• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಾವುಟ ಗರಿಬಿಚ್ಚಿದಾಗ ನನ್ನ ಬಾಲ್ಯ ನೆನಪಾಯಿತು !

By Staff
|

ಝಂಡಾ ಊಂಚಾ ರಹೆ ಹಮಾರಾ

ವಿಜಯಿ ವಿಶ್ವ ತಿರಂಗಾ ಪ್ಯಾರಾ

ಶಾಲೆಯ ಮಕ್ಕಳು ಹಾಡುತ್ತಿದ್ದರು. ತಾಯ್ನಾಡ ಧ್ವಜ ಮೇಲೆ ಗಾಳಿಯಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿತ್ತು. ಎಲ್ಲರಂತೆ ಎದೆಯ ಮೇಲೆ ಕೈಯಿಟ್ಟು ನಿಂತಿದ್ದೆ ನಾನೂ. ನನ್ನ ಹೃದಯದ ಬಡಿತ, ತುಡಿತ ನನಗೇ ಗಟ್ಟಿಯಾಗಿ ಕೇಳಿಸುವಂತಿತ್ತು. ಅಂದು ಆಗಸ್ಟ್‌ 15, 2003. ಭಾರತದ ಸ್ವಾತಂತ್ರ್ಯ ದಿನಾಚರಣೆ! ಯಾವ ತಾಯ್ನಾಡನ್ನು ನಾನು ಮೂವತ್ತು ವರ್ಷಗಳ ಹಿಂದೆ ಬಿಟ್ಟು ಹೋಗಿದ್ದೆನೋ ಅದೇ ನಾಡ ಧ್ವಜಾರೋಹಣಕ್ಕಾಗಿ ಈ ಶಾಲೆಯಿಂದ ನನಗೆ ಆತ್ಮೀಯತೆಯ, ಅಕ್ಕರೆಯ ಕರೆ ಬಂದಿತ್ತು. ಅದು ಬಡ ಮಕ್ಕಳಿಗಾಗಿ ರೋಟರಿ ಕ್ಲಬ್ಬಿನವರು ನಡೆಸುತ್ತಿರುವ ಒಂದು ಶಾಲೆ. ಭಾರತಕ್ಕೆ ಕೆಲವು ದಿನಗಳಮಟ್ಟಿಗೆ ಬಂದಿದ್ದ ಸಮಯದಲ್ಲೇ ಸ್ವಾತಂತ್ರ್ಯ ದಿನಾಚರಣೆಯೂ ಬಂದಿದ್ದು ನನ್ನ ಸೌಭಾಗ್ಯವೇ ಸರಿ!

