• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

‘ಗಾನ ವಿನೋದ’ದೊಂದಿಗೆ ಸಿಡ್ನಿ ಕನ್ನಡ ಸಂಘದ ವಾರ್ಷಿಕೋತ್ಸವ

By Staff
|
  • ಬೆಳ್ಳಾವೆ ನಾಗಶಯನ, ಸಿಡ್ನಿ

Raju Anathaswamy giving a performenceಬೆಳ್ಳಿಹಬ್ಬದತ್ತ ದಾಪುಗಾಲಿಟ್ಟು ಸಾಗುತ್ತಿರುವ ಸಿಡ್ನಿ ಕನ್ನಡ ಸಂಘ ತನ್ನ 21ನೇ ವಾರ್ಷಿಕೋತ್ಸವವನ್ನು ಜೂನ್‌ 26ರ ಶನಿವಾರ, ಸಿಡ್ನಿಯ ರೈಡ್‌ ಸಿವಿಕ್‌ ಸೆಂಟರ್‌ನಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿತು. ಕಳೆದೆರಡು ವರ್ಷಗಳಿಂದ ತನ್ನ ಕಾರ್ಯಕ್ರಮ ವೈಖರಿಯನ್ನು ಬದಲಿಸಿಕೊಂಡಿರುವ ಕನ್ನಡ ಸಂಘವು ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರನ್ನು ಆಕರ್ಷಿಸುತ್ತಿದ್ದು, ಈ ಬಾರಿ ಹೆಸರಾಂತ ಗಾಯಕ ಹಾಗೂ ನಟ ರಾಜು ಅನಂತಸ್ವಾಮಿ ಮತ್ತು ಪ್ರಸಿದ್ಧ ಮಿಮಿಕ್ರಿ ಕಲಾವಿದ, ನಟ ದಯಾನಂದ್‌ ಅವರನ್ನು ಒಟ್ಟಿಗೆ ಕಲೆ ಹಾಕಿ ‘ಗಾನ ವಿನೋದ ಸಂಗಮ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಈ ಇಬ್ಬರು ಕನ್ನಡ ಕಲಾವಿದರು ಏಷ್ಯಾ ಪೆಸಿಫಿಕ್‌ ಕನ್ನಡ ಕೂಟದ ವ್ಯಾಪ್ತಿಯಲ್ಲಿ ಬರುವ ಸಿಡ್ನಿ, ಕ್ಯಾನ್‌ಬೆರಾ, ಮೆಲ್ಬರ್ನ್‌, ನ್ಯೂಜಿಲ್ಯಾಂಡ್‌, ಸಿಂಗಪೂರ್‌ ಹಾಗೂ ಮಲೇಷಿಯಾಗಳಲ್ಲಿ ಕಾರ್ಯಕ್ರಮವನ್ನು ನೀಡಲಿದ್ದಾರೆ. ಮಲೇಷಿಯಾದಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಸಂಘ ಅಸ್ತಿತ್ವಕ್ಕೆ ಬಂದಿದೆ. ಇಲ್ಲಿ ಅತಿ ಮುಖ್ಯ ವಿಚಾರವೆಂದರೆ ಸಿಡ್ನಿ ಕನ್ನಡ ಸಂಘದ ಏಷ್ಯಾ ಪೆಸಿಫಿಕ್‌ ಕನ್ನಡ ಕೂಟದ ಕನಸು ನನಸಾಗಿದ್ದು.

