• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾರ್ದಭ ಸ್ವರ್ಗ : ಕತ್ತೆಗಳು ಸಾರ್‌ ಕತ್ತೆಗಳು !

By Super
|

ಗಾರ್ದಭ ಸ್ವರ್ಗ !

ಹೌದು, ಕತ್ತೆಗಳಿಗೂ ಒಂದು ಸ್ವರ್ಗವಿದೆ. ಇದು ಕತ್ತೆಗಳಿಗಾಗಿಯೇ ಮೀಸಲಾದ ಇಂಗ್ಲೆಂಡಿನ ಸ್ಲೇಡ್‌ ಫಾರ್ಮ್‌ ಡಾಂಕಿ ಸ್ಯಾಂಕ್ಚುರಿಯಲ್ಲಿ ಇದೆ. ಈ ಸಾಮ್ರಾಜ್ಯದ ಸುತ್ತಳತೆ ಸುಮಾರು 730 ಹೆಕ್ಟೇರುಗಳಲ್ಲಿ ಕಟ್ಟಿರುವ ಹತ್ತು ಮನೆಗಳು. ಒಂದೊಂದು ಮನೆಯಲ್ಲೂ 350 ಸದಸ್ಯರು. ಈ ಸ್ವರ್ಗದ ಪ್ರಜೆಗಳು ಎರಡು ಸಾವಿರದ ಎಂಟುನೂರು. ಸುಮಾರು ಇಪ್ಪತ್ತೆರಡು ದಶಲಕ್ಷ ಡಾಲರ್‌ ಗಳ ಒಡೆಯರು ಈ ಗಾರ್ದಭರು ಎಂದರೆ ಆಶ್ಚರ್ಯವಲ್ಲವೇ? ಇವರು ಸಾಮಾನ್ಯರಲ್ಲ , ಬ್ರಿಟಿಷ್‌ ಪಿಂಚಣಿದಾರರು ಕೂಡ. ಇವರುಗಳಿಗೋಸ್ಕರವೇ ಲಕ್ಷಗಟ್ಟಲೆ ಹಣದ ಹೊಳೆ ಹರಿದು ಬರುತ್ತದೆ.

ಇದರ ಕರ್ತೃ ಎಪ್ಪತ್ಮೂರು ವರ್ಷದ ಡಾ. ಎಲಿಝೆಬತ್‌ ಸ್ವೆನ್ಡ್ಸೆನ್‌. ಈಕೆಗೆ ನಾಲ್ಕು ಮಕ್ಕಳು. ಈಗ ಅಜ್ಜಿಯಾಗಿದ್ದಾರೆ. ಅಂದಹಾಗೆ, 1973ರಲ್ಲಿ ಈ ಸಂಸ್ಥೆ ಶುರುವಾಯಿತು.

ಒಂದು ಕತ್ತೆಯನ್ನು ಮೈಯ ಚರ್ಮ ಸುಲಿಯುವಂತೆ ಹೊಡೆದು ದಾರಿಯಲ್ಲಿ ಬಿಸುಟಿದ್ದರು. ಇನ್ನೊಂದು ಕತ್ತೆಗೆ ದಿನಾ ರಾತ್ರಿ ಹೆಂಡ ಕುಡಿಸಿ ಒಂದು ಪಬ್‌ನಲ್ಲಿ ಮನರಂಜನೆಗಾಗಿ ಕುಣಿಸುತ್ತಿದ್ದರು. ಇದೆಲ್ಲವನ್ನೂ ಕಂಡ ಡಾ. ಎಲಿಝೆಬತ್‌ ಗೆ ಕತ್ತೆಯ ಮೇಲೆ ಮರುಕ ಉಕ್ಕಿತು. ಇದೇ ಕಾರಣದಿಂದ ಕತ್ತೆಗಳಿಗಾಗಿಯೇ ಒಂದು ಚಾರಿಟಿ ಶುರುವಾಗಿ ಕತ್ತೆಗಳ ಫಾರ್ಮ್‌ ರೂಪುಗೊಂಡಿತು. ಇದಿಷ್ಟೂ ಗಾರ್ದಭ ಸ್ವರ್ಗದ ಪೂರ್ವಾಪರ.

