ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಕ ಚುನಾವಣೆಗೆ 20 ಮಂದಿ ಲಗೋರಿ

By Staff
|
Google Oneindia Kannada News

Akka votes : Mandate - 2008
ಹನ್ನೊಂದು ಮಂದಿ ಅಕ್ಕ ಸಂಸ್ಥೆಯ ನಿರ್ದೇಶಕ ಸ್ಥಾನಗಳಿಗೆ ಇಪ್ಪತ್ತು ಮಂದಿ ಲಗೋರಿ. ಉದ್ದುದ್ದ ಪ್ರಣಾಳಿಕೆ, ಭಾರೀ ಪ್ರಚಾರ, ಜನತಾಂತ್ರಿಕ ನಿಯಮದಂತೆ ಜಿದ್ದಾಜಿದ್ದಿ ಹೋರಾಟ. ಅಮೆರಿಕ ಮಣ್ಣಲ್ಲಿ ಕನ್ನಡ ವಾಸನೆಯ ಪ್ರಜಾಪ್ರಭುತ್ವ!

ಬೆಂಗಳೂರು, ಡಿ. 1 : ಉತ್ತರ ಅಮೆರಿಕ, ಕೆನಡಾ ಮತ್ತು ವಿಶಾಲ ಕರ್ನಾಟಕದಲ್ಲಿ ಚಿರಪರಿಚಿತವಾಗಿರುವ ಅಕ್ಕ (ಉತ್ತರ ಅಮೆರಿಕಾದ ಕನ್ನಡ ಕೂಟಗಳ ಆಗರ) ಸಂಸ್ಥೆಗೆ ಇದೀಗ ಚುನಾವಣೆಗಳ ಸಮಯ. ಅಕ್ಕ ಆಡಳಿತ ಮಂಡಳಿಗೆ 11 ಮಂದಿ ನಿರ್ದೇಶಕರನ್ನು ರಹಸ್ಯ ಮತದಾನದ ಮೂಲಕ ಆರಿಸಿ ಕಳುಹಿಸುವ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆತದ ಮುಂತಾದ ಅಕ್ಕ ಸಂವಿಧಾನಾತ್ಮಕ ಚುನಾವಣಾ ಪ್ರಕ್ರಿಯೆಗಳು ಈಗಾಗಲೇ ಮುಗಿದಿವೆ. ಅಂತರ್ ಜಾಲದ ಮುಖೇನ ಮತದಾನ ಮಾಡುವ ಪ್ರಕ್ರಿಯೆಗಳಿಗೆ ನಾಳೆ ಅಂದರೆ ಡಿಸೆಂಬರ್ 2 ರಂದು ಚಾಲನೆ ದೊರೆಯುತ್ತದೆ.

ಒಟ್ಟು 11 ನಿರ್ದೇಶಕ ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಈ ಬಾರಿ 20 ಮಂದಿ ಹುರಿಯಾಳುಗಳು ಸ್ಪರ್ಧೆಗಿಳಿದಿದ್ದಾರೆ. ಸ್ಪರ್ಧಾಳುಗಳ ಪಟ್ಟಿಯಲ್ಲಿ ಮಹನೀಯರು, ಮಹಿಳೆಯರು, ಹಳಬರು, ಹೊಸಬರು, ಅನುಭವಿಗಳು ಅನನುಭವಿಗಳು, ಉತ್ಸಾಹಿಗಳು ಹೀಗೆ ಮೇರು ಸಂಸ್ಥೆಯ ತೇರನ್ನು ಎಳೆಯಲು ಹಿಂದೆಂದಿಗಿಂತ ಈ ಬಾರಿ ಹೆಚ್ಚಿನ ಆಸಕ್ತಿ ಕಂಡುಬಂದಿದೆ. ನಿರ್ದೇಶಕ ಪದವಿಯ ಕಾರ್ಯಾವಧಿ 4 ವರ್ಷದ್ದಾಗಿರುತ್ತದೆ. ಕಣದಲ್ಲಿರುವ ಅಭ್ಯರ್ಥಿಗಳು ಮತ್ತು ಅವರ ಚುನಾವಣಾ ಪ್ರಣಾಳಿಕೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದೇಶದಾದ್ಯಂತ ಚದುರಿದಂತಿರುವ ಅಕ್ಕದ ಅರ್ಹ ಮಹಾಸದಸ್ಯರು ಆಡಳಿತ ಮಂಡಳಿಯ ನಿರ್ದೇಶಕರನ್ನು ಚುನಾಯಿಸುವರು. ಚುನಾಯಿತರಾದ ನಿರ್ದೇಶಕರು ಮತ್ತು ಕನ್ನಡ ಕೂಟಗಳಲ್ಲಿನ ಚಾರ್ಟರ್ಡ್ ಸದಸ್ಯರು ಸೇರಿ ಒಂದು electroal college ನಿರ್ಮಾಣವಾಗುತ್ತದೆ. ಈ ಕಾಲೇಜು ಅಕ್ಕದ ಪದಾಧಿಕಾರಿಗಳನ್ನು ಆನಂತರ ಚುನಾಯಿಸುತ್ತದೆ. ಹೀಗೆ ಆರಿಸಿ ಬಂದ ಕಾರ್ಯಕಾರಿಮಂಡಳಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಚಾಂಜಿ, ಜಂಟಿ ಖಚಾಂಜಿಗಳು ಮತ್ತು ವಿಶೇಷ ಸಮಿತಿಗಳು ರಚಿತವಾಗುತ್ತವೆ.

