• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಈ ಲೇಖನ ಓದಿದ ಕೂಡಲೆ ಪತ್ರ ಬರೆಯಿರಿ

By Prasad
|
Do nt forget to reply to the letter
ಇಂಟರ್ನೆಟ್, ಮೊಬೈಲ್ ಬಂದ ಮೇಲೆ ಪ್ರೀತಿಪಾತ್ರರಿಗೆ ಪೋಸ್ಟ್ ಕಾರ್ಡಿನಲ್ಲೋ ಇನ್ ಲ್ಯಾಂಡ್ ಲೆಟರಿನಲ್ಲೋ ಪತ್ರ ಬರೆಯುವ ಹವ್ಯಾಸ ನಶಿಸಿಹೋಗಿದೆ. ಇಂದಿನ ಪೀಳಿಗೆಯ ಜನತೆಗೆ ಹಳದಿ ಬಣ್ಣದ ಮುದ್ದಾದ ಪೋಸ್ಟ್ ಕಾರ್ಡ್ ಅಂದರೇನೇ ಗೊತ್ತಿಲ್ಲ. ಇನ್ನು ಮುದ್ದಾದ ಅಕ್ಷರಗಳಲ್ಲಿ ಅದರಲ್ಲಿ ಬರೆದು ಪೋಸ್ಟ್ ಡಬ್ಬಿಯಲ್ಲಿ ಹಾಕುವ ಪ್ರಮೇಯವಂತೂ ದೂರವೇ ಉಳಿಯಿತು. ಇದನ್ನು ಓದಿದ ಮೇಲಾದರೂ ಜರೂರು ಉತ್ತರ ಬರೆಯಿರಿ, ಮಕ್ಕಳ ಕಡೆಯಿಂದ ಬರೆಸಿರಿ, ಪೋಸ್ಟ್ ಕಾರ್ಡಿನಲ್ಲಿ.

ಪ್ರತಿ ಬಾರಿ ಸಿಂಗಪುರಕ್ಕೆ ವಾಪಸ್ ಹೊರಡುವಾಗ ಕಾರಿನ ಬಳಿ ಬಂದು ಕೆನ್ನೆ ಸವರಿ ಊರು ತಲುಪಿದ ಮೇಲೆ ಒಂದು ಕಾರ್ಡ್ ಹಾಕು ಮರಿ ಎನ್ನುತ್ತಾಳೆ ಅಮ್ಮ. ಫೋನ್ ಮಾಡು ಎನ್ನುವುದಕ್ಕೆ ಅದೇಕೋ ಇಂದೂ ಕಾರ್ಡ್ ಹಾಕು ಎನ್ನುತ್ತಾಳೆ. ಅಯ್ಯೋ ಅಮ್ಮಾ ಕಾರ್ಡ್ ಇಸ್ ಓಲ್ಡ್ ಈಗ "ದೂರ-ಈ-ವಾಣಿ" ಎಂದರೆ ಹೋಗೇ ಎನ್ನುತ್ತಾಳೆ. ಹಿರಿಯ ತಲೆಮಾರಿನವರ ಅಭ್ಯಾಸ ಬಲವದು, ನಿಜವೇ ತಾನೆ?

