• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬದುಕಿನ ವಿಸ್ಮಯ : ಒಂದು ಚಿಂತನೆ

By Staff
|

ಬದುಕಿನ ಬಗ್ಗೆ ವಿಚಾರ ಮಾಡಿದಾಕ್ಷಣ ಮನಸ್ಸಿನಲ್ಲಿ ಕಿಶೋರ್‌ ಕುಮಾರನ ಹಾಡು ಮೂಡುತ್ತದೆ,

ಜಿಂದಗಿ ಕಾ ಸಫರ್‌ ಹೈ ಯೇ ಕೈಸಾ ಸಫರ್‌

ಕೋಯಿ ಸಮಝಾ ನಹಿ ಕೋಯಿ ಜಾನಾ ನಹಿ.

(ಜೀವನದ ಈ ಪಯಣ, ಇದೆಂತಹ ಪಯಣ? ಯಾರಿಗೂ ಅರ್ಥವಾಗಿಲ್ಲ, ಯಾರೂ ತಿಳಿದಿಲ್ಲ).

ಬದುಕನ್ನು ಇಡಿಯಾಗಿ ಅರ್ಥಮಾಡಿಕೊಳ್ಳುವುದು ಸಾಧ್ಯವಿಲ್ಲವಂತೆ. ತಾಯಿಯ ಗರ್ಭದಿಂದ ಧರೆಗೆ ಬಿದ್ದಾಗ ಪ್ರಾರಂಭವಾಗುವ ಬದುಕು ಮುಂದೆ ಬಾಲ್ಯ, ಯೌವನ, ಮುಪ್ಪುಗಳನ್ನು ದಾಟುವ ಪ್ರಕ್ರಿಯೆಯಲ್ಲಿ ಅನೇಕ ವಿಸ್ಮಯಗಳನ್ನು, ಪಾಠಗಳನ್ನು ಕಲಿಸಿರುತ್ತದೆ. ಬದುಕಿನಲ್ಲಿ ಪಡೆದುಕೊಂಡದ್ದನ್ನು ಮೆಲುಕು ಹಾಕುತ್ತಾ, ಕಳೆದುಕೊಂಡಿದ್ದನ್ನು ಚಿಂತಿಸುತ್ತಾ ತಾನೇ ನಾವು ಮುಂದೆ ಸಾಗುವುದು? ಬದುಕಿನ ಈ ಕೂಡುವ, ಕಳೆಯುವ ಕ್ರಿಯೆಯೇ ವಿಚಿತ್ರ. ಎಲ್ಲವೂ ನಾವೆಂದುಕೊಂಡಂತೆ ಆಗುತ್ತಿದೆ ಎಂದು ಭ್ರಮೆಯಿಂದ ಸಂತಸ ಪಡುತ್ತಿರುವಾಗಲೇ, ಬದುಕು ಮಗ್ಗಲು ಹೊರಳಿಸಿರುತ್ತದೆ.

ಬದುಕೆನ್ನುವುದು ಒಂದು ರೀತಿಯಲ್ಲಿ ಡ್ರೆೃವಿಂಗ್‌ನ ದಾರಿ ಇದ್ದಂತೆ ! ಇಲ್ಲಿ ಹಸಿರು ದೀಪ ಇದೆ, ಕೆಂಪು ದೀಪ ಇದೆ, ತಿರುವುಗಳಿವೆ, ದಿನ್ನೆಗಳೂ ಇವೆ. ಜೀವನದಲ್ಲಿ ಬರುವ ಸಂತಸದ ಕ್ಷಣಗಳನ್ನು ಹಸಿರು ದೀಪಕ್ಕೆ ಹೊಲಿಸಿದರೆ, ದುಃಖದ, ಮರೆಯಬೇಕೆನ್ನುವ ಕ್ಷಣಗಳನ್ನು ಕೆಂಪು ದೀಪಕ್ಕೆ ಹೋಲಿಸಬಹುದು. ಡ್ರೆೃವಿಂಗ್‌ ಮಾಡುವಾಗ ಹೇಗೆ ಬರೀ ಹಸಿರು ದೀಪಗಳೇ ಬರುವುದಿಲ್ಲವೊ, ಅದೇ ರೀತಿ ಬದುಕಿನಲ್ಲಿ ಬರೀ ಸಂತಸದ ಕ್ಷಣಗಳೇ ತುಂಬಿರುವುದಿಲ್ಲ. ಬದುಕಿನಲ್ಲಿ ಸಂತಸದ ಕ್ಷಣಗಳಾಗಲಿ (ಹಸಿರು ದೀಪ), ದುಃದ ಕ್ಷಣಗಳಾಗಲಿ (ಕೆಂಪು ದೀಪ), ಯಾವುದೂ ಶಾಶ್ವತವಲ್ಲ . ಬಹಳ ವೇಳೆಯವರೆಗೆ ಇರುವುದಿಲ್ಲ. ದುಃಖ ಬಂದಾಗ, ಒಂದು ಕ್ಷಣ ವಿರಮಿಸಿ ಹೆಚ್ಚಿನ ಉತ್ಸಾಹದಿಂದ ಮುಂದೆ ನಡೆಯುವುದೇ ಬದುಕು.