ಮಹಾಸದಸ್ಯರು ಮತಗಳನ್ನು ಚಲಾಯಿಸುವುದಕ್ಕೆ ಸಾಧ್ಯವಾಗುವಂತೆ ಅಕ್ಕ ಚುನಾವಣಾ ಆಯುಕ್ತರು ಆನ್ ಲೈನ್ ಮತಚೀಟಿಗಳನ್ನು ಈಗಾಗಲೇ ಸದಸ್ಯರಿಗೆ ರವಾನಿಸುತ್ತಿದ್ದಾರೆ. ತುಂಬಿದ ರಹಸ್ಯ ಮತ ಚೀಟಿಯನ್ನು ಸದಸ್ಯರು ಚುನಾವಣಾ ಆಯುಕ್ತರಿಗೆ ಹಿಂದಿರುಗಿಸುವುದಕ್ಕೆ ಕಡೆಯ ದಿನಾಂಕ ಡಿಸೆಂಬರ್ 19, 2008. ಆನಂತರ ಚುನಾವಣಾ ಅಧಿಕಾರಿಗಳು ನಿಗದಿ ಪಡಿಸುವ ದಿನಾಂಕದಂದು ಮತಎಣಿಕೆ ಆರಂಭವಾಗಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಪೂರೈಸಿ ನೂತನ ಕಾರ್ಯಾಕಾರಿ ಮಂಡಳಿ ಅಧಿಕಾರ ಕೈಹಿಡಿಯುವುದಕ್ಕೆ ಜನವರಿ ಎರಡು ಅಥವಾ ಮೂರನೆ ವಾರ ಆಗಬಹುದು.

ಈ ಪರಿ ಆಯ್ಕೆಯಾಗಿ, ಅಧಿಕಾರದ ಚುಕ್ಕಾಣಿ ಹಿಡಿಯುವ ಪದಾಧಿಕಾರಿಗಳು ಅಮೆರಿಕಾದಲ್ಲಿ ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಮತ್ತು ಕರ್ನಾಟಕ ಪರಂಪರೆಯನ್ನು ಬಿತ್ತುವುದು ಹಾಗೂ ಬೆಳೆಯುವ ಕಾಯಕದಲ್ಲಿ ಕಾರ್ಯೋನ್ಮುಖರಾಗುವರೆಂದು ಅಕ್ಕ ಸಂಸ್ಥೆಯ ಧ್ಯೇಯೋದ್ದೇಶಗಳ ಪಟ್ಟಿಯಲ್ಲಿ ಸ್ಥೂಲವಾಗಿ ಸಾರಲಾಗಿದೆ. ಅಂದಹಾಗೆ, ಅಕ್ಕ ಎರಡು ವರ್ಷಕ್ಕೊಮ್ಮೆ ಅಮೆರಿಕಾದಲ್ಲಿ ವಿಶ್ವ ಕನ್ನಡ ಸಮ್ಮೇಳನಗಳನ್ನು ವ್ಯವಸ್ಥೆಗೊಳಿಸುತ್ತದೆ. ಸಮ್ಮೇಳನ ಮಾತ್ರವಲ್ಲದೆ, ಜನೋಪಯೋಗಿ, ಬಹೂಪಯೋಗಿ ಕನ್ನಡ ಭಾಷಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಅಕ್ಕ ಹಮ್ಮಿಕೊಳ್ಳುವುದೂ ಉಂಟು. ಈ ಕೆಲಸಗಳಿಗೆ ಅಗತ್ಯವಾದ ನಿಧಿ ಸಂಗ್ರಹಣೆ ಮತ್ತು ವಿತರಣೆಯ ಮೇಲುಸ್ತುವಾರಿ ಮಾಡಲು ಅಕ್ಕ ಸಂಸ್ಥೆಗೆ ಹೊಂದಿಕೊಂಡಂತೆ ಒಂದು ವಿಶ್ವಸ್ಥ ಮಂಡಳಿಯೂ ಅಸ್ತಿತ್ವದಲ್ಲಿದೆ. ಅದಕ್ಕೆ AKKA Board of Trustees ಎನ್ನುತ್ತಾರೆ.

