ಅಬ್ಬಾ! ನಾನು ನೂರು ಲೇಖನ ಬರೆದೆನಾ!


ಬರೆದವರಿಗೇ ನಂಬುವುದಕ್ಕೆ ಆಗುತ್ತಿಲ್ಲ. ಸಂತಸವೆಂದರೆ ಹಾಗಿರುತ್ತದೆ! ಸಿಂಗಪುರದಿಂದ ದಟ್ಸ್‌ಕನ್ನಡ ಕಚೇರಿಗೆ, ಇಮೇಲ್ ಮುಖಾಂತರ ನೂರಾವೊಂದನೆ ಬರಹ ರವಾನಿಸುತ್ತಿರುವ ಲೇಖಕಿಯ ಸ್ವಗತದಲ್ಲಿ, ಕೃತಾರ್ಥಭಾವ ಮತ್ತು ಧನ್ಯತಾಭಾವಗಳು ಮೇಳೈಸಿವೆ. ಈ ಮೈಲಿಗಲ್ಲನ್ನು ಮುಟ್ಟಿದ ಕ್ಷಣ ಚಿಮ್ಮುವ ಆನಂದದ ಕಾರಂಜಿಯಲ್ಲಿ ನೆನೆಯಲು ಸಮಸ್ತರನ್ನೂ ಆಹ್ವಾನಿಸಲಾಗಿದೆ.(-ಸಂಪಾದಕ)


ಶತಮಾನಮ್ ಭವತಿ, ನೂರು ವರುಷ ಸುಖವಾಗಿ ಬಾಳು, ನೂರಕ್ಕೆ ನೂರು ಅಂಕ ತೆಗೀಬೇಕು, ನೂರು ವರುಷ ಆದ್ರೂ ಮರೆಯೋಲ್ಲ, ಸೆಂಚುರಿ ಹೊಡಿಲಪ್ಪಾ.. ಹೀಗೆ ಒಂದು ಸೊನ್ನೆ, ಸೊನ್ನೆಗೆ ಅದೆಷ್ಟು ಮಹತ್ವ. ಕ್ರಿಕೆಟ್ ಆಟದಲ್ಲಂತೂ ವಿಶ್ವದ ಯಾವುದೇ ಆಟಗಾರ "ಸೆಂಚುರಿ" ಬಾರಿಸಿದಾಕ್ಷಣ ಭೇದಭಾವವಿಲ್ಲದೆ ಆತನಿಗಿಂತ ಹೆಚ್ಚಾಗಿ ಕ್ಯಾ ಬಾತ್ ಹೈ ಎಂದು ಟಿ.ವಿ. ಮುಂದೆ ಕುಳಿತು ಕೈ ತಟ್ಟಿ, ಅಭಿಮಾನ ವ್ಯಕ್ತಪಡಿಸುವ ಪ್ರತಿಯೋರ್ವ ಕ್ರಿಕೆಟ್ ಪ್ರೇಮಿ ಪುಳಕಗೊಳ್ಳುವ ಸಂಭ್ರಮ.

ಸಚಿನ್, ಗಂಗೂಲಿ, ಕಪಿಲ್, ಗವಾಸ್ಕರ್ "ಸೆಂಚುರಿ" ಬಾರಿಸುವ ಬಾಲಿಗಾಗಿ ಕಾದು "ವಾಹ್, ಕ್ಯಾ ಬಾತ್ ಹೈ" ಎಂದು ಉದ್ಗಾರಿಸಿ, ಚಪ್ಪಾಳೆ ತಟ್ಟುತ್ತಿದ್ದ ನಾನು, ಇಂದು ಅದುವೆ ಕನ್ನಡದಲ್ಲಿ ನನ್ನದೇ ಲೇಖನಗಳ "ಸೆಂಚುರಿ" ಯ ಲೇಖನ ಬರೆಯಲು ಕುಳಿತಾಗ "ವಾಹ್, ಕ್ಯಾ ಬಾತ್ ಹೈ" ಎಂದುಲಿಯಲಿಲ್ಲ, "ಅಬ್ಬಾ, ನಿಜವಾಗ್ಲೂ ನೂರಾಯಿತೇ, ನಾನಾ ಬರೆದದ್ದು" ಎಂದುಲಿದೆ.