ಸುತ್ತಲೂ ಮಕ್ಕಳು- ಬಿಳಿಯ ಯೂನಿಫಾರಂ ತೊಟ್ಟು ಎರಡು ಜಡೆ ಹಾಕಿ ಹೂ ಮುಡಿದಿದ್ದ ಹುಡುಗಿಯರು, ಬಿಳಿಯ ಅಂಗಿ, ಚಡ್ಡಿ ಧರಿಸಿದ್ದ ಹುಡುಗರು ಕನ್ನಡದಲ್ಲಿ ಮಾತಾಡಿಕೊಳ್ಳುತ್ತಿದ್ದರು!..... ಥೇಟ್‌ ನನ್ನ ಬಾಲ್ಯದ ಒಂದು ತುಣುಕನ್ನು ಎಳೆದು ತಂದು ಇಲ್ಲಿ ಇಟ್ಟಂತಿತ್ತು ! ಇಂತಹ ವಾತಾವರಣ ಈಗೆಲ್ಲಿ ಸಿಕ್ಕೀತು, ಶ್ರೀಮಂತರ ಮಕ್ಕಳ ಶಾಲೆಯಲ್ಲಿ ? ಕಾನ್ವೆಂಟಿನಲ್ಲಿ ಇಂಗ್ಲಿಷ್‌ ಮಾತನಾಡುತ್ತಲೇ ಬೆಳೆಯುವ, ದಿನ ಬೆಳಗಾದರೆ ಟಿವಿಯಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಪ್ರೋಗ್ರಾಮುಗಳನ್ನು ನೋಡುವ ಆ ಮಕ್ಕಳು ಕಂಟೋನ್‌ಮೆಂಟಿನಲ್ಲಿ ಸಿಕ್ಕುವ ಪ್ಲಾಸ್ಟಿಕ್‌ ಹೂಗಳು. ಕನ್ನಡದ ಸೊಗಡು, ಮಣ್ಣಿನ ವಾಸನೆ ಅಲ್ಲೆಲ್ಲಿ ಸಿಕ್ಕೀತು? ( ಅದು ಖಂಡಿತ ಆ ಮಕ್ಕಳ ತಪ್ಪಲ್ಲ. ಪಾಶ್ಚಾತ್ಯರ ಅನುಕರಣೆಯೇ ಪ್ರಗತಿಯ ಲಕ್ಷಣ ಎಂದುಕೊಂಡಿರುವ ಸಮಾಜದ ತಪ್ಪು. ‘ತನ್ನ ಮರೆಯ ಕಂಪನರಿಯದದನೆ ಹೊರಗೆ ಹುಡುಕುವ, ಮೃಗದ ಸೇಡು ನಮ್ಮ ಪಾಡು ಪರರ ನುಡಿಗೆ ಮಿಡುಕುವ’ ಎಂಬ ಕವಿ ವಾಣಿ ನನಗೆ ಇದ್ದಕ್ಕಿದ್ದ ಹಾಗೆ ಯಾಕೆ ನೆನಪಾಗುತ್ತಿದೆ!) ಕನ್ನಡದ ಇಂಪು, ಕಂಪು, ಸೊಂಪು ಬೇಕಾದರೆ ಬನ್ನಿ ಇಂತಹ ಕೆಳವರ್ಗದವರ ಶಾಲೆಗಳಿಗೆ. ನಮ್ಮ ಸಂಸ್ಕೃತಿಯ ನಂದಾದೀಪ ಪಶ್ಚಿಮದ ಗಾಳಿಗೆ ಆರಿ ಹೋಗದಂತೆ ಕೈ ಅಡ್ಡ ಹಿಡಿದು ಕಾಪಾಡುತ್ತಿರುವವರು ಇವರು. ನಮ್ಮೂರ ಹಿತ್ತಲುಗಳಲ್ಲಿ ಸಿಕ್ಕೀತು ನಿಮಗೆ ಮೈಸೂರು ಮಲ್ಲಿಗೆಯ ವಾಸನೆ, ಕನ್ನಡದ ಕಸ್ತೂರಿಯ ವಾಸನೆ. ಮುಂದುಗಡೆಯ ಉದ್ಯಾನದಲ್ಲಿ ನಿಮಗೆ ಸಿಕ್ಕುವುದು ಬರೀ ಫಾರಿನ್‌ ಪರ್‌ಫ್ಯೂಮ್‌ ವಾಸನೆ ಮಾತ್ರ! ಹ್ಞಾ , ಆಗೊಮ್ಮೆ ಈಗೊಮ್ಮೆ ಮಲ್ಲಿಗೆಯ ಕಂಪು ಮೂಗಿಗೆ ಬಂದೀತು. ಆದರೆ ಅದು ಮಲ್ಲಿಗೆಯನ್ನೂ ಫಾರಿನ್‌ಗೆ ಕಳಿಸಿ ರೂಪಾಂತರಗೊಳಿಸಿ ಮಾಡಿದ ಜ್ಯಾಸ್ಮಿನ್‌ ಪರ್‌ಫ್ಯೂಂ ವಾಸನೆ!

ಈ ಶಾಲೆಯ ಅಭಿವೃದ್ಧಿಗಾಗಿ ನಮ್ಮ ಶಿಕಾಗೊ ಕನ್ನಡಕೂಟದ ಚಾರಿಟಬಲ್‌ ಕಮಿಟಿಯವರಿಂದ ಡೊನೇಶನ್‌ ಕೊಡಿಸಿದ್ದೆ ನಾನು. (ಶಿಕಾಗೊ ಕನ್ನಡ ಕೂಟದ ಚಾರಿಟಬಲ್‌ ಕಮಿಟಿ ಪ್ರತಿ ವರ್ಷವೂ ನಿಧಿ ಸಂಗ್ರಹಿಸಿ ಭಾರತದ ವಿವಿಧ ಸೇವಾಸಕ್ತ ಸಂಸ್ಥೆಗಳಿಗೆ ಧನ ಸಹಾಯ ಮಾಡುತ್ತದೆ.) ಅದೇ ವಿಶ್ವಾಸದ ಮೇಲೆ ನನ್ನನ್ನು ಈ ದಿನದ ಸಮಾರಂಭಕ್ಕೆ ಮುಖ್ಯ ಅತಿಥಿಯನ್ನಾಗಿ ಸ್ವಾಗತಿಸಿದ್ದರು.

