• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೂರ್ವಾಭಿಮುಖವಾಗಿ ‘ಪೂರ್ವಾಪರ’

By Staff
|

ಒಂದು ಒಳ್ಳೆಯ ಸಿನಿಮಾ ನೋಡಿ ಅದೆಷ್ಟು ವರ್ಷಗಳಾದವೋ ? ಶನಿವಾರ (ಆಗಸ್ಟ್‌ 21) ನೋಡಿದ ‘ಪೂರ್ವಾಪರ’ದ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ - ನಿಮ್ಮೂರಿಗೂ ‘ಪೂರ್ವಾಪರ’ವನ್ನು ಬರಮಾಡಿಕೊಳ್ಳಿ, ಬರೀ ಚಲನಚಿತ್ರದಲ್ಲಷ್ಟೇ ಅಲ್ಲ, ಚಿತ್ರದ ಒಳಗೆ ಹಾಗೂ ಹೊರಗೆ, ‘ಎಡಕಲ್ಲು ಗುಡ್ಡದ ಮೇಲೆ’ ಚಂದ್ರಶೇಖರ್‌ರವರು ಎಷ್ಟೋ ವರ್ಷಗಳ ನಂತರ ಸಿಕ್ಕ ಆಪ್ತ ಮಿತ್ರನಂತೆ ನೋಡಲು ಸಿಗುತ್ತಾರೆ ಹಾಗೂ ಆತ್ಮೀಯತೆಯಿಂದ ಮಾತನಾಡುತ್ತಾರೆ. ನಮ್ಮ ನ್ಯೂಜೆರ್ಸಿ ಸುತ್ತಮುತ್ತಲಿನಲ್ಲಿ, ಒಂದೇ ದಿನ ಎರಡು ಪ್ರದರ್ಶನ ಇದ್ದ ಕನ್ನಡ ಸಿನಿಮಾದ ಬಗ್ಗೆ ಇದೇ ಮೊದಲು ನಾನು ಕೇಳಿದ್ದು.

ನಾವು ಹನ್ನೆರಡು ಘಂಟೆ ಪ್ರದರ್ಶನಕ್ಕೆ ಹೋಗದೇ ಮೂರು ಘಂಟೆಯ ಪ್ರದರ್ಶನಕ್ಕೆ ಹೋದಾಗ ಆಶ್ಚರ್ಯ ಕಾದಿತ್ತು. ‘ಹೌಸ್‌ಪುಲ್‌, ಟಿಕೇಟ್‌ಗಳೆಲ್ಲಾ ಖಾಲಿಯಾಗಿವೆ, ಸಾರ್ರಿ...’ ಎಂಬ ಮಾತು ಕೇಳಿಬಂದಾಗ ಬಹಳಷ್ಟು ನಿರಾಸೆಯಾಯಿತು. ಅದೇ ಸಮಯದಲ್ಲಿ ಇನ್ನೂ ಟಿಕೇಟ್‌ಗಾಗಿ ಕಾಯುತ್ತಿರುವವರ ಸಹಾಯಕ್ಕೆ ಆಯೋಜಕ ಮೋಹನ್‌ರವರು ಬಂದರು. ಕೊನೆಗೆ ಹೌಸ್‌ಪುಲ್‌ ಆದ ಥಿಯೇಟರಿನಲ್ಲಿ ಮೆಟ್ಟಿಲಮೇಲೆ, ನೆಲದ ಮೇಲೆ ಕುಳಿತು ನೋಡಿದವರು ಎಷ್ಟೋ ಮಂದಿ. ಚಿತ್ರ ಮುಗಿದ ಮೇಲೆ ಕರತಾಡನದ ಮೂಲಕ, ಆಗಾಗ್ಗೆ ಮೆಚ್ಚುಗೆಯ ಮಾತುಗಳ ಮೂಲಕ ಎಲ್ಲರೂ ಸಿನಿಮಾವನ್ನು ಹೊಗಳುವವರೇ.

A still from Poorvaparaಅರವತ್ತರ ದಶಕದ ಎಂ.ಕೆ. ಇಂದಿರಾರವರ ಕಾದಂಬರಿ ಆಧರಿಸಿ, ಸೆಪ್ಟೆಂಬರ್‌ 11ರ ನಂತರದ ಅಮೇರಿಕೆಯಲ್ಲಿ ಬಹಳಷ್ಟು ಪರಿಶ್ರಮದಿಂದ ಚಂದ್ರಶೇಖರ್‌ರವರು ಈ ಚಿತ್ರವನ್ನು ತಯಾರಿಸಿದ್ದಾರೆ. ಪರದೇಸಿಯರ ಮನಸ್ಥಿತಿಯನ್ನು ಒಬ್ಬ ಪರದೇಸಿಗಿಂತಲೂ ಹೆಚ್ಚಾಗಿ ಯಾರು ತಾನೇ ಅನುಭವಿಸಬಲ್ಲರು? ಅಭಿನಯಿಸಬಲ್ಲರು?

