‘ಘಮ ಘಮ’: ಪೂರ್ವ-ಪಶ್ಚಿಮ ಸಂಗಮ
![]() | ಭೀಮ ಪ್ರಕಾಶ್ ಅಡ್ಕಸ್ಥಳ, ಬೋಲ್ಡರ್, ಕೊಲರಾಡೊ, ಯು.ಎಸ್.ಎ [email protected] |
ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ವಿಶ್ವೇಶ್‌ರಿಗೆ ನೆಚ್ಚಿನ ಪ್ರವೃತ್ತಿ ಸಂಗೀತ. ಬಾಲ್ಯದಿಂದಲೇ ಹಲವು ದೈವದತ್ತ ಪ್ರತಿಭೆಗಳನ್ನು ಪೋಷಿಸುತ್ತಾ ಬಂದರೂ ವೃತ್ತಿಗಿಳಿದ ನಂತರ ಗಂಭೀರವಾಗಿ ದುಡಿಸಿಕೊಂಡದ್ದು ಶಾರೀರವನ್ನು. ನಟನೆ, ಅಭಿನಯ, ಅನುಕರಣೆ, ವ್ಯಂಗ್ಯ ಚಿತ್ರ ಮೊದಲಾದ ವಿಭಾಗಗಳಲ್ಲಿ ಪ್ರೌಢ ಪ್ರದರ್ಶನ ನೀಡಿದ್ದರೂ ಹಲವು ಪ್ರಶಸ್ತಿಗಳನ್ನು ಬಾಚಿದ್ದರೂ ವಿಶ್ವೇಶ್ ಹೆಸರು ಮಾಡಿದ್ದು ಸಂಗೀತಗಾರನಾಗಿ. ಸ್ವಾಭಾವಿಕವಾಗಿಯೇ ವಿಶ್ವೇಶ್ ತನ್ನ ಬಾಳ ಸಂಗಾತಿಯನ್ನಾಗಿ ಆರಿಸಿದ್ದು ಸಂಗೀತಗಾರ್ತಿಯೂ ವೀಣಾ ವಾದಕಿಯೂ ಆದ ಇಲೆಕ್ಟ್ರಿಕಲ್ ಇಂಜಿನಿಯರ್ ಅಶ್ವಿನಿಯವರನ್ನು.
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ? ಇತ್ತೀಚೆಗೆ ಬೆಂಗಳೂರು ಮತ್ತು ಅಮೇರಿಕಾದಲ್ಲಿ ಬಿಡುಗಡೆಯಾದ ಕನ್ನಡ ಭಾವ ಗೀತೆ, ಜಾನಪದ ಗೀತೆಗಳ, ದಾಸ ವಾಣಿಯ ವಿಶಿಷ್ಠ KAN - FUSION (ವಿಶ್ವೇಶ್ ಅವರೇ ಕರೆದಂತೆ) ಅಲ್ಬಮ್ ‘ಘಮ ಘಮ’ ಕ್ಕೆ ವಿಶ್ವೇಶ್-ಅಶ್ವಿನಿ ದಂಪತಿಗಳೇ ಕರ್ತೃ ಗಳು. ಈ ‘ಘಮ ಘಮ’ ದಲ್ಲಿ ಹಲವು ವಿಶೇಷತೆಗಳು. ಹಾಡುಗಾರರು, ರಾಗ ಸಂಯೋಜಕರು, ಸಂಗೀತ ನಿರ್ದೇಶಕರು ಒಂದು ಇಂಜಿನಿಯರ್ ದಂಪತಿ. ಗೀತೆಗಳು ಕನ್ನಡ ಕವಿಗಳ ಭಾವ ಗಂಗೆಗಳು; ಜೊತೆಗೆ ಪಾಶ್ಚಾತ್ಯ ಸಂಗೀತದ ಗುಂಗುಗಳು ಇತ್ಯಾದಿ ಇತ್ಯಾದಿ. ‘ಘಮ ಘಮ’ ಸಿ.ಡಿ ಯನ್ನು ಮನೆಯನ್ನೇ ಸ್ಟುಡಿಯಾ ಆಗಿಸಿ ಧ್ವನಿ ಮುದ್ರಿಸಲಾಗಿದೆ. ಕನ್ನಡದ ಕೆಲವು ಜನಪ್ರಿಯ ಭಾವಗೀತೆ ಜಾನಪದ ಗೀತೆಗಳನ್ನು ಆಯ್ದುಕೊಂಡು, ರಾಗ ಸಂಯೋಜಿಸಿ, ಪಾಶ್ಚಾತ್ಯ ಸಂಗೀತದೊಡನೆ ಮೇಳೈಸಿ, ದಂಪತಿಗಳೇ ಹಾಡಿ ಅಣಿಗೊಳಿಸಿದ್ದಾರೆ. ಪ್ರಸಿದ್ಧ ಕವಿಗಳ ಗೀತೆಗಳು ವಿಶ್ವೇಶ್ ಅಶ್ವಿನಿಯರ ಸ್ವರ ವಾಹಿನಿಯಲ್ಲಿ ವಿಜೃಂಭಿಸಿವೆ. ಪಾಶ್ಚಾತ್ಯ ಸಂಗೀತದ ಸಾಂಗತ್ಯ ಈ ಗಾನ ಗಂಗೆಯ ಹರಿವಿಗೆ ಸ್ವಲ್ಪವೂ ತೊಡಕಾಗದಿರುವುದು ‘ಘಮ ಘಮ’ ದ ವೈಶಿಷ್ಠ್ಯ.
