• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟಿಲ್ಮನ್‌ : ದೇಶಕ್ಕಾಗಿ ಆಟ ಬಿಟ್ಟ , ಹಣ ಬಿಟ್ಟ , ಪ್ರಾಣ ಕೊಟ್ಟ

By Staff
|

ಆತ ಹುಟ್ಟಿದ್ದು ಅಮೇರಿಕಾದ ಸಿಲಿಕಾನ್‌ ಕಣಿವೆ ಸ್ಯಾನ್‌ ಓಸೆಯಲ್ಲಿ. ಇಲ್ಲಿ ಅಮೇರಿಕಾದ ಫುಟ್ಬಾಲ್‌ ಆಡುತ್ತಾ ಬೆಳೆದು ನಂತರ ಕಾಲೇಜು ಓದಲು ಹೋಗಿದ್ದು ಪಕ್ಕದ ರಾಜ್ಯ ಅರಿಜೋನ ರಾಜ್ಯ ವಿಶ್ವವಿದ್ಯಾಲಯದಲ್ಲಿ. ಓದು ಮುಗಿದ ನಂತರ 2001ರಲ್ಲಿ ಪ್ರಸಿದ್ಧ ಸೂಪರ್‌ ಬೌಲ್‌ ಚಾಂಪಿಯನ್‌ ತಂಡ ಸೇಂಟ್‌ ಲೂಯಿಸ್‌ ರ್ಯಾಮ್ಸ್‌ ನವರಿಂದ ಬಂದಿದ್ದ ಐದು ವರ್ಷಗಳ ಕಾಲದ 9 ಮಿಲಿಯನ್‌ ಡಾಲರ್‌ಗಳ ಪ್ರಸ್ತಾವನೆಯನ್ನು ತಿರಸ್ಕರಿಸಿ ಅಷ್ಟೇನೂ ಉತ್ತಮ ಸ್ಥಿತಿಯಲ್ಲಿ ಇರದ ತನ್ನ ಪ್ರೀತಿಯ ಅರಿಜೋನ ಕಾರ್ಡಿನಲ್ಸ್‌ ತಂಡಕ್ಕೆ ಆಡಲು ತೀರ್ಮಾನಿಸಿದಾಗಲೇ ಆತನನ್ನು ಚೆನ್ನಾಗಿ ಅರಿಯದವರಿಗೆ ಆಘಾತವಾಗಿತ್ತು.

ಆದರೆ 25 ವರ್ಷಗಳ ಆ ಯುವಕನ ನಡತೆ ಆತನನ್ನು ಅರಿತಿದ್ದವರಿಗೆ ಆಘಾತವೇನೂ ಆಗಿರಲಿಲ್ಲ. ಅವರಿಗೆ ಗೊತ್ತಿತ್ತು ; ಕಾರ್ಡಿನಲ್ಸ್‌ ಎಡೆಗಿನ ಆತನ ಪ್ರೇಮ ಮತ್ತು ನಿಷ್ಠೆಯನ್ನು ಕೇವಲ ದುಡ್ಡಿನಿಂದ ಕೊಳ್ಳಲು ಸಾಧ್ಯವಿಲ್ಲ ಎಂದು. ಇಂತಹ ವ್ಯಕ್ತಿ ತನ್ನ ಪ್ರೀತಿಯ ತಂಡದಿಂದ ಮತ್ತು ಫುಟ್ಬಾಲ್‌ ಆಟದಿಂದಲೇ ಒಂದು ವರ್ಷದ ನಂತರ ಸ್ವಯಂಸ್ಫೂರ್ತಿಯಿಂದಲೇ ಹೊರನಡೆಯಬೇಕಾದರೆ ದುಡ್ಡಿನ ಅಥವಾ ಕೀರ್ತಿಯ ಅಮಿಷದಿಂದ ಸಾಧ್ಯವಿರಲಿಲ್ಲ .

ದೇಶಸೇವೆಯ ಕರ್ತವ್ಯ ತನ್ನ ಮುಂದಿದೆ ಎಂಬ ಪ್ರಜ್ಞೆ ಸಾಕಾಗಿತ್ತು.