ಈ ಚಿತ್ರ ನಿಮ್ಮೂರಿಗೆ ಬಂದಾಗ ಪರದೆಗೆ ಸರಿಯಾಗಿ ಹೊಂದಿಸುವಂತೆ ತಾಕೀತು ಮಾಡಿ. ನಮ್ಮೂರಿನಲ್ಲಿ ಪರದೆಯ ಮೇಲಕ್ಕೂ, ಪರದೆಯ ಕೆಳಕ್ಕೂ ಚಿತ್ರ ಮೂಡುತ್ತಿದ್ದುದರಿಂದ ಆಗಾಗ್ಗೆ ಪಾತ್ರಧಾರಿಗಳ ಕಾಲೋ, ತಲೆಯೋ ಮಾಯವಾಗಿ ರಸಾಭಾಸವಾಗುತ್ತಿತ್ತು. ಚಿತ್ರ ಮುಗಿದ ನಂತರ ಪ್ರೇಕ್ಷಕರ ಭರ್ಜರಿ ಚಪ್ಪಾಳೆ ಚಂದ್ರಶೇಖರ್‌ರವರನ್ನು ಗದ್ಗದಿತರನ್ನಾಗಿ ಮಾಡಿತು. ಬೆಳ್ಳಿ ಪರದೆಯ ಹಿನ್ನೆಲೆಯಲ್ಲಿ ಚಂದ್ರಶೇಖರ್‌ರವರು ಪ್ರೇಕ್ಷಕರನ್ನುದ್ದೇಶಿಸಿ ನಾಲ್ಕು ಮಾತುಗಳನ್ನಾಡಿದರು. ತಮ್ಮ ಗುರು ಪುಟ್ಟಣ್ಣವರನ್ನು ಅಭಿಮಾನದಿಂದ ಸ್ಮರಿಸುತ್ತಾ, ಕನ್ನಡ ಚಿತ್ರರಂಗದ ದುಸ್ಥಿತಿಯನ್ನು ತೋಡಿಕೊಂಡರು. ಬೆಂಗಳೂರಿನಲ್ಲಿ ‘ಪುಟ್ಟಣ್ಣ’ ಚಿತ್ರ ಮಂದಿರ ಮುಚ್ಚಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು. ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ, ನೀರೆರೆದು ಬೆಳೆಸಿರೆಂದು ಪ್ರೇಕ್ಷಕರಲ್ಲಿ ಪ್ರಾರ್ಥಿಸಿಕೊಂಡರು.

ಸೆಪ್ಟೆಂಬರ್‌ 11 ರ ತರುವಾಯ ಈ ಚಲನಚಿತ್ರವನ್ನು ಮಾಡಲು ತಮಗೆಷ್ಟು ಕಷ್ಟವಾಯಿತು, ಈ ಚಿತ್ರದ ಕಥೆಯ ಅನುಭವ ನಮ್ಮೆಲ್ಲರದ್ದೂ ಆಗಿದೆ. ನಮ್ಮ ತಂದೆ-ತಾಯಿಯರೂ ನಮ್ಮಿಂದ ದೂರದಲ್ಲಿದ್ದಾರೆ, ಆ ಹಿನ್ನೆಲೆಯಲ್ಲಿ ಈ ಚಿತ್ರ ಇನ್ನಷ್ಟು ಅರ್ಥವನ್ನು ಕಂಡುಕೊಳ್ಳಲಿ. ನಿಮ್ಮೆಲ್ಲರನ್ನೂ ಈ ದಿಸೆಯಲ್ಲಿ ಯೋಚಿಸುವಂತೆ ಮಾಡಿದರೆ ನನ್ನ ಶ್ರಮ ಸಾರ್ಥಕವೆಂದರು. ಈ ಚಿತ್ರ ನಿರ್ಮಾಣಕ್ಕೆ ಸಹಾಯ ಮಾಡಿದ ರಾಮಮೂರ್ತಿ ದಂಪತಿಗಳನ್ನೂ ಹಾಗೂ ನ್ಯೂಜೆರ್ಸಿಯಲ್ಲಿ ಈ ಚಿತ್ರವನ್ನು ಆಯೋಜಿಸಿದ್ದಕ್ಕೆ ಮೋಹನ್‌ರವರಿಗೂ ಚಂದ್ರಶೇಖರ್‌ ಧನ್ಯವಾದಗಳನ್ನರ್ಪಿಸಿದರು.