ರಾಜು ಅನಂತಸ್ವಾಮಿ ಮತ್ತು ಮಿಮಿಕ್ರಿ ದಯಾನಂದ್‌ ಅಂದಮೇಲೆ ಕಾರ್ಯಕ್ರಮದ ಬಗ್ಗೆ ಹೆಚ್ಚೇನೂ ಹೇಳಲೇಬೇಕಾಗಿಲ್ಲ. ಸರಿಯಾದ ಸಮಯಕ್ಕೆ ಆರಂಭವಾದ ಕಾರ್ಯಕ್ರಮದ ನಿರೂಪಣೆಯ ಹೊಣೆಯನ್ನು ಕಾರ್ಯಕಾರಿ ಸಮಿತಿಯ ಡಾ.ನಾಗಮ್ಮ ಪ್ರಕಾಶ್‌ ಹೊತ್ತಿದ್ದರು. ಮೊದಲಿಗೆ ಸಿಡ್ನಿ ಕನ್ನಡ ಸಂಘದ ಕಾರ್ಯದರ್ಶಿ ಪ್ರಕಾಶ್‌ ಪಿಳ್ಳಪ್ಪರವರು ಸಕಲರಿಗೂ ಸ್ವಾಗತ ಕೋರಿದರು. ಸಿಡ್ನಿಯ ಹೆಸರಾಂತ ಗಾಯಕಿ ಶ್ರೀಮತಿ ಪುಷ್ಪ ಜಗದೀಶ್‌ರವರು ರಾಜು ಅನಂತಸ್ವಾಮಿಯವರನ್ನು ರಂಗಕ್ಕೆ ಆಹ್ವಾನಿಸುತ್ತಾ, ನಾಲ್ಕು ವರ್ಷದ ಮಗುವಾದಾಗಿನಿಂದ ಕಂಡಿದ್ದ ತಮ್ಮ ಗುರುಪುತ್ರನ ಪ್ರತಿಭೆಯನ್ನು ಭಾವುಕರಾಗಿ ವಿವರಿಸಿದರು.

Kannada Kids in Sydney enjoying every momentನಂತರ ರಾಜು ಅನಂತಸ್ವಾಮಿ ನಿರ್ದೇಶಿಸಿದ ‘ಆಲಿಬಾಬಾ ಮತ್ತು ನಲವತ್ತು ಕಳ್ಳರು’ ರೂಪಕವನ್ನು ಸಿಡ್ನಿಯ ಕನ್ನಡದ ಮಕ್ಕಳು ಪ್ರದರ್ಶಿಸಿದರು. ವಿಶೇಷವೆಂದರೆ ಮಕ್ಕಳೇ ಸಂಭಾಷಣೆಗಳನ್ನು ಹೇಳಿದ್ದು. ಇನ್ನೂ ವಿಶೇಷವೆಂದರೆ ರಾಜು, ದಿನಕ್ಕೆ ಎರಡು ಗಂಟೆಗಳಂತೆ ಕೇವಲ ನಾಲ್ಕು ದಿನಗಳ ಮಕ್ಕಳ ತರಬೇತಿ ಶಿಬಿರ ನಡೆಸಿ ಅವರಿಗೆ ನಟನೆ, ನೃತ್ಯ, ಸಂಭಾಷಣೆ ಎಲ್ಲವನ್ನೂ ಹೇಳಿಕೊಟ್ಟು ಸಿದ್ಧಪಡಿಸಿ ರೂಪಕವನ್ನು ಪ್ರಸ್ತುತಪಡಿಸಿದ್ದು. ಈ ಶಿಬಿರದಲ್ಲಿ ಆರರಿಂದ ಹದಿನಾಲ್ಕು ವರ್ಷದ ಮಕ್ಕಳಲ್ಲದೆ ಕೆಲವು ಹಿರಿಯರೂ ಭಾಗವಹಿಸಿದ್ದರು. ಮಕ್ಕಳಿಂದ ಪ್ರದರ್ಶಿಸಲ್ಪಟ್ಟ ‘ಆಲಿಬಾಬಾ’ ಬಹಳ ಜನರ ಮೆಚ್ಚುಗೆಯನ್ನು ಗಳಿಸಿತು. ಮಕ್ಕಳು ಅಮೋಘವಾಗಿ ನಟಿಸಿ ತಮ್ಮ ಮನೆಯವರನ್ನೂ ವಿಸ್ಮಯಗೊಳಿಸಿದರು. ಕೇವಲ ಎಂಟು ಗಂಟೆಗಳ ತರಬೇತಿಯಲ್ಲಿ ಮಕ್ಕಳನ್ನು ಸಿದ್ಧಗೊಳಿಸಿದ ರಾಜು ಅನಂತಸ್ವಾಮಿ ಬಹುಮುಖ ಪ್ರತಿಭಾನ್ವಿತರು ಎನ್ನುವುದರಲ್ಲಿ ಎರಡು ಮಾತಿಲ್ಲ. ಭಾಗವಹಿಸಿದ್ದ ಮಕ್ಕಳಿಗೆಲ್ಲ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ಆಲಿಬಾಬಾ ನಂತರ ರಾಜು ಅನಂತಸ್ವಾಮಿಯವರ ಗಾಯನ. ಅವರ ಜೊತೆಗೆ ಶ್ರೀಮತಿ ಪುಷ್ಪ ಜಗದೀಶ್‌ ಕಂಠ ಬೆರೆಸಿದರು. ತಬಲಾದಲ್ಲಿ ಸಾಮ್ಯುಯೆಲ್‌ ಸ್ಯಾಮ್‌ಸನ್‌ ನೆರವು ನೀಡಿದರು. ‘ಜೈ ಭಾರತ ಜನನಿಯ ತನುಜಾತೆ’ ಗೀತೆಯಿಂದ ಆರಂಭಿಸಿದ ರಾಜು ಪ್ರೇಕ್ಷಕರನ್ನು ಸಂಗೀತ ಸಾಗರದಲ್ಲಿ ಮುಳುಗಿಸಿದರು. ತಮ್ಮ ತಂದೆ ಮೈಸೂರು ಅನಂತಸ್ವಾಮಿಯವರಿಗೆ ತಕ್ಕ ಮಗನಿವರು. ಹಾರ್ಮೋನಿಯಂ ನುಡಿಸಿಕೊಂಡು ಹಾಡುವ ಅವರ ವೈಖರಿಯೇ ಆಕರ್ಷಣೀಯ. ಹಾರ್ಮೋನಿಯಂ ಮೇಲೆ ಓಡುವ ಇವರ ಬೆರಳುಗಳು ಬೆರಗು ಮೂಡಿಸುವಂಥದ್ದು. ಜಿ.ಪಿ.ರಾಜರತ್ನಂ ರವರ ‘ಹೆಂಡ ಹೆಂಡತಿ ಕನ್ನಡ ಪದಗಳ್‌’ ಹಾಡಿದಾಗಲಂತೂ ಪ್ರೇಕ್ಷಕರು ಅವರೊಡನೆ ಕೂಡಿ ತಾವೂ ಹಾಡಿ ಮೈ ಮರೆತದ್ದು ಅವಿಸ್ಮರಣೀಯ. ‘ಕುರಿಗಳು ಸಾರ್‌ ಕುರಿಗಳು’ ಗೀತೆಯಾಂದಿಗೆ ತಮ್ಮ ಮೊದಲರ್ಧದ ಕಾರ್ಯಕ್ರಮ ಮುಗಿಸಿದರು. ರಾಜುರವರ ಶಿಬಿರದಲ್ಲಿ ಭಾಗವಹಿಸಿದ್ದ ಹಿರಿಯರೆಲ್ಲರೂ ಸೇರಿ ‘ಮಡಿಕೇರಿ ಮೇಲ್‌ ಮಂಜು’ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

