ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯು ಬಾಡಿತು!

By Staff
|
Google Oneindia Kannada News


ಸುಭಾಷಿತದ ರುಚಿಯ ಮುಂದೆ ದ್ರಾಕ್ಷಿಯು ಬಾಡಿತು ; ಸಕ್ಕರೆ ಕಲ್ಲಾಯಿತು; ಅಮೃತವು ಹೆದರಿ ಸ್ವರ್ಗಕ್ಕೆ ಹೋಯಿತು! ಭೂಮಿಕಾ ಅಂಗಳದಲ್ಲಿ ಸೇರಿದ್ದ ಎಲ್ಲರೂ ಈ ಮಾತನ್ನು ಒಪ್ಪಿದರು.



Bukki Nagendra1977ರಲ್ಲಿ ಪ್ರಕಟವಾದ ಸುಭಾಷಿತ ಮಂಜರಿ, ಕನ್ನಡ ಸಾಹಿತ್ಯ ಪರಿಷತ್ತಿನ ಒಂದು ಅಮೂಲ್ಯವಾದ ಕೊಡುಗೆ. ಕನ್ನಡಕ್ಕೆ ಮಾತೃಸ್ವರೂಪವಾದ ಸಂಸ್ಕೃತ ಸಾಹಿತ್ಯದಲ್ಲಿ ಅಡಗಿರುವ, ಅನುಭವ, ಅಲೋಚನೆ ಮತ್ತು ಸಂಸ್ಕೃತಿ ಸಂಪತ್ತನ್ನು ಸಂಗ್ರಹಿಸಿ, ಭಾಷಾಂತರಿಸಿ, ಕನ್ನಡ ಓದುಗರಿಗೆ ಸುಲಭವಾಗಿ ಸಿಗುವಂತೆ ಮಾಡಿರುವ ಈ ಯೋಜನೆ ಶ್ಲಾಘನೀಯ.

ಮೇಲ್ಕಂಡ ಕೃತಿಯಿಂದ ಆಯ್ದ ಅಣಿಮುತ್ತುಗಳನ್ನು ಮತ್ತದರಲ್ಲಿ ಅಡಗಿರುವ ವಿವೇಕ ಸ್ವಾರಸ್ಯವನ್ನು ತಮ್ಮ ಉಪನ್ಯಾಸ ಮಾಲೆಯಲ್ಲಿ ಸೊಗಸಾಗಿ ಬಣ್ಣಿಸಿದವರು ಕನ್ನಡಮಿತ್ರ ಬಿ. ಕೆ. ನಾಗೇಂದ್ರ.
ಸಂದರ್ಭ : ವಾಷಿಂಗ್‌ಟನ್‌ನಲ್ಲಿರುವ ಭೂಮಿಕಾ ಸಂಸ್ಥೆಯ ಜುಲೈ ಮಾಸಿಕ ಉಪನ್ಯಾಸ ಕಾರ್ಯಕ್ರಮ.

ಸುಭಾಷಿತ ಮಂಜರಿಯು ಕನ್ನಡದಲ್ಲಿ ಬೆಳಗಲು ಕಾರಣಕರ್ತರು ನಾಲ್ಕು ವಿದ್ವಾಂಸರು : ಎನ್. ರಂಗನಾಥಶರ್ಮ, ಡಾ. ಕೆ.ಎಸ್. ನಾಗರಾಜನ್, ವಿದ್ವಾನ್ ಸಿ. ಅನಂತಾಚಾರ್ ಮತ್ತು ಪ್ರಧಾನ ಸಂಪಾದಕ ಡಾ. ಎನ್. ಎಸ್. ಅನಂತರಂಗಾಚಾರ್. ಸುಮಾರು 180 ಗ್ರಂಥಗಳಿಂದ ಸಂಗ್ರಹಿಸಿದ 2000 ಸುಭಾಷಿತಗಳು, ಬದುಕಿನ ಅನುಭವಗಳನ್ನು ಭಟ್ಟಿಇಳಿಸಿ ಬಡಿಸಿದ ರಸದೌತಣ. ಜೀವನದ ಕಹಿ-ಸಿಹಿ, ಗುಣಾವಗುಣ, ಸರಿ-ತಪ್ಪುಗಳ ಬಣ್ಣನೆ, ನೀತಿ, ವೈರಾಗ್ಯ, ಧ್ಯೇಯ ಆದರ್ಶ.. ಹೀಗೆ ಹಲವಾರು ವಲಯಗಳ ಸತ್ಯವನ್ನು ಕೆಲವೊಮ್ಮೆ ಮೋಹಕವಾಗಿ ಕೆಲವೊಮ್ಮೆ ಅಣಕ ಹಾಸ್ಯಗಳ ಮೂಲಕ ಕನ್ನಡ ಸುಭಾಷಿತಗಳಲ್ಲಿ ಅರಳಿವೆ.

