ನೆನಪಿನ ಅಂಬಾರಿಯಲ್ಲಿ ಮೈಸೂರು ದಸರಾ, ನವರಾತ್ರಿ ಗೊಂಬೆಗಳು !

Vani Ramdas, Singapore ವಾಣಿ ರಾಮದಾಸ್‌, ಸಿಂಗಾಪುರ
[email protected]

‘ಹಲೋ ಅಮ್ಮಾ, ರಾಜ ಮತ್ತು ರಾಣಿನ 14ನೇ ತಾರೀಖು ಇಡಬೇಕೋ ಅಥವಾ ಹದಿನೈದನೇ ತಾರೀಖು ಇಡಬೇಕೋ’ ಎಂದು ಸಿಂಗಾಪುರದಿಂದ ನಾನು ದೂರವಾಣಿಯಲ್ಲಿ ಪ್ರಶ್ನಿಸಿದೆ. ಹದಿನಾಲ್ಕರಂದು ಬೇಡ, ಹದಿನೈದು ಶುಕ್ರವಾರ ಬೆಳಿಗ್ಗೆ ಎಂಟರ ಒಳಗೆ ರಾಜ ರಾಣಿನ ಕೂರಿಸಿ, ಕಳಶ ಇಟ್ಟು ಬಿಡು ಎಂದು ದೂರದ ಬೆಂಗಳೂರಿನಲ್ಲಿರುವ ನನ್ನ ತಾಯಿ ಹೇಳಿದರು. ನಾವೇ ಅಮ್ಮಂದಿರಾಗಿ, ನಮಗೆ ಹಲವಾರು ವಿಷಯಗಳು ತಿಳಿದಿದ್ದರೂ ಅಮ್ಮನ ಬಾಯಿಂದ ಕೇಳಿ ಬರುವ ಸೂಚನೆ ಸಲಹೆಗಳಿಗೆ ಮಹತ್ವ ಹೆಚ್ಚು.

ಪ್ಲಾಸ್ಟಿಕ್‌ ಚೀಲದಲ್ಲಿ ಸುತ್ತಿ ಭದ್ರವಾಗಿ ಬೀರುನಲ್ಲಿ ರಾಜ-ರಾಣಿನ ಇಟ್ಟಿದ್ದೆ. ಹಾಯಾಗಿ ಏಕಾಂತದಲ್ಲಿ ಪವಡಿಸಿದ್ದ ರಾಜ ರಾಣಿಯರೀರ್ವರೂ ಹೊರಬಂದರು. ಅವರಿಬ್ಬರ ಏಕಾಂತಕ್ಕೆ ಭಂಗ ತಂದು ವಸ್ತ್ರಾಭರಣ ಸರಿಯಿದೆಯೇ ಎಂದು ಪರೀಕ್ಷಿಸುತ್ತಿದ್ದಂತೇ ಮನದ ಚಿತ್ರದಲ್ಲಿ ಫ್ಲಾಷ್‌ಬ್ಯಾಕ್‌.

ಮೈಸೂರು ದಸರಾ ಎಷ್ಟೊಂದು ಸುಂದರಾ... ಶ್ರೀ ಚಾಮುಂಡೇಶ್ವರೀ ಅಮ್ಮಾ... ಮೈಸೂರು ದಸರಾ ಗೊಂಬೆ, ಅಹಾ ನೀನೇ ನನ್ನ ರಂಭೆ... ದಸರಾ ಶುರುವಾಗುತ್ತಿದ್ದಂತೆ ದಿನ ನಿತ್ಯವೂ ರೇಡಿಯೋದಲ್ಲಿ ಉಲಿಯುತ್ತಿದ್ದ ಹಾಡುಗಳು ಇವು. ಸಾಂಸ್ಕೃತಿಕ ಕೇಂದ್ರ ಮೈಸೂರಿನಲ್ಲಿ ಜರಿಲಂಗ-ದಾವಣಿ, ದಟ್ಟಿ/ಕಚ್ಚೆ ಪಂಚೆ, ಶಲ್ಯ ಹಬ್ಬಗಳಲ್ಲಿ ಮಾತ್ರವಲ್ಲ ದಿನ ನಿತ್ಯದ ಬಳಕೆಯಲ್ಲೂ ಇತ್ತು. 1960-70 ರ ದಶಕದಲ್ಲಿ ಸಲ್ವಾರ್‌ ಕಮೀಜ್‌, ಜೀನ್ಸ್‌, ಟಿ-ಶರ್ಟ್‌, ಗಾಗರಾ-ಚೋಲಿಗಳು ಹೆಣ್ಣುಮಕ್ಕಳ ಮೈ ಅಲಂಕರಿಸಿರಲಿಲ್ಲ. ಟಿ.ವಿ. ಅಥವಾ ಕಂಪ್ಯೂಟರ್‌ ಯುಗ ಅದಾಗಿರಲಿಲ್ಲ. ಜನರಲ್ಲಿ ಮುಗ್ಧತೆ ಮಾಯವಾಗಿರಲಿಲ್ಲ.

