ಕಲಿಯುತ್ತಾರೆ ಮತ್ತು ಅವರಲ್ಲಿ ಅಭಿರುಚಿ ತಂತಾನೆ ಬೆಳೆಯುತ್ತದೆ.
ಪ್ರಶ್ನೆ: ಕೊನೆಯದಾಗಿ ನೀವು ಸಂಗೀತದಲ್ಲಿ ಏನಾದರೂ ಹೊಸ ಪ್ರಯೋಗ ಮಾಡುತ್ತಿದ್ದೀರಾ?
ಜಯತೀರ್ಥ : ಹಿಂದಿನಂತೆ ಈಗಿನ ಜನಗಳಲ್ಲಿ ಗಂಟೆಗಟ್ಟಲೇ ಕುಳಿತು ಶಾಸ್ತ್ರೀಯ ಸಂಗೀತ ಕೇಳುವ ಹವ್ಯಾಸ ಕಡಿಮೆಯಾಗುತ್ತಿದೆ. ಆದುದರಿಂದ ನಾನು 30-40 ನಿಮಿಷಗಳ ಅವಧಿಯಲ್ಲಿ ನಮ್ಮ ಮೂಲ ಸಂಪ್ರದಾಯವನ್ನು ಬಿಡದೇ ರಾಗದ ಶ್ರೀಮಂತಿಕೆಯನ್ನು ಎತ್ತಿ ತೋರಿಸಲು ಸಾಧ್ಯವಾಗುವ ಹಾಗೆ ಸಂಯೋಜನೆ ಮಾಡಲು ಪ್ರಯತ್ನಿಸುದ್ದೇನೆ. ಇದರಿಂದ ಶಾಸ್ತ್ರೀಯ ಸಂಗೀತದ ಕಡೆಗೆ ಜನರು ಆಕರ್ಷಿತರಾಗಬಹುದು ಎಂದು ನನಗೆ ಅನಿಸುತ್ತದೆ.











Click it and Unblock the Notifications