ಈ ಗ್ರಂಥದ ಸಾರವನ್ನು ನಾಗೇಂದ್ರ ಅವರು ಉದಾಹರಣೆಗಳೊಂದಿಗೆ ಮಂಡಿಸಿದರು. ಈ ಪುಸ್ತಕದ 14 ಅಧ್ಯಾಯಗಳ ವಿಷಯ: ಸುಭಾಷಿತ ಪ್ರಶಂಸೆ; ಕವಿ ಕಾವ್ಯ ಪ್ರಶಂಸೆ; ಸಂಸಾರ; ಸಿರಿತನ-ಬಡತನ; ಸಜ್ಜನರು-ದುರ್ಜನರು; ಮಿತ್ರ-ಶತ್ರು; ದೈವ-ಪುರುಷ ಪ್ರಯತ್ನ; ಸದ್ಗುಣ-ದುರ್ಗುಣ; ರಾಜನೀತಿ; ಧರ್ಮ; ವಿವೇಕ; ವೈರಾಗ್ಯ; ಭಕ್ತಿ; ಮತ್ತು ಸಾಮಾನ್ಯ ನೀತಿ. ಆರಂಭದಲ್ಲಿ ಉದಾಹರಿಸಿದ ಸುಭಾಷಿತ ಪ್ರಶಂಸೆಯಲ್ಲದೇ ಇತರ 13ಅಧ್ಯಾಯಗಳಿಂದ ಆಯ್ದ ನುಡಿಮುತ್ತುಗಳನ್ನು ನಾಗೇಂದ್ರ ಅವರು ತಮ್ಮ ವಿದ್ವತ್‌ಪೂರ್ಣ ಭಾಷಣದಲ್ಲಿ ಪ್ರಸ್ತುತಪಡಿಸಿದರು.

ದಟ್ಸ್ ಕನ್ನಡ ಓದುಗರಿಗಾಗಿ ಆಯ್ದ ಕೆಲವು ಸುಭಾಷಿತ ರತ್ನ :

ಸಂಸಾರ: ನೀರಿನಿಂದ ಬೆಂಕಿಯನ್ನು ಆರಿಸುವಂತೆ, ಜ್ಞಾನದಿಂದ ಮಾನಸ ದುಃಖವನ್ನು ಶಾಂತಗೊಳಿಸಬೇಕು. ಮಾನಸ ದುಃಖವು ಶಾಂತವಾದರೆ ದೇಹವೂ ಸ್ವಸ್ಥವಾಗುವುದು. ಮಹಾಭಾರತ, ಅರಣ್ಯ. 2-26

ಸಿರಿತನ-ಬಡತನ: ಸಾಮಾನ್ಯವಾಗಿ ಶ್ರೀಮಂತರಿಗೆ ಊಟಮಾಡಿ ಜೀರ್ಣಿಸಿಕೊಳ್ಳುವ ಶಕ್ತಿ ಇರುವುದಿಲ್ಲ, ಕಟ್ಟಿಗೆಗಳೂ ಸಹ ಬಡವರಿಗೆ ಜೀರ್ಣವಾಗುತ್ತವೆ. ಮಾಹಾಭಾರತ, ಶಾಂತಿ. 28-29.

ಸಜ್ಜನ-ದುರ್ಜನ: ಚಂದ್ರನು ಅಮೃತಕಿರಣವನ್ನು ಹರಡುತ್ತಾನೆ, ಸರ್ಪವು ವಿಷವನ್ನೇ ಕಾರುತ್ತದೆ. ಹಾಗೆ ಸತ್ಪುರುಷನು ಗುಣವನ್ನೇ ಹೇಳುತ್ತಾನೆ. ದುಷ್ಟನು ದೋಷವನ್ನೇ ಬೆಳಕಿಗೆ ತರುತ್ತನೆ. ಸುಭಾಷಿತರತ್ನ ಸಮುಚ್ಚಯ.

