ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಅಕ್ಕ’ ಅಧ್ಯಕ್ಷರಾಗಿ ಕುದೂರು ಮುರುಳಿ

By Staff
|
Google Oneindia Kannada News
S.K.Shamasundara, Editor ಎಸ್ಕೆ. ಶಾಮಸುಂದರ
[email protected]

Dr. Kudur Murali ಬೆಂಗಳೂರು : ಡೆಟ್ರಾಯಿಟ್‌ ನಿವಾಸಿ, ಖ್ಯಾತ ಪಶು ವೈದ್ಯ ಡಾ. ಕುದೂರು ಮುರುಳಿ ಉತ್ತರ ಅಮೆರಿಕ ಕನ್ನಡ ಕೂಟಗಳ ಆಗರದ (ಅಕ್ಕ) ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾವೇರಿ ಕನ್ನಡ ಸಂಘದ ರಾಮಚಂದ್ರನ್‌ ಸುರೇಶ್‌ ಅವರನ್ನು ಭಾರಿ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

ಪ್ರಸಕ್ತ ಸಾಲಿನಿಂದ ಮೂರು ಉಪಾಧ್ಯಕ್ಷ ಸ್ಥಾನಗಳನ್ನು ಕಲ್ಪಿಸಲಾಗಿದ್ದು ಉಪಾಧ್ಯಕ್ಷರಾಗಿ ಡಾ. ರೇಣುಕ ರಾಮಪ್ಪ, ಪ್ರಭುದೇವ್‌ ಮತ್ತು ಶರಣಬಸವರಾಜುರ್‌ ಆಯ್ಕೆಯಾಗಿದ್ದಾರೆ. ಹರೀಶ್‌ ಹಿರೇಮಠ್‌ ಹಾಗೂ ಶಾಂತರಾಜ್‌ ಜಂಟಿ ಕಾರ್ಯದರ್ಶಿಗಳಾಗಿ ನೇಮಕಗೊಂಡಿದ್ದರೆ, ಟೊರೆಂಟೊದ ಶಾಮಯ್ಯ ಶೆಟ್ಟಿ ಮತ್ತು ವಿಜಯ ಭಟ್‌ ಅವರು ಜಂಟಿ ಖಚಾಂಜಿಯಾಗಿ ಗೆಲುವು ಸಾಧಿಸಿದ್ದಾರೆ.

ಅಧ್ಯಕ್ಷ, ಉಪಾಧ್ಯಕ್ಷ ಮತ್ತಿತರ ಕಾರ್ಯಕಾರಿ ಸಮಿತಿಯ ಸ್ಥಾನಗಳಿಗೆ ಇತ್ತೀಚೆಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಕಳೆದ ಶನಿವಾರ (19 ಜುಲೈ) ನಡೆಯಿತು. ಈ ಬಾರಿಯ ಚುನಾವಣೆ ಅನೇಕ ಅಚ್ಚರಿಯ ಫಲಿತಾಂಶಗಳನ್ನು ಹಾಗೂ ಕೆಲವು ಸಂವಿಧಾನಾತ್ಮಕ ಜಿಜ್ಞಾಸೆಗಳನ್ನು ಹುಟ್ಟುಹಾಕಿದೆ ಎಂದು ಬೆಂಗಳೂರನ್ನು ತಲುಪಿರುವ ವರ್ತಮಾನಗಳು ತಿಳಿಸಿವೆ.

ಕಾರ್ಯದರ್ಶಿ ಮತ್ತು ಖಚಾಂಜಿ ಸ್ಥಾನಕ್ಕೆ ನಡೆದ ತೀವ್ರ ಪೈಪೋಟಿಯಲ್ಲಿ ಸ್ಪರ್ಧೆಯಲ್ಲಿದ್ದ ಅಭ್ಯರ್ಥಿಗಳು ಸಮಾನ ಸಂಖ್ಯೆಯ (Dead Heat) ಮತಗಳನ್ನು ಗಳಿಸಿ ಸಮಬಲರೆನಿಸಿಕೊಂಡಿದ್ದಾರೆ. ಸುಪ್ರಿಯ ದೇಸಾಯಿ (ಉತ್ತರ ಕೆರೊಲಿನ) ಮತ್ತು ವಾಸಂತಿ ಗೌಡ (ಚಿಕಾಗೊ) ಅವರಲ್ಲಿ ಯಾರು ಕಾರ್ಯದರ್ಶಿ ಆಗಬೇಕು ಎನ್ನುವುದು ಇತ್ಯರ್ಥವಾಗಬೇಕಾಗಿದೆ. ಅದೇ ರೀತಿ ಖಜಾಂಚಿ ಸ್ಥಾನಕ್ಕೆ ಸಮಸಂಖ್ಯೆಯಲ್ಲಿ ಮತಗಳಿಸಿರುವ ಡೆಟ್ರಾಯಿಟ್‌ನ ರಮೇಶ್‌ ಗೌಡ ಮತ್ತು ಲಾಸ್‌ಏಂಜಲಿಸ್‌ನ ಕೆ. ಕೃಷ್ಣ ಮೂರ್ತಿ ನಡುವೆ ಡೆಡ್‌ಲಾಕ್‌ ಸ್ಥಿತಿ ಉಧ್ಭವವಾಗಿದೆ.

