ಸಿಂಧು-ಸೀಮಾ : ಸಾಧನ‘ಕೇರಿ’ಯ ಸವಿಗನ್ನಡ ಸೋದರಿಯರು!
- ಶ್ರೀವತ್ಸ ಜೋಶಿ; ಮೇರಿಲ್ಯಾಂಡ್
| |
‘ಸಿಂಧು ರವಿಶಂಕರ್’ - ಈಕೆಯ ಹೆಸರನ್ನು ಎಲ್ಲೋ ಕೇಳಿದಂತಿದೆಯಲ್ಲಾ , ಸುಂದರ ಮುಗುಳ್ನಗೆಯ ಭಾವಚಿತ್ರವನ್ನೂ ನೋಡಿದಂತಿದೆಯಲ್ಲಾ... ಎಂದು ನಿಮಗೀಗಾಗಲೇ ಅನಿಸಿದ್ದರೆ ಅದು ನಿಜವೇ. ಮೊನ್ನೆಯಷ್ಟೆ ಒರ್ಲಾಂಡೊದಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನದಲ್ಲಿ , ಇದೇ ಪ್ರಪ್ರಥಮ ಬಾರಿಗೆ ಅಮೆರಿಕ ಮಟ್ಟದಲ್ಲಿ ನಡೆದ ಸೌಂದರ್ಯಸ್ಪರ್ಧೆಯಲ್ಲಿ ‘ಮಿಸ್ ಟೀನ್ ಅಮೆರಿಕನ್ನಡ’ ಕಿರೀಟವನ್ನು ಗೆದ್ದವಳು ಸಿಂಧು ರವಿಶಂಕರ್! ಸೌಂದರ್ಯಸ್ಪರ್ಧೆಯ ಅರ್ಹತಾ ಸುತ್ತುಗಳಾದ ‘ಅತ್ಯುತ್ತಮ ಪ್ರತಿಭೆ’ (ಕೊಳಲು ವಾದನ), ‘ಅತ್ಯುತ್ತಮ ಸಂದರ್ಶನ’ ಮತ್ತು ‘ಅತ್ಯುತ್ತಮ ಫೊಟೊಜೆನಿಕ್’ ವಿಭಾಗಗಳೆಲ್ಲದರಲ್ಲೂ ಜಯಭೇರಿ ಹೊಡೆದು, ಅಂತಿಮಸುತ್ತಿನಲ್ಲಿ ನಿರ್ಣಾಯಕರ ಸವಾಲುಗಳಿಗೆಲ್ಲ ಸಮಂಜಸ ಮತ್ತು ಸಮರ್ಥ ಉತ್ತರ ನೀಡಿ ಮಿಸ್ ಟೀನ್ ಅಮೆರಿಕನ್ನಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡವಳು. ಸಾಧನ‘ಕೇರಿ’ಯ ಈ ಬಾಲಕಿಯ ಸಾಧನೆ ಕೇರಿಯವರನ್ನು ಮಾತ್ರವಲ್ಲ ಅಮೆರಿಕನ್ನಡಿಗರೆಲ್ಲರನ್ನೂ ಪುಳಕಿತವಾಗಿಸಿತು!
