ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆದರೆ ನಾನು ಬರೀ....

By Staff
|
Google Oneindia Kannada News

ಅವಳು ಆಫೀಸಿನೊಳಗೆ ಕಾಲಿಟ್ಟಾಗ ಗೋಡೆ ಗಡಿಯಾರದಲ್ಲಿ ಸರಿಯಾಗಿ ಒಂಭತ್ತು ಗಂಟೆ. ಅವಳು ತಡವಾಗಿ ಬರುವುದನ್ನು ನಾನು ನೋಡಿಯೆ ಇಲ್ಲ. ಕೆಲವೊಮ್ಮೆ ರಾತ್ರಿಯವರೆಗೆ ಕೂತಿರುತ್ತಾಳೆ ಆದರೂ ಬೆಳಿಗ್ಗೆ ಮಾತ್ರ ಸರಿಯಾದ ಸಮಯಕ್ಕೆ ಹಾಜರ್‌.

ಅವಳ ಮುಖ ಮೊಟ್ಟೆಯಾಕಾರದ್ದು, ಸ್ವಲ್ಪ ಉದ್ದದ ಗದ್ದ. ಅಗಲವಾದ ಕಣ್ಣುಗಳು ಕೊನೆಯಲ್ಲಿ ಸ್ವಲ್ಪ ಚೂಪಾಗಿವೆ. ಕಣ್ಣುಗಳ ಬಣ್ಣ ಕಂದುಗಪ್ಪು, ಚಾಕೊಲೆಟ್‌ ಬಣ್ಣ ಅನ್ನಬಹುದು. ನೆಟ್ಟಗಿರುವ ಮೂಗು. ಆಗಾಗ ಅದರ ಮೇಲೆ ಅವಳ ಫ್ರೇಮ್‌ ಇರದ ಕನ್ನಡಕ ಕೂತಿರುತ್ತದೆ. ಕುತ್ತಿಗೆಯವರೆಗೂ ಕಪ್ಪನೆಯ ಕೂದಲಿದೆ. ಯಾವಾಗಲೂ ಬಿಚ್ಚಿರುತ್ತಾಳೆ. ಆಗಾಗ ಮುಖದ ಮೇಲೆ ಬಿದ್ದಾಗ ಎಡಗೈಯಿಂದ ಪಕ್ಕಕ್ಕೆ ಸರಿಸಿಕೊಳ್ಳುತ್ತಿರುತ್ತಾಳೆ. ಹಾಗೆ ಮಾಡುವಾಗ ಅವಳು ತುಂಬಾ ಹಿಡಿಸುತ್ತಾಳೆ. ಆದರೆ ಅವಳ ಮುಖದಲ್ಲಿ ಎದ್ದು ಕಾಣುವುದು ಮಾತ್ರ ಅವಳ ತುಟಿಗಳು. ಎರಡೂ ತುಟಿಗಳು ಸೇರಿದ್ದಾಗ ತುಂಬಾ ಮುಗ್ಧಳಂತೆ ಕಾಣಿಸುತ್ತಾಳೆ. ನಗುವಾಗ ಮಾತ್ರ ಸ್ವಲ್ಪ ತುಟಿಗಳನ್ನು ಬಿಡಿಸುತ್ತಾಳೆ. ಆಗ ಮಾತ್ರ ಕಾಣುತ್ತವೆ ಅವಳ ಹಲ್ಲುಗಳು, ಬಿಳಿ ಮುತ್ತುಗಳನ್ನು ಹೆಣೆದಂತೆ. ನನಗೆ ಒಮ್ಮೊಮ್ಮೆ ಅನಿಸುತ್ತದೆ ಇವಳು ಸಿನಿಮಾರಂಗದಲ್ಲಿ ಇರಬೇಕಿತ್ತೆಂದು. ಅದರೆ ನಾನೇನು ಪುಣ್ಯ ಮಾಡಿದ್ದೆನೊ, ನನ್ನ ಮುಂದೆ ಬಂದು ಕುಳಿತುಕೊಳ್ಳುತ್ತಾಳೆ.