ಚಲನಚಿತ್ರ ಮುಗಿದ ನಂತರ ಹಲವರು ಚಿಂತನೆಯಲ್ಲಿ ತೊಡಗಿದಂತೆ ಕಂಡುಬಂದರೆ ಇನ್ನು ಕೆಲವರು ತೇವವಾದ ಕಣ್ಣುಗಳನ್ನು ಒರೆಸಿಕೊಳ್ಳುತ್ತಿದ್ದರು.

ವಿಭಿನ್ನ ಪೂರ್ವಾಪರ : ನಮ್ಮ ಮಾಮೂಲಿ ಪರದೇಸಿ ಚಿತ್ರಗಳಿಗಿಂತ ಪೂರ್ವಾಪರ ಭಿನ್ನವಾಗಿ ನಿಲ್ಲುತ್ತದೆ. ಚಿತ್ರದುದ್ದಕ್ಕೂ ಹಿತ-ಮಿತವಾದ ಸಂಗೀತ, ಸಂಭಾಷಣೆ ಹಾಗೂ ನಿರೂಪಣೆ ಮನಸ್ಸಿನಲ್ಲಿ ನಿಲ್ಲುತ್ತದೆ. ಚಂದ್ರಶೇಖರ್‌ರವರು ಪರದೇಸಿ ಬದುಕನ್ನಷ್ಟೇ ನಿರೂಪಿಸದೇ, ಪರದೇಸಿಗಳ ಮನಸ್ಥಿತಿಯನ್ನೂ ಪ್ರತಿಬಿಂಬಿಸುತ್ತಾರೆ. ಚಿತ್ರದಲ್ಲಿ ಹಾಸ್ಯಕ್ಕೆ ಒತ್ತು ಕೊಡದಿದ್ದರೂ, ಚಿತ್ರದ ಸಂಭಾಷಣೆಗೆ ಪ್ರತಿಯಾಗಿ ಅಮೇರಿಕನ್ನಡಿಗರ ಪ್ರತಿಕ್ರಿಯೆ ಸಾಕಷ್ಟು ನಗೆ ಹುಟ್ಟಿಸುತ್ತದೆ. ‘ಚಿಟ್ಟಿ ದೊಡ್ಡವಳಾದ ಮೇಲೆ ನಾವೂ ಭಾರತಕ್ಕೆ ಹಿಂತಿರುಗೋಣ’ ಎಂಬ ಮಾತಿಗೆ, ಮಕ್ಕಳು ದೊಡ್ಡವರಾದ ಮೇಲೆ ಹಿಂತಿರುಗಿ ಹೋಗಬೇಕಾದವರ ಕಷ್ಟವನ್ನು ನಿರ್ದೇಶಕರು ಪ್ರೇಕ್ಷಕರ ಪ್ರತಿಕ್ರಿಯೆಯಿಂದ ಸೂಚಿಸುತ್ತಾರೇನೋ ಅನ್ನುವಷ್ಟು ಸಹಜವಾಗುತ್ತದೆ. ಚಿತ್ರ ಅನುಭವಿ ಕಲಾವಿದರಿಂದ ಮೇಳೈಸಿ, ಅಭಿನಯ ಎಲ್ಲೂ ಕೃತಕವೆನ್ನಿಸುವುದಿಲ್ಲ. ಆದರೆ ಚಿಟ್ಟಿಯ ಪಾತ್ರ ರೂಪ ಹಾಗೂ ನಟನೆಯಿಂದ ಸೆಪ್ಪೆಯಾಗಿ ಬಿಡುತ್ತದೆ. ಈ ಅಮೇರಿಕದಲ್ಲಿ ಹುಟ್ಟಿ ಬೆಳೆಯುವ ಮಕ್ಕಳೇ ಹೀಗೆ, ಒಂಥರಾ ಇರ್ತಾರೆ!’ ಎಂದು ಚಿತ್ರ ಮುಗಿದ ನಂತರ ಯಾರೋ ಹೇಳಿದ ಮಾತು ಸತ್ಯವೆನಿಸಿತು.

