ಇಂಡಿಯನ್‌ ಎಕ್ಸ್‌ಪ್ರೆಸ್‌@ಫ್ರೀಪಾರ್ಸೆಲ್‌.ಕಾಮ್‌!


ಇನ್ನೊಮ್ಮೆ ಇಂಡಿಯಾಗೆ ಹೋಗುವಾಗ ಸೂಟ್‌ಕೇಸ್‌ನಲ್ಲಿ ಇಪ್ಪತ್ತೈದು ಎನ್‌ವಲೋಪ್‌ಗಳನ್ನು ಹಾಕಿಕೊಳ್ಳಬೇಕಾಯಿತು. ಇದನ್ನು ಕೊಟ್ಟವನು ನನ್ನ ಸ್ನೇಹಿತ ಗುಂಡೂರಾವ್‌.

ನಾನು ಹೊರಡುವ ಹಿಂದಿನ ದಿನ ನಮ್ಮಮನೆಗೆ ಎನ್‌ವಲೋಪ್‌ಗಳನ್ನು ತಂದಿದ್ದ. ಅವುಗಳ ಮೇಲೆ ಇಂಡಿಯಾದ ಸ್ಟಾಂಪ್‌ ಹಾಕಿದ್ದ. ಗುಂಡೂರಾವ್‌ ಇರುವುದು ಐದು ಬೆಡ್‌ರೂಂಗಳ ದೊಡ್ಡ ಮನೆಯಲ್ಲಿ. ಆ ದೊಡ್ಡ ಮನೆಯ ಹೊಂದಿಕೆಗೆ ಮೂರು ಕಾರುಗಳ ಗರಾಜು. ಎರಡು ಮರ್ಸೆಡಿಸ್‌ ಮತ್ತು ಒಂದು ಟೊಯೋಟಾ ಕಾರುಗಳನ್ನು ಡ್ರೆೃವ್‌ ಮಾಡುತ್ತಾನೆ. ಇಂತಹ ಲೈಫ್‌ಸ್ಟೈಲ್‌ ಇರುವ ಮನುಷ್ಯ ಇಪ್ಪತ್ತೈದು ಎನ್‌ವಲೋಪ್‌ಗಳಿಗೆ ಸ್ಟಾಂಪ್‌ ಅಂಟಿಸಿ ಹನ್ನೆರಡು ಡಾಲರುಗಳನ್ನು ಉಳಿಸುವುದಕ್ಕೆ ನನ್ನನ್ನು ಉಪಯೋಗಿಸುತ್ತಿದ್ದಾನಲ್ಲಾ! ಎಂದು ಎಲ್ಲಿಲ್ಲದ ಆಶ್ಚರ್ಯವಾಯಿತು. ಅವನು ಕೊಟ್ಟ ಎನ್‌ವಲೋಪ್‌ಗಳನ್ನು ನನಗೆ ಹೆಚ್ಚು ಏನೂ ತೊಂದರೆಯಾಗಲಿಲ್ಲ. ಅವನ್ನು ಇಂಡಿಯಾದಲ್ಲಿ ಒಂದು ಕಡೆ ಪೋಸ್ಟ್‌ ಮಾಡಿದರಾಯಿತು. ಆದರೆ ಎನ್‌ವಲೋಪ್‌ಗಳನ್ನು ಪಡೆದ ಪಾರ್ಟಿಯಿಂದ ಸ್ವಲ್ಪ ಒದ್ದಾಡಬೇಕಾಯಿತು. ಅದರ ಕತೆ ಕೇಳಿ.