ಕನ್ನಡದ ಶ್ರೇಷ್ಠ ಕವಿ, ಡಿ.ವಿ. ಗುಂಡಪ್ಪನವರು, ಆಧುನಿಕ ಭಗವದ್ಗೀತೆ ಎಂದು ಕರೆಯಬಹುದಾದ ‘ಮಂಕುತಿಮ್ಮನ ಕಗ್ಗ’ದಲ್ಲಿ ಬದುಕಿನ ಬಗ್ಗೆ ಈ ರೀತಿಯಾಗಿ ಹೇಳಿದ್ದಾರೆ-

ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ

ಮದುವೆಗೋ, ಮಸಣಕೋ, ಹೋಗೆಂದೆಡೆ ಹೋಗು ಮಂಕುತಿಮ್ಮ

ಬದುಕಿನ ಮೇಲೆ ನಮ್ಮ ಹಿಡಿತ ಏನೂ ಇಲ್ಲ, ಎಲ್ಲವೂ ವಿಧಿಯಾಟ. ಇಲ್ಲಿ ಬದುಕಿನ ಪಥವನ್ನು, ಬದುಕಿನ ತಿರುವುಗಳನ್ನು ನಿರ್ಧರಿಸುವುದು ವಿಧಿ ಮಾತ್ರ. ನಾವೇನಿದ್ದರೂ ಅದರ ಅಡಿಯಾಳುಗಳು ಎಂಬುದನ್ನು ಕವಿ ಮಾರ್ಮಿಕವಾಗಿ ತಿಳಿಸಿದ್ದಾರೆ. ಜೀವನದಲ್ಲಿ ಬರುವ ಸುಖದುಃಖಗಳು ವಿಧಿಯನ್ನು ಅವಲಂಬಿಸಿವೆ. ಜಟಕಾಬಂಡಿ ಅದರ ಸಾಹೇಬನ ಹಿಡಿತದಲ್ಲಿ ಮುಂದೆ ಸಾಗುವಂತೆ, ನಮ್ಮ ಬದುಕು ವಿಧಿಯ ಹಿಡಿತದಲ್ಲಿದೆ. ಅದರಂತೆ, ಬದುಕಿನಲ್ಲಿ ಬಂದದ್ದನ್ನು, ಸ್ವೀಕಾರ ಮಾಡುವ ಮನೋಭಾವ ಇರಬೇಕು, ಸುಖದುಃಖ ಎರಡನ್ನೂ ಒಂದೇ ರೀತಿಯಾಗಿ ಸ್ವೀಕರಿಸಬೇಕು ಎಂಬ ಸಂದೇಶವೂ ಇದರಲ್ಲಿದೆ.

ಚಿಕ್ಕವನಿದ್ದಾಗ ಹಳ್ಳಿಯಲ್ಲಿ, ಬದುಕಿನ ಬಹಳಷ್ಟು ಅನುಭವಿಸಿದ, ಬದುಕಿನ ಹಲವು ಮಗ್ಗಲುಗಳನ್ನು ಕಂಡ ವ್ಯಕ್ತಿಯಾಬ್ಬರು ನನಗೆ ಎರಡು ಮಾತುಗಳನ್ನು ಹೇಳಿದ್ದರು-, ‘ಮನೆ ಮೇಲೆ ಏರಲು ಉಪಯೋಗಿಸುವ ಏಣಿಯನ್ನು, ಮಾಳಿಗೆ ಹತ್ತಿದ ನಂತರ ಒದೆಯಬೇಡ, ಕೆಳಗಿಳಿಯಲು ಬೇಕಾಗುತ್ತದೆ !’.