ದಸರಾ ಹಬ್ಬ ಶುರುವಾಗುವ ಒಂದು ವಾರದ ಮೊದಲೇ ಅಟ್ಟದ ಮೇಲೆ ಇಟ್ಟಿದ್ದ ಕಬ್ಬಿಣದ ಪೆಟ್ಟಿಗೆಗಳು ಕೆಳಗೆ ಇಳಿಯುತ್ತಿದ್ದವು. ಇದಕ್ಕಾಗೇ ಕಾಯುತ್ತಿದ್ದ ನಾವು ಕಿರಿಯರು ಧೂಳು ಒರೆಸಿ, ಪೆಟ್ಟಿಗೆಯ ಚಿಲಕ ತೆಗೆಯುವುದನ್ನೇ ಕಾಯುತ್ತಿದ್ದೆವು. ಚಿಲಕ ತೆಗೆಯುತ್ತಿದ್ದಂತೇ ಅದರೊಳಗೆ ಜೀವಿಸಿದ್ದ ಜಿರಳೆಗಳು ಹೊರಬರುತ್ತಿದ್ದವು. ನನ್ನ ಮತ್ತು ನನ್ನ ಅಕ್ಕನ ಭರತನಾಟ್ಯ, ಅಮ್ಮನ ಚಾಮರ ಸೇವೆ, ತಂದೆಯ ಆಶ್ವಾಸನೆ, ಕೊಂದ ಜಿರಳೆಯನ್ನು ಕೈಯಲ್ಲಿ ಹಿಡಿದು ಹುಲಿಯ ಕೊಂದ ವೀರನಂತೆ ನಿಲ್ಲುತ್ತಿದ್ದ ಅಣ್ಣಂದಿರ ಶೂರತ್ವ ಎಲ್ಲವೂ ಒಟ್ಟಿಗೇ ಸೇರಿ ಮಹಾಭಾರತ ಯುದ್ಧ ನಡೆಯುತ್ತಿತ್ತು. ಅಬ್ಬಾ! ಎಂದು ಉಸಿರು ಎಳೆಯುವಷ್ಟರಲ್ಲಿ ನಾ ಮುಂದು, ತಾ ಮುಂದು, ಇದು ನನ್ನದು ಎಂಬುವ ಪೈಪೋಟಿ ಮೊದಲ್ಗೊಂಡು ಅಮ್ಮನ ಗದರುವಿಕೆಯಲ್ಲಿ ಶಾಂತಿ ನೆಲೆಸುತ್ತಿತ್ತು. ಇದು ಮುಗಿಯುತ್ತಿದ್ದಂತೆ ತಿಜೋರಿಯಲ್ಲಿ ಹಳೆಯ ಬಟ್ಟೆಯಲ್ಲಿ ಸುತ್ತಿಟ್ಟ ನವ ನಿಧಿ ತೆಗೆಯುವ ಸಂಭ್ರಮ. ಇದರೊಂದಿಗೇ ರಾಗಾಲಾಪ. ಅಮ್ಮಾ, ಕೋತಿಯ ಕೈ ಮುರಿದುಹೋಗಿದೆ, ಕುದುರೆ ಕಾಲು ಡೊಂಕು, ಜೋಕಾಲಿಗೆ ಸರಪಳಿ ಇಲ್ಲ, ರಾಜ-ರಾಣಿಯ ಬಟ್ಟೆ ಇದೆಲ್ಲಾ ಬೇರೆ ಬೇಕು ಎಂಬ ಕೋರಿಕೆ ನಮ್ಮದಾಗಿತ್ತು. ಝೂಗೆ ಪ್ರಾಣಿಗಳು ಬೇಕು, ಸೈನಿಕರು ಬೇಕು, ರಾಗಿ ಇವತ್ತೇ ಹಾಕಮ್ಮಾ, ಉದ್ದಕ್ಕೆ ಬೆಳೀಬೇಕು ಎಂದು ಅಣ್ಣನ ಬಿನ್ನಹ. ಹತ್ತು ದಿನ ಕಿರಿಯರ ವಾನರ ಸೈನ್ಯಕ್ಕೆ ಕುರುಕು ತಿಂಡಿಗಳ ಪಟ್ಟಿ, ಪೂಜಾ ಸಾಮಾಗ್ರಿಗಳ ಪಟ್ಟಿ, ಅರಿಶಿನ ಕುಂಕುಮಕ್ಕೆ ಕರೆಯ ಬೇಕಾದವರ ಪಟ್ಟಿ ಹೀಗೆ ಮೊದಲ್ಗೊಂಡು ಕಡೆಗೆ ಅಣ್ಣ(ಅಪ್ಪ)ನ ಬಜೆಟ್‌ನಲ್ಲಿ ನಿಲ್ಲುತ್ತಿತ್ತು.