SKC felicitating Dayanand and Raju Anathaswamyಕನ್ನಡದ ಹೆಸರಾಂತ ಕಲಾವಿದ, ನಟ, ಮಿಮಿಕ್ರಿ ದಯಾನಂದ್‌ರವರನ್ನು ರಂಗದ ಮೇಲೆ ಆಹ್ವಾನಿಸಿ, ಸಭೆಗೆ ಪರಿಚಯಿಸಿದವರು ನಾರಾಯಣ ಕನಕಾಪುರ. ಮೈಕ್‌ ಆವಾಹಿಸಿಕೊಂಡ ದಯಾನಂದ್‌ ‘ಏನ್‌ ಸ್ವಾಮಿ, ಮೂರು ದಿನದಿಂದ ನನಗೆ ಮೈಕ್‌ ಕೊಡದೇ ಮಾತನಾಡದ ಹಾಗೆ ಮಾಡ್ಬಿಟ್ರಿ .. ಇನ್ನು ರಂಗದಿಂದ ಇಳಿಯೋದೇ ಇಲ್ಲ... ಮೂರು ದಿನದ ಸ್ಟಾಕ್‌ ಮುಗಿಸಬೇಕಲ್ಲ !’ ಎಂದೇ ಆರಂಭಿಸಿದರು. ಅಲ್ಲಿಂದ ನಗಲು ಶುರು ಮಾಡಿದ ಪ್ರೇಕ್ಷಕ ಸಮೂಹ ಬಹುಶಃ ಈಗಲೂ ನೆನೆಸಿಕೊಂಡು ನಗುತ್ತಿರಬಹುದು. ಕೆಲವು ಹಳೆಯ, ಕೇಳಿದ ನಗೆ ಹನಿಗಳನ್ನೇ ಹೇಳಿದರೂ ಹೊಸರೀತಿಯಲ್ಲಿ , ಕೆಲವೊಮ್ಮೆ ಬೇರೆಯೇ ರೂಪ ಕೊಟ್ಟು ಪ್ರೇಕ್ಷಕರಿಗೆ ಕಚಗುಳಿ ಇಡುವ ಕಲೆ ದಯಾನಂದರಿಗೆ ಕರತಲಾಮಲಕ. ಅದೇ ಅವರ ವೈಶಿಷ್ಟ್ಯ ಕೂಡ. ಅಲ್ಲದೇ ಸ್ಥಳೀಯ ಘಟನೆಗಳನ್ನು, ಸನ್ನಿವೇಶಗಳನ್ನು ತನ್ನದೇ ರೀತಿಯಲ್ಲಿ ಹಾಸ್ಯವನ್ನು ಬೆರೆಸಿ ಒಂದೊಂದೇ ಕಚಗುಳಿ ಇಟ್ಟು ಕ್ಲೈಮ್ಯಾಕ್ಸ್‌ ತಲುಪಿಸುವ ದಯಾನಂದರಿಗೆ ದಯಾನಂದರೇ ಸಾಟಿ. ‘ಸಿಡ್ನಿ ಕನ್ನಡ ಸಂಘಕ್ಕೆ ಎಂದೂ ರೋಗ ಬರೋದೇ ಇಲ್ಲ .. ಯಾಕಂದ್ರೆ ಸಂಘದಲ್ಲಿರೋರು ಜಾಸ್ತಿ ಡಾಕ್ಟರ್ರೇ. ಎಷ್ಟು ಜನ ಡಾಕ್ಟರಿದಾರೆ ಅಂದ್ರೆ ಬೇರೆ ಜನಗಳೇ ಕಮ್ಮಿ. ಮುಂದೆ ಬರೋ ರೋಗಕ್ಕೂ ಯೋಚನೆ ಇಲ್ಲ’ ಎಂದು ಹಾಸ್ಯ ಮಾಡಿದರು. Nativity ಬಗ್ಗೆ ಹೇಳ್ತಾ - ‘ರಾಜು ಅನಂತಸ್ವಾಮಿ ಆಲಿಬಾಬಾ ಮತ್ತು ನಲವತ್ತು ಕಳ್ಳರು ನಾಟಕವಾಡಿಸಿದ್ದು ಯಾಕೆ ಹೇಳಿ. ಯಾಕೆಂದರೆ ಆಸ್ಟ್ರೇಲಿಯಾಗೆ ಮೊದಲು ಬಂದದ್ದು ಕಳ್ಳರೇ’ ಎಂದು ನಗೆಯಾಡಿದರು. ಒಂದೊಂದೇ ಹಾಸ್ಯವನ್ನು ತೆರೆದಿಡುತ್ತಾ ಸಾಗಿದ ದಯಾನಂದ್‌ ಯಾರಿಗೂ ನೋವಾಗದ ರೀತಿ ಹಾಸ್ಯ ಚಟಾಕಿ ಹಾರಿಸಿದ್ದು ಅವರ ಮನೋಭಾವವನ್ನು ಪ್ರತಿಬಿಂಬಿಸಿತು. ಪ್ರೇಕ್ಷಕರಂತೂ ನಕ್ಕೂ ನಕ್ಕೂ ಸುಸ್ತಾದರು. ಕೆಲವರಿಗೆ ಪಕ್ಕೆ ನೋವು ಬಂದರೆ, ಕೆಲವರಿಗೆ ಕಣ್ಣಲ್ಲಿ ಧಾರಾಕಾರ ನೀರು. ಊಟದ ಸಮಯವಾದರೂ ಸಮಯದ ಅರಿವಿಲ್ಲದೇ ನೆರೆದ ಮಂದಿ ನಗೆಯ ಮಹಾಪೂರದಲ್ಲಿ ಕೊಚ್ಚಿಹೋಗಿದ್ದರು. ಕಾರ್ಯಕ್ರಮ ನಿರೂಪಕಿ ಡಾ.ನಾಗಮ್ಮ ಪ್ರಕಾಶ್‌ ರಂಗದ ಮೇಲೆ ಬಂದಾಗ ದಯಾನಂದ್‌ ಮೈಕ್‌ ಕೊಡುವುದಿಲ್ಲ ಎಂದು ಮತ್ತೆರಡು ನಗೆ ಚಟಾಕಿ ಹಾರಿಸಿದ್ದು ಪ್ರೇಕ್ಷಕರಿಗೆ ಇನ್ನೂ ಕಚಗುಳಿ ಇಟ್ಟಿತು. ಹಾಸ್ಯದ ಜೊತೆಗೆ ಮಕ್ಕಳಿಗೆಲ್ಲ ಕನ್ನಡ ಕಲಿಸಿ ಎಂದು ಕಳಕಳಿಯಿಂದ ವಿನಂತಿಸಿದರು.

