• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಾಡಾನೆಗಳ ಚಕ್ರವ್ಯೂಹದಲ್ಲಿ ...

By Staff
|

ಮಂಜು ನೋಡೇ ಇಲ್ಲಿ ಯಾರು ಬಂದಿದ್ದಾರೆ ಎನ್ನುತ್ತ ಬಾಗಿಲು ತೆರೆದರು ಜಾನಕಮ್ಮ. ನೋಡಿದರೆ ಗೆಳತಿಯರ ಹಿಂಡು !

ಬಿ.ಕಾಂ. ಫೈನಲ್‌ನ ಅಂತಿಮ ಪರೀಕ್ಷೆ ಮುಗಿದು ಶಶಿ, ಉಮ, ಸರೋಜ, ಶ್ಯಾಮಲ ಗೆಳತಿ ಮಂಜುವಿನ ಮನೆಗೆ ಬಂದಿದ್ದರು. ಪರೀಕ್ಷೆಯ ಭಾರ ಇಳಿದು ಎಲ್ಲರ ಮುಖದಲ್ಲೂ ಚಿಂತೆ ಸರಿದಿತ್ತು. ಯಾರಿಗೂ ಪರೀಕ್ಷೆಯ ಬಗ್ಗೆ ಮಾತನಾಡುವ ಇಷ್ಟವಿರಲಿಲ್ಲ. ಮಂಜುವಿನ ಮದುವೆ ಮೇ ತಿಂಗಳಲ್ಲಿ ದಿನಕರನೊಂದಿಗೆ ನಡೆಯುವುದಿತ್ತು. ಅವಳನ್ನು ಕೀಟಲೆ ಮಾಡಿ ಗೋಳು ಹೊಯ್ದುಕೊಳ್ಳಲು ಮತ್ತು ಮದುವೆಯ ಬಂಧನಕ್ಕೆ ಒಳಗಾಗುತ್ತಿದ್ದ ಮಂಜುವಿನ ಜೊತೆ ಸಮಯ ಕಳೆಯಲು ಗೆಳತಿಯರ ದಂಡು ಮಂಜುವಿನ ಕೋಣೆ ಸೇರಿತ್ತು. ಅವರ ನಗು ಮನೆಯಲ್ಲಿ ಆಗಲೇ ಮದುವೆಯ ಕಳೆ ತಂದಿತ್ತು.

ಏನಮ್ಮಾ, ಎಲ್ಲರೂ ಪರೀಕ್ಷೆ ಹೇಗೆ ಮಾಡಿದ್ದೀರಾ, ಮುಂದೆ ಏನು ಮಾಡಬೇಕು ಅಂತ ಇದೀರಾ ಎನ್ನುತ್ತಾ ತಿಂಡಿಯ ತಟ್ಟೆಯಾಂದಿಗೆ ಒಳ ಬಂದರು ಜಾನಕಮ್ಮ. ಶಶಿ ನಿನಗೂ ಕೂಡ ಮದುವೆಯಂತೆ? ಯಾರೇ ಗಂಡು, ಎನ್ನುತ್ತಾ ಶಶಿಯ ಕೈಗೆ ತಿಂಡಿಯ ತಟ್ಟೆಯನ್ನಿತ್ತರು.

