ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ

By Staff
|
Google Oneindia Kannada News


ಮೇ.19ಮತ್ತು 20ರಂದು ಇಲಿನಾಯ್‌ನ ಅರೋರದಲ್ಲಿ ಕನ್ನಡ ಸಾಹಿತ್ಯ ರಂಗದ ಮೂರನೆಯ ಸಮ್ಮೇಳನ(ವಸಂತ ಸಾಹಿತ್ಯೋತ್ಸವ). ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿರುವ ಎಲ್ಲರ ನಗೆಮಿತ್ರ ಪ್ರೊ.ಅ.ರಾ.ಮಿತ್ರರ ಭಾಷಣವನ್ನು ದಟ್ಸ್‌ ಕನ್ನಡ, ವಿಶ್ವಕನ್ನಡಿಗರಿಗೆ ತಲುಪಿಸುತ್ತಿದೆ. ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಬೆರೆತ ಬಗೆಯನ್ನು ಪದರಪದರವಾಗಿ ಬಿಚ್ಚಿಡುವ ಅವರ ಭಾಷಣ, ಕೆಲವು ಕಂತುಗಳಲ್ಲಿ ಪ್ರಕಟವಾಗಲಿದೆ. ಭಾಷಣದ ಮೊದಲ ಭಾಗಕ್ಕೆ ಸ್ವಾಗತ.

Prof. A.R. Mitraಅಮೆರಿಕದ ಕನ್ನಡ ಕುಲಬಾಂಧವರು ಹೊರಗಿನ ಮಣ್ಣಿನಲ್ಲಿ ಕನ್ನಡದ ಕಂಪನ್ನು ಪ್ರಕಟಿಸಲು ಮನಸ್ಸು ಮಾಡಿರುವುದು ತುಂಬ ಸಂತೋಷದ ಸಂಗತಿ. ಷಣ್ಮುಖನು ವಾಸಿಸುತ್ತಿದ್ದುದು ದೇವಗಿರಿಯಲ್ಲಿ. ಪಾರ್ವತಿ ಕೈಲಾಸ ಪರ್ವತದಲ್ಲಿ. ಆದರೆ ಕೈಲಾಸದಲ್ಲಿ ಅವಳು ಓಡಾಡುವಾಗ ನವಿಲುಗರಿಯಾಂದು ನೆಲದ ಮೇಲೆ ಬಿದ್ದಿದ್ದರೆ ಆಕೆಗೆ ಕೂಡಲೇ ಪುತ್ರ ಷಣ್ಮುಖನ ವಾಹನವಾದ ನವಿಲು ನೆನಪಿಗೆ ಬಂದು ಕುಮಾರನ ಮೇಲಿನ ಪ್ರೀತಿಯಿಂದ ಅದನ್ನು ತನ್ನ ಕಿವಿಯಲ್ಲಿ ಮುಡಿಯುತ್ತಿದ್ದಳೆಂದು ಕಾಳಿದಾಸ ಹೇಳುತ್ತಾನೆ.