ಶಾಲೆಗೆ ರಜ, ನಮಗೆ ಮಜ. ನಮ್ಮನೇಲಿ ಗೊಂಬೆ ಕೂರಿಸ್ತೇವೆ, ನಿಮ್ಮನೇಲೂ ಇಡ್ತೀರಾ, ಹೋದ ಸಲ ನಾನು ಅಂಗಡೀನೇ ಇಡಲಿಲ್ಲ ಕಣೆ ಎನ್ನುತ್ತಾ ನನ್ನ ಸ್ನೇಹಿತೆಯರ ಬಳಿ ಮೂತಿ ಉದ್ದ ಮಾಡಿ ಹೇಳಿದ್ದೆ. ನಾನು ಕೆಂಪು ಜರಿಲಂಗ ಹಾಕ್ಕೋತೀನಿ, ನಂಗೆ ಗೋರಂಟಿ ಹಾಕೆ, ನೀನು ಯಾವುದು ಹಾಕ್ಕೋತೀಯ ಎನ್ನುತ್ತಾ ಅಕ್ಕನ ಬಳಿ ಓಡಿದ್ದೆ. ವಲ್ಲಭಾ, ಎಲ್ಲರ ಮನೆಗೂ ಹೋಗೋಣ್ವಾ ಗೊಂಬೆ ನೋಡ್ಲಿಕ್ಕೆ, ತಿಂಡಿ ಸಿಗುತ್ತೇ ಎಂದು ಪಿಸು ಮಾತಿನಲ್ಲಿ ಅಣ್ಣನ ಬಳಿ ಹೇಳುತ್ತಿದ್ದ ಸ್ನೇಹಿತನ ಮಾತಿಗೆ ತಲೆಯಾಡಿಸುತ್ತಾ ಕೇಳಿಸಿಕೊಂಡಿದ್ದ ನನ್ನತ್ತ ಕೆಂಗಣ್ಣು ಬೀರಿ- ನೀ ಬರಬೇಡ್ವೆ ನಂಜೊತೆ, ಕಾಲ್‌ ಮುರೀತೀನಿ, ಅಳುಮುಂಜಿ ಎಂದು ನಾಲಿಗೆ ತೋರಿಸುತ್ತಾ ಅಣಕಿಸಿದ ಅಣ್ಣನ ಅಣಕಿಸಿದ್ದೆ. ಅಮ್ಮ ಪಕ್ಕದ್ಮನೆ ಸೀತಮ್ಮನ ಬಳಿ ನಮ್ಮನೇಲಿ ಗೊಂಬೆ ಜೋಡಿಸ್ತೀವಿ ಒಂದು ದಿನ ಬಿಡುವು ಮಾಡಿಕೊಂಡು ಬನ್ನಿ, ನನ್ನ ಮಗಳ ಕೈಲಿ ಹೇಳಿಕಳಿಸ್ತೀನಿ ಎಂದಿದ್ದಳು. ಪರಿಚಯಸ್ಥರನ್ನು ಕಂಡಾಗ ಅಣ್ಣ(ಅಪ್ಪ) ರಾಯರೇ, ನಿಮ್ಮಾಕೆಯನ್ನೂ ಕರೆದುಕೊಂಡು ಮನೆಗೆ ಬನ್ನಿ, ಹೇಗಿದ್ರೂ ಮನೇಲಿ ಗೊಂಬೆ ಕೂರಿಸ್ತಾರೆ ಎನ್ನುತ್ತಾ ಆಹ್ವಾನ ನೀಡುತ್ತಿದ್ದ.

ನಾವಿದ್ದದ್ದು ಅರಮನೆಯ ಬಳಿ. ದಸರಾ ಹಬ್ಬ ಹತ್ತಿರವಾಗುತ್ತಿದ್ದಂತೆ ದಿನವೂ ಆನೆಗಳನ್ನು ಬೀದಿಯುದ್ದಕ್ಕೂ ಕರೆತರುತ್ತಿದ್ದರು. ಅದರ ಹಿಂದೆ ನಮ್ಮ ವಾನರ ಸೈನ್ಯದ ದಂಡು. ಆನೆ, ಹಸುಗಳಿಗಾಗಿ ಅಲ್ಲಲ್ಲಿ ನೀರಿನ ತೊಟ್ಟಿಗಳು ಇರುತ್ತಿದ್ದವು. ಅದರ ಬಳಿ ನೀರಿಗಾಗಿ ಆನೆಗಳನ್ನು ನಿಲ್ಲಿಸುತ್ತಿದ್ದರು. ಅವು ಲದ್ದಿ ಹಾಕಿದಲ್ಲಿ ಹೇ ಎಂದು ತುಳಿಯುತ್ತಿದ್ದ ಪಡ್ಡೆ ಹುಡುಗರು, ಅವು ಮುಂದೆ ಸಾಗಲು ಬಿಡುತ್ತಿರಲಿಲ್ಲ. ಮನೆಯ ಮುಂದೆ ನಿಂತು ಮೊರದಲ್ಲಿ ಬೆಲ್ಲ, ಅಕ್ಕಿ, ಕಾಯಿ, ಹಣ್ಣು ಕೊಡುತ್ತಿದ್ದ ಹೆಂಗಸರು ಮಾವುತನಿಗೂ ಹತ್ತು ಪೈಸೆ ನೀಡುತ್ತಿದ್ದರು. ಅಲ್ಲದೇ ಪೇಪರ್‌ನಲ್ಲಿ ಹಬ್ಬಕ್ಕಾಗಿ ಮಾಡಿದ್ದ ಕರಿದ ತಿನಿಸುಗಳನ್ನು ಸುತ್ತಿ ಕೊಡುತ್ತಿದ್ದರು. ಹಾಥಿ ಭೀ ಖುಷ್‌ ಸಾಥೀ ಭೀ ಖುಷ್‌!

