ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಸೋಹ, ಬಸವ ಬೈಬಲ್‌ ಮತ್ತು ರಾಗಿ ಮುದ್ದೆ

By Staff
|
Google Oneindia Kannada News
  • ಬಸವರಾಜ. ಸೂ. ಮುದೇನೂರ
    ವೆಸ್ಟ್‌ಬರೋ MA USA
    [email protected]
VSNA : Defining next Generation!

Basavaraj Mudenurಅಮೇರಿಕಾದಲ್ಲಿ ನೆಲೆಸಿರುವ ಮುಂದಿನ ಯುವ ಪೀಳಿಗೆ ಬಸವ ತತ್ವವನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಧ್ಯೇಯ ಹೊತ್ತ ‘27 ನೇ ಉತ್ತರ ಅಮೇರಿಕಾದ ವೀರಶೈವ ಸಮ್ಮೇಳನ’ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಈ ವರ್ಷದ ಸಂಭ್ರಮದ ಹಬ್ಬವನ್ನು ಅಟ್ಲಾಂಟ (Atlanta Georgia) ನಗರದ ಭವ್ಯವಾದ ಗ್ವಿನ್ನೆಟ್ಟ ಸಭಾಭವನದಲ್ಲಿ ಜುಲೈ 2-4, 2004 ವರೆಗೆ ದಕ್ಷಿಣ-ಪೂರ್ವ ರಾಜ್ಯಗಳ ವೀರಶೈವ ಜನಾಂಗ ಆಯೋಜಿಸಿತ್ತು.

ಯುವಕರನ್ನು ಹುರಿದುಂಬಿಸುವ ಸಲುವಾಗಿ ಅನೇಕ ಸಾಹಸ ಕ್ರೀಡೆಗಳು, ಸಮಾಜ ಸೇವೆ, ಬಸವ ತತ್ವಗಳ ಅಭ್ಯಾಸ ಮತ್ತು ಲಿಂಗಪೂಜೆ ಇತ್ಯಾದಿ ಕಾರ್ಯಕ್ರಮಗಳನ್ನು ಯುವಕರೇ ನೆಡೆಸಿಕೊಟ್ಟಿದ್ದು ಎಲ್ಲರ ಮನಸ್ಸಿಗೆ ಹಿತ ನೀಡಿತ್ತು. ಸುಮಾರು 600 ಜನ ಸೇರಿದ್ದ ಸಮಾರಂಭವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಶ್ರೀಮತಿ ಸಂಗೀತಾ ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಹಲವಾರು ಸ್ವಯಂ-ಸೇವಕರು ಹಗಲಿರುಳು ಶ್ರಮಿಸಿದರು.

ಬೆಳಗು ಮುಂಜಾನೆ ಯೋಗಾಭ್ಯಾಸದೊಂದಿಗೆ ಹಲವಾರು ಶರಣ-ಶರಣೆಯರು ಸಾಮೂಹಿಕ ಲಿಂಗಪೂಜೆಯಲ್ಲಿ ಪಾಲ್ಗೊಂಡು ವಚನಗಳನ್ನು ಪಠಿಸಿದರು. ಲಿಂಗಪೂಜೆಯ ಮಹತ್ವವನ್ನು ಹಾಗು ಸಾಮಾನ್ಯವಾದ ನೀರು ಲಿಂಗಕ್ಕೆ ಧಾರೆ ಎರೆದಮೇಲೆ ಹೇಗೆ ಪವಿತ್ರವಾಗುತ್ತದೆ ಎಂದು ಡಾ.ಬಸವರಾಜ ಅವರು ಪುಟ್ಟ ಬಾಲಕನ ಪ್ರಶ್ನೆಗೆ ಉತ್ತರಿಸಿದರು.

ಧಾರ್ಮಿಕ ಗೋಷ್ಠಿಯಲ್ಲಿ ಅಷ್ಠಾವರಣಗಳ ಬಗ್ಗೆ (ಗುರು, ಲಿಂಗ, ಜಂಗಮ, ವಿಭೂತಿ, ಮಂತ್ರ, ಪಾದೋದಕ-ಗಂಧ, ರುದ್ರಾಕ್ಷಿ ಹಾಗು ಪ್ರಸಾದ) ವಿವರವಾಗಿ ವಿವರಿಸಿದವರು ವೃತ್ತಿಯಲ್ಲಿ ತಂತ್ರಜ್ಞರಾದ ಸಜ್ಜನ ಶಿವ ರವರು. ಶೂನ್ಯ ಸಂಪಾದನೆ , ಪಂಚಾಚಾರಗಳ (ಲಿಂಗಾಚಾರ, ಸದಾಚಾರ, ಗಣಾಚಾರ, ಶಿವಾಚಾರ, ವೃತ್ಯಾಚಾರ) ಬಗ್ಗೆ ಮಂಜುಳಾ ಶಂಕರಪ್ಪ ಉದಾಹರಣೆಗಳೊಂದಿಗೆ ಪ್ರಸ್ತುತ ಪಡಿಸಿದರು. ವಿಮರ್ಶೆ ಹಾಗೂ ಚರ್ಚೆಯಲ್ಲಿ ಹಲವಾರು ಹಿರಿಯರು ತಮ್ಮ ಅಭಿಪ್ರಾಯಗಳನ್ನು ಸರಳವಾಗಿ ತಿಳಿಯಹೇಳಿದರು.

