ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತ ರ ಅಮೆರಿಕ ವೀರಶೈವ ಸಮ್ಮೇಳನ-2004 : ದಿವಸ-2

By Staff
|
Google Oneindia Kannada News

ಬಸವೇಶ್ವರ ಮತ್ತು ವಚನ ಸಾಹಿತ್ಯಕ್ಕೆ ಪೂಜೆ, ಪ್ರಾರ್ಥನೆ ಹಾಗು ಬಸವನ ಜ್ಯೋತಿ ಬೆಳಗುತಿದೆ ಎಂಬ ಸಮೂಹ ಗೀತೆಯಾಂದಿಗೆ ಭಾನುವಾರದ ಸಮ್ಮೇಳನಕ್ಕೆ ಶುಭಾರಂಭ ದೊರೆಯಿತು. ಅಧ್ಯಕ್ಷ ರವಿ ಬೋಪಲಾಪುರ ಹಾಗೂ ಇತರ ಮುಖಂಡರು ಸಮಾಜ ಉನ್ನತಿಯ ಬಗ್ಗೆ ಮಾತನಾಡಿದರು.

ಯುವಶಕ್ತಿ ನಿಶಾಂತ ಪಾಟೀಲ, ಪ್ರೀತ ಗೌಡರ, ಅನು ಮಾಲಿಪಾಟೀಲ, ಮಿನುತ ಮಹದೇವಯ್ಯ ಅಮೇರಿಕಾದಲ್ಲಿ ಬಸವತತ್ವಗಳನ್ನು ಮುಂದಿನ ಜನಾಂಗ ಹೇಗೆ ಬೆಳೆಸುತ್ತದೆ? ಧರ್ಮದ ಬಗ್ಗೆ ಅವರ ವಿಚಾರವೇನು? ದಿನನಿತ್ಯ ಶಾಲೆ, ಕಾಲೇಜು ಹಾಗೂ ಸಮಾಜದಲ್ಲಿ ಅವರು ಅನುಭವಿಸುವ ತೊಂದರೆಗಳೇನು? ಇತ್ಯಾದಿ ಚರ್ಚಿಸಿದರು. ಪ್ರತಿವಾರ ನಾವು ದೇವಸ್ಥಾನಕ್ಕೆ ಹೋಗಬಹುದು, ಹೋಗದೇ ಇರಲೂಬಹುದು, ಕೆಲವೊಮ್ಮೆ ನಾವು ಲಿಂಗಪೂಜೆ ಸಾಧ್ಯವಾದಾಗಷ್ಟೆ ಮಾಡಿಕೊಳ್ಳುತ್ತೇವೆ. ಆದರೆ ಒಣ ಆಡಂಬರದ ಸೋಗಿಲ್ಲದೇ, ಬಸವಣ್ಣನವರ ತತ್ವಗಳನ್ನು ಪಾಲಿಸಲು ಬದ್ಧರಾಗಿದ್ದೇವೆ. ಯುವಕರ ನೇರ, ಸತ್ಯ, ನಿಷ್ಠುರವಾದ ಮಾತು- ‘ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂಬಂತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Sangeetha Katti singing in the conventionಮುಖ್ಯ ಅತಿಥಿ ರೇವಣಸಿದ್ಧಯ್ಯನವರು (ಕರ್ನಾಟಕದ ನಿವೃತ್ತ ಪೋಲಿಸ ಮಹಾನಿರ್ದೇಶಕರು)- ಗಿಡದ ಬುಡಕ್ಕೆ ನೀರೆರೆದರೆ ಉತ್ತಮ ಫಲವನ್ನು ಮೇಲೆ ನೋಡಬಹುದು ಎಂದರು. ಇಂದಿನ ಯುವ ಜನಾಂಗ ಮತ್ತು ವಚನಗಳ ಸಾರವನ್ನು ತಮ್ಮ ವೃತ್ತಿಯ ಉದಾಹರಣೆಗಳೊಂದಿಗೆ ಮನವರಿಕೆ ಮಾಡಿದರು. ದೇಶ ಬಿಟ್ಟು ಬಂದರು ನಮ್ಮ ಸಂಸ್ಕೃತಿಯನ್ನು ಮರೆಯದೆ ಪಾಲಿಸುತ್ತಿರುವ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.

