ಸ್ಟಾರ್ ಬಕ್ಸ್ ಕಾಫಿಗೆ ನಂದಿನಿ ಹಾಲು
ವಾಲ್ಟ್ ಡಿಸ್ನಿಯ ಲ್ಯಾಂಡಿನಲ್ಲಿ ಜೋಕುಮಾರ ಸ್ವಾಮಿ. ಕರ್ನಾಟಕ ಮತ್ತು ಅಮೆರಿಕಾ ಕಲಾವಿದರು ಕಲೆತು ನೀಡಿದ ಯಶಸ್ವಿ ನಾಟಕ ಪ್ರದರ್ಶನ. ಕರ್ನಾಟಕದ ಖ್ಯಾತ ರಂಗಕರ್ಮಿ ನಾಗಾಭರಣ ಮತ್ತು ಅಮೆರಿಕಾದ ಕಲಾವಿದ ವಲ್ಲೀಶ ಶಾಸ್ತ್ರಿ ನಟಿಸಿರುವ ಚಂದ್ರಶೇಖರ್ ಕಂಬಾರ ಅವರ ಜಾನಪದ ಸೊಗಡಿನ ನಾಟಕವನ್ನು ನಿಮ್ಮೂರಲ್ಲೂ ಹಮ್ಮಿಕೊಂಡಿದ್ದರೆ ಮಿಸ್ ಮಾಡಿಕೊಳ್ಳಬೇಡಿ.
ಲೇಖನ : ಎಂ.ಆರ್.ದತ್ತಾತ್ರಿ, ಲಾಸ್ ಏಂಜಲೀಸ್
ಅವನೊಬ್ಬ ಊರ ಗೌಡ. ಭರ್ಜರಿ ಮೀಸೆ ಮತ್ತು ಡೊಳ್ಳು ಹೊಟ್ಟೆ ಅವನ ಅಸ್ತಿತ್ವದ ಸಂಕೇತ. ಈ ಭರ್ಜರಿ ಗೌಡ ಒಳಗೆ ಮಾತ್ರ ಟೊಳ್ಳೋಟೊಳ್ಳು. ಎಷ್ಟು ಟೊಳ್ಳೆಂದರೆ ಮದುವೆಯಾಗಿ ಹತ್ತು ವರ್ಷಗಳಾದರೂ ಮಕ್ಕಳು ಹೋಗಲಿ ಸದ್ಯ ಹೆಂಡತಿಯ ಮೈಯನ್ನೂ ಮುಟ್ಟಲಾಗದಷ್ಟು ಟೊಳ್ಳು. ಟೊಳ್ಳು ಹೊಟ್ಟೆಯ ತುಂಬಾ ಬರೀ ಜೊಳ್ಳು ಬುದ್ಧಿಯೇ. ಆಳು ಮಕ್ಕಳಿಗೆಲ್ಲಾ ಸಾಲ ಕೊಟ್ಟು ಅವರ ಭೂಮಿ ಕಬಳಿಸಿ ಅವರನ್ನು ಜೀತದಾಳುಗನ್ನಾಗಿಸಿಕೊಂಡು ಸುಖಪಡುವ ದುರ್ಬುದ್ಧಿ. ಜೀತದಾಳುಗಳ ಪಡೆಯನ್ನೆ ತನ್ನ ಹಿಂಬಾಲಕರಾಗಿಟ್ಟುಕೊಂಡು ಅವರಿಂದ ತನ್ನ ಬಂದೂಕನ್ನು ಹೊರೆಸಿಕೊಂಡು ಊರನ್ನಾಳಲು ಹೊರಡುವ ದುಷ್ಟಬುದ್ಧಿ ಈ ಗೌಡ. ಅವನ ಕೈಯಾಳುಗಳೆಲ್ಲಾ ಅವನ ಹಿಂದೆ ಅವನ ಬಂದೂಕು ಒರೆಸುತ್ತ ಜೈಕಾರ ಹಾಕುತ್ತಿರಬೇಕು:
ಸ್ವಾಮಿ ನಮ್ಮೆಯ ದೇವರೋ| ಡಂ ಡಂ ಅವರ ಹೆಸರೋ||
