ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದಲ್ಲಿ ರಾಜು-ದಯಾನಂದ್‌ ಗಾನಹಾಸ್ಯ ರಸಧಾರೆ

By Staff
|
Google Oneindia Kannada News

ಜುಲೈ 18, ಭಾನುವಾರ ಸಂಜೆ ಸಿಂಗಪುರದ ಕನ್ನಡಿಗರಿಗೆ ಹಾಸ್ಯ ಲೋಕದ, ಗಾನ ಮಾಧುರ್ಯ ತೋಟದ ಸವಿಯೂಟ. ಅದು ತನುಮನವ ತುಂಬಿದ ಸುಂದರ ಸಂಜೆ. ಈ ಜೀವನ ಪಯಣದ ಸವಿ ನೆನಪಿನ ಭಂಡಾರದಲ್ಲಿ ಇನ್ನೊಂದು ನೆನಪಿನ ಸಿಹಿ ಮುತ್ತು ಈ ‘ಗಾನ-ವಿನೋದ’.

‘ಲೆ-ಮೆರಿಡಿಯನ್‌’ ಹೋಟೆಲ್‌ನ ಸಭಾಂಗಣದಲ್ಲಿ ರಾಜು ಅನಂತಸ್ವಾಮಿ ಮತ್ತು ದಯಾನಂದ ಅವರಿಂದ ನಡೆದ ಸುಗಮ ಸಂಗೀತ ಮತ್ತು ಹಾಸ್ಯ-ಅನುಕರಣೆಯ ಕಾರ್ಯಕ್ರಮ ಸಿಂಗಪುರದ ಕನ್ನಡಿಗರನ್ನು ಮೂರು ತಾಸುಗಳು ಕಲೆಯ ಹೊಸ ಲೋಕಕ್ಕೆ ಕರೆದೊಯ್ದಿತು. ಈ ಕಾರ್ಯಕ್ರಮ ಸಿಂಗಪುರದ ಕನ್ನಡ ಕಲಾಭಿಮಾನಿಗಳಿಂದ ನಿಯೋಜಿಸಲ್ಪಟ್ಟಿತ್ತು.

ರಾಜು ಅವರ ಸುಗಮ ಸಂಗೀತ ಮಂದ ಗಮನೆಯಾಗಿ ತಂಪು ಗಾಳಿಯನಿತ್ತು ನಾದ-ಕಾವ್ಯದ, ಭಾವಗೀತೆಗಳ ಮಾಧುರ್ಯ ಲೋಕಕ್ಕೆ ಕರೆದೊಯ್ದರೆ ದಯಾನಂದ ಅವರ ಹಾಸ್ಯ ಭೋರ್ಗರೆವ ಜೋಗದ ಜಲಪಾತದಂತೆ ಧುಮ್ಮಿಕ್ಕಿ ಹಾಸ್ಯದ ಹೊನಲನು ಹರಿಸಿತು.

Junior Anatha Swamy music concert in Sporeಚೈತ್ರ ಮತ್ತು ಕವಿತಾ ಅವರಿಂದ ಶಾರದೆಯ ಪ್ರಾರ್ಥನೆ ಮುಗಿದಂತೆ ಸಿ. ಕೆ. ಮೂರ್ತಿ ಅವರು ಕನ್ನಡ ಕಲಾಭಿಮಾನಿಗಳ ಪರವಾಗಿ ರಾಜು ಅನಂತಸ್ವಾಮಿ ಮತ್ತು ದಯಾನಂದ ಅವರಿಗೆ ಸ್ವಾಗತವನ್ನು ಕೋರಿದರು.

ರಾಜು ಅನಂತಸ್ವಾಮಿಯವರು ಮೊದಲಿಗೆ ರವೀಂದ್ರನಾಥ ಟಾಗೂರರ ಗೀತಾಂಜಲಿ ಅನುವಾದಿತ ಗೀತೆಯನ್ನು ಹಾಡಿ ‘ಜೋಗದ ಸಿರಿ’ ಪ್ರಾರಂಭಿಸಿದಾಗ ‘ರಾಜು’ ವನ್ನು ಒಂದು ಕ್ಷಣ ಮರೆತು ಮೈಸೂರು ಅನಂತಸ್ವಾಮಿ ಕಂಠಶ್ರೀ ತೇಲಿ ಬಂದಂತೆ ಅನಿಸಿತು. ದೇವಯ್ಯ ಪಾರ್ಕ್‌, ಶೇಷಾದ್ರಿಪುರದಲ್ಲಿ ಇಪ್ಪತ್ತು ವರುಷಗಳ ಕೆಳಗೆ ಗೆಳೆಯ ಗೆಳತಿಯರಡಗೂಡಿ ಕೇಳಿದ ಅನಂತಸ್ವಾಮಿ ಅವರು ಹಾಡಿದ ಕೆ.ಎಸ್‌.ನ ಅವರ ‘ಒಂದಿರುಳು ಕನಸಿನಲಿ’ ಎಂದು ಹಾಡಿದಾಗ ಚಪ್ಪಾಳೆ, ಶಿಳ್ಳು ನೆನಪಿಗೆ ಬರುತ್ತಿದ್ದಂತೆ- ಡಿ.ವಿ.ಜಿ. ಅವರ ‘ಬದುಕು ಜಟಕಾ ಬಂಡಿ’ ಇಂದಿನ ವಾಸ್ತವಿಕತೆಗೆ ನನ್ನನ್ನು ಕರೆ ತಂದಿತು. ರಾಜ ರತ್ನರ ಪದಗೋಳ್‌ ಮತ್ತು ರಾಜು ಅವರ ಜೋಡಿ ಮೋಡಿ ಮಾಡಿತು.

