ವಾಷಿಂಗ್ಟನ್‌ನಲ್ಲಿ ಶಿವಕುಮಾರ ಸ್ವಾಮಿಜಿಗಳಿಗೆ ಗುರುವಂದನೆ
ವಾಷಿಂಗ್ಟನ್ ಡಿಸಿ : ಇಲ್ಲಿನ ಜೆಎಸ್ಎಸ್ ಆಧ್ಯಾತ್ಮಿಕ ಕೇಂದ್ರದಲ್ಲಿ ಕಳೆದ ಭಾನುವಾರ 15ನೇ ತಾರೀಖಿನಂದು ತುಮಕೂರಿನ ಸಿದ್ಧಗಂಗಾ ಮಠದ ಡಾ. ಶಿವಕುವಾರ ಸ್ವಾಮಿಜಿಗಳಿಗೆ ಗುರುವಂದನೆ ಸಲ್ಲಿಸಲಾಯಿತು.
ಉತ್ತರ ಅಮೆರಿಕಾದ ಅನೇಕ ಸಂಘ ಸಂಸ್ಥೆಗಳು ಸಂಯುಕ್ತವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕದ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿಯವರು, ಜಾತಿ ಧರ್ಮ ಭೇದವಿಲ್ಲದೆ ಒಂಬತ್ತು ಸಾವಿರ ಮಕ್ಕಳಿಗೆ ಅನ್ನ, ಅಕ್ಷರ ದಾಸೋಹ ಮಾಡುತ್ತಿರುವ ಶಿವಕುಮಾರ ಸ್ವಾಮಿಜಿಗಳ ಸೇವಾಕಾರ್ಯ ವಿಶ್ವಕ್ಕೇ ಮಾದರಿ ಎಂದು ಶ್ಲಾಘಿಸಿದರು.
ಗುರುವಂದನೆಗೆ ಪ್ರೇರಣೆ ನೀಡಿದ ಜೆಎಸ್ಎಸ್ ಆಧ್ಯಾತ್ಮಿಕ ಕೇಂದ್ರದ ಜಗದ್ಗುರು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಜಿಗಳಿಗೆ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಯೋಗ ನೀಡಿದ ಅಕ್ಕ, ಮೇರಿಲ್ಯಾಂಡ್‌ನ ಕಾವೇರಿ ಕನ್ನಡ ಸಂಘ, ವರ್ಜೀನಿಯಾ, ಡೆಟ್ರಾಯಿಟ್ ಕನ್ನಡ ಸಂಘ ಮತ್ತು ವಿಎಸ್‌ಎನ್‌ಎ ಸಂಘಟನೆಗಳನ್ನು ಸಾಹಿತಿ ಮನು ಬಳಿಗಾರ್ ಅಭಿನಂದಿಸಿದರು.
ಡಾ. ವಿನಯಪ್ರಭಾ ಬಳಿಗಾರ್ ಅವರು ಹೊರತಂದಿರುವ ವಚನದ ಸಿಡಿಯನ್ನು ಅಮರನಾಥ ಗೌಡ ಅವರು ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ನಾರಾಯಣ ಸ್ವಾಮಿ, ತುಮಕೂರು ದಯಾನಂದ್, ನಾಗಶಂಕರ್, ಸಿದ್ದಲಿಂಗಯ್ಯ, ಶಶಿಕಲಾ ಕುಮಾರ್, ಡಾ.ಗೊಣಚಿಗಾರ್, ರಾಜಶೇಖರ್ ಮೊದಲಾದವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ಚನ್ನಬಸಪ್ಪ ಅವರು ವಹಿಸಿದ್ದರು.












Click it and Unblock the Notifications