ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದಿಯಲ್ಲಿ ಬೃಹನ್ನಳೆಯರು? ನೀವು ಕಂಡಿರಾ...

By Staff
|
Google Oneindia Kannada News

ಊರ್ವಶಿಯಿಂದ ಶಾಪಗ್ರಸ್ತನಾದ ವೀರಾಗ್ರಣಿ ಅರ್ಜುನ ಬೃಹನ್ನಳೆಯಾಗಿ ಒಂದು ವರುಷ ಅಜ್ಞಾತವಾಸದಲ್ಲಿದ್ದು ಶಾಪವಿಮುಕ್ತನಾದ. ಹದಿಮೂರನೇ ಶತಮಾನದಲ್ಲಿ ಬೃಹನ್ನಳೆಯ ಗುಂಪಿಗೆ ಸೇರಿದ ಸೈನ್ಯಾಧಿಕಾರಿ ಮಲ್ಲಿಕಾಫರ್‌ ದೆಹಲಿಯ ಸಂಸ್ಥಾನವನ್ನು ಆಳಿದ ಅಲ್ಲಾವುದ್ದೀನ್‌ ಖಿಲ್ಜಿಯ ದಳಪತಿಯಾಗಿ ಮೆರೆದ. ಇದೇ ಪರಿವಾರದ ಸದಸ್ಯರಾದ ಇಂದಿನ ಭಾರತದ ಬೃಹನ್ನಳೆಯರಿಗೆ ಶಾಪವಿಮೋಚನೆ ಇದೆಯೇ?

ಅದು ಮುಂಬಯಿ. ಅಲ್ಲಿನ ವಿಮಾನ ನಿಲ್ದಾಣಕ್ಕೆ ಟ್ಯಾಕ್ಸಿಯಲ್ಲಿ ಹೊರಟೆ. ದಾರಿಯಲ್ಲಿ ಟ್ರಾಫಿಕ್‌ನ ಕೆಂಪು ದೀಪದ ಸೂಚನೆಯ ಮೇರೆಗೆ ಟ್ಯಾಕ್ಸಿ ನಿಂತಿತು. ಗಾಳಿಗಾಗಿ ಕಿಟಕಿಯ ಗಾಜು ಇಳಿಸಿದ್ದೆ. ಭಿಕ್ಷುಕರು, ಮಲ್ಲಿಗೆಯ ದಂಡೆ ಮಾರುವವರು, ವಾಹನಗಳ ಒರೆಸಲು ಹಳದಿಯ ಬಟ್ಟೆ ಮಾರುವವರು ಬಂದು ಹೋದರು. ಇನ್ನೂ ಕೆಂಪುದೀಪ ಉರಿಯುತ್ತಿತ್ತು. ಇದ್ದಕ್ಕಿದ್ದಂತೆ ಕಾರನ್ನು ಮುತ್ತುತ್ತಾ ಹಾಯ್‌ ಹಾಯ್‌ ಎನ್ನುತ್ತಾ ಬಂದು ತೆರೆದಿದ್ದ ಕಿಟಕಿಯಿಂದ ಇಬ್ಬರು ಹಿಜಡಾಗಳು ಕೈ ನೀಡಿದರು. ಒಬ್ಬಾಕೆ ಕೆನ್ನೆ ಸವರಿದರೆ ಇನ್ನೊಬ್ಬಾಕೆ ನನ್ನ ಮುಖ ನೋಡಿ (ದಕ್ಷಿಣ ಭಾರತದವಳೆಂದು ತಿಳಿಯಿತೋ ಏನೋ) ತಮಿಳಿನಲ್ಲಿ ‘ಪಣಂ ಕೊಡುಮ್ಮಾ’ ಎನ್ನುತ್ತಾ ತಲೆಯಮೇಲೆ ಕೈಯಿಟ್ಟಳು. ಮರು ಮಾತನಾಡದೆ ಪರ್ಸಿನಲ್ಲಿ ಕೈಹಾಕಿ ಐದು ರೂ ಇತ್ತೆ. ನನ್ನ ಬಳಿ ಹಣ ಪಡೆದು ಮತ್ತೆ ತಲೆಯ ಮೇಲೆ ಕೈ ಇಟ್ಟು ಪಕ್ಕದಲ್ಲಿ ನಿಂತಿದ್ದ ಇನ್ನೊಂದು ಟ್ಯಾಕ್ಸಿ ಬಳಿ ನಡೆದರು. ಅಲ್ಲಿ ಗಾಜು ಮುಚ್ಚಿತ್ತು. ಮುಚ್ಚಿದ ಕಿಟಕಿಯ ಮೇಲೆ ತಟ್ಟಿ ಹಣ ಕೇಳಿದರು. ಒಳಗೆ ಕುಳಿತಿದ್ದವ ಕೈ ಆಡಿಸಿ ಇಲ್ಲ ಎಂದು ಸನ್ನೆ ಮಾಡಿದಾಗ ಥೂ ಎಂದು ಉಗುಳಿ, ನೆಟಿಕೆ ಮುರಿದು, ಕೆಟ್ಟ ಶಬ್ದ ಪ್ರಯೋಗಿಸಿ ಮತ್ತೂಂದು ಟ್ಯಾಕ್ಸಿಯ ಬಳಿ ನಡೆದರು. ಟ್ಯಾಕ್ಸಿಯಲ್ಲಿ ನನ್ನ ಪಯಣ ಮುಂದುವರೆಯಿತು. ಮನಸ್ಸು ಮಾತ್ರ ಹಾಯ್‌ ಹಾಯ್‌ ಎಂದು ಕೈನೀಡಿ, ಕೆನ್ನೆ ಸವರಿದವರ ಬಗ್ಗೆ ಯೋಚಿಸುತ್ತಿತ್ತು.