ಇವತ್ತು, ನೇರಳೆ ಬಣ್ಣದ ಸಲ್ವಾರ್‌ ಕಮಿಜ್‌ ಹಾಕಿದ್ದಾಳೆ. ಅಲ್ಲಲ್ಲಿ ಬಿಳಿ ಹೂಗಳಿವೆ. ತುಂಬಾ ಚೆನ್ನಾಗಿ ಕಾಣುತ್ತಿದ್ದಾಳೆ, ಬರಸೆಳೆದು ಅಪ್ಪಿಕೊಳ್ಳುವಂತೆ. ಕಪ್ಪು ಬಣ್ಣದ ಸ್ಯಾಂಡಲ್‌ ಕಾಲಲ್ಲಿ , ಅದೇ ಬಣ್ಣದ ಬೆಲ್ಟಿರುವ ಕೈ ಗಡಿಯಾರವಿದೆ. ಬಲಗೈಯಲ್ಲಿ ಒಂಟಿಯಾದ ಬಂಗಾರದ ಬಳೆಯಿದೆ. ಕಿವಿಯಲ್ಲಿ ಎರಡು ಮುತ್ತುಗಳಿರುವ ರಿಂಗು ಜೋತಾಡುತ್ತಿವೆ. ಇವತ್ತು ಅವಳನ್ನು ನೋಡಿದರೆ ಒಳ್ಳೆ ಸುಂದರವಾದ ಹೂವನ್ನು ನೋಡಿದಂತಾಗುತ್ತದೆ. ಅವಳು ದಪ್ಪಗಿಲ್ಲ , ಹಾಗಂತ ತೀರ ತೆಳ್ಳಗಿಲ್ಲ. ಉದ್ದವಿಲ್ಲ ಹಾಗೇನೆ ಕುಳ್ಳಗೂ ಇಲ್ಲ. ತೀರ ಬೆಳ್ಳಗಿಲ್ಲ ಈ ಕಡೆ ಕಪ್ಪಗೂ ಇಲ್ಲ.

ಆಗಲೇ ಹೇಳಿದಂತೆ ಅವಳು ನನ್ನ ಮುಂದೆ ಕುಳಿತಳು, ನೆಟ್ಟಗೆ. ನಾನೂ ಅವಳ ಮುಂದೇನೆ ಕೂಡುತ್ತೇನೆ ಅವಳನ್ನು ನೋಡುತ್ತಾ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ. ಅವಳ ಪ್ರತಿ ಚಲನವಲನವನ್ನು ವೀಕ್ಷಿಸುತ್ತಾ. ನನಗೆ ಅವಳನ್ನು ನೋಡುತ್ತಾ ಕೂಡುವುದೆಂದರೆ ಎಲ್ಲಿಲ್ಲದ ಖುಷಿ. ಬೇರೆಯವರಿಗೆಲ್ಲ ನನ್ನ ಕಂಡರೆ ಹೊಟ್ಟೆಉರಿ. ಅವರು ನನ್ನ ಜಾಗದಲ್ಲಿಲ್ಲವಲ್ಲ ಎಂದು.

ಅವಳ ಮುಖದಲ್ಲಾಗುವ ಬದಲಾವಣೆಗಳನ್ನು ಗಮನಿಸುವುದು ತುಂಬಾ ಕೂತೂಹಲಕರವಾದ ವಿಷಯ. ಫೈಲು ಓದುತ್ತಿರುವಾಗ ಮುಖ ಗಂಟಿಕ್ಕಿಕೊಂಡಿರುತ್ತಾಳೆ. ಟೆಸ್ಟಿಂಗ್‌ ಮಾಡುವಾಗ ತುಂಬಾ ಬೇಜಾರಾಗಿರುತ್ತಾಳೆ. ಊಟ, ತಿಂಡಿಯಾದ ಮೇಲೆ ಹೊಸತಾಗಿರುತ್ತಾಳೆ. ಗೆಳೆಯರ ಇ-ಮೈಲ್‌ ನೋಡುವಾಗ ಮುಖದಲ್ಲೊಂದು ಮುಗುಳ್ನಗೆ. ಏನಾದ್ರೂ ತಪ್ಪಾದ್ರೆ ಚಿಕ್ಕದೊಂದು ನಸುಗೋಪ. ಅವಳು ಯಾವಾಗ ಯಾವ ಸ್ಥಿತಿಯಲ್ಲಿದ್ದಾಳೆ, ಏನು ಮಾಡುತ್ತಿದ್ದಾಳೆಂದು ಅವಳ ಕಣ್ಣುಗಳನ್ನು ನೋಡಿ ಹೇಳಬಲ್ಲೆ . ಅವಳ ಇ-ಮೈಲ್‌ನಲ್ಲಿ ಜೋಕ್‌ ಬಂದರೆ ನನಗೆ ಸಂತೋಷ, ಯಾಕೆ ಹೇಳಿ? ಅವಳು ಆಗ ನಗುತ್ತಾಳೆ ಅದಕ್ಕೆ. ಅವಳ ನಗುವನ್ನು ನೋಡುವುದೆ ಒಂದು ಸಂತೋಷ, ಏಕೆಂದರೆ ಅವಳು ಬರಿ ತುಟಿಗಳಿಂದ ನಗುವುದಿಲ್ಲ , ಪೂರ್ತಿ ಮುಖದಿಂದ ನಗುತ್ತಾಳೆ. ಕಣ್ಣಲ್ಲಿ, ಹುಬ್ಬಿನಲ್ಲಿ, ಹಣೆಯ ಮೇಲೆ, ಕೆನ್ನೆಯ ಮೇಲೆ ಎಲ್ಲೆಲ್ಲೂ ನಗು ಕಾಣುತ್ತದೆ.