ರವಿಶಂಕರ್ ಬಹುರಾಷ್ಟ್ರೀಯ ಟೆಲಿಕಮ್ಯುನಿಕೆಷನ್ ಕಂಪೆನಿಯಾಂದರಲ್ಲಿ ನಿರ್ದೇಶಕಸ್ಥಾನದಲ್ಲಿರುವ ಉನ್ನತ ಅಧಿಕಾರಿ. ಸವಿತಾ ಓರ್ವ ಸದ್ಗೃಹಿಣಿ. ಅವಕಾಶಗಳ ಅಮರಾವತಿಗೆ ಈ ದಂಪತಿ 1989ರಲ್ಲಿ ವಲಸೆ ಬಂದಾಗ ಸಿಂಧು ಇನ್ನೂ ಒಂದು ವರ್ಷವೂ ತುಂಬಿರದ ಹಸುಳೆ. ಆಗಿನ್ನೂ ಕೇರಿಯಲ್ಲಿ ಬೆರಳೆಣಿಕೆಯಷ್ಟು ಕನ್ನಡಿಗರ ಕುಟುಂಬಗಳಿದ್ದುವೋ ಏನೊ. ರವಿಶಂಕರ್-ಸವಿತಾರಂಥ ಅಚ್ಚಕನ್ನಡಿಗರು ಕೇರಿಯಲ್ಲಿ ಕನ್ನಡದ ಕಂಪನ್ನು ಹರಡತೊಡಗಿದರಷ್ಟೇ ಅಲ್ಲ , ಅಲ್ಲಿನ ‘ಸಂಪಿಗೆ’ ಕನ್ನಡಕೂಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಸವಿತಾ ಈಗಾಗಲೇ ಒಂದುವರ್ಷ ಸಂಪಿಗೆಯ ಅಧ್ಯಕ್ಷೆಯಾಗಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರೆ, ರವಿಶಂಕರ್ ಸತತವಾಗಿ ಸಲಹಾಮಂಡಳಿಯಲ್ಲಿ ಸದಸ್ಯರಾಗಿದ್ದಾರೆ. ಸವಿತಾ ರವಿಶಂಕರ್ ಬರೆದಿರುವ ಲವಲವಿಕೆಯ ಕವಿತೆಗಳು ದಟ್ಸ್‌ಕನ್ನಡದಲ್ಲೂ ಪ್ರಕಟವಾಗಿವೆ. ಒಟ್ಟಿನಲ್ಲಿ ಹೆತ್ತವರ ಕನ್ನಡಭಾಷಾಸಂಸ್ಕೃತಿ ಪ್ರೇಮವು ಸಿಂಧು ಮತ್ತು ಅಮೆರಿಕದಲ್ಲೇ ಹುಟ್ಟಿದ ಅವಳ ತಂಗಿ ಸೀಮಾ- ಇಬ್ಬರಿಗೂ ಅವ್ಯಾಹತವಾಗಿ ಕನ್ನಡ ವಾತಾವರಣವನ್ನು ಕಲ್ಪಿಸಿತು.
ಅಮೆರಿಕದಲ್ಲಿ ಪ್ರಾಥಮಿಕ-ಮಾಧ್ಯಮಿಕ ಶಿಕ್ಷಣ ಹಂತದಲ್ಲೇ ಪಠ್ಯೇತರ ಚಟುವಟಿಕೆಗಳಿಗೆ, ಬೆಳೆಯುವ ಮಕ್ಕಳಲ್ಲಿ ಸುಪ್ತವಾಗಿರುವ ಲಲಿತಕಲೆ-ಕ್ರೀಡೆ ಇತ್ಯಾದಿ ಪ್ರತಿಭೆಗೆ ಅರಳುವ ಅವಕಾಶಗಳು ವಿಪುಲವಾಗಿರುತ್ತವೆ. ಸಿಂಧು-ಸೀಮಾ ಇಬ್ಬರಿಗೂ ಕೊಳಲು ನುಡಿಸುವುದರಲ್ಲಿ (ವೆಸ್ಟರ್ನ್ ಫ್ಲೂಟ್ ಮತ್ತು ಹಾಗೆಯೆ ಭಾರತೀಯ ಪದ್ಧತಿಯ ವೇಣುವಾದನ ಸಹ) ಆಸಕ್ತಿ ಹುಟ್ಟಿ ತಂದೆತಾಯಿಗಳ ಮತ್ತು ಶಾಲೆಯಲ್ಲಿ ಶಿಕ್ಷಕರ ಪ್ರೋತ್ಸಾಹದಿಂದ ಅದು