ಆಂಧ್ರಪ್ರದೇಶದಲ್ಲಿದ್ದ ಪಂಪನಿಗೂ ಚಿಗುರಿದ ಮಾಮರ ಕಂಡಾಗ, ಸೊಗಸಾದ ಹಾಡು ಕಿವಿಗೆ ಬಿದ್ದಾಗ ಕನ್ನಡನಾಡಿನ ಬನವಾಸಿ ನೆನಪಿಗೆ ಬರುತ್ತಿತ್ತಂತೆ. ಹಾಗೆ ನಿಮಗೆ ಆಗುತ್ತಿದೆ ಎಂದು ನನಗೆ ಗೊತ್ತು. ಇತರರಂತೆ ಮರ್ಯಾದೆಯಾಗಿ ಸುಮ್ಮನೆ ಇರಲು ನಿಮಗೆ ಸಾಧ್ಯವಾಗುತ್ತಿಲ್ಲ. ಇರಾಣ ದೇಶ-ಇರಾಕ್‌ ದೇಶಗಳ ಘರ್ಷಣೆಯ ಸಂದರ್ಭದಲ್ಲಿ ವೈ.ಎನ್‌.ಕೆ ಯವರು ಸುಮ್ನೆ ‘ಇರಾಣ’ ಅಂದ್ರೆ ‘ಇರಾಕ್‌’ ಬಿಡ್ತಾಇಲ್ಲ -ಎಂದದ್ದು ನಿಮಗೆ ನೆನಪಿರಬೇಕು. ಹಾಗೆ ಕನ್ನಡ ನಿಮ್ಮನ್ನು ಸುಮ್ಮನಿರಲು ಬಿಡುತ್ತಿಲ್ಲ. ವರ್ಷ ವರ್ಷವೂ ಸಾಹಿತ್ಯ ಸಮಾರಾಧನೆ ಮಾಡುತ್ತೀರಿ ಎರಡು ವರ್ಷವಾಯಿತೆಂದರೆ ವಿಶ್ವ ಕನ್ನಡ ಸಮ್ಮೇಳನ ಮಾಡುತ್ತೀರಿ. ಮಧ್ಯಸಮುದ್ರದಲ್ಲಿ ಎಸೆಯಬೇಕಾದ ನಮ್ಮನ್ನು ಸಮುದ್ರದಾಚೆಯಿಂದ ಕರೆಸಿಕೊಳ್ಳುತ್ತೀರಿ. ಕನ್ನಡ ಕವಿಗಳನ್ನು ಸಾಹಿತಿಗಳನ್ನು ಚಿಂತಕರನ್ನು ಕರ್ನಾಟಕದ ವಿದ್ಯಮಾನಗಳನ್ನು ಅಲ್ಲಿಯವರಂತೆಯೇ ಅಥವಾ ಅವರಿಗಿಂತ ಹೆಚ್ಚಾಗಿ ಪುರಸ್ಕರಿಸುತ್ತೀರಿ.

ನಿಮ್ಮ ಈ ಸ್ಥಿತಿ ಕಂಡರೆ ನನಗೆ ಅಸ್ಸಾಂ, ಕಾಶ್ಮೀರಗಳ ಗುಡ್ಡಗಾಡಿನ ಬಾಲಕರ ನೆನಪಾಗುತ್ತದೆ. ಛಳಿಯ ಕೊರೆತವನ್ನು ಸಹಿಸಿಕೊಳ್ಳಲು ಅವರು ತಮ್ಮ ಮೈಮೇಲಿನ ವಸ್ತ್ರರಾಶಿಯ ಮಧ್ಯದಲ್ಲಿ ಒಂದು ಸಣ್ಣ ಅಗ್ಗಿಷ್ಟಿಕೆಯನ್ನು ಮುಚ್ಚಿಟ್ಟುಕೊಂಡು ಬೆಚ್ಚಗಿರುತ್ತಾರೆ. ನೀವು ಅವರಂತೆಯೇ ಕನ್ನಡದ ಅಗ್ಗಿಷ್ಟಿಕೆಯನ್ನು ಹೃದಯದೊಳಗೆ ಸ್ಥಾಪಿಸಿಕೊಂಡು ಬೀಗುತ್ತಿದ್ದೀರಿ. ನಿಮ್ಮನ್ನು ನೋಡಿದರೆ ನಮಗೆ ಅಭಿಮನ್ಯುವನ್ನು ಕಂಡ ಕೌರವನ ಚಿತ್ರ ಎದುರು ನಿಲ್ಲುತ್ತದೆ.

