ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದಲ್ಲಿ ಬಿಳಿಹುಲಿಯೊಂದಿಗೆ ಸರಸ

By Staff
|
Google Oneindia Kannada News

The White Tiger as my mid air companion!
ಫ್ರಾಂಕ್ ಫರ್ಟ್ ನಿಂದ ಮೈಸೂರಿನವರೆಗಿನ ದಾರಿಗುಂಟ ಬಹುಚರ್ಚಿತ The White Tiger ಕಾದಂಬರಿಯನ್ನು ಓದಿ ಜಗಿದ ಲೇಖಕರ ಪ್ರತಿಕ್ರಿಯೆಯನ್ನು ಸಾದರಪಡಿಸುತ್ತಿದ್ದೇವೆ. ಸಾಹಿತ್ಯಿಕ ವಿಮರ್ಶೆಯ ಸೋಂಕು ತಾಗಿಸಿಕೊಳ್ಳದೆ ಪ್ರಬಂಧ ಪ್ರಕಾರಕ್ಕೆ ಶರಣಾದ ಸ್ವಾನುಭವ ನಿಷ್ಠ ಬರಹವಿದು.ಇಂಥ ಬರವಣಿಗೆಯನ್ನು 'ವಿಮಾನದಲ್ಲಿ ಬಿಳಿಹುಲಿಯೊಂದಿಗೆ ಸರಸ' ಎಂದು ಕರೆಯೋಣವೆ!-ಸಂಪಾದಕ

*ಶೆಲ್ವನಾರಾಯಣ ಎ.ಆರ್, ರೋಟರ್ಡ್ಯಾಮ್, ನೆದರ್ಲ್ಯಾಂಡ್ಸ್.

ಎಲ್ಲರಿಗೂ ನಮಸ್ಕಾರ. ಕಳೆದ ತಿಂಗಳು (ಅಕ್ಟೋಬರ್ ನಲ್ಲಿ) ನನ್ನ ಜೀವನದ ಅತ್ಯಂತ ಸುಮಧುರ ಕ್ಷಣಗಳಲ್ಲೊಂದು ಒದಗಿ ಬಂತು. ನನ್ನ ನವಜಾತ ಸೀಮಂತ ಪುತ್ರಿಯನ್ನು ನೋಡಲು ಆಂಸ್ಟರ್ಡ್ಯಾಮ್ ನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದೆ. ಹೊರಡುವ ಮುನ್ನವೇ ನನಗೆ ಒಂದು ಸತ್ಯ ತಿಳಿದಿತ್ತು, ಅದೇನೆಂದರೆ, ಈ ಪ್ರಯಾಣ ನನ್ನ ಜೀವನದ ಅತ್ಯಂತ ದೀರ್ಘವಾದ ಪ್ರಯಾಣವಾಗಿರುತ್ತದೆ ಎಂದು. ನನ್ನ ಪುತ್ರಿಯನ್ನು ನೋಡುವ ತವಕ ನನ್ನ ಮನದ ಅಂತರಾಳವನ್ನ ಹೊಕ್ಕಿತ್ತು. ವಿಮಾನ ನಿಲ್ದಾಣದ ಶಿಷ್ಟಾಚಾರಗಳನ್ನೆಲ್ಲಾ ಮುಗಿಸಿ, ತೆರಿಗೆ ರಹಿತ ಅಂಗಡಿಗಳ ಸಾಲಿನಲ್ಲಿದ್ದ ಒಂದು ಪುಸ್ತಕದ ಅಂಗಡಿಗೆ ನುಗ್ಗಿದೆ.