Pat Tillman is the Epitome Of a Heroಅಮೇರಿಕನ್‌ ಫುಟ್‌ಬಾಲ್‌ ದಾಂಡಿಗರ ಆಟ. ಆರಡಿಗಿಂತಲೂ ಎತ್ತರದ, ನೂರು ಕೇಜಿಗಳಿಗಿಂತಲೂ ತೂಕವಿರುವ, ಕೊಬ್ಬಿದ ದೈತ್ಯರ ನಡುವೆ ಐದು ಅಡಿ ಹನ್ನೊಂದು ಇಂಚಿನ, 90 ಕೇಜಿಗಿಂತಲೂ ಕಮ್ಮಿ ತೂಕದ ಪ್ಯಾಟ್‌ ಟಿಲ್ಮನ್‌ ಅರಿಜೋನ ಕಾರ್ಡಿನಲ್ಸ್‌ ತಂಡದ ಸ್ಟಾರ್‌ ಆಟಗಾರನಾಗಬೇಕಾದರೆ ಆತ ಚೆನ್ನಾಗಿ ಆಡಬೇಕು, ವಿಭಿನ್ನವಾಗಿರಬೇಕು, ಅಲ್ಲವೇ? ದೈತ್ಯನಲ್ಲದ, ಮಿಂಚಿನ ವೇಗವಿಲ್ಲದ ಪ್ಯಾಟ್‌ ತನಗೆಂದೇ ಒಂದು ಸ್ಥಾನ ಸಂಪಾದಿಸಿಕೊಂಡಿದ್ದರೆ ಅದು ಆತನ ಬುದ್ಧಿ ಮತ್ತು ಧೈರ್ಯಸ್ಥೈರ್ಯಗಳಿಂದಾಗಿತ್ತು.

ಈತನ ವಿಷಯದಲ್ಲಿ ಎಲ್ಲಾ ಸರಿಯಿದೆ ಎಂದೇನೂ ಇಲ್ಲ . ಹೈಸ್ಕೂಲು ದಿನಗಳಲ್ಲಿ ಮೈದಾನದಲ್ಲಿ ತೋರಿಸುವ ಬಲವನ್ನೇ ಮೈದಾನದ ಹೊರಗೂ ತೋರಿಸುತ್ತಿದ್ದ. ತನ್ನ ಸ್ನೇಹಿತನೊಬ್ಬನ ನೆರವಿಗೆ ಹೋಗಿ 20 ವರ್ಷಕ್ಕೂ ಮೇಲ್ಪಟ್ಟವನೊಬ್ಬನನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಾಗ ಆತನ ವಯಸ್ಸು ಕೇವಲ 17 ವರ್ಷ. ಆಗಲೇ ಆತನಿಗೆ ಮೂರು ವಿಶ್ವವಿದ್ಯಾಲಯಗಳಿಂದ ಸ್ಕಾಲರ್‌ಶಿಪ್‌ ಮತ್ತು ಪ್ರವೇಶ ದೊರಕಿತ್ತು. ತನ್ನ ಅಪರಾಧವನ್ನು ಒಪ್ಪಿಕೊಂಡು 30 ದಿನಗಳನ್ನು ಅಪ್ರಾಪ್ತರ ಬಂಧಿಖಾನೆಯಲ್ಲಿ ಕಳೆದು ಬಿಡುಗಡೆಯಾಗಿ ನಂತರ ಅರಿಜೋನದ ವಿಶ್ವವಿದ್ಯಾಲಯ ಸೇರಿಕೊಂಡ.

ಅಲ್ಲಿ ಫುಟ್‌ಬಾಲ್‌ ಆಡುತ್ತ ಆಡುತ್ತಲೇ ಮಾರ್ಕೆಟಿಂಗ್‌ ವಿಭಾಗದಲ್ಲಿ ಉತ್ತಮ ಗ್ರೇಡುಗಳಲ್ಲಿ ಶೈಕ್ಷಣಿಕ ಪದವಿಯನ್ನೂ ಪಡೆದ. ದೇಹ ಮಾತ್ರವಲ್ಲ , ಬುದ್ಧಿಮತ್ತೆಯಲ್ಲಿಯೂ ಚುರುಕಾಗಿದ್ದ.

