ಬರ್ಡ್ ಫ್ಲೂ ಮತ್ತು ‘ನ್ಯೂ ಸೆನ್ಸ್’ !
ಸುಮಾರು ಹತ್ತು ವರುಷಗಳ ಹಿಂದೆ ಬೆಂಗಳೂರಿನ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಸಂಜೆಯ ಹೊತ್ತು ಹಕ್ಕಿಗಳ ಕಲರವ ಲಲನೆಯರ ಕಿಲಕಿಲ ನಗುವಿನಂತೆ ಕೇಳಿ ಬರುತ್ತಿತ್ತು. ಈಗ ಬರೀ ವಾಹನಗಳ ಕೀ ಕೀ... ಸದ್ದು ಅಥವಾ ಮೊಬೈಲ್ ರಿಂಗಣ. ಸಂಜೆಯಾದರೆ ಪಕ್ಷಿಗಳ ಸಮೂಹ ಜೊತೆಗೂಡಿ ಮನೆಗೆ ಹಿಂದಿರುಗುವ ನೋಟ ಈಗ ಕಾಣ ಸಿಗುವುದು ಅಪರೂಪ.
ಪಕ್ಷಿಗಳ ನಾಶಕ್ಕೆ ಒಂದು ವಿಧವಾಗಿ ನಾವೂ ಹೊಣೆಗಾರರು ಅಲ್ಲವೇ? ಗಿಡ ಮರಗಳನ್ನು ಕಡಿದು ಕಾಂಕ್ರೀಟ್ ಬೆಳೆಸಿದರೆ ಪಕ್ಷಿಗಳು ಎಲ್ಲಿ ಹೋಗಬೇಕು. ಇದನ್ನಾದರೂ ನಾವು ತಡೆಗಟ್ಟಲು ಪ್ರಯತ್ನಿಸಬಹುದಲ್ಲವೇ? ಈ ಪಕ್ಷಿಹೋಮ ಹೀಗೆಯೇ ಮುಂದುವರೆದರೆ ಬಹಳ ಬೇಗ ನಾವು ಕಾಗೆ, ಗುಬ್ಬಚ್ಚಿ, ಅರಗಿಣಿಗಳನ್ನು ಚಿತ್ರರೂಪದಲ್ಲಿ ನೋಡಬೇಕಾದ ಪರಿಸ್ಥಿತಿ ಬರುವುದರಲ್ಲಿ ಸಂಶಯವೇ ಇಲ್ಲ. ಬೆಂಗಳೂರಿನಲ್ಲಂತೂ ಗುಬ್ಬಚ್ಚಿ ಕಾಣಸಿಗುವುದು ಚಿತ್ರಗಳಲ್ಲಿಯೇ ಸೈ. ಆಹಾ ವಿಧಿಯೇ !
ಸಿಂಗಾಪುರದಲ್ಲಿ ವಿಶ್ವ ವಿಖ್ಯಾತವಾದ ಬರ್ಡ್ ಪಾರ್ಕ್ ಇದೆ. ಸುಮಾರು ಎಂಟು ಸಾವಿರ ವಿವಿಧ ಜಾತಿಯ ಪಕ್ಷಿಗಳನ್ನಿಲ್ಲಿ ಮುಚ್ಚಟೆಯಿಂದ ಸಂರಕ್ಷಿಸುತ್ತಾರೆ. ಆದರೆ ಇನ್ನೊಂದು ಬಗೆ ನೋಡಿ, ಇಲ್ಲಿ ಕಾಗೆಗಳನ್ನು ಗುಂಡಿಟ್ಟು ಕೊಲ್ಲುತ್ತಾರೆ. ಏಕೆ ಗೊತ್ತೇ? ಕಾಗೆಗಳು ‘ನ್ಯೂ ಸೆನ್ಸ್’. ಕಸದ ಡಬ್ಬಗಳನ್ನು ಕೆದಕಿ ಸುತ್ತಲೂ ಗಲೀಜು ಮಾಡುತ್ತದೆ. ಇದರಿಂದ ರೋಗ ರುಜಿನಗಳು ಹರಡುತ್ತವೆ. ಹೆಚ್ಚು ಜನ ಜಂಗುಳಿಯಿಂದ ಕೂಡಿರುವ ಫುಡ್‌ಕೋರ್ಟ್ ಬಳಿ ಹಸಿರು ಕೋಟು ತೊಟ್ಟು ಕೈಯಲ್ಲಿ ತೋಪು ಹಿಡಿದು ಕಾಗೆ ಬರುವುದನ್ನೇ ಕಾಯುತ್ತಾ ಕ್ಷಣ ಮಾತ್ರದಲ್ಲಿ ಫಟ್ ಎಂದು ಕಾಗೆ ಸಾಯಿಸುವ ಧೀರರು ಇದೇ ಕೆಲಸಕ್ಕಾಗಿ ಸಂಬಳ ಎಣಿಸುತ್ತಾರೆ. ಇವರ ಗುರಿ ಕಾಗೆ. ಹೆಚ್ಚು ಮುತುವರ್ಜಿಯಿಂದ ಸುತ್ತಲೂ ನೋಡಿ ಓಡಾಡುವ ಜನರಿಗೆ ತಾಗದಿರಲೆಂದು ನೋಡಿ ಕಾಗೆಯನ್ನು ಯಮಪುರಿಗೆ ತಲುಪಿಸುತ್ತಾರೆ. ‘ವಿ ಹೇವ್ ಟು ಬಿ ವೆರಿ ಕೇರ್-ಫುಲ್’ ಇದು ಇವರ ಉವಾಚ. ಕಾಗೆಗಳು ಹಾಳಾಗಲಿ, ಮನುಷ್ಯನಿಗೆ ಏಟಾಗಬಾರದು ಇದು ಇವರ ಮಂತ್ರ. ಈ ಸಿಂಗಾಪೂರದ ಮಂದಿಗೆ ಕಾಕ ವಾಹನ ಶನಿ ಮಹಾತ್ಮನ ಭಯ ಇದ್ದಂತೆ ಕಾಣುವುದಿಲ್ಲ !
ಕಾಗೆಗಳ ನಂತರ ಮುಂದೇನು ? ಈಗ ಮೈನಾಗಳ ಮೇಲೆ ಕಣ್ಣು ಬಿದ್ದಿದೆ. ಏಕೆಂದರೆ ಮೈನಾಗಳ ಸಂತತಿ ಹೆಚ್ಚುತ್ತಿದೆಯಂತೆ. ಅದು ಕೂಡ ಈಗ ‘ನ್ಯೂ ಸೆನ್ಸ್’.
ಪ್ರಾಣಿ ಪಕ್ಷಿಗಳನ್ನು ನೋಡಿ ‘ನ್ಯೂ ಸೆನ್ಸ್’ ಎಂದು ಬಾಯಿ ಬಡಿದುಕೊಂಡು ನಿರ್ದಯಿಯಾಗಿ ಕೊಲ್ಲುವ ನಮಗೆ ಯಾವಾಗ ‘ಸೆನ್ಸ್’ ಬರುವುದೋ ದೇವರೇ ಬಲ್ಲ. ‘ಹಕ್ಕಿ ಜ್ವರ’ ಕೂಡಾ ಇಂಥದೊಂದು ‘ನ್ಯೂ ಸೆನ್ಸ್’ ಫಲವಾ ? ಯಾರಿಗೆ ಗೊತ್ತು ; ಯಾವ ಬೀಜ ಎಲ್ಲಿದೆಯಾ ?












Click it and Unblock the Notifications