‘ಪಕ್ಕದ್ಮನೆ ಸುಬ್ಬಮೋರಿಗೆ’ ಈ ಸಲದ ‘ಸಿಂಗಪುರ ಸ್ಪೆಷಲ್‌’ ಏಕಾದಶಿ ಉಪವಾಸ ಸಭಿಕರ ಚಪ್ಪಾಳೆಯಿಂದ ತುಂಬಿತು. ಬಸವಣ್ಣನವ ವಚನ, ಲಕ್ಷ್ಮೀನಾರಾಯಣ ಭಟ್ಟರ ಎಲ್ಲಿ ಜಾರಿತೋ ಮನವೂ, ಎಚ್‌.ಎಸ್‌. ವೆಂಕಟೇಶ ಮೂರ್ತಿ ಅವರ ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲ’, ನಿಸಾರ್‌ ಅಹಮದ್‌ ಅವರ ‘ಕುರಿಗಳು ಸಾರ್‌ ಕುರಿಗಳು’ ತುಂಬಿದ ಸಭಿಕರ ಮಂದೆಯನ್ನು ಹಲವು ತಾಸುಗಳು ‘ಸುಮಧುರ ಸಂಗೀತದ’ ಕುರಿಗಳನ್ನಾಗಿಸಿತು. ಜಿ.ಎಸ್‌.ಶಿವರುದ್ರಪ್ಪನವರ ‘ಎದೆ ತುಂಬಿ, ತನು ತುಂಬಿ, ಮನತುಂಬಿ ಹಾಡಿದೆನು’ ಎಂದು ‘ಕಂಠ ಸಿರಿ ಒಲಿದ ಈ ರಾಜುವಿಗೆ ಬೇಕೆ ಬೇರೆ ಬಿರುದು ಸನ್ಮಾನ’ ಎಂದು ಮನ ಕೇಳಿತು.

ಸಾಮಾಜಿಕ ಕಳಕಳಿಯ ನಗು ! ‘

Mimicry Dayanand sending laugh waves in South East Asiaನಗಿಸುವ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ನಗಿಸುವುದು ಇನ್ನೊಬ್ಬರನು ಪರಿಹಾಸ್ಯ ಮಾಡಿ, ಮನಕೆ ನೋವು ಮಾಡುವುದಲ್ಲ. ದಯಾನಂದ ಅವರ ಹಾಸ್ಯದಲ್ಲಿ ಕೊಂಕಾಗಲೀ, ಅವಹೇಳನವಾಗಲೀ ಇಲ್ಲದೆ ನಗಿಸಿದ ನಗುವಿನ ಹಿಂದೆ ಸಾಮಾಜಿಕ ಕಳಕಳಿ ಇದೆ. ಆ ಕ್ಷಣ ನಕ್ಕು ಒಮ್ಮೆ ಯೋಚಿಸಿದಲ್ಲಿ ಅದು ಕಂಡು ಬರುತ್ತದೆ. ನಮ್ಮ ದೈನಂದಿಕ ಜೀವನದಲ್ಲಿ ನಡೆಯುವ ದಿನ ನಿತ್ಯದ ಚಿಕ್ಕ ಚಿಕ್ಕ ಘಟನೆಗಳಲ್ಲೇ ಹಾಸ್ಯ ಕಾಣಬಹುದು. ಈ ಹಾಸ್ಯ ಆರೋಗ್ಯಕರ ವಾತಾವರಣ, ಮನೋಲ್ಲಾಸ, ನವ ಚೈತನ್ಯ ತುಂಬುತ್ತದೆ ಎಂಬ ನಿಜವನ್ನು ಹಾಸ್ಯ ರೂಪವಾಗಿಯೇ ಪರಿಚಯಿಸಿದರು. ‘ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ಮಿಗೆ ನೀನು ಬೇಡಿಕೊಳೋ- ಮಂಕುತಿಮ್ಮ’ ಎಂದು ಡಿ.ವಿ.ಜಿ. ಅವರು ಬರೆದಿದ್ದನ್ನು ವರವಾಗಿ ಪಡೆದು ಪಾಲಿಸುತ್ತಿದ್ದಾರೆ ದಯಾನಂದ ಅವರು.