ಇದು ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ನಾಟಕದ ಗೌಡನ ಪಾತ್ರ. ಜೋಕುಮಾರಸ್ವಾಮಿ ಕಂಬಾರರ ಪ್ರಸಿದ್ಧ ನಾಟಕ. ಅರುವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಹೆಚ್ಚು ಜನ ಜಾಗೃತಿಯನ್ನು ಪಡೆದ ಜೀತವಿಮುಕ್ತಿ ಮತ್ತು ಜಮೀನುದಾರೀ ವಿರೋಧದ ಚಳವಳಿಗಳನ್ನು ಆಧರಿಸಿ ಉತ್ತರ ಕರ್ನಾಟಕದ ಗಂಡು ಭಾಷೆಯ ಜಾನಪದ ಸೊಗಡನ್ನು ಹೊಂದಿರುವ ನಾಟಕ. ಗೌಡನಿಂದ ತನ್ನ ಭೂಮಿ ಮತ್ತು ತಂದೆಯನ್ನು ಕಳೆದುಕೊಂಡ ಬಸಣ್ಯನೆಂಬ ಯುವಕ ತನ್ನ ಸುತ್ತಲಿನ ಪರಿಸರದಲ್ಲೇ ಕ್ರಾಂತಿ ಮಾಡಿ ಗೌಡನ ದುರಾಚಾರದ ವಿರುದ್ಧ ಬಂಡೇಳುತ್ತಾನೆ. ಗೌಡನ ಭದ್ರ ಕೋಟೆ ಭೇದಿಸಲ್ಪಟ್ಟ ಸಂಕೇತವಾಗಿ ಗೌಡತಿ ಬಸಣ್ಯನಿಂದ ಗರ್ಭಿಣಿಯಾಗುತ್ತಾಳೆ. ಆದರೆ ನಾಟಕದ ಅಂತ್ಯದಲ್ಲಿ ಗೌಡನ ಕ್ರೌರ್ಯಕ್ಕೇ ವಿಜಯವಾಗಿ ಬಸಣ್ಯ ಕೊಲೆಯಾಗುತ್ತಾನೆ. ಬಹುಶಃ ಬಸಣ್ಯ ಗೆಲ್ಲುವಷ್ಟು ಕ್ರಾಂತಿಗೆ ಭಾರತೀಯ ಸಮಾಜ ಸಿದ್ಧವಾಗಿಲ್ಲ ಎನ್ನುವ ನಿಷ್ಠುರ ಸತ್ಯವನ್ನು ಪ್ರಕಟಿಸುವ ಉದ್ಧೇಶದಿಂದ ನಾಟಕಕಾರರು ಆ ಅಂತ್ಯವನ್ನು ಕೊಟ್ಟಿರಬಹುದು.
ಕಂಬಾರರ ಗೌಡ, ಗೌಡತಿ, ಬಸಣ್ಯ, ಗುರ್ಯ, ನಿಂಗಿ, ಶಾರಿಯರೆಲ್ಲಾ ಸೂತ್ರಧಾರನ ಜೊತೆ ನಮ್ಮನಿಮ್ಮಂತೆಯೇ ಮೂಳೆ ಮಾಂಸಗಳ ಮಾನವರಾಗಿ ಓಡಾಡಿದ್ದು ಭಾನುವಾರ ಲಾಸ್ ಏಂಜಲಿಸ್‌ನಲ್ಲಿ. ಸಾಹಸಿ ವಲ್ಲೀಶ ಶಾಸ್ತ್ರಿ ಇಲ್ಲಿಯೇ ದಕ್ಷಿಣ ಕ್ಯಾಲಿಫೋರ್ನಿಯಾದ ಕನ್ನಡ ಹುಡುಗರನ್ನು ಕಟ್ಟಿಕೊಂಡು ಈ ನಾಟಕವನ್ನು ಅನೇಕ ಕಡೆ ಆಡಿರುವುದು ಅಕ್ಕ ಸಮ್ಮೇಳನಕ್ಕಿಂತಲೂ ಹಳೆಯ ವಿಚಾರ. ಆದರೆ ಅಕ್ಕ ಸಮ್ಮೇಳನಕ್ಕಾಗಿ ಇಲ್ಲಿಗೆ ಆಗಮಿಸಿದ ಕರ್ನಾಟಕದ ಖ್ಯಾತ ಕಲಾವಿದರು ವಲ್ಲೀಶರ ತಂಡದೊಂದಿಗೆ ತಮ್ಮ ಕೈ ಜೋಡಿಸಿ ನಾಟಕವನ್ನು ಮೌಂಟ್ ಎವರೆಸ್ಟ್ ಎತ್ತರಕ್ಕೆ ಎತ್ತಿದ್ದು ಮಾತ್ರ ಹೊಸ ವಿಚಾರ.