ಇಸವಿ 2000ದಲ್ಲಿ ನಡೆದ ಚುನಾವಣೆಯಲ್ಲಿ ಕೂಡ ಇಂತಹುದೇ ಒಂದು ಪರಿಸ್ಥಿತಿ ಉಂಟಾಗಿತ್ತು . ಉಪಾಧ್ಯಕ್ಷ ಸ್ಥಾನಕ್ಕೆ ಡಾ. ರೇಣುಕಾ ರಾಮಪ್ಪ ಮತ್ತು ಡಾ. ಎಚ್‌. ವೈ. ಕೃಷ್ಣಮೂರ್ತಿ ಅವರಿಗೆ ಮತಪ್ರೋತ್ಸಾಹ ಸಮಸಮನಾಗಿ ಸಿಕ್ಕಿತ್ತು. ಇಂತಹ ಸ್ಥಿತಿಯಿಂದ ಪಾರಾಗಲು ಆಗಿನ ಆಡಳಿತ ಮಂಡಳಿ ಒಂದಿದ್ದ ಉಪಾಧ್ಯಕ್ಷ ಸ್ಥಾನವನ್ನು ಎರಡಕ್ಕೇರಿಸಿತ್ತು. ಇಂತಹ ಮಾರ್ಪಾಟುಗಳನ್ನು ಆಡಳಿತ ಮಂಡಳಿ ಕೈಗೊಳ್ಳಬಹುದು. ಆದರೆ, ಇಂತಹ ತಾತ್ಕಾಲಿಕ / ಔಪಚಾರಿಕ ತೀರ್ಮಾನಗಳ ಬಗ್ಗೆ ಮುಂದಿನ ಸರ್ವಸದ್ಯರ ಸಭೆಯಲ್ಲಿ ವಿಷಯ ಮಂಡಿಸಿ ಮಹಾಸಭೆಯ ಒಪ್ಪಿಗೆಯನ್ನು ಪಡೆಯುವುದು ಅವಶ್ಯಕವೆನಿಸುತ್ತದೆ.

ಗೆಲುವು ಸಾಧಿಸಿದ ಅಭ್ಯರ್ಥಿಗಳ ನಡುವೆ ಸಮಬಲ ಪರಿಸ್ಥಿತಿ ನಿರ್ಮಾಣವಾದಾಗ ನಿಭಾಯಿಸುವುದಕ್ಕೆ ಹಲಕೆಲವು ಮಾರ್ಗೋಪಾಯಗಳಿವೆ. ಅದರಲ್ಲಿ ಸಾರ್ವಕಾಲಿಕವಾದದ್ದು ಗೆಲುವು ಸಾಧಿಸಿದ ಅಭ್ಯರ್ಥಿಗಳ ನಡುವೆ ‘ ಸಹಮತ ’. ಅಥವಾ ನಾಣ್ಯ ಚಿಮ್ಮುವ ಮೂಲಕ ಅಂತಿಮ ಫಲಿತಾಂಶ ನಿರ್ಧಾರ. ಅಥವಾ ನಿರ್ದೇಶಕ ಮಂಡಳಿ ಒಟ್ಟಾಗಿ ಕಲೆತು ಸೂಚಿಸಬಹುದಾದ ಯಾವುದೇ ಪರಿಹಾರಗಳು. ಇವ್ಯಾವೂ ಪ್ರಯೋಜನಕ್ಕೆ ಬರದಿದ್ದರೆ ