ಡಲಾಸ್‌ನಲ್ಲಿ ಹಚ್ಚಿದರು ಅವರು ಕನ್ನಡದ ದೀಪ
ಅಮೆರಿಕಾದ ಅಧ್ಯಕ್ಷ ಬುಷ್ ಅವರ ತವರು ರಾಜ್ಯದಲ್ಲಿ ಕನ್ನಡದ ದೀಪವನ್ನು, ಪ್ರೀತಿಯಿಂದ, ಕಕ್ಕುಲತೆಯಿಂದ, ಹೆಮ್ಮೆಯಿಂದ ಹಚ್ಚಿದ ಗಾಡ್‌ಮದರ್ ಡಾ. ಕಲ್ಪನಾ ಅವರಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ.
- ಮೀನಾ ಭಾರದ್ವಾಜ್, ಡಲಾಸ್, ಟೆಕ್ಸಾಸ್
ಭಾನುವಾರ(ಜ.21) ಬೆಳಗ್ಗೆ ಬಂದ ದೂರವಾಣಿ ಸಂದೇಶದಿಂದ ಡಲಾಸ್ ನಗರದ ಕನ್ನಡಿಗರ ಮನದಲ್ಲಿ ಕರಾಳ ಛಾಯೆ ಮೂಡಿತ್ತು. ಡಾ. ಕಲ್ಪನಾ ರಾವ್ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಸ್ವಲ್ಪ ಕಾಲವೇ ಬೇಕಾಯಿತು. 54 ವರ್ಷ ಛೆ! ಖಂಡಿತಾ ಸಾಯುವ ವಯಸ್ಸಲ್ಲವೆಂದು ಮನಸ್ಸು ಸಾರಿ ಸಾರಿ ಹೇಳಿತು.
...ಹೀಗೆ ನೆನಪಿನ ಸುರುಳಿ 8 ವರ್ಷದ ಹಿಂದಕ್ಕೆ ಓಡಿತ್ತು. ಆಗ ತಾನೆ ನಾವು ಡೆಟ್ರಾಯಿಟ್ ನಗರದಿಂದ ಡಲಾಸ್ ಟೆಕ್ಸಾಸ್‌ಗೆ ಬಂದಿದ್ದೆವು. ಕೆಲವೇ ಕೆಲವು ಜನರ ಪರಿಚಯ ನಮಗಿತ್ತು. ದೀಪಾವಳಿಯ ಸಮಯ. ನಾವು ಡೆಟ್ರಾಯಿಟ್‌ನಲ್ಲಿ ಯಾವುದೇ ಸಂಘ ಸಂಸ್ಥೆಯೆಂದು ಹೋದವರಲ್ಲ. ‘ಇಲ್ಲಿ ಕನ್ನಡ ಸಂಘದವರು ದೀಪಾವಳಿಯನ್ನು ಆಚರಿಸುತ್ತಿದ್ದಾರೆ, ನಿಮಗೆ ಹೋಗಲು ಇಚ್ಛೆ ಇದೆಯಾ’ ಎಂದು ಮನೆಯವರನ್ನು ಕೇಳಿದೆ. ತಕ್ಷಣ ಹೇಳಿದರು, ‘ಹೋಗಿ ಬರೋಣಾ ಹಾಗೆ ನಮಗೂ ಇಲ್ಲಿಯ ಕನ್ನಡಿಗರ ಪರಿಚಯವಾಗಬಹುದು’.
ಅಲ್ಲಿಗೆ ನಾವು ಹೋದಾಗ ವೇದಿಕೆಯ ಮೇಲೆ ಮಾತಾಡುತ್ತಿದ್ದ ವ್ಯಕ್ತಿಯೇ ಕಲ್ಪನಾ. ಅವರ ಪರಿಚಯ ನಮಗೆ ಆಗಲು ಬಹಳ ಸಮಯವಾಗಲಿಲ್ಲ. ಸದಾ ಹಸನ್ಮುಖಿ, ಮೃದುಭಾಷಿ , ಎಲ್ಲರೊಡನೆ ಬೆರೆಯುವ ವ್ಯಕ್ತಿತ್ವ. ಬಹು ಸರಳ ಜೀವಿ.
ಮಕ್ಕಳ ಲಾಲನೆ ಪಾಲನೆ ಅವರ ಚಟುವಟಿಕೆಗಳೇ ನನ್ನ ಹವ್ಯಾಸ. ಆದರೆ, ಕನ್ನಡಾಭಿಮಾನದಿಂದ ನನ್ನನ್ನು ನಾನು ಈ ಸಂಘದಿಂದ ದೂರವಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗೆ ಸಂಘದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ನನಗೆ ಕಲ್ಪನಾರವರು ಬಹು ಹತ್ತಿರವಾಗತೊಡಗಿದರು.