ನೂರು ಲೇಖನಗಳು ಮುಗಿದಾಕ್ಷಣ ಪುಳಕಗೊಂಡ ಮನ ನೆನೆಯಿತು ಅನೇಕ ಓದುಗರನ್ನು, ಭೇಟಿಯಾದ ವ್ಯಕ್ತಿಗಳನ್ನು, ಪ್ರತಿಕ್ರಿಯಿಸಿದ ಪರಿಯನ್ನು, ಚರ್ಚಿಸಿದ ಮುಕ್ತ ವಿಚಾರಗಳನ್ನು, ನೀಡಿದ ಸಲಹೆಗಳನ್ನು, ವಿಮರ್ಶಿಸಿದ ವಿಷಯಗಳನ್ನು, ಸಿಂಗಪುರಕ್ಕೆ ಬಂದ ಉತ್ತಮ ಕರ್ನಾಟಕ ಕಲಾವಿದರನ್ನು.

ಓದಿನಲ್ಲಿ ನೂರಕ್ಕೆ ನೂರು ಅಂಕ ತೆಗೆಯಲಿಲ್ಲ, ಕ್ರಿಕೆಟ್ ಬ್ಯಾಟ್ ಪಿಡಿಯುವ ಗೋಜಿಗೇ ಹೋಗಲಿಲ್ಲ. ಆದರೂ ಬಾರಿಸಿದೆ ನೂರು, "ಅದುವೆ ಕನ್ನಡದ" ಬರಹದ ಮೈದಾನದಲಿ. ನಾನು ಇದೀಗ ಪೂರ್ಣಗೊಳಿಸಿದ್ದು ನೂರು ಲೇಖನಗಳು, ಪಡೆದದ್ದು ನೂರಾರು ಸ್ನೇಹಿತರು.

ನೂರೊಂದು ನೆನಪು ಎದೆಯಾಳದಿಂದ...

ನನ್ನ ಈ ನೂರರ ಸಂತಸಕ್ಕೆ, ನೀಡಿದ ಆತ್ಮತೃಪ್ತಿಗೆ ಕಾರಣೀಭೂತರು ಒಬ್ಬರಲ್ಲ, ಇಬ್ಬರಲ್ಲ ಹಲವರು. ಮನೆಯೇ ಮೊದಲ ಪಾಠಶಾಲೆ, ಮಾತೆಯೇ ಮೊದಲ ಗುರು. ಇದಕ್ಕೆ ನಾನೂ ಹೊರತಲ್ಲ. ಚಿಕ್ಕಂದಿನಲ್ಲಿ ಮನೆಯಲ್ಲಿ ದಿನಪತ್ರಿಕೆ ಕನ್ನಡಪ್ರಭ ಮಾತ್ರ ಲಭ್ಯವಿತ್ತು. ಸುಧಾ, ತರಂಗ, ಪ್ರಜಾಮತ, ಕಸ್ತೂರಿ ಪರಿಚಯಸ್ಥರಿಂದ ಎರವಲು ಪಡೆದು ನಮಗಾಗಿ ಓದಲು ತರುತ್ತಿದ್ದಳು ನನ್ನಮ್ಮ.

ಸಾಹಿತ್ಯಾಸಕ್ತಿ, ವಿಧ್ಯಾಭ್ಯಾಸವೇ ಅಲ್ಲದೆ, ಚಿಕ್ಕಂದಿನಿಂದಲೂ ವಿಷಯ ಸಂಗ್ರಹಣೆ, ಮುಕ್ತ ಚರ್ಚೆಗಳಿಗೆ ತಂದೆ-ತಾಯಿಯರೊಂದಿಗೆ ಮನೆಯಲ್ಲಿ ಅವಕಾಶವಿತ್ತು. ಮಾಸ್ತಿ, ತರಾಸು, ಅನಕೃ, ಗೊರೂರು, ಕುವೆಂಪು, ಕಾರಂತ, ಭೈರಪ್ಪರ ಕಥೆ, ಕಾದಂಬರಿಗಳನ್ನು ಓದಲು ಪ್ರೇರೇಪಿಸಿದ್ದು ನನ್ನ ತಾಯಿ-ತಂದೆ.