ಭಾಷೆಗಳ ಬಗ್ಗೆ ಪ್ರೀತಿ ಅತ್ಯಗತ್ಯ ಎಂದು ಬೇರೆ ಬೇರೆ ಪ್ರಾಂತ್ಯದವರ ಬಾಯಲ್ಲಿ ನುಡಿವ ಕನ್ನಡ ಭಾಷೆ, ಇಂದಿನ ಮೊಬೈಲ್‌ ಅವಾಂತರ, ಗೋಬರ್‌ ಗ್ಯಾಸ್‌, ಕ್ರಿಕೆಟ್‌ ಕಾಮೆಂಟರಿ ಹೇಳಿ ಸಭಿಕರನ್ನು ನಕ್ಕು ನಲಿಸಿದರು. ಕೋಳಿ, ಕುರಿ, ಮೀನುಗಳ ರುಚಿಸಿ ತಿನ್ನುವವರ ವರ್ತನೆಯ ವಿಡಂಬನೆ ಬಲು ಚೆನ್ನಾಗಿತ್ತು. ಶ್ರದ್ಧಾಂಜಲಿಯಾಗಿ ಹಿರಿಯ ನಟರಾದ ಬಾಲಕೃಷ್ಣ, ಸುಂದರಕೃಷ್ಣ ಅರಸ್‌, ಮುಸುರಿ, ದಿನೇಶ್‌, ಟೈಗರ್‌ ಪ್ರಭಾಕರ್‌ ಅವರುಗಳ ‘ವಾಕ್‌’ ಶೈಲಿ, ಕರ್ನಾಟಕದ ಮೇರು ನಟ ರಾಜ್‌ಕುಮಾರ್‌ ಅವರ ಅರ್ಜುನ- ಬಬ್ರುವಾಹನರ ಸಂವಾದ, ಶಂಕರ್‌ನಾಗ್‌, ಅಂಬರೀಷ್‌, ವಿಷ್ಣು, ಶ್ರೀನಾಥ್‌ ಅವರ ಹಾವ ಭಾವಗಳು, ನಟನಾ ಪರಿಯ ಕಿರು ಚಿತ್ರಣ ಕೊಟ್ಟು, ಹಿಂದಿ ಸಿನಿಮ ಜಗತ್ತಿನ ಅಮರೀಶ್‌ ಪುರಿ, ಸಂಜೀವ ಕುಮಾರ್‌, ಅಮ್ಜದ್‌ ಖಾನ್‌, ಉತ್ಪಲ್‌ ದತ್‌ ಅವರ ಮಾತಿನ ಅನುಕರಣೆ ಮಾಡಿದಾಗ ಸಭಿಕರ ನಗುವಿನ ಅಲೆ ಎಲ್ಲೆ ಮೀರಿತು. ಸಿಡ್ನಿಯಲ್ಲಿ ಕಿಡ್ನಿ ಪ್ರಾಬ್ಲಂ ಆಗಿ, ಮೆಲ್‌ಬೊರ್ನಿನಲ್ಲಿ ಬೋನ್‌ ಆಗಿ, ಆಕ್ಲೆಂಡ್‌ ಆಕಳುಗಳ ಕಂಡು, ಸಿಂಗಾಪುರದಲ್ಲಿ ಧಾರಾಕಾರವಾಗಿ ಸುರಿವ ಮಳೆಯಂತೆ ಹಾಸ್ಯ ಧಾರೆ ಹರಿಸಿದ ಉತ್ತಮ ವಿದೂಷಕನಿಗೆ ಶರಣು ಶರಣು.