Ardha Narreshwara!!ಮುಂಬಯಿ, ಬೆಂಗಳೂರುಗಳಂಥ ಮಹಾನಗರಗಳ ಪಯಣಿಗರಿಗೆ ರೈಲುಗಳಲ್ಲಿ, ಟ್ರಾಫಿಕ್‌ ನಿಲುಗಡೆಯ ಸ್ಥಳಗಳಲ್ಲಿ, ಬೀಚ್‌ಗಳಲ್ಲಿ ಪ್ರತ್ಯಕ್ಷರಾಗುವ ಬೃಹನ್ನಳೆಯರ ಹಾಯ್‌ ಹಾಯ್‌ ಪರಿ ಹೊಸತೇನಲ್ಲ. ರಾಜ ಮಹಾರಾಜರ ನಂಬಿಕಸ್ಥ ಅಂಗರಕ್ಷಕರಾಗಿ, ಅಂತಃಪುರ ಕಾಯುತ್ತಿದ್ದ ಹಿಜಡ ಸಂತತಿಯವರಿಗೆ ಈ ಪರಿಯೇ? ಕೈಕಾಲು ಗಟ್ಟಿ ಇದ್ದವರು ಭಿಕ್ಷೆ ಬೇಡಲು ಬಂದಲ್ಲಿ , ‘ಏನಪ್ಪಾ ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಾರದೇ? ಮುಂದೆ ಹೋಗು’ ಎಂದು ಹೇಳುತ್ತೇವೆ. ಆದರೆ ಈ ಹಿಜಡಾಗಳಿಗೆ ಏನು ಹೇಳುವುದು? ಎಂದು ಮನದಲ್ಲಿ ಹಲವು ಪ್ರಶ್ನೆಗಳನ್ನೊಳಗೊಂಡು ಯೋಚಿಸುತ್ತಾ ಸಿಂಗಾಪುರಕ್ಕೆ ವಿಮಾನ ಹತ್ತಿದೆ.

