• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬುಶ್‌-ಕೆರಿ ಸಂವಾದ: ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ!

By Staff
|
Ravi Harapanahalli, Maryland, US ರವಿ ಹರಪನಹಳ್ಳಿ, ಸಿಲ್ವರ್‌ಸ್ಪ್ರಿಂಗ್‌, ಮರಿಲ್ಯಾಂಡ್‌

ravih@starpower.net

ಅಮೇರಿಕೆಯಲ್ಲಿ ಈಗ ಚಳಿಗಾಲ ಶುರುವಾಗಿದ್ದರೂ ವಾತಾವರಣದಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ ತುಂಬಿದೆ. ರಿಪಬ್ಲಿಕನ್‌ ಪಕ್ಷದಿಂದ ಅಮೇರಿಕೆಯ ಹಾಲಿ ಅಧ್ಯಕ್ಷ್ಯಜೋರ್ಜ್‌ ಬುಶ್‌ ಎರಡನೆಯ ಬಾರಿಗೆ ಸ್ಪರ್ಧಿಸುತ್ತಿದ್ದರೆ ಡೆಮೊಕ್ರಟಿಕ್‌ ಪಕ್ಷದಿಂದ ಜೊನ್‌ ಕೆರಿ ಸ್ಪರ್ಧಿಸುತ್ತಿದ್ದಾರೆ. ನವೆಂಬರ್‌ 2ರಂದು ನಡೆಯಲಿರುವ ಚುನಾವಣೆಯ ಅಂಗವಾಗಿ ಈಗಾಗಲೇ ಮೂರು ಅಧ್ಯಕ್ಷೀಯ ಸಂವಾದಗಳು ಮತ್ತು ಒಂದು ಉಪಾಧ್ಯಕ್ಷೀಯ ಸಂವಾದವು ಜರುಗಿವೆ. ಬುಶ್‌ ಮತ್ತು ಕೆರಿಯ ಸಂವಾದವನ್ನು ಕುವೆಂಪುರವರ ‘ಬೆರಳ್‌ಗೆ ಕೊರಳ್‌’ ನಾಟಕದಲ್ಲಿ ಬರುವ ಅರ್ಜುನ ಮತ್ತು ಏಕಲವ್ಯರ ಸಂವಾದದ ಮೇಲೆ ಆಧರಿಸಿ ಹಳೆಗನ್ನಡದ ಶೈಲಿಯಲ್ಲಿ ಬರೆಯಲೆತ್ನಿಸಿದ್ದೇನೆ. ಇದಕ್ಕೆ ಸ್ಫೂರ್ತಿ ಇಷ್ಟೇ- ಫಿಲಾಡೆಲ್ಫಿಯಾದಲ್ಲಿ ನಡೆದ ವಸಂತೋತ್ಸವದಲ್ಲಿ ಮತ್ತು ಕಾವೇರಿ ಕನ್ನಡ ಕೂಟದಲ್ಲಿ ನಡೆದ ಗಣೇಶ ಹಬ್ಬದಲ್ಲಿ ಅರ್ಪಿಸಿದ ‘ಬೆರಳ್‌ ಗೆ ಕೊರಳ್‌’ ನಾಟಕದಲ್ಲಿ ನಾನು ಏಕಲವ್ಯನ ಪಾತ್ರವಹಿಸಿದ್ದೆ. ಆದ್ದರಿಂದ ಬುಶ್‌-ಕೆರಿ ಸಂವಾದಗಳನ್ನು ಏಕಲವ್ಯಾರ್ಜುನರ ಸಂವಾದದ ದೃಷ್ಟಿಯಲ್ಲಿ ಕಾಣತೊಡಗಿದೆ. ಈ ಪಕ್ಷಾತೀತ ಸಂವಾದ ಸಹೃದಯಿ ಓದುಗರಿಗೆ. ಅದೋ ಅಲ್ಲಿ ..... ಬುಶ್‌ ಹಾಗೂ ಕೆರಿ ರಂಗದ ಮೇಲೆ. ನಾನಿನ್ನು ತೆರೆಮರೆಗೆ ಸರಿಯುವೆ.

ಬುಶ್‌: ಅಲೆಮಾರಿ ದೇಶಚರ ಆರ್‌ ಇಟ್ಟರೀ ಸಂವಾದಮಂ.