ಅಂದು ಊರು ತಲುಪಿದ ತಕ್ಷಣ ಒಂದು ಕಾರ್ಡ್ ಹಾಕಿ ಎನ್ನುತ್ತಿದ್ದುದು ಸರ್ವೇ ಸಾಮಾನ್ಯ. ಅದು ಅಂಚೆ ಕಾರ್ಡ್. ಈ ಅಂಚೆ ಕಾರ್ಡ್ ಅಂದಿನ ಕಾಲದಲ್ಲಿ 15 ಪೈಸೆ. ಅದು ಓಪನ್ ಮೆಸೆಜ್ ಕಾರ್ಡ್. ಆ ಕಾರ್ಡಿನಲ್ಲಿ ಇರುತ್ತಿದ್ದ ಶುಭಾಶುಭ ಸಂದೇಶ ನಮಗೆ ತಲುಪುವ ಮೊದಲೇ ಅಂಚೆಯಣ್ಣನಿಗೆ ಗೊತ್ತಿರುತ್ತಿತ್ತು. ಇನ್ನೂ ಹಲವು ಬಾರಿ ಕಾರ್ಡಿನಲ್ಲಿನ ವಿಷಯಗಳನ್ನು ಮತ್ತೊಬ್ಬರಿಗೂ ಹಂಚುತ್ತಿದ್ದ. ಅಂದಿನ ದಿನಗಳಲ್ಲಿ ಗ್ರಾಮಗಳಲ್ಲಿ ಪತ್ರ ಬಂದರೆ ನೀನೇ ಓದಪ್ಪ ಎಂದೂ, ಉತ್ತರ ಕೂಡ ಅಂಚೆಯಣ್ಣನ ಕೈಲೇ ಬರಿಸುವ ವಾಡಿಕೆಯೂ ಇತ್ತು. ಏನೊಂದೂ ಗೋಪ್ಯವಿಡದ ಮುಕ್ತ ಪತ್ರವದು ಹಳದಿ ಬಣ್ಣದ ಚೊಕ್ಕ, ಚಿಕ್ಕ ಅಂಚೆಕಾರ್ಡ್. ಅದ ಓದಲು ಬೇಕಾಗುತ್ತಿತ್ತು ಒಂದೇ ನಿಮಿಷ.

ಮದುವೆ, ಲಗ್ನಪತ್ರಿಕೆ, ಗೃಹಪ್ರವೇಶ, ನಾಮಕರಣದ ಕಾರ್ಡ್ ಆದರೆ ಅದಕ್ಕೆ ನಾಲ್ಕೂ ಅಂಚಿನಲ್ಲಿ ಅರಿಶಿನ, ಕುಂಕುಮ ಸೇವೆ ಕೂಡ ಸಂದಿರುತ್ತಿತ್ತು. ದೀಪಾವಳಿ, ಸಂಕ್ರಾಂತಿ, ಯುಗಾದಿಗಳಿಗೆ, ನಾಗಪಂಚಮಿಗಳಿಗೆ ಆ ಕಾರ್ಡ್ ಬೋನಸ್ ಉಡುಗೊರೆ. ಅದರಲ್ಲಿ ಇರುತ್ತಿತ್ತು ಆಶೀರ್ವಾದದ ಒಂದು ಸುಂದರ ಸಂದೇಶ. ಕಾರ್ಡ್, ಇನ್‌ಲ್ಯಾಂಡ್ ಲೆಟರ್ ನಲ್ಲಿ ಒಂದಿಂಚೂ ಜಾಗ ಬಿಡದೆ ಅದಕ್ಕಾಗಿ ತೆತ್ತ ಹಣದ ಸಂಪೂರ್ಣ ಉಪಯೋಗವನ್ನು ಪಡೆದುಕೊಳ್ಳುತ್ತಿದ್ದವರೂ ಅದೆಷ್ಟೋ ಮಂದಿ.

ನಾನು ಒಮ್ಮೆ ಚಿಕ್ಕಪ್ಪನ ಜೊತೆ ಕೋಲಾರಕ್ಕೆ ಹೋಗಿದ್ದಾಗ ನನ್ನಕ್ಕ ಬರೆದಳು ಒಂದು ಕಾರ್ಡ್. ಅದರಲ್ಲಿ ಇದ್ದ ಸಂದೇಶ "ವಾಣಿ ಇಲ್ಲಿ ನೋಡು, ಅಣ್ಣ ನಾಯಿಮರಿ ತಂದಿದ್ದಾನೆ, ಅದಕ್ಕೆ ಒಂದು ಬಾಲ, ನಾಲ್ಕು ಕಾಲಿದೆ, ಕಪ್ಪು ಬಣ್ಣದ್ದು ಹೆಸರು ಕೈಸರ್, ಯಾವಾಗ ಬರ್ತಿಯಾ" ಎಂದು. ಬಾಲ್ಯದಲಿ ಅಣ್ಣ, ಅಕ್ಕಂದಿರ ಜೊತೆ "ಕಂಡ್ರೆ ಕಣ್ಣುರಿ, ಕಾಣದಿದ್ರೆ ಹೊಟ್ಟುರಿ". ಎಲ್ಲೋ ನನ್ನ ಮಿಸ್ ಮಾಡಿರಬೇಕು. ಅದು ಹೇಳಲು ಅಂದು ಗೊತ್ತಿರಲಿಲ್ಲ ಅದಕ್ಕೆ ಬಂದಿತ್ತು ಆ ಕಾರ್ಡ್. ಆಗೆಲ್ಲಾ ಈಗಿನಂತೆ ಎಲ್ಲರಿಗೂ ಹಿ, ಡಿಯರ್ ಒಕ್ಕಣೆ, ಕಡೆಯಲ್ಲಿ ಲವ್ ಇರಲಿಲ್ಲ. ಪ್ರೀತಿಯ ಎಂಬುದು ಬರೆದರೆ ಅದೇನೋ ಪ್ರೀತಿ ಎಂದು ಮೂತಿ ಸೊಟ್ಟಗೆ ಮಾಡುತ್ತಿದ್ದೆವು. ಲವ್ ಅನ್ನೋದು ಮಕ್ಕಳ ಬಾಯಲ್ಲಿ! ನಲ್ಲ-ನಲ್ಲೆಯರೂ "ನಾ ನಿನ್ನ ಪ್ರೀತಿಸುತ್ತೇನೆ" ಎಂದು ಹೇಳಿರುತ್ತಿದ್ದರೋ ಇಲ್ವೋ? ಅದು ಬರೀ ಪಿಕ್ಚರ್‍ನಲ್ಲಿ ಮಾತ್ರ.