ಊರಿಗೆ ಬಂದ ಮೇಲೆ ದೈನಂದಿನ ಚಟುವಟಿಕೆಯಲ್ಲಿ ಇವರುಗಳ ವಿಷಯ ಮನದಿಂದ ಮರೆಯಾಗಿತ್ತು.

ಸಿಂಗಾಪುರದ ಕಾಳಿಯಮ್ಮನ ದೇವಸ್ಥಾನದಲ್ಲಿ ಮಂಗಳವಾರದಂದು ರಾಹುಕಾಲದ ದುರ್ಗಾ ಪೂಜೆ ಬಹಳ ಚೆನ್ನಾಗಿ ನಡೆಯುತ್ತದೆ ಎಂದು ತಿಳಿಯಿತು. ಈ ಪೂಜೆಯಲ್ಲಿ ಭಾಗವಹಿಸಲು ನಾನು ಕೂಡ ಒಂದು ಮಂಗಳವಾರ ದೇಗುಲಕ್ಕೆ ಹೋದೆ. ಸುಂದರ ಭವ್ಯ ಮೂರ್ತಿ ದುರ್ಗಾದೇವಿ. ಭಜನೆ, ಸಂಗೀತ, ಸ್ತೋತ್ರಗಳನ್ನು ಹೇಳುತ್ತಿದ್ದ ಹೆಂಗಳೆಯರ ಗುಂಪಿನ ನಡುವೆ ಅಲ್ಲಲ್ಲಿ ಹಲವು ಹಿಜಡಾಗಳು ಕೂಡ ಕಂಡು ಬಂದರು. ಹಲವರು ಸೀರೆಯನ್ನುಟ್ಟಿದ್ದರು, ಇನ್ನೂ ಹಲವರು ಸಲ್ವಾರ್‌ ತೊಟ್ಟಿದ್ದರು. ಈ ಗುಂಪಿನಲ್ಲಿ ಭಾರತೀಯರೇ ಅಲ್ಲದೆ ಒಂದಿಬ್ಬರು ಚೀನಿಗಳೂ ಇದ್ದರು. ಪೂಜೆಗೆ ಕುಳಿತಿದ್ದ ಇನ್ನಿತರ ಹೆಂಗಳೆಯರೂ ಇವರುಗಳ ಬಳಿ ಮಾತನಾಡುತ್ತಿದ್ದರು. ಮಂಗಳಾರತಿ ಮುಗಿದು ಪ್ರಸಾದ ವಿನಿಯೋಗಕ್ಕೆ ಅವರೇ ಬಂದು ಮುಂದೆ ನಿಂತರು. ಇದೇ ವೇಳೆಗೆ ಸುಶ್ರಾವ್ಯ ಕಂಠದಿ ದೇವೀ ಸ್ತುತಿ ತೇಲಿ ಬಂದಿತು. ತಿರುಗಿ ನೋಡಿದಾಗ ಮತ್ತೊಬ್ಬ ಹಿಜಡಾ ಹಾಡುತ್ತಿದ್ದರು. ಭಾರತದಲ್ಲಿ ಹಿಜಡಾಗಳು ಮಾಡುವಂತೆ ಹಾವಭಾವಗಳನ್ನು ತೋರಿಸುವುದಾಗಲೀ, ಕೆನ್ನೆ ಸವರುವುದಾಗಲೀ, ತಲೆಯ ಮೇಲೆ ಕೈಯಿಟ್ಟು ಆಶೀರ್ವಾದ ಮಾಡುವುದಾಗಲೀ, ಚಪ್ಪಾಳೆ ತಟ್ಟಿ, ಹುಬ್ಬು ಕುಣಿಸುವುದಾಗಲೀ ಮಾಡದೆ ಸಾಮಾನ್ಯರಂತೆ ಎಲ್ಲರ ಬಳಿ ವರ್ತಿಸುತ್ತಿದ್ದರು. ಇವರುಗಳ ಅಸ್ತಿತ್ವವನ್ನು ವಿಚಿತ್ರ ರೀತಿಯಲ್ಲಿ ನೋಡುವವರಾಗಲೀ ಅಥವಾ ಪಕ್ಕ ಕುಳಿತುಕೊಳ್ಳುವುದಕ್ಕೆ ಮುಜುಗರವಾಗಲೀ ಇತರರಲ್ಲಿ ಕಾಣ ಬರಲಿಲ್ಲ.