ಕೆರಿ: ನಾಗರಿಕ ಓದಿ ತಿಳಿ. ಕಲಿಪುದಾ ಡಿಬೇಟ್‌ ಕಮೀಶನ್ನಿನೋಲೆಯುಂ.

ಬುಶ್‌: ಆರೋ ನೀನ್‌?

ಕೆರಿ: ನೀನೆ ಸಂಭೋದಿಸಿದವೋಲ್‌ ದೇಶಚರನ್‌.

ಬುಶ್‌: ನಾಲಗೆಯ ನೆರಂ ಬೇಕೆ? ನಿನ್ನಿರ್ಕೆಯೇ ಪೇಳ್ದಪುದದನ್‌. ನಿನ್ನ ಕೈರಾತ್ಯಮಂ! ಭಟಕುತಿರ್ಪೀ ನಿನ್ನ ಅಮೇರಿಕಾ ಪ್ರಯಾಣಮಂ. ನಾನ್‌ ಕೇಳ್ದುದು ನಿನ್ನ ಪೆಸರನ್‌. ಅನಾಮನೇನ್‌ ನೀನ್‌?

ಕೆರಿ: ದೇಶಚರರ್‌ ಸಹನಶೀಲರ್‌. ಅದರೊಳುಂ ನ್ಯೂ ಇಂಗ್ಲೆಂಡ್‌ ವಾಸಿಗಳ್‌ ತಿಳಿದವರ್‌, ಅಳ್ಕರೆಯುಳ್ಳವರ್‌, ಪೇಟ್ರಿಯೋಟ್‌ ಪರಂಪರೆಯವರ್‌, ಮೇ ಫ್ಲಾವರ್‌ ನಾವೆಯಿಂ ಅಮೇರಿಕೆಗೆ ವಲಸೆಬಂದ ಪೀಳ್ಗೆಯವರ್‌. ಅರಿಯರ್‌ ಐಶ್ವರ್ಯದಿಂ ಮೆರೆವ ಟೆಕ್ಸಾಸ್‌ ಟೈಕೂನರ ಅಹಂಕಾರಮಂ. ಐಶ್ವರ್ಯದಾಸೆ ಅದೊಂದು ಖನಿಜತೈಲದವರ್ಗೆ ಮೀಸಲಾಗಿರ್ಪ ಮನೋಜಾಡ್ಯಂ ಕಣಾ! ಮೊದಲ್‌ ಪೇಳ್‌ ನಿನ್ನ ಪೆರ್ಮೆಯಾ ಪೆಸರಂ.

ಬುಶ್‌: ನಾವಾರೆಂದಿರ್ಪೆ? ಪೆಟ್ರೊಲಿಯಂ ಪರಂಪರೆಯವರ್‌, ಸಿರಿವಂತರ್‌, ಆಳ್ವವರ್‌. ನೀನಾರ್‌?

ಕೆರಿ: ನನ್ನ ಭಾರ್ಯೆ ತೆರೆಸಾಳಿಂದ ಬಂದಿಹುದೆನಗೆ ಸಿರಿ ಸಂಪತ್ತು. ಅವಳ ಪತಿ ಶ್ರಿ ಹೈನ್ಸ್‌ ಮಡಿದಿಂಬಳಿಂ ನಾನಾದೆ ವಳ್ಗೊಡೆಯನ್‌. ನಾನ್‌ ವ್ಹಿಯೆಟ್ನಾಮ್‌ ವಾರ್‌ ವ್ಹೆಟರನ್‌, ಮೇಣ್‌ ಸ್ವಿಫ್ಟ್‌ ಬೋಟ್‌ ಚಲಿಸಿದವನ್‌. ಅಧ್ಯಕ್ಷಸ್ಥಾನಕೆ ಪ್ರತಿಸ್ಪರ್ಧಿಸುತ್ತಿರ್ಪೇನ್‌. ಇದೆಲ್ಲವಂ ಅರಿವಮುನ್ನಮೆ ಈ ಸಂವಾದಗ್ರಹಮಂ ಪೊಕ್ಕು, ನನ್ನನೆಯೆ ಪ್ರಶ್ನಿಸುವ ನೀನ್‌ ಕೊಳ್ಳೆಗಾರನ್‌, ಕಳ್ಳನ್‌, ದಂಡನಾರ್‌ಹನ್‌. ನಿನ್ನ ಊರ್‌ ಟೆಕ್ಸಾಸಲಿರ್ಕೆ ವಾಶಿಂಗ್ಟನ್‌ ಆಳ್ವ ಬಿಂಕಂ. ನಾನ್‌ ಕೇಳ್ವ ಪ್ರಶ್ನೆಗಳಿಗುತ್ತರಿಸಿ ಕ್ಷೇಮದಿಂ ಬಿಟ್ಟು ತೊಲಗು ಈ ಸಂವಾದಗ್ರಹಂ, ಮೇಣ್‌ ಚುನಾವಣಾನಂತರಂ ಆ ಶ್ವೇತಭವನಮಂ.