ಯಾವ ಪುಸ್ತಕ ಕೊಂಡುಕೊಳ್ಳೋದು ಅನ್ನೋ ಜಿಜ್ಞಾಸೆ ಶುರುವಾಯ್ತು. ಆಗ ಅರವಿಂದ ಅಡಿಗರ ಬೂಕರ್ ಪ್ರಶಸ್ತಿ ವಿಜೇತ The white tiger ಪುಸ್ತಕದ ನೆನಪಾಯ್ತು. ಈ ಪುಸ್ತಕದ ಉಲ್ಲೇಖ ಮಾಡುತ್ತಿದ್ದಂತೆಯೇ ಎಲ್ಲ ಓದುಗರ ಮನಸ್ಸಿನಲ್ಲಿ ಬರೋ ಒಂದು ವಿಚಾರ ಅಂದ್ರೆ " ಇವನ್ಯಾರೋ ಮತ್ತೊಬ್ಬ ಅವನ್ನ ಬಯ್ಯೋಕೆ ಬರ್ದಿದ್ದಾನೆ " ಅನ್ನೋದು. ಈಗಾಗಲೇ ಆ ಮಹತ್ಕಾರ್ಯವನ್ನ ಹಲವಾರು ಜನರು ಮಾಡಿರೋದ್ರಿಂದ ನಾನು ಆ ಕೆಲಸಕ್ಕೆ ಕೈ ಹಾಕುವುದಿಲ್ಲ. ಧೈರ್ಯವಾಗಿ ಈ ಲೇಖವನ್ನ ಓದಲು ಮುಂದುವರಿಸಿ. ಆ ಪುಸ್ತಕವನ್ನ ಎಷ್ಟು ಹುಡುಕಿದರೂ ಸಿಗಲಿಲ್ಲ. ಆಗ ಆ ಅಂಗಡಿಯ ಹಿಮಕೇಶೀ ವ್ಯವಸ್ಥಾಪಕಿಯನ್ನ ಕೇಳಿದಾಗ, ಅವಳೇ ಬಂದು ಅಲ್ಲಿದ್ದ ಕೊನೆಯ ಪ್ರತಿಯನ್ನ ಕೈಯಲ್ಲಿಟ್ಟು Is this the one you are looking for ಎಂದಳು. ನಾನು ಹೌದೂ ಎಂಬಂತೆ ತಲೆಯಾಡಿಸಿ Looks like this is the last copy, must be the best seller ಎಂದು ಹಲ್ಲು ಕಿರಿದೆ, ಆಗ ಅವಳೂ ಮುಗುಳ್ನಕ್ಕು ಪುಸ್ತಕದ ಜೊತೆಗೆ 20 ಯೂರೋ ಬಿಲ್ಲನ್ನೂ ಕೈಗಿಟ್ಟಳು.

ಅದನ್ನ ನೋಡಿ, ಹಿಗ್ಗಿದ್ದ ನನ್ನ ಮುಖ ಇಂಗು ತಿಂದ ಮಂಗನಂತಾಯ್ತು. ಸರಿ 20 ಯೂರೋ ಕೊಟ್ಟು ಪುಸ್ತಕ ಹಿಡಿದು ವಿಮಾನದ ಕಡೆಗೆ ನಡೆದೆ. Frankfurt ನಲ್ಲಿ ಬೆಂಗಳೂರಿನ ವಿಮಾನ ಹತ್ತಿ, ನನಗೆ ಅಪರೂಪಕ್ಕೆ ಸಿಕ್ಕ ವಿಶಾಲವಾಗಿ ಕಾಲು ಚಾಚಲು ಅವಕಾಶವಿರೋ exit ಬಳಿಯ ಕುರ್ಚಿಯಲ್ಲಿ ಕುಳಿತು ಪುಸ್ತಕ ಓದಲು ಪ್ರಾರಂಬಿಸಿದೆ. ಆ ಪುಸ್ತಕದ ಕೆಲವು ಪುಟಗಳನ್ನು ಓದಿದರೇ ಸಾಕು, ಅಡಿಗರ ಬರಹದ ಶೈಲಿಯಲ್ಲಿ ಓದುಗನನ್ನು ಕಟ್ಟಿ ಹಿಡಿಯುವ ಸಾಮರ್ಥ್ಯವಿದೆ ಎಂಬುದು ತಿಳಿಯುತ್ತದೆ. ಹಲವಾರು ಬಾರಿ ನನ್ನ ಮನಸ್ಸಿನಲ್ಲಿ ಯಾವಾಗ ಮನೆಸೇರುತ್ತೇನೆ, ಯಾವಾಗ ನನ್ನ ಮಗುವನ್ನ ನೋಡುತ್ತೇನೆ ಅನ್ನೋ ತವಕ ಉಂಟಾಗುತ್ತಿತ್ತು, ಆದರೆ ಅಡಿಗರ ಬರವಣಿಗೆ ಶೈಲಿಯ ಹಿಡಿತ ನನ್ನ ಮನಸ್ಸನ್ನು ಹಿಡಿದಿಟ್ಟಿತ್ತು.