ಏನನ್ನೋ ಪಡೆದುಕೊಳ್ಳಲು ವಿದೇಶಕ್ಕೆ ಬಂದವರಿಗೆ ಏನೂ ಇಲ್ಲದವರಾಗಿ ಸ್ವದೇಶಕ್ಕೆ ಮರಳಲಾಗದ ಅಸಹಾಯಕತೆಯನ್ನು ಧ್ವನಿಸುವಲ್ಲಿ ಚಿತ್ರ ಸಫಲವಾಗಿದೆ. ಶೃಂಗೇರಿ, ಕೆನಡಾ-ಅಮೇರಿಕಾದ ಭವ್ಯತೆಯನ್ನು ತಮ್ಮ ಕ್ಯಾಮೆರಾದಲ್ಲಿ ಭಾಸ್ಕರ್‌ರವರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಪೋಷಕರ ಪ್ರೀತಿ ವಂಚಕರಾಗಿ ಸಂವೇದನಾಶೀಲ ಸ್ನೇಹಿತನಾಗಿ ನರೇಂದ್ರನ ಪಾತ್ರದಲ್ಲಿ ಚಂದ್ರಶೇಖರ್‌ರವರು ಮನೋಜ್ಞವಾಗಿ ಅಭಿನಯಿಸಿದ್ದಾರೆ. ಅಲ್ಲಲ್ಲಿ ಚಂದ್ರಶೇಖರ್‌ರವರನ್ನು ಗೀತಾರವರ ಮಗನಂತೆ ಊಹಿಸಿಕೊಳ್ಳುವುದು ಕಷ್ಟವಾದರೂ, ಅಮೇರಿಕನ್‌ ಶೈಲಿಯಲ್ಲಿ ಮಾತು-ಮಾತಿಗೂ ಶಾರದೆ, ಶಾರದೆ ಎನ್ನುವುದು ಅಸಹಜವೆನ್ನಿಸಿದರೂ, ಒಬ್ಬ ನಟನಾಗಿ ಅವರು ತಮ್ಮ ನಿಲುವನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಹೃದಯಸ್ಪರ್ಶಿ ಸನ್ನಿವೇಶಗಳ ಅಭಿನಯದ ಸಹಜತೆಯಲ್ಲಿ ಪ್ರೇಕ್ಷಕನಿಗೆ ಹತ್ತಿರವಾಗುತ್ತಾರೆ. ಸುಮಾರು ಎರಡು ದಶಕಗಳ ಕಾಲ ಅವರನ್ನು ಮುಖ್ಯ ಪಾತ್ರಗಳಲ್ಲಿ ಕಾಣದಿದ್ದುದು ನಮ್ಮ ದುರಾದೃಷ್ಟ.

ಕನ್ನಡ ಚಿತ್ರಗಳ ದುಸ್ಥಿತಿಯ ಬಗ್ಗೆ ಕಳಕಳಿಯಿರುವ ನಮ್ಮ ಚಂದ್ರಶೇಖರ್‌ರವರಲ್ಲಿ ನನ್ನದೊಂದು ಪ್ರಾರ್ಥನೆ: ಪ್ರೇಕ್ಷಕನಿಗೆ ಬೇಕಾದ ಸದಭಿರುಚಿ ಇರುವ ಚಿತ್ರಗಳನ್ನು ನಮ್ಮವರು ಕೊಡುವಂತಾಗಲಿ, ಪರಭಾಷಾ ಚಿತ್ರಗಳನ್ನು ಹಸಿ-ಹಸಿಯಾಗಿ ಬಳುವಳಿ ತರದೇ, ಸಾಹಿತ್ಯ ಸಮೃದ್ಧಿಯಿರುವ ಕನ್ನಡದ ಮೂಲ ಚಿತ್ರಗಳನ್ನು ತೆರೆ ಕಾಣಿಸುವಂತಾಗಲಿ, ಭಾರತದಲ್ಲಿ ‘ಪೂರ್ವಾಪರಕ್ಕೆ’ ಯಾವ ರೀತಿಯ ಪ್ರೋತ್ಸಾಹ ಸಿಕ್ಕಿದೆಯೋ ಗೊತ್ತಿಲ್ಲ , ನಮ್ಮಲ್ಲಂತೂ ಈ ಚಿತ್ರ ಮಹತ್ವದ ಪರಿಣಾಮವನ್ನು ಬೀರಿದೆ, ಇನ್ನು ಮುಂದೆಯೂ ಹೀಗೇ ನಿಮ್ಮಿಂದ ಉತ್ತಮ ಚಿತ್ರಗಳು ಬರಲಿ.

ಪೂರ್ವಾಪರ ಚಿತ್ರವಿಮರ್ಶೆ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X