ಮರೆತಿದ್ದ ಮುಂಬಯಿಯ ಹಾಯ್‌ ಹಾಯ್‌ ಮತ್ತೆ ತಲೆಕೊರೆಯಲು ಶುರುವಾಯಿತು. ಇದರ ಬಗ್ಗೆ ಹೆಚ್ಚು ಗಮನ ಹರಿಸಿದಂತೆ ಚೀನಿ, ತಮಿಳು ನಾಟಕಗಳಲ್ಲಿ, ತಮಿಳು ಮತ್ತು ಚೀನಿ ದೂರದರ್ಶನ ವಾಹಿನಿಗಳಲ್ಲಿ, ಕಚೇರಿಗಳಲ್ಲಿ ಹಿಜಡಾಗಳನ್ನು ಕಂಡೆ. ಮುಖ್ಯವಾಗಿ ಗಮನ ಸೆಳೆದ ಅಂಶವೆಂದರೆ ಇವರುಗಳನ್ನು ವಿಚಿತ್ರವಾಗಿ ನೋಡದೆ ಸಾಮಾನ್ಯರಂತೆ ಇವರೊಡನೆ ಎಲ್ಲರೂ ವ್ಯವಹರಿಸುತ್ತಿದ್ದರು. ದಾರಿಯಲ್ಲಿ, ಹೋಟೆಲ್‌ಗಳಲ್ಲಿ ಇವರುಗಳನ್ನು ನೋಡಿ ನಗುವವರಾಗಲೀ, ಹೀಯಾಳಿಸಿ, ಕೀಟಲೆ ಮಾಡುವವರಾಗಲಿ ಕಾಣಬರಲಿಲ್ಲ.

ನಮ್ಮಲ್ಲಿ ಏಕೆ ಹೀಗಿಲ್ಲ ?

ಉದರ ಪೋಷಣೆಗೆ ದಾರಿಯಿಲ್ಲದೆ ಹಿಜಡಾಗಳು ಹಾಯ್‌ ಹಾಯ್‌ ಎನ್ನುತಾ ಹಣ ಕೇ(ಕೀ)ಳುತ್ತಾರೆ. ಇನ್ನೂ ಹಲವರಿಗೆ ದೇಗುಲಗಳ ಮುಂದೆ ಮಧುಕರ ವೃತ್ತಿ. ಮನೋರಂಜನೆಯ ವಸ್ತುವಾದವರಿಗೆ ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಎಂಬಂತೆ ಸಿಗುವ ಹಣ ಅಲಂಕಾರಕ್ಕೇ ವಿನಿಯೋಗವಾಗುತ್ತದೆ. ಹಲವರಿಗೆ ತಕ್ಕ ಮಟ್ಟದ ವಿದ್ಯಾಭ್ಯಾಸವಿದ್ದರೂ ಕೆಲಸ ಕೊಡುವವರು ಇಲ್ಲ. ಮತ್ತೆ ಕೆಲವರು ವೇಶ್ಯಾವಾಟಿಕೆಗಳಲ್ಲಿ ಇದ್ದಾರೆ.

