• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾಷೆಯನ್ನು ಕಲಿಸುವ, ಮರೆಸುವ ಈ ನಾಯಿ ಸಾಕಪ್ಪಾ ಸಾಕು

By Staff
|

ಅಮೆರಿಕಾದ ನಾಯಿಗಳಿಗೆ ಕನ್ನಡ ಗೊತ್ತಿರುವುದಕ್ಕೂ ಕರ್ನಾಟಕದ ನಾಯಿಗಳಿಗೆ ಇಂಗ್ಲಿಷ್‌ ಅಭ್ಯಾಸವಾಗಿರುವುದಕ್ಕೂ ಎಲ್ಲಿಂದೆಲ್ಲಿಯದಾದರೂ ಸಂಬಂಧ ಉಂಟೆ? ಬೀದಿ-ಸಾಕು ನಾಯಿಗಳ ವರ್ತನೆಯ ಬಗೆಗೆ ಭಯ ಮಿಶ್ರಿತ ಗೌರವದ ಬರಹ...

Kala... Chennagiddeeya?ಕೆಲವು ವರ್ಷಗಳ ಹಿಂದೆ, ಶಿಕಾಗೋದಲ್ಲಿದ್ದಾಗ, ನನ್ನ ಸ್ನೇಹಿತರೊಬ್ಬರ ಮನೆಗೆ ಹೋಗಿದ್ದೆ. ಬೆಂಗಳೂರಿನಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸಯನ್ಸ್‌ನಲ್ಲಿ ಬಯೋಕೆಮಿಸ್ಟ್ರಿಯಲ್ಲಿ ನನ್ನ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿರುವಾಗಲಿಂದಲೇ ಅವರೂ, ಅವರ ಧರ್ಮಪತ್ನಿಯೂ ನನಗೆ ಪರಿಚಿತರು. ಪಿಎಚ್‌.ಡಿ. ಗಾಗಿ ಆ ದಂಪತಿಗಳಿಬ್ಬರೂ ಅಲ್ಲೇ ಅಭ್ಯಾಸ ಮಾಡುತ್ತಿದ್ದರು. ಅವರ ಧರ್ಮಪತ್ನಿ ಬಿಸಿಬೇಳೆ ಬಾತ್‌ ಮಾಡುವುದರಲ್ಲಿ ನಿಸ್ಸೀಮರು. ಹಾಗಾಗಿ, ರಸನ ಗ್ರಂಥಿ ಚುರುಕಾಗಿದ್ದ ನಾನು ಅಂದು ಅವರ ಮನೆಗೆ ಬಿಸಿಬೇಳೆ ಬಾತ್‌ನ ನೀರೀಕ್ಷೆಯಲ್ಲೇ ಹೋಗಿದ್ದೆ.

ದಂಪತಿಗಳಿಬ್ಬರೂ ಆದರದಿಂದ ನಮ್ಮನ್ನು ಸ್ವಾಗತಿಸಿದರು. ಅವರ ಧರ್ಮಪತ್ನಿಯ ಮುಖದಿಂದ ನಗು ಮಾಸದೆ ಇನ್ನೂ ತೇಲಿ ಬರುತ್ತಿದ್ದಂತೆ ಅವರನ್ನು ಕೇಳಿದೆ: ‘ಈದಿನ ನನ್ನ ಪ್ರೀತಿಯ ಅಡುಗೆ ತಯಾರಿಸಿದ್ದೀರಲ್ಲವೇ....?’ ಎಂದು. ಅವರು ನಗುತ್ತ, ‘ಅಯ್ಯೋ...., ನಿಮ್ಮ ಇಷ್ಟದ ಬಿಸಿಬೇಳೆ ಬಾತ್‌ ಮಾಡದೆ ಇರುತ್ತೇನೆಯೇ, ನಿಮ್ಮನ್ನು ಬರಹೇಳಿ....’ ಎಂದು ಉತ್ತರವಿತ್ತುದು ನನ್ನ ರಸನ ಗ್ರಂಥಿ ಇನ್ನೂ ಚುರುಕಾಗಲು ಕಾರಣವಾಯ್ತು. ಅವರ ಫ್ಯಾಮಿಲಿ ರೂಂನಲ್ಲಿ ಕುಳಿತು ಪಾನೀಯ ಹೀರುತ್ತ, ಇನ್‌ಸ್ಟಿಟ್ಯೂಟ್‌ನ ವಿಚಾರವಾಗಿ ಅದು, ಇದು ಎಂಬಂತೆ ಹರಟೆ ಹೊಡೆಯುತ್ತಿದ್ದೆವು.