1976ರ ಹುಟ್ಟಿದ ಪ್ಯಾಟ್‌ನ ಭವಿಷ್ಯ 2001ರಲ್ಲಿ ಹೊಳೆಯುತ್ತಿತ್ತು. ಪ್ರಪಂಚ ಅಂಗೈನಲ್ಲಿತ್ತು. ಫುಟ್‌ಬಾಲ್‌ ಜಗತ್ತಿನಲ್ಲಿ ಮಿಂಚುತ್ತಿದ್ದ. ಚಾಂಪಿಯನ್‌ ತಂಡಕ್ಕೆ ದುಡ್ಡಿನ ಆಸೆಗೆ ಸೇರದೆ ತನ್ನ ನೆಚ್ಚಿನ ತಂಡಕ್ಕೇ ಆಡಲು ತೀರ್ಮಾನಿಸಿದ್ದು ಗೌರವವನ್ನು ತಂದುಕೊಟ್ಟಿತ್ತು. ಆಟ ಆಡುವ ಸಮಯದಲ್ಲಿ ಟಚ್‌ಡೌನ್‌ ಸ್ಕೋರು ಮಾಡಿದ ನಂತರ ಖುಷಿಯಲ್ಲಿ ಹಿಂದಕ್ಕೆ ಅಥವಾ ಮುಂದಕ್ಕೆ ಆತ ಸರ್ಕಸ್‌ನವರು ಹೊಡೆಯುವಂತೆ ಗಾಳಿಯಲ್ಲಿಯೇ ಹೊಡೆಯುತ್ತಿದ್ದ ಪಲ್ಟಿ ಮನಮೋಹಕವಾಗಿರುತ್ತಿತ್ತು.

ಆ ಸಮಯದಲ್ಲಿಯೇ ಆತನ ಟೇಬಲ್‌ ಮೇಲೆ 3.6 ಮಿಲಿಯನ್‌ ಡಾಲರ್‌ಗಳ ಒಪ್ಪಂದ ಕಾಯುತ್ತಿತ್ತು. 2001 ಸೆಪ್ಟೆಂಬರ್‌ 11ರಂದು ಅಮೇರಿಕಾದ ನೆಲದಲ್ಲಿ ಕೋಮುವಾದಿ ಭಯೋತ್ಪಾದಕರ ವಿಕೃತ ನಗು ಗಹಗಹಿಸಿತ್ತು. ತನ್ನ ಕಾಲೇಜು ದಿನಗಳ ಪ್ರೆಯಸಿಯನ್ನು ಮದುವೆಯಾಗಿದ್ದ ಪ್ಯಾಟ್‌ ಟಿಲ್ಮನ್‌ ಮಧುಚಂದ್ರ ಮುಗಿಸಿ ಬಂದವನು 2002ರ ಮೇನಲ್ಲಿ ತಾನು ಅತೀವವಾಗಿ ಪ್ರೀತಿಸುತ್ತಿದ್ದ ಆಟಕ್ಕೆ, ತಂಡಕ್ಕೆ, ದುಡ್ಡಿಗೆ, ಕೀರ್ತಿಗೆ, ಉಜ್ವಲ ವೃತ್ತಿಬದುಕಿಗೆ ವಿದಾಯ ಕೋರಿ ತಲೆ ಕೆಡಿಸಿಕೊಳ್ಳದೆ ಸೇನೆ ಸೇರಲು ನೇರವಾಗಿ ನಡೆದೇ ಬಿಟ್ಟ.

ಟಿ.ವಿ ಮತ್ತು ಪತ್ರಿಕೆಗಳವರು ಅವನ ನಿರ್ಧಾರ ಕೇಳಿ ಸಂದರ್ಶನಕ್ಕೆ ಮುಗಿಬಿದ್ದರು. ಯಾರಿಗೂ ಅವನು ಸಂದರ್ಶನ ಕೊಡಲಿಲ್ಲ. ಸೆಪ್ಟೆಂಬರ್‌ ಹನ್ನೊಂದರ ದಾಳಿಯ ಮರು ದಿನ ಆತ ನೀಡಿದ್ದ - ‘ನನ್ನ ಮುತ್ತಾತ ಪರ್ಲ್‌ ಹಾರ್ಬರ್‌ನಲ್ಲಿ ಹೋರಾಡಿದ್ದ ಮತ್ತು ನನ್ನ ಕುಟುಂಬದ ಬಹಳಷ್ಟು ಜನ ಯುದ್ಧದಲ್ಲಿ ಭಾಗವಹಿಸಿ ದೇಶಕ್ಕೆ ಹೋರಾಡಿದ್ದಾರೆ. ನಾನು ಇಲ್ಲೀ ತನಕ ದರಿದ್ರ ಏನೂ ಮಾಡಿಲ್ಲ ’ ಎಂಬ ಹೇಳಿಕೆ ಮಾತ್ರ ದಾಖಲಾಗಿತ್ತು.