ಅವರಿಬ್ಬರ ಅಮೋಘ ಕಲಾಸಂಪತ್ತಾಗಿ ಮೂಡತೊಡಗಿತು. ಕೇರಿಯಲ್ಲೇ ಇರುವ ಡೆಬ್ರಾ ಬೆನ್ಸನ್ ಎನ್ನುವವರ ಬಳಿ ವೆಸ್ಟರ್ನ್ ಫ್ಲೂಟ್ ಕಲಿಯತೊಡಗಿದರು ಈ ಬಾಲಕಿಯರು. ಜತೆಜತೆಯಲ್ಲೇ ಬೇಸಿಗೆ ರಜದಲ್ಲಿ ಮೈಸೂರಿಗೆ ಹೋದಾಗೆಲ್ಲ ಅಲ್ಲಿ ಚಂದನ್ ಕುಮಾರ್ ಎನ್ನುವ ಹಿರಿಯ ಕಲಾವಿದರಿಂದ (ಮೈಸೂರ್ ಎ ಚಂದನ್ ಕುಮಾರ್ ಅವರು ಪ್ರಖ್ಯಾತ ಪಿಟೀಲು ವಾದಕ ಟಿ.ಚೌಡಯ್ಯ ಅವರ ಮರಿಮಗ) ಭಾರತೀಯ ಶಾಸ್ತ್ರೀಯ ಶೈಲಿಯಲ್ಲಿ ಕೊಳಲುವಾದನವನ್ನೂ ಕಲಿಯತೊಡಗಿದರು. 2002ರಲ್ಲಿ ಚಂದನ್ ಕುಮಾರ್ ಅಮೆರಿಕಯಾತ್ರೆ ಕೈಗೊಂಡಿದ್ದಾಗ ಕೇರಿಯಲ್ಲೇ ಕ್ಯಾಂಪ್ ಹೂಡಿ ತನ್ನ ಶಿಷ್ಯೆಯರಿಗೆ ಮನೆಪಾಠ ಹೇಳಿಕೊಟ್ಟಿದ್ದರು.
ಕೇರಿಯ ಅವಳಿನಗರ ರ್ಯಾಲೆ (ನಾರ್ತ್ ಕೆರೊಲಿನಾ ರಾಜಧಾನಿ)ಯಲ್ಲಿ ‘ಫ್ಲೂಟ್ ಎಸೋಸಿಯೇಷನ್’ನ ಯುವಪ್ರತಿನಿಧಿಯಾಗಿ ಆಯ್ಕೆಯಾದಳು ಸಿಂಧು. ಅಲ್ಲಿನ ಯುತ್ ಆರ್ಕೆಸ್ಟ್ರಾಗಳಲ್ಲಿ , ಹಾಗೆಯೇ ತನ್ನ ಎನ್ಲೊ ಹೈಸ್ಕೂಲ್‌ನ ಮ್ಯೂಸಿಕ್ ಬ್ಯಾಂಡ್‌ನಲ್ಲಿ ಕೊಳಲುವಾದಕಿಯಾಗಿ ಗುರುತಿಸಲ್ಪಟ್ಟಳು. ಟೈಟಾನಿಕ್ ಚಿತ್ರದ ಥೀಮ್ ಮ್ಯೂಸಿಕ್ಕನ್ನು ಸಿಂಧು ಕೊಳಲಲ್ಲಿ ನುಡಿಸುವುದನ್ನು ಕೇಳಲು ಜನ ವನ್ಸ್ ಮೋರ್ ವನ್ಸ್ ಮೋರ್ ಎನ್ನುವಷ್ಟು ಜನಜನಿತಳಾದಳು. ಅಕ್ಕನ ಹೆಜ್ಜೆಗಳನ್ನೇ ತಂಗಿ ಸೀಮಾ ಅನುಸರಿಸಿದಳು. ತನ್ನ ಶಾಲೆಯ ಬ್ಯಾಂಡ್‌ನಲ್ಲಿ ಕೊಳಲುವಾದಕಿಯಾದಳು. ಕೊಳಲು ಇಬ್ಬರ ಉಸಿರಲ್ಲೂ ಧ್ವನಿತವಾಯಿತು. ಸ್ವಾರಸ್ಯವೆಂದರೆ ಪಾಶ್ಚಾತ್ಯರಾಗಗಳನ್ನು ನುಡಿಸಿದಷ್ಟೇ ಸಲೀಸಾಗಿ ಭಾಗ್ಯದ ಲಕ್ಷ್ಮೀ ಬಾರಮ್ಮಾ... ಇತ್ಯಾದಿ ಕರ್ನಾಟಕ ಶಾಸ್ತ್ರೀಯಶೈಲಿಯ ಕೃತಿಗಳನ್ನೂ ಹಿಂದಿ/ಕನ್ನಡ ಸಿನೆಮಾಸಂಗೀತವನ್ನೂ ಶ್ರೋತೃಗಳು ಬೆರಗಾಗುವಂತೆ ನುಡಿಸುತ್ತಾರೆ ಸಿಂಧು ಮತ್ತು ಸೀಮಾ.