ರಾಜು ಅನಂತಸ್ವಾಮಿ ಅವರ ಗಾಯನಕ್ಕೆ ಉತ್ತಮ ‘ತಬಲಾ’ ಸಾರಥ್ಯ ನೀಡಿದ ಗದುಗಿನ ದತ್ತಾತ್ರೇಯ ಅವರು ಸಿಂಗಪುರದವರು. ಉಸ್ತಾದ್‌ ಅಮೀರ್‌ ಹುಸೇನ್‌ ಖಾನ್‌ ಮತ್ತು ಉಸ್ತಾದ್‌ ಮಿರಜ್ಕರ್‌ ಅವರ ಶಿಷ್ಯರಾದ ದತ್ತಾತ್ರೇಯ ಅವರು ‘ಸಿಫಾ’ Singapore Indian fine Arts Society ನಲ್ಲಿ ಮೊದಲ ತಬಲಾ ವಾದ್ಯ ಶಿಕ್ಷಕರು. ಸಂಗೀತ ಸಾಮ್ರಾಜ್ಯದ ದಿಗ್ಗಜಗಳಿಗೆ ಪಕ್ಕವಾದ್ಯ ನೀಡಿರುವ ದತ್ತಾತ್ರೇಯ ಅವರು ಸುಮಾರು 25 ವರುಷಗಳಿಂದ ‘ತಬಲ’ ವಾದಕರಾಗಿ, ಶಿಕ್ಷಕರಾಗಿ, ಅಮೇರಿಕಾ, ಇಂಗ್ಲೆಂಡ್‌, ನಾರ್ವೆ, ದುಬೈ ದೇಶಗಳಲ್ಲಿ ಕಲಾ ನೈಪುಣ್ಯವನ್ನು ತೋರಿಸಿದ್ದಾರೆ. ಇವರ ಕಲಾ ಸೇವೆಗೆ ಮೆಚ್ಚಿ 2001 ರಲ್ಲಿ ನೃತ್ಯಾಲಯ ಏಸ್ತಟಿಕ್‌ ಸೊಸೈಟಿ, ಸಿಂಗಪುರ ಇವರಿಗೆ ‘ಸಂಗೀತ ಕಲಾ ನಿಪುಣ’ ಎಂಬ ಬಿರುದನ್ನು ನೀಡಿ ಗೌರವಿಸಿದೆ.

ಅರ್ಚನ ಮತ್ತು ವೆಂಕಟ್‌ ಅವರಿಂದ ನಿರೂಪಣೆ, ಜಗದೀಶ್‌ ಅವರಿಂದ ವಂದನಾರ್ಪಣೆ ಮತ್ತು ಹಿರಿಯ ತಲೆಮಾರಿನ ಕನ್ನಡಿಗರಾದ ಎ. ಎನ್‌.ರಾವ್‌, ಪ್ರಭುದೇವ ಮತ್ತು ಸಿ.ಕೆ.ಮೂರ್ತಿ ಅವರು ಕಲಾವಿದರಿಗೆ ಹಾರಾರ್ಪಣೆ ನಡೆಯಿತು.

‘ಶತಮಾನಂ ಭವತಿ’ ಎಂದು ಕಲಾವಿದರಿಗೆ ಹಾರೈಸಿದ ಜ್ಞಾನವೃದ್ದ, ವಯೋವೃದ್ಧ ರಾವ್‌ ಅವರ ಆಶೀರ್ವಾದ, ‘ವರುಷಕ್ಕೊಮ್ಮೆ ಬನ್ನಿ’ ಎಂದು ಉತ್ಸಾಹ ಪೂರ್ಣ ಆಹ್ವಾನವನ್ನಿತ್ತ ಸಭಾಂಗಣದಲ್ಲಿ ತುಂಬಿದ್ದ ಸಭಿಕರ ಸ್ನೇಹಾದರಕ್ಕೆ ಮನಸೋತು ಕಲಾರಸಿಕ ಸಾಗರಕೆ ಕೈಮುಗಿದರು ರಾಜು, ದಯಾನಂದ್‌ ಭಲೇಜೋಡಿ.

ಹೊಟ್ಟೆಗೆ ಕೇಸರೀ ಭಾತ್‌, ಬಿಸಿ ಬೇಳೆಭಾತ್‌, ಮೊಸರನ್ನ ದಯಾನಂದರ ಮಿಮಿಕ್ರಿಯನ್ನು ಮತ್ತೆ ಮತ್ತೆ ಮೆಲುಕು ಹಾಕಿ ನಗಲು ಶಕ್ತಿ ನೀಡಿತು. ಮೊಗದಲಿ ನಗುವಿನ ಲಾಸ್ಯ, ಕಿವಿಯಲಿ ಗಾನ ಮಾಧುರ್ಯ, ಮನದಿ ನವೋಲ್ಲಾಸವ ತುಂಬಿಕೊಂಡು ಮನೆಗೆ ತೆರಳಿದ ಸಿಂಗಪುರದ ಪ್ರತಿಯಾಬ್ಬ ಕನ್ನಡ ಕಲಾಭಿಮಾನಿಗೆ ಈ ಯಾಂತ್ರಿಕ ಜೀವನ ಜಂಜಾಟದಲಿ ಮುದ ನೀಡಿದ ‘ಗಾನ-ಹಾಸ್ಯ ರಸ ಧಾರೆ’ ಮರೆಯಲಾಗದ ಒಂದು ಸುಂದರ ಸಂಜೆ. ಇಂಥ ಸಂಜೆಗಳ ಲೆಕ್ಕ ಸುಗ್ಗಿಯಾಗಲಿ.

ಓದಿ.....

ಸಿಡ್ನಿ ಕನ್ನಡ ಸಂಘದ 21 ರ ಸಂಭ್ರಮ

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X