ಅಷ್ಟರಲ್ಲಿ ಅಲ್ಲಿಗೆ ಅವರ ಕರಿ ವರ್ಣದ ನಾಯಿ (ಲ್ಯಾಬ್ರಡೋರ್‌) ಬಾಲ ಅಲ್ಲಾಡಿಸುತ್ತ ನನ್ನನ್ನು ನೆಕ್ಕಲೆಂದೋ ಏನೋ (ನಾಯಿಗಳಿಗೆ ಅಂಥ ಕೆಟ್ಟ ಅಭ್ಯಾಸ ಯಾರು ಮಾಡಿಕೊಟ್ಟರೋ!) ನನ್ನ ಬಳಿಗೆ ಬರುತ್ತಿತ್ತು. ನನಗೋ ನಾಯಿಯೆಂದರೆ ಚೂರೂ ಇಷ್ಟವಿಲ್ಲ. ನಾಯಿಯನ್ನು ಯಾರಾದರೂ ಸಾಕಿಕೊಂಡಲ್ಲಿ ಅವರಿಗೆ ಬಹುಶಃ ಬುದ್ಧಿ ಭ್ರಮಣೆಯೆಂದೇ ತಿಳಿದುಕೊಂಡವ ನಾನು. ಮೇಲಾಗಿ ನಾಯಿಯೆಂದರೆ ನನಗೆ ಇಲ್ಲದ ಭಯ. ಹಾಗಾಗಿ ನನ್ನ ಮಿತ್ರರಿಗೆ, ‘ನನಗೆ ನಾಯಿ ಕಂಡರಾಗುವುದಿಲ್ಲ.....’ ಎಂದು ಸ್ವಲ್ಪ ನಡುಗುವ ಸ್ವರದಲ್ಲೇ ಹೇಳಿದೆ. ಕೂಡಲೆ ಆ ನಾಯಿ ನನ್ನನ್ನು ನೋಡಿ ಬೊಗಳಲು ಪ್ರಾರಂಭಿಸಿದಾಗ ನನ್ನ ಭಯ ಇನ್ನೂ ಹೆಚ್ಚಿಸಿತು. ಆಗ ನನ್ನ ಸ್ನೇಹಿತರು ‘ಕಾಳಾ...., ಸಾಕು ನಿಲ್ಲಿಸು. ಹೋಗು...., ಒಳ್ಗ್ಹೋಗು... ಹ್ಞೂ.. ಸೀದಾ.... ಈಗ್ಲೇ....’ ಎಂದು ಆಜ್ಞಾಪಿಸಿದರು.