ಕೇರಿಯಲ್ಲಿ ಸಂಪಿಗೆ ಕನ್ನಡಸಂಘದ ಕಾರ್ಯಕ್ರಮಗಳಷ್ಟೇ ಅಲ್ಲದೆ 2002ರಲ್ಲಿ ಡೆಟ್ರಾಯಿಟ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದಲ್ಲೂ ಭಾಗವಹಿಸಿ ಈ ಸೋದರಿಯರು ಕೀರ್ತಿಪತಾಕೆ ಹಾರಿಸಿದ್ದಾರೆ. ಸಿಂಧು ಡೆಟ್ರಾಯಿಟ್‌ನಲ್ಲಿ ಸಂಗೀತಸ್ಪರ್ಧೆಯಲ್ಲಿ ಭಾರತೀಯವಾದ್ಯ ವಿಭಾಗದಲ್ಲಿ 3ನೇ ಸ್ಥಾನ ಪಡೆದರೆ ಸೀಮಾ ಕನ್ನಡ ಭಾಷಾಂತರ ಮತ್ತು ಪ್ರಬಂಧಸ್ಪರ್ಧೆಯಲ್ಲಿ ವಿಶೇಷ ಬಹುಮಾನ ಗಳಿಸಿದಳು. ಸ್ಪರ್ಧೆಯಲ್ಲಿ ಕನ್ನಡದಲ್ಲೇ ಪ್ರಬಂಧ ಬರೆದ ಏಕೈಕ ಸ್ಪರ್ಧಾಳು ಸೀಮಾ! ಒರ್ಲಾಂಡೊ ಸಮ್ಮೇಳನದ ಸಾಹಿತ್ಯಗೋಷ್ಠಿಯಲ್ಲಿ ಭಾಗವಹಿಸಿದ ಸಿಂಧು ಅಲ್ಲಿ ಕನ್ನಡ ಕವಿತೆಯಾಂದನ್ನು (ಕೇರಿಯಲ್ಲಿ ಕನ್ನಡ ಮಕ್ಕಳಿಗೆ ಕನ್ನಡ ಕವಿತೆ ಬರೆಯುವ ಕಾರ್ಯಾಗಾರ ನಡೆಸಿದವಳು ಸಿಂಧು) ವಾಚಿಸಿದಳು. ಕನ್ನಡ ಮಾತಾಡುವುದು, ಓದುವುದು, ಬರೆಯುವುದು - ಇವೆಲ್ಲವೂ ಇಬ್ಬರಿಗೂ ಕರತಲಾಮಲಕ.
ಪ್ರತಿಭಾಪ್ರದರ್ಶನ, ಪ್ರಶಸ್ತಿಗಳನ್ನು ಬಾಚುವಿಕೆ ಇಷ್ಟನ್ನು ಮಾತ್ರ ಮಾಡುವವರ ಪೈಕಿಯಲ್ಲ ಸಿಂಧು ಮತ್ತು ಸೀಮಾ. ರ್ಯಾಲೆಯಲ್ಲಿನ ರೆಸ್ಕ್ಯೂ ಮಿಷನ್ ಅನಾಥಾಶ್ರಮದ ‘ಹೆಲ್ಪ್ ಸೆಲೆಬ್ರೇಟ್’ ಎನ್ನುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಲ್ಲಿನ ನಿರ್ಗತಿಕ ಮಕ್ಕಳೊಂದಿಗೆ ಪ್ರತಿ ತಿಂಗಳೂ ಹುಟ್ಟುಹಬ್ಬದಾಚರಣೆಗಳ ಮೂಲಕ ಸಂತಸ ಸಿಂಚನ ಮಾಡುವ ಕೆಲಸ ಮಾಡಿಬರುತ್ತಾರೆ ಅಕ್ಕ-ತಂಗಿಯರಿಬ್ಬರೂ. ಸೀಮಾ 8 ವರ್ಷಗಳಿಂದ ಗರ್ಲ್ ಸ್ಕೌಟ್‌ನಲ್ಲಿದ್ದು ಈಗ ಕೆಡೆಟ್ ಆಗಿದ್ದಾಳೆ. ಅನಾಥಾಶ್ರಮದಲ್ಲಿ ‘ಲೆಟ್ಸ್ ಲಿಟರೇಟ್’ ಕಾರ್ಯಕ್ರಮದಡಿ ಗ್ರಂಥಾಲಯ ನಡೆಸುವ ಹೊಣೆಹೊತ್ತಿದ್ದಾಳೆ. ಇತ್ತ ಕೇರಿ-ರ್ಯಾಲೆ ಪ್ರದೇಶದಲ್ಲಿ ಕನ್ನಡ ಭಾಷೆ-ಸಾಹಿತ್ಯದಲ್ಲಿ ಆಸಕ್ತ ಸ್ನೇಹಿತರನ್ನು ಸೇರಿಸಿ ತಂದೆ-ತಾಯಿಗಳು ರೂಪಿಸಿರುವ ‘ಹರಟೆಕಟ್ಟೆ’ ಕಾರ್ಯಕ್ರಮದಲ್ಲೂ ಭಾಗವಹಿಸಿ ಕನ್ನಡ ಪುಸ್ತಕಗಳ ಗ್ರಂಥಾಲಯ ತೆರೆದಿದ್ದಾರೆ ಈ ಬಾಲಕಿಯರು!
ಈ ವರ್ಷ ಜುಲೈ-ಆಗಸ್ಟ್‌ನಲ್ಲಿ ಮೈಸೂರಿಗೆ (ಅಜ್ಜನಮನೆಗೆ ಭೇಟಿ; ಸಿಂಧು-ಸೀಮಾಗೆ ಅಮ್ಮ-ಅಪ್ಪ ಇಬ್ಬರ ಕಡೆಯಿಂದಲೂ ಎಲ್ಲ ಸಂಬಂಧಿಕರು ಮೈಸೂರಲ್ಲೇ ಇರೋದು) ರಜಾದಿನಗಳಲ್ಲಿ ಹೋಗಿದ್ದ ಸಂದರ್ಭದಲ್ಲಿ ಅಲ್ಲಿನ ಜ್ಯೋತಿನಗರ ಹಾರ್ಸ್‌ಲೇನ್ ಸರಕಾರಿ ಶಾಲೆಯಲ್ಲಿ ಸುಮಾರು 600 ವಿದ್ಯಾರ್ಥಿಗಳೆದುರು ‘ಟೂಟಿ ಫ್ಲೂಟಿ ಟ್ಯೂನ್ಸ್’ ಎನ್ನುವ ಸಂಗೀತ ರಸಾಸ್ವಾದ ಕಾರ್ಯಕ್ರಮವನ್ನು ನಡೆಸಿ, ಮಧ್ಯಮವರ್ಗದ ಆ ಮಕ್ಕಳಿಗೆ ಸಂಗೀತ-ಭಾರತೀಯ ಸಂಗೀತ- ಪಾಶ್ಚಾತ್ಯಸಂಗೀತದ ಘಮವನ್ನು ಪರಿಚಯಿಸಿ ಬಂದಿದ್ದಾರೆ ಈ ಸೋದರಿಯರು.
ಇದೀಗ ನವರಾತ್ರಿ ಹಬ್ಬದ ಪ್ರಯುಕ್ತ ಕೇರಿಯಲ್ಲಿನ ತಮ್ಮ ಮನೆಯಲ್ಲಿ ‘ಗೊಂಬೆ’ಗಳನ್ನಿಟ್ಟು ಪೂಜಿಸುವುದರಲ್ಲಿ ಅಮ್ಮನಿಗೆ ನೆರವಾಗಿ ಪೂಜಾವಿಶೇಷವಾಗಿ ಭಕ್ತಿನಾದ ಕೊಳಲುವಾದನ ನಡೆಸುತ್ತಿದ್ದಾರೆ. ಪ್ರತಿಭಾಸಂಪತ್ತಿನಿಂದ ತುಳುಕುವ ಈ ಮುದ್ದು ಮಣಿಗಳ ಮನಸ್ಸು-ಹೃದಯ ನಿಜಕ್ಕೂ ಎಷ್ಟು ಮುಗ್ಧ ಮತ್ತು ಮಾನವೀಯ ಎಂಬುದಕ್ಕೆ ಪುರಾವೆಯಾಗಿ ಅವರೇ ರಚಿಸಿದ ಈ Our Favorite Things... ಎಂಬ ಮಜಾ ಹಾಡನ್ನು ಓದಿ.
