ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆನಾಲಿ ರಾಮ Potluck ಡಿನ್ನರ್ ಗೆ ಹೋದದ್ದು

By Staff
|
Google Oneindia Kannada News
  • ಎಚ್.ವೈ. ರಾಜಗೋಪಾಲ್,
Tenali Rama and the potluck Dinner ಪ್ರಭು ಕೃಷ್ಣದೇವರಾಯನಿಗೆ ದಿನವೂ ಅರಮನೆಯ ಮೃಷ್ಟಾನ್ನ ಭೋಜನ ಉಂಡು ವೆಗಟುಹತ್ತಿ ಇತರರ ಮನೆಯ ಊಟ ಹೇಗಿರುವುದೋ ರುಚಿನೋಡುವ ಆಸೆಯಾಯಿತು. ಕೂಡಲೆ ತನ್ನ ಮಂತ್ರಿಗಳನ್ನು ಕರೆಸಿ ತನ್ನ ಆಸೆ ತಿಳಿಸಿದ. ಸರಿ, ಮಂತ್ರಿಗಳೆಲ್ಲ ಸೇರಿದರು, ಪಂಡಿತರೆಲ್ಲ ಸೇರಿದರು. ಎಲ್ಲರೂ ಸೇರಿ ಸಮಾಲೋಚನೆ ನಡೆಸಿದರು. ಅವರ ಪೈಕಿ ಇದ್ದ ಇಂಗ್ಲಿಷ್ ಪಂಡಿತನೊಬ್ಬ ಪಾಶ್ಚಾತ್ಯರಲ್ಲಿ ಇದನ್ನು Potluck dinner ಎನ್ನುತ್ತಾರೆ. ಒಬ್ಬೊಬ್ಬರೂ ತಮ್ಮ ತಮ್ಮ ಮನೆಯಿಂದ ಒಂದೊಂದು ಅಡುಗೆ (dish) ತರುತ್ತಾರೆ ಎಂದು ವಿವರಿಸಿದ. ಎಲ್ಲರಿಗೂ ಅದು ಸಮ್ಮತವಾಯಿತು. ರಾಜನ ಬಳಿಗೆ ಹೋಗಿ ತಮ್ಮ ಯೋಚನೆ ತಿಳಿಸಿದರು. ಅವನಿಗೂ ಅವರ ಸಲಹೆ ಸರಿ ಎನಿಸಿತು.

ಮಾರನೆಯ ದಿನವೇ ಅರಸು ಆಜ್ಞೆ ಹೊರಡಿಸಿದ. ಇನ್ನೆರಡು ದಿನಗಳಲ್ಲಿ ಬರುವ ಭಾನುವಾರ ರಾತ್ರಿಯ ಊಟಕ್ಕೆ ಎಲ್ಲರೂ ಒಂದೊಂದು Dish ತರಬೇಕು ಎಂದು. ಮೋಜುಗಾರನಾದ ಅರಸು ತಾನೂ ಒಂದು Dish ಸ್ವತಃ ತಯಾರಿಸಿ ತರುವುದಾಗಿ ಹೇಳಿದ.

ಕೂಡಲೆ ಅಸ್ಥಾನಿಕರೆಲ್ಲರೂ ತಾವೇನು Dish ತರಬೇಕೆಂದು ಯೋಚಿಸತೊಡಗಿದರು. ಯಾವಾಗಲೂ ರಾಜನ ಕೃಪೆ ತಮ್ಮ ಮೇಲೆ ಬೀಳಲಿ ಎಂದೇ ಹಲ್ಲು ಗಿಂಜುತ್ತ ಕೈಹೊಸೆಯುತ್ತಿದ್ದ ಆಸ್ಥಾನಿಕರಿಗೆ ಇದೊಂದು ದೊಡ್ಡ ಅವಕಾಶವಾಗಿ ಕಂಡಿತು. ತಮ್ಮ ಮನೆಯ ಅಡುಗೆಯಿಂದ ರಾಜನ ಮನಸ್ಸನ್ನು ಪೂರ್ತಿ ತಮ್ಮ ಕಡೆಗೆ ಒಲಿಸಿಕೊಂಡು ಆಸ್ಥಾನದಲ್ಲಿ ಹೆಚ್ಚು ಪ್ರಬಲರಾಗಬಹುದು ಎಂಬ ಅಸೆಯಿಂದ ತಮಗೆ ಗೊತ್ತಿದ್ದ ಅಡುಗೆ ತಿಂಡಿಗಳನ್ನೆಲ್ಲ ಜ್ಞಾಪಿಸಿಕೊಂಡರು. ತಮ್ಮ ಹೆಂಡತಿಯರನ್ನು ಅದು ಮಾಡೆ, ಇದು ಮಾಡೆ ಎಂದು ಗೋಳುಹೊಯ್ದುಕೊಂಡರು.