ಭಾರತದ ಜನಸ್ತೋಮದಲ್ಲಿ ಹಿಜಡಾಗಳ ಜನಸಂಖ್ಯೆ ಸುಮಾರು ಆರು ಲಕ್ಷ. ಬಿ.ಬಿ.ಸಿಯ ಪ್ರಕಾರ ನಮ್ಮ ಬೆಂಗಳೂರಿನಲ್ಲಿಯೇ ಸುಮಾರು ಮೂರು ಸಾವಿರ ಹಿಜಡಾಗಳು ಇದ್ದಾರೆ. ‘ಹಿಜಡಾ’ ಈ ಶಬ್ದವನ್ನು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಉಪಯೋಗಿಸುತ್ತಾರೆ. ಇವರನ್ನು ನೋಡಿ ಮುಖ ಸಿಂಡರಿಸಿ, ದೂರ ಸರಿಯುವವರು ಬಹಳಷ್ಟು ಮಂದಿ. ಕೀಟಲೆ, ನಗು, ಕುಹಕದಿಂದ ಕೆರಳಿಸುವರೂ ಕಮ್ಮಿಯೇನಿಲ್ಲ. ನಮ್ಮಲ್ಲಿರುವ ಬೃಹನ್ನಳೆಯರನ್ನು ನಾವು ವಿಚಿತ್ರವಾಗಿ, ಸಂಶಯಾಸ್ಪದ ದೃಷ್ಟಿಯಿಂದ ನೋಡದೆ ಸಾಮಾನ್ಯರಂತೆ ಕಂಡು ಅವರೊಡನೆ ವ್ಯವಹರಿಸುತ್ತೇವೆಯೇ ಎಂಬುದು ಇನ್ನೂ ಪ್ರಶ್ನಾರ್ಥಕ ಚಿನ್ಹೆಯಾಗಿಯೇ ಇದೆ.

ಉತ್ಪತ್ತಿಯಿಂದ ಗಂಡೆನಿಸಿದರೂ ಅನುವಂಶೀಕತೆಯ ಅವ್ಯವಸ್ಥೆ (ಜೆನೆಟಿಕ್‌ ಡಿಸ್‌ಆರ್ಡರ್‌) ಯಿಂದಾಗಿ ಸ್ವಭಾವ, ನಡೆ, ನುಡಿಯಲ್ಲಿ ಇಂಥಹವರು ಹೆಣ್ಣನ್ನು ಹೋಲುತ್ತಾರೆ. ಮಗು ಹುಟ್ಟಿದಾಗ ಅಥವಾ ಶೈಶವಾಸ್ಥೆಯಲ್ಲಿ ಈ ಬದಲಾವಣೆ ಗೊತ್ತಾಗುವುದಿಲ್ಲ. ಬಾಲ್ಯಾವಸ್ಥೆಯಲ್ಲಿ ಮತ್ತು ಹದಿ ಹರೆಯದ ವಯಸ್ಸಿನಲ್ಲಿ ಆಗುವ ದೇಹದ ಮಾರ್ಪಾಡುಗಳಲ್ಲಿ ಸ್ಪಷ್ಟ ಚಿತ್ರಣ ಮೂಡುತ್ತದೆ. ಈ ಕಾರಣಗಳು ಕಂಡು ಬಂದ ಮೇಲೆ ಹಲವರು ಸ್ವ-ಇಚ್ಛೆಯಿಂದಲೇ ಶಸ್ತ್ರಕ್ರಿಯೆಯ ಮೂಲಕ ಪರಿವರ್ತಿತರಾಗುತ್ತಾರೆ. ಶಸ್ತ್ರಕ್ರಿಯೆಯ ಮೊರೆಹೋಗದೆ ಇನ್ನು ಹಲವರು ವೃಷಣಗಳ ಮೇಲೆ ಬರೆ ಹಾಕಿಸಿಕೊಂದು ಜನನೇಂದ್ರಿಯವನ್ನು ಕತ್ತರಿಸಿಕೊಳ್ಳುತ್ತಾರೆ. ಇದು ಹಲವರಿಗೆ ಜೀವಕ್ಕೆ ಮಾರಕವಾಗಬಹುದು. ಹೆಣ್ಣು-ಗಂಡುಗಳ ಈ ಮಿಶ್ರ ದೇಹ, ಸ್ವಭಾವ, ನಡವಳಿಕೆ ಇವುಗಳಿಂದಾಗಿ ಇವರು ‘’ಇಲ್ಲೂ ಇಲ್ಲದ ಎಲ್ಲೂ ಸಲ್ಲದ’ ಪ್ರತ್ಯೇಕ ಗುಂಪಿಗೆ ಸೇರಲ್ಪಡುತ್ತಾರೆ. ಬೆಳೆವ ಮಕ್ಕಳಲ್ಲಿ ಈ ಬದಲಾವಣೆಗಳನ್ನು ಗುರುತಿಸಿ ಸಮಾಜಕ್ಕೆ ಹೆದರಿ ಮಕ್ಕಳನ್ನು ಮನೆಯಿಂದ ಹೊರಹಾಕಿದ ತಂದೆ ತಾಯಿಗಳೂ ಇದ್ದಾರೆ.