ರುಚಿಯಾದ ಬಿಸಿಬೇಳೆ ಭಾತ್‌, ಮೊಸರನ್ನ, ಮಿನಿಊಟ ಮಾರಾಟಕ್ಕೆ ಇದ್ದವು. ಊಟವಾದ ಮೇಲೆ ಸಿಡ್ನಿ ಕನ್ನಡ ಸಂಘದ ಅಧ್ಯಕ್ಷರಾದ ಓಂಕಾರಸ್ವಾಮಿ ಗೊಪ್ಪೇನಹಳ್ಳಿ ಮಾತನಾಡಿ, ಸಂಘದ ಕಾರ್ಯಕಲಾಪಗಳನ್ನು ವಿವರಿಸಿದರು. 21ನೇ ವರ್ಷಕ್ಕೆ ಕಾಲಿಟ್ಟ ಸಿಡ್ನಿ ಕನ್ನಡ ಸಂಘದ ಏಳಿಗೆಗೆ ದುಡಿದ ಎಲ್ಲರಿಗೂ ಕೃತಜ್ಞತೆ ಸೂಚಿಸಿದರು. ಇದೇ ಸಮಯದಲ್ಲಿ United Indian Association ನ ಈ ಬಾರಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕನ್ನಡಿಗರಾದ ಡಾ. ಸಿದ್ಧಲಿಂಗೇಶ್ವರ ಒರೇಕೊಂಡಿಯವರನ್ನು ಅಭಿನಂದಿಸಿದರು. ಪ್ರಮುಖ ಪ್ರಾಯೋಜಕರಲ್ಲಿ ಒಬ್ಬರಾದ City Forexನ ನರೇಂದ್ರ ನಾಯಕ್‌ ಶ್ರೀ ರಾಜು ಹಾಗೂ ದಯಾನಂದ್‌ ರವರಿಗೆ ನೆನಪಿನ ಕಾಣಿಕೆಯನ್ನು ನೀಡಿದರು.

