ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈಜ್ಞಾನಿಕ-ಕೈಗಾರಿಕಾ ಕ್ರಾಂತಿಗಳು ಭಾರತದಲ್ಲೇಕೆ ಆಗಲಿಲ್ಲ?

By Staff
|
Google Oneindia Kannada News


ಚೀನಾದಿಂದ ಬಂದ ತಾಂತ್ರಿಕತೆ, ಇಂಡಿಯಾದಿಂದ ಬಂದ ಗಣಿತದ ಚಿಂತನಾಹಾದಿ, ಗ್ರೀಸಿನಿಂದ ಪಡೆದ ವಿಜ್ಞಾನ ಪರಂಪರೆ, ಪಶ್ಚಿಮ ಏಷ್ಯಾದಿಂದ ಬಂದ ಕ್ರಿಯಾಶೀಲ ಮಾಧ್ಯಮ - ಈ ಎಲ್ಲಾ ಆವಿಷ್ಕಾರಗಳಿರದಿದ್ದರೆ ಯೂರೋಪಿಗೆ ವೈಜ್ಞಾನಿಕ ಯಶಸ್ಸು ಲಭಿಸುತ್ತಿರಲಿಲ್ಲ.

Prabhakar speaking at Bhoomikaಆಧುನಿಕ ಸ್ವರೂಪದ ವಿಜ್ಞಾನ ಭಾರತದಲ್ಲಿ ಹುಟ್ಟದೇ, ಯುರೋಪಿನಲ್ಲಿ ಹುಟ್ಟಲು ಕಾರಣವೇನು? ವೈಜ್ಞಾನಿಕ, ಕೈಗಾರಿಕಾ ಕ್ರಾಂತಿಗಳು ಭಾರತದಲ್ಲೇ ಮೊದಲು ಏಕೆ ಸಂಭವಿಸಲಿಲ್ಲ? ಸಂಭವಿಸಲು ಸಾಧ್ಯವಿರಲಿಲ್ಲವೇ? ಮುಂತಾದ ಪ್ರಶ್ನೆಗಳು ಭಾರತದಲ್ಲಿ ವಿಜ್ಞಾನಿಗಳನ್ನು, ನಾಯಕರನ್ನು ಮಾತ್ರವಲ್ಲ, ಸಾಮಾನ್ಯರನ್ನು ಸಹಾ ಕಾಡದೇ ಬಿಟ್ಟಿಲ್ಲ. ಮೊಘಲರ ಆಕ್ರಮಣ ಹಾಗೂ ಐರೋಪ್ಯರ ಆಗಮನವೇ ಭಾರತ ಹಿಂದುಳಿಯಲು ಕಾರಣವೆಂದು ದೂರಿದರೂ, ಅದಕ್ಕೂ ಮೀರಿದ ಉತ್ತರವಿರಲೇಬೇಕು ಎಂಬ ಸಂಶಯ ಬಾಧಿಸದೇ ಬಿಡುವುದಿಲ್ಲ.

ಈ ವಿಷಯದ ಬಗ್ಗೆ ಫೆಬ್ರವರಿ 11ರಂದು ಮೇರಿಲ್ಯಾಂಡಿನ ‘ಭೂಮಿಕಾ’ದಲ್ಲಿ ಮಾತನಾಡಿದವರು ಡಾ।।ಪ್ರಭಾಕರ್‌. ಕನ್ನಡ ಸಾಹಿತ್ಯ, ಸಂಗೀತ, ಚರಿತ್ರೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಭೂಮಿಕಾದ ಸಕ್ರಿಯ ಕಾರ್ಯಕರ್ತರಾದ ಪ್ರಭಾಕರ್‌ ವೃತ್ತಿಯಿಂದ ಇಂಜಿನಿಯರ್‌.

ಪ್ರಾಚೀನ ಭಾರತದಲ್ಲಿ ಗಣಿತ, ಖಗೋಳಶಾಸ್ತ್ರ ಹಾಗೂ ಇನ್ನಿತರ ವೈಜ್ಞಾನಿಕ ಕ್ಷೇತ್ರಗಳಲ್ಲಿ ಆಗಿನ ಯುರೋಪಿಗಿಂತಲೂ ಬಹಳಷ್ಟು ಮುಂದುವರಿದಿತ್ತೆಂಬುದು ತಿಳಿದ ವಿಷಯವೇ. ಭಾರತೀಯ ಇತಿಹಾಸಕಾರರಷ್ಟೇ ಅಲ್ಲದೇ, ಪಾಶ್ಚಿಮಾತ್ಯ ಇತಿಹಾಸಕಾರರೂ ಸಹಾ ಪ್ರಾಚೀನ ಭಾರತದ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಬೆಳವಣಿಗೆಯ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದಾರೆ.