Our favorite things... (Inspiration from "Sound of Music" tune)
Wearing silk jammies and snuggled under blankets,
Cuddled up with mom, dad to hear bed time stories,
Giggling and tickling and hugging squishy bears,
These are the few our favorite things..,
Idli and sambar with benne to top it
Dose and palya and jamoon and uppit
Mosaranna kalsood with whole mango pickles
These are the few of our favorite things..,
Talking and chatting and emailing buddies
Shopping and dressing and going to parties
Sleepovers, makeovers, popcorn with movies
These are the few of our favorite things..,
Flooting and singing and writing the poems
Garba, raas, dhandiya, dancing to rhythms
Summer vacations at grandma’s and grandpa’s
These are the few of our favorite things..,
NO homework, NO project, NO exam studies
NO cleaning, NO mopping, NO daily routines
NO punishing, NO grounding, NO screaming yelling
These are the few of our least favorite things..,
When our mom screams and our dad yells
When we feel sooooo sad..,
We simply remember our favorite things,
And then we don’t feel soooooo bad.
ಸವಿಗನ್ನಡದ ಸಿಹಿಭಾವನೆಗಳಿಗೆ ಇದು ಕನ್ನಡಿಯಾಗಿದೆಯಲ್ಲವೆ? ಸಿಂಧು-ಸೀಮಾ ಸೋದರಿಯರ ಪ್ರತಿಭೆ, ಸಮಾಜಸೇವೆ, ಭಾಷಾ-ಸಂಸ್ಕೃತಿ ಪ್ರೇಮ ಹೀಗೇ ಮೆರೆಯುತ್ತ ಮುನ್ನಡೆಯಲಿ ಎಂದು ನಾವೆಲ್ಲ ಹಾರೈಸೋಣ. ಸಿಂಧು-ಸೀಮಾ ಮತ್ತು ಹೆತ್ತವರ ಇ-ಪರಿಚಯ ಮಾಡಿಕೊಳ್ಳಬಯಸುತ್ತೀರಾದರೆ ಅವರ ಇ-ವಿಳಾಸ: [email protected]
/ ಎನ್‌ಆರ್‌ಐ-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ -
April 12 Horoscope: 12 ರಾಶಿಗಳಿಗೆ ಇಂದು ಹಣ-ಪ್ರೇಮದಲ್ಲಿ ಅದೃಷ್ಟ ಯಾರಿಗೆ? ಸಂಪೂರ್ಣ ವಿವರ -
IPL 2026: ಗಿಲ್ ಮತ್ತು ಬಟ್ಲರ್ ಸ್ಫೋಟಕ ಬ್ಯಾಟಿಂಗ್, ಎಲ್ಎಸ್ಜಿ ಮಣಿಸಿದ ಗುಜರಾತ್ ಟೈಟಾನ್ಸ್ -
Asha Bhosle: ಭಾರತೀಯ ಸಿನಿಮಾ ರಂಗದ ಖ್ಯಾತ ಗಾಯಕಿ ಆಶಾ ಭೋಸ್ಲೆ ಇನ್ನಿಲ್ಲ, ಸಂಗೀತ ರಾಣಿ ಎಂದೇ ಖ್ಯಾತಿ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Vijay: ನಟ, ರಾಜಕಾರಣಿ ವಿಜಯ್ ಮಹತ್ವದ ಟ್ವೀಟ್ - ಅಪ್ರಬುದ್ಧ ರಾಜಕಾರಣಿ ಎಂದ ಡಿ.ಕೆ ಶಿವಕುಮಾರ್ Tamil Nadu Assembly Election -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು?






















Click it and Unblock the Notifications