ಪ್ರಯಾಣ ಕಳೆದಂತೆ ಪುಸ್ತಕದ ಸುಮಾರು ಅಂತ್ಯಕ್ಕೆ ಬಂದಿದ್ದೆ, ಆಗ ನನ್ನ ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ಅಮೇರಿಕದ ವೃಧ್ಧ ಸಹಪ್ರಯಾಣಿಕ ಒಂದು ಜರ್ಮನ್ ಪತ್ರಿಕೆಯನ್ನ ಓದುತ್ತಿದ್ದರು. (ಅಮೇರಿಕದವ ಜರ್ಮನ್ ಪತ್ರಿಕೆ ಹೇಗೆ? ಆ ವಿಚಾರ ನನಗೂ ಗೊತ್ತಿಲ್ಲ) ಆ ಪತ್ರಿಕೆಯಲ್ಲಿ ಆಕರ್ಷಕವಾದ ಗಗನ ಚುಂಬೀ ಕಟ್ಟಡಗಳ ಮುಂದೆ ಅರೆ ನಗ್ನ ಸ್ಲಂ/ಕೊಳಚೆ ಪ್ರದೇಶದ ಮಕ್ಕಳ ಹಿಂಡಿನ ಚಿತ್ರದೊಂದಿಗೆ ಅಡಿಗರ ಪುಸ್ತಕದ ವಿಮರ್ಷೆ ಪ್ರಕಟವಾಗಿತ್ತು. ಅದನ್ನು ಓದಿ ಮುಗಿಸಿದ್ದ ಅವರು ನನ್ನೊಡನೆ ಸಂಭಾಷಣೆ ಪ್ರಾರಂಬಿಸಿದರು. ಆ ಸಂಭಾಷಣೆಯ ಒಂದು ಪಕ್ಷಿನೋಟವನ್ನ ಈ ಕೆಳಗೆ ಬರೆದಿದ್ದೇನೆ.

ಆತ: ನೀವು ಓದುತ್ತಿರುವುದು ಇದೇ ಪುಸ್ತಕ ಅಲ್ಲವೇ? ಹೇಗಿದೆ?
ನಾನು: (ಅವರ ಪತ್ರಿಕೆಯನ್ನ ಇಣುಕಿ ನೋಡಿ) ಹೌದು, ಚೆನ್ನಾಗಿದೆ (ಎಂದು ನಕ್ಕೆ)
ಆತ: ಇದರಲ್ಲಿ ಬರೆದಿರುವುದೆಲ್ಲ ನಿಜವೇ? (ಎಂದು ವ್ಯಂಗ್ಯವಾಗಿ ಹಲ್ಲು ಕಿರಿದರು)
ನಾನು: ಈ ಕಥೆ ಕಾಲ್ಪನಿಕ ಎಂದು ಮುನ್ನುಡಿಯಲ್ಲೇ ಬರೆದಿದ್ದಾರೆ ಅಲ್ವೆ? (ಎಂದು ಮುಗುಳ್ನಕ್ಕು ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ಮಾಡಿದೆ)

ಆತ: ಆದರೂ, ಈ ಪುಸ್ತಕ ಸತ್ಯ ಸನ್ನಿವೇಷಗಳವನ್ನಾಧಾರಿಸಿದ್ದು, ಅಲ್ಲವೆ?
ನಾನು: ಹಮ್! ನಾನು ಯಾವತ್ತು ಭಾರತದ ಆಭಾಗಕ್ಕೆ ಹೋಗಿಲ್ಲ, ಪತ್ರಿಕೆಗಳಲ್ಲಿ ಓದಿದ್ದೇನೆ, ಸಿನಿಮಾಗಳಲ್ಲಿ ನೋಡಿದ್ದೇನೆ ಅಷ್ಟೇ. ಹಾಗಾಗಿ ಖಚಿತವಾಗಿ ನಾನೇನೂ ಹೇಳಲಾರೆ.

ಆತ: Still you must be knowing about some of these incidents
ನಾನು: (ನನ್ನ ಬಾಯಲ್ಲಿ ಹೌದು ಹೌದೆನ್ನಿಸಲು ವಿಕ್ರಮನ ಬೇತಾಳದಂತೆ ಹಿಂದೆಬಿದ್ದಿದ್ದಾನಲ್ಲಾ ಎಂದು ಮನಸ್ಸಲ್ಲೇ ಗೊಣಗಿ) Yeah these things happen in some pockets of rural areas in north india ಎಂದೆ

ಆತ: ವಿದೇಶದಲ್ಲಿ ಕೆಲಸ ಮಾಡುವ ನೀವುಗಳು, ಹೆಚ್ಚು ಹಣವಂತರು ಅನ್ನಿಸುತ್ತೆ, ನೀವುಗಳೇಕೆ ಇದರ ಬಗ್ಗೆ ಏನಾದರೂ ಮಾಡಬಾರದು?
ನಾನು: ಬಹುತೇಕ ಅನಿವಾಸಿ ಭಾರತೀಯರು ಒಂದಲ್ಲಾ ಒಂದುರೀತಿಯಲ್ಲಿ ಸಮಾಜಸೇವೆ ಮಾಡುತ್ತಿದ್ದಾರೆ. ಶ್ರಮದಾನ ಇಲ್ಲದಿದ್ದರೂ ಧನ ಸಹಾಯ ಖಂಡಿತ ಮಾಡುತ್ತಾರೆ ಎಂದೆ.