ಎಷ್ಟೊಂದು ಅರ್ಥಪೂರ್ಣವಾದ ಮಾತು? ಬದುಕಿನ ಸಮಸ್ತ ಅನುಭವ ಆ ಮಾತಿನಲ್ಲಿ ತುಂಬಿದೆ ಎನ್ನಿಸುತ್ತಿದೆ. ಮನೆಯ ಮೇಲೆ ಏರುವದು, ಕೆಳಗಿಳಿಯುವುದು ಕೇವಲ Symbolic. ಏರಿದಾತ ಕೆಳಗಿಳಿಯಲೇ ಬೇಕು, ಇದು ಬದುಕಿನ ನಿಯಮ ಎನ್ನುವುದನ್ನು ಸರಳವಾಗಿ ಆಡುಮಾತಿನಲ್ಲಿ ಆ ವ್ಯಕ್ತಿ ಉಪದೇಶಿಸಿದ್ದರು. ಹಾಗೆಯೇ ಬದುಕಿನ ಹಲವಾರು ಮಜಲುಗಳಲ್ಲಿ, ತಿರುವುಗಳಲ್ಲಿ ನಿಂತು ಮಾರ್ಗದರ್ಶನ ಮಾಡಿದ, ಉಪಕಾರ ಮಾಡಿದ, ಗುರಿಯನ್ನು ಸೇರಲು ಸಹಾಯ ಮಾಡಿದ ಜನರನ್ನು ಮರೆಯಬಾರದು ಎಂಬ ಹೇಳಿಕೆಯೂ ಅದರಲ್ಲಿತ್ತು.

ಚಕ್ರದ ಉರುಳುಗಳಲ್ಲಿ ಕೆಳಮುಖವಾಗಿದ್ದ ಭಾಗ ಮೇಲೇರಲೇ ಬೇಕು, ರಾತ್ರಿ ಕಳೆದು ಬೆಳಕು ಉದಿಸಲೇ ಬೇಕು. ನೋವು, ಸಂಕಟ, ದುಃಖ ಇವು ನಮ್ಮ ಬದುಕಿಗೆ ಬೇಕಾದ ತರಬೇತಿ ಮತ್ತು ಶಿಕ್ಷಣಗಳನ್ನು ನೀಡಿ ಹೊರಟು ಹೋಗುತ್ತವೆ. ಅವು ಸ್ಥಾಯಿಯಲ್ಲ. ಬದುಕನ್ನು ಆಂಶಿಕ ದೃಷ್ಟಿಯಿಂದ ನೋಡಿದಾಗ ಈ ಮಾತು ಸರಿ ಎನ್ನಿಸದಿದ್ದರೂ ಪೂರ್ಣದೃಷ್ಟಿಯಿಂದ ನೋಡಿದಾಗ ನಿಜ ಎಂಬುವುದು ಸ್ಪಷ್ಟವಾಗುವದು. ನಮ್ಮ ತಿಳಿವಳಿಕೆ ಎಂಬುದು ಒಂದು ಇರುವೆ ಎಂದರೆ ಬದುಕು ಮತ್ತು ಈ ಪ್ರಪಂಚ ಆನೆಯಂತಹದು. ಆನೆಯ ಕಾಲಲ್ಲಿ ಬಿದ್ದಿರುವ ಇರುವೆಗೆ ಆನೆಯನ್ನು ಯಾವತ್ತೂ ಪೂರ್ಣವಾಗಿ ಕಾಣಲು ಆಗುವುದಿಲ್ಲ. ಆನೆಯ ಒಂದು ಭಾಗವನ್ನು ಮಾತ್ರ ನೋಡಲು ಸಾಧ್ಯ. ಇರುವೆಯ ಕಣ್ಣೋಟದ ಹಾಗೆ ನಮ್ಮ ತಿಳಿವಳಿಕೆಯೂ ತೀಕ್ಷ್ಣವಾಗಿ ಇರಬಹುದು. ಆದರೂ ಬದುಕಿನಲ್ಲಿ ಇರುವ, ಬರುವ ಎಲ್ಲ ಪ್ರಶ್ನೆಗಳಿಗೂ ನಮ್ಮಿಂದ ಉತ್ತರ ಹುಡುಕುವುದು ಸಾಧ್ಯವಿಲ್ಲ.