ದಿನ ನಿತ್ಯವೂ ರಾತ್ರಿಯ ಹೊತ್ತು ಅರಮನೆಯಲ್ಲಿ ದೀಪೋತ್ಸವ. ಮೈದಾನದಲ್ಲಿ ಸೇನೆಯ ಕವಾಯತು, ಕುದುರೆಗಳ ಮೇಲೆ ಕಸರತ್ತು ನಡೆಯುತ್ತಿತ್ತು. ಕುಸ್ತಿಯ ಪಂದ್ಯಕ್ಕಾಗಿ ಬರುತ್ತಿದ್ದ ಧಡೂತಿ ಪೈಲ್ವಾನರು, ಅಂಗಸಾಧನೆ, ಮಲ್ಲ ಕ್ರೀಡೆ ಆಡುವವರು, ಉದ್ದನೆಯ ಕರಿ ನಿಲುವಂಗಿ ಮತ್ತು ತಲೆಗೆ ಪೇಟ ಧರಿಸಿ ಅರಮನೆಯತ್ತ ದಾಪುಗಾಲು ಹಾಕುತ್ತಿದ್ದ ಜನರನ್ನು ನೋಡುವುದೇ ಒಂದು ಖುಷಿ.

Famous ane ambariತಲೆಯ ಮೇಲೆ ಬುಟ್ಟಿಗಳಲ್ಲಿ ಬಣ್ಣ ಬಣ್ಣದ ಗೊಂಬೆಗಳ ತುಂಬಿಕೊಂಡು, ಬಾಯಲ್ಲಿ ವೀಳ್ಯವ ಜಗಿಯುತ್ತಾ ಗೊಂಬೆ ಬೇಕೇ, ಗೊಂಬೆ ಬಣ್ಣ ಬಣ್ಣದ ಗೊಂಬೆ ಎಂದು ಕೂಗಿ ಬರುತ್ತಿದ್ದ ಮಾರಾಟಗಾರರ ಹಿಂದೆ ಮಕ್ಕಳ ದಂಡು. ಬಳೆ ಹೊತ್ತು ತರುತ್ತಿದ್ದ ಬಳೆಗಾರ ಚೆನ್ನಯ್ಯ, ಚಿಗುರೆಲೆ, ಹೂವು, ಹಣ್ಣು ಮಾರುವವರದು ಒಂದು ಗುಂಪು. ದಸರಾ ನೋಡಲೆಂದೇ ಮೈಸೂರಿಗೆ ಬಂದು ಟಾಂಗಾದಲ್ಲಿ ಇಳಿಯುತ್ತಿದ್ದ ಬಂಧು-ಮಿತ್ರರ ಆಗಮನ ಮೈಸೂರಿನ ಮನೆ ಮನೆಗೂ ಹಬ್ಬದ ಸಂಭ್ರಮದ ಕಳೆ ತರುತ್ತಿತ್ತು.

ಅಣ್ಣ(ಅಪ್ಪ)ನ ಕೈ ಹಿಡಿದು ಮಾರುಕಟ್ಟೆಗೆ ಕಾಲಿಟ್ಟಲ್ಲಿ ಹಿರಿಯರೊಂದಿಗೆ ಕಿರಿಯರ ಗುಂಪು. ಈ ಗೊಂಬೆ, ಆ ಗೊಂಬೆ, ಮತ್ತೊಂದು ಮಗದೊಂದು ಎಂದು ಮಾಡುತ್ತಿದ್ದೆವು. ಗುರುರಾಜ ಸ್ವೀಟ್‌ಮಾರ್ಟಿನಲ್ಲಿ ಮೈಸೂರು ಪಾಕ್‌ ಕಟ್ಟಿಸಿಕೊಂಡು, ಬಯಾಸ್ಕೋಪಿನಲ್ಲಿ ಬಣ್ಣದ ಗಾಜಿನ ಮೂಲಕ ಮುಂಬೈ ನೋಡು, ತಾಜ್‌ ನೋಡು ಎಂದು ಚಿತ್ರಗಳ ನೋಡಿ, ಫಲಾಮೃತದಲ್ಲಿ ಐಸ್‌ಕ್ರೀಮ್‌ ತಿಂದು ಟಾಂಗಾದಲ್ಲಿ ಖರೀದಿಸಿದ ಗೊಂಬೆಗಳೊಂದಿಗೆ ಮನೆಗೆ ಕಾಲಿಟ್ಟಾಗ ದಿಗ್ವಿಜಯ ಸಾಧಿಸಿದ ಹೆಮ್ಮೆ.