ಕೈ ಪಿಡಿದು ವರ್ಣಮಾಲೆ ಕಲಿಸಿದ ಮೇಷ್ಟ್ರು ಅಯ್ಯಂಗಾರ್ ಮೇಷ್ಟ್ರು. ಐದನೆಯ ತರಗತಿಯಲ್ಲಿ ಬಿಳಿಗಿರಿಯ ಪ್ರವಾಸದ ಪ್ರಬಂಧ ಓದಿ ಮೆಚ್ಚುಗೆ ಸೂಸಿ, ಎಲ್ಲರ ಕೈಯಲ್ಲಿ ಚಪ್ಪಾಳೆ ತಟ್ಟಿಸಿದ್ದರು ಶವಣ್ಣ ಮಾಸ್ತರ್. ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ 100/150 ಅಂಕ ಪಡೆದಾಗ ಕನ್ನಡ ನಿಘಂಟನ್ನು ಕೈಯಲ್ಲಿತ್ತು ಶಹಭಾಷ್ ಎಂದು ಬೆನ್ನು ತಟ್ಟಿದ್ದರು ಪಿ. ನಾರಾಯಣ ನಾವಡ.

ಕಾಲೇಜಿನ ದಿನಗಳಲಿ ಕಡೆಯ ಬೆಂಚಿನಲಿ ಓದಿದೆ ತ್ರಿವೇಣಿ, ವಾಣಿ, ಉಷಾನವರತ್ನರಾಮ್, ಸಾಯಿಸುತೆ, ರಾಧಾದೇವಿ ಕಾದಂಬರಿಗಳನು. ಎಂಬತ್ತರ ದಶಕದಲಿ ಬೆಂಗಳೂರಿನ ಅಂದಿನ ಸರಕಾರಿ ಗ್ರಂಥಾಲಯಗಳಲ್ಲಿ ಇವರ ಕಾದಂಬರಿಗಳಿಗೆ ಕೊರತೆ ಇರಲಿಲ್ಲ. ವಾರ್ಷಿಕ ಫೀ ಕೇವಲ 10 ರೂಗಳಿತ್ತು. ಹರೆಯದ ನಾವೆಯಲಿ, ಹೇಳಬಯಸದ ಆಕರ್ಷಣೆಯ ಮೋಡಿಯಲಿ ಕನಸು ಕಾಣುತ್ತಾ ಪುಸ್ತಕಗಳ ಮಧ್ಯೆ ಗೀಚಿದ್ದೆ ನಾಲ್ಕಾರು ಪ್ರೇಮ ಕವನಗಳ ಸಾಲು. ಯಾರಿಗೂ ತೋರಿಸುವ ಧೈರ್ಯವಿರದೆ ಅದು ಹರಿದು ಸೇರಿತ್ತು ಗುಂಡಿಯ ಪಾಲು. ಕನ್ನಡ ಪರೀಕ್ಷೆಗೆಂದು ಬರೆದ ಒಂದು ಪ್ರಬಂಧ ಓದಿ "ಬರವಣಿಗೆಯ ಹವ್ಯಾಸ ಮಾಡಿಕೋ, ನಿನ್ನ ಮನದ ಭಾವನೆಗಳ ಹೊರಸೂಸುವಿಕೆ, ಬರೆಯುವ ಶೈಲಿ, ದಿಟ್ಟ ಮಾತು, ಭಾಷೆ ಬಹಳ ಚೆನ್ನಾಗಿದೆ" ಎಂದ ಶೇಷಾದ್ರಿಪುರಂ ಕಾಲೇಜಿನ ಪ್ರಾಧ್ಯಾಪಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಂದಿನ ಮಾತು ನನಗೆ ಹುಡುಗಾಟಿಕೆಯಾಯಿತು. "ಸರ್, ತಮಾಷೆ ಮಾಡಬೇಡಿ, ನಾನು ಹಾಗೂ ಬರವಣಿಗೆ" ಎಂದು ತರಲೆಯಾಡಿದ್ದೆ. ಇಂದು ನೂರು ಲೇಖನಗಳು ಮುಗಿದಾಗ ಅಂದು ಬಾಲು ಅವರ ಮಾತು ಪಾಲಿಸಿದ್ದರೆ ಚೆನ್ನಾಗಿತ್ತು ಎಂದನಿಸಿದ್ದು ನಿಜ.

ಮದುವೆಯ ನಂತರ ಮುಂಬೈಯಲ್ಲಿ ಜೆ.ಕೆ ಶಾಲೆಯ ಪ್ರಾಂಶುಪಾಲರಾಗಿದ್ದ ಕನ್ನಡಿಗರೇ ಆಗಿದ್ದ ಎಸ್.ಆರ್.ನಾಗರಾಜರಾವ್ ಅವರೊಟ್ಟಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಕರ್ಮವೀರ ಪತ್ರಿಕೆಗೆ ಹೊರನಾಡ ಕನ್ನಡಿಗರ ಸಾಧನೆಯ ಮೇಲೆ ಬರೆದ ಲೇಖನವೊಂದು ಪ್ರಕಟಗೊಂಡು 56 ರೂಗಳ ಚೆಕ್ ನೀಡಿತ್ತು. ಆ ಲೇಖನ ಓದಿದ ಮುಂಬೈ ಕರ್ನಾಟಕ ಸಂಘದ ಗಿರಿಧರ ಕಾರ್ಕಳ ಅವರಿಂದ ಮುಂಬೈ ಕರ್ನಾಟಕ ಸಂಘದ "ಸ್ನೇಹಸೇತು" ಮಾಸ ಪತ್ರಿಕೆಗೆ ಬರೆಯಲು ಕೋರಿಕೆ ಬಂದಿತ್ತು.