ಬದುಕಿನಲ್ಲಿ ಎಂತಹ ತೊಂದರೆ ಬಂದರೂ ಎದುರಿಸುವ ಧೈರ್ಯ ಬರಬೇಕು. ಸಮುದ್ರ ತನ್ನಲ್ಲಿ ಸೇರುವ ನದಿಗಳು ಎಷ್ಟೇ ಉಕ್ಕೇರಿ ಹರಿದರೂ, ತನ್ನ ಹರಿವನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಬೇಸಿಗೆಯಲ್ಲಿ ಸಮುದ್ರವನ್ನು ಸೇರುವ ಎಲ್ಲ ನದಿಗಳ ನೀರು ಕಡಿಮೆಯಾದರೂ, ಸಮುದ್ರದಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುವುದಿಲ್ಲ. ಅದೇ ರೀತಿಯಾಗಿ ಬದುಕಿನಲ್ಲಿ ಬರುವ ಎಲ್ಲ ಸುಖದುಃಖಗಳನ್ನು ಒಂದೇ ರೀತಿಯಾಗಿ ಸ್ವೀಕರಿಸಿದರೆ, ನನಗೆ ಮಾತ್ರ ಏಕೆ ಕಷ್ಟ ಎನ್ನುವ ಪ್ರಶ್ನೆ ಉದ್ಭವಿಸುವದಿಲ್ಲ. ನಮ್ಮಲ್ಲಿ ಚಿಂತೆ, ಪಶ್ಚಾತಾಪ ಬರುವುದಿಲ್ಲ. ಇಷ್ಟರಮಟ್ಟಿಗೆ, ಸಮುದ್ರದಿಂದ ಕಲಿಯ ಬಹುದಾದ ಮುಖ್ಯ ಪಾಠ ಇದು. ಇದೇ ನಮ್ಮ ಗ್ರಂಥಗಳು ಸಾರಿದ ‘ಸ್ಥಿತಪ್ರಜ್ಞತೆ’.

ತೀರಾ ಇತ್ತಿಚಿಗೆ ಬಂದ ‘ಕಲ್‌ ಹೋ ನಾ ಹೋ’ ಹಿಂದಿ ಚಿತ್ರದ ಹಾಡು ಬದುಕಿನ ಸರಿಯಾದ ಚಿತ್ರಣ ನೀಡುವಂತಿದೆ.

ಹರ್‌ ಘಢಿ ಬದಲ್‌ ರಹಿ ರೂಪ ಜಿಂದಗಿ, ಛಾವ್‌ ಹೈ ಕಭಿ, ಕಭಿ ಹೈ ಧೂಪ ಜಿಂದಗಿ

ಹರ್‌ ಪಲ್‌ ಯಹಾ ಜೀ ಭರ್‌ ಜೀಯಾ, ಜೊ ಹೈ ಸಮಾ ಕಲ್‌ ಹೋ ನಾ ಹೊ

(ಬದುಕು ಪ್ರತಿಕ್ಷಣ ತನ್ನ ರೂಪವನ್ನು ಬದಲಿಸುತ್ತಿದೆ. ಬದುಕಿನಲ್ಲಿ ಕೆಲವೊಮ್ಮೆ ಬಿಸಿಲು ಇದೆ, ಕೆಲವೊಮ್ಮೆ ನೆರಳು ಇದೆ. ಜೀವನದ ಪ್ರತಿಯಾಂದು ಕ್ಷಣವನ್ನು ಮನಃಪೂರ್ತಿಯಾಗಿ ಬದುಕಬೇಕು, ನಾಳೆ ಈ ಕ್ಷಣ ಇರುತ್ತದೆಯಾ ಇಲ್ಲವೊ ಯಾರೂ ಅರಿಯರು)

ಆದರೂ ಬರೆದಷ್ಟು ಮುಗಿಯದ, ಚಿಂತಿಸಿದಷ್ಟೂ ಹೊಳೆಯದ ಬದುಕು ಇನ್ನೊಂದು ದೃಷ್ಟಿಯಲ್ಲಿ ತುಂಬಾ ಅತ್ಯಮೂಲ್ಯ. ಇದರ ನಶ್ವರತೆಯ ಬಗ್ಗೆ ಎಷ್ಟೇ ಮಾತನಾಡಿದರೂ ಇದರ ಚೆಲುವು ನಮ್ಮನ್ನು ಮುದಗೊಳಿಸುತ್ತದೆ. ಎಷ್ಟೇ ಕಷ್ಟವಿದ್ದರೂ, ಕಿರಿ ಕಿರಿಯಿದ್ದರೂ, ವಸಂತದಲ್ಲಿ ಬಿರಿಯುವ ಹೂಗಳು, ಹುಟ್ಟುವ ಗರಿಕೆ, ಹುಣ್ಣಿಮೆಯ ಚಂದ್ರ ಇವುಗಳಿಂದ ಅರಳದ ಮನಸ್ಸು ಯಾವುದೂ ಇಲ್ಲ. ಬದುಕು, ಹೀಗಿದ್ದರೇ ಚೆನ್ನ ಎನ್ನಿಸುವಷ್ಟು ಅರ್ಥಪೂರ್ಣವಾಗಿದೆ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more