ಆಗ ಕಂಡುಕೊಂಡ ವಿಷಯಗಳೇನೆಂದರೆ... ಡಲಾಸ್ ನಗರದಲ್ಲಿ ಬಹುತೇಕ ಮಂದಿ ಕನ್ನಡಿಗರಿದ್ದಾರೆ. ಇಲ್ಲಿ ಕನ್ನಡ ಸಂಘದ ಅವಶ್ಯಕತೆ ಇದೆ ಎಂದು ಕಲ್ಪನಾ, ಸುಮಾ ಕುಲಕರ್ಣಿ, ರೇವತಿ, ಕೃಷ್ಣರಾವ್ ಹೀಗೆ ಕೆಲವು ಕುಟುಂಬಗಳು ಸೇರಿ ಸಮಾಲೋಚನೆ ನಡೆಸಿದರು. ಎಲ್ಲರೂ ಒಮ್ಮತದಿಂದ ಕಲ್ಪನಾರವರನ್ನು ಅಧ್ಯಕ್ಷ ಸ್ಥಾನದ ಜವಾಬ್ದಾರಿ ನೀಡಿ ‘ಮಲ್ಲಿಗೆ ಕನ್ನಡ ಸಂಘ’ ಎಂದು ಹೆಸರಿಸಿದರು. ಹೀಗೆ 1994ರಲ್ಲಿ ಕನ್ನಡ ಸಂಘ ಡಲಾಸ್‌ನಗರದಲ್ಲಿ ಸ್ಥಾಪಿಸಲ್ಪಟ್ಟಿತು.
ಮುಂದಿನ ಹೆಜ್ಜೆ ಕನ್ನಡಿಗರನ್ನು ಗುರುತಿಸಿ ಸಂಘಕ್ಕೆ ಸದಸ್ಯರನ್ನಾಗಿ ಮಾಡುವುದು. ಆಗ ಅವರಿಗೆ ಕೇಳಿ ಬಂತು ನಗರದಲ್ಲಿ ನಡೆಯಲಿರುವ ಸ್ವತಂತ್ರ ದಿನಾಚರಣೆ. ‘ಆನಂದ ಬಜಾರ್’ ಗೆ ಮೆಟ್ರೋ ನಗರದ ಭಾರತೀಯರೆಲ್ಲಾ ಬರುತ್ತಾರೆ. ಅಲ್ಲಿ ಕನ್ನಡಿಗರು ಸಿಗಬಹುದೆಂಬ ಆಸೆಯಿಂದ ಕೇಸರಿಬಾತ್ ಹಾಗೂ ಉಪ್ಪಿಟ್ಟು ಮಾಡಿ ಬೂತ್ ಒಂದರಲ್ಲಿ ನಿಂತು ಕಾದಿದ್ದಾಗಿ ಕಲ್ಪನಾರವರು ಅಕ್ಕ ಸಮ್ಮೇಳನಕ್ಕೆ ಬರೆದ ಪತ್ರದಲ್ಲಿ ಹೇಳಿದ್ದಾರೆ.
ಹೀಗೆ ಹತ್ತು ವರ್ಷದ ಹಿಂದೆ ಪ್ರಾರಂಭವಾದ ಸಂಘ ಇಂದು 150 ಕುಟುಂಬದ ಸದಸ್ಯತ್ವವನ್ನು ಹೊಂದಿರುವುದನ್ನು ಕಂಡು ಸಂತೋಷಪಟ್ಟಿದ್ದರು.ಕರ್ನಾಟಕದಿಂದ ಯಾವುದೇ ಕಲಾವಿದರು ಬರಲಿ, ಕಲ್ಪನಾರವರನ್ನು ಭೇಟಿಯಾಗದೆ ಅವರ ಆತಿಥ್ಯ ಪಡೆಯದೆ ಹೋದವರಿಲ್ಲ. ಎಂ.ಎಸ್. ಶೀಲಾ, ಪದ್ಮಿನಿ ರವಿ, ವಿಮಲಾ ರಂಗಾಚಾರ್, ಸುಮಾ ಸುಧೀಂದ್ರ ಇತ್ಯಾದಿ ಕಲಾವಿದರೆಲ್ಲ ಅವರ ಒಡನಾಡಿಗಳಾಗಿದ್ದರು.