ತಂದೆ, ತಾಯಿ, ಬಂಧು ಬಳಗದವರ ಪ್ರೀತಿಯಿಂದ, ಬಾಂಧವ್ಯದಿಂದ ವಂಚಿತರಾದ ಹಿಜಡಾಗಳೂ ತಮ್ಮ ಗುಂಪಿನಲ್ಲೇ ಅಕ್ಕ, ತಂಗಿ, ಅಮ್ಮ, ಗುರು ಎಂದು ಬಂಧುಗಳನ್ನು ಹುಡುಕಿಕೊಳ್ಳುತ್ತಾರೆ.

ಭಾರತದಲ್ಲಿ ಶ್ರೀಮಂತರು ಇವರನ್ನು ಮದುವೆಗಳಲ್ಲಿ ಮತ್ತು ನಾಮಕರಣ ಸಂದರ್ಭಗಳಲ್ಲಿ ಮನೆಗೆ ಕರೆಸಿ ಹಾಡು, ಕುಣಿತಗಳ ಮನೋರಂಜನೆ ಏರ್ಪಡಿಸುತ್ತಾರೆ. ಹಿಜಡಾಗಳು ಕರೆಯದೇ ಮನೆಯ ಬಾಗಿಲಿಗೆ ಬಂದಲ್ಲಿ ಶುಭ ಶಕುನವೆಂದು ಜನ ನಂಬುತ್ತಾರೆ. ಚಲನ ಚಿತ್ರಗಳಲ್ಲಿ ಹಾಸ್ಯ, ವ್ಯಂಗ ಅಥವಾ ಕ್ರೂರಿಯಾಗಿ ಇವರನ್ನು ಚಿತ್ರಿಸುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಮಹೇಶ್‌ ಭಟ್‌ ‘ತಮನ್ನಾ’ ಚಿತ್ರದಲ್ಲಿ ಕಸದ ತೊಟ್ಟಿಯಲ್ಲಿ ಬಿದ್ದ ಹೆಣ್ಣು ಮಗುವನ್ನು ರಕ್ಷಿಸಿ ತಾಯಿಯಂತೆ ಕಾಪಾಡುವ ಹಿಜಡಾಳಲ್ಲಿ ಮಮತೆ, ಪ್ರೀತಿ, ಕರುಣೆಯು ತುಂಬಿದೆ ಎಂಬ ವ್ಯಕ್ತಿತ್ವವನ್ನು ಸೊಗಸಾಗಿ ಚಿತ್ರಿಸಿದ್ದಾರೆ.