ಬೆಳಿಗ್ಗೆ ಎಂಟು ಗಂಟೆಗೆ ಸ್ಕೂಲ್‌ ಬ್ಯಾಂಡಿನ ಬಾಜಾ ಬಜಂತ್ರಿಯ ಸಮೇತ ನಮಗೆ ಆದರದ ಸ್ವಾಗತ. ಇದೀಗ ಮುಖ್ಯ ಅತಿಥಿಯಾದ ನನ್ನಿಂದ ಧ್ವಜಾರೋಹಣ. ನನ್ನ ಮನಸ್ಸಂತೂ ಭಾವನೆಗಳ ಜಲಪಾತದಲ್ಲಿ ಮಿಂದು ತೊಯ್ದು ಹೋಗಿತ್ತು. ತಾಯಿ ಭಾರತಿ! ನೀನು ನಿಜವಾಗಿಯೂ ಎಷ್ಟು ವಾತ್ಸಲ್ಯಮಯಿ! ಎಷ್ಟು ಕ್ಷಮಾಶೀಲೆ! ಮಕ್ಕಳು ಮುನಿಸಿಕೊಂಡರೂ ಸರಿಯೆ, ನಕ್ಕು ನಲಿದರೂ ಸರಿಯೆ, ಬಿಟ್ಟು ದೂರ ಹೋದರೂ ಸರಿಯೆ, ಹತ್ತಿರವೇ ಇದ್ದರೂ ಸರಿಯೆ, ಏಳಿಗೆಗೆ ಬಂದರೂ ಸರಿಯೆ, ಹಾಳಾಗಿ ಹೋದರೂ ಸರಿಯೆ, ನಿನ್ನೆದೆಯ ತುಂಬ ನಿರ್ವ್ಯಾಜ ಪ್ರೇಮವನ್ನು ತುಂಬಿ ನಮ್ಮೆಲ್ಲರನ್ನೂ ಬಾಚಿ ತಬ್ಬಿಕೊಳ್ಳುತ್ತೀ! ನಿನ್ನಿಂದ ಇಷ್ಟು ದಿನ ಹೇಗೆ ದೂರ ಇದ್ದೆ ನಾನು? ಆದರೆ ಅಷ್ಟು ದಿನವೂ ಕಾಲ ಪ್ರವಾಹದಲ್ಲಿ ಒಂದು ಗುಳ್ಳೆ ಒಡೆದಂತಾಗಿ ನಾನೆಂದೂ ನಿನ್ನನ್ನು ಬಿಟ್ಟೇ ಇರಲಿಲ್ಲ ಎಂಬ ಈ ಭಾವವೇಕೆ ಎದೆಯಲ್ಲಿ ! ಈ ಮಕ್ಕಳು, ಈ ಸೀರೆಯುಟ್ಟ ಹೆಂಗಸರು, ಈ ಮಣ್ಣು , ಈ ಗಾಳಿ ಈ ಮರ ಗಿಡ ಎಲ್ಲವೂ ನನ್ನದು, ನನ್ನವರು ಎಂಬ ಅನಿಸಿಕೆ! ಇದನ್ನೇ ಅಲ್ಲವೆ ಕವಿ ಲಕ್ಷ್ಮೀ ನಾರಾಯಣ ಭಟ್ಟರು ಹೇಳಿದ್ದು ‘ತಾಯೆ ನಿನ್ನ ಮಡಿಲಲಿ ಕಣ್ಣ ತೆರೆದ ಕ್ಷಣದಲಿ, ಸೂತ್ರ ಒಂದು ಬಿಗಿಯಿತೆಮ್ಮ ಸಂಬಂಧದ ನೆಪದಲಿ’ ಅಂತ. ಹೌದು ವರ್ಷಾಂತರಗಳೇ ಉರುಳಿದರೂ ಕಡಿಯದ ಸಂಬಂಧ, ದೇಶಾಂತರ ಹೋದರೂ ಮುಗಿಯದ ಸಂಬಂಧ!

