• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಟ್ಟರು ಬೇಂದ್ರೆಯನ್ನು ಶಿಕಾಗೊಗೆ ಕರೆತಂದರು

By Staff
|

ಕನ್ನಡದಲ್ಲಿ ಭಾವಗೀತೆಯ ಪ್ರಕಾರವನ್ನು ಜನಮನಗಳಿಗೆ ಒಯ್ದು, ಮಮತೆಯಿಂದ ಮುಟ್ಟಿಸಿದವರು ಕವಿ ಎನ್‌.ಎಸ್‌.ಲಕ್ಷೀನಾರಾಯಣ ಭಟ್ಟರು. ಅವರ ಕವಿತೆಗಳನ್ನು ಆನಂದಿಸಲು ಓದುಗ ಪಂಡಿತನೇ ಆಗಬೇಕಾಗಿಲ್ಲ. ಇಷ್ಟು ಸದಭಿರುಚಿ, ಅಷ್ಟಿಷ್ಟು ಕಾವ್ಯಾಸಕ್ತಿಗಳಿರುವ ಯಾವುದೇ ಸಹೃದಯನೊಬ್ಬ ಅವರ ಕವಿತೆಗಳ ಗುಲಾಬಿತೋಟದಲ್ಲಿ ಸುಖವಾಗಿ ವಿಹರಿಸಬಲ್ಲ ! ಸಹಜ, ಸುಂದರ, ನವಿರಾದ ಪ್ರಾಸಗಳಿರುವ ಅವರ ಕವಿತೆಗಳೆಂದರೆ ನನಗಂತೂ, ಹಾಲುಖೋವವನ್ನು ಮೆಲ್ಲುವಂತಹ ಹಿತದ ಅನುಭವ. ಇಲ್ಲೊಂದು ಸಣ್ಣ ಉದಾಹರಣೆ ಇದೆ, ನೀವೇ ನೋಡಿ -

ನಿನ್ನ ಬೊಗಸೆ ಕಣ್ಣಿಗೆ

ಕೆನ್ನೆ ಜೇನು ದೊನ್ನೆಗೆ

ಸಮ ಯಾವುದೇ ಚೆನ್ನೆ

ನಿನ್ನ ಜಡೆ ಹರಡಿದ ಬೆನ್ನಿಗೆ?

N.S. Lakshminarayana Bhat in Chicagoಇಂತಹ ಭಟ್ಟರ ವಿದ್ವತ್ಪೂರ್ಣ ಮಾತುಗಳನ್ನು ಕೇಳುವ ಅವಕಾಶ, ನವೆಂಬರ್‌ ಇಪ್ಪತ್ತೊಂದರ ಭಾನುವಾರ ಶಿಕಾಗೊ ಕನ್ನಡಿಗರಿಗೆ ಒದಗಿ ಬಂದಿತ್ತು. ವಿದ್ಯಾರಣ್ಯ ಕನ್ನಡ ಕೂಟದ ನೂತನ ಅಧ್ಯಕ್ಷ ಇಂದುಶೇಖರ್‌ ಮತ್ತು ಕುಸುಮಾ ಇಂದುಶೇಖರ್‌ ಅವರ ಮನೆಯಲ್ಲಿ ಏರ್ಪಡಿಸಿದ್ದ ಈ ಉಪನ್ಯಾಸದಲ್ಲಿ ಭಟ್ಟರು ಆಯ್ದುಕೊಂಡಿದ್ದ ವಿಷಯ ‘ಬೇಂದ್ರೆ ಕಾವ್ಯದಲ್ಲಿ ಅನನ್ಯತೆ.’