ಶ್ರೀ ಸದ್ಗುರು ಜಗ್ಗಿ ವಾಸುದೇವ ಸ್ವಾಮೀಜಿಯವರು ‘ಅಂತರಂಗ ಶುದ್ಧಿ ಜ್ಞಾನ ಮತ್ತು ಯುವಶಕ್ತಿ’ ಎಂಬ ವಿಷಯದ ಮೇಲೆ ಭಾಷಣಮಾಡಿದರು. ಯುವಶಕ್ತಿ ನಮ್ಮ ಮುಂದಿನ ಕನಸುಗಳನ್ನು ಹೇಗೆ ಸಾಕಾರ ಗೊಳಿಸಬಲ್ಲದು ಎಂಬುದನ್ನು ತಮ್ಮ ಆಧ್ಯಾತ್ಮಿಕ ಚೌಕಟ್ಟಿನೊಳಗೆ, ಪಾಶ್ಚಾತ್ಯತೆಯಾಂದಿಗೆ ಹೋಲಿಸಿ ಉದಾಹರಿಸಿದರು.

ಮಧ್ಯಾಹ್ನದ ಮೃಷ್ಟಾನ್ನ ಭೋಜನದ ನಂತರ ವ್ಯಕ್ತಿತ್ವ-ವಿಕಸನಕ್ಕೆಂದು ಆಯೋಜಿಸಿದ್ದ ಆರೋಗ್ಯ, ಪರ್ಯಾಯ ವೃತ್ತಿಗಳು (Alternative careers,) ಸಂಪರ್ಕ (Networking), ವ್ಯವಹಾರ Business Planning) ಇತ್ಯಾದಿ ಗೋಷ್ಠಿಗಳು ಸಮ್ಮೇಳನದ ಆಕರ್ಷಣೆಯಾಗಿತ್ತು. ಉದ್ಯಮಿಗಳಾದ ನಾಗ ಮನೋಹರ, ಸತೀಶ ಕುಮಾರ, ಕಿಣಿ, ಸುಚಿತಾ, ಡಾ. ಧರ್ಮರಾಜ, ಡಾ. ಗುರು ಮೊಟಗಿ ತಮ್ಮ ಅನುಭವ ಹಂಚಿಕೊಂಡರು.

ಜನಾಂಗ ಸೇತುವೆ : (Bridging the Gap) ಪಾಲಕರು ಮತ್ತು ಮಕ್ಕಳ ನಡುವೆ ಹೊರನಾಡಿನಲ್ಲಿ ಉದ್ಭವಿಸುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಸಂವಾದ ಮನರಂಜನೆಯ ಜೊತೆಗೆ ಯುವಕ - ಪಾಲಕರನ್ನು ಹತ್ತಿರ ತಂದಿತ್ತು. ಆಲೀವ ಗಾರ್ಡನಗೆ (Italian Resaurants) ಹೋಗಲೇಬೇಕೆಂಬುವ ಮಗಳ ಹಠಕ್ಕೆ ಅಮೇರಿಕಾದಲ್ಲಿರುವ ಅಮ್ಮ ಹೇಳೋದು ‘ನಾವೆಲ್ಲಾ ಸಮಾಜದಲ್ಲಿ ಮೇಲೆ ಬರಲು ರಾಗಿ ಮುದ್ದೆ, ತಿಳಿಸಾರು ಸಾಕಾಯ್ತು . ನಿನಗೇನು? ಮನೆಯಲ್ಲೆ ಊಟಮಾಡು’ ಎನ್ನುವ ಉಪದೇಶ.

ಅನುಭವ ಗೋಷ್ಠಿ ಸಂವಾದದಲ್ಲಿ ರಂಜನ ರಾಜ ಹಾಗು ಸಜ್ಜನ ಶಿವ ರವರು ಶರಣರ ಮತ್ತೊಂದು ಕ್ರಾಂತಿಯಾದ ‘ದಾಸೋಹ ’ ದ ಬಗ್ಗೆ ಗಂಭೀರ ಚಿಂತನೆ ಮಾಡಿದರು. ದಾಸೋಹ ಎಂಬುದು ಸಾಂಕೇತಿಕವಾಗಿ ಹಸಿದವರಿಗೆ ಉಣಬಡಿಸುವುದಾದರೂ ಜ್ಞಾನ ದಾಸೋಹ, ವಿದ್ಯಾದಾಸೋಹ ಇತ್ಯಾದಿಗಳು ಕೂಡ ಅಷ್ಟೇ ಮುಖ್ಯವಾದವು. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವುದೇ ಸಮಾಜ ಸೇವೆ, ಅದುವೆ ನಿಜವಾದ ದಾಸೋಹ ಎಂದರು.