ಬುಶ್‌: ನೀನ್‌ ಚುನಾವಣೆಯಂ ಗೆಲ್ಲ್ವುದೆಂತೋ ಬೊಸ್ಟನ್‌ ಬಿಯದ. ಗ್ಯಾಲೊಪ್‌ ಪೊಲ್‌ನೊಳ್‌ ನಾನ್‌ ಮುಂದಿರ್ಪೆನ್‌. ವಿಶ್ವ ಸಿರಿಕೇಂದ್ರ ದುರ್ಘಟನೆಯನಂತರಂ ಬಿನ್‌ ಲಾದಿನ್ನನಂ ಶೋಧಿಸುತ್ತಿರ್ಪೇನ್‌. ಅವನನುಜನಂ ಸದ್ದಾಮನಂ ಸೆರೆಹಿಡಿದಿರುವೇನ್‌. ಇರಾಕೀಯ ಖನಿಜತೈಲಮಂ ಪಡೆದಿರುವೇನ್‌. ಇದೆಲ್ಲಮಂ ಕಂಡು ನಿನಗಾದ ಅಸೂಯಾಗ್ನಿಯಿಂದಿತ್ತೆಯೋ ಆ ಶ್ವೇತಭವನದತ್ತ ನಿನ್ನ ಗುರಿ?

ಕೆರಿ: ತೈಲಕುಮರ, ನೈನ್‌ಎಲೆವೆನ್‌ ಕಮಿಶನ್‌ ವರದಿಯಂ ಓದಿ ತಿಳಿ. ಸದ್ದಾಮಗುಂ ಸಿರಿಕೇಂದ್ರ ದುರ್ಘಟನೆಗುಂ ಇರದಿರ್ಕೆ ಸಂಬಂಧಂ. ಇರದ ಸಂಬಂಧಮಂ ಕಲ್ಪಿಸದಿರ್‌ ಟೆಕ್ಸಾಸ್‌ ಟೈಕೂನ. ನೀನ್‌ ದಿಟವೊರೆದೆಯಯ್‌! ನಿನಗೆಂತು ತಿಳಿದುದಾ ನನ್ನ ಶ್ವೇತಭವನದಾ ದಿವ್ಯ ದೃಷ್ಟಿ?

ಬುಶ್‌: ಓವ್‌ ನೀನ್‌ ಬಲ್‌ ದೃಷ್ಟಿವಂತನ್‌. ನಿನ್ನದು ದಿವ್ಯ ದೃಷ್ಟಿಯಲ್ತೋ ಬೊಸ್ಟನ್‌ ಬ್ರಾಹ್ಮಣಾ, ದುರದೃಷ್ಟಿ. ಸಂವಾದವಿದ್ಯೆ ಮೇಣ್‌ ಆಡಳಿತಶಾಸ್ತ್ರಗಳ್‌ ನಿನಗೆ ಅಂಗಯ್‌ ನೆಲ್ಲಿಯಲ್ತೆ?

ಕೆರಿ: ನೀ ದಲ್‌ ಸತ್ಯವಾಕ್‌ ಕಣಾ. ಕರತಲಾಮಲಕಮಾ ವಿದ್ಯೆಗಳ್‌ ನನಗೆ.

ಬುಶ್‌: ಪುಸಿಯದಿರ್‌ ನ್ಯೂ ಇಂಗ್ಲಂಡ್‌ ಕಾಡಾ. ಜಗತ್ತಿನೊಳೋರ್ವನಿರ್ಪನ್‌. ಅವನರಿವನಾ ವಿದ್ಯೆಗಳಂ.