ಯಾವುದೇ ಕನ್ನಡ ಕಾರ್ಯಕ್ರಮವಿರಲಿ ಅವರ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿ ಉತ್ತಮ ಮಾರ್ಗದರ್ಶನವನ್ನು ನೀಡುತ್ತಿದ್ದರು. ವೃತ್ತಿಯಲ್ಲಿ ವೈದ್ಯೆಯಾಗಿದ್ದ ಕಲ್ಪನಾಗೆ ಸಮಾಜ ಸೇವೆಗೆ ವೃತ್ತಿಯಾಂದು ತೊಡಕಾಗಿರಲಿಲ್ಲ. ಉದಾಹರಣೆಗೆ ಮಾ.ಹಿರಣ್ಣಯ್ಯನವರು ಡಲಾಸ್‌ಗೆ ಬಂದು ನಾಟಕ ಮಾಡಬೇಕೆಂದು ತೀರ್ಮಾನವಾದಾಗ ಅತ್ಯಂತ ಕಡಿಮೆ ಕಾಲಾವಕಾಶದಲ್ಲಿ ಪ್ರತಿಯಾಬ್ಬ ಕನ್ನಡಿಗರ ಮನೆಗೆ ತಾವೇ ಖುದ್ದಾಗಿ ಫೋನಾಯಿಸಿ ಸಭಾಂಗಣವನ್ನು ಜನರಿಂದ ತುಂಬಿಸಿದ್ದರು. ಅವರಿಗೆ ಕನ್ನಡ ಹಾಗು ಕನ್ನಡ ಜನರ ಬಗ್ಗೆ ಅಪಾರ ಪ್ರೇಮ. ಭಾರತದಿಂದ ಓದಲು ಬರುವ ಶಿಕ್ಷಣಾರ್ಥಿಗಳಿಗೆ ಉಚಿತ ವೈದ್ಯಕೀಯ ನೆರವು ನೀಡಿ ನೋಡಿಕೊಳ್ಳುತ್ತಿದ್ದರೆಂದು ಬರೀ ಕನ್ನಡಿಗರಿಂದಲ್ಲ ಎಲ್ಲಾ ಭಾರತೀಯರಿಂದ ಕೇಳಿದ್ದಿದೆ.
ಸ್ಥಳೀಯ ವಿಶ್ವವಿದ್ಯಾನಿಲಯದ ಪ್ರೊ. ಭಾಟಿಯಾರವರು ಹೇಳುವಂತೆ ಕಲ್ಪನಾ ಭಾರತೀಯ ಸಮುದಾಯಕ್ಕೆ ‘ಗಾಡ್ ಮದರ್’. ಕನ್ನಡ ಸಂಘದ ಯಾವುದೇ ಕಾರ್ಯಕ್ರಮದಲ್ಲಿ ಆಹಾರ ಮಿಕ್ಕಿದ್ದರೂ ಕಲ್ಪನಾ ತಲೆಯಲ್ಲಿ ಹೊಳೆಯುತ್ತಿದ್ದದ್ದು ಎಲ್ಲವನ್ನೂ ಪ್ಯಾಕ್ ಮಾಡಿ, ಇಲ್ಲಿನ ವಿಶ್ವವಿದ್ಯಾನಿಲಯದ ಹುಡುಗರಿಗೆ ತಲುಪಿಸುತ್ತೇನೆ ಎಂದು.
ಹೀಗೆ ಅತ್ಯುತ್ಸಾಹದ ಚಿಲುಮೆಯಾಗಿದ್ದ ಕಲ್ಪನಾ ಬಾಲ್ಟಿಮೋರ್‌ನಲ್ಲಿ ನಡೆದ ಅಕ್ಕ ಸಮ್ಮೇಳನದ ಎಲ್ಲಾ ಸಿದ್ಧತೆಗಳನ್ನು ಖುದ್ದಾಗಿ ಮಾಡಿದ್ದರು. ಸ್ನೇಹಿತರ ಜೋತೆ ಸೇರಿ ಅಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗವಹಿಸಿ ದಾವಣಗೆರೆಯನ್ನು ಪ್ರತಿನಿಧಿಸಿದ್ದೂ ಆಯಿತು. ಅಲ್ಲಿಂದ ಬಂದ ಎರಡು ದಿನದ ನಂತರ ಗೊತ್ತಾದ ವಿಷಯವೇನೆಂದರೆ ಅವರು ಪಾರ್ಶ್ವವಾಯುವಿಗೀಡಾಗಿದ್ದಾರೆಂದು . ಕಾರಣ ಕ್ಯಾನ್ಸರ್. ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದ ಕಲ್ಪನಾ ಇದನ್ನು ಗೆದ್ದೇ ಬರುತ್ತಾರೆಂಬುದು ಹುಸಿಯಾಯಿತು.
ಪತಿ ರಾಮರಾವ್ ಮಕ್ಕಳಾದ ಮಲ್ಲಿಕಾ ಮತ್ತು ಸಿದ್ದಾರ್ಥ, ವಯಸ್ಸಾದ ತಾಯಿಯಲ್ಲದೇ ಅಪಾರ ಸ್ನೇಹಿತರನ್ನು, ಕನ್ನಡ ಸಮುದಾಯವನ್ನೇ ಬಿಟ್ಟು ,ಬಾರದ ಲೋಕಕ್ಕೆ ತೆರಳಿದ್ದರೂ, ನಮ್ಮೊಡನೆ ಶಾಶ್ವತವಾಗಿ ನಮ್ಮ ನೆನಪುಗಳಲ್ಲಿ ಉಳಿಯುುವ ಕಲ್ಪನಾರವರಿಗೆ, ಡಲಾಸ್ ನಗರದ ಕನ್ನಡಿಗರೆಲ್ಲರ ಭಾವ ಪೂರ್ಣ ಶ್ರದ್ಧಾಂಜಲಿ.












Click it and Unblock the Notifications