ಇನ್ನೊಮ್ಮೆ ನಾನು ಅಮ್ಮನಿಗೆ ಬರೆದ ಮೊದಲ ಕಾರ್ಡಿನಲ್ಲಿ "ಹ.ಕುಂ.ಸೌ. (ಹರಿದ್ರಾ ಕುಂಕುಮ ಸೌಭಾಗ್ಯವತಿ) ಅಣ್ಣನಿಗೆ, ತೀ!(ತೀರ್ಥರೂಪು) ಅಮ್ಮನಿಗೆ ಎಂದು. ಆ ಕಾರ್ಡ್ ಹರಿದು ಹೋಗಿದೆ, ಅದರಲ್ಲಿ ಬರೆದ ಅಕ್ಷರ ಮನದ ನೆನಪಿನಿಂದ ಇನ್ನೂ ಮಾಸಿಲ್ಲ, ಎಲ್ಲರೂ ಒಂದುಗೂಡಿದಾಗ ಪ್ರತಿಬಾರಿ ಅದನು ನೆನೆದು ನಗುತ್ತೇವೆ. ಇದೇ ಅಂದಿನ ಕಾರ್ಡಿನ "ಗಮ್ಮತ್ತು".

ಈಗ ಊರಲ್ಲಿ ಇರುವ ವಯಸ್ಸಾದ ಅಮ್ಮ "ನೀನು ಫೋನಲ್ಲಿ ಹೇಳ್ತೀಯಾ ಮಗು, ಮರೆತೇ ಹೋಗುತ್ತೆ. ಕಾಗದ ಬರಿಬಾರದೇನೆ ತಾಯಿ, ಅದನ್ನು ಕೈಯಲ್ಲಿ ಹಿಡಿದು ಓದುತ್ತೇನೆ ಮರೆತರೆ ಮತ್ತೆ ಓದುತ್ತೇನೆ" ಎಂದಾಗ, ಅಯ್ಯೋ, ಟೈಮಿಲ್ಲಮ್ಮ ಎಂದು ತಳ್ಳಿ ಹಾಕುತ್ತೇನೆ. ಸೋ-ಮಾರಿತನ ಕೆಟ್ಟದು. ಆದರೂ ಅನಿಸುತಿದೆ ಯಾಕೋ ಇಂದು "ಕಾಗದ ಬರೆದರೆ ಚೆನ್ನಾಗಿ ಇರುತ್ತೆ" ಎಂದು.