ಕೆರಿ: ನನಗರಿಯದಾ ಸರ್ವಜ್ಞತೆಯ ಪೆರ್ಮೆ. ಆದೊಡಂ, ನೀನ್‌ ಪೇಳ್ದುದುದು ನನ್ನಿಯಪ್ಪೊಡೆ. ನಿನ್ನಿದಿರೆ ನಿಂದಿರ್ಪನಾ ನೀನ್‌ ಬಣ್ಣಿಪಾತನ್‌!

ಬುಶ್‌: ನೀನವನಲ್ತೊ! ನಾನ್‌ ಬಲ್ಲೆನ್‌!

ಕೆರಿ: ಎಂತು ಬಲ್ಲಯ್‌? ಸರ್ವಜ್ಞನೋ ನೀನ್‌?

ಬುಶ್‌: ಎಂತೆನೆ...ಎಂತೆನೆ....ಕೇಳ್‌, ನಾನೇ ಅವನ್‌! ಕೇಳ್ದರಿಯೆಯಾ ನೀನ್‌? ಪೋದ ಚುನಾವಣೆಯೋಳ್‌ ಅಲ್‌ ಗೋರನ್‌ಂ ಸೋಲಿಸಿದವನನ್‌, ಸರ್ವೋಚ್ಚನ್ಯಾಯಾಲಯದಿಂ ಆಯ್ದು ಬಂದವನನ್‌! ಜೋರ್ಜ್‌ ಬುಶ್ಶನನ್‌?

ಕೆರಿ: ಅವನಾರ್‌?

ಬುಶ್‌: ಅಜ್ಞಾತನೀನ್‌, ಅದೆಂತೋ ಪೇಟ್ರಿಯೋಟ್‌ ಪರಂಪರೆಯವನ್‌ ನೀನ್‌? ನಿನಗಿರ್ಪುದೆಂಥಾ ಜ್ಞಾನಂ? ಕೇಳ್‌ ತಿಳಿ, ದ್ವಿತೀಯ ಗಲ್ಫ್‌ ಸಂಗ್ರಾಮವಾಡಿದ ವೀರನನ್‌, ಸದ್ದಾಮನಂ ಸೆರೆಹಿಡಿದವನನ್‌, ಇರಾಕೀಯ ಖನಿಜತೈಲವಂ ಪಡೆದವನನ್‌, ಜೆಬ್‌ ಬುಶ್‌ಅನುಜನ್‌, ಮೇಣ್‌ ಹಿರಿಯಬುಶ್‌ಪುತ್ರನ್‌.

ಕೆರಿ: ಆರ್‌ ಅವರ್‌ ಆ ಬುಶ್ಶರ್‌?

ಬುಶ್‌: ಜೆಬ್‌ ಬುಶ್ಶನ್‌ ಫ್ಲೋರಿಡಾಕುಲಪತಿಯುಂ. ಪೋದ ಚುನಾವಣೆಯೋಳ್‌ ಮತಗಣನಾಕಾರ್ಯವಂ ಕೈಗೊಂಡು, ಹ್ಯಾಂಗಿಂಗ್‌ ಚಾಡ್‌, ಡಿಂಪಲ್‌ ಚಾಡ್‌ ಶೋಧಿಸಿ ಎನ್ನಂ ಗೆಲ್ಲಿಸಿದವನ್‌. ಹಿರಿಯ ಬುಶ್ಶನ್‌ ಅಮೇರಿಕೆಯ ಮಾಜಿ ಅಧ್ಯಕ್ಷನ್‌, ಪ್ರಥಮ ಗಲ್ಫ್‌ ಸಂಗ್ರಾಮವಾಡಿದ ಧೀಮಂತನ್‌, ಸದ್ದಾಮನ್‌ಂ ಹಿಡಿಯದೆಲೆ ತಿರುಗಿಬಂದವನ್‌.