Elephant in the Biligiri Hills forestಅಯ್ಯೋ ಅಮ್ಮಾ, ಶುರುವಾಯಿತಾ ನಿನ್ನ ಪುರಾಣ, ಪರೀಕ್ಷೆ ಮುಗಿದು ನಾವು ಈಗ ತಾನೇ ಸೇರಿದ್ದೇವೆ, ನಿನ್ನ ಮಾತೆಲ್ಲಾ ಆಮೇಲೆ, ನಮ್ಮನ್ನು ಬಿಡು. ಬಹಳ ಮಾತನಾಡಬೇಕು ಎಂದು ಬಾಯಿ ಮಾಡಿದ ಮಂಜುವಿನ ಮಾತಿಗೆ, ಇರೇ ಸ್ವಲ್ಪ ಎಂದು ತಡೆದು ನೋಡ್ರೇ, ಮಂಜುಗೆ ಸೀರೆ ತೆಗೀಬೇಕು ಅದಕ್ಕೆ ನಾನು ಮತ್ತು ಇವರು ಭಾನುವಾರ ಮೈಸೂರಿಗೆ ಹೋಗಿ ಅಲ್ಲಿಂದ ನಮ್ಮ ಮನೆ ದೇವರಾದ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿಕೊಂಡು ಬರಬೇಕು ಅಂತ ಇದೀವಿ. ಹೇಗೂ ನಿಮ್ಮಗಳಿಗೂ ಕಾಲೇಜು, ಓದು ಏನಿಲ್ಲಾ. ಯಾಕ್ರೆ ನೀವೆಲ್ಲಾ ಬರಬಾರದು. ನನಗೂ ಸಹಾಯವಾಗುತ್ತದೆ. ನಿಮಗೂ ಮಂಜುವಿನ ಜೊತೆ ಸಮಯ ಕಳೆದಂತಾಗುತ್ತದೆ. ಎಲ್ಲರೂ ಹೋಗೋಣ ಏನಂತೀರ, ನಾನು ನಿಮ್ಮ ತಂದೆ, ತಾಯಿಗಳಿಗೆ ಫೋನ್‌ ಮಾಡ್ತೀನಿ. ಜೀಪ್‌ ಮಾಡಿಕೊಂಡು ಹೋಗಿ ಬರೋಣ ಎಂದಾಗ ಹೋ ಆಗಲಿ ಎಂದು ನಾಲ್ವರೂ ಒಕ್ಕೊರಲಿನಿಂದ ಕೂಗಿದರು. ಪ್ಲೀಸ್‌ ಆಂಟಿ, ಈಗಲೇ ಫೋನ್‌ ಮಾಡಿ, ನೀವು ಅಂಕಲ್‌ ನಮ್ಮ ಜೊತೆಗೆ ಇದೀರಾ ಅಂದರೆ ನಮ್ಮಗಳ ಮನೆಯಲ್ಲಿ ಕಳಿಸುತ್ತಾರೆ. ಈಗಲೇ ಫೋನ್‌ ಮಾಡಿ ಆಂಟಿ, ಎಂದು ಗೋಗರೆದರು. ಇನ್ನೂ ಆಕೆ ಫೋನಾಯಿಸುವಷ್ಟರಲ್ಲೇ ಯಾವ ಯಾವ ಸೀರೆ, ಎಲ್ಲೆಲ್ಲಿ ಹೋಗಬೇಕು ಎಂದು ಹುಡುಗಿಯರ ತಯಾರಿ ನಡೆದಿತ್ತು.

ಭಾನುವಾರ ಬೆಳಿಗ್ಗೆ ಮೈಸೂರಿಗೆ ಶ್ಯಾಮರಾಯರು, ಜಾನಕಮ್ಮನವರ ಜೊತೆ ಜೀಪಿನಲ್ಲಿ ಹೊರಟಿತು ಮಂಜು, ಶ್ಯಾಮಲ, ಶಶಿ, ಉಮ, ಸರೋಜ ಇವರುಗಳ ದಂಡು. ದಾರಿಯುದ್ದಕ್ಕೂ ಮಂಜುವನ್ನು ಗೋಳಾಡಿಸಿದ್ದೇ ಗೋಳಾಡಿಸಿದ್ದು. ಮದ್ದೂರಿನ ವಡೆ ಸವಿದರು. ಮೈಸೂರಿನಲ್ಲಿ ಇವರ ಸೀರೆಗಳ ಆಯ್ಕೆಗೆ ಪಾಪ ಅಂಗಡಿಯವ ಸುಸ್ತು ಹೊಡೆದ. ಎರಡು ದಿನ ಮೈಸೂರಿನಲ್ಲಿ ಕಳೆದದ್ದೇ ಗೊತ್ತಾಗಲಿಲ್ಲ. ಕನ್ನಂಬಾಡಿ, ಚಾಮುಂಡಿ ಬೆಟ್ಟ, ಅರಮನೆ ಎಂದು ಊರು ಸುತ್ತಿದ್ದೇ ಸುತ್ತಿದ್ದು. ಕಿರಿಯರ ಜೊತೆ ಹಿರಿಯರೂ ಒಂದಾದರು. ಅಲ್ಲಿಂದ ಬಿಳಿಗಿರಿಯ ರಂಗನನ್ನು ಕಾಣಲು ಮಂಗಳವಾರ ಬೆಳಿಗ್ಗೆ ಇನ್ನೂ ನಸುಗತ್ತಲಿನಲ್ಲಿಯೆ ಎಲ್ಲರೂ ಹೊರಟರು.