ಹತ್ತು ದಶಕಗಳ ಹಿಂದೆ ಅಂಚೆ ಕಾರ್ಡ್ ಬರೀ ದೇವರುಗಳಿಗೆ ಮೀಸಲಾಗಿತ್ತು. "ಸಂತೋಷಿ ಮಾ, ತಿರುಪತಿ ತಿಮ್ಮಪ್ಪ, ಏಸು ಇನ್ನೂ ಅನೇಕ ದೇವಾನುದೇವಗಳಿಗೆ ಇದರಲ್ಲಿ ಬರೆದದನ್ನು ಒಂದಕ್ಷರವೂ ಬಿಡದೆ 18 ಜನರಿಗೆ ಬರೆದು ಪೋಸ್ಟ್ ಮಾಡಿ" ನಿಮಗೆ ಭಾಗ್ಯ ಬರುತ್ತದೆ ಎಂದು ಬಂದ ಕಾರ್ಡಿಗೆ ಹೆದರಿ ಅನಾಮಧೇಯ ಪತ್ರಗಳನ್ನು ಸಿಕ್ಕಸಿಕ್ಕ ವಿಳಾಸಕ್ಕೆ ರವಾನಿಸಿದವರೆಷ್ಟೋ ಮಂದಿ. ಹಾಗೆ ಈ ಕಾರ್ಡ್ ಸಾವಿನ ಸುದ್ದಿ ಬಿತ್ತರಿಸಲು, ಸ್ಪರ್ಧೆಗಳಲ್ಲಿ ಭಾಗವಹಿಸಲು ಮಾತ್ರ ಮೀಸಲಾಗಿತ್ತು. 15 ಪೈಸೆಗೆ ಲಭಿಸುತ್ತಿದ್ದ ಕಾರ್ಡ್ ಇದೀಗ 50 ಪೈಸೆ. ಈಗಂತೂ "ದೂರವಾಣಿ" ಕರೆ ನೀಡಿದೆ. ಈಗಿನ ಮಕ್ಕಳನ್ನು ಕಾರ್ಡ್ ಎಂದರೆ ಯಾವ ಕಾರ್ಡ್ ಎಂಬ ಮರುತ್ತರ ಬಂದೀತು. ಇದೀಗ ಕಾರ್ಡ್ ಎಂದರೆ ವಿಸಿಟಿಂಗ್ ಕಾರ್ಡ್ ಅಥವಾ ವೀಸಾ ಕಾರ್ಡ್. ಹಳಬರನ್ನು ಕೇಳಿ ಕಾರ್ಡ್ ಎಂದು "ಈಗಲೂ ಬಳಸುತ್ತೀರಾ" ಎಂದು ಕಣ್ಣಗಲಿಸಿ ವಿಚಿತ್ರ ಆದರೂ ನಿಜ ಎಂಬಂತೆ ನೋಡುತ್ತಾರೆ.

ಕಾರ್ಡ್ ಬೇಡ, ಕೆಲವು ವಿಷಯಗಳು ಗೋಪ್ಯವಾಗಿ ಇರಬೇಕು ಎನಿಸಿದಲ್ಲಿ ನೀಲಿ ಬಣ್ಣದ ಇನ್‌ಲ್ಯಾಂಡ್ ಲೆಟರ್ ಹಾಗೂ ಕ್ರೀಮ್ ಕವರ್ ಉಪಯೋಗಕ್ಕೆ ಬರುತ್ತಿತ್ತು. ಟೆಲಿಗ್ರಾಂ ಬಂತೆಂದರೆ ಹೆದರಿಕೆಯೇ ಸರಿ. ಅದು ಸೀರಿಯಸ್, ಸಾವು, ಇಲ್ಲವೇ ಕೆಲಸಕ್ಕೆ ಇಂಟರ್‌ವ್ಯೂ ಕರೆಗೆ ಸೀಮಿತ. ಟೆಲಿಗ್ರಾಂ ಬಂತಂತೆ ಅವರ ಮನೆಗೆ ಎಂದರೆ ಬೀದಿಯಲ್ಲಿ ಸುದ್ದಿಯೋ ಸುದ್ದಿ. ಮೊದಲಿಗೆ ಸಂಬಂಧಿಗಳು "ಗೊಟಕ್" ಅಥವಾ ಏನೋ ಕೆಟ್ಟ ಸುದ್ದಿ ಎಂದರ್ಥ.