ನಂತರ ನಗೆಸಿಂಚನ ಮುಂದುವರೆಸಿದ ದಯಾನಂದ್‌ ಅನೇಕ ಚಲನಚಿತ್ರ ನಟರು ಮತ್ತಿತರರ ಅನುಕರಣೆಯನ್ನು ಮಾಡಿ, ಪ್ರೇಕ್ಷಕರನ್ನು ದಂಗುಬಡಿಸಿದರು. ಕೇವಲ ಧ್ವನಿಯನ್ನು ಮಾತ್ರ ಅನುಕರಿಸದೆ ಅದರ ಜೊತೆಗೆ ಶೈಲಿ, ನಡಿಗೆಯನ್ನೂ ಅನುಕರಿಸಿ, ಮುಖದ ಚಹರೆ, ಭಾವವನ್ನು ತಕ್ಕಂತೆ ಬದಲಾಯಿಸಿಕೊಳ್ಳುವುದು ದಯಾನಂದರಿಗೆ ಅದೆಷ್ಟು ಸುಲಭ ! ಅವರು ಹೇಳಿದ ನಗೆಹನಿಗಳೆಷ್ಟೋ.. ಅದನ್ನೆಲ್ಲಾ ಇಲ್ಲಿ ಬರೆಯುವುದು ಅಸಾಧ್ಯದ ಮಾತೇ ಸರಿ. ಅವರು ತಮ್ಮ ನಗೆ ಚಟಾಕಿಗಳಿಗೆ ಮುಕ್ತಾಯ ಹಾಡಿ ಹೊರಟಾಗ ನೆರೆದಿದ್ದ ಸುಮಾರು 600 ಮಂದಿ ಎದ್ದು ನಿಂತು ಗೌರವ ಸೂಚಿಸಿದ್ದು ಅವರ ಕಲಾಶ್ರೀಮಂತಿಕೆಗೆ ಸಂದ ಗೌರವ.