ಉತ್ತರ ಪ್ರದೇಶದ ಶಬನಮ್‌ ಮೌಸಿ ಭಾರತದ ವಿಧಾನ ಸಭೆಗೆ ಚುನಾವಣೆಯಲ್ಲಿ ಗೆದ್ದ ಪ್ರಪ್ರಥಮ ಹಿಜಡಾ ಮಹಿಳೆ. ಘೋರಕ್‌ಪುರದಲ್ಲಿ ಹಿಂದೆ ನೇಮಕಾತಿಯಾದ ನಗರಾಧ್ಯಕ್ಷೆ ಆಶಾದೇವಿ ಕೂಡ ಇದೇ ಪಂಗಡಕ್ಕೆ ಸೇರಿದವರು. ಹಿಂದಿನ ಚುನಾವಣೆಯಲ್ಲಿ ಉತ್ತರಪ್ರದೇಶದಿಂದ ಚುನಾವಣೆಗೆ ನಿಂತಿದ್ದ ಅಭ್ಯರ್ಥಿಗಳಲ್ಲಿ ಹದಿನೆಂಟು ಮಂದಿ ಹಿಜಡಾಗಳು. ಕೈಬೆರಳಣಿಕೆಯಷ್ಟು ಮಂದಿ ಪದವೀಧರರಾಗಿದ್ದಾರೆ. ಆದರೆ ಎಷ್ಟು ಜನರಿಗೆ ಈ ಸದವಕಾಶ, ಸೌಭಾಗ್ಯ ಲಭ್ಯ.

ಚೀನ, ಸಿಂಗಾಪುರ ಅಲ್ಲದೆ ಇನ್ನೂ ಹಲವೆಡೆಗಳಲ್ಲಿ ಇವರುಗಳನ್ನು ಸಮಾಜ ಸಮಾನತೆಯಿಂದ ಕಾಣುತ್ತಿದೆ. ನಮ್ಮಲ್ಲಿ ಏಕೆ ಈ ಪರಿಸರ ಇಲ್ಲ ? ಏಕೆ ನಮ್ಮ ಸಮುದಾಯ ಇವರನ್ನು ಸಂಶಯಾಸ್ಪದ ದೃಷ್ಟಿಯಿಂದ ನೋಡಿ ದೂರ ಇಟ್ಟಿದೆ? ನಮ್ಮ ಅರ್ಜಿ ಫಾರಂಗಳಲ್ಲಿ ಗಂಡು ಇಲ್ಲವೇ ಹೆಣ್ಣು ಎಂದು ಎರಡು ಕಾಲಂ ಇದೆ. ಇವರು ಎಲ್ಲಿ ಹೋಗಬೇಕು? ಸರಕಾರ ಇಂಥಹವರಿಗೂ ಏಕೆ ವಿವಿಧ ಕ್ಷೇತ್ರಗಳಲ್ಲಿ ಸಹಾಯ ನೀಡಬಾರದು? ಸಮಾಜವೂ ಇವರ ಅಸ್ತಿತ್ವವನ್ನು ಗುರುತಿಸಿ ಮನುಷ್ಯರೆಂದು ಪರಿಗಣಿಸಿ ಸಮುದಾಯದಲ್ಲಿ ಸೇರಿಸಿಕೊಂಡು ವಿದ್ಯಾಭ್ಯಾಸ, ಕೆಲಸ ಕೊಟ್ಟು ಪ್ರೋತ್ಸಾಹಿಸಿ, ಪೋಷಿಸಿದಲ್ಲಿ ಸಾಮಾನ್ಯ ಜನರಂತೆ ಇವರೂ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನಡೆಯಬಹುದು.

ಈ ಅರ್ಧನಾರೀಶ್ವರರ ಶಾಪ ವಿಮೋಚನೆ ನಮ್ಮ ಕೈಯಲ್ಲಿಲ್ಲ . ಆದರೆ ಇವರಿಗೆ ಸಹಾಯ ಹಸ್ತ ನೀಡುವುದು ನಮ್ಮ ಕರ್ತವ್ಯ ಅಲ್ಲವೇ?

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X