ಬಿಳಿಗಿರಿ ಬೆಟ್ಟಕ್ಕೆ ಹೋಗುವ ಮಾರ್ಗದಲ್ಲಿ ಇರುವ ಪ್ರಕೃತಿ ಸೌಂದರ್ಯ, ಆನೆ ಕಾಟ, ಸೋಲಿಗರ ಪದ್ಧತಿ, ಕರಡಿಗಳ ಬಗ್ಗೆ ಹಲವು ವಿಷಯಗಳನ್ನು ಜಾನಕಮ್ಮ, ಶ್ಯಾಮರಾಯರ ಬಾಯಿಂದ ಕೇಳಿ ಎಲ್ಲರ ಮನದಲ್ಲಿ ಕುತೂಹಲ ಮೂಡಿತ್ತು. ದಾರಿಯಲ್ಲಿ ಯಾವುದಾದರೂ ಪ್ರಾಣಿಗಳು ಕಾಣ ಬರುವುದೇನೋ ಎಂಬ ಆಸೆ ಮೂಡಿತ್ತು.

ಮುಂಜಾವಿನ ಪಯಣ, ಇಬ್ಬನಿ ಎಲ್ಲೆಡೆ ಮೂಡಿತ್ತು. ಎಲ್ಲೆಲ್ಲೂ ಹಸಿರು. ಮಂಜಿನಿಂದ ಇನ್ನೂ ದಾರಿ ಮಬ್ಬು ಮಬ್ಬಾಗಿತ್ತು. ಮೊನಚಾದ, ಅಪಾಯಕರ ತಿರುವುಗಳು, ಪಕ್ಷಿಗಳ ಕಲರವ. ಹೊಂಬಣ್ಣದ ಸೂರ್ಯ ಮೂಡಲೋ ಬೇಡವೋ ಎಂದು ಇಣುಕುತ್ತಿದ್ದ. ಪ್ರಕೃತಿ ಎಲ್ಲರನ್ನೂ ತನ್ನ ಮೋಡಿಯಲ್ಲಿ ಸಿಲುಕಿಸಿತ್ತು. ಪ್ರಕೃತಿಯ ಸೌಂದರ್ಯ ಸವಿಯುತ್ತಾ ಹಸಿರಿನ ವನಸಿರಿಯಲ್ಲಿ ತಲ್ಲೀನರಾಗಿದ್ದರು.

ನಿಧಾನವಾಗಿ ಗಾಡಿ ಓಡಿಸಪ್ಪಾ, ಎದುರಿಗೆ ಬರುವ ವಾಹನ ತಿರುವುಗಳಲ್ಲಿ ಕಾಣಿಸುವುದೇ ಇಲ್ಲ , ಹಾರ್ನ್‌ ಮಾಡ್ತ ಇರು ಎಂದು ಆಗಾಗ ಡ್ರೆೃವರಿಗೆ ಹೇಳಿ- ಜೀಪಿನ ಕಿಟಕಿಗಳನ್ನು ಅರ್ಧ ಹಾಕಿರಿ, ಕೋತಿ ಕಾಟ ಇದೆ, ದಾರಿಹೋಕರು ಅವುಗಳಿಗೆ ತಿಂಡಿ ಹಾಕಿ ಅಭ್ಯಾಸ ಮಾಡಿದ್ದಾರೆ ಎಂದೂ ಉಪದೇಶ ಹೇಳುತ್ತಿದ್ದರು ಶ್ಯಾಮರಾಯರು. ಕೋತಿಗಳು, ಕಾಡು ಕೋಳಿಗಳು, ಒಂದೆರಡು ನರಿಗಳನ್ನು ಕಂಡು ಹೋ ಎಂದು ಎಲ್ಲರೂ ಚೀರಿದರು. ಶ್‌ ಶ್‌, ಮೆಲ್ಲಗೆ ಮಾತನಾಡಿ ಆನೆ ಏನಾದರು ಕಾಣಿಸಬಹುದು ಎಂದು ಶ್ಯಾಮರಾಯರು ಮಧ್ಯೆ ಮಧ್ಯೆ ಹೇಳುತ್ತಿದ್ದರು. ಎಲ್ಲರ ಕಣ್ಣು ಹಸಿರು ತುಂಬಿದ ಮರಗಳ ಮಧ್ಯೆ ಏನಾದರು ಪ್ರಾಣಿ ಕಾಣುವುದೋ ಎಂದು ನೋಡುತ್ತಿತ್ತು.

