• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಕ್ಕ ಸಮ್ಮೇಳನಕ್ಕೆ ಈಸಲ ಹೊಸದಿಕ್ಕು

By Staff
|
Ravi Dankanikote, AKKA president
ಬೆಂಗಳೂರು, ಆ. 24 : ವಿಶ್ವ ಕನ್ನಡ ಕೂಟಗಳ ಒಕ್ಕೂಟ ಸ್ಥಾಪನೆ, ಕರ್ನಾಟಕ ಗ್ರಾಮೀಣ ವಿದ್ಯಾರ್ಥಿಗಳು ಹಾಗೂ ಅಮೆರಿಕಾ ವಿಶ್ವವಿದ್ಯಾನಿಲಯಗಳ ನಡುವೆ ಸ್ಟೂಡೆಂಟ್ ಎಕ್ಸ್ ಛೇಂಜ್ ಪ್ರೊಗ್ರಾಂ, ಸಾಗರೋತ್ತರ ಕನ್ನಡ ಕಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮೆರಿಕಾ ವಿದ್ಯಾರ್ಥಿಗಳ ಮೊದಲ ತಂಡಕ್ಕೆ ಪದವಿ ಪುರಸ್ಕಾರ, ಕರ್ನಾಟಕಕ್ಕೆ ಮರಳುವ ಅನಿವಾಸಿ ಕನ್ನಡಿಗರಿಗೆ ಅಕ್ಕ ಸಹಾಯ ಪೋರ್ಟಲ್...

ಮುಂದಿನ ವರ್ಷ ಅಮೆರಿಕಾದ ನ್ಯೂಜರ್ಸಿಯಲ್ಲಿ ಆಯೋಜಿಸಲಾಗಿರುವ ಆರನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ವ್ಯವಸ್ಥಾಪಕರು ಕನ್ನಡಜನಕ್ಕಾಗಿ ಹಮ್ಮಿಕೊಳ್ಳಲಿರುವ, ಬದುಕಿಗೆ ಹತ್ತಿರವಾಗುವ ಕನಸುಗಳ ಹೈಲೈಟ್ ಗಳಿವು. ಅಕ್ಕ ಸಮ್ಮೇಳನವೆಂದರೆ ಕೇವಲ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ, ಗಣ್ಯರ ಉಪಸ್ಥಿತಿಯಲ್ಲಿ ಅದ್ದೂರಿ ಉದ್ಘಾಟನಾ ಸಮಾರಂಭ, ಲಾಡು ಚಿರೋಟಿಯ ಪುಷ್ಕಳ ಊಟೋಪಚಾರ, ಹಾಡು ಮತ್ತು ಸಂಗೀತ ಎಂಬ ಜನಜನಿತ ಕಲ್ಪನೆಯನ್ನು ಧ್ವಂಸಮಾಡಿ ಕನ್ನಡ ಜನರಿಗೆ ಉಪಯೋಗವಾಗುವಂತಹ ಮಾಹಿತಿ, ಸಾಧನ, ಸಲಕರಣೆಗಳನ್ನು ಒದಗಿಸುವತ್ತಲೂ ಅಕ್ಕ ವಿಶೇಷ ಗಮನ ಹರಿಸಲಿದೆ ಎಂದು ಅಧ್ಯಕ್ಷ ರವಿ ಡಂಕನಿಕೋಟೆ ತಿಳಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ರವಿ, ಸಮ್ಮೇಳನ ಮೈಗೂಡಿಸಿಕೊಳ್ಳಲು ಇಚ್ಛಿಸಿರುವ ಇತರೆ ಪ್ರಗತಿಪರ ಕಾರ್ಯಕ್ರಮಗಳನ್ನು ಬಿಚ್ಚಿಟ್ಟರು. ಅವುಗಳಲ್ಲಿ ಮುಖ್ಯವಾಗಿ ಅಮೆರಿಕಾ ಅನಿವಾಸಿ ಕನ್ನಡಿಗರ ವತಿಯಿಂದ 5000 ಶೀಶೆಯಷ್ಟು ರಕ್ತದಾನ ಚಳವಳಿ (ರೆಡ್ ಕ್ರಾಸ್ ಸಂಸ್ಥೆಗೆ) ಎಲ್ಲೋ ಕಳೆದುಹೋಗುತ್ತಿರುವ ನಮ್ಮಯುವ ಜನರನ್ನು ಕನ್ನಡದತ್ತ ಆಕರ್ಷಿಸಿಸುವ ಉದ್ದೇಶದಿಂದ ಅಕ್ಕ ಆಡಿಸುವ ಕ್ರಿಕೆಟ್ ಪ್ರೀಮಿಯರ್ ಲೀಗ್ (ACPL), ಹಸುರು ತಂತ್ರಜ್ಞಾನ, ಜೈವಿಕ ವಿಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ಕರ್ನಾಟಕ ಸರಕಾರ ಮತ್ತು ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಒಡಂಬಡಿಕೆಗಳಿಗೆ ಸಹಿಹಾಕಿಸುವ ಇಚ್ಛೆ.