ಈ ಮಕ್ಕಳು ಆ ತಾಯ ಪ್ರತಿನಿಧಿಯಾಗಿ ನನ್ನೆದುರು ನಿಂತಿವೆ. ತಾಯ್ನಾಡಿಗೆ ಬೆನ್ನು ಹಾಕಿ ಅಮೆರಿಕೆಗೆ ಹೋದರೂ ನನ್ನ ಹೃದಯದಲ್ಲೇ ಅಡಗಿಕೊಂಡು ನನ್ನ ಬೆಂಬತ್ತಿ ಬಂದಿವೆ. ಆಗೊಮ್ಮೆ ಈಗೊಮ್ಮೆ ಧುತ್ತೆಂದು ನನ್ನೆದುರು ನಿಂತು ಕಾಡುತ್ತಿವೆ ಈ ಮುಗ್ಧ ಮುಖಗಳು, ಈ ಬೊಗಸೆ ಕಣ್ಣುಗಳು. ನೀನೆಲ್ಲಿ ಹೋದರೂ ನಮ್ಮವಳೇ ತಾನೆ? ಎಂದು ಹೇಳುತ್ತಿವೆ! ಏನನ್ನೋ ಬೆಂಬತ್ತಿ ಆ ದೂರಕ್ಕೆ ಹೋದರೂ ನಮ್ಮನ್ನು ನೀನು ಹೇಗೆ ಮರೆಯಬಲ್ಲೆ ! ಎಂದು ಆತ್ಮವಿಶ್ವಾಸದಿಂದ ಕೇಳುತ್ತಿವೆ.

ನಿಜ. ನೂರಕ್ಕೆ ನೂರು ನಿಜ. ನಿಮ್ಮನ್ನು ನಾನು ಮರೆಯಲಾರೆ. ಯಾಕೆಂದರೆ ನೀವು ಬೇರೆ ಯಾರೂ ಅಲ್ಲ, ನಾನೇ! ನನ್ನ ಬಾಳಿನ ಕಳೆದ ದಿನಗಳೇ ಮತ್ತೆ ಮೈದಾಳಿ ಬಂದಿರುವಾಗ, ನನ್ನ ಒಂದಂಶವೇ ನನ್ನೆದುರು ನಿಂತಿರುವಾಗ ಅದನ್ನು ನಾನು ಅಲ್ಲಗಳೆಯುವುದು ಹೇಗೆ? ಮರೆಯುವುದು ಹೇಗೆ? ಬಿಟ್ಟು ಹೋಗುವುದಾದರೂ ಎಲ್ಲಿಗೆ?

ಮೇಲೆ ಧ್ವಜ ಹಾರುತ್ತಲೇ ಇತ್ತು , ತಾಯ್ನಾಡಿಗೆ ವಂದನೆ ಸಲ್ಲಿಸುತ್ತಾ ನಿಂತಿದ್ದ ನನ್ನ ಕಣ್ಣು ತೇವವಾಗಿತ್ತು , ‘ಝಂಡಾ ಊಂಚಾ ರಹೇ ಹಮಾರಾ’ ಎಂದು ನನ್ನ ಮೈಯ ಕಣ ಕಣವೂ ಹಾಡುತ್ತಿತ್ತು.