ಇವತ್ತು, ಯಾವುದೋ ವಿಷಯದ ಮೇಲೆ ತುಂಬಾ ಆಳವಾಗಿ ಚಿಂತಿಸುತ್ತಿದ್ದಳು. ಅವಳ ಪಕ್ಕದಲ್ಲಿ ಕೂತಿದ್ದ ಫೋನ್‌ ಶಬ್ದ ಮಾಡಿತು. ಅದು ಅವಳ ಪಕ್ಕದಲ್ಲಿ ಕೂರುವವಳಿಗಾಗಿತ್ತು. ದಿನಾಲೂ ಅದೆ ಸಮಯಕ್ಕೆ ಪಕ್ಕದವಳಿಗೆ ಫೋನ್‌ ಬರುತ್ತಿತ್ತು.ಇವಳು ಎತ್ತಿಕೊಂಡಳು. ‘ಇಲ್ಲ ಅವಳು ಇವತ್ತು ಬಂದಿಲ್ಲ, ...ಸರಿ, ಬೈ’ ಎಂದು ಇಟ್ಟುಬಿಟ್ಟಳು. ಪಕ್ಕದಲ್ಲಿದ್ದ ಬ್ಯಾಗಿನಿಂದ ಕನ್ನಡಕ ತೆಗೆದು ಮೂಗಿನ ಮೆಲಿರಿಸಿ ಫೈಲಿನಲ್ಲಿ ತಲೆ ತೂರಿಸಿದಳು.

ಸ್ವಲ್ಪ ಹೊತ್ತಿನ ನಂತರ ಒಬ್ಬ ಮಧ್ಯ ವಯಸ್ಕ ಅವಳ ಹತ್ತಿರ ಬಂದು ಹೇಳಿದ, ‘ಏನೂ ಗಡಿಬಿಡಿ ಮಾಡಬೇಕಾಗಿಲ್ಲ, ಇನ್ನೂ ಒಂದು ವಾರದವರೆಗೆ ಸಮಯವಿದೆ, ಈಗ ಇ-ಮೈಲ್‌ ಬಂತು’.

‘ಥ್ಯಾಂಕ್ಸ್‌’ ಚುಟುಕಾಗಿ ಹೇಳಿದಳು. ಮುಖದಲ್ಲಿ ಸಂತೋಷದ ಕಳೆಯಿತ್ತು. ಇನ್ನೂ ಆರಾಮಾಗಿ ಕೆಲಸ ಮಾಡಬಹುದು ಎಂಬಂತೆ.

ಮಧ್ಯಾಹ್ನದ ಊಟ ಮುಗಿಸಿ ಬಂದು ಕುಳಿತಳು. ಮುಖದಲ್ಲಿ ಹೊಸ ಹುರುಪು ಕಾಣುತಿತ್ತು. ನಾನು ಅವಳ ಜೊತೆ ಊಟಕ್ಕೆ ಹೊಗಬೇಕೆಂದುಕೊಳ್ಳುತ್ತೇನೆ. ಅವಳು ಕಣ್ಮುಂದಿಲ್ಲದಿದ್ದರೆ ಮನಸ್ಸಿಗೆ ಏನೋ ಕಸಿವಿಸಿ. ಅವಳು ಏನು ತಿನ್ನುತ್ತಾಳೆ, ಹೇಗೆ ತಿನ್ನುತ್ತಾಳೆ ನೋಡಬೇಕೆಂದುಕೊಳ್ಳುತ್ತೇನೆ.