ನಮ್ಮ ತೆನಾಲಿ ರಾಮನಿಗೆ ಈಗ ಸಂಕಟಕ್ಕಿಟ್ಟುಕೊಂಡಿತು. ಅವನ ಹೆಂಡತಿ ಅಡಿಗೆ ವಿಚಾರದಲ್ಲಿ ಅಷ್ಟಕ್ಕಷ್ಟೆ. ಇಷ್ಟರ ಮೇಲೆ ಸಿಡುಕಿ, ಗಯ್ಯಾಳಿ. ಏನಾದರೂ ಮಾಡು ಎಂದರೆ ಲಟ್ಟಣಿಗೆಯಿಂದಲೇ ಬಡಿಯುತ್ತಾಳೆ. ರಾಮನಿಗೋ ಸ್ವತಃ ಏನೂ ಅಡಿಗೆ ಬಾರದು. ರುಚಿಯ ವಿಚಾರದಲ್ಲಿ ಅವನಿಗೆ ಏನೂ ತಿಳಿಯದು. ಯಾರು ಏನು ಬಡಿಸಿದರೂ ನಗುನಗುತ್ತ ಹಾಸ್ಯದ ಉಪ್ಪಿನಕಾಯಿ ನೆಂಜಿಕೊಂಡು ತಿಂದು ಸಂತೋಷಪಡುವುದು ಅವನ ಸ್ವಭಾವ. ಅಂಥ ರಾಮನಿಗೆ ಈಗ ಕಷ್ಟ ಬಂದಿದೆ. ಏನಾದರೂ dish ತೆಗೆದುಕೊಂಡು ಹೋಗಬೇಕು. ಹೋಗದಿದ್ದರೆ ರಾಜನ ಕೋಪಕ್ಕೆ ಗುರಿಯಾಗಬೇಕು. ಏನು ಮಾಡುವುದು?

ಎಲ್ಲರೂ ಒಂದೊಂದು dish ತರಬೇಕು ಎಂದಲ್ಲವೆ ರಾಯ ಹೇಳಿದ್ದು, ಅ dish ಎಂದರೇನು ಎಂದು ತೆನಾಲಿ ಯೋಚಿಸಿದ. ಹೊಳೆಯಲಿಲ್ಲ. ಆ ಇಂಗ್ಲಿಷ್ ಪಂಡಿತನನ್ನೇ ಕೇಳೋಣ ಎಂದು ಅವನ ಬಳಿಗೆ ಹೋದ. ಆ ಪಂಡಿತ ಆ ಪದದ ಅರ್ಥಗಳನ್ನು ವಿವರಿಸಿದ. ಅದನ್ನು ಕೇಳಿ ತೆನಾಲಿ ರಾಮ ಸದ್ಯ ಗೆದ್ದೆ ಅಂದುಕೊಂಡ.

ಭಾನುವಾರ ರಾತ್ರಿ ಬಂತು. ಎಲ್ಲರೂ ತಮ್ಮ ತಮ್ಮ ಮನೆಯಿಂದ ಅತ್ಯಂತ ರುಚಿಯಾದ ಭಕ್ಷ್ಯಗಳನ್ನು ಮಾಡಿಸಿಕೊಂದು ಸಡಗರದಿಂದ, ಕುತೂಹಲದಿಂದ, ಕಾತರದಿಂದ ರಾಜನ ಆಸ್ಥಾನಕ್ಕೆ ಬಂದು ಸೇರಿದರು. ತೆನಾಲಿ ರಾಮನೂ ಒಂದು dish ತಂದಿದ್ದ. ತಾನು ಏನು ತಂದಿದ್ದೇನೆಂಬುದು ಇತರರಿಗೆ ಗೊತ್ತಾಗದಿರುವಂತೆ ಅದರ ಮೇಲೆ ಒಂದು ಮುಚ್ಚಳ, ಅದರ ಮೆಲೊಂದು ಕೈಚೌಕ ಹಾಕಿ ತಂದಿದ್ದ.

ಸಕಾಲದಲ್ಲಿ ರಾಯನ ಸವಾರಿ ಭೋಜನಗೃಹಕ್ಕೆ ಅಗಮಿಸಿತು. ಎಲ್ಲರೂ ರಾಜನ ಪರಿಶೀಲನೆಗಾಗಿ ತಾವು ತಂದಿದ್ದ ಭಕ್ಷ್ಯಗಳನ್ನು ಹಿಡಿದು ನಿಂತರು. ರಾಜ ಒಬ್ಬೊಬ್ಬರ ಮನೆಯ ಅಡುಗೆಯನ್ನೂ ರುಚಿನೋಡಿ ಅವರಿಗೆ ತನ್ನ ಸಂತೋಷ ಸೂಚಿಸುತ್ತ ಮುಂದೆ ನಡೆದು ತೆನಾಲಿಯ ಬಳಿಗೆ ಬಂದು ನಿಂತ. ತೆನಾಲಿ ಎಂದೂ ಇಲ್ಲದ ಗಾಂಭೀರ್ಯದಿಂದ ತನ್ನ dish ಮೆಲಿದ್ದ ಮುಚ್ಚಳ ತೆಗೆದ. ರಾಜ ನೋಡಿದ, ಖಾಲಿ ತಟ್ಟೆ! ರಾಜನನ್ನು ಇಷ್ಟರವರೆಗೂ ರಮಿಸಿದ್ದ ಈ ಏರ್ಪಾಡು ಥಟ್ಟನೆ ಕೋಪ ತಂದಿತು. ಅದರೂ ಅವನು ಅದನ್ನು ಅದುಮಿಟ್ಟು

ಇದನ್ನು ಹೇಗೆ ತಿನ್ನುವುದು? ಎಂದು ಕೇಳಿದ.