ಅದು ಒಂದು ಥರ ಇಲ್ಲಿಯ ಸ್ಟಾರ್‌ಬಕ್ಸ್ ಕಾಫಿಗೆ ಬೆಂಗಳೂರಿನ ನಂದಿನಿ ಹಾಲನ್ನು ಬೆರಸಿ ಕುಡಿದಂತೆ. ನಾಟಕದ ಸೂತ್ರಧಾರಿಯಾಗಿ ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ನಾಗಾಭರಣ, ಅನೇಕ ದ್ವಂದ್ವಗಳ ನಡುವೆ ಹೋಯ್ದಾಡುವ ವೈಶ್ಯೆ ಶಾರಿಯ ಪಾತ್ರದಲ್ಲಿ ನಾಗಿಣಿ ನಾಗಾಭರಣ, ಹಿನ್ನೆಲೆ ಮೇಳಕ್ಕೆ ಬಿ.ವಿ. ಕಾರಂತರ ಶಿಷ್ಯೆಯಾದ ಕಲ್ಪನಾ ನಾಗಾನಾಥ್, ಬೆಳಕಿನ ಸಂಯೋಜನೆಗೆ ಕರ್ನಾಟಕ ನಾಟಕ ಅಕಾಡೆಮಿಗೆ ಅಧ್ಯಕ್ಷರಾಗಿದ್ದ ಶ್ರೀನಿವಾಸ ಕುಪ್ಪಣ್ಣ, ಕಮಲಹಾಸನ್, ಅಂಬರೀಷ್ ಮುಂತಾದ ಮೇರು ನಟರಿಗೆ ಬಣ್ಣಬಳಿದ ಎನ್.ಕೆ. ರಾಮಕೃಷ್ಣರಿಂದ ಮೆಕಪ್ ಇನ್ನೇನು ಬೇಕು ರಸದೌತಣಕ್ಕೆ?
ಆದರೆ ಎಲ್ಲದಕ್ಕೂ ಮೆರಗಾಗಿ ನಿಂತದ್ದು ಪಾತ್ರವರ್ಗಗಳ ನಟನೆ. ಒಳಗೆ ಟೊಳ್ಳಾಗಿ ಮೇಲೆ ದರ್ಪದಿಂದ ಬೀಗುವ ಗೌಡನಂತಹ ಸಂಕೀರ್ಣಪಾತ್ರವನ್ನು ವಲ್ಲೀಶ್ ಶಾಸ್ತ್ರಿ ನಿರ್ವಹಿಸಿದ ಪರಿ ನಿಜಕ್ಕೂ ಮೆಚ್ಚುವಂತಹದ್ದು. ಅವರಂತಹ ನುರಿತ ಕಲಾವಿದರಿಂದ ಮಾತ್ರವೇ ಅದು ಸಾಧ್ಯವಾಗುವಂತಹದ್ದು. ಬಸಣ್ಯನ ಪಾತ್ರದಲ್ಲಿ ಶ್ರೀನಿವಾಸ್, ಗುರ್ಯನ ಪಾತ್ರದಲ್ಲಿ ವೆಂಕಟೇಶ್, ಗೌಡತಿಯ ಪಾತ್ರದಲ್ಲಿ ವಿವಾ ಶಾಸ್ತ್ರಿ ಮತ್ತು ನಿಂಗಿಯ ಪಾತ್ರದಲ್ಲಿ ಜ್ಯೋತಿ ವೆಂಕಟೇಶ್ ತಮ್ಮ ನಟನೆಯಿಂದ ಮನಸೆಳೆದರು. ಮೇಳದಲ್ಲಿ ಕಲ್ಪನಾ ನಾಗಾನಾಥ್‌ರೊಂದಿಗೆ ವೀಣಾ ಕೃಷ್ಣ ಮತ್ತು ಹರಿ ಭಾಗವಹಿಸಿದ್ದರು. ಜಗನ್ನಾಥ್ ಅವರು ಶ್ರೀನಿವಾಸ ಕಪ್ಪಣ್ಣರಿಗೆ ಬೆಳಕಿನ ಸಂಯೋಜನೆಯಲ್ಲಿ ಸಹಾಯ ಮಾಡುತ್ತಿದ್ದರು.