ಎಲ್ಲರ ಹೊಟ್ಟೆ ಚುರುಗುಟ್ಟುತ್ತಿತ್ತು. ಇದ್ದ ಬಿಸ್ಕತ್ತು, ಕರಿದ ತಿಂಡಿಗಳ ಡಬ್ಬ ತೆಗೆಯಲು ಜಾನಕಮ್ಮ ಮುಂದಾದರು. ಇದ್ದಕ್ಕಿದ್ದಂತೆ ಅದಾವ ಮಾಯದಲ್ಲೋ ಒಂದು ಮರಿ ಆನೆ ಜೀಪಿಗೆ ಅಡ್ಡ ಬಂದಿತು. ಅದರ ಕೊಂಬು ಜೀಪಿನ ಮುಂಭಾಗಕ್ಕೆ ಸಿಲುಕಿಕೊಂಡು ಮರಿ ಕೆಳಗೆ ಬಿದ್ದು ಬಿಟ್ಟಿತು. ತಕ್ಷಣ ಡ್ರೈವರ್‌ ಗಾಡಿಗೆ ಬ್ರೇಕ್‌ ಹಾಕಿ ನಿಲ್ಲಿಸಿದ. ಅಯ್ಯೋ ಎಂದು ಎಲ್ಲರೂ ಕಿರುಚುವಂತೆಯೇ ಐದಾರು ಕಾಡಾನೆಗಳು ಬಂದವು. ಮರಿ ಕೆಳಗೆ ಬಿದ್ದಿರುವುದನ್ನು ನೋಡಿ ತಾಯಿ ಆನೆ ಅದರ ಬಳಿ ನಿಂತಿತು. ಮಿಕ್ಕ ಅನೆಗಳು ಘೀಳಿಡುತ್ತಾ ಜೀಪಿನ ಸುತ್ತಲೂ ತಿರುಗಲು ಶುರು ಮಾಡಿದವು. ಜೀಪಿನಲ್ಲಿ ಕುಳಿತಿದ್ದವರ ಪಾಡು ಬೇಡ. ಏನೂ ತೋಚುತ್ತಿಲ್ಲ, ಹೆದರಿ ಕಂಗಾಲಾಗಿದ್ದರು. ಸದ್ಯಕ್ಕೆ ಎಲ್ಲಾ ಕಿಟಕಿಗಳೂ ಮುಚ್ಚಿದ್ದವು. ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಜೀವದಾಸೆ ಬಿಟ್ಟು ನಡುಗುತ್ತಾ ಕುಳಿತರು. ಆನೆಗಳು ಜೀಪಿನ ಸುತ್ತಲೂ ಸೊಂಡಿಲನ್ನು ಎತ್ತಿಕೊಂಡು ಸುತ್ತು ಹೊಡೆಯುತ್ತಿದ್ದವು. ಒಳಗೆ ಕುಳಿತವರಿಗೆ ಪ್ರಾಣ ಸಂಕಟ. ಜೀಪಿನ ಮುಂದೆ ಬಿದ್ದ ಮರಿಯನ್ನು ತಾಯಿ ಆನೆ ಸೊಂಡಿಲಿನಿಂದ ಎತ್ತಿ ನಿಲ್ಲಿಸಿತು. ಆಘಾತದಿಂದ ಚೇತರಿಸಿಕೊಂಡ ಮರಿ ಎದ್ದು ಸೊಂಡಿಲನ್ನು, ತಲೆಯನ್ನು ಜೋರಾಗಿ ಅಲ್ಲಾಡಿಸಿ ತಾಯಿಯ ಮೊಲೆಗೆ ಬಾಯಿ ಹಾಕಿತು. ಮರಿಗೆ ಏನೂ ಆಗಲಿಲ್ಲ ಎಂದು ಖಾತರಿಯಾದ ಇತರ ಆನೆಗಳು ಜೀಪನ್ನು ಸುತ್ತುವುದನ್ನು ಬಿಟ್ಟು ತಾಯಿ-ಮರಿಯ ಬಳಿ ಬಂದು ತಮ್ಮ ಸೊಂಡಿಲಿನಿಂದ ಬೆನ್ನು ಸವರಿದವು. ಕೆಲವೇ ಕ್ಷಣಗಳಲ್ಲಿ ಮರಿಯಾಂದಿಗೆ ಎಲ್ಲವೂ ಹೊರಟುಹೋದವು.