***

ಆಮೇಲೆ ಒಂದಿಷ್ಟು ಭಾಷಣಗಳು. ಯಾರೋ ಒಬ್ಬರು ಪ್ರಜಾಸತ್ತೆಯಲ್ಲಿ ಬಡವ ಬಲ್ಲಿದ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನಾವಕಾಶ ಇರುವ ಬಗ್ಗೆ ತುಂಬ ಚನ್ನಾಗಿ ಮಾತಾಡಿದರು. ಕೊನೆಯಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಪುಟಾಣಿ ಹುಡುಗಿಯಾಂದು ದೇಶ ಪ್ರೇಮ ಗೀತೆಗಳನ್ನು ಹಾಡಿತು. ಒಬ್ಬ ಹುಡುಗ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಮಾತಾಡಿದ. ಕಾರ್ಯಕ್ರಮ ನಿರೂಪಣೆ ಎಲ್ಲವೂ ಹಿತವಾದ ಸವಿಗನ್ನಡದಲ್ಲೇ ನಡೆಯಿತು. ಇನ್ನೂ ಒಂದೆರಡು ಐಟಂಗಳು ಇದ್ದವಂತೆ. ಅಷ್ಟರಲ್ಲಿ ಒಂದು ಫಜೀತಿ ಉಂಟಾಯಿತು. ಅಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ರೋಟರಿ ಕ್ಲಬ್ಬಿನ ಹಲವು ಸದಸ್ಯರ ಮಕ್ಕಳಿಗೆ ಇನ್ನೊಂದು ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಉತ್ಸವ ಒಂಭತ್ತು ಗಂಟೆಗೆ ಶುರುವಾಗಲಿತ್ತು. ಅಗಲೇ ಸಮಯ 8:55 ಆಗಿತ್ತು ! ಆ ದೊಡ್ಡ ಮನುಷ್ಯರ ಮಕ್ಕಳ ಶಾಲೆ ಪಕ್ಕದಲ್ಲೇ ಇದ್ದಿದ್ದು ಒಂದು ಸಮಾಧಾನದ ಸಂಗತಿ.

ಬಡವರು ದೊಡ್ಡವರಿಗೆ ಕಾಯಬಹುದು. ಆದರೆ ದೊಡ್ಡವರು ಬಡವರಿಗಾಗಿ ಕಾಯುವುದುಂಟೆ? ತರಾತುರಿಯಲ್ಲಿ ವಂದನಾರ್ಪಣೆ ಮಾಡಿ ಮತ್ತೆ ಬಾಜಾ ಬಜಂತ್ರಿಯಾಡನೆ ನಮ್ಮನ್ನು ಪಕ್ಕದ ಶಾಲೆಯವರೆಗೂ ಕರೆತಂದು ಬಿಟ್ಟರು! ಪಾಪ, ಅಷ್ಟು ಹುಮ್ಮಸ್ಸಿನಲ್ಲಿ ಆ ದಿನಕ್ಕಾಗಿ ಸಿದ್ಧತೆ ನಡೆಸಿಯೂ ಕಾರ್ಯಕ್ರಮ ನೀಡಲಾಗದ್ದಕ್ಕಾಗಿ ಆ ಮಕ್ಕಳಿಗೆ ಎಷ್ಟು ಬೇಜಾರಾಯಿತೊ!

ಎರಡನೆಯ ಶಾಲೆಯಲ್ಲಿ ನಾನು ಎಣಿಸಿದ್ದಂತೆಯೇ ಹಿಂದಿ ಸಿನಿಮಾಗಳ ದೇಶ ಭಕ್ತಿ ಗೀತೆಗಳಿಗೆ ಮಕ್ಕಳಿಂದ ನೃತ್ಯಗಳನ್ನು ಮಾಡಿಸಿದರು. ಪುಟ್ಟ ಮಕ್ಕಳು ಮುದ್ದಾಗಿ ಕಾಣುತ್ತಿದ್ದರು. ಕಾರ್ಯಕ್ರಮದ ನಿರೂಪಣೆ ಎಲ್ಲ ಇಂಗ್ಲಿಷ್‌ನಲ್ಲೇ ಆಯಿತು. ಒಂದು ಡ್ಯಾನ್ಸಿಗೆ ಟೇಪ್‌ ರೆಕಾರ್ಡರ್‌ ಹಾಳಾಗಿ ಹಾಡು ಸರಿಯಾಗಿ ಕೇಳಿಸದೆ ಏನೋ ಎಡವಟ್ಟಾಯಿತು. ಪ್ರೇಕ್ಷಕರ ಅನುಮತಿ ಪಡೆದು ಆ ನೃತ್ಯ ಪ್ರದರ್ಶನ ಮತ್ತೆ ನೀಡಲಾಯಿತು. ‘ಅಷ್ಟೆಲ್ಲ ಪ್ರ್ಯಾಕ್ಟೀಸು ಮಾಡಿ ಕೊನೇ ಗಳಿಗೆಯಲ್ಲಿ ಕಾರ್ಯಕ್ರಮ ಕೆಟ್ಟು ಹೋದರೆ ಮಕ್ಕಳಿಗೆ, ಪಾಪ, ಎಷ್ಟು ಬೇಜಾರಾಗಲ್ಲ !’ ಅಂದರು ನನ್ನ ಪಕ್ಕದಲ್ಲಿ ಕುಳಿತಿದ್ದವರು.