ಊಟವಾದ ಮೆಲೆ ಮತ್ತೊಮ್ಮೆ ಇ-ಮೈಲ್ಸ್‌ ಚೆಕ್‌ ಮಾಡಿದಳು. ತುಟಿಗಳು ಬಿರಿದವು. ಸಣ್ಣದೊಂದು ನಗೆ. ಟೈಪ್‌ ಮಾಡತೊಡಗಿದಳು. ಇ-ಮೈಲ್‌ ಗೆ ಉತ್ತರ ಕಳಿಸುತ್ತಿರಬಹುದು. ನಡುನಡುವೆ ಜಾರುತ್ತಿದ್ದ ಕನ್ನಡಕವನ್ನು ಮೇಲೇರಿಸಿಕೊಳ್ಳುತ್ತಿದ್ದಳು. ಮುಖದ ಮೇಲೆ ಬೀಳುತ್ತಿದ್ದ ಕೂದಲನ್ನು ಪಕ್ಕಕ್ಕೆ ಸರಿಸುತ್ತಿದ್ದಳು.

ಗಡಿಯಾರ ನಾಲ್ಕು ಗಂಟೆ ತೋರಿಸತೊಡಗಿತ್ತು. ಮತ್ತೊಮ್ಮೆ ಬಂತು ಫೋನ್‌. ಎತ್ತಿಕೊಂಡಳು.

‘ಹಲೋ’

‘’

‘ಹೌದು ನಾನೆ’

‘’

‘ಆದರೆ...’ ಮುಖದಲ್ಲಿ ಗಾಬರಿಯಿತ್ತು.

‘’

‘ಸರಿ, ಈಗಲೆ ೕಬಂದೆ...’ ಫೋನ್‌ ತನ್ನ ಜಾಗದಲ್ಲಿತ್ತು.

ಅವಳ ಕಣ್ಣುಗಳು ಹಸಿಯಾಗತೊಡಗಿದ್ದವು. ಕನ್ನಡಕ ತೆಗೆದು ಕೈ ವಸ್ತ್ರದಿಂದ ಒರೆಸಿಕೊಂಡಳು. ತನ್ನ ಟೇಬಲ್ಲಿನ ಡ್ರಾವರ್‌ ಎಳೆದು ಫೈಲೊಂದನ್ನು ಎತ್ತಿಕೊಂಡಳು. ಅದನ್ನು ಬ್ಯಾಗಿನಲ್ಲಿರಿಸಿ ಹೊರಟಳು.

ನನಗೇಕೊ ಅವಳ ಈ ವರ್ತನೆ ಹೆಚ್ಚು ಕಡಿಮೆ ಬೇಜಾರು ತರಿಸಿತು (ಅವಳ ಜೊತೆ ಮಾತಾಡಿದವರಾರು, ಏನು ಮಾತಾಡಿದರು ನನಗೆ ಗೊತ್ತಿಲ್ಲದಿದ್ದರೂ). ಏಕೆಂದರೆ ಒಂದು, ಅವಳು ಇಷ್ಟು ಬೇಗ ನನ್ನ ಕಣ್ಮುಂದಿನಿಂದ ಎದ್ದು ಹೋದುದಕ್ಕೆ, ಎರಡು ಅವಳ ಕಣ್ಣಲ್ಲಿ ನೀರು ಬಂದಿದ್ದಕ್ಕೆ. ಇಲ್ಲಿವರೆಗೆ ಅವಳ ಈ ಅಳುಮುಖವನ್ನು ನೋಡಿರಲೇ ಇಲ್ಲ.

ನಾನಂದುಕೊಳ್ಳುತ್ತಿದ್ದೆ- ‘ಚಿಂತಿಸಬೇಡ, ಎಲ್ಲ ಸರಿ ಹೋಗುತ್ತೆ’ ಅಂತ ಹೇಳಬಹುದಿತ್ತೆಂದು. ಅವಳ ಕೈ ಹಿಡಿದು ಸಂತೈಸಬಹುದಿತ್ತೆಂದು. ನಾನು ಬರೀ ನಿರ್ಜೀವ ಇಲೆಕ್ಟ್ರಾನಿಕ್‌ ವಸ್ತುವಾಗಿರದೆ ಒಬ್ಬ ಒಳ್ಳೆ ಮನಸ್ಸಿರುವ ಮನುಷ್ಯನಾಗಿರಬಾರದೆ ಎಂದು. ನಾನು ಬರೀ ಅವಳ ಕಂಪ್ಯೂಟರಿನ ಮಾನಿಟರ್‌ ಆಗಿರದೆ ಅವಳ ಗೆಳೆಯನಾಗಿರಬಾರದೆ ಎಂದು.

ಆದರೇನು ಮಾಡುವುದು ನಾನು ಮಾತ್ರ ಬರೀ....

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X