ಬೇಸ್‌ಬಾಲ್‌ ಆಟಗಾರನಾಗಿದ್ದ ಆತನ ತಮ್ಮ ಕೆವಿನ್‌ ಅಣ್ಣನನ್ನು ಹಿಂಬಾಲಿಸಿ ಇಬ್ಬರೂ ಆರ್ಮಿ ರೇಂಜರ್ಸ್‌ ಸೇರಿಕೊಂಡರು; ಅದೂ ಮುಂದಿನ ಸಾಲಿನಲ್ಲಿ ಕಾಳಗಕ್ಕೆ ಅವಕಾಶವಿರುವ ತುಕಡಿಯನ್ನು.

ಆಗಲೂ ಸಹ ಪ್ಯಾಟ್‌ನನ್ನು ಬಲ್ಲವರಿಗೆ ಅಂತಹ ಅಘಾತವಾಗಲಿಲ್ಲ.

ಅಮೇರಿಕ ಕಳೆದ ವರ್ಷ ಇರಾಕ್‌ನ ಮೇಲೆ ಯುದ್ದ ಸಾರಿದಾಗ ಟಿಲ್ಮನ್‌ನನ್ನು ಇರಾಕ್‌ಗೆ ಕಳಿಸಿತು. ಅಲ್ಲಿ ಯುದ್ಧದಲ್ಲಿ ಪಾಲ್ಗೊಂಡ ಕೆಲವು ತಿಂಗಳುಗಳ ನಂತರ ಅಫ್ಘನಿಸ್ತಾನ್‌ ಮತ್ತು ಪಾಕಿಸ್ತಾನದ ಗಡಿಯಲ್ಲಿ ಆಲ್‌ ಕೈದಾವನ್ನು ಬೇಟೆಯಾಡಲು ಪೂರ್ವ ಅಫ್ಘನಿಸ್ತಾನಕ್ಕೆ ಕಳಿಸಿತು. ಕಳೆದ ಗುರುವಾರ, ಏಪ್ರಿಲ್‌ 22ರಂದು ಅಲ್ಲಿನ ಬೆಟ್ಟಗುಡ್ಡಗಳಲ್ಲಿ ಆಲ್‌ ಕೈದ ಗುಂಪಿನೊಂದಿಗೆ ನಡೆದ ಕಾಳಗದಲ್ಲಿ ಪ್ಯಾಟ್‌ ಟಿಲ್ಮನ್‌ ಗುಂಡಿಗೆ ಎದೆಯಾಡ್ಡಿ ಬಲಿಯಾದ.

ಶುಕ್ರವಾರ ಸುದ್ದಿ ಅಮೇರಿಕಾ ತಲುಪಿತು. ಯುದ್ಧ ಪ್ರಾರಂಭವಾದ ನಂತರ ಈ ರೀತಿ ಅಮೇರಿಕದ ಜನರಿಗೆಲ್ಲ ತಿಳಿದಿದ್ದ ಸೈನಿಕ ಸತ್ತಿದ್ದು ಇದೇ ಮೊದಲ ಬಾರಿ. ಪ್ರಸಿದ್ಧನಾಗಿದ್ದರೂ ತನ್ನ ನಡತೆಯಿಂದಾಗಿ ಅನಾಮಿಕ ಸೈನಿಕನಾಗಿ ಸತ್ತ ಪ್ಯಾಟ್‌ನನ್ನು ನೆನಸಿಕೊಂಡು ದೇಶ ಎದೆಯುಬ್ಬಿಸಿಕೊಂಡು ನಿಂತಿತು. ಸಹನಾಗರಿಕನ ಬಗ್ಗೆ ಮತ್ತು ತನ್ನ ಪರಂಪರೆಯ ಬಗೆಗೆ ಹೆಮ್ಮೆ ಪಟ್ಟಿತು. ಕೆಲವು ಕಡೆ ಗೌರವಪೂರ್ವಕವಾಗಿ ಧ್ವಜಗಳು ಕೆಳಮಟ್ಟದಲ್ಲಿ ಹಾರಾಡಿದವು.