ಶತ್ರುವಾದರೂ ಬಾಲಕ ಅಭಿಮನ್ಯುವಿನ ದೇಹವನ್ನು ಯುದ್ಧ ಭೂಮಿಯಲ್ಲಿ ಕಂಡಾಗ ಕೌರವನು ‘ಅಯ್ಯಾ ಅಭಿಮನ್ಯು! ನಿಜ ಸಾಹಸೈಕದೇಶಾನುಮರಣಂ ಎನಗಕ್ಕೆ ಗಡಾ’ (ಅಂದರೆ ನಿನ್ನ ಹೋರಾಟದ ಸಾವಿನ ಪುಣ್ಯದಲ್ಲಿ ಒಂದೇ ಒಂದು ಭಾಗದಷ್ಟು ನನಗೆ ಬರಲಿ!) ಎಂದನಂತೆ. ನಿಮ್ಮ ಕನ್ನಡ ಪ್ರೇಮದಲ್ಲಿ ಒಂದು ಭಾಗದಷ್ಟಾದರೂ ನಮ್ಮ ನಾಡಿನ ಕನ್ನಡ ಯುವಕರಿಗೆ ಬರಲಿ ಎಂದು ನಾನು ಹಾರೈಸುತ್ತೇನೆ.

ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ ಇದು ನನ್ನ ಇಂದಿನ ಚಿಂತನೆಯ ವಸ್ತು. ಬರಿಯ ಜೋಕುಗಳಲ್ಲಿ ಮುಳುಗಿಸುವ ಅಲ್ಪಕಾರ್ಯದಲ್ಲಿ ತನ್ಮಯನಾಗದೆ, ಹಾಸ್ಯದ ಜೀವಸೆಲೆಯನ್ನು ಗುರುತಿಸುವ ಪ್ರಯತ್ನ ಮಾಡಬೇಕೆಂದೂ, ಐತಿಹಾಸಿಕವಾಗಿ ಕನ್ನಡದ ಎರಡು ಸಾವಿರ ವರ್ಷಗಳ ಹಾಸ್ಯ ಸಾಹಿತ್ಯವನ್ನು ಗಮನದಲ್ಲಿರಿಸಿಕೊಂಡು ಮಾತಾಡಬೇಕೆಂದೂ ಸೂಚಿಸಿದ್ದೀರಿ.

ಮುಡಿವವರ ಮುಖನೋಡಿ ಅರಳುವವೆ ಪುಷ್ಪಗಳು?
ಓದುವರ ಆಸೆಯಲಿ ನೀ ಬರೆಯಬೇಡ
ನಿನ್ನ ರುಚಿಯೆತ್ತರಕೆ ಓದುಗರೆ ಬರಬೇಕು
ಅವರನೊಲಿಸುವ ನಿನ್ನ ಗುರಿ ತೊರೆಯಬೇಡ

ಎಂದು ಸಿದ್ಧಯ್ಯ ಪುರಾಣಿಕರು ನಿಮ್ಮ ಸೂಚನೆಯನ್ನೇ ಅನುಮೋದಿಸಿದ್ದಾರೆ. ಮಹಾಲಿಂಗೇಶ್ವರ ಶತಕದಲ್ಲಿ ಅಳಿಯ ಲಿಂಗರಾಜನು ನೀತಿಯನ್ನು ಕೂಡ ಹಾಸ್ಯದ ಪರಿಭಾಷೆಯಲ್ಲಿ ಹೇಳುತ್ತಾನೆ:

‘ನೀತಿಯನರಿಯದ ಸಚಿವಂ
ಖ್ಯಾತಿಯ ಬಯಸದ ನೃಪಾಲಕಂ
ಅತಿಭೀತ ಭಟಂ, ಮಾತಿನೊಳ್‌ ಸೋಲ್ವ ಬುಧಂ
-ಸೀತರೆ ಬೀಳ್ವ ಮೂಗಿನೋಲ್‌’

ಈ ಮಾತಿಗೆ ವ್ಯಾಖ್ಯಾನ ಅಗತ್ಯವಿಲ್ಲ ಎಂದು ಭಾವಿಸಿದ್ದೇನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X