ಸೀ ಫುಡ್‌ : ಮೂಕ ಜೀವಿಗಳಿಗೊಂದು ಶ್ರದ್ಧಾಂಜಲಿ

ಪ್ರತಿ ಆರು ತಿಂಗಳಿಗೊಮ್ಮೆ ನಮ್ಮವರ ಆಫೀಸಿನಲ್ಲಿ ‘ಫ್ಯಾಮಿಲಿ ಗೆಟ್‌ ಟುಗೆದರ್‌’ ನಡೆಯುತ್ತದೆ. ಇದು ಒಂದು ಸಂತೋಷ ಕೂಟ. ಆರನೇ ತಿಂಗಳ ಕಡೆಯ ವಾರಾಂತ್ಯದಲ್ಲಿ ಯಾವುದಾದರೂ ಹೋಟೆಲ್‌ ಬಳಿ ಎಲ್ಲರೂ ಒಟ್ಟಿಗೇ ಸೇರಿ ಸಂಜೆಯ ಊಟ, ಕೂಟ ಎಂದು ಕಾಲ ಕಳೆಯುತ್ತೇವೆ. ಈ ಸಲ ‘ಬಾಸ್‌’ ಇಂಗ್ಲೆಂಡ್‌ನಿಂದ ಬಂದಿದ್ದ ಕಾರಣ ನಮ್ಮ ಸಂತೋಷಕೂಟ ಮಾರ್ಚ್‌ ತಿಂಗಳಿನಲ್ಲೇ ಇಟ್ಟುಕೊಂಡೆವು.

ಸುಮಾರು ಹತ್ತು ಜನ ಸೇರಿದ್ದೆವು. ನಾನು, ನನ್ನವರು ಇಬ್ಬರೇ ಶಾಖಾಹಾರಿಗಳು. ಸಿಂಗಾಪುರಕ್ಕೆ ಬಂದ ಮೇಲೆ ಮಾಂಸಾಹಾರ ತಿನ್ನುವವರ ಜೊತೆ ಕೂತು ಶಾಖಾಹಾರ ತಿನ್ನುವುದು ಅಭ್ಯಾಸವಾಗಿದೆ. ಮೊದ ಮೊದಲು ಸ್ವಲ್ಪ ಕಷ್ಟವಾಗುತ್ತಿತ್ತು. ನಾಲ್ಕಾರು ಜನ ಕೂಡಿರುವಾಗ ಸೌಜನ್ಯದ ಮುಖವಾಡ ಧರಿಸಿ ಊಟ ಮಾಡಬೇಕು, ಅದು ಅಭ್ಯಾಸವಾಗಿದೆ.

ಈ ಸಲದ ಪಾರ್ಟಿ ‘ಸೀ ಫುಡ್‌’ ಎಂದು ಮೊದಲೇ ನಿಯಮಿಸಲ್ಪಟ್ಟದ್ದರಿಂದ ಇಲ್ಲಿನ ಹೆಸರಾಂತ ‘ಸೀ ಪುಡ್‌’ ರೆಸ್ಟೋರಾಂಟ್‌ಗೆ ಹೋದೆವು. ಪ್ರತಿ ಸಲದಂತೆ ನಮಗೆ ‘ಚೈನೀಸ್‌ ಫ್ರೈಡ್‌ ರೈಸ್‌’ ಮತ್ತು ಬೇಯಿಸಿದ ತರಕಾರಿಗಳನ್ನು ಆರ್ಡರ್‌ ಮಾಡಿದ್ದರು. ‘ಸೀ ಪುಡ್‌’ ಎಂದಾಗ ಮೀನು ಇಲ್ಲ ಏಡಿಕಾಯಿ ತಿನ್ನುತ್ತಾರೆ. ಕೋಳಿ, ಕುರಿ ನೋಡಾಯಿತು, ಈ ಸಲ ಪಾಪದ ಮೀನು, ಏಡಿಕಾಯಿ ಅದಾವ ಪರಿಯಲ್ಲೋ? ಎಂದುಕೊಳ್ಳುತ್ತಾ ಸುತ್ತಲೂ ಕಣ್ಣಾಡಿಸಿದೆ.