ರಾಯರು ತಮಾಷೆ ಮಾಡುತ್ತಿದ್ದೀರಿ, ಇದನ್ನು ಯಾರಾದರೂ ತಿನ್ನಲು ಸಾಧ್ಯವೇ? ಎಂದ ತೆನಾಲಿ.

ತೆನಾಲಿ, ಎಲ್ಲರೂ ಒಂದೊಂದು dish ತರಬೇಕೆಂದು ಹೇಳಿದ್ದೆನಲ್ಲವೆ?

ಹೌದು, ಮಹಾಸ್ವಾಮಿ.

ಮತ್ತೆ ನೀನೇಕೆ ತಂದಿಲ್ಲ?

ತಂದಿದ್ದೇನೆ ಮಹಾಸ್ವಾಮಿ.

ಎಲ್ಲಿ?

ಇಲ್ಲೇ ಮಹಾಸ್ವಾಮಿ.

ರಾಜನಿಗೆ ಕೋಪ ಎರುತ್ತಲೇ ಇತ್ತು. ತೆನಾಲಿಯ ದ್ವೇಷಿಗಳಿಗೆ ಸಂತಸ ಉಕ್ಕುತ್ತಲೇ ಇತ್ತು.

ತೆನಾಲಿ, ಈಗ ನೀನು ನನಗೆ ಸರಿಯಾದ ವಿವರಣೆ ಕೊಡದಿದ್ದರೆ ನಿನ್ನನ್ನು ಚಿತ್ರಹಿಂಸೆಗೆ ಗುರಿಮಾಡಬೇಕಾಗುತ್ತದೆ. ಹೇಳು, ಏನು ಹೇಳುತ್ತೀಯೋ ಅದನ್ನು.
ಮಹಾಸ್ವಾಮಿ, ನನ್ನ ಮೆಲೆ ಕೋಪಗೊಳ್ಳಬಾರದು. dish ಎಂದರೆ ಏನು ಎಂದು ಗೊತ್ತಿರಲಿಲ್ಲ. ಇಂಗ್ಲಿಷ್ ಪಂಡಿತನನ್ನು ಕೇಳಿದೆ. ಅವನು ಹೇಳಿದ: dish ಎಂದರೆ ಭಕ್ಷ್ಯ, ಅಥವ ಅದನ್ನು ಇಡುವ ತಟ್ಟೆ, ತಳಿಗೆ ಎಂಬ ಎರಡು ಅರ್ಥಗಳೂ ಇವೆ ಎಂದು ವಿವರಿಸಿದ. ಎಲ್ಲರೂ ಭಕ್ಷ್ಯಗಳನ್ನೇ ತಂದರೆ ಅವನ್ನಿಡಲು ತಳಿಗೆಗಳೂ ಬೇಡವೆ ಎಂದು ನಾನು ಬರಿಯ ತಳಿಗೆ ತಂದಿದ್ದೇನೆ. ರಾಯರು ಸಮಾಧಾನ ಚಿತ್ತದಿಂದ ನನ್ನ ಮಾತನ್ನು ಪರಾಂಬರಿಸಬೇಕು.

ರಾಯನಿಗೆ ತೆನಾಲಿಯ ಮಾತು ಕೇಳಿ ಅವನ ಮೇಲಿದ್ದ ಕೋಪವೆಲ್ಲ ಹೋಯಿತು. ಗೊಳ್ಳೆಂದು ನಕ್ಕ. ಆದರೂ ಹುಸಿಮುನಿಸಿನಿಂದ, ತೆನಾಲಿ, ನಿನ್ನ ವಿವರಣೆಯಿಂದ ಹರ್ಷಿತರಾದೆವು. ಆದರೂ ನಿನಗೆ ಶಿಕ್ಷೆ ವಿಧಿಸಲೇಬೇಕಾಗಿದೆ. ಅದೇನೆಂದರೆ ನೀನು ಈ ರಾತ್ರಿ ನಾನು ಮಾಡಿದ dish ಮಾತ್ರ ತಿನ್ನಬೇಕು. ಇನ್ನಾರ ಮನೆಯ ಅಡುಗೆಯನ್ನೂ ಮುಟ್ಟಕೂಡದು ಎಂದ. ಏನನ್ನಾದರೂ ತಿಂದು ಸುಖವಾಗಿರುತ್ತಿದ್ದ ತೆನಾಲಿಗೆ ಮೊಟ್ಟಮೊದಲ ಬಾರಿಗೆ ಮುಖ ಒಂದು ಕ್ಷಣ ಕಪ್ಪಿಟ್ಟಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X