ಮತ್ತೆ ರಾಜು ಅನಂತಸ್ವಾಮಿಯವರ ಗಾಯನ ಮುಂದುವರೆುತು. ಅವರಿಬ್ಬರ combination ಎಷ್ಟೊಂದು ಸಾಮರಸ್ಯದಿಂದ ಕೂಡಿತ್ತೆಂದರೆ ಅವರಿಬ್ಬರೂ ಸ್ನೇಹಿತರಿಗಿಂತ ಹೆಚ್ಚಾಗಿ ಸಹೋದರರಂತೆ ಕಂಡುಬಂದರು. ರಾಜು ರವರು ದಯಾನಂದರನ್ನು ಆಹ್ವಾನಿಸಿ ತಮ್ಮ ಹಾಡಿಗೆ ಬೇರೆ ಬೇರೆ ನಟರು ಯಾವ ರೀತಿ ನರ್ತಿಸುತ್ತಾರೆಂದು ತೋರಿಸಲು ವಿನಂತಿಸಿಕೊಂಡರು. ‘ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೆ’ ಎಂದು ರಾಜು ಹಾಡಿದಾಗ ಡಾ.ರಾಜ್‌, ವಿಷ್ಣು, ಅಂಬರೀಶ್‌, ಶ್ರೀನಾಥ್‌, ಶಂಕರ್‌ನಾಗರಂತೆ ನರ್ತಿಸಿದ್ದು ಪ್ರೇಕ್ಷಕರಿಗೆ ಸಿಕ್ಕ ಬೋನಸ್‌. ಶ್ರೀನಾಥರಂತೆ ನರ್ತಿಸಿದಾಗ ರಾಜುರವರಿಗೆ ನಗು ತಡೆಯಲಾಗದೆ ಹಾಡಲಾಗದೆ ನಗಲಾರಂಭಿಸಿದರು. ‘ಎಂದೂ ನನಗೆ ನಗು ತಡೆಯಲು ಆಗೋದೇ ಇಲ್ಲ’ ಎಂದು ಪ್ರೇಕ್ಷಕರೊಡನೆ ತಾವೂ ಬಿದ್ದೂ ಬಿದ್ದು ನಕ್ಕರು.

ರಾಜುರವರ ಗಾಯನ ಮುಂದುವರೆುತು. ತಮ್ಮ ತಂದೆ ಮೈಸೂರು ಅನಂತಸ್ವಾಮಿಯವರಿಗಾಗಿ ಲಕ್ಷ್ಮೀನಾರಾಯಣ ಭಟ್ಟರಿಂದ ರಚಿತವಾದ ‘ಬನ್ನಿ ಹರಸಿರಿ ತಂದೆಯೇ ಆಸೀನರಾಗಿರಿ ಮುಂದೆಯೆ’ ಎಂದು ಹಾಡಿ ತಮ್ಮ ತಂದೆಯವರಿಂದ ಆಶೀರ್ವಾದವನ್ನು ಬೇಡಿದರು. ಪ್ರೇಕ್ಷಕರು ಬಯಸಿದ ಅನೇಕ ಗೀತೆಗಳನ್ನು ಹಾಡಿದರು. ‘ಬ್ರಹ್ಮ ನಿಂಗೆ ಜೋಡಿಸ್ತೀನಿ’ ಹಾಡಿದಾಗ ಜನರೆಲ್ಲ ಹುಚ್ಚೆದ್ದು ಕುಣಿದರು. ‘ಎದೆ ತುಂಬಿ ಹಾಡಿದೆನು’ ಗೀತೆಯನ್ನು ಮನದುಂಬಿ ಹಾಡಿ ಪ್ರೇಕ್ಷಕರಿಗೆ ರೋಮಾಂಚನ ನೀಡಿ ಮುಕ್ತಾಯ ನೀಡಿದಾಗ ಜನಸಮೂಹ ಚಪ್ಪಾಳೆಯಾಂದಿಗೆ ಎದ್ದು ನಿಂತು ತಮ್ಮ ಗೌರವವನ್ನು ಸೂಚಿಸಿತು.