ಬೇಂದ್ರೆಯವರ ಕವಿತೆಗಳ ಅರ್ಥದ ತಂಟೆಗೆ ಹೋಗದೆ, ಸುಮ್ಮನೆ ಹಾಡಿಕೊಂಡು ಸಂತೋಷಪಡುವುದೇ ಸುಲಭ. ‘ನಾನು ನೀನು ಆನು ತಾನು..’ ಮುಂತಾದ ಕೆಲವು ಕವಿತೆಗಳನ್ನು ಅರ್ಥಮಾಡಿಕೊಳ್ಳಲು ವಿಮರ್ಶಕರೇ ಕೊಸರಾಡಿದ್ದಾರೆಂದ ಮೇಲೆ ನಮ್ಮಂತವರ ಪಾಡೇನು? ಆದರೆ ಅಂದು, ಬೇಂದ್ರೆಯವರ ಸಾಹಿತ್ಯವನ್ನು ಅರಗಿಸಿಕೊಂಡ, ಬೇಂದ್ರೆಯವರನ್ನು ಹತ್ತಿರದಿಂದ ಕಂಡು ಮಾತಾಡಿದ ಲಕ್ಷ್ಮೀನಾರಾಯಣ ಭಟ್ಟರು ಬೇಂದ್ರೆಯವರ ಕವಿತೆಗಳನ್ನು ನಮಗೂ ಅರ್ಥ ಮಾಡಿಸಿದರು. ಕವಿ ಬೇಂದ್ರೆಯವರನ್ನು ಮಾತ್ರ ಅರಿತಿದ್ದ ನಮಗೆ ವಿನೋದ, ವ್ಯಂಗ್ಯ, ವೈರಾಗ್ಯ, ವಿಷಾದ ಬೆರೆತ ಬೇಂದ್ರೆ ವ್ಯಕ್ತಿತ್ವದ ಹಲವಾರು ಮುಖಗಳ ಪರಿಚಯವೂ ಆಯಿತು. ಬೇಂದ್ರೆ ಮತ್ತು ಅವರ ಗೆಳೆಯರ ಗುಂಪಿನ ನಡುವೆ ನಡೆದ ಕೆಲವು ಹಾಸ್ಯಪ್ರಸಂಗಗಳನ್ನು ಭಟ್ಟರು ಹೇಳುವಾಗ ಸಭೆಯಲ್ಲಿ ನಗೆಹೊನಲು ಉಕ್ಕಿ ಹರಿಯಿತು.

Poet Lakshminarayana Bhat with Triveni Srinivasar Raoಜನಪದದ ಸೊಗಡನ್ನು, ದೇಸಿಯ ಸೊಬಗನ್ನು ಬೇಂದ್ರೆಯವರಂತೆ ಸಮರ್ಥವಾಗಿ ಬಳಸಿಕೊಂಡ ಕವಿ ಇನ್ನೊಬ್ಬರಿಲ್ಲ. ಕವಿ ನಾನಲ್ಲ, ನನ್ನೊಳಗೆ ಕವಿ ಇದ್ದಾನೆ ಎಂದು ನಂಬಿದ್ದ ಬೇಂದ್ರೆಯವರ ಕಾವ್ಯ ಅನನ್ಯ, ಅನನುಕರಣೀಯ. ಕವಿತ್ವವೆಂಬುದು ಸಾಮಾನ್ಯ ಮನುಷ್ಯನಿಂದ ಸಾಧ್ಯವಿಲ್ಲ, ಅದೊಂದು ದೈವಿಕ ಕ್ರಿಯೆ ಎಂದು ದೃಢವಾಗಿ ನಂಬಿದ್ದ ಬೇಂದ್ರೆ ಸಾಹಿತ್ಯದಲ್ಲಿ ತತ್ವಶಾಸ್ತ್ರದ ಪ್ರಭಾವ ಹೆಚ್ಚು. ನಾದ-ಲಯ-ರೂಪಕಗಳಿಂದ ಸಮೃದ್ಧವಾದ ಬೇಂದ್ರೆಯವರ ಕವಿತೆಗಳನ್ನು ಲಕ್ಷ್ಮೀನಾರಾಯಣಭಟ್ಟರು ‘ನೀ ಹೀಂಗ ನೋಡಬ್ಯಾಡ ನನ್ನ, ಆಡದಿರು ಮನದನ್ನೆ, ಕುರುಡು ಕಾಂಚಾಣ..’ ಮುಂತಾದ ಕವಿತೆಗಳ ಉದಾಹರಣೆಗಳ ಮೂಲಕ ಶ್ರೋತೃಗಳ ಮನಮುಟ್ಟುವಂತೆ ವಿವರಿಸಿದರು.

‘ವೈರಿಗೆ ಅನ್ನವು ಸಿಕ್ಕದ ಹಾಗೆ ಸುಡಬೇಕು, ನೆಲ ಸುಡಬೇಕು’ ಎಂದು ಬರೆದು ಜನರ ಮನಸ್ಸುಗಳಲ್ಲಿ, ಆಳುವ ಅರಸರ ವಿರುದ್ಧ ದಂಗೆಯ ಕಿಡಿಯನ್ನು ಹೊತ್ತಿಸಿದವರು ಬೇಂದ್ರೆ. ಬೇಂದ್ರೆಯವರ ಸೆರೆವಾಸಕ್ಕೆ ಕಾರಣವಾದ ‘ನರಬಲಿ’ ಎಂಬ ಕ್ರಾಂತಿಕಾರೀ ಕವನವನ್ನು ಭಟ್ಟರು ಎಳೆಎಳೆಯಾಗಿ ಬಿಡಿಸಿಟ್ಟರು.