ಪ್ರಪಂಚದಲ್ಲಿ ಎಲ್ಲೆಡೆ ಹೊಟ್ಟೆಪಾಡಿಗೇ ಕಲ್ಲು ಬೀಳುತ್ತಿರುವಾಗ ಈ ಕತ್ತೆಗಳ ಪೋಷಣೆಗೆಂದು ಹಲವರು ತಮ್ಮ ಮೃತ್ಯುಪತ್ರದಲ್ಲಿ ಆಸ್ತಿ ಪಾಸ್ತಿಗಳೆಲ್ಲವನ್ನೂ ಈ ಚಾರಿಟಿ ಫೌಡೇಷನ್‌ಗಾಗಿ ಬರೆದಿದ್ದಾರೆ. ಡಾ. ಎಲೆಝೆಬತ್‌ ಅವರ ಪ್ರಕಾರ ಬಹಳ ಜನಕ್ಕೆ ಈ ಚಾರಿಟಿ ಫೌಡೇಷನ್‌ ಮೇಲೆ ನಂಬಿಕೆ ; ದೇಣಿಗೆ ನೀಡಿದ ಹಣ ಕತ್ತೆಗಳಿಗಾಗಿಯೇ ವಿನಿಯೋಗವಾಗುತ್ತದೆ ಎಂದು. ಒಂದು ಡಾಲರ್‌ನಲ್ಲಿ ಹದಿನೈದು ಸೆಂಟ್‌ಗಳು (48 ರೂಗಳಲ್ಲಿ ಸುಮಾರು ಹನ್ನೆರಡು ರೂಗಳು) ಮಾತ್ರ ಕೇಂದ್ರದ ಕಾರ್ಯ ನಿರ್ವಹಣೆಗೆ ಯೋಜಿಸಲ್ಪಟ್ಟಿದೆ. ಮಿಕ್ಕ ಮೂವತ್ತಾರು ರೂಗಳು ಕತ್ತೆಗಳಿಗಾಗಿ ವಿನಿಯೋಗಿಸಲ್ಪಡುತ್ತದೆ.

ಈ ಗಾರ್ದಭ ಕೇಂದ್ರದಲ್ಲಷ್ಟೇ ಅಲ್ಲ , ಸುಮಾರು 1500 ಕತ್ತೆಗಳು ಪೋಷಣೆಗಾಗಿ ಬೇರೆಡೆ ಇವೆ. ಪೋಷಕರಿಗೆ ಕತ್ತೆಯನ್ನು ನೋಡಿಕೊಳ್ಳುವುದಕ್ಕಾಗಿ ತರಬೇತಿಯನ್ನೂ ಕೊಡಲಾಗುತ್ತದೆ. ನೀವು ಕತ್ತೆ ಸಾಕುತ್ತೀರಾ ? ಹಾಗಿದ್ದಲ್ಲಿ ಒಂಟಿ ಬೇಡ, ಜೊತೆ ತೆಗೆದುಕೊಳ್ಳಿ, ಸ್ನೇಹಿತರಿಲ್ಲದಿದ್ದರೆ ಕತ್ತೆಗೆ ಬೇಸರವಾಗುತ್ತದೆ, ಎನ್ನುತ್ತಾರೆ ಡಾ. ಎಲಿಝೆಬತ್‌.

ವಿವಿಧ ಜಾತಿಯ ಕತ್ತೆಗಳಿಗೆ ಬೇಕಾದ ಬೂಟುಗಳು, ಬೆಚ್ಚಗಿರಲು ಹೀಟರ್‌ ಅನುಕೂಲತೆ ಕೂಡ ಇಲ್ಲಿದೆ. ಇವುಗಳ ತಪಾಸಣೆಗೆಂದು ನಿಯಮಿತವಾಗಿ ವೈದ್ಯರು ಭೇಟಿ ನೀಡುತ್ತಾರೆ. ಕುರುಡು ಕತ್ತೆಗಳಿಗಾಗಿ ಬೇಲಿಯಿಂದ ಆವೃತವಾದ ಆವರಣವಿದೆ. ಹಲವು ಕತ್ತೆಗಳಿಗೆ ಬಲು ವಯಸ್ಸಾಗಿದೆ, ಹಲವು ಕತ್ತೆಗಳು ಸರ್ಕಸ್‌ ಕಂಪನಿಗಳಿಂದ ಕಾಪಾಡಲ್ಪಟ್ಟಿವೆ. ಹಲವು ಕತ್ತೆಗಳು ಪಾಪ ಏಳಲಾಗದ ಸ್ಥಿತಿಯಲ್ಲಿವೆ. ಕತ್ತೆ ಯಾವ ಸ್ಥಿತಿಯಲ್ಲಿ ಬಂದರೂ ಅದನ್ನು ಪ್ರೀತಿಯಿಂದ ಕತ್ತೆ ಮನೆಗೆ ಸೇರಿಸಿಕೊಳ್ಳುತ್ತಾರೆ. ಕತ್ತೆ ದೇವೋಭವ !