ಎರಡನೆಯ ಬಾರಿ ನೀಡುತ್ತಿದ್ದ ಆ ನೃತ್ಯ ಪ್ರದರ್ಶನವನ್ನು ಮಕ್ಕಳ ಅಪ್ಪ ಅಮ್ಮಂದಿರು ಆಸಕ್ತಿಯಿಂದ ನೋಡುತ್ತಿದ್ದರು. ನಾನು ಪಕ್ಕಕ್ಕೆ ಕಣ್ಣು ಹಾಯಿಸಿದಾಗ ಬಿಳಿಯ ಯೂನಿಫಾರಂನಲ್ಲಿದ್ದ ಮೊದಲನೆಯ ಶಾಲೆಯ ಮಕ್ಕಳು ನಡೆದುಕೊಂಡು ಮನೆಗೆ ಹೋಗ್ತಾ ಇದ್ದಿದ್ದು ಕಾಣಿಸಿತು. ಕೆಲವು ಮಕ್ಕಳು ಆಗ ತಾನೇ ಹಂಚಿದ್ದ ಲಾಡು ತಿನ್ನುತ್ತಿದ್ದರು. ಆ ಮಕ್ಕಳನ್ನು ನೋಡುತ್ತಿದ್ದ ಹಾಗೆ ಲಾಡಿಗಿಂತಲೂ ಸಿಹಿಯಾದ ಭಾವನೆಯಾಂದು ನನ್ನ ಮನಸ್ಸನ್ನೆಲ್ಲ ತುಂಬಿತು. ಆ ದೃಶ್ಯ ಸ್ಟೇಜ್‌ ಮೇಲೆ ನಡೆಯುತ್ತಿದ್ದ ಡ್ಯಾನ್ಸಿಗಿಂತ ಹೆಚ್ಚಿನ ಸಂತೋಷ, ಸಂತೃಪ್ತಿಯನ್ನು ಕೊಟ್ಟಿತ್ತು ನನಗೆ!

ಯಾಕೆ ಇಷ್ಟೊಂದು ಆಪ್ತ ಭಾವ ಈ ಮಕ್ಕಳನ್ನು ಕಂಡರೆ? ಇವರು ನನ್ನ ಬಾಲ್ಯವನ್ನು ಪ್ರತಿನಿಧಿಸುತ್ತಿದ್ದಾರೆ ಅಂತಲೆ? ಅಥವಾ ತಮ್ಮ ಕನ್ನಡತನವನ್ನು ಇನ್ನೂ ಉಳಿಸಿಕೊಂಡಿದ್ದಾರೆ ಅಂತಲೆ? ಅಥವಾ ಅವರ ಬಡತನ ಕಂಡು ನನಗೆ ಅನುಕಂಪವೆ? ಉತ್ತರ ತಿಳಿಯಲಿಲ್ಲ , ತಿಳಿಯಬೇಕಾಗೂ ಇಲ್ಲ. ಈ ವೇಳೆಗೆ ಆ ಮಕ್ಕಳು ದೂರ ಹೋಗಿದ್ದರು. ಎಷ್ಟು ದೂರ ಹೋದರೇನಂತೆ? ಇಲ್ಲೇ ನಿನ್ನೊಳಗೆ ನಿನ್ನತನದ ಒಂದಂಶವಾಗಿ ಉಳಿದೇ ಇದ್ದಾರೆ ಎನ್ನುತ್ತಿತ್ತು ನನ್ನ ಅಂತರಾತ್ಮ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more