ಸಾಂಪ್ರದಾುಕ ವಂದನಾರ್ಪಣೆ ಮಾಡಿದ ಸಂಘದ ಉಪಾಧ್ಯಕ್ಷ ಗೋಪೀನಾಥ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ, ಸಹಕಾರ ನೀಡಿದ ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು. ಕಾರ್ಯಕ್ರಮದ ಪ್ರಮುಖ ಪ್ರಾಯೋಜಕರಾದ City Forex Sydney, Devatha Builders, Bangalore ಅವರಿಗೆ ಸಂಘದ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.

ದಯಾನಂದ್‌ರವರು ಇಡೀ ಕಾರ್ಯಕ್ರಮವನ್ನು ಈಟೀವಿಗಾಗಿ ಚಿತ್ರೀಕರಿಸಿಕೊಂಡರು. ಅಲ್ಲದೆ ಸೇರಿದ್ದ ಅನೇಕ ಸಭಿಕರನ್ನು ಸಂದರ್ಶಿಸಿ ಅವರ ಅಭಿಪ್ರಾಯಗಳನ್ನೂ ಸಹ ಈಟೀವಿಗಾಗಿ ಚಿತ್ರೀಕರಿಸಿಕೊಂಡರು.

ಇಬ್ಬರೂ ದಿಗ್ಗಜರೇ. ಎಲ್ಲಾ ಬಗೆಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ರಸದೌತಣ ನೀಡಿದ ರಾಜು ಅನಂತಸ್ವಾಮಿ, ದಯಾನಂದ್‌ ಗಾಯನದಲ್ಲಿ, ಹಾಸ್ಯದಲ್ಲಿ ತಮ್ಮಿಬ್ಬರ combination ಹೇಗೆ ಅಯಸ್ಕಾಂತದಂತೆ ಆಕರ್ಷಿಸಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು. ರಾಜು ಅನಂತಸ್ವಾಮಿಯವರ ಗಾಯನದಲ್ಲಿ ತೇಲಾಡಿ, ಮಿಮಿಕ್ರಿ ದಯಾನಂದರ ವಿನೋದದಲ್ಲಿ ಕುಣಿದಾಡಿದ ಸಿಡ್ನಿ ಕನ್ನಡಿಗರಿಗೆ ಕಡೆಯ ಪಕ್ಷ ಇನ್ನೆರಡು ವರ್ಷಗಳಾದರೂ ಮಾತನಾಡಲು ಇದೇ ವಿಷಯವೇ.

ಸಿಡ್ನಿ ಕನ್ನಡ ಸಂಘವು ಯಶಸ್ವಿಯಾಗಿ ನಡೆಸಿದ ‘ಗಾನ ವಿನೋದ ಸಂಗಮ’ ಕಾರ್ಯಕ್ರಮದಂತೆ ಇತರ ಹೊರದೇಶದ ಸಂಘ ಸಂಸ್ಥೆಗಳೂ ಸಹ ರಾಜು-ದಯಾನಂದ್‌ ಜೋಡಿಯನ್ನು ಕರೆಸಿಕೊಂಡು ಕಾರ್ಯಕ್ರಮ ನಡೆಸಿ ಯಶಸ್ವಿಯಾಗಲೆಂದು ಹಾರೈಸುತ್ತೇವೆ.

ಸಿಡ್ನಿ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯು ಈ ಗಾನ ವಿನೋದ ಸಂಗಮಕ್ಕೆ ದುಡಿದ, ಸಹಕರಿಸಿದ ಎಲ್ಲರಿಗೂ ಪ್ರಾಯೋಜಕರಿಗೂ ತನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತದೆ.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more