ಸ್ವಲ್ಪ ದೂರದಲ್ಲೇ ಕಾಣುತ್ತಿದ್ದ ಸಮುದ್ರ, ಬೀಸುತ್ತಿದ್ದ ತಂಪಾದ ತಂಗಾಳಿ. ಹತ್ತಿರದಲ್ಲೇ ಹಲವರು ‘ಗಾಲ್ಫ್‌’ ಆಡುತ್ತಿದ್ದರು. ಹಲವರ ಕೈಯಲ್ಲಿ ಬಿಯರ್‌ ಗ್ಲಾಸ್‌. ಇಂಪಾಗಿ ಅಲೆ ಅಲೆಯಾಗಿ ತೇಲಿ ಬರುತ್ತಿದ್ದ ಸಂಗೀತ, ಸುಂದರ ವಾತಾವರಣ. ನಮ್ಮಿಬ್ಬರ ಕೈಯಲ್ಲಿ ನಮ್ಮ ಸ್ಟಾಂಡರ್ಡ್‌ ಬ್ರಾಂಡ್‌ ‘ಮಿರಿಂಡಾ’. ‘ಸಿಂಗಾ ಇನ್‌’ ರೆಸ್ಟೋರಾಂಟ್‌ ನ ಸುಂದರ ಸಂಜೆಯನ್ನು ಸವಿಯುತ್ತಾ ಕುಳಿತಿದ್ದೆವು.

ಒಬ್ಬ ಪರಿಚಾರಿಕೆ ‘ಗ್ಲಾಸ್‌ ಬೌಲ್‌’ನಲ್ಲಿ ಮುಚ್ಚಳ ಮುಚ್ಚಿದ ಒಂದು ಪಾರದರ್ಶಕ ಪಾತ್ರೆಯನ್ನು ನಾವೆಲ್ಲರೂ ಕುಳಿತಿದ್ದ ಮೇಜಿನ ಮಧ್ಯ ತಂದು ಇಟ್ಟಳು. ನೋಡಿದಲ್ಲಿ ಒಳಗೆ ಒದ್ದಾಡುತಿರುವ ‘ಪ್ರಾನ್ಸ್‌’. ಪಾಪ ನೀರಿನಿಂದ ಹೊರಗೆ ತೆಗೆದಿದ್ದಾರೆ, ಪಾತ್ರೆಯ ಒಳಗೆ ವಿಲಿ ವಿಲಿ ಒದ್ದಾಡುತ್ತಿವೆ. ಏನಪ್ಪಾ ಇದು ಎಂದು ಮನದಲ್ಲಿ ತಳಮಳ. ಎದ್ದು ಹೋಗುವ ಹಾಗಿಲ್ಲ , ಅದು ಅನಾಗರೀಕತೆ, ನೋಡಿ. ಅಯ್ಯೋ, ಇದನ್ನು ಹಸಿಯಾಗಿ ತಿನ್ನುತ್ತಾರೆಯೇ ಎಂಬ ಕಸಿವಿಸಿ ಬೇರೆ.

ಪಕ್ಕ ಕುಳಿತಿದ್ದ ನನ್ನವರ ಸಹೋದ್ಯೋಗಿಯಾಬ್ಬ ವ್ಹಿಸ್ಕಿ ಬಾಟಲ್ಲನ್ನು ತೆಗೆದು ಗಾಜಿನ ಪಾತ್ರೆಗೆ ಸುರಿದ. ನೀರನ್ನು ಕಂಡ ‘ಪ್ರಾನ್ಸ್‌’ ಗಳು ಬಾಯಿ ತೆಗೆದು ಅದನ್ನು ಕುಡಿದು ಎರಡೇ ನಿಮಿಷಗಳಲ್ಲಿ ಮತ್ತೇರಿ ಬಿದ್ದವು. ಅವುಗಳು ಕುಡಿಯುವುದು, ಎಗರುವುದನ್ನು ಕಂಡು ಸುತ್ತಲೂ ಕುಳಿತಿದ್ದವರು ಸಂತೋಷಪಡುತ್ತಿದ್ದರು, ಇದು ನನಗೆ ಬೇಕು, ಇದು ನನಗೆ ಬೇಕು ಎಂದು ಹೇಳುತ್ತಿದ್ದರು. ನಮ್ಮಿಬ್ಬರ ಮನ ಇನ್ನು ಎಷ್ಟು ಹೊತ್ತು ಇದನ್ನು ನೋಡಬೇಕೋ ಎಂದು ಮರುಗುತ್ತಿತ್ತು.