ಸಂಜೆಯ ತಿಂಡಿ-ಚಹಾದ ಜೊತೆಗೆ ಮತ್ತೊಂದು ಸಂತೋಷಭರಿತ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಕಾತರದಿಂದ ಅಣಿಯಾದೆವು. ಲಿಂಗಾಷ್ಟಕದ ವಚನ ನೃತ್ಯ, ಧಾರಾ, ರೂಪಾ ಅವರ ಹಿಂದಿ ನೃತ್ಯ, ಪಿಟ್ಸಬರ್ಗ, ಒಹಾಯೋ ದವರ ಭರತನಾಟ್ಯ, ಸಂಗೀತಾ ಸಂಗಡಿಗರ ಮರಾಠಿಯ ‘ ಕೋನ್ಯ ಗವಾಚಾ ಆಲಾ ಪಖಾರು’ ನೃತ್ಯ ಪ್ರೇಕ್ಷಕರ ಆನಂದವನ್ನು ಇಮ್ಮಡಿಸಿತ್ತು. ಯುವಕರ ಕನ್ನಡ ನೃತ್ಯ, ಫ್ಲೋರಿಡಾದವರ ಕನ್ನಡ ಹಾಡುಗಳು ಕಿವಿಗೆ ತಂಪನೆರೆದಿತ್ತು .

ಇಗೋ ಬಂತು ನೋಡಿ ‘ಬಸವ Bible’ ಎಂಬ ಬಿಡಿಸಲಾಗದ ಗಂಟು. Thou shalt not steal, thou shalt not kill - ಕಳಬೇಡ, ಕೊಲಬೇಡ ’ ಎಂದು ಭವ್ಯಸಭಾ ಭವನದಲ್ಲಿ ಜೋರಾಗಿ ಕೂಗಿದಾಗ ಎಲ್ಲರೂ ‘ಎತ್ತಣಿಂದತ್ತ ಸಂಬಂಧವಯ್ಯ’ ಎಂದು ಆಶ್ಚರ್ಯದಿಂದ ನೋಡಿದೆವು. 12ನೇ ಶತಮಾನದ ವಚನಗಳ ಸಾರವನ್ನು ಹೇಗೆ ‘10 Commandments’ ಅಳವಡಿಸಿಕೊಂಡಿದೆ ಎಂಬ ನಾಟಕವನ್ನು ಮನೋಹರ ಮಾಲೀಪಾಟೀಲ ಸಂಗಡಿಗರು ಮನ ಮೆಚ್ಚುವಂತೆ ಅಭಿನಯಿಸಿದರು. ಮೈಸೂರಿನ ಸೋಮಶೇಖರರ ನಾಟಕವನ್ನು ಸುಧೀರ ನಿರ್ದೇಶಿಸಿದರು. ಸಾಂಕೇತಿಕವಾಗಿ ಬಸವ ಜ್ಯೋತಿಯನ್ನು ಹಳೆಯ ತಲೆಮಾರಿನ ಜನಾಂಗ ಯುವಕರಿಗೆ ನೀಡುವುದರೊಂದಿಗೆ ಸಮ್ಮೇಳನದ ಉದ್ದೇಶವನ್ನು ಅರ್ಥಪೂರ್ಣವಾಗಿ ವಿವರಿಸಲಾಯಿತು.

ಮುಕ್ತಾಯದ ವಿಶೇಷ ಭೋಜನದೊಂದಿಗೆ, ಪಾರಿತೋಷಕ ವಿತರಣೆ, ಒಬ್ಬರಿಗೊಬ್ಬರು ಸಂಪರ್ಕಿಸುವ ವಿಳಾಸ ಹಂಚಿಕೊಳ್ಳುವುದು ವಿಶೇಷ ದೃಶ್ಯವಾಗಿತ್ತು . ಸಂಗಿತಾ ಕಟ್ಟಿಯವರ ಸುಮಧುರವಾದ ವಚನಗಳು ಹಾಗೂ ಮರಾಠಿ ಭಜನೆ- 2005 ರ ಜುಲೈ 2-3 ರಂದು ಮೇರಿಲ್ಯಾಂಡ್‌ನಲ್ಲಿ ನಡೆಯಲಿರುವ 28ನೇ ವೀರಶೈವ ಸಮ್ಮೇಳನಕ್ಕೆ ಆಹ್ವಾನದಂತಿತ್ತು.

ಸಮ್ಮೇಳನದಲ್ಲಿ ಭಾಗವಹಿಸಿದ ನಂತರ ಅನ್ನಿಸಿದ್ದು- ಶರಣರ ಸಂಗ ಹೆಜ್ಜೇನು ಸವಿದಂತೆ !

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X