ಆ ದಿನಗಳಲ್ಲಿ ಕಂಪ್ಯೂಟರ್ ಜಾರಿಯಲ್ಲಿದ್ದರೂ ಬರಹದ ಅರಿವಿರಲಿಲ್ಲ. ಲೇಖನ ಪೇಪರಿನಲ್ಲಿಳಿಸಿ, ಪೋಸ್ಟ್ ಮಾಡೋ ಕಾಲವದಾಗಿತ್ತು. ಮಗು ಚಿಕ್ಕದು, ಟೈಮಿಲ್ಲ ಎಂಬ ಸೋಮಾರಿತನ ತೋರಿದರೂ ಮೂಡಿ ಬರುತ್ತಿತ್ತು ಆಗೊಂದು ಈಗೊಂದು ಲೇಖನ. ಹೀಗೆ ಬರವಣಿಗೆಯ ಪಯಣದಲಿ ಕುಳಿತಂತೇ ನೂರೊಂದು ನೆನಪಿನ ಎದೆಯಾಳದಿಂದ ನುಸುಳಿ ಹೊರಬಂದರು ನನ್ನ ಶಿಕ್ಷಕರು.

ನಡೆದು ಬಂದ ದಾರಿ...

ಮುಂಬೈ ಬಿಟ್ಟು ಸಿಂಗಪುರಕ್ಕೆ ಬಂದು ವರುಷಗಳು ಕಳೆದಿತ್ತು. ಪರದೇಶಿ ನಾನಾದೆ ಎಂಬ ಒಂಟಿತನ ಕಾಡಿತ್ತು. ಅಂತರ್ಜಾಲದಲಿ ಕನ್ನಡ ದಿನಪತ್ರಿಕೆ ಹುಡುಕಲು ಹೊರಟ ನನಗೆ ಸಿಕ್ಕಿದ್ದು "ಅದುವೆ ಕನ್ನಡದ ವೆಬ್ ಸೈಟ್". ಕಣ್ಣಾಡಿಸಿದಂತೆ ಕಣ್ಣೋಟ ನಿಂತಿತು "ನೀವೂ ಬರೆಯಿರಿ" ಎಂಬ ಶೀರ್ಷಿಕೆಯನ್ನೋದಿ.

"ನೀನೂ ಬರೆಯಬಾರದೇಕೆ" ಎಂದುಲಿಯಿತು ಒಳದನಿ. ಅಯ್ಯೋ ಯಾರು ಓದ್ತಾರೆ ಎಂದು ಮರುಗುಟ್ಟಿತು ಮಾರ್ದನಿ. ಈ ತಳಮಳ ಅರ್ಧಾಂಗನಲ್ಲಿ ಒಡಂಬಡಿಸಿದಾಗ " ಹೊಸ ದೇಶ, ಹೊಸ ಪರಿಸರ, ಹೊಸ ಜನ, ಹೊತ್ತೂ ಹೋಗುತ್ತೆ, ವಿಷಯಗಳು ತಿಳಿಯುತ್ತೆ, ಬರವಣಿಗೆಯೂ ಇಂಪ್ರೂವ್ ಆಗುತ್ತೆ, ಬರೆದು ಕಳಿಸು" ಎಂಬ ಅವರ ಪ್ರೋತ್ಸಾಹ, ಭರವಸೆ ನೀಡಿತು ಚೇತನ ಮೂಡಿತೊಂದು ದೇವೀ ಸ್ತುತಿ. ಅಂದಿನಿಂದಾದರು ನನ್ನವರು ನನ್ನ ಲೇಖನಗಳಿಗೆ ಫರ್ಸ್ಟ್ ರೀಡರ್, ಬೆಸ್ಟ್ ಎಡಿಟರ್ ಹಾಗೂ ವರ್ಸ್ಟ್ ಕ್ರಿಟಿಕ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+