ಎದ್ದು ಕಾಣುವಂತಹದ್ದಲ್ಲ, ಆದರೂ ಕೆಲವು ನಟರು ಮಾತನ್ನು ಇನ್ನೂ ಸ್ಪಷ್ಟವಾಗಿ ಮತ್ತು ಗಟ್ಟಿಯಾಗಿ ಆಡಬೇಕಿತ್ತು. ಅದೇನೂ ದೊಡ್ಡದಲ್ಲ ಬಿಡಿ, ನಾಗಾಭರಣ, ನಾಗಿಣಿ ಭರಣ ಮತ್ತು ವಲ್ಲೀಶರಂತಹ ಹಿರಿಯ ಕಲಾವಿದರ ಮಾರ್ಗದರ್ಶನವಿರಬೇಕಾದರೆ ಮುಂದಿನ ಪ್ರದರ್ಶನದ ಹೊತ್ತಿಗೇನೆ ಅವೆಲ್ಲವನ್ನೂ ತಿದ್ದಿಕೊಂಡಿರಬಹುದು. ಕಲಾವಿದರು ತೆಗೆದುಕೊಂಡ ಪರಿಶ್ರಮಕ್ಕೆ ತಕ್ಕನಾದ ಸಂಖ್ಯೆಯಲ್ಲಿ ಪ್ರೇಕ್ಷಕರಿರಲಿಲ್ಲ. ಬರದ ಕೆಲವರು ನಮಗೆ ವಿಷಯವೇ ತಿಳಿಯಲಿಲ್ಲ ಎಂದರು. ಏನೇ ಆಗಲಿ, ಕ್ಷಿಪ್ರ ಸಮಯದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಸೇರುವಲ್ಲಿ ಉತ್ತರ ಕ್ಯಾಲಿಫೋರ್ನಿಯಾಕ್ಕೆ ಸರಿಸಾಟಿಯಿಲ್ಲ.
ವಲ್ಲೀಶ್ ಮತ್ತು ನಾಗಾಭರಣರ ತಂಡ ನಿಮ್ಮೂರಿನಲ್ಲೂ ಈ ನಾಟಕದ ಪ್ರದರ್ಶನವನ್ನು ಹಮ್ಮಿಕೊಂಡಿದ್ದರೆ ತಪ್ಪದೆ ಹೋಗಿಬನ್ನಿ. ಒಮ್ಮೆ ನಾಗಾಭರಣ ಮತ್ತು ಭಾರತದಿಂದ ಬಂದಿರುವ ಇತರ ಕಲಾವಿದರು ಸ್ವದೇಶಕ್ಕೆ ಮರಳಿದರೆ, ವಲ್ಲೀಶ ಶಾಸ್ತ್ರಿ ತಮ್ಮ ಕನ್ಸ್‌ಲ್ಟಿಂಗ್ ಬ್ಯುಸಿನಸ್‌ನಲ್ಲಿ ಹುದುಗಿಹೋದರೆ, ಬಸಣ್ಯ ಗುರ್‍ಯರೆಲ್ಲಾ ತಮ್ಮ ಲ್ಯಾಪ್‌ಟಾಪ್‌ನ ಹಿಂದೆ ಅಡಗಿಹೋದರೆ ಸದ್ಯಕ್ಕೆ ಈ ಅವಕಾಶ ಸಿಗಲಾರದು.












Click it and Unblock the Notifications