ಆತ: ಇದರಿಂದ ಈ ರೀತಿಯ ಸಮಸ್ಯೆಗಳು ಬಗೆಹರಿಯುವುದಿಲ್ಲ ಅಲ್ಲವೇ? ಆಂಗ್ಲರು ಹೋಗಿ ದಶಕಗಳೇ ಕಳೆದರೂ ಇನ್ನೂ ಹೀಗೆಲ್ಲಾ ನಡೆಯುತ್ತದೆ ಎಂದರೆ ದುರ್ಭಾಗ್ಯ ಅಲ್ಲವೇ? ಇದಕ್ಕೆ ಸರಿಯಾದ ಪರಿಹಾರವನ್ನು ಬುಧ್ಧಿವಂತರಾದ ನೀವುಗಳೇ ಕಂಡು ಹಿಡಿಯಬೇಕಲ್ಲವೇ?
ನಾನು: ಇದಕ್ಕೆ ಸುಲಭವಾದ ಪರಿಹಾರವೆಂದರೆ ನೀವುಗಳು ರೆಡ್ ಇಂಡಿಯನ್ ಗಳಿಗೆ ಮಾಡಿದ್ದು, ಆದರೆ ನಾವುಗಳು ನಿಮ್ಮಂತಲ್ಲ. ನಮ್ಮದು ನಿಜವಾದ ಪ್ರಜಾತಂತ್ರ. (ಎಂದು ವ್ಯಂಗ್ಯವಾಗಿ ಹಲ್ಲು ಕಿರಿದೆ).

ನನ್ನ ಮಾತನ್ನ ಕೇಳಿ ಅವರೂ ಅರೆ ಮನಸ್ಸಿನಲ್ಲಿ ಗಹಗಹಿಸಿ ನಕ್ಕರು. ಆತ ನಕ್ಕಾಗ ಆತನ ದಂತಪಂಕ್ತಿಯ ಒಳ ಭಾಗದ ದರ್ಶನವಾಯಿತು. ಇಜ್ಜಲು ಕಪ್ಪು ಬಣ್ಣದ ದಂತಪಂಕ್ತಿಯನ್ನು ಕಂಡ ನನಗೆ ಆ ತಕ್ಷಣ ನೆನಪಾಗಿದ್ದು ಆಗತಾನೇ ಓದಿದ್ದ ಪುಸ್ತಕದ ನಾಯಕನ ದಂತಪಂಕ್ತಿ. ಬಲರಾಮ ಹಲ್ವಾಯಿಯ (ಅಡಿಗರ ಪುಸ್ತಕದ ನಾಯಕ) ದಂತಪಂಕ್ತಿಗಳು ಹೊರಗಿಂದಲೂ ಕೆಂಪಾಗಿದ್ದರಿಂದ ಎಲ್ಲರಿಗೂ ಎದ್ದು ಕಾಣುತಿತ್ತು, ಆದರೆ ಈ ವೃಧ್ಧನ ದಂತಪಂಕ್ತಿಯ ಓಳ ಭಾಗ ಕಪ್ಪಾದ್ದರಿಂದ ಯಾರಿಗು ಅದು ಕಾಣುವುದಿಲ್ಲ. ಜಗತ್ತಿನ ವಿಪರ್ಯಾಸವೂ ಹೀಗೇ ಅಲ್ಲವೇ? ನಮ್ಮ ದೇಶದ ಕುಂದು ಕೊರತೆಗಳನ್ನ ನಾವುಗಳೇ ಎತ್ತಿತೋರಿಸುವುದರಿಂದ ಬಲರಾಮನ ಹಲ್ಲಿನಂತೆ ಜಗತ್ತಿಗೆಲ್ಲಾ ಕಾಣುತ್ತದೆ. ಮುಂದುವರಿದ ದೇಶಗಳು ಕೊರತೆಗಳನ್ನು ಮುಚ್ಚಿಟ್ಟು ತಮ್ಮ ಸಾಮರ್ಥ್ಯಗಳನ್ನು ಎತ್ತಿ ತೋರಿಸುವುದರಿಂದ ಎಲ್ಲರೂ ಆ ದೇಶಗಳನ್ನು ಹೊಗಳುತ್ತಾರೆ.