ಗೊಂಬೆಗಳನ್ನು ಇಡಲು ಮಣೆಗಳಿಗೆ ಅಸ್ತಿಭಾರವಾಗಿ ನಿಲ್ಲುತ್ತಿದ್ದದ್ದು ಗ್ಲೂಕೋಸ್‌ ಬಿಸ್ಕಿಟ್‌ ಡಬ್ಬಗಳು ಅಥವಾ ಇಟ್ಟಿಗೆಗಳು. ಅಪ್ಪನ ಹಳೆಯ ಬಿಳಿಯ ಪಂಚೆಯನ್ನು ಮಣೆಗಳ ಮೇಲೆ ಹಾಕಲು ಶುಭ್ರವಾಗಿ ಒಗೆದು ತಲೆದಿಂಬಿನ ಕೆಳಗೆ ಇಡುತ್ತಿದ್ದರು. ಹಿರಿಯರೊಂದಿಗೆ ಕೂಡಿ ಕಿರಿಯರೂ ಜೋಪಾನವಾಗಿ ಗೊಂಬೆಗಳನ್ನು ಹೊರತೆಗೆದು ಜೋಡಿಸುತ್ತಿದ್ದೆವು. ಮೆಟ್ಟಲು ಮೆಟ್ಟಲಾಗಿ ರಾಮಾ-ಸೀತೆ, ಕೃಷ್ಣ-ರಾಧೆ, ಲಕ್ಷ್ಮೀ-ನಾರಾಯಣ ಹೀಗೆ ದೇವತಾ ಮೂರ್ತಿಗಳೊಂದಿಗೆ, ಶೆಟ್ಟರ ಅಂಗಡಿ ಜೊತೆಗೆ ಶೆಟ್ಟಿಯಮ್ಮನ್ನು ಸಹಾ ಕೂರಿಸುತ್ತಿದ್ದೆವು. ಇವರೀರ್ವರೂ ತಲೆಯಾಡಿಸುತ್ತಿರುವ ತಂಜಾವೂರು ಗೊಂಬೆಗಳು. ಇವರ ಮುಂದೆ ಚಿಕ್ಕ ಚಿಕ್ಕ ಸಾಮಗ್ರಿಗಳ ಮಳಿಗೆ. ಇನ್ನು ನನ್ನ ಅಣ್ಣನ ಝೂ ಮರೆಯಲಾದೀತೇ? ಇದಕ್ಕಾಗೇ ತಟ್ಟೆ ಅಥವಾ ರೊಟ್ಟಿನ ಕಾಗದದ ಮೇಲೆ ಒಳ್ಳೆಯ ಮಣ್ಣು ತಂದು ರಾಗಿ ನೆನೆಸಿ ಹಾಕಿ, ದಿನಾ ಬೆಳಿಗ್ಗೆ ಕಾಟಾಚಾರಕ್ಕಾಗಿ ಕರಾಗ್ರೇ ವಸತೇ ಹೇಳಿ ಕಣ್ಣುಜ್ಜಿಕೊಳ್ಳುತ್ತಾ ಮೊಳಕೆ ಎದ್ದಿದೆಯೇ, ಹುಲ್ಲು ಎಷ್ಟು ಬೆಳೆದಿದೆ ಎಂದು ನೋಡುತ್ತಿದ್ದೆವು.

ಅಡುಗೆ ಮನೆಯಲ್ಲಿ ಅಮ್ಮ , ಲಗ್ಗೆ ಇಡುವ ಕಿರಿಯರ ಸೈನ್ಯಕ್ಕಾಗಿ ಕೋಡುಬಳೆ, ಚಕ್ಕುಲಿ, ಬರ್ಫಿ, ಮುಚ್ಚೋರೆ ಎಂದು ಒಂಬತ್ತು ದಿನಗಳಿಗೆ ಲೆಕ್ಕ ಹಾಕುತ್ತಿದ್ದಳು. ಮಧ್ಯೆ ಒಂದು ದಿನ ಸೌತೇಕಾಯಿ ಇನ್ನೊಂದು ದಿನ ಕಡಲೆ ಪುರಿ, ಸರಸ್ವತಿ ಹಬ್ಬದ ದಿನ ಹೆಂಗಸರಿಗೆ ತೆಂಗಿನಕಾಯಿ, ಕಣ, ಎಲೆ-ಅಡಿಕೆ ವಿತರಣೆ ನಡೆಯುತ್ತಿತ್ತು.

ನವರಾತ್ರಿಯ ಮೊದಲ ದಿನ ಬೀದಿ ಬೀದಿಗಳಲ್ಲಿ ರಂಗೋಲಿ, ತಳಿರು-ತೋರಣ, ಮನೆಯಿಂದ ಮನೆಗೆ ಚಿಣ್ಣರು ಓಡುತ್ತಿದ್ದರು. ಬೆಳಿಗ್ಗೆ ಅರಮನೆಯಿಂದ ಗುಂಡಿನ ಶಬ್ಧ ಕೇಳಿಸುತ್ತಿತ್ತು. ಇದೇ ಕಲಶವಿಟ್ಟು ರಾಜ, ರಾಣಿಯರನ್ನು ಕೂರಿಸುವ ಮುಹೂರ್ತ. ತದನಂತರ ಪೂಜೆ, ಹಬ್ಬದೂಟ. ನಮ್ಮಗಳಿಗೆ ಸಂಜೆಯ ಸಂಭ್ರಮ. ಮನೆ ಮನೆಗೂ ಹೋಗಿ ಗೊಂಬೆಗಳನ್ನು ನೋಡುತ್ತಿದ್ದೆವು. ಮಕ್ಕಳಿಗೆ ಪ್ರತಿ ಮನೆಯಲ್ಲೂ ಒಂದು ತಿಂಡಿ ಸಿಗುತ್ತಿತ್ತು. ಟಿಶ್ಯೂ ಪೇಪರ್‌ ಅಥವಾ ಕರ್ಚೀಫ್‌ ಗೊಡವೆಯೇ ಇರಲಿಲ್ಲ. ಹಾಕುತ್ತಿದ್ದ ಜರಿಲಂಗದ ಉಪಯೋಗ ಮಲ್ಟಿ ಪರ್ಪಸ್‌.