ಕೆರಿ: ಅಲ್ಪಖ್ಯಾತರಾ ಸಂಬಂಧಮಂ ಪೇಳ್ದೇನ್‌ ಪ್ರಯೋಜನಮ್‌? ನಿನಗೆ ಸಂಬಂಧರೊಳರೆ ಪ್ರಖ್ಯಾತರೊರ್ವರುಂ? ತನ್ನ ಪೆಸರಂ ಪೇಳ್ವೆ, ತನ್ನ ಮೆಯ್ಯಂ ಪೆತ್ತವರ ಪೆಸರ್‌ ವೇಳ್ವೆ. ನಿನಗಿಲ್ತೆ ಆತ್ಮಮಂ ಕೊಟ್ಟವರ್‌? ಸ್ನೇಹ ಸೌಹಾರ್ಧಮಂ ಕಲಿಸಿದವರ್‌? ಯುದ್ಧನೀತಿಯಂ ತಿಳಿಸಿದವರ್‌. ಎಲವೋ ಫೋರ್ಜ್‌ ಬುಶ್‌, ನಿನಗೊಂದು ನಯಮಂ ಕಲಿಪನೀ ನ್ಯೂ ಇಂಗ್ಲಂಡ್‌ ಪೇಟ್ರಿಯೋಟನ್‌.

ಬುಶ್‌: ಫೋರ್ಜ್‌ ಬುಶ್‌ ಅಂದಲ್ತೋ! ಜೋರ್ಜ್‌ ಬುಶ್‌ ಎಂದೊರೆ ಅನಾಗರಿಕ!

ಕೆರಿ: ಅಕ್ಕಕ್ಕೆ, ಜೋರ್ಜ್‌ ಬುಶ್‌ ಕೇಳ್‌, ನನಗುಮಿರ್ಪುದೋ ನಿನಗಿರ್ಪವೋಲ್‌ ಮರ್ಯಾದೆಯಂ. ಆದರದು ಅಹಂಕರಮಂ ಮೆರೆಯಲ್ಕಲ್ತು , ವಿನಯಮಂ ನೀವೇದಿಸಲ್ಕಿರ್ಪುದು. ಕೌಬೊಯ್‌ ಕುಮಾರ, ಓದಿದನ್‌. ಓದುವುದೇ ಪೂಜೆಯಪ್ಪುದು ನಿನಗೆ. ಪುಣ್ಯಮಂ ಪೊತ್ತು ತಂದಪುದಾ ಮೆಡಲ್‌, ನಿನಗೆ ಬೇಡದ ಕಾಡ ಬೋಸ್ಟನ್‌ ಬ್ರಾಹ್ಮಣನಂ ನನ್ನಂ ಸಂಗ್ರಾಮಯೋಧನಂ ಮಾಳ್ಪುದಯ್‌. ಟೆಕ್ಸಾಸ್‌ ರ್ಯಾಂಚರ್‌, ಓದಿದನ್‌.

ಬುಶ್‌: ಇವೆಯೋ ನಿನ್ನ ಪರ್ಪಲ್‌ ಹಾರ್ಟ್‌ಗಳ್‌?

ಕೆರಿ: ಓದು ಡಿಕ್‌ ಚೈನೀಮಿತ್ರನ್‌, ಅ ಹ್ಯಾಲಿಬರ್ಟನ್ನನೆತ್ತಿ ಹಿಡಿದವನ್‌, ಏನೆಂದಿದೆ?

ಬುಶ್‌: ನಾನಾಗಳೆಯೆ ಅರಿತಿರುವೆನ್‌ ನಿನಗೆ ಪರ್ಪಲ್‌ ಹಾರ್ಟ್‌ ದೊರೆತರೀತಿಯಂ. ಸ್ವಿಫ್ಟ್‌ ಬೋಟ್‌ ವ್ಹೆಟರನ್ಸ್‌ ಪೇಳ್ದರೆನಗೆ ವ್ಹಿಯೆಟ್ನಾಮ್‌ ಯುದ್ಧ ಘಟನೆಗಳೆಲ್ಲವಂ.

ಕೆರಿ: ಕೊನೆಗುಂ ಅರಿತೆಯೋ ಈ ಸಂಗ್ರಾಮಯೋಧನನ್‌?

ಬುಶ್‌: ನೀನೆಂತು ಬಲ್ಲೈ ನನ್ನ ಸಾಮರ್ಥ್ಯಮಂ? ನಾನೂಂ ಟೆಕ್ಸಾಸ್‌ ನ್ಯಾಶನಲ್‌ ಗಾರ್ಡ್‌ ಕಚೇರಿಯಂ ಮುಟ್ಟಿ ಬೇಗದಿಂ ತಿರುಗಿಬಂದವನ್‌.