ತಮ್ಮ ಚೊಚ್ಚಲ ಆಲ್ಬಂಗೆ ಉತ್ತಮ ಗೀತೆಗಳನ್ನು ವಿಶ್ವೇಶ್ ಆಯ್ಕೆ ಮಾಡಿದ್ದಾರೆ. ‘ಘಮ ಘಮ’ ದ ಒಂದೊಂದು ಹಾಡೂ ತನ್ನದೇ ಆದ ಅನನ್ಯತೆಯಿಂದ ಮನಸೆಳೆಯುತ್ತದೆ. ಹಾಗೆಂದು ಕವಿ ಪ್ರಕಟಿಸಿದ ಮೂಲ ಭಾವನೆಗಳಿಗೆ, ಗೀತೆಗಳು ಪ್ರತಿನಿಧಿಸುವ ಜಾನಪದದ ಸೊಗಡಿಗೆ ಕಿಂಚಿತ್ತೂ ಅಪಚಾರವಾಗದಂತೆ ಸಂಯೋಜಕರು ಎಚ್ಚರವಹಿಸಿದ್ದಾರೆ.
ಸಾಹಿತ್ಯ-ಸಂಗೀತದ ಸೊಬಗಿನ ಹೊರತಾಗಿ ‘ಘಮ ಘಮ’ ದಲ್ಲಿ ಎದ್ದು ಕಾಣುವ ಎರಡು ಅಂಶಗಳು- ಪ್ರಯೋಗಶೀಲತೆ ಮತ್ತು ಅವಿರತ ಶ್ರಮ.
ವಿಶ್ವೇಶ್- ಅಶ್ವಿನಿ ಇಬ್ಬರೂ ಸಂಗೀತವನ್ನು ಶಾಸ್ತ್ರೀಯವಾಗಿ ಅಭ್ಯಸಿಸಿದವರು. ಆದರೆ ಅಷ್ಟಕ್ಕೇ ತೃಪ್ತರಾಗದೆ ಸಂಗೀತದ ಸಾಂಪ್ರದಾಯಿಕ ಮಡಿವಂತಿಕೆಯ ಸೀಮೋಲ್ಲಂಘನ ಮಾಡಿದವರು. ಹಾಡಿನಿಂದ ಸಂಯೋಜನೆಗೆ ತಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡವರು. ಹಿಂದುಸ್ಥಾನಿ ಮತ್ತು ಕರ್ನಾಟಕ ಸಂಗೀತದಲ್ಲಿರುವ ತಮ್ಮ ಹಿಡಿತವನ್ನು ಪರಿಣಾಮಕಾರಿಯಾಗಿ ‘ಘಮ ಘಮ’ ದಲ್ಲಿ ಬಳಸಿಕೊಂಡಿದ್ದಾರೆ. ಪಾಶ್ಚಾತ್ಯ ಪ್ರಕಾರಗಳಾದ ಕಂಟ್ರಿ, ಪಾಪ್, ರಾಪ್ ಗಳೊಂದಿಗೆ ದೇಶೀಯ ಸಂಗೀತದ ಎರಕ ಹೊಯಿದಿದ್ದಾರೆ. ಅಮೇರಿಕಾದ ಕನ್ನಡ ಕೂಟಗಳಲ್ಲಿ , ವಿವಿಧ ಸಮಾರಂಭಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಇವರು ಪ್ರಸ್ತುತಪಡಿಸಿದ್ದಾರೆ. ಅಲ್ಲಿ ಮಣೆ ಹಾಕಿ ಮನ್ನಣೆಯಿತ್ತ ಅಭಿಮಾನಿಗಳ ಪ್ರೊತ್ಸಾಹವೇ ‘ಘಮ ಘಮ’ ದ ಕನಸನ್ನು ಹುಟ್ಟುಹಾಕಿದ್ದು. ಮುಂದೆ ಅದನ್ನು ಸಾಕಾರಗೊಳಿಸಿದ್ದು ದೈವದತ್ತ ಪ್ರತಿಭೆ ಮತ್ತು ಅವಿಶ್ರಾಂತ ಪ್ರಯತ್ನ.