ಆಗ ನಾವು ಚಾಕಲೇಟ್‌, ಬಿಸ್ಕತ್‌ ಕಂಡವರಲ್ಲ. ಚಕ್ಕುಲಿ, ಕೋಡುಬಳೆ, ಕಾಯಿ ಬರ್ಫಿ, ಸೌತೇಕಾಯಿ, ಕಡಲೇ ಪುರಿಯೇ ಮೃಷ್ಟಾನ್ನ. ಅಪರೂಪವಾಗಿ ಐದು ಪೈಸೆ ಸಿಕ್ಕಲ್ಲಿ ಮೂರು ನಿಂಬೆ ಹುಳಿ ಪೆಪ್ಪರ್‌ಮೆಂಟು ಅಥವಾ ದಟ್ಟ ಕೆಂಪು ಬಣ್ಣದ ಎರಡು ಐಸ್‌ಕ್ರೀಮ್‌ ಕೊಂಡು ಚಪ್ಪರಿಸುತ್ತಿದ್ದೆವು. ಇಷ್ಟಕ್ಕೇ ನಮಗೆ ಪರಮ ತೃಪ್ತಿ.

ದಸರಾದಲ್ಲಿನ ಹತ್ತು ದಿನವೂ ಮನೆ ಮನೆಗೆ ಭೇಟಿ. ಎಲ್ಲರ ಮನೆಯಲ್ಲೂ ನಿತ್ಯಾರತಿ. ಹಲವು ಮುಖ್ಯ ಬೀದಿಗಳಲ್ಲಿ ದೀಪೋತ್ಸವ. ದೇಗುಲಗಳಲ್ಲಿ ವಿಶೇಷ ಪೂಜೆ. ತರ ತರಹದ ತಿನಿಸು. ಸರಸ್ವತಿ ಪೂಜೆಯಂದು ಇದ್ದ ಬದ್ದ ಶಾಲೆಯ ಪುಸ್ತಕಗಳೆಲ್ಲಾ ಜೋಡಿಸಿ ಸರಸ್ವತಿಯ ವಿಗ್ರಹವನ್ನು ಅದರ ಮೇಲೆ ಇಟ್ಟು ಪೂಜಿಸುತ್ತಿದ್ದೆವು. ಆಯುಧ ಪೂಜೆಯಂದು ಅಣ್ಣನ ಸೈಕಲ್‌ಗೆ ಅಗ್ರಸ್ಥಾನ. ಅಂದು ಅದು ದಿವ್ಯ ರಥ. ಸೇವಂತಿಗೆ, ಸುಗಂಧರಾಜ ಹೂವಿನ ಅಲಂಕಾರ. ಸಿಕ್ಕೆಡೆ ಹಳದಿ, ಕೆಂಪಿನ ಬೊಟ್ಟು. ಆ ದಿನ ಎಲ್ಲೋ ಮೂಲೆಯಲ್ಲಿ ಬಿದ್ದಿರುತ್ತಿದ್ದ ಒನಕೆ, ಗದ್ದಬಾರೆ, ಚಾಕು, ಕತ್ತರಿ ಮೊದಲ್ಕೊಂಡ ಸಾಧನಗಳ ತೊಳೆಯುತ್ತಿದ್ದೆವು. ಅವು ಅರಿಶಿನ ಕುಂಕುಮ ಹಚ್ಚಿಸಿಕೊಂಡು ಜಾಗವ ಆಕ್ರಮಿಸುತ್ತಿದ್ದವು. ಕೊಟ್ಟಿಗೆಯಲ್ಲಿ ಇರುತಿದ್ದ ಮೂಕ ಜೀವಿಗಳಾದ ಗೌರಿ, ಭಾಗ್ಯ, ನಂದ, ಕಾವೇರಿಗೆ (ಹಸುಗಳು) ನಾ ಮಾಡಿದ ಅಲಂಕಾರ ನೆನೆದರೆ ಇಂದಿಗೂ ನನಗೆ ಆತ್ಮತೃಪ್ತಿ.