ದ್ಯೆವ-ಪುರುಷ ಪ್ರಯತ್ನ: ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುತ್ತವೆಯೇ ವಿನಾ ಬರಿಯ ಬಯಕೆಗಳಿಂದಲ್ಲ. ನಿದ್ರಿಸುತ್ತಿರುವ ಸಿಂಹದ ಬಾಯಲ್ಲಿ ಮೃಗಗಳು ತಾವಾಗಿ ಪ್ರವೇಶಿಸುವುದಿಲ್ಲ. ಪಂಚತಂತ್ರ, ಮಿತ್ರ ಸಂಪ್ರಾಪ್ತಿ-138.

ಸದ್ಗುಣ-ದುರ್ಗುಣ: ಮೂರ್ಖನು ತನ್ನನ್ನು ತಾನೇ ಹೊಗಳಿಕೊಳ್ಳದಿದ್ದರೆ ಅವನನ್ನು ಹೊಗಳತಕ್ಕವರು ಜಗತ್ತಿನಲ್ಲಿ ಯಾರು ಸಿಗುತ್ತಾರೆ! ಅವನಿಗೆ ಸುಖ ಯಾವಾಗ ದೊರಕೀತು! ಕಲಿವಿಡಂಬನ-7

ರಾಜನೀತಿ: ತಂದೆ, ಆಚಾರ್ಯ, ಮಿತ್ರ, ತಾಯಿ, ಹೆಂಡತಿ, ಮಗ, ಪುರೋಹಿತ ಇವರನ್ನೂ ಸಹ ಧರ್ಮವನ್ನು ಮೀರಿದರೆ ಅರಸನು ದಂಡಿಸದೆ ಬಿಡಬಾರದು. ಮನುಸ್ಮೃತಿ, 8-335

ಭಕ್ತಿ: ಶಿಷ್ಯರ ಹಣವನ್ನು ಅಪಹರಿಸುವ ಗುರುಗಳು ಬಹಳ ಮಂದಿ ಇದ್ದಾರೆ. ಶಿಷ್ಯರ ಚಿತ್ತವನ್ನು ಸೆಳೆಯುವ ಗುರು ಲೋಕದಲ್ಲಿ ದುರ್ಲಭ. - ಸಮಯೋಚಿತಪದ್ಯಮಾಲಿಕಾ.

ನಾಗೇಂದ್ರರ ಸುಭಾಷಿತ ಆಶಯ ಭಾಷಣದ ನಂತರ ವಿಚಾರ ವಿನಿಮಯವಾಯಿತು. ಸಭಿಕರು ತಮಗೆ ಪ್ರಿಯವಾದ ಸುಭಾಷಿತಗಳ ಸವಿಯನ್ನು ಮತ್ತೆ ನೆನಪಿಸಿಕೊಂಡು ಚರ್ಚೆಗೆ ತೊಡಗಿಕೊಂಡರು..

ಸುಭಾಷಿತ ಮಂಜರಿಯ ವಾಕ್ಯಸುಧೆಯನ್ನು ಮೂಲ ಸಂಸ್ಕೃತದಲ್ಲಿ ಓದಿ ಆನಂದಿಸುವ ಸಾಧ್ಯತೆಯನ್ನು ಕೆಲವರು ವ್ಯಕ್ತಪಡಿಸಿದರು. ಈ ಗ್ರಂಥದ ಕೊರತೆ ಒಂದೇ: ಮೂಲಋಣದ ಗ್ರಂಥಗಳ ಹೆಸರು ಪ್ರತಿ ಸುಭಾಷಿತದ ಕಡೆಯಲ್ಲಿ ಕಂಡುಬಂದರೂ, ಆ ಗ್ರಂಥಗಳನ್ನು ಯಾರು, ಎಲ್ಲಿ ಮುದ್ರಿಸಿದರು ಎಂದು ಎಲ್ಲೂ ನಮೂದಿಸಿಲ್ಲ. ಆದ್ದರಿಂದ ಮೂಲವನ್ನು ಅಭ್ಯಾಸಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ. ಹಾಗಾಗಿ, Bibliography ಇಲ್ಲದಿರುವ ಕೊರತೆಯನ್ನು ಸಂಪಾದಕ ಮಂಡಲಿ ಮುಂದಿನ ಆವೃತ್ತಿಯಲ್ಲಿ ಅಚ್ಚುಮಾಡಬೇಕು ಹಾಗೂ ನಿತ್ಯ ಬದುಕಿಗೆ ಕೈದೀವಿಗೆ ಎನಿಸಿವಂಥ ಸುಭಾಷಿತ ಮಂಜರಿಮನೆಮನೆಯಲ್ಲೂ ಇರಬೇಕು ಎಂದು ನಾಗೇಂದ್ರ ಹಾರೈಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X