ಜೋಸೆಫ್‌ ನೀಡ್‌ಹ್ಯಾಮ್‌(1900-1995) ಎಂಬ ವಿಜ್ಞಾನ ಇತಿಹಾಸಕಾರನ ಪ್ರಸ್ತಾಪದೊಂದಿಗೆ ಚರ್ಚೆ ಆರಂಭಿಸಿದರು ಪ್ರಭಾಕರ್‌. ಭಾರತದ ಗಣಿತ ಹಾಗೂ ಖಗೋಳಶಾಸ್ತ್ರ ಬೆಳವಣಿಗೆ ಹಾಗೂ ಚೀನಾದೇಶದ ವೈಜ್ಞಾನಿಕ ಹಾಗೂ ತಂತ್ರಜ್ಞಾನಗಳ ಬೆಳವಣಿಗೆಗಳ ಬಗ್ಗೆ ಸಾಕಷ್ಟು ಸಂಶೋಧನಾಗ್ರಂಥಗಳನ್ನು ಪ್ರಕಟಿಸಿರುವ ನೀಡ್‌ಹ್ಯಾಮ್‌ನ ಪ್ರಶ್ನೆ: ‘ಗೆಲಿಲಿಯೋ ಶೈಲಿ ವಿಜ್ಞಾನವು ಪೀಸಾದಲ್ಲೇ ಏಕೆ ಹುಟ್ಟಿತು? ಪಾಟ್ನದಲ್ಲೋ ಪೀಕಿಂಗ್ನಲ್ಲೋ ಅಲ್ಲೆ ಯಾಕೆ?’.

ಈ ನಿಟ್ಟಿನಲ್ಲಿ ನಡೆದ ವಿಶ್ಲೇಷಣೆ ಮತ್ತು ವಿವರಣೆಗಳು ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರಣಗಳ ಪಟ್ಟಿಯನ್ನೇ ಕೊಡುತ್ತವೆ. ಉದಾಹರಣೆಗೆ ಭಾರತದ ನಾಗರಿಕತೆಯಲ್ಲಿ ಸ್ವಯಂತೃಪ್ತಿಗಿದ್ದ ಮಹತ್ವ, ಇಹ-ವಿರೋಧಿ ಸಂಸ್ಕೃತಿ, ಜಾತಿಪದ್ಧತಿಯಿಂದಾಗಿ ವೃತ್ತಿಗಳ ನಡುವೆ ಚಲನಶೀಲತೆ ಇಲ್ಲದಿದ್ದು, ವಿದೇಶಯಾನವಿರದೆ ಹೊರಜಗತ್ತಿನಿಂದ ಪ್ರತ್ಯೇಕವಾಗಿದ್ದು, ಮೌಖಿಕ ಸಂಪ್ರದಾಯಗಳ ಪ್ರಾಬಲ್ಯವಿದ್ದು, ದಾಖಲೀಕರಣಕ್ಕೆ ಪ್ರತಿರೋಧವಿದ್ದಿದ್ದು.

ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರಣಗಳು ಮಾತ್ರವೇ ನೀಡ್‌ಹ್ಯಾಮ್‌ನ ಪ್ರಶ್ನೆಗೆ ಸಂಪೂರ್ಣ ಉತ್ತರವಾಗಲಾರದು. ಏಕೆಂದರೆ ಅದರಲ್ಲಿ ಬಹಳಷ್ಟು ಕಾರಣಗಳು ಒಂದಲ್ಲಾ ಒಂದು ರೀತಿಯಲ್ಲಿ ಪಶ್ಚಿಮಕ್ಕೂ ಅನ್ವಯವಾಗುತ್ತವೆ. ಉದಾಹರಣೆಗೆ ಪಶ್ಚಿಮದಲ್ಲಿ ಸಹಾ ವಿಜ್ಞಾನ ಕ್ರಾಂತಿಯಾಗುವುದಕ್ಕೆ ಮೊದಲು ಪ್ರಗತಿವಿರೋಧಿ ಮನೋಭಾವವಿತ್ತು. ಗೆಲಿಲಿಯೋನನ್ನು ಆಗಿನ ಚರ್ಚ್‌ ಸೆರೆಮನೆಗೆ ಕಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನೀಡ್‌ಹ್ಯಾಮ್‌ನ ಪ್ರಶ್ನೆಯ ಇನ್ನೊಂದು ಮುಖ ಯೂರೋಪು ಆಧುನಿಕ ವಿಜ್ಞಾನವನ್ನು ಹೇಗೆ ಹುಟ್ಟಿಸಿಕೊಂಡಿತು ಎನ್ನುವುದು. ಈ ಪ್ರಶ್ನೆಯನ್ನು ಹಾಕಿದವರು ಡಾ।।ರೊದ್ದಂ ನರಸಿಂಹ. ಆಧುನಿಕ ವಿಜ್ಞಾನದ ಹುಟ್ಟು ಕೊಪರ್ನಿಕಸ್‌ ಹಾಗೂ ನ್ಯೂಟನ್ನರ ಮಧ್ಯದ ಕಾಲ (1543-1704) ದಲ್ಲಾಯಿತು ಎಂದು ಪಾವ್ಲೊ ರೋಸಿ ತನ್ನ Birth of Modren Science ಎಂಬ ಪುಸ್ತಕದಲ್ಲಿ ಬರೆದಿದ್ದಾನೆ. ಅನೇಕ ಪಾಶ್ಚಿಮಾತ್ಯ ವಿದ್ವಾಂಸರ ಪ್ರಕಾರ ಆ ನಂತರ ನಡೆದ ವಿಜ್ಞಾನದ ಬೆಳವಣಿಗೆಗೆ ಸನ್ನೆಗೋಲಾಗಿದ್ದು ಅದಕ್ಕೂ ಬಹಳಷ್ಟು ಹಿಂದೆ ಚೀನಾ ಹಾಗೂ ಇಂಡಿಯಾದಲ್ಲಾಗಿದ್ದ ಬಹಳಷ್ಟು ಆವಿಷ್ಕಾರಗಳು ಯೂರೋಪಿಗೆ ಆಗಮಿಸಿದ್ದರಿಂದ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X