ವಿಜಯದಶಮಿಯಂದು ಹಿರಿಯರ-ಬಂಧುಗಳ ಕೈಪಿಡಿದು ಅರಮನೆಯತ್ತ ದೌಡಾಯಿಸುತ್ತಿದ್ದೆವು. ಕಿಕ್ಕಿರಿದು ಕಾಲಿಡಲೂ ಜಾಗವಿರುತ್ತಿರಲಿಲ್ಲ. ಹಿರಿಯರ ಕೈ ಹಿಡಿತ ಭದ್ರವಾಗಿರುತ್ತಿತ್ತು. ಅಲ್ಲಿ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಪಟ್ಟದಾನೆ (ಪದ್ಮಾವತಿ/ಗಣೇಶ) ಸೊಂಡಿಲಲ್ಲಿ ಕಮಲದ ಹೂವನ್ನು ತಂದು ಮಂಡಿಯೂರಿ ಮಹಾರಾಜರಿಗೆ ಒಪ್ಪಿಸುತ್ತಿತ್ತು. ಶ್ರೀಯುತ ಜಯಚಾಮರಾಜೇಂದ್ರರು ಮಹಾರಾಜರಾಗಿದ್ದ ಕಾಲ ಅದು. ರಾಜಾಶ್ವ, ಕಾಮಧೇನುವಿಗೂ ಮಹಾರಾಜರಿಂದ ಪೂಜೆ ನಡೆಯುತ್ತಿತ್ತು. ಮಹಾರಾಜರಿಂದ ಕುಸ್ತಿ, ಕವಾಯಿತು, ಮಲ್ಲಕ್ರೀಡೆ ಹೀಗೆ ಹಲವಾರು ಕಾರ್ಯಕ್ರಮಗಳ ವೀಕ್ಷಣೆ. ಸಂಜೆ ಆಗುತ್ತಿದ್ದಂತೆ ಬನ್ನಿ ಮರದೆಡೆಗೆ ಹೊರಡುತ್ತಿತ್ತು ಜಂಬೂ ಸವಾರಿ. ಅಂಬಾರಿ ಹೊತ್ತ ಆನೆಯ ಮುಂದೆ ಸಾಲಾಗಿ ಸೈನಿಕರು, ಕುದುರೆ, ಕಾಲಾಳು, ಅನೇಕ ಪ್ರದರ್ಶನಗಳು, ಚಿತ್ರಗಳು, ಶಾಲೆಯ ಮಕ್ಕಳ ಕವಾಯಿತು ಮುಂದೆ ನಡೆಯುತ್ತಿತ್ತು. ಪೂಜೆಗೈದು ಅಂಬಾರಿ ಏರಿ ಜನಸಾಗರಕ್ಕೆ ಕೈ ಮುಗಿದು ಕುಳಿತುಕೊಳ್ಳುತಿದ್ದರು ಮಹಾರಾಜರು. ರಾಜರನ್ನು ಹೊತ್ತ ಗಜರಾಜ ಮಂದಗಮನನಾಗಿ ಗಾಂಭೀರ್ಯದಿಂದ ನಡೆಯುತ್ತಿದ್ದ. ಈ ಸಂಭ್ರಮವನ್ನು ವೀಕ್ಷಿಸುತ್ತಿದ್ದ ಜನಸಮುದಾಯ ಅಂಬಾರಿ ಮುನ್ನಡೆದಂತೆ ಮರ್ಯಾದೆ ತೋರಿ ರಾಜರಿಗೆ ಕೈ ಮುಗಿಯುತ್ತಿದ್ದರು. ಇತರರನ್ನು ನೋಡಿ ನಾನು ಕೂಡ ಕೈ ಮುಗಿದಿದ್ದೇನೆ. ರಾಜಾ ನಾರಾಯಣೋ ಹರಿಃ!

ಗಜರಾಜ ಮುನ್ನಡೆದು, ಅಂಬಾರಿ ಕಣ್ಮರೆಯಾಗುತ್ತಿದ್ದಂತೆ ಕತ್ತಲಾವರಿಸಿತೆಂದು ನಮ್ಮನ್ನೆಲ್ಲಾ ಮನೆಗೆ ವಾಪಸ್‌ ಕರೆತರುತ್ತಿದ್ದರು. ಹತ್ತು ದಿನ ಎಗ್ಗಿಲ್ಲದೆ ಕುಣಿದು, ಕುಪ್ಪಳಿಸಿ ಮೆರೆದ ಆಯಾಸ, ಸುಸ್ತು, ಹಬ್ಬ ಮುಗಿದೇ ಹೋಯಿತಲ್ಲಾ ಎಂಬ ಸಂಕಟ, ಮುಂದಿನ ವರುಷದ ತನಕ ಕಾಯಬೇಕಲ್ಲಾ ಎಂಬ ತಳಮಳಗಳು ಕೂಡಿ ನಿದ್ರಾದೇವಿ ಮೈಯಲ್ಲಿ ಆವರಿಸುತ್ತಿದ್ದಳು. ಗೊಂಬೆಗಳಿಗೆ ಆರತಿಯೆತ್ತಿ ರಾಜ-ರಾಣಿಯರನ್ನು ಮಲಗಿಸಿದಾಗ ಮನ ಪಿಚ್ಚೆನಿಸುತ್ತಿತ್ತು. ಏನೋ ಕಳೆದುಕೊಂಡ ನೋವು. ಅಣ್ಣಾ, ನನಗೆ ಮುಂದಿನ ವರುಷ ಅವರ ಮನೆಯಲ್ಲಿ ಇಟ್ಟಿದ್ದರಲ್ಲಾ ಆ ತರಹ ಗೊಂಬೆ ಬೇಕು ಎಂದು ತಂದೆಗೆ ತಾಕೀತು ಮಾಡುತ್ತಿದ್ದೆ. ಪಕ್ಕದಲ್ಲೇ ಅಂಟಿರುತ್ತಿದ್ದ ಅಣ್ಣನ ನೋಡಿ, ಮುಂದಿನ ಸಲ ನಿಂಜೊತೆ ನಾ ಬರೋಲ್ಲಾ, ನಾನು ದೊಡ್ಡವಳಾಗಿರ್ತೀನಿ ಎಂಬ ಜೋರು ಮಾತು ಹೇಳುತ್ತಿದ್ದೆ.