ಅಕ್ಕ ಸಂಸ್ಥೆ ಆರಂಭವಾಗಿ ಹತ್ತು ವರ್ಷ ಆಗಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಅಕ್ಕ ಬಳಗದಿಂದ ಅಮೆರಿಕಾ ಮತ್ತು ಕೆನಡಾದ ಕನ್ನಡ ಸಮುದಾಯ ಅರ್ಥಪೂರ್ಣ ಕಾರ್ಯಕ್ರಮಗಳ ನಿರೀಕ್ಷೆಯಲ್ಲಿದೆ. ಎರಡು ವರ್ಷ ಅಕ್ಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ರಮೇಶ್ ಗೌಡ ಅವರು ಇದೀಗ ಪದವಿಯಿಂದ ನಿರ್ಗಮಿಸುತ್ತಿದ್ದು ಅಕ್ಕ ಇನ್ನೊಬ್ಬ ಸಮರ್ಥ ಮುಂದಾಳುವಿನ ಆಗಮನವನ್ನು ಎದುರು ನೋಡುತ್ತಿದೆ. ಶಿಕಾಗೋದ ಜಯಸ್ವಾಮಿ, ಡೆಟ್ರಾಯಿಟಿನ ಅಮರ್ ನಾಥ ಗೌಡ, ಡೆಟ್ರಾಯಿಟಿನ ಡಾ.ಕುದೂರು ಮುರಳಿ ಮತ್ತು ಡೆಟ್ರಾಯಿಟ್ಟಿನವರೇ ಆದ ರಮೇಶ್ ಗೌಡ ಅವರುಗಳು ಈವರೆಗೆ ಸೇವೆ ಸಲ್ಲಿಸಿದ ಅಧ್ಯಕ್ಷರುಗಳಾಗಿರುತ್ತಾರೆ.

ದಟ್ಸ್ ಕನ್ನಡ ಡಾಟ್ ಕಾಂ ಅನ್ನು ತಲುಪಿರುವ ಸುದ್ದಿ ಸುಳಿವುಗಳ ಪ್ರಕಾರ ಈ ಬಾರಿ ಮಹಿಳೆಯೊಬ್ಬರನ್ನು ಅಕ್ಕ ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂಬ ಹವಣಿಕೆ ದಿನೇದಿನೇ ದಟ್ಟವಾಗುತ್ತಿದೆ. ಅಧ್ಯಕ್ಷ ಪದವಿಯ ಕಾರ್ಯಭಾರವನ್ನು ಹೊತ್ತುಸಾಗಬಲ್ಲ ಅನುಭವಿ ಹಿಲೆರಿಗಳಾಗಲೀ ಅಥವಾ ಪ್ಯಾಲಿನ್ಗಳಾಗಲೀ ಅಕ್ಕ ಹುರಿಯಾಳುಗಳ ಪಟ್ಟಿಯಲ್ಲಿ ಇದ್ದಾರಾ? ಎನ್ನುವುದು ಜಿಜ್ಞಾಸೆಯ ವಿಷಯವೂ ಆಗಿದೆ. ಅದೇನೇ ಇರಲಿ, ಅಮೆರಿಕಾಗೆ ಸ್ವಾತಂತ್ರ್ಯ ಬಂದು 232 ವರ್ಷಗಳಾದವು. ಆದರೆ ಇದುವರೆವಿಗೂ ಅಧ್ಯಕ್ಷ ಪದವಿಯತನಕ ಒಬ್ಬ ಮಹಿಳೆಯೂ ನಡೆದುಬರಲಾಗಿಲ್ಲ. ಆದರೆ, ಕೇವಲ ಹತ್ತು ವರ್ಷ ಪೂರೈಸಿರುವ ಅಕ್ಕ ಸಂಸ್ಥೆಯಲ್ಲಿ ಓರ್ವ ಮಹಿಳೆಯನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವುದು ಹೆಮ್ಮೆಯ ಸಂಗತಿಯಲ್ಲವೇ ಎಂದು ಪ್ರಶ್ನಿಸುತ್ತಾರೆ ಡೆನ್ವರ್ ನಲ್ಲಿರುವ ಡೆಮೋಕ್ರಾಟೂ ಅಲ್ಲದ ರಿಪಬ್ಲಿಕನ್ನೂ ಅಲ್ಲದ ಅಕ್ಕದ ಓರ್ವ ಸದಸ್ಯೆ.

( ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X