ಜೀಪಿನಲ್ಲಿ ಕುಳಿತಿದ್ದವರಿಗೆ ಉಸಿರಾಡಲು ಹಲವು ನಿಮಿಷಗಳೇ ಬೇಕಾದವು. ಹತ್ತು ನಿಮಿಷಗಳಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಮೂಕರನ್ನಾಗಿ ಮಾಡಿತ್ತು. ಕಾರಿನಿಂದ ಇಳಿಯಲೂ ಭಯ. ಅಬ್ಬಾ ಎಂಥಾ ಅನುಭವ ಎಂದು ಎಲ್ಲರ ಬಾಯಿಂದ ಉದ್ಗಾರ. ನಾನಂತೂ ಇವತ್ತು ನಮ್ಮಗಳ ಗತಿ ಮುಗಿಯಿತು ಎಂದುಕೊಂಡಿದ್ದೆ, ರಂಗನೇ ಕಾಪಾಡಿದ ಎಂದರು ಜಾನಕಮ್ಮ. ಚಿಕ್ಕಂದಿನಿಂದ ಇಲ್ಲಿಗೆ ಬಂದು ಮನೆ ದೇವರಿಗೆ ಪೂಜೆ ಮಾಡಿಸಿಕೊಂಡು ಹೋಗುತ್ತಿದ್ದೇನೆ. ಬಹಳಷ್ಟು ಸಲ ದೂರದಿಂದ ಆನೆಗಳ ಹಿಂಡೇ ನೋಡಿದ್ದೇನೆ. ಇದೇ ಮೊದಲ ಸಲ ಇಷ್ಟು ಹತ್ತಿರದಲ್ಲಿ ಕಾಡಾನೆ ಎದುರಾಗಿದ್ದು, ಸದ್ಯಕ್ಕೆ ಸಲಗ ಇವುಗಳ ಜೊತೆ ಇರಲಿಲ್ಲ, ಇದ್ದಲ್ಲಿ ಇವತ್ತು ನಾವು ಇಂದು ಯಮಲೋಕಕ್ಕೇ ಹೋಗುತ್ತಿದ್ದೆವು. ನನ್ನ ಮೈಕೂದಲು ಹೇಗೆ ನಿಮಿರಿ ನಿಂತಿದೆ ನೋಡಿ ಎಂದು ಶ್ಯಾಮರಾಯರ ಮಾತು. ಹಲವಾರು ವರುಷಗಳಿಂದ ಈ ದಾರಿಯಲ್ಲಿ ಜೀಪು ಓಡಿಸುತ್ತೇನೆ ಅಮ್ಮ, ಇದೇ ಮೊದಲ ಸಲ ಇಂತಹ ಅನುಭವ ಎಂದು ಡ್ರೈವರ್‌ ಹೇಳಿದನು.