ಬೆಂಗಳೂರಿಗೆ ಹೋದ ಮೂರು ದಿನಗಳಲ್ಲಿ ನನಗೆ ನಾಲ್ಕು ಟೆಲಿಫೋನ್‌ ಕಾಲ್‌ ಬಂತು. ಒಂದು ಗುಂಡೂರಾಯನ ಅಪ್ಪನಿಂದ, ಇನ್ನೊಂದು ಅವನ ಅತ್ತೆ ಮಾವರಿಂದ, ಇನ್ನೆರಡು ಅವನ ಸ್ನೇಹಿತರಿಂದ. ಗುಂಡೂರಾಯನ ಅಪ್ಪ, ಅಮ್ಮ, ಅತ್ತೆ ಮಾವ ಯಾರನ್ನೂ ನಾನು ಇದುವರೆಗೆ ನೋಡಿರಲಿಲ್ಲ. ಆವರು ಫೋನಿನಲ್ಲಿ ಅತಿ ಆತ್ಮೀಯರಂತೆ ಮಾತಾಡಿದ್ದು ನೋಡಿ ನನಗೆ ಗಾಭರಿಯಾಯಿತು. ಏನೋ ಇದೆ ಅಂತ. ಅವರು ನನ್ನನ್ನು ಕಾಫಿ ತಿಂಡಿಗೆ ಬರಲಿಕ್ಕೆ ಆಹ್ವಾನ ಕೊಟ್ಟರು. ಬರುತ್ತೇನೆ ಎಂದು ಹೇಳಿದೆ.

ಆ ದಿನ ನಾನು ಅವರಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮೈಸೂರಿಗೆ ಹೋದೆ. ಮೈಸೂರಿನಲ್ಲಿ ನನ್ನ ಅತ್ತೆಯವರಿಂದ ಒಳ್ಳೆ ಊಟ, ತಿಂಡಿ, ಉಪಚಾರ ಮಾಡಿಸಿಕೊಂಡು ಬೆಂಗಳೂರಿಗೆ ವಾಪಸು ಬಂದೆ. ಒಂದು ದೊಡ್ಡ ಉಸಿರು ಬಿಟ್ಟೆ.

ಆದರೆ ನನ್ನ ಗ್ರಹಚಾರಕ್ಕೆ ನಾನು ಅಮೆರಿಕಾಗೆ ಹೊರಡುವ ಎರಡು ದಿನಗಳ ಮುಂಚೆ ಗುಂಡೂರಾಯನ ತಂದೆ, ತಾಯಿ,ಮತ್ತು ಅತ್ತೆ ಮಾವ ನನಗೆ ಫೋನ್‌ ಮಾಡದೆ (ಫೋನ್‌ ಮಾಡಿದರೆ ಈ ಆಸಾಮಿ ಸಿಕ್ಕುವುದಿಲ್ಲವೆಂದು) ನನ್ನನ್ನು ನೋಡುವುದಕ್ಕೆ ಬಂದರು. ಯಾರ ಕೈಯಲ್ಲೂ ಪ್ಯಾಕೆಟ್‌ ಏನೂ ಕಾಣಲಿಲ್ಲ. ‘ಅಯ್ಯ್‌ುಬ್ಬ!’ ಎಂದು ಉಸಿರು ಬಿಟ್ಟೆ. ಅವರಿಗೆ ಕಾಫಿ ತಿಂಡಿ ಆಯಿತು. ಸ್ವಲ್ಪ ಮಾತು ಕತೆ ಆದ ಮೇಲೆ ಅವರು ಹೊರಗೆ ಹೋಗಿ ಕಾರಿನಿಂದ ಮೂರು ಪ್ಯಾಕೆಟ್‌ಗಳನ್ನು ಹೊತ್ತುಕೊಂಡು ಬಂದರು. ಆ ಪ್ಯಾಕೆಟ್‌ಗಳನ್ನು ನನಗೆ ಕೊಟ್ಟು ಅವನ್ನು ಗುಂಡೂರಾಯನಿಗೆ ತಲುಪಿಸಬೇಕೆಂದು ವಿನಯದಿಂದ ಕೇಳಿಕೊಂಡರು.