ಕೆರಿ: ಅದರಿಂದೇನ್‌ ಪ್ರಯೋಜನಂ? ನೀನಲ್ತು ಸಂಗ್ರಾಮ ಯೋಧನ್‌. ನೀನಲ್ತು ಅಧ್ಯಕ್ಷನಾರ್‌ಹನ್‌. ಕೊಡಲಾರೆ ನೀ ಜನಸಾಮಾನ್ಯರ್ಗೆ ಆರೋಗ್ಯ ರಕ್ಷಣೆಯಂ, ಕಸಬುಗಳಂ. ಮೇಣ್‌ ತಿದ್ದಲಾರೆ ನಿನ್ನ ಕಾಂಚಾಣ ದುರ್ವ್ಯವಸ್ಥೆಯನ್‌, ನ್ಯೂನ್ಯತೆಯನ್‌.

ಬುಶ್‌: ಸಂಗ್ರಾಮಯೋಧನ್‌ ನಾನಿಲ್ಲದಿರೇನ್‌? ಗಲ್ಫ್‌ ಯುದ್ಧಕೆ ನಾನೇ ಮುಖಂಡನ್‌, ಆತಂಕವಾದಿಗಳನ್‌ ಓಡಿಸುತ್ತಿರ್ಪೇನ್‌, ತೈಲಸಾಮ್ರಾಟವನ್‌ ವರ್ಧಿಸುತ್ತಿರ್ಪೇನ್‌ ಮೇಣ್‌ ಅಮೇರಿಕಾಗ್ರಗಣ್ಯತ್ವವನ್‌ ಜಗತ್ತಿನೋಳ್‌ ಸಾರುತಿರ್ಪೇನ್‌.

ಕೆರಿ: ಆ ಗರ್ವ ಮೆನತಲ್ತು ಕೌಬೊಯ್‌ ಕುಮಾರ. ಅನೇಕಾನೇಕ ಸಂಗ್ರಾಮಯೋಧರೋಳ್‌ ಆನುಂ ಓರ್ವನ್‌. ಆದರೀಗ ಶಾಂತಿ ಸೌಹಾರ್ಧವನ್‌ ಸಾರುತಿರ್ಪೇನ್‌. ದೇಶಸೇವೆಯೋಳ್‌ ಮತ್ತಾರ್ಗಂ ದ್ವಿತೀಯನಲ್ತು.

ಬುಶ್‌: ನೀನೆಂತೊ ದೇಶಸೇವಕನ್‌?

ಕೆರಿ: ನೀನೆಂತೋ ಅಂತೇ

ಬುಶ್‌: ಕುರುಪಾವುದೋ ಪೇಳ್‌ ಅದರ್ಕ್ಕೆ?

ಕೆರಿ: ಈ ಪರ್ಪಲ್‌ ಹಾರ್ಟ್‌ಗಳ್‌ ಪೇಳ್ವವೇ? ತಾನೇ ಪೇಳದೇ ನನ್ನಿಪ್ಪತ್ತು ವರ್ಷಗಳ್‌ ಜನಸೇವೆ?

ಬುಶ್‌: ಭಾಷೆಯಿತ್ತಿಹುದೆನಗೆ ರಿಪಬ್ಲಿಕನ್‌ ಪಕ್ಷಂ. ನನಗಲ್ಲದನ್ಯರ್ಗೆ ದೊರಕೊಳ್ಳದಾ ಶ್ವೇತಭವನಂ!

ಕೆರಿ: ಅದು ನಿಜವಲ್ತು. ನನ್ನಮೇರಿಕಾ ಪ್ರಯಾಣಪರಿಶ್ರಮದಿಂ, ಮೇಣ್‌ ಡೆಮಾಕ್ರಟಿಕ್‌ ಪಕ್ಷಬೆಂಬಲದಿಂ ಒಲಿದಿಹರೆನಗೆ ಬಹು ಮತದಾನಿಗಳ್‌. ಮೀಸಲಾಗಿರ್ಪುದೆನಗೆ ಈ ಚುನಾವಣಾವಿಜಯಂ ಮೇಣ್‌ ಶ್ವೇತಭವನಂ.

ಪೂರಕ ಓದಿಗೆ-

ಚುನಾವಣೆ ಮತ್ತು ಚರ್ಚಾಸ್ಪರ್ಧೆ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X