ತಮ್ಮಷ್ಟಕ್ಕೆ ತಮ್ಮ ದೈನಂದಿನ ಜಂಜಾಟದಲ್ಲಿ ಮುಳುಗಿ ಹೋಗಿದ್ದ ಬೇಂದ್ರೆಯವರನ್ನು, ಸ್ವಾತಂತ್ರ್ಯ ಸಮರ ಸುಂಟರಗಾಳಿಯಂತೆ ತಾನಾಗಿಯೇ ಬಂದು ಒಳಗೆ ಸೆಳೆದುಕೊಂಡಿತಂತೆ. ಪ್ರತಿ ಊರಿನ, ಪ್ರತಿ ಮನೆಯನ್ನೂ ಆವರಿಸಿಕೊಳ್ಳುತ್ತಾ ಬಂದ ಸ್ವಾತಂತ್ರ್ಯದ ಗಂಗಾಪ್ರವಾಹ ಬೇಂದ್ರೆಯವರ ಸಾಧನಕೇರಿಯ ಮನೆಬಾಗಿಲಿಗೂ ಬಂದಿದ್ದು ಹೀಗೆ - ‘ಹೆಳವನ ಬಳಿಗೆ ಹೊಳೆ ಬಂದಂತೆ!’ ಭಟ್ಟರ ಈ ಮಾತುಗಳನ್ನು ಕೇಳುತ್ತಿದ್ದಾಗ, ಬೇಂದ್ರೆಯವರು ‘ಇಳಿದು ಬಾ’ ಎಂದು ದೇವಗಂಗೆಯನ್ನು ಬಿನ್ನವಿಸಿಕೊಂಡ ‘ಗಂಗಾವತರಣ’ ಕವಿತೆಯಲ್ಲೂ ಸ್ವಾತಂತ್ರ್ಯ ಚಳುವಳಿಯ ಛಾಯೆಯಿದೆ ಎಂದು ಬಲ್ಲವರು ಗುರುತಿಸಿರುವುದರ ನೆನಪು ನನಗಾಯಿತು.

Chicago Kannadigas listening to NSL Bhatಕಾಳಿದಾಸನ ‘ಮೇಘದೂತ’ ವನ್ನು ಕನ್ನಡಕ್ಕೆ ತಂದಿರುವ ಬೇಂದ್ರೆಯವರ ಅನುವಾದ ಕೆಲವು ಕಡೆ ಮೂಲವನ್ನೂ ಮೀರಿ, ಬೆಳೆದು ನಿಂತಿರುವ ಬಗೆಯನ್ನು ಉದಾಹರಣೆಗಳ ಮೂಲಕ ಸೊಗಸಾಗಿ ವಿವರಿಸಿದ ಭಟ್ಟರು ಒಂದು ಮಾತು ಹೇಳಿದರು. ‘ಬಹುಶಃ ಇವತ್ತು ಕಾಳಿದಾಸ ಕನ್ನಡ ಬಲ್ಲವನಾಗಿದ್ದು, ಅವನೇನಾದರೂ ಬೇಂದ್ರೆಯವರ ಅನುವಾದವನ್ನು ಓದಿದ್ದರೆ, ಭೋಜರಾಜ ತನ್ನ ಕೈಗೆ ಗೌರವದಿಂದ ತೊಡಿಸಿರುವ ಚಿನ್ನದ ಕಡಗವನ್ನು ತೆಗೆದು, ಬೇಂದ್ರೆಯವರ ಕೈಗೆ ತೊಡಿಸಿರುತ್ತಿದ್ದ’ ಎಂದು. ಭಟ್ಟರ ಮಾತುಗಳ ಮೂಲಕ ಬೇಂದ್ರೆಯವರ ದೈತ್ಯ ಪ್ರತಿಭೆಯನ್ನು ಪರಿಚಯ ಮಾಡಿಕೊಂಡಿದ್ದ ಸಭಿಕರಾರಿಗೂ, ಭಟ್ಟರ ಈ ಮಾತೊಂದು ಅತಿಶಯೋಕ್ತಿ ಅನ್ನಿಸಲಿಲ್ಲ!