ಮಕ್ಕಳು ಹಾಗು ಯುವಕರು ವಚನ ನೃತ್ಯ, ಪ್ರಬಂಧ, ವಚನ ಗಾಯನ, ಶರಣರ ಚಿತ್ರ ಬಿಡಿಸುವ ಸ್ಪರ್ಧೆಗಳಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿ ಬಸವತತ್ವಗಳ ಬಗ್ಗೆ ತಮಗಿರುವ ಜ್ಞಾನವನ್ನು ಹಾಗೂ ಅಭಿಮಾನವನ್ನು ಪ್ರದರ್ಶಿಸಿದರು. ಸಂಪ್ರದಾಯ, ಸಂಸ್ಕೃತಿಯ ಬಗ್ಗೆ ಭಾರತದಲ್ಲೇ ಯುವಕರು ಅಸಡ್ಡೆ ತೋರುವ ಈ ದಿನಗಳಲ್ಲಿ ಹೊರದೇಶದಲ್ಲಿ ಅದನ್ನು ಉಳಿಸಿ-ಬೆಳೆಸುವ ಧ್ಯೇಯ ಹೆಮ್ಮೆಪಡುವಂತಿತ್ತು.

ಅತಿಥಿ ಭಾಷಣಕಾರರಾಗಿ ಆಗಮಿಸಿದ್ದ ಹಂಪಿಯ ಅಚ್ಯುತ ಆಶ್ರಮದ ಸ್ವಾಮಿ ನಾಡಗೌಡರು ಧರ್ಮದ ತತ್ವಗಳು, ಬಸವಣ್ಣ ಹಾಗೂ ಅವರ ವಚನಗಳು- 21ನೇ ಶತಮಾನದ ಮುಖಂಡರನ್ನು ಹೇಗೆ ಉನ್ನತಿಯತ್ತ ಕೊಂಡೊಯ್ಯುತ್ತವೆ ಎಂಬುದನ್ನು ವಿವರಿಸಿದರು. ಅಲ್ಲಮ ಪ್ರಭುಗಳು ಮೇಲಿನಿಂದ ಕೆಳಗೆ ದೈವ ಶಕ್ತಿಯನ್ನು ತರಲು ಯತ್ನಿಸಿದರೆ ಬಸವಣ್ಣನವರು ಕೆಳಗಿನಿಂದ ಮೇಲೆ ಸಾಮಾನ್ಯರನ್ನು ದೈವತ್ವದತ್ತ ಒಯ್ಯಲು ಪ್ರಯತ್ನಿಸಿದರು ಎಂದರು.

Dignataries at Veerashiva Samaja Conventionಶನಿವಾರದ ಸಂಜೆಯ ಕಾರ್ಯಕ್ರಮಗಳು ಕು.ವಿದ್ಯಾ ರುದ್ರೇಶರ ಪುಷ್ಪಾಂಜಲಿಯಾಂದಿಗೆ ಪ್ರಾರಂಭವಾಯಿತು. ಡಾ. ಸಿದ್ದಪ್ಪ, ಸಂಗೀತಾ ಹಾಗು ಸುನೀಲ ನಾಗರಾಜ (ಯುವ ಘಟಕ) ಎಲ್ಲರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಶ್ರೀಮತಿ ರೂಪಾ ಜಯದೇವರ ಸುಶ್ರಾವ್ಯ ವಚನ ಗಾಯನ ಎಲ್ಲರನ್ನು ಮೋಡಿ ಮಾಡಿತ್ತು. ಚಿಣ್ಣರ ನೃತ್ಯ, ಭರತನಾಟ್ಯ, ಯುವತಿಯರ ಗ್ರಾಮೀಣ ಸೊಗಡಿನ ‘ಚೆಲ್ಲಿದರು ಮಲ್ಲಿಗೆಯ, ಕುಂಬಾರಣ್ಣ, ಗಲ್ಲು-ಗಲ್ಲೆನುತಾ’ ಜಾನಪದ ನೃತ್ಯ ಕಣ್ಣಿಗೆ ಹಬ್ಬ ಉಂಟು ಮಾಡಿತ್ತು.