ಮತ್ತೆ ಬಂದ ಪರಿಚಾರಿಕೆಯು ನಮ್ಮನ್ನು ನೋಡಿ ‘ಪ್ಲೀಸ್‌ ಚೂಸ್‌ ದ ಕ್ರಾಬ್‌ ಲಾ’ ಎಂದಾಗ ನಮ್ಮ ಜೊತೆ ಕುಳಿತಿದ್ದ ಇಬ್ಬರು ಹೋಗಿ ತೆಂಗಿನಕಾಯಿ ಗಾತ್ರ ಇರುವ ಏಡಿಕಾಯನ್ನು ತೋರಿಸಿದರು. ಏಡಿಕಾಯಿಯ ಕಾಲುಗಳನ್ನು ದಾರದಿಂದ ಕಟ್ಟಿದ್ದರು. ಸುತ್ತಲೂ ಕುಳಿತಿದ್ದವರ ಮಾತು ಏಡಿ, ಕಪ್ಪೆಗಳ ಮೇಲೆ ತಿರುಗಿತು. ಒಬ್ಬರು- ‘ನಾನು ಏಡಿಕಾಯಿಗಳನ್ನು ಪಾತ್ರೆಯಲ್ಲಿ ಹಾಕಿ ಒಲೆಯ ಮೇಲಿಟ್ಟರೆ ಒಳಗಿನಿಂದ ಡಬ್‌, ಡಬ್‌, ಕರ ಕರ ಎಂಬ ಶಬ್ದ ಬರುತ್ತದೆ. ಏಡಿಕಾಯಿಗಳು ಹೊರಬರಲು ಪ್ರಯತ್ನ ಪಡುತ್ತದೆ. ಒಂದು ಸಲ ಮುಚ್ಚಳ ಹಾಕಲು ಮರೆತೆ. ಒಲೆಯ ಮೇಲಿಟ್ಟ ಪಾತ್ರೆಯಿಂದ ಎಲ್ಲವೂ ಹೊರಬಂದು ಅಡಿಗೆ ಮನೆಯಲ್ಲಾ ಓಡಾಡಿದವು. ಮಕ್ಕಳನ್ನು ಕರೆದು ಮತ್ತೆ ಅವುಗಳನ್ನು ಪಾತ್ರೆಗೆ ಹಾಕಿದೆವು. ಅದೆಷ್ಟು ಚೆನ್ನಾಗಿತ್ತು ಅವುಗಳು ಓಡುತ್ತಿದ್ದಾಗ ಹಿಡಿಯಲು’ ಎಂದು ಹೇಳಿದಾಗ ಮಿಕ್ಕವರೆಲ್ಲಾ ನಕ್ಕರು. ‘ಕ್ರೊಕೊಡಯಲ್‌ ಮೀಟ್‌’ ಬಗ್ಗೆ ಮತ್ತೊಬ್ಬರು ಹೇಳುತ್ತಿದ್ದಾಗ ‘ಓಹ್‌! ದಿಸ್‌ ಇಸ್‌ ಕ್ರುಯಲ್‌’ ಎಂದು ನನ್ನವರ ಉದ್ಗಾರ ಹೊರಬಿದ್ದಿತು. ತಕ್ಷಣ ಇನ್ನೊಬ್ಬನ ಉತ್ತರ- ‘ಓಹ್‌! ದಿಸ್‌ ಈಸ್‌ ಲೈಫ್‌’ ಎಂದು.