ಮರುದಿನ ಬೆಳಿಗ್ಗೆ ಮತ್ತೆ ಗೊಂಬೆಗಳು ಕಬ್ಬಿಣದ ಪೆಟ್ಟಿಗೆಯಲ್ಲಿ ಬಂದಿಯಾಗಿರುತ್ತಿದ್ದವು. ನಿಧಿಯನ್ನು ಸಂಗ್ರಹಿಸುವಂತೆ ಗೊಂಬೆಗಳನ್ನು ಮೃದುವಾಗಿ ಸವರಿ ಮತ್ತೆ ಯಥಾಸ್ಥಿತಿ ಬಟ್ಟೆಯಲ್ಲಿ ಸುತ್ತಿ ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಡುತ್ತಿದ್ದೆವು. ಇಷ್ಟು ದಿನ ಇದ್ದ ಉತ್ಸಾಹ ಕರಗಿ ಟುಸ್ಸಾಗಿರುತ್ತಿತ್ತು. ರಾಗಿ ಬೆಳೆ ಅನಾಥವಾಗಿ ಬಿದ್ದಿರುತ್ತಿತ್ತು, ಇಲ್ಲ ಹಸುವಿನ ಪಾಲಾಗುತ್ತಿತ್ತು. ಬಿಸ್ಕತ್‌ ಡಬ್ಬಗಳು, ಇಟ್ಟಿಗೆಗಳು ಮೂಲ ಸ್ಥಾನವ ಸೇರುತ್ತಿದ್ದವು. ಬಂಧು ಮಿತ್ರರಿಗೆ ವಿದಾಯ ಕೋರುತ್ತಿದ್ದೆವು. ನಮ್ಮ ಎಳೆಯ ಕಣ್‌ಗಳಲ್ಲಿ ಮುಂದಿನ ವರುಷದ ದಸರ ಹಬ್ಬದ ಕನಸು ಮಾತ್ರ ಗರಿಕೆದರಿ ಬಿಚ್ಚುತ್ತಿತ್ತು!

ಇವತ್ತಲ್ಲವೇ ಹಬ್ಬ ಎಂದ ಪತಿರಾಯರ ಮಾತಿಗೆ ಬೆಚ್ಚಿ, ಬಾಲ್ಯದಂಗಳದಿಂದ ಹೊರಬಿದ್ದೆ. ವಸ್ತ್ರಾಭರಣ ಪರೀಕ್ಷಿಸಲೆಂದು ಕೈಯಲ್ಲಿ ಹಿಡಿದಿದ್ದ ರಾಜ-ರಾಣಿಯರು ನನ್ನನ್ನೇ ನೋಡಿದಂತೆ ಭಾಸವಾಗುತ್ತಿದೆ. ‘ಜನಾದರ, ಪ್ರೀತಿ, ಮರ್ಯಾದೆ ಸಕಲ ಸವಲತ್ತುಗಳನ್ನೊಳಗೊಂಡು ಪ್ರಜೆಗಳೊಂದಿಗೆ ಸಪರಿವಾರ ಸಕುಟುಂಬ ಎಂದು ಇದ್ದ ನಮ್ಮ ಕುಟುಂಬ ಬೃಹದಾಕಾರವಾಗಿ ಬೆಳೆದು ಹಂಚಿಹೋಗಿದೆ. ಈಗ ನಾವಿಬ್ಬರೂ ಅನಾಥರಾಗಿದ್ದೇವೆ’ ಎಂದು ಅತ್ತಂತೆ ಅನ್ನಿಸುತ್ತಿತ್ತು. ತಕ್ಷಣ ದೇವರ ಗೂಡಿನ ಬಳಿ ಅವರನ್ನು ಕೂರಿಸಿ ಅನಾಥರಾಗಿರುವುದು ನೀವಲ್ಲ ನಾವು ಎಂದು ಹೇಳೋಣ ಅನ್ನಿಸುತ್ತಿತ್ತು. ಅವಿಭಕ್ತ ಕುಟುಂಬಗಳು, ಬಾಂಧವ್ಯ, ನಂಬಿಕೆ ಇವುಗಳಿಂದ ನಾವು ದೂರಾಗಿದ್ದೇವೆ. ಅಂದು ಮನೆ ಮನೆಗೂ ಗೊಂಬೆ ಇಟ್ಟಿದ್ದೀರಾ ಅಥವಾ ಗಣೇಶನ್ನ ಕೂರಿಸಿದ್ದೀರಾ ಎಂದು ಬರುತ್ತಿದ್ದ ಮಕ್ಕಳ ದಂಡು ಈಗ ಹೋಂವರ್ಕ್‌, ಪಿಕ್ಚರ್‌, ಟಿ.ವಿ ಎಂಬ ಪ್ರಪಂಚದಲ್ಲಿ ಮುಳುಗಿರುತ್ತದೆ. ಕಾಲ ಬದಲಾಗಿದೆ. ಮುಗ್ಧತೆ, ನಂಬಿಕೆ, ವಿಶ್ವಾಸ ಮಾಯವಾಗಿದೆ. ಇಂದು ಪ್ರಪಂಚದ ಯಾವುದೇ ಮೂಲೆಯಲ್ಲಿಯೂ ಕುಳಿತು ದಸರ ವೀಕ್ಷಿಸಬಹುದು. ಅಂದು ಮಹಾರಾಜರು ವಿರಾಜಿಸುತ್ತಿದ್ದ ಅಂಬಾರಿ ಇಂದು ತಾಯಿ ಭುವನೇಶ್ವರಿಗೆ ಮೀಸಲಾಗಿದೆ.

ನಿನ್ನ ಈ ಜೀವನ ಪಯಣದ ಸುಮಧುರ ನೆನಪಿನಂಗಳದಲ್ಲಿ ಎಂದೆಂದಿಗೂ ನಾವು ಚಿರಸ್ಥಾಯಿಗಳು ಎಂದು ಆಶೀರ್ವದಿಸಿ ನಕ್ಕರು ರಾಜ-ರಾಣಿಯರು.

ಮುಖಪುಟ / ಎನ್‌ಆರ್‌ಐ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+