ತಕ್ಷಣವೇ ನಾಯಿ ಚಾಚೂ ಎನ್ನದೆ, ಕುಞಿಗುಟ್ಟುತ್ತ, ಅಲ್ಲಿಂದ ಸರಿದು ಒಳಕ್ಕೆ ಹೋಯ್ತು. ನನಗೆ ಆಶ್ಚರ್ಯದ ಮೇಲೆ ಆಶ್ಚರ್ಯ! ಮೊದಲಿಗೆ ಆ ನಾಯಿಯ ಹೆಸರನ್ನು ಕೇಳಿ. ಅಮೆರಿಕದಲ್ಲಿ ನಾಯಿಗಳಿಗೆ ‘ಟಾಮೀ’, ‘ರೋವರ್‌’ ‘ಸ್ನೂಪಿ’, ಇತ್ಯಾದಿ ಹೆಸರುಗಳಿಂದ ಕರೆಯುವುದನ್ನು ಕೇಳಿದ್ದೆ. ಆದರೆ ಅಚ್ಚ ಕನ್ನಡ ‘ಕಾಳ’ ಎಂಬ ಹೆಸರನ್ನು ನಾನಿದುವರೆಗೂ ಕೇಳಿರಲಿಲ್ಲ. ಎರಡನೆಯದಾಗಿ, ನಾಯಿಗೆ ಕನ್ನಡ ಅರ್ಥವಾದುದು.

‘ಪರವಾಗಿಲ್ಲ ನೀವು.... ನಾಯಿಗೆ ಅಚ್ಚಕನ್ನಡ ಹೆಸರಿಟ್ಟು ಕನ್ನಡ ಭಾಷೆಯನ್ನೂ ಕಲಿಸಿದ್ದೀರಿ...’ ಎಂದು ನನ್ನ ಸ್ನೇಹಿತರನ್ನು ಹೊಗಳಿದೆ.

‘ನೋಡಿ ಅಂವ ಕರಿಕಾಳನಂತಿಲ್ಲವೇ.....? ಅದಕ್ಕೇ ಅವನ ಹೆಸರು ‘ಕಾಳ’. ಇನ್ನು ನಾವು ಮನೆಯಲ್ಲಿ ಮಾತಾಡುವುದು ಕನ್ನಡಲ್ಲೇ. ಹಾಗಾಗಿ, ಕಾಳನಿಗೂ ಕನ್ನಡ ಅಭ್ಯಾಸವಾಗಿದೆ. ನಾವು ಹೇಳುವುದೆಲ್ಲಾ ಅವನಿಗೆ ಅರ್ಥವಾಗುತ್ತದೆ... ನೀವು ನಾಯಿ ಕಂಡರಾಗುವುದಿಲ್ಲವೆಂದು ಹೇಳಿದ್ದು ಅವನಿಗೆ ಅರ್ಥವಾಗಿ ತನ್ನ ಅಸಮಾಧಾನವನ್ನು ಬೊಗಳಿಕೆಯಿಂದ ವ್ಯಕ್ತಪಡಿಸಿತು, ಅಷ್ಟೆ....’ ಎಂದು ಅವರು ಉತ್ತರವಿತ್ತರು.

ಅವರನ್ನು ಅಭಿನಂದಿಸುತ್ತ ‘ಅಬ್ಬಾ...., ನಿಮ್ಮ ಸಹಾಸವನ್ನು ಮೆಚ್ಚಲೇ ಬೇಕು.... ಮುಂದೆ ‘ಕಾಳ’ ಕನ್ನಡ ಮಾತಾಡಲೂ ಕಲಿತಾನು, ನೀವು ಸತತ ಪ್ರಯತ್ನಪಟ್ಟರೆ....’ ಎಂದು ಹೇಳಿದೆ.

‘ಅದು ಮಾತ್ರ ನಿಮ್ಮ ಕಲ್ಪನೆಯ ವ್ಯಾಪ್ತಿಯ ಎಲ್ಲೆ ಮೀರಿದ ಮಾತು, ಸ್ಟ್ರೆಚಿಂಗ್‌ ಯುವರ್‌ ಇಮ್ಯಾಜಿನೇಶನ್‌ ಟೂ ಫಾರ್‌....’ ಎಂದು ಹೇಳುತ್ತ ಅವರು ನಕ್ಕರು. ನಾನೂ ಅವರ ನಗುವಿನಲ್ಲಿ ಕೂಡಿಕೊಂಡೆ.