‘ಶಾರ್ಕ್‌ ಫಿನ್‌ ಸೂಪ್‌’ ಇದು ಇಲ್ಲಿ ಬಹಳ ಫೇಮಸ್‌. ಮೀನಿನ ಈಜು ರೆಕ್ಕೆಗಳನ್ನು ಕೊಯ್ದು ಮತ್ತೆ ಅವುಗಳನ್ನು ಸಮುದ್ರಕ್ಕೆ ಎಸೆಯುತ್ತಾರೆ. ರಕ್ತ ವಾಸನೆ ಬಂದ ತಕ್ಷಣ ಮಿಕ್ಕ ಶಾರ್ಕ್‌ ಗಳು ಈಜಲೂ ಆಗದೆ ಒದ್ದಾಡುತ್ತಿರುವ ತಮ್ಮವರನ್ನೇ ಕಿತ್ತು ತಿನ್ನುತ್ತವೆ.

‘ಊಟ ತನ್ನಿಚ್ಛೆ’ ಎಂಬಂತೆ ಮಾಂಸಾಹಾರ ತಿನ್ನುವುದು ಅವರವರ ಇಷ್ಟ. ಪ್ರಾಣಿಗಳನ್ನು ಕೊಂದು ಅವುಗಳನ್ನು ಬೇಯಿಸುತ್ತಾರೆ ಅದು ಅವರವರ ಭಾವಕ್ಕೆ ತಕ್ಕಂತೆ. ಆದರೆ ಅವುಗಳು ಒದ್ದಾಡುವಾಗ ಅವುಗಳನ್ನು ನೋಡಿ ಕೇಕೆ ಹಾಕಿ ನಗುವರಲ್ಲಾ , ಇವರುಗಳಿಗೆ ಏನೂ ಅನ್ನಿಸುವುದಿಲ್ಲವೇ? ಇದು ನನ್ನ ಮನದ ಪ್ರಶ್ನೆ.

‘ಪ್ರಾನ್ಸ್‌, ಏಡಿಕಾಯಿ’ ತಿನ್ನುತ್ತಿದ್ದವರಿಗೆ ನನ್ನ ಮನಸ್ಸು ಶಾಪ ಹಾಕಿತು. ನಮ್ಮಗಳಿಗೆ ಯಾರಾದರು ಕುಡಿಸಿ, ಮತ್ತೇರಿಸಿ, ಕಾಡಿದರೆ ಅವರನ್ನು ಕ್ರೂರಿ ಎಂದು ಬಯ್ಯುತ್ತೇವೆ. ಈ ಪರಿಯ ಸಂತೋಷ ಪಡುವವರಿಗೆ ಏನನ್ನಬೇಕು? ಒದ್ದಾಡುತ್ತಿದ್ದ ಪ್ರಾನ್ಸ್‌, ಮೀನು, ಕಪ್ಪೆಗಳನ್ನು ಕಂಡಾಗ ಇವುಗಳನ್ನು ಮತ್ತೆ ನೀರಿಗೆ ಎಸೆದು ಬಿಡಲೇ ಎಂದು ಅನ್ನಿಸಿತು.

ಏಡಿಕಾಯಿ, ಪ್ರಾನ್ಸ್‌-ಗಳು ನಮ್ಮನ್ನು ಬದುಕಿಸಬಾರದೇ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿರುವಂತೆ ನಮ್ಮ ನಿಸ್ಸಹಾಯಕ ಪರಿಸ್ಥಿತಿಗೆ ಮನ ಒಳಗೆ ಜೋರಾಗಿ ಅಳುತ್ತಿತ್ತು. ಮುಖ ಮಾತ್ರ ನಾಗರೀಕತೆಯ ನಗುವಿನ ಸೋಗು ಹಾಕಿತ್ತು.

ಈ ಲೇಖನ ಆ ಮೂಕಜೀವಿಗಳಿಗೆ ಒಂದು ಶ್ರದ್ಧಾಂಜಲಿ.

ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಬರೆಯಿರಿ- [email protected]


ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+