• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತೆನಾಲಿರಾಮ : ಟಿಕೆಟ್‌ ದುಡ್ಡಿಗೆ ಮೋಸ ಇಲ್ಲ!

By ವಾಣಿ ರಾಮ್‌ದಾಸ್‌, ಸಿಂಗಪುರ
|

ಜಗ್ಗೇಶ್‌ ನಟನೆ ನೋಡಿ ನಗದೇ ಇರೋದಕ್ಕೆ ಸಾಧ್ಯವೇ ಇಲ್ಲ... ಅಪರೂಪಕ್ಕೆ ನಮಗೆ(ಸಿಂಗಪುರ ಕನ್ನಡಿಗರು) ಒಳ್ಳೆ ಚಿತ್ರ ನೋಡಕ್ಕೆ ಸಿಕ್ತು. ನಕ್ಕು ನಕ್ಕು ಮನ ಹಗುರಾಯ್ತು.

ಸಿಂಗಪುರದ ಕನ್ನಡಿಗರಿಗೆ ಕನ್ನಡ ಸಿನೆಮಾದ ಸುಗ್ಗಿಯ ಕಾಲ. ಸ್ಯಾಂಡಲ್‌ವುಡ್‌ ಎಂಟರ್‌ಟೈನ್‌ಮೆಂಟ್‌ನ ಪ್ರಕಾಶ್‌ ಅವರಿಂದ ತಿಂಗಳಿಗೆ ಒಂದು ಕನ್ನಡ ಚಿತ್ರ ನೋಡುವ ಸದವಕಾಶ.

ಫೆಬ್ರವರಿ 3ರಂದು ಸಂಜೆ ಪ್ರಿನ್ಸ್‌ ಥಿಯೇಟರ್‌ನಲ್ಲಿ ತೆನಾಲಿರಾಮ ಚಿತ್ರ ಪ್ರದರ್ಶನವಿತ್ತು. ಬಹಳ ನಿರೀಕ್ಷೆ ಇಟ್ಟುಕೊಂಡು ಹೋದ ಇತ್ತೀಚಿನ ಕನ್ನಡ ಚಿತ್ರಗಳು ನೀರಸ ಎನಿಸಿದ್ದವು. ಆದ್ದರಿಂದ ಈ ಚಿತ್ರಕ್ಕೆ ಹೆಚ್ಚು ನಿರೀಕ್ಷೆ ಇರಲಿಲ್ಲ. ಕನ್ನಡ ಚಿತ್ರ ಎಂಬ ಒಂದೇ ಕಾರಣಕ್ಕಾಗಿ ಥಿಯೇಟರ್‌ ಹೌಸ್‌ಫುಲ್‌.

ರಮೇಶ್‌ ನಟಿಸಿದ ಒಂದೆರಡು ಚಿತ್ರಗಳ ನೋಡಿದ್ದೆವು. ಜಗ್ಗೇಶ್‌ ನಟಿಸಿದ ಚಿತ್ರ ನಾನು ನೋಡ್ತಾ ಇರೋದು ಇದೇ ಮೊದಲು. ನಗಿಸುವ ಕ್ಲಿಷ್ಟ ಕಲೆಯನ್ನು ಬಹಳ ಸೊಗಸಾಗಿ, ಸಲೀಸಾಗಿ ನಿರ್ವಹಿಸುತ್ತಿದ್ದ ಬಾಲಕೃಷ್ಣ, ನರಸಿಂಹರಾಜು, ದ್ವಾರಕೀಶ್‌ ತರಹ ಜಗ್ಗೇಶ್‌ ಕೂಡ ಸಂಪೂರ್ಣ ಕಾಮೆಡಿಯನ್‌. ಮುಖಚರ್ಯೆ, ಮಾತಿನ ವೈಖರಿ, ಹಾವ-ಭಾವ, ಅವರದ್ದೇ ಆದ ಸ್ಟೈಲಿನ ಭಾಷೆ, ಸನ್ನೆ, ‘ನನ್ನ ನಟನೆ ನಿಮ್ಮನ್ನು ನಗಿಸಲು ಮಾತ್ರ' ಎಂದು ರಾಮನ ಪಾತ್ರದಲ್ಲಿ ಜಗ್ಗೇಶ್‌ ಮಿಂಚಿದ್ದಾರೆ.