ಏನೂ ಉಪಾಯ ಕಾಣದೆ ‘ಆಗಲಿ’ ಎಂದು ಒಪ್ಪಿಕೊಂಡೆ.

ಅವರು ಹೋದ ಮೇಲೆ ಒಂದು ನಿಮಿಷದಲ್ಲೇ ಆ ಪ್ಯಾಕೆಟ್‌ಗಳನ್ನು ಬಿಚ್ಚಿ ನೋಡಿದೆ. ಒಂದು ಪ್ಯಾಕೆಟ್‌ನಲ್ಲಿ ಐವತ್ತು ಬಾದಾಮಿ ಬರ್ಫಿ, ಇನ್ನೊಂದರಲ್ಲಿ ಒಂದಲ್ಲ, ಎರಡಲ್ಲ, ಹತ್ತು ಪೌಂಡು ಹುರಿದ ಅವರೆ ಕಾಳು, ಮತ್ತು ಕೊನೆಯದರಲ್ಲಿ ಐವತ್ತು ಚಕ್ಕುಲಿ ಇದ್ದಿತ್ತು. ಐದು ನಿಮಿಷ ತಲೆ ಕೆರೆದೆ. ಯೋಚನೆ ಮಾಡಿದೆ. ಕೂಡಲೆ ನನ್ನ ಹತ್ತು ಸ್ನೇಹಿತರನ್ನು ಅದೇ ದಿನ ಸಾಯಂಕಾಲ ಕಾಫಿ, ತಿಂಡಿಗೆ ಕರೆದು ಒಂದು ಪಾರ್ಟಿ ಕೊಟ್ಟೆ. ಅವರು ಬಾದಾಮಿ ಬರ್ಫಿ, ಅವರೆಕಾಳು, ಚಕ್ಕುಲಿ ಎಲ್ಲ ಬಹಳ ಚೆನ್ನಾಗಿದೆ ಎಂದು ಹೊಗಳಿದರು. ನನ್ನ ಸ್ನೇಹಿತರಿಗೆಲ್ಲಾ ಸಂತೋಷ, ತೃಪ್ತಿಯಾಯಿತು.

ಅಮೆರಿಕಾಗೆ ಬಂದ ಮರುದಿನವೇ ದಿವಾನ್‌ ಅವೆನ್ಯುಗೆ ಹೋಗಿ ಇಪ್ಪತ್ತೈದು ಬಾದಾಮಿ ಬರ್ಫಿ, ಸ್ವಲ್ಪ ಹುರಿದ ಅವರೆಕಾಳು ಮತ್ತು ಇಪ್ಪತ್ತು ಚಕ್ಕುಲಿ ತೆಗೆದುಕೊಂಡು ಬಂದೆ. ಸ್ವಲ್ಪ ಹಣ ಕಾಸು ಖರ್ಚಾಯಿತು. ಅದೇ ದಿನ ರಾತ್ರಿ ಗುಂಡೂರಾಯನ ಫೋನ್‌ ಕಾಲ್‌ ಬಂತು. ಅದು ಯಾಕೆ ಕರೆದದ್ದು ಎಂದು ನಿಮಗೆ ಹೇಳಬೇಕಾಗಿಲ್ಲ. ಅದೇ ದಿನ ನಮ್ಮ ಮನೆಗೆ ಬಂದು ನಾನು ನನ್ನ ದುಡ್ಡಿನಲ್ಲಿ ತೆಗೆದುಕೊಂಡ ತಿಂಡಿ ಪದಾರ್ಥ ತೆಗೆದುಕೊಂಡು ಹೋದ. ಹೋಗುವ ಮೊದಲು ತುಂಬಾ ಥ್ಯಾಂಕ್ಸ್‌ ಎಂದುಹೇಳಿದ. ‘ಯು ಆರ್‌ ವೆಲ್‌ಕಮ್‌’ ಎಂದು ಹೇಳಿದೆ. ಆಗಲೇ ನನಗೆ ಹೊಳೆದದ್ದು - ಅವನ ಹೆಸರು ಗುಂಡೂರಾವ್‌ ಏಕೆಂದು.