ಬೆಳಿಗ್ಗೆ 5.30ಗೆ ಏಳುವ ಅಜ್ಜಿಗೆ ವಾರದಲ್ಲಿ ಬರೀ ಅರ್ಧ ದಿನ ಮಾತ್ರ ರಜ. 340 ಜನ ಈಕೆ ಜತೆ ಕೆಲಸ ಮಾಡುತ್ತಾರೆ. ಈಕೆಯನ್ನು ಪೂಜ್ಯ ಭಾವನೆಯಿಂದ ‘ಅಮ್ಮ’ ಎಂದು ಕರೆಯುತ್ತಾರೆ. ಈ ಪರಂಪರೆಯನ್ನು ಮುಂದುವರೆಸಲು ಡಾ. ಎಲಿಝೆಬತ್‌ ಒಬ್ಬ ಮಗ ಮತ್ತು ಮೊಮ್ಮಗಳನ್ನು ತಯಾರು ಮಾಡಿದ್ದಾರೆ.

ಈ ಸ್ವರ್ಗಕ್ಕೆ ತಪ್ಪದೆ ಭೇಟಿ ನೀಡುವ 72 ವರುಷದ ಮೌರೀನಳ ಪ್ರಕಾರ ಒಬ್ಬ ಗೆಳತಿಯ ಸಲಹೆಯ ಮೇರೆಗೆ ಈಕೆ ಇಲ್ಲಿಗೆ ಬರಲಾರಂಭಿಸಿದರು. ಮೌರೀನಳ ತಂದೆ ತಾಯಿಗಳು ಕ್ಯಾನ್ಸರ್‌ನಿಂದ ತೀರಿಕೊಂಡರು. ಈಕೆ ಈಗ ತನ್ನ ಆಸ್ತಿ ಎಲ್ಲವನ್ನು ಕತ್ತೆಗಳಿಗೆ ಬರೆಯುವಳಂತೆ. ಕತ್ತೆ ಮನೆಗೆ ಬಂದರೆ ಒಂದು ಥರ ‘ಸೆನ್ಸ್‌ ಆಫ್‌ ಬಿಲಾಂಗಿಗ್‌’ ಅನುಭವವಾಗುತ್ತದೆ ಎನ್ನುತ್ತಾರೆ ಈಕೆ. ತನ್ನ ತಂದೆ ತಾಯಿಯರ ನೆನಪಿಗಾಗಿ ಈ ಫಾರ್ಮ್‌ನಲ್ಲಿ ಮೌರೀನ್‌ ಒಂದು ಮರ ಕೂಡ ನೆಟ್ಟಿದ್ದಾರೆ. ಪ್ರತಿ ವರುಷ ಮೇ ತಿಂಗಳಲ್ಲಿ ನಡೆಯುವ ‘ಕತ್ತೆಗಳ ವಾರ’ ಕ್ಕೆ ತಪ್ಪದೆ ಬರುತ್ತಾರೆ. ಈ ಕತ್ತೆಗಳ ವಾರ ಪೋಷಕರಿಗೆ ಕತ್ತೆಗಳನ್ನು ಸಂಧಿಸಿ ಆತ್ಮೀಯತೆಯನ್ನು ಬೆಳೆಸುವುದಕ್ಕಾಗಿ ಮೀಸಲು.

ಇಲ್ಲಿ ಕೆಲಸ ಮಾಡುವ 46 ವರುಷದ ವೆನೆಸ್ಸಾ ಹೇಳುತ್ತಾರೆ- ‘ಕತ್ತೆ ಪ್ರೀತಿಯ ಪ್ರಾಣಿ, ಟೆಡ್ಡಿಬೇರ್‌ ತರಹ ದಪ್ಪ ರೋಮವುಳ್ಳದ್ದು. ದೊಡ್ಡ ಕಂಗಳಲ್ಲಿ ಪಾಪ ಏನೋ ನೋವು ಇದೆ’.