ಕಾವ್ಯ ಸರಸ್ವತಿ ಹಾಲೂಡಿಸಿ ಹೋಗುವಾಗ, ಅವಳ ಸೆರಗಿನೊಡನೆ ಮಗುವಿನಂತೆ ಆಡುತ್ತಿದ್ದ ತಮ್ಮ ಕೈಯಲ್ಲಿ ಒಂದೆರಡು ನೂಲುಗಳಷ್ಟೇ ಉಳಿದು, ಅದೇ ತಮ್ಮ ಕೃತಿಗಳಲ್ಲಿ ಪ್ರತಿಭೆಯಾಗಿ ಹೊರಬಂದಿತೆಂಬುದನ್ನು ಬೇಂದ್ರೆಯವರು, ಒಂದು ಕಡೆ ಬಹಳ ಸುಂದರವಾಗಿ ಬರೆಯುತ್ತಾರೆ-

ಹಾಸಾದ ಮಿಂಚಿನಂದ

ಬೀಸಿದ ಸೆರಗಿನಿಂದ

ಉಳಿದಾವ ಎರಡೇ ನೂಲು

ಆದಾವ ನಾಲ್ಕು ಸಾಲು!

ಅಂದು ಭಟ್ಟರ ಉಪನ್ಯಾಸದಲ್ಲಿ ನಮಗಾಗಿದ್ದೂ ಅದೇ. ಎರಡು ತಾಸಿಗೂ ಹೆಚ್ಚು ನಿರರ್ಗಳವಾಗಿ ಹರಿದ ವಾಕ್‌ ಪ್ರವಾಹ ಅದು. ಅರಿಸ್ಟಾಟಲ್‌ನಿಂದ ಹಿಡಿದು ಅಡಿಗರವರೆಗೆ, ಕಾಳಿದಾಸನಿಂದ ಕುಮಾರವ್ಯಾಸನವರೆಗೆ ಎಲ್ಲರೂ ಬಂದು, ಆ ಮಾತಿನ ಮಳೆಯಲ್ಲಿ ಮಿಂದು ಹೋದರು. ಅಲ್ಲಿ ಮಾತು ಮಾತು ಮಥಿಸಿತು. ಮಾತೇ ಮಾಣಿಕ್ಯವಾಯಿತು! ಆ ಮಾತುಗಳಲ್ಲಿ ಕೆಲವೇ ಕೆಲವು ಬುದ್ಧಿಯ ಕೈಗೆ ಸಿಕ್ಕಿತು. ಉಳಿದವೆಲ್ಲ ಹೃದಯಕ್ಕೆ ಮಾತ್ರ ದಕ್ಕಿತು!

ಕವಿ ಲಕ್ಷ್ಮೀನಾರಾಯಣ ಭಟ್ಟರ ಪಾಂಡಿತ್ಯ ಅಗಾಧ. ಅವರ ಭಾಷಣವೆಂದರೆ, ಅದು ಸಾಹಿತ್ಯ ವಿಚಾರಗಳು ತುಂಬಿ ಭೋರ್ಗರೆಯುವ ಜೋಗ ಜಲಪಾತ! ಅವರು ಪದಗಳಿಗೆ ತಡಕಬೇಕಾದ್ದಿಲ್ಲ. ಅವೇ ಅವರನ್ನು ಹುಡುಕಿ ಬರುತ್ತವೆ. ನಾವು ಬೇಂದ್ರೆಯಂತಹ ಕವಿಗಳನ್ನು ಕಣ್ಣಿನಿಂದ ಕಾಣಲಿಲ್ಲ. ಆದರೇನು? ತಾವು ಕಂಡ ಕವಿಗಳನ್ನು, ಅವರ ಕಾವ್ಯವನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸಬಲ್ಲ ಭಟ್ಟರಂತಹ ಹಿರಿಯರು ನಮ್ಮೊಡನೆ ಇರುವರಲ್ಲ ! ಸಾಹಿತ್ಯ ಸರಸ್ವತಿಯಿಂದ ಸಿರಿಸಂಪಿಗೆಯನ್ನೇ ಬೇಡಿ ಪಡೆದ ಸರಳ ಕವಿಯಾಡನೆ, ಸರಸ ಕವಿಯಾಡನೆ ಸ್ವಲ್ಪ ಹೊತ್ತನ್ನು ಸಾಧ್ಯವಾಗಿಸಿದ ಶ್ರೀಮತಿ ಮತ್ತು ಶ್ರೀ ಇಂದುಶೇಖರ್‌ ಅವರಿಗೆ ಶಿಕಾಗೋ ಕನ್ನಡಿಗರೆಲ್ಲರ ಪರವಾಗಿ ನನ್ನ ಹೃತ್ಪೂರ್ವಕ ಧನ್ಯವಾದಗಳು.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more