ಎರಡು ವರ್ಷಗಳಿಗೊಮ್ಮೆ ಜರುಗುವ ಅಕ್ಕ ಸಮ್ಮೇಳನ ಈ ಬಾರಿ ನ್ಯೂಜರ್ಸಿಯ ಎಡಿಸನ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ. ಪೂರ್ವ ಕರಾವಳಿಯಲ್ಲಿರುವ ಕೆಲವು ಕನ್ನಡ ಕೂಟಗಳ ಸಹಯೋಗದಲ್ಲಿ ನ್ಯೂಜರ್ಸಿಯ ಬೃಂದಾವನ ಕನ್ನಡ ಸಂಘ ಸಮ್ಮೇಳನ ನಡೆಸುವ ಜವಾಬ್ದಾರಿ ವಹಿಸಿಕೊಂಡಿದೆ. ಸಮ್ಮೇಳನಕ್ಕೆ ಮಧು ರಂಗಯ್ಯ, ಪ್ರಸನ್ನ ಕುಮಾರ್ ಮತ್ತು ಶಂಕರ್ ಶೆಟ್ಟಿ ಅವರನ್ನು ತ್ರಿಮೂರ್ತಿ ಸಂಯೋಜಕ ತಂಡವನ್ನಾಗಿ ರಚಿಸಲಾಗಿದೆ ಎಂದು ರವಿ ಹೇಳಿದರು.

2010ರ ಸೆಪ್ಟೆಂಬರ್ 3ರಿಂದ 5ರವರೆಗೆ ನಡೆಯಲಿರುವ ಸಮ್ಮೇಳನ ನಭೂತೋ ನಭವಿಷ್ಯತಿಃ ಎನಿಸಲಿದೆ. ಕನ್ನಡ ನೆಲದಿಂದ ಆಚೆ ನಡೆಯುವ ಅಭೂತಪೂರ್ವ ಕನ್ನಡಿಗರ ಕಲರವ ಎನಿಸಲಿದೆ. ಸಮ್ಮೇಳನಕ್ಕೆ ಸುಮಾರು 10,000 ಕನ್ನಡಿಗರನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ ಅಕ್ಕ ಅಧ್ಯಕ್ಷರು, ಸಮ್ಮೇಳನದ ಎಲ್ಲ ಇಲಾಖೆಗಳಿಗೆ ಸಮರ್ಥ ನುರಿತ ಸ್ವಯಂಸೇವಕರನ್ನು ಆರಿಸಲಾಗುತ್ತಿದ್ದು ಕಾರ್ಯಕ್ರಮದ ಯಶಸ್ಸಿಗೆ ತಂಡ ಅಹರ್ನಿಶಿ ದುಡಿಯಲು ಕಂಕಣಬದ್ಧವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮೇಳನ ಉದ್ಘಾಟನಾ ಸಮಾರಂಭಕ್ಕೆ ಕರ್ನಾಟಕದಿಂದ ಗಣ್ಯರ ತಂಡ ಆಗಮಿಸುತ್ತದೆ, ನಿಜ. ಆದರೆ, ಸಮ್ಮೇಳನದ ಉದ್ಘಾಟನೆಯನ್ನು ಅಮೆರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಿಂದ ಮಾಡಿಸಬೇಕೆಂದು ಪ್ರಯತ್ನಗಳು ನಡೆದಿವೆ. ಅಲ್ಲದೆ, ಸಮ್ಮೇಳನಕ್ಕೆ ಓರ್ವ ಬ್ರಾಂಡ್ ಅಂಬಾಸಿಡರ್ ಅನ್ನು ಗೊತ್ತು ಮಾಡಲು ನಿರ್ಧರಿಸಲಾಗಿದೆ ಎಂದು ರವಿ ಡಂಕನಿಕೋಟೆ ವಿವರಿಸಿದರು.