*

ಈ ಸಂಗತಿ ನಡೆದು ಈಗ ಹಲವು ವರ್ಷಗಳೇ ಸಂದಿವೆ. (ಆ ನನ್ನ ಆಪ್ತರೂ ಈಗ ಕಣ್ಮರೆಯಾಗಿದ್ದಾರೆ,) ಒಮ್ಮೆ ನನ್ನ ಬಂಧುಗಳ ಮನೆಗೆ ಹೋದಾಗ ಅಲ್ಲಿನ ಅನುಭವ ಮೇಲಿನ ಅನುಭವಕ್ಕೆ ತೀರ ಭಿನ್ನವಾಗಿ ಕಂಡಿತು. ಅವರ ಮನೆಯಲ್ಲಿ ಒಂದು ಆಲ್‌ಶೇಷನ್‌ ನಾಯಿಯೊಂದಿತ್ತು. ದೂರದಿಂದ ಅದನ್ನು ಕಂಡರೇ ಭಯವಾಗುತ್ತಿತ್ತು. ನಾನು ನನ್ನ ಬಂಧುಗಳನ್ನು ಕೇಳಿಕೊಂಡೆ, ‘ದಯವಿಟ್ಟು ನಾಯಿಯನ್ನು ದೂರ ಬೇರೆ ಕಡೆ ಕಳುಹಿಸಿ.... ನನಗೆ ನಾಯಿಯೆಂದರೆ ಅದೇನೋ ಅಸಹ್ಯ ಹಾಗೂ ಭಯ....’ ಎಂದು. ಆಗ ಅವರು, ‘ಸೀಸರ್‌....., ಗೋ..., ಗೆಟ್‌ ಬ್ಯಾಕ್‌ ಟು ಯುವರ್‌ ಕೆನೆಲ್‌....’ ಎಂದು ಆಜ್ಞಾಪಿಸಿದರು. ಕೂಡಲೆ ನಾಯಿ ತನ್ನ ಗೂಡಿಗೆ (ಅವರು ಆಜ್ಞಾಪಿಸಿದ ಗೂಡಿಗೆ) ತೆರಳಿತು.

ಅಚ್ಚ ಕನ್ನಡ ನಾಡಿನಲ್ಲಿ ನಾಯಿಯೂ ಇಂಗ್ಲಿಷ್‌ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತಿದೆಯಲ್ಲಾ... ಎಂದು ನಾನು ಆಶ್ಚರ್ಯ ಪಟ್ಟೆ. ಸಧ್ಯ ನಾನು ಇಂಗಿಷ್‌ನಲ್ಲಿ ನನ್ನ ಭಯವನ್ನು ವ್ಯಕ್ತಪಡಿಸಲಿಲ್ಲವಲ್ಲಾ.. ಎಂದು ಸಮಾಧಾನಪಟ್ಟೆ. ನನ್ನ ಬಂಧುಗಳೇನಾದರೂ ‘ಸೀಸರ್‌, ಹೋಗು ನಿನ್ನ ಗೂಡಿಗೆ...’ ಎಂದು ಆಜ್ಞಾಪಿಸಿದ್ದಲ್ಲಿ ನಾಯಿಗೆ ಅರ್ಥವಾಗುತ್ತಲೇ ಇರಲಿಲ್ಲವೇನೋ! ಅವನ ಹೆಸರೂ ಪಾಶ್ಚಾತ್ಯದ ಹೆಸರು! ಬೆಂಗಳೂರಿನಲ್ಲಿ ಈಗ ಕನ್ನಡ ಮಾತಾಡುವವರ ಸಂಖ್ಯೆ ವಿರಳವಾಗುತ್ತಿರುವುದಂತೂ ನಿಜ. ಆ ಗುಂಪಿಗೆ ಶ್ವಾನಗಳೂ ಸೆರಿಕೊಂಡಿವೆ ಎಂದು ಅಚ್ಚರಿಪಟ್ಟೆ.