ಕರ್ನಾಟಕದಿಂದ ಬಂದು ಅಮೇರಿಕಾದಲ್ಲಿ ನೆಲೆಸಿರುವ ಮಾತಾಪಿತೃಗಳು ತಮ್ಮ ಮಕ್ಕಳ ಮದುವೆಯ ಬಗ್ಗೆ ಯೋಚಿಸುವ ಪರಿಯನ್ನು ಬಿಂಬಿಸುವ ಹಾಸ್ಯರೂಪಕವನ್ನು ಇಲ್ಲೇ ಹುಟ್ಟಿ ಬೆಳೆದ ಯುವಕ ಯುವತಿಯರು ‘ಸುರಿತಾ’ ಎಂಬ ನಾಟಕದ ಮೂಲಕ ಪ್ರಸ್ತುತಪಡಿಸಿದರು. ಮಕ್ಕಳು, ಯುವಕರು ಹಾಗೂ ದೊಡ್ಡವರು ಭಾಗವಹಿಸಿದ್ದ ಫ್ಯಾಶನ್‌ ಶೋ ವಿವಿಧ ವಸ್ತ್ರ-ವಿನ್ಯಾಸಗಳಿಂದ ಕಂಗೊಳಿಸುತ್ತಿತ್ತು.

ಮಧ್ಯಾಹ್ನದ ಪಿಜ್ಜಾ , ಸಂಜೆಯ ಪಕೋಡಾ, ನಿಪ್ಪಟ್ಟು ಕರಗುವ ಮುಂಚೆ ರಾತ್ರಿಯ ಊಟಕ್ಕೆ ಕರೆಬಂದಾಗ ಎಲ್ಲರೂ ವಿಶಾಲವಾದ ಊಟದ ಭವನಕ್ಕೆ ಸಾಲಿನಲ್ಲಿ ನಿಂತೆವು. ಎಣ್ಣಗಾಯ ಬದನೇಕಾಯಿ ನಮ್ಮ ಬಿಜಾಪುರದಾಗ ಮಾಡದಂಗೈತಲ್ರಿ... ಅಂತಾ ಯಾರೋ ಅಂದರು.. ಅಷ್ಟೆ ೕ ಸಾಕಿತ್ತು ಉಭಯ ಕುಶಲೋಪರಿಗೆ. ಒಬ್ಬರನ್ನೊಬ್ಬರು ಪರಿಚಯಿಸಿಕೊಳ್ಳುವಾಗ ಇಡೀ ಮೊಗಸಾಲೆ ಕನ್ನಡ ಮಯವಾಗಿತ್ತು. ನಾನು ಗಂಗಾವತಿಯವರಿ ಅಂತ ಅಕ್ಕಿಯ ಬಗ್ಗೆ ಹೇಳಿ ಹೆಮ್ಮೆ ಪಟ್ಟುಕೊಂಡೆ. ಇನ್ನೊಬ್ಬರು ಹೌದ್ರಾ ನಾನು ಬೆಳಗಾಂ, ಧಾರವಾಡ, ಮೈಸೂರ, ಬೆಂಗಳೂರ ಇತ್ಯಾದಿ ಊರಿನವರೆಂದು, ನೀವೆಲ್ಲಿದೀರಿ ಅಮೇರಿಕದಾಗ ಎನ್ನುವ ಲೋಕಾಭಿರೂಢಿ ಮಾತುಗಳಿಗೆ ಹೊರಳಿದೆವು. ಪೂರಿ, ಹಪ್ಪಳ, ಹಲ್ವ, ಕೇಸರಿಭಾತ, ಅನ್ನ-ಸಾಂಬಾರ ಸವಿಯುತ್ತ ನೂತನ ಕೂಡಲಸಂಗಮದ ವಿವಿಧ ಚಿತ್ರಗಳನ್ನು ಪರದೆಯ ಮೇಲೆ ನೋಡಿದೆವು.

ಕನ್ನಡದ ಹೆಸರಾಂತ ಗಾಯಕಿ ಶ್ರೀಮತಿ ಸಂಗೀತಾ ಕಟ್ಟಿಯವರ ಸುಮಧುರ ಸಂಗೀತ ಸಮ್ಮೇಳನಕ್ಕೆ ಕಿರೀಟ ಪ್ರಾಯದಂತಿತ್ತು. ಶಾಸ್ತ್ರೀಯ ಸಂಗೀತ, ವಚನಗಳು, ಬೇಂದ್ರೆಯವರ ಭಾವಗೀತೆಗಳು ತವರುನಾಡಿನಿಂದ ದೂರವಿರುವ ನಮ್ಮನ್ನು ನಮಗರಿವಿಲ್ಲದೆ ಬೇರುಗಳತ್ತ ವಾಲಿಸಿತ್ತು. ಇಲ್ಲೇ ಹುಟ್ಟಿದ ಯುವಕ ಯುವತಿಯರು ತಮ್ಮ ದೇಶದ ( ಅಮೇರಿಕಾದ ) ಸ್ವಾತಂತ್ರ್ಯ ಸಂಭ್ರಮ ಸವಿಯಲು ಹೊರಟರು. ಸಮ್ಮೇಳನದ ಮೊದಲದಿನ ಶುಭರಾತ್ರಿ ಹೇಳಿತ್ತು.

ಉತ್ತ ರ ಅಮೆರಿಕ ವೀರಶೈವ ಸಮ್ಮೇಳನ-2004 : ದಿವಸ-2

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X