ಕರ್ನಾಟಕಲ್ಲಿದ್ದುಕೊಂಡು ಸಮ್ಮೇಳನ ಕೆಲಸ ಕಾರ್ಯಕ್ರಮಗಳ ಸಂಯೋಜನೆ ಮಾಡಲು ಮುಂಚಿನಂತೆ ಈ ಬಾರಿ ಒಬ್ಬ ವ್ಯಕ್ತಿ ಇರುವುದಿಲ್ಲ. ಈ ಉದ್ದೇಶಕ್ಕಾಗಿ ಭಾರತ ಸಂಯೋಜನಾ ಸಮಿತಿಯನ್ನು ಸದ್ಯದಲ್ಲೆ ರಚಿಸಲಾಗುತ್ತಿದ್ದು ಒಂದೊಂದು ವಿಭಾಗಕ್ಕೆ ಒಬ್ಬೊಬ್ಬ ಉಸ್ತುವಾರಿ ಸ್ವಯಂಸೇವಕರನ್ನು ಗೊತ್ತು ಮಾಡಲಾಗುವುದು. ಸಮಿತಿ ರಚನೆ ಆಗುವವರೆಗೆ ಅಕ್ಕ ಸಮ್ಮೇಳನ ಕುರಿತಂತೆ ಪತ್ರ ವ್ಯವಹಾರ, ಹೆಚ್ಚಿನ ವಿವರಗಳನ್ನು ತಿಳಿಯಬಯಸುವವರು ಅಕ್ಕ ಕಾರ್ಯದರ್ಶಿ ದಯಾಶಂಕರ ಅದಪ್ಪ ಅವರನ್ನು ಸಂಪರ್ಕಿಸಬಹುದೆಂದು ಅಧ್ಯಕ್ಷರು ತಿಳಿಸಿದರು. ದಯಾಶಂಕರ ಆದಪ್ಪ ಅವರ ಇ-ವಿಳಾಸ ಇಂತಿದೆ:dayz@ikonss.com ಅಮೆರಿಕಾದ ದೂರವಾಣಿ : 248-471-6861 (ಮಿಚಿಗನ್ ಪ್ರಾಂತ್ಯ).

ಪತ್ರಿಕಾಗೋಷ್ಟಿಯಲ್ಲಿ ಅಕ್ಕ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಅಮರ್ ನಾಥ್ ಗೌಡ, ಮಧುರಂಗಯ್ಯ, ಶಂಕರ್ ಶೆಟ್ಟಿ, ದಯಾಶಂಕರ ಆದಪ್ಪ, ವೈಷ್ನವಿ ಶಂಕರ್, ಯಮುನಾ ಶ್ರೀನಿಧಿ, ಸಾಧನಾ ಶಂಕರ್, ರವಿ ಕೊಳ್ಳೇಗಾಲ, ಸುದೀಪ್ ಪಾರ್ಥಸಾರಥಿ, ಬೆನ್ ಕಾಂತರಾಜು, ಸಂಜಯ್ ರಾವ್, ನಾಗಶಂಕರ್,ಮಾದೇಶ್ ಬಸವರಾಜ್ ಉಪಸ್ಥಿತರಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more