ಎಂಥ ವಿಪರ್ಯಾಸ! ಒಂದೆಡೆ ಇಂಗ್ಲಿಷ್‌ ಮಾಧ್ಯಮದ ಅಮೆರಿಕದಲ್ಲಿ ಕನ್ನಡಿಗರೊಬ್ಬರು ನಾಯಿಯ ಜೊತೆಗೂ ಕನ್ನಡದಲ್ಲೆ ಸಂಭಾಷಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇನ್ನೊಂದೆಡೆ, ಕನ್ನಡವೇ ಮಾತೃ ಭಾಷೆಯಾಗಿರುವ (ಹಾಗೆಂದು ನಾನು ತಿಳಿದುಕೊಂಡಿದ್ದೇನೆ) ಬೆಂಗಳೂರಿನಲ್ಲಿ ನಾಯಿಗಳಿಗೂ ಕನ್ನಡವೇ ಅರ್ಥವಾಗದಿರುವ ಸಂದರ್ಭ!

ಆದರೆ, ಈಗ ಬೆಂಗಳೂರಿನಲ್ಲಿ ನಾಯಿಗಳ ಪ್ರಾಣಕ್ಕೇ ಅಪಾಯ ಬಂದಿದೆ. ಅಮೆರಿಕದಲ್ಲೂ ಕೂಡ ಸಾಕು ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಬಂದೊದಗಿದೆ. ಆದರೆ ವ್ಯತ್ಯಾಸವಿಷ್ಟೆ. ಬೆಂಗಳೂರಿನಲ್ಲಿ ಬೀದಿ ನಾಯಿಗಳ ಕಾಟ ಜಾಸ್ತಿಯಾಗಿ, ಕೆಲವು ನಾಯಿಕಡಿತದಿಂದ ಸಾವು ಒದಗಿದ್ದುದರಿಂದ, ಬೀದಿ ನಾಯಿಗಳನ್ನು ಕಂಡಲ್ಲಿ ಕೊಲ್ಲುವ ಯೋಜನೆ ನಡೆಯುತ್ತಿದೆ. ಆದರೆ, ಅಮೆರಿಕದಲ್ಲಿ ಪ್ರಮಾದದಿಂದ ಸಾಕು ಪ್ರಾಣಿಗಳ ಅಹಾರದಲ್ಲಿ ವಿಷ ಬೆರೆತು ಹಲವು ನಾಯಿಗಳ ಆರೋಗ್ಯ ಕೆಟ್ಟಿದ್ದರಿಂದ ಕಳವಳ!

ಅಮೆರಿಕದಲ್ಲಿ ನಾಯಿಗಳಿಗೆ ಒದಗಿಸುವ ಪುಷ್ಟಿಕರ ಆಹಾರ ಬೆಂಗಳೂರಿನ ಬೀದಿ ನಾಯಿಗಳಿಗೆಲ್ಲಿ ದೊರತೀತು! ಅಮೆರಿಕದಲ್ಲಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಣ ಮಾಡುವ ಯೋಜನೆಗಳಿವೆ. ಭಾರತದಲ್ಲಿ ಅವುಗಳ ಸಂಖ್ಯೆ ಲೆಕ್ಕವಿಲ್ಲದಷ್ಟು ಹೆಚ್ಚಿವೆ. ಅವುಗಳ ನಿಯಂತ್ರಣಕ್ಕೆ ಯಾವ ಯೋಜನೆಯೂ ಇಲ್ಲವೆಂದೆನಿಸುತ್ತಿದೆ. ಆ ಬಗ್ಗೆ ಸರಕಾರ ಯೋಚಿಸುವ ಸಮಯ ಬಂದಿದೆ. ಹಾಗೆಯೇ ಕರ್ನಾಟಕದಲ್ಲಿ ಕನ್ನಡಿಗರು ತಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಯೋಚನೆಯನ್ನೂ ಮಾಡಬೇಕಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X