ಈ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಿರುವ ಮಹನೀಯರುಗಳು ಅಡಿಗರು ಮಾಡಿರುವ ತೆಗಳುವಿಕೆಯನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಅವರಲ್ಲಿ ಒಬ್ಬನಂತೂ, ಈ ಪುಸ್ತಕದಲ್ಲಿ ಸೀರೆ ಹಾಗು ಬಿಂದಿಯ ಉಲ್ಲೇಖವಿಲ್ಲ ಹಾಗಾಗಿ ಚೆನ್ನಾಗಿದೆ ಎಂದು ಬರೆದಿದ್ದಾನೆ. ಬೂಕರ್ ಪ್ರಶಸ್ತಿಯ ಮಾಜಿ ತೀರ್ಪುಗಾರರಲ್ಲಿ ಒಬ್ಬರಾದ David Baddiel, ತಮ್ಮ ಭಾರತೀಯ ಪುಸ್ತಕಗಳ ಬಗ್ಗೆಗಿನ ಪೂರ್ವಗ್ರಹಿತ ಅಭಿಪ್ರಾಯದ (prejudiced Opinion) ಬಗ್ಗೆ ಲಂಡನ್‍ನ "ದಿ ಟೈಮ್ಸ್" ಪತ್ರಿಕೆಯಲ್ಲಿ ನವೆಂಬರ್ 20 ರಂದು ಪ್ರಕಟವಾಗಿತ್ತು. ಆತ ಹಲವಾರು ಭಾರತೀಯ ಲೇಖಕರ ಪುಸ್ತಕಗಳನ್ನು ಖರೀದಿಸಿದ್ದರೂ ಅದ್ಯಾವುದನ್ನೂ ಇವತ್ತಿನವರೆಗೆ ಓದಿಲ್ಲವಂತೆ. ಇಂತಹಾ ಪೂರ್ವಗ್ರಹಿತ ತೀರ್ಪುಗಾರರನ್ನು ಸಂತೃಪ್ತಿಗೊಳಿಸಲು ಅಡಿಗರು ಬಳಸಿದಂತಹ ತಂತ್ರ ಅನಿವಾರ್ಯ ಎನಿಸುತ್ತದೆ. ಈ ಹಿಂದೆ ಪ್ರಶಸ್ತಿ ಪಡೆದ ಸಲ್ಮಾನ್ ರಶ್ದಿ ಅವರೂ ತಮ ಧರ್ಮವನ್ನು ನಿಂದಿಸಿದ್ದರು, ಅದರಿಂದಾಗಿ ಪ್ರಾಣಭಯವನ್ನೂ ಅನುಭವಿಸುವ ಸಂಕಷ್ಟವನ್ನು ತಂದುಕೊಂಡರು.

ಇಂತಹಾ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಪಾಶ್ಚಾತ್ಯರಿಂದ ಮನ್ನಣೆ ಪಡೆಯಲೇಬೇಕೆಂಬ ಅವಶ್ಯಕತೆಯಾದರೂ ಏನು? ಪ್ರಶಸ್ತಿ ಪಡೆಯುವುದರಿಂದ ಪುಸ್ತಕದ ಮಾರಾಟ ಹೆಚ್ಚಾಗುತ್ತದೆ, ಲೇಖಕರು ಶೀಘ್ರವಾಗಿ ಬೆಳಕಿಗೆ ಬರುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಪ್ರಶಸ್ತಿಗಳಿಸದೆಯೇ ಹೆಚ್ಚಾಗಿ ಮಾರಾಟವಾದ ಪುಸ್ತಕಗಳಿಲ್ಲವೇ ಅಥವಾ ಪ್ರಖ್ಯಾತಿಗೊಂಡ ಲೇಖಕರಿಲ್ಲವೇ? ಭೈರಪ್ಪನವರ ಆವರಣ ಕ್ಕಾಗಲಿ ಚೇತನ್ ಭಗತ್ ಅವರ ಪುಸ್ತಕಗಳಿಗಾಗಲಿ ಯಾವ ಪ್ರಶಸ್ತಿ ಬಂದಿದೆ? ಭೈರಪ್ಪನವರು ಮೊದಲೇ ಖ್ಯಾತಿ ಪಡೆದ್ದರು ಎಂದುಕೊಂಡರೂ, ಚೇತನ್ ಭಗತ್ ಹೊಸ ಲೇಖಕರು, ಅವರ ಪುಸ್ತಕಗಳು ಯುವಪೀಳಿಗೆಯಲ್ಲಿ ಪ್ರಖ್ಯಾತಿ ಗಳಿಸಿಲ್ಲವೇ?