ಆದರೂ ಪ್ಯಾಟ್‌ ಸತ್ತಿದ್ದು ಅವನ ಹಳೇ ಒಡನಾಡಿಗಳಿಗೆ ಆಘಾತದ ವಿಷಯವಾಗಿಲ್ಲ. ಆತನ ಹಳೇ ಕೋಚ್‌ ಹೇಳಿದ್ದು ; ‘ಈ ಸುದ್ದಿ ಬೆಳಿಗ್ಗೆ ತಿಳಿದಾಗ ಆಘಾತವಾಯಿತು. ನಂತರ ಅದು ಆಘಾತವಾಗಿರಲಿಲ್ಲ’. ಆತ ದೇಶೋನ್ಮಾದದ ವ್ಯಕ್ತಿಯಾಗಿರದೆ ನೈಜ ದೇಶಪ್ರೇಮಿಯಾಗಿದ್ದ. ಆತನ ತಮ್ಮ ಕೆವಿನ್‌ ಮಧ್ಯಪೂರ್ವದಲ್ಲಿ ಸೇನಾ ಸೇವೆಯಲ್ಲಿಯೇ ಇದ್ದಾನೆ ಎಂದು ಸುದ್ದಿ.

ಸಾಮಾನ್ಯವಾಗಿ ಎಲ್ಲಾ ಆಟಗಾರರೂ ಮಾತೆತ್ತಿದರೆ ನಾವು ದೇಶಕ್ಕಾಗಿ ಆಡುತ್ತೇವೆ ಎನ್ನುತ್ತಾರೆ. ಆದರೆ ಅಂತಹ ಮಾತುಗಳಿಗೆ ಅರ್ಥ ಬರುವುದು ಮಾತಾಡದೆ ನಡೆದು ತೋರಿಸಿದ ಪ್ಯಾಟ್‌ನಂತಹವರಿಂದ ಮಾತ್ರ. ಅಮೇರಿಕಾದ ಜನಪ್ರತಿನಿಧಿಯಾಬ್ಬ ಈ ಸಮಯದಲ್ಲಿ ಹೇಳಿದ್ದು ಅದನ್ನು ಪೂರ್ಣವಾಗಿ ಪ್ರತಿಬಿಂಬಿಸುತ್ತದೆ; ‘ಅಮೇರಿಕಾದ ಮಿಲಿಟರಿಯ ತ್ಯಾಗ, ನಿಸ್ವಾರ್ಥತೆ ಮತ್ತು ಸೇವೆಯನ್ನು ಪ್ಯಾಟ್‌ ಮಾದರಿಯಾಗಿ ತೋರಿಸಿಕೊಟ್ಟ . ಈ ದಿನಗಳಲ್ಲಿ ವೃತ್ತಿಪರ ಕ್ರೀಡೆಗಳಲ್ಲಿ ಅಪ್ಪಟ ಆದರ್ಶ ಮಾದರಿಗಳು ವಿರಳ ಮತ್ತು ಯಾವಾಗಲೊ. ಆದರೆ ಟಿಲ್ಮನ್‌ ಕ್ರೀಡೆಗಳಲ್ಲಿ ಇನ್ನೂ ಹೀರೋಗಳಿದ್ದಾರೆ ಎಂಬುದನ್ನು ಸಾಧಿಸಿ ತೋರಿಸಿದ’.

ಅಮೇರಿಕಾದ ಈ ದೇಶಪ್ರೇಮಿ ಇಂದು ಕೇವಲ ಅಮೇರಿಕಾದವರಿಗೆ ಮಾತ್ರ ಆದರ್ಶವಲ್ಲ ; ಬದಲಿಗೆ ದೇಶವನ್ನು ಪ್ರೀತಿಸುವ ಜಗತ್ತಿನ ಮೂಲೆಮೂಲೆಯ ಎಲ್ಲಾ ದೇಶಪ್ರೇಮಿಗಳಿಗೂ.

ದೇಶಪ್ರೇಮಿ ಟಿಲ್ಮನ್‌ಗೆ ಪ್ರೀತಿಯ ನಮಸ್ಕಾರಗಳು.

What others Say:

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more