ಚಾರಿಟಿ ಫೌಂಡೇಷನ್ನಿನ ವಿಕಿ ಪ್ಲುಮನ್‌ ಹೇಳುವಂತೆ, ಕತ್ತೆಗಳ ಕೇಂದ್ರಕ್ಕಾಗಿ ಹಣ ವಿನಿಯೋಗಿಸುವ ಪೋಷಕರು ಬಹಳಷ್ಟು ಮಂದಿ ವಯಸ್ಸಾದವರು, ಒಂಟಿ ಜೀವಿಗಳು, ಮಕ್ಕಳಿಲ್ಲದವರು ಹಾಗೂ ಪ್ರಾಣಿ ಪ್ರಿಯರು.

ಬೆಳಿಗ್ಗೆ ಎಂಟು ಗಂಟೆಗೆ, ಮದ್ಯಾಹ್ನ ಮೂರು ಗಂಟೆಗೆ ಕತ್ತೆಗಳಿಗೆ ತಿಂಡಿ ಸಮಯ. ಬಿಳಿಯ ಮತ್ತು ಬ್ರೌನ್‌ ಬ್ರೆಡ್‌, ಅಲ್ಲದೆ ಸಿಹಿಯ, ತರಕಾರಿಗಳನ್ನು ಒಳಗೊಂಡ, ತಿನ್ನಲು ಸುಲಭವಾಗುವಂತೆ ಹೆಚ್ಚಿಟ್ಟ ಸ್ಯಾಂಡ್ವಿಚ್ಗ್‌ ಗಳು. ಇದರ ಜೊತೆ ಔಷಧಿಗಳು ಕೂಡ. ಬ್ರೆಡ್‌ ಸೇರದಿದ್ದಲ್ಲಿ ಶುಂಠಿಯ ಬಿಸ್ಕತ್ತುಗಳು ಕೂಡ ತಯಾರು.

ಬಹಳಷ್ಟು ಮಂದಿ ಈ ಕತ್ತೆಗಳಿಂದ ಸಹಾಯ ಪಡೆಯುತ್ತಾರೆ. ಬಡ ಮಕ್ಕಳಿಗೆ ರೈಡಿಂಗ್‌ ಥೆರಫಿಗೆ ಉಪಯೋಗಿಸುತ್ತಾರೆ. ಹಲವು ಕತ್ತೆಗಳು ವೃದ್ಧಾಶ್ರಮಕ್ಕೆ ವಾರಾಂತ್ಯದಲ್ಲಿ ಭೇಟಿ ಕೊಡುತ್ತವೆ. ಈ ಫಾರ್ಮ್‌ ನೋಡಲು ಶುಲ್ಕವಿಲ್ಲ , 365 ದಿನಗಳೂ ತೆರೆದಿರುತ್ತದೆ.

ಈ ಪರಿಯ ಸ್ವರ್ಗ ಇನ್ನಾವ ಲೋಕದಲಿ ಕಾಣೆ ಎಂದು ಈ ಫಾರ್ಮಿನ ಗಾರ್ದಭ ಮಹಾಶಯರು ಕಿರುಚುತ್ತಿರುವರೊ ಏನೋ ?

ಇಲ್ಲಿ ನೋಡಿ, ಕರ್ನಾಟಕದಲ್ಲಿ. ಬರದ ದವಡೆಗೆ ಸಿಲುಕಿದ ಲಕ್ಷಾಂತರ ಮಂದಿ ಗುಳೆ ಹೊರಟಿದ್ದಾರೆ. ಸಿಮೆಂಟು, ಜಲ್ಲಿ , ಕಬ್ಬಿಣದ ಸ್ಥಾವರಗಳಲ್ಲಿ ಒಂದು ಹೊತ್ತಿನ ಕೂಳಿನ ಕನಸು ಕಾಣುತ್ತಾರೆ. ಈ ಲೋಕದ ವೈಚಿತ್ರ್ಯಗಳೇ ಹೀಗೆ ! ಒಂದಂತೂ ನಿಜ- ಬಡ ಜನತೆ ಪಡೆದಿದ್ದು ಅವರಿಗೆ, ಕತ್ತೆ ಪಡೆದದ್ದು ಕತ್ತೆಗೆ !

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vani Ramdas, Singapore writes on Donkey’s Sanctuary in Britan. This Sanctuary to provide a safe, permanent home for any donkey in distress or otherwise in need of care and attention
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more