ಈಗ ಬೂಕರ್ ಪ್ರಶಸ್ತಿಯ ಇತಿಹಾಸದ ಬಗ್ಗೆ ಸ್ವಲ್ಪ ನೋಟ ಹರಿಸಿದರೆ, ಈ ಪ್ರಶಸ್ತಿಯನ್ನು 1968 ರಲ್ಲಿ Booker-McConnell ಎಂಬ ಖಾಸಗಿ ಸಂಸ್ಥೆ ಸ್ಥಾಪಿಸಿತ್ತು. ಇದನ್ನು ಕಾಮನ್‍ವೆಲ್ತ್ ಮತ್ತು ಐರ್ಲೆಂಡ್ ದೇಶೀಯರಿಂದ ಆಂಗ್ಲ ಭಾಷೆಯಲ್ಲಿ ರಚಿಸಲಾಗುವ ಕಾಲ್ಪನಿಕ ಕಥೆಗಳಿಗೆ ನೀಡಲು ಪ್ರಾರಂಭಿಸಿದರು.

ಇದೇರೀತಿಯ ಪ್ರಶಸ್ತಿಯನ್ನು ಸ್ಥಾಪಿಸಲು, ಭಾರತೀಯ ಖಾಸಗಿ ಸಂಸ್ಥೆಗಳಿಗೆ ಸಾಧ್ಯವಿಲ್ಲವೇ? ಇದರಿಂದ ಹಲವಾರು ಲೇಖಕರಿಗೆ ಪ್ರೋತ್ಸಾಹ ದೊರೆಯುತ್ತದೆ ಮತ್ತು ನಮ್ಮನ್ನು ನಾವೇ ಜರಿದು ಪ್ರಶಸ್ತಿ ಗಿಟ್ಟಿಸುವ ಪರಿಸ್ಥಿತಿಯನ್ನು ನೀಗಲು ನೆರವಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಭಾರತದಲ್ಲಿ ಪ್ರತಿ ವರ್ಷ ಒಂದು ಕಥೆ, ಕಾದಂಬರಿಗೆ ನೀಡುವಂತಹ ಪ್ರಶಸ್ತಿಗಳು ಯಾವುದೂ ಇಲ್ಲ. ಜ್ಞ್ಯಾನಪೀಠ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿಗಳಿಗೆ ಅರ್ಹರಾಗಲು ಜೀವನವಿಡೀ ಸಾಹಿತ್ಯಕ್ಕೆ ಮುಡುಪಾಗಿಡಬೇಕು. ಶರವೇಗದ ಈ ಆಧುನಿಕ ಯುಗದಲ್ಲಿ ಅಷ್ಟೊಂದು ಸಹನೆ ಸಮಯ ಯಾರಿಗಿದೆ?

ಈ ಲೇಖನವನ್ನು ಬರೆದು ಮುಗಿಸುವವೇಳೆಗೆ, ದೇವರು ನನಗೇಕೆ ಲೇಖಕನ ಗುಣಗಳನ್ನು ಕರುಣಿಸಲಿಲ್ಲ ಎಂದು ದೇವರನ್ನೇ ಶಪಿಸಿದೆ. ಹಾಗೆ ಕರುಣಿಸಿದ್ದಲ್ಲಿ ಈ ಲೇಖಕರನ್ನು ಟೀಕೆ ಮಾಡುವಬದಲು, ನಮ್ಮ ದೇಶದ ಗುಣಗಾನ ಮಾಡುವ ಒಂದು ಕಾದಂಬರಿಯನ್ನು ಬರೆಯುತ್ತಿದ್ದೆನೇನೋ. ಇಲ್ಲ, ನಾನು ಕೂಡ ಗೆದ್ದೆತ್ತಿನ ಬಾಲ ಹಿಡಿದವರಂತೆ ಇವರ ದಾರಿಯಲ್ಲೇ ಸಾಗುತ್ತಿದ್ದೆನೋ ಏನೋ. ಬಲ್ಲವರಾರು?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X