ನಿಮ್ಮಲ್ಲಿ ಎಷ್ಟೋ ಜನ ಸದ್ಯದಲ್ಲಿ ಇಂಡಿಯಾಗೆ ಹೋಗುವವರಿದ್ದೀರಾ. ಏನೂ ತಲೆ ಬಿಸಿ ಮಾಡಿಕೊಳ್ಳಬೇಡಿ. ಮೊದಲನೆಯದಾಗಿ ನೀವು ಇಂಡಿಯಾಗೆ ಯಾವ ದಿನ ಹೋಗುತ್ತೀರೆಂದು ನಿಮ್ಮ ಸ್ನೇಹಿತರಿಗೆ ಖಂಡಿತ ಹೇಳಬೇಡಿ. ನಿಮಗೆ ಒಂದು ವೇಳೆ ಹೇಳಬೇಕೆಂಬ ಬಯಕೆ ತುಂಬ ಇದ್ದರೆ ತಪ್ಪು ತಾರೀಖು ಕೊಡಿ. ಏರ್‌ಪೊರ್ಟಿಗೆ ಹೋಗಲಿಕ್ಕೆ ಸ್ನೇಹಿತರಿಂದ ರೈಡ್‌ ತೆಗೆದುಕೊಳ್ಳಬೇಡಿ. ಟ್ಯಾಕ್ಸಿ ಅಥವಾ ಲಿಮೊಸಿನ್‌ನಲ್ಲಿ ಹೋಗಿ. ಇಪ್ಪತ್ತೈದು ಡಾಲರಿಗೆ ನಿಮ್ಮ ಸ್ನೇಹಿತರು ಮತ್ತು ಅವರ ಬಂಧು ಬಳಗದವರಿಂದ ಕಾಟ ತಪ್ಪಿ ಹೋಗುತ್ತದೆ. ಮನಸ್ಸಿಗೂ ನೆಮ್ಮದಿ ಇರುತ್ತದೆ.

ಬೆಂಗಳೂರಿನಲ್ಲಿ ಯಾರಾದರೂ ನಿಮ್ಮನ್ನು ಕಾಫಿ, ತಿಂಡಿಗೆ ಬರಲಿಕ್ಕೆ ಹೇಳಿದರೆ ಖಂಡಿತವಾಗಿ ಬರುತ್ತೇನೆಂದು ಹೇಳಿ. ಆ ದಿನ ಅವರಿಗೆ ಮುಖವನ್ನು ತೋರಿಸಬೇಡಿ. ಆಮೆರಿಕಾದ ಗೆಳೆಯರು ಏನಾದರೂ ಸಾಮಾನನ್ನು ಕೊಟ್ಟರೆ ಅಥವಾ ಇಂಡಿಯಾದಲ್ಲಿ ಯಾರಾದರೂ ಏನಾದರೂ ಸಾಮಾನನ್ನು ಕೊಟ್ಟರೆ ನಿಮಗೆ ಇಷ್ಟರಲ್ಲೇ ಏನು ಮಾಡಬೇಕೆಂದು ಹೊಳೆದಿರಬಹುದು. ನಿಮಗೆ ಈ ಬಗ್ಗೆ ಇನ್ನೇನಾದರೂ ಪ್ರಶ್ನೆಗಳು ಇದ್ದರೆ ನಾನು ಈ ಕೆಳಗೆ ಫೋನ್‌ ನಂಬರ್‌ ಮತ್ತು ವಿಳಾಸ ಕೊಟ್ಟಿರುತ್ತೇನೆ :

ನನ್ನ ಫೋನ್‌ ನಂಬರ್‌: 1-800-Puksatte
Email : [email protected]
(All inquiries will be kept strictly confidential)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+