ಹವ್ಯಾಸವನ್ನು ತುಂಬಾ ಗಂಭೀರವಾಗಿ ಪರಿಗಣಿಸಿ ಅದರಲ್ಲಿ ಯಶಸ್ಸಿನ ಬೆನ್ನು ಹತ್ತಿ ತನು-ಮನ-ಧನ ವಿನಿಯೋಗಿಸುವವರು ಬಹಳ ಮಂದಿಯಿಲ್ಲ. ಹಾಡು, ಕಲಾವಿದನ ಕನಸಿನ ಚಿಲುಮೆಯಿಂದ ನೆಗೆದಲ್ಲಿಂದ, ಧ್ವನಿ ಮುದ್ರಿತ ಮಾಧ್ಯಮವಾಗಿ ಶ್ರೋತೃವಿನ ಕೈಗೆ ತಲುಪುವವರೆಗೆ ಹಲವು ಹಂತಗಳು. ಅದಕ್ಕೆ ಬೇಕಾದ ವಾತಾವರಣವನ್ನು ಮನೆಯಲ್ಲೇ ನಿರ್ಮಿಸಿಕೊಂಡು, ಆರ್ಥಿಕ ಮೂಲಗಳನ್ನು ಹೊಂದಿಸಿಕೊಂಡು, ಹಲವು ಹಗಲು-ಇರುಳುಗಳನ್ನು ಕಳಕೊಂಡು ವಿಶ್ವೇಶ್-ಅಶ್ವಿನಿ ಈ ‘ಘಮ ಘಮ’ ವನ್ನು ಕನ್ನಡ ಕುಲ ಕೋಟಿಯ ಕೈಗಿತ್ತಿದ್ದಾರೆ.
ಪ್ರಸ್ತುತ ಅಮೇರಿಕಾದ ಮೆಂಫಿಸ್‌ನಲ್ಲಿ ನೆಲೆಸಿರುವ ವಿಶ್ವೇಶ್ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಮೆಂಫಿಸ್‌ನ ಕನ್ನಡ ಸಂಘ ‘ತರಂಗ’ ದ ಸಾಂಸ್ಕೃತಿಕ ಕಾರ್ಯದರ್ಶಿಯಾಗಿದ್ದುಕೊಂಡು ತಮ್ಮ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಸಂಘಕ್ಕೆ ಜೀವ ತುಂಬಿದ್ದಾರೆ. ವಿಶ್ವೇಶ್ ಅವರ ಗಣನೀಯ ಕೊಡುಗೆಯನ್ನು ಗುರುತಿಸಿದ ಮೆಂಫಿಸ್ ಇಂಡಿಯನ್ ಎಸೋಸಿಯೇಷನ್ ಇತ್ತೀಚೆಗೆ ಅವರನ್ನು ಸನ್ಮಾನಿಸಿದೆ.
‘ಘಮ ಘಮ’, ಪೂರ್ವ-ಪಶ್ಚಿಮದ ಸರಿಗಮದ ಸಂಗಮದ ಒಂದು ಅಪರೂಪದ ಸ್ವರ ವೈಭವ. ‘ಘಮ ಘಮ’ ವನ್ನು ಆಘ್ರಾಣಿಸಬೇಕೆ? ಇಲ್ಲಿದೆ ಮಲ್ಲಿಗೆಯ ತೋಟ: http://www.vishwini.com/













Click it and Unblock the Notifications