ಕಿರಿಯರ ಮುಖದಲ್ಲಿ ಬೆವರಿಳಿದಿತ್ತು. ಆದರೂ ಒಂಥರಾ ಚೆನ್ನಾಗಿತ್ತು. ಥ್ರಿಲ್‌ ಇತ್ತು ಅಂಕಲ್‌. ಈ ತರಹ ನಾವು ಸಿನಿಮಾದಲ್ಲೇ ನೋಡುತ್ತಿದ್ದೆವು. ನಾವು ಬಂದಾಗ ಹೀಗಾದ್ದು ಒಂದು ಅಪೂರ್ವ ಅನುಭವ. ಆನೆಗಳು ಸುತ್ತಲೂ ಸುತ್ತುತ್ತಿದ್ದಾಗ ಬಹಳ ಹೆದರಿಕೆ ಆಯಿತು. ಆದರೆ ತಾಯಿ ಪ್ರೀತಿ ನೋಡಿ ದಂಗಾದೆವು. ಮರಿಗೆ ಏನೂ ಆಗಿಲ್ಲ ಎಂದಾಕ್ಷಣ ನಮ್ಮನ್ನು ಏನೂ ಮಾಡಲಿಲ್ಲ. ಅಕಸ್ಮಾತ್‌ ಡ್ರೈವರ್‌ ತಕ್ಷಣ ಬ್ರೇಕ್‌ ಹಾಕದಿದ್ದರೇ.... ಅಬ್ಬಾ ಈಗಲೂ ಮೈ ಜುಂ ಎನ್ನುತ್ತದೆ ಎನ್ನುತ್ತಾ ಒಬ್ಬೊಬ್ಬರೇ ಜೀವ ಬಂದಂತೆ ಮತ್ತೆ ಮಾತಿಗೆ ಆರಂಭಿಸಿದರು. ಈ ಘಟನೆ ನಾವು ಬದುಕಿರುವವರೆಗೂ ಮರೆಯುವುದಿಲ್ಲ ಎನ್ನುತ್ತಾ ಸುತ್ತಲೂ ನೋಡಿ ಒಬ್ಬೊಬ್ಬರಾಗಿ ಕಾರಿನಿಂದ ಇಳಿದರು. ಜೀಪಿನ ಕೆಳಗೆ ಬಿಳಿಯ ಒಂದು ಸಣ್ಣ ಕೊಂಬಿನ ತುಂಡು ಕಂಡ ಡ್ರೈವರ್‌. ಅದನ್ನು ಎತ್ತಿ ಕೈಯಲ್ಲಿ ಹಿಡಿದಾಗ ಎಲ್ಲರೂ ಅಂಕಲ್‌ ನಾನು, ನಾನು ಎಂದು ಎನ್ನುತ್ತಾ ಅದನ್ನು ಕೈಯಲ್ಲಿ ಹಿಡಿದು ಅದರ ಸ್ಪರ್ಶ ಅನುಭವಿಸಿದರು. ಅಯ್ಯೋ ಪಾಪ, ಅದಕ್ಕೆ ಎಷ್ಟು ನೋವಾಯಿತೋ ಎಂದು ಹಲುಬಿದರು ಕೂಡ. ಇದನ್ನು ನಮ್ಮ ಮನೆಯಲ್ಲಿ ದೇವರ ಬಳಿ ಇಡುತ್ತೇನೆ, ಇನ್ನು ಇದು ನಮ್ಮ ಪರಂಪರೆಯ ಆಸ್ತಿ ಎನ್ನುತ್ತಾ ಅದನ್ನು ಕೈಗೆ ತೆಗೆದುಕೊಂಡರು ಜಾನಕಮ್ಮ.

ಮಂಜು ಎಲ್ಲೇ ನಿನ್ನ ಹೀರೋ, ನಿನ್ನ ಪಾರು ಮಾಡಲು ಬರಲೇ ಇಲ್ಲ ! ದಿನಕರ ಬರೀ ಜೀರೋ ಎಂದು ಮಂಜುವನ್ನು ಕೀಟಲೆ ಮಾಡುತ್ತಾ, ನಡೀರಿ, ನಡೀರಿ, ಇನ್ನು ಹೊರಡೋಣ ಎನ್ನುತ್ತಾ ಶ್ಯಾಮರಾಯರು ಜೀಪಿನಲ್ಲಿ ಕೂತಾಗ ಇನ್ನೊಮ್ಮೆ ಕಾಡಾನೆ ಕಾಣಿಸುವುದೇನೋ ಎಂದು ಎಲ್ಲರೂ ಸುತ್ತಲೂ ನೋಡಿದರು. ಬೆಟ್ಟಕ್ಕೆ ಹೋಗಿ ಬಿಳಿಗಿರಿ ರಂಗನ ಪೂಜಿಸಿ ಮರಳಿ ಬೆಂಗಳೂರಿಗೆ ಬಂದ- ಉಮ, ಸರೋಜ, ಶಶಿ, ಶ್ಯಾಮಲ ಮತ್ತು ಮಂಜುವಿನ ಮನದಲ್ಲಿ ಬಿಳಿಗಿರಿಯ ಕಾಡಾನೆಗಳ ಚಿತ್ರಣ ಮರೆಯದೆ ಅಚ್ಚೊತ್ತಿತ್ತು.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X