ಅಂದು ಅಂಚೆಯಣ್ಣನ ಬರವಿಕೆಗಾಗಿ ಕಾದವರೆಷ್ಟೋ? ಅಯ್ಯೋ ಇನ್ನೂ ಪೋಸ್ಟ್‌ಮ್ಯಾನ್ ಬರಲಿಲ್ಲ ಎಂದು ನೂರು ಸಲ ಹಾದಿಯತ್ತ ಕಣ್ಣಾಡಿಸಿ ಅವನು ಬರುತ್ತಿದ್ದಂತೆ ಥಟ್ಟನೆ ಬಾಗಿಲತ್ತ ಓಡುತ್ತಿದ್ದ ನೆನಪಿದೆಯೇ? ತೌರಿನಿಂದ, ನಲ್ಲನಿಂದ, ಸ್ನೇಹಿತರಿಂದ ಬರುವ ಆ ಪತ್ರಕ್ಕಾಗಿ ತವಕದಿಂದ ಕಾಯುತ್ತಿದ್ದ ಅನುಭವ ನಮ್ಮಲ್ಲಿ ಹಲವಾರು ಮಂದಿಗೂ ಇದೆ ಅಲ್ಲವೇ? ಗಾಂಧೀಜಿ, ರಾಜಾಜಿ, ಜವಹರಲಾಲ್ ನೆಹರೂ ಅವರು ಪ್ರತಿಯೊಂದು ಪತ್ರಕ್ಕೂ ತಾವೇ ಉತ್ತರಿಸುತ್ತಿದ್ದರಂತೆ.

ಹೌದಲ್ಲವೇ? ಫೋನಿನ ಸೌಲಭ್ಯ, ಇಂಟರ್‌ನೆಟ್ ಸೌಲಭ್ಯ ಬಂದಮೇಲೆ ಕಾಗದ ಬರೆಯುವ ಅಭ್ಯಾಸ ಮರೆಯಾಗಿದೆ. ಉಭಯಕುಶಲೋಪರಿ ಟ್ರಿನ್..ಟ್ರಿನ್‌ನಲ್ಲಿ ಮುಗಿದು ಹೋಗುತ್ತದೆ. ಇಂತಹ ಸೌಲಭ್ಯ ಇಲ್ಲದಿರುವ ಜಾಗಗಳು ಇನ್ನೂ ಭಾರತದಲ್ಲಿ ಇದೆ. ಎಲ್ಲೋ ಗುಡ್ಡಗಾಡಿನಲ್ಲಿ, ಹಳ್ಳಿಯ ಪರಿಸರದಲ್ಲಿ, ಇಂತಹ ಸೌಲಭ್ಯ ಇಲ್ಲದಿರುವೆಡೆ ಇಂದಿಗೂ ಮಗನ/ಮಗಳ ಅಂಚೆ ಪತ್ರಕ್ಕಾಗಿ, ಮನಿಯಾರ್ಡರ್ ಹಣಕ್ಕಾಗಿ ಕಾಯುವ ಹೆತ್ತವರೂ ಇದ್ದಾರೆ. ಅವರ ಪಾಲಿಗೆ ಮಗನ/ಮಗಳ ಕಾಗದ ಬಲು ಆಪ್ತ, ಅವರನ್ನೇ ಕಂಡ ಅನುಭವ, ಆ ಕಾಗದ ಸವರಿ ಅದನ್ನು ಓದಿ ಸಂತೋಷಪಡುವವರೂ ಇದ್ದಾರೆ. ಆ ಸಂದೇಶ ತರುವ ಅಂಚೆಯಣ್ಣ/ಅಕ್ಕ' ಆ ಜನರ ಪಾಲಿಗೆ ಆಪ್ತಬಂಧು.

ಇದೀಗ ಪೋಸ್ಟ್‌ವುಮನ್ ಕೂಡ. ಹೆಂಗಸೊಬ್ಬಳು ಪತ್ರ ವಿತರಿಸುವ ಊಹಿಸಿಕೊಳ್ಳುವುದೂ ಅಸಾಧ್ಯ. ಪೋಸ್ಟ್-ವುಮೆನ್ ಎಂದು ಹುಬ್ಬೇರಿಸುವ ಕಾಲವೊಂದೂ ಇತ್ತು ಎಂದರೆ ಅಚ್ಚರಿ ಆಗುವುದಲ್ಲವೇ? ಈಗ ಇ-ಮೈಲ್, ಫೋನ್ ಬಂದ ಮೇಲೆ ಮರೆಯಾಗಿ ಹೋಗಿದೆ "ಪತ್ರ", "ಪೋಸ್ಟ್" "ಚಿಟ್ಟಿ". ವೇಳೆಯಿಲ್ಲ ಎಂಬ ಚಕ್ರದಲಿ ಎಲ್ಲರೂ ಬಂಧಿಗಳು. ಎಲ್ಲವೂ ಝಟ್-ಪಟ್. ಹೇಗಿದೀಯಾ ಎಂದು ಥಟಕ್ಕನೆ ಫೋನಾಯಿಸಿ ಎಲ್ಲವನ್ನೂ ಮಾತಿನಲ್ಲಿ ಮುಗಿಸಿಬಿಡುವೆವು. ಪುಟಗಟ್ಟಲೆ ಬರೆಯುತ್ತಿದ್ದ ಪತ್ರಗಳಲ್ಲಿ ತುಂಬಿರುತ್ತಿದ್ದ ನವಿರಾದ ಭಾವನೆಗಳು, ತವಕ ತಲ್ಲಣಗಳು ಎಲ್ಲವೂ ಸಂಭಾಷಣೆಯಲ್ಲಿ ಮುಗಿದು ಹೋಗುತ್ತಿದೆ. ಕಾರ್ಡ್, ಇನ್‌ಲ್ಯಾಂಡ್ ಪತ್ರಗಳ ಮೇಲೆ ನಾವು ಪ್ರೀತಿಸುತ್ತಿದ್ದ ವ್ಯಕ್ತಿಯ ಕೈ ಬರಹ ಕಂಡಾಗ ಆಗುತ್ತಿತ್ತು ಅರಿಯದ ಆನಂದ.

ಪಂಕಜ್ ಉದಾಸ್‌ನ ಗಝಲ್ ಕೇಳುತ್ತಲಿದ್ದೆ. ಚಿಟ್ಟಿ ಆಯಿಹೆ, ಆಯಿ ಹೆ ಚಿಟ್ಟಿ ಆಯಿಹೈ. ದೂರದಲಿ ನೆಲೆಸಿರುವ ಪರದೇಶಿಗಳಿಗೆ ತವರಿನಿಂದ, ಪ್ರೀತಿಪಾತ್ರರಿಂದ ಬಂದ ಒಂದು ಕಾಗದ ಅದರಲ್ಲಿನ ಭಾವನೆ, ಅಗಲಿಕೆಯ ನೋವಿನ ಹಾಡು. 1986ನೇ ಇಸವಿಯಲ್ಲಿ ಈ ಹಾಡು ಬಹುತೇಕ ಮಂದಿಯ ಕಣ್ಣಲ್ಲಿ ನೀರು ಹರಿಸಿತ್ತು. ಎಲ್ಲವೂ ಯಾಂತ್ರಿಕ ಎಂದೆನೆಪ ಈ ಯುಗದಲಿ ಹಿಂದೆ ಬರೆಯುತ್ತಿದ್ದ ಪತ್ರಗಳಲ್ಲಿನ ನಮ್ಮತನ, ತಾಜಾತನ, ಸಂವೇದನಗಳು ಈ-ಮೇಲ್ ನಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ.

ನಲ್ಲನಿಂದ ಬಂದ ಮೊದಲ ಪತ್ರ, ಅಪ್ಪ, ಅಮ್ಮನಿಂದ ಬಂದ ಪತ್ರಗಳನ್ನು ಓದಿ ನವಿರಾಗಿ ಅದರ ಮೇಲೆ ಕೈಯಾಡಿಸಿ, ಜೋಪಾನವಾಗಿ ಮಡಿಸಿ ಸೀರೆಯ ಕೆಳಗೆ ಇಟ್ಟ ಅನುಭವ ನಿಮಗೂ ಇದೆ ಅಲ್ಲವೇ? ನೆನಪಾದಾಗ ಅದನು ಕೈಯಲ್ಲಿ ಹಿಡಿದಾಗ ಆದ ಸಮಾಧಾನ, ಸುರಿದ ಒಂದು ಹನಿ, ಮೂಡಿದ ಮುಗುಳ್ನಗೆ ಅಬ್ಬಾ ಇಂದಿನ ವಿಚಿತ್ರ ಜಗತ್ತಿನಲ್ಲಿ ಕಣ್ಮರೆಯಾಗಿದೆ ಆ "ಒಲವಿನ ಓಲೆ".

ಪತ್ರ ಬರೆಯಲು ಮರೆಯಬೇಡಿ : ನಮ್ಮ ವಿಳಾಸ...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more