ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಬರೀ ಯುಗಾದಿಯಲ್ಲ.. ಎಲ್ಲರಿಗೂ ಹೊಸ ಹಾದಿ..!

By Staff
|
Google Oneindia Kannada News


Group singing ಮಧುರ ಗೀತೆಗಳ ಮತ್ತು!

ಸುನಯನ ಕನ್ನಡದ ಜನಪ್ರಿಯ ಗೀತೆಗಳ ಸಂಗೀತ ಕಾರ್ಯಕ್ರಮವಾದರೂ, ಅದರ ಮುಖ್ಯ ಉದ್ದೇಶ ಧನ ಸಂಗ್ರಹಣೆ. ಆ ಕಾರಣಕ್ಕೆಂದೇ ಇದು ಪಬ್ಲಿಕ್‌ ರೇಡಿಯೋ ಮುಂತಾದುವುಗಳ ವಾಗ್ದಾನ-ಕಾರ್ಯಕ್ರಮಗಳ ರೀತಿಯಲ್ಲಿ ನಿರೂಪಿತವಾಗಿತ್ತು. ಜಿ. ಎಸ್‌. ಶಿವರುದ್ರಪ್ಪನವರ ಜನಪ್ರಿಯ ಭಾವಗೀತೆ ‘ಎದೆತುಂಬಿ ಹಾಡಿದೆನು’ ಅನ್ನು ಹಾಡಿಗೆ ತಕ್ಕಂತೆ ಸುಮುಖ್‌ ಶೇಖರ್‌ ತುಂಬಾ ಚೆನ್ನಾಗಿ ಹಾಡಿ ಸುನಯನ ಕಾರ್ಯಕ್ರಮವನ್ನು ಶುರುಮಾಡಿದನು.

ಅದಾದ ಮೇಲೆ, ಇಳಯರಾಜ ರಾಗಸಂಯೋಜಿಸಿರುವ, ಮಣಿರತ್ನಂ ಅವರ ‘ಪಲ್ಲವಿ ಅನುಪಲ್ಲವಿ’ಯ ಹಚ್ಚಹಸಿರಾದ ಹಾಡುಗಳಲ್ಲಿ ಒಂದಾದ ಆರ್‌ ಎನ್‌ ಜಯಗೋಪಾಲರ ‘ನಗುವ ನಯನ’ ಯುಗಳಗೀತೆಯನ್ನು ಸೋಮಶೇಖರ್‌ ಮತ್ತು ಆರತಿ ಮೂರ್ತಿ ಬಹಳ ಮಧುರವಾಗಿ ಹಾಡಿ, ಸಂಜೆಗೆ ಸರಿಯಾದ ಮೋಹಕ ವಾತಾವರಣವನ್ನು ಸೃಷ್ಟಿಸಿದರು.

ಆ ಸಂಜೆಯನ್ನು ಇನ್ನಷ್ಟು ರೋಚಕ ಮಾಡಿದ್ದು ಮುಂದಿನ, ‘ವೀರ ಕೇಸರಿ’ಯ ‘ಮೆಲ್ಲುಸಿರೆ ಸವಿಗಾನ.’ ನಿಜಕ್ಕೂ ಒಂದು ಕಾಲದಲ್ಲಿ ಎದೆ ಝಲ್ಲೆನಿಸಿದ ಹಾಡು. ಆ ಕಾಲದ ತರುಣ ಹೃದಯಕ್ಕೆ ಲಗ್ಗೆಹಾಕಿದ್ದ ಈ ಹಾಡನ್ನು ಬೀ.ವಿ ಜಗದೀಶ್‌ ಮತ್ತು ಜ್ಯೋತಿ ಶೇಖರ್‌ ತುಂಬಾ ನವಿರಾಗಿ ಹಾಡಿ ಮನ ತಣಿಸಿದರು. ನಂತರದ ಸೋಮಶೇಖರ್‌ ಅವರಿಂದ ದೇವರಗುಡಿ ಚಿತ್ರದಲ್ಲಿ ಎಸ್‌.ಪಿ ಹಾಡಿರುವ ಜನಪ್ರಿಯ ‘ಚೆಲುವೆಯ ಅಂದದ ಮೊಗಕೆ ಕಣ್ಣೇ ಭೂಷಣ..’’ ಹಾಡಂತೂ ಆ ಕಾರ್ಯಕ್ರಮದ ಉದ್ದೇಶಕ್ಕೆ ಸೂಕ್ತವಾದ ಆಯ್ಕೆ ಎನ್ನಿಸಿತು.

ಈ ಎಲ್ಲಾ ಸುಮಧುರ ಸಂಗೀತದ ಮಧ್ಯೆ ಮಧ್ಯೆ, ಕಾವ್ಯಾ, ಅಶೋಕ್‌ ಮತ್ತು ಗಣೇಶ್‌ ಅವರು ಜನರಿಗೆ ನೇತ್ರಾಲಯ, ದೃಷ್ಟಿದಾನ, ಸದ್ಯದ ಪರಿಸ್ಥಿತಿ ಎಲ್ಲದರ ಬಗೆ ಹಾಸ್ಯ, ಕಥೆ ಎಲ್ಲಾ ಬಳಸಿ ತಿಳಿ ಹೇಳಿ, ಸೇರಿದವರನ್ನು ವಾಗ್ದಾನ ಮಾಡಲು ಪ್ರೇರೇಪಿಸುತ್ತಿದ್ದರು. ಕೊನೆಗೆ ಒಟ್ಟಾದ ಹಣ ನೋಡಿದರೆ, ನಿರೀಕ್ಷೆಗೆ ಮೀರಿ ಯಶಸ್ವಿಯಾದರೂ ಎಂದು ಹೇಳಬಹುದು!

ಎಪ್ಪತ್ತರ ಶತಕದಲ್ಲಿ ಡಾ. ರಾಜ್‌ ಚಿತ್ರರಂಗದ ಉತ್ತುಂಗದಲ್ಲಿದ್ದಾಗ ಬಂದ ಸೂಪರ್‌ಹಿಟ್‌ ಚಿತ್ರ ‘ರಾಜ ನನ್ನ ರಾಜ’. ಇದರಲ್ಲಿ ಪಿ. ಬಿ. ಎಸ್‌ ಮತ್ತು ರಾಜ್‌ ಇಬ್ಬರೂ ಹಾಡಿರುವ ಹಲವಾರು ನೆನಪಿನಲ್ಲಿಳಿಯುವ ಹಾಡುಗಳಿವೆ. ಚಿ. ಉದಯಶಂಕರ್‌ ಅವರ ‘ತನುವು ಮನವು’. ಡಾ. ರಾಜ ಅವರನ್ನು ಗಾಯಕರಾಗಿ ಸ್ಥಾಪಿಸಿದ ಹಾಡುಗಳಲ್ಲಿ ಒಂದು. ಈ ಜಿ. ಕೆ. ವೆಂಕಟೇಶ್‌ ಸಂಗೀತ ಸಂಯೋಜನೆಯ ರಾಜ್‌ - ಜಾನಕಿ ಯುಗಳವನ್ನು ಸುಧೀರ್‌ ನಗರ್‌ಕರ್‌ ಮತ್ತು ಪರಿಮಳ ಮುರಳಿಧರ ರಸವತ್ತಾಗಿ ಹಾಡಿದರು. ರಾಜ್‌ ಅವರ್‌ ಬಗ್ಗೆ ಹೇಳೋದಕ್ಕೆ ಹೊರಟರೆ, ‘‘ಬೇ ಏರಿಯಾದ ಅಣ್ಣಾವ್ರು’’ ಅಶೋಕ್‌ ಕುಮಾರ್‌ ದೂರ ಇರ್ತಾರ್ಯೆ?

ಅಭಿನಯದಲ್ಲಿ ಭಕ್ತನ ಪಾತ್ರವನ್ನು ರಾಜ್‌ ಪೋಷಿಸುವ ಹಾಗೆ ಬೇರೆ ಯಾರಿಗೂ ಸಾಧ್ಯವಿಲ್ಲ ಎನ್ನುವುದಕ್ಕೆ ಸಾಕ್ಷಿ ಭಕ್ತ ಕುಂಬಾರ. ‘ಎಲ್ಲಿ ಮರೆಯಾದೆ ವಿಠಲ’ ಭಕ್ತನ ಸ್ವಾಮಿವಿಯೋಗದ ವೇದನೆಯನ್ನು ಮನಸ್ಸಿನಲ್ಲಿ ಸದಾ ಊರುವಂತೆ ಅಭಿನಯಿಸಿರುವ, ಹಾಡಿರುವ, ಬರೆದಿರುವ ಹಾಡು. ಅದನ್ನು ಅಷ್ಟೇ ಭಾವ ಪರವಶತೆಯಿಂದ ರಾಜ್‌ ಅವರ ನೆನೆಪಿನಲ್ಲಿ ಅಶೋಕ್‌ ಕುಮಾರ್‌ ಅವರು ಹಾಡಿದಾಗ ನೆರೆದವರೆಲ್ಲರ ಕಣ್ಣಲ್ಲೂ ನೀರೆ.

ಅದೇ ಯುಗದ ಎರಡು ಕನಸು ರಾಜ್‌ ಅವರ ಸರ್ವಶ್ರೇಷ್ಠ ಚಿತ್ರಗಳಲ್ಲೊಂದು. ಇದರ ಪ್ರತಿಯಾಂದು ಹಾಡೂ ಸದಾ ಹಸಿರಾಗಿದೆ. ರಾಜನ್‌-ನಾಗೇಂದ್ರ, ಚಿ. ಉದಯಶಂಕರ್‌ ಮತ್ತು ಪಿ.ಬಿ.ಎಸ್‌-ಎಸ್‌.ಜಾನಕಿ ಇದೊಂದು ಸೋಲರಿಯದ ತಂಡ. ‘ತಂ ನಂ ನಂ ನಂ’ ಹುಚ್ಚುಹಿಡಿಸಿದ್ದ ಹಿಟ್‌. ಈ ಯುಗಳವನ್ನು ವನ್ಸ್‌ಮೋರ್‌ ಎಂದು ಕೂಗುವಂತೆ ಹಾಡಿದವರು ಸುಧೀರ್‌ ಮತ್ತು ಆರತಿ ಮೂರ್ತಿ.

ಮುಂದೆ, ದೂರದ ಊರಿಂದ ಬಂದ ‘ಹಮ್ಮೀರ’ನ ಬಗ್ಗೆ ಪರಿಮಳ ಅವರು ಹಾಡಿದರೆ, ಶೇಷಪ್ರಸಾದ್‌ ಅವರು ಗಾರ್ಗಿಯವರ ಜೊತೆ ಆಪ್ತಮಿತ್ರದ ‘ಅಂಕು ಕೊಂಕು’ ಮತ್ತು ಒಬ್ಬರೇ ಜೋಗಿ ಚಿತ್ರದ ‘ಏಳು ಮಲೆ’ ಯನ್ನು ರಸವತ್ತಾಗಿ ಹಾಡಿ ಹೊಸ ಗೀತೆಗಳಿಗೂ ತಾವು ಸೈ ಎಂದು ತೋರಿಸಿದರು.

ಗಿಲಿ ಗಿಲಿ ಗಿಲಕ್ಕು..

Stage showಹುಣಸೂರು ಕೃಷ್ಣಮೂರ್ತಿಯವರು ರಚಿಸಿರುವ ‘ಗಿಲಿ ಗಿಲಿ ಗಿಲಕ್ಕು’ ಅರವತ್ತರ ಸೂಪರ್‌ ಹಿಟ್‌. ಅದೇ ಹಾಡು ಇವತ್ತಿನ ಹೈ-ಲೈಟ್‌ ಕೂಡ! ರಾಜನ್‌-ನಾಗೇಂದ್ರ ರಾಗಸಂಯೋಜಿಸಿ ಎಸ್‌. ಜಾನಕಿ ಹಾಡಿರುವ ಮಣ್ಣಿನ ಸೊಗಡಿನ ಈ ಗೀತೆ ಈ ಕಾಲದಲ್ಲೂ ಸಿಲಿಕಾನ್‌ ವ್ಯಾಲಿಯಲ್ಲೂ ಹೇಗೆ ಕೇಳುಗರನ್ನು ಆಡಿಸಬಲ್ಲುದು ಎನ್ನುವುದಕ್ಕೆ ಅಂದು ಪರಿಮಳ ಅವರು ಹಾಡಿದ್ದೇ ಸಾಕು. ಕೇಳುಗರ ಒತ್ತಾಯ ಹೇಗಿತ್ತು ಅಂದ್ರೆ ಈ ಹಾಡನ್ನು ಅವರು ಕಾರ್ಯಕ್ರಮದ ಕೊನೆಗೆ ಮಾತ್ತೆ ಹಾಡಬೇಕಾಯ್ತು, ಜನರನ್ನು ಕುಣಿಸಬೇಕಾಯ್ತು.

ಜನರನ್ನು ಮತ್ತೆ ಕುಣಿಸಿದ್ದು, ಶೇಷಪ್ರಸಾದ್‌ ಮತ್ತು ಸೋಮಶೇಖರ್‌ ಅವರ ಭರ್ಜರಿ ಎನರ್ಜಿಯ ‘‘ಕಾಲವನ್ನು ಹಿಡಿಯೋರು ಯಾರು ಇಲ್ಲ..’’ ಯುಗಳ ಗೀತೆ ಆದರೆ ನಂತರದ ಗಾರ್ಗಿಯವರ ‘ಮಾತು ಮುರಿದೆ ಮಾತಾಡದೆ’ ಹಾಡು ಎಂದಿನಂತೆ ಜನರನ್ನು ತನ್ನ ಮೋಡಿಗೆ ಸಿಲುಕಿಸಿತ್ತು.

ಈ ಎಲ್ಲ ಹಾಡುಗಾರರಿಗೆ ಸ್ಥಳೀಯ ಕಲಾವಿದರ ವಾದ್ಯವೃಂದ ಯಶಸ್ವಿಯಾಗಿ ಜೊತೆ ನೀಡಿತು. ಈ ಸುಮಧುರ ಸಂಗೀತ ಕಾರ್ಯಕ್ರಮವನ್ನು ಚಿರಪರಿಚಿತ ವಾದಿರಾಜ್‌ ಭಟ್‌ ಅವರು ನವಿರಾದ ಹಾಸ್ಯ ಮತ್ತು ಸಮಯೋಚಿತ ಡೈಲಾಗ್‌ಗಳಿಂದ ಜನರನ್ನು ರಂಜಿಸುತ್ತ ಸಫಲವಾಗಿ ನಡೆಸಿಕೊಟ್ಟರು. ಈ ಸಂಪೂರ್ಣ ಕಾರ್ಯಕ್ರಮವನ್ನು ಅಂಜನ್‌ ಶ್ರೀನಿವಾಸ್‌ ಮತ್ತು ಸೋಮಶೇಖರ್‌ ಅವರು ರೂಪಿಸಿ ಸಂಯೋಜಿಸಿದ್ದರು. ಪ್ರತಿ ಹಾಡಿಗೂ ಕಿವಿಗಿಡಚಿಕ್ಕುವ ಚಪ್ಪಾಳೆ, ಒನ್ಸ್‌ಮೋರ್‌ಗಳ ಸುರಿಮಳೆ ಗಳಿಸಿದ ‘ಸುನಯನ’ ಬಹಳ ಕಾಲದವರೆಗೆ ನೋಡಿದವರ ಮತ್ತು ಕೇಳಿದವರ ಮನದಲ್ಲಿ ನೆಲೆಸುವುದು ಖಂಡಿತ.

ಮತ್ತೆ? ಹಣ ಎಷ್ಟು ಸಂಗ್ರಹ ಆಯ್ತು ಅಂತ ಕೇಳಿದ್ರ?

ನಮ್ಮ ಕನ್ನಡಿಗರ ಹೃದಯ ವೈಶಾಲ್ಯವನ್ನು ಎಷ್ಟು ಹೊಗಳಿದರು ಕಡಿಮೆಯೇ. ಆ ಒಂದು ಕಾರ್ಯಕ್ರಮದಿಂದ ಶಂಕರ ಅವರ ಬೆಂಗಳೂರಿನ ನೇತ್ರಾಲಯಕ್ಕೆ ಕನ್ನಡಕೂಟ ಒಟ್ಟು 60 ಸಾವಿರ ಡಾಲರ್‌ಗೂ ಹೆಚ್ಚು ಹಣವನ್ನು ಸಂಗ್ರಹಿಸಿ ದಾನ ಮಾಡಿತು! ಅಷ್ಟು ಅಲ್ಪ ಸಮಯದಲ್ಲಿ ಅಂತಹ ಮೊತ್ತವನ್ನು ಒಟ್ಟು ಮಾಡುವುದು ಸಣ್ಣ ಮಾತೇನು ಅಲ್ಲ. ನಿಜವಾಗಿಯೂ ಪ್ರಶಂಸಾರ್ಹ. ಈಗ ಅರ್ಥವಾಗುತ್ತೆ ಕೂಟದ ಕಾರ್ಯಕರ್ತರ ಮುಖದಲ್ಲಿನ ಧನ್ಯಭಾವ.

ಹೀಗೆ ಹೊಸ ವರ್ಷದಂದು ಕನ್ನಡ ಕೂಟ ಹೊಸ ದಿಶೆಯ ಕಡೆ ಹೊಸ ಹೆಜ್ಜೆಯನ್ನು ಇಟ್ಟಿದೆ. ಈ ಪ್ರಯತ್ನಕ್ಕೆ ಯಶಸ್ಸಾಗಲಿ ಎಂದು ಹರಸುತ್ತ, ‘‘ಗಿಲಿ ಗಿಲಿ ಗಿಲಕ್ಕು’’ ಅಂತ ಗುಣಗುಣಿಸುತ್ತ ಮನೆಗೆ ಹೊರಟಾಗಲೆ ತಿಳಿದಿದ್ದು ರಾತ್ರಿ ಹತ್ತಾಗಿದೆ ಎಂದು.

ವಿ.ಸೂ: ಈ ವರದಿಯನ್ನು ಮತ್ತು ಯುಗಾದಿ ಕಾರ್ಯಕ್ರಮದ ಛಾಯಾಚಿತ್ರಗಳನ್ನು ಕನ್ನಡಕೂಟದ ಜಾಲತಾಣದಲ್ಲಿ ವೀಕ್ಷಿಸಬಹುದು : www.kknc.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X