ಮೊದಲು ಎಸ್‌.ಎಸ್‌.ಎಲ್‌.ಸಿ ಮುಗ್ಸಿದ್ರೆ ತಾನೆ ಬಿ.ಕಾಂ. ಹಾಗೆ ತೆನಾಲಿಗಿಂತ ರಾಮನದೇ ಮೇಲುಗೈ. ಕಂತೆಗೆ ತಕ್ಕ ಬೊಂತೆ ಎಂಬಂತೆ ಜಗ್ಗೇಶ್‌ಗೆ ರಮೇಶ್‌ ಒಳ್ಳೇ ಜೋಡಿ. ಹೀರೋ ಇದ್ದ ಮೇಲೇ ಹೀರೋಯಿನ್‌ಗಳು ಇರಲೇಬೇಕು ಎಂಬುದು ಕಡ್ಡಾಯ ನಿರ್ಣಯ. ಇನ್ನು ಹೀರೋ-ಹೀರೋಯಿನ್‌ ಇದ್ದ ಮೇಲೆ ಮಮತೆಯ ಮೆಲೋಡ್ರಾಮಕ್ಕೆ ‘ಅಮ್ಮ' ಇರಲೇ ಬೇಕಲ್ಲವೇ. ಈ ಚಿತ್ರದಲ್ಲೂ ಇದ್ದಾರೆ. ಪರಭಾಷೆಯಿಂದ ಆಮದಾದ ಗಝರ್‌ಖಾನ್‌ ವಿಲನ್‌ ಅಭಿನಯವಿಲ್ಲದೆಯೇ ಥಟ್ಟೆಂದು ರಫ್ತಾಗಿ ಬಿಡುತ್ತಾರೆ. ಸ್ವ-ಬಿಟ್ಟು ಚೇಲಾಗಳ ಮಾತು ಕೇಳುವ ನಮ್ಮ ಕನ್ನಡ ವಿಲನ್ನಿನ ಅಭಿನಯ ಪರವಾಗಿಲ್ಲ.

ಶ್ರೀನಾಥ್‌ ನೋ ಚೇಂಜ್‌, ಏರುಪೇರಿಲ್ಲದ ಸೇಮ್‌ ಟೋನ್‌, ಸೇಮ್‌ ಎಕ್ಸ್‌ಪ್ರೆಷನ್‌. ಚಿಕ್ಕದಾಗಿ, ಚೊಕ್ಕದಾಗಿ ನಮ್ಮ ಪಾರ್ಟೂ ಇದೇ ಎಂದು ಇಣುಕು ಬೀರಿದ್ದಾರೆ ಉಮೇಶ್‌, ಮುಖ್ಯಮಂತ್ರಿ ಚಂದ್ರು.

ಎಲ್ಲಾ ಭಾಷೆಗಳ ಚಿತ್ರಗಳಿಂದ ತುಣುಕುಗಳನ್ನು ಆರಿಸಿ ನೇಯ್ದ ಕಥೆ ಇದು. ‘ಕನಸು' ಎಂದರೆ ಹಾಡುಗಳು, ಠಾಕೂ-ಠೀಕೂ ಡ್ರೆಸ್‌ ಮಾಡಿ ಓಲಾಡುವ ಹೀರೋಗಳು, ಹುಡುಗಿಯ ಕಂಡಾಗ ಜೊಲ್ಲು ಸುರಿಸುವಿಕೆ, ಪೆದ್ದು ಪ್ರದರ್ಶನ, ನಿರುದ್ಯೋಗ ಸಮಸ್ಯೆ, ಒಣ ಪೊಗರು, ರಾಜಕೀಯ, ಸಂಶಯ, ಪೋಲೀಸು, ಹೊಡೆ-ಬಡಿದಾಟ, ಪ್ರಣಯ ಸನ್ನಿವೇಶ, ಮಮತೆಯ ಮೆಲೋಡ್ರಾಮ ಎಲ್ಲವೂ ತುಂಬಿದೆ ಈ ಚಿತ್ರದಲ್ಲಿ. ನಿಮಗೆ ಯಾವ ವಿಷಯ ಹೆಚ್ಚು ಪ್ರಿಯವೋ ಆ ಭಾಗ ತೆಗೆದುಕೊಳ್ಳಿ.

ಕೆಲವು ಹಳೆಯ ಹಾಡುಗಳ ತುಣುಕುಗಳು ಅತಿರೇಕ. ಫಾರಿನ್‌ ಲೊಕೇಷನ್‌ ಶೂಟಿಂಗ್‌ ಎಂದು ಸಿಂಗಪುರ ತೋರಿಸುವುದಕ್ಕಾಗಿಯೇ ಸೃಷ್ಟಿಸಿದ ಹಾಡುಗಳು ಅನವಶ್ಯಕ. ಅಲ್ಲಾ, ಇಂದಿನ ಕಾಲದಲ್ಲಿ ಎಸ್‌.ಎಸ್‌.ಎಲ್‌.ಸಿ ಓದಿದವನಿಗೂ ಗೊತು,್ತ ವೀಸಾ, ಪಾಸ್‌ಪೋರ್ಟ್‌ ಮತ್ತು ಇಲ್ಲೀಗಲ್‌ ಇಮಿಗ್ರೇಷನ್‌. ದೇಶ ಸುತ್ತದಿದ್ದರೂ ಟಿ.ವಿ. ಪ್ರಭಾವದಿಂದ ದುಬೈ-ಗೋವಾ ವ್ಯತ್ಯಾಸ ಗೊತ್ತು. ಹಾಗಿರೋವಾಗ ಬಿ.ಕಾಂ ಓದಿದ ಪದವೀಧರ ಅದ್ಯಾಕೆ ಪೆದ್ದುಗೂಬೆ ತರಾ?

ಸ್ಟಾಪ್‌, ಸ್ಟಾಪ್‌ ಸ್ಟಾಪ್‌.. ಸಾರಿ ಕಥೆ, ಲಾಜಿಕ್‌, ಸಾರಾಂಶ, ಸಂದೇಶ, ಅಭಿನಯ ಎಂದು ತಲೆ ಕೆಡಿಸಿಕೊಳ್ಳಬೇಡಿ. ಮನರಂಜನೆ ಎಂಬ ಒಂದೇ ಕಾರಣ ಮನದಲ್ಲಿಟ್ಟುಕೊಂಡು ನಿರ್ಮಿಸಿರುವ ಮಸಾಲೆ ಚಿತ್ರ ತೆನಾಲಿರಾಮ. ಮನೆ ಮಂದಿಯೆಲ್ಲಾ ಒಂದಾಗಿ ಕುಳಿತು ಎರಡೂವರೆ ಗಂಟೆ ಕಾಲ ಚಿತ್ರಮಂದಿರದಲ್ಲಿ ಕುಳಿತು ‘ನಗುವುದೇ ಮಹಾ ಮಂತ್ರಂ' ಎಂದು ಮುಲಾಜಿಲ್ಲದೆ ಒಂದುಗೂಡಿ ನಕ್ಕು, ಮನಸ್ಸನ್ನು ಹಗುರಾಗಿಸಿಕೊಂಡು ಬನ್ನಿ.

ಈ ಚಿತ್ರ ಕೊಡುತ್ತೆ ಹುಣ್ಣಾಗುವಂತೆ ನಗಿಸುವ ಕಲಸುಮೇಲೋಗರದ ವಿಚಿತ್ರಾನ್ನ, ಕೊಟ್ಟ ಹಣಕ್ಕೆ ಮೋಸವಿಲ್ಲ ‘ಪೈಸಾ ವಸೂಲ್‌, ಪೈಸಾ ವಸೂಲ್‌' ಎಂಬ ಸಮಾಧಾನ.

ವಿ.ಸೂ : ಚಿತ್ರ ಪ್ರಾರಂಭದ ಮೊದಲು ಹಿರಿಯ ನಟ ಶ್ರೀಯುತ ಅಶ್ವಥ್‌ ಅವರಿಗೆ ಸಹಾಯಹಸ್ತದ ಕೋರಿಕೆ ಸಭಿಕರನ್ನು ತಲುಪಿತು. 11,500/-ರೂ.ಗಳು ಸಂಗ್ರಹಿಸಲ್ಪಟ್ಟು, ಡಿ.ಡಿ. ಮೂಲಕ ಅಶ್ವಥ್‌ ಅವರ ಮೈಸೂರು ವಿಳಾಸಕ್ಕೆ ಕಳುಹಿಸಲಾಗಿದೆ.

English summary
Kannada comedy movie Tenalirama screened in Singapore. For a change we all laughed.. good one. During the screening kannadaigas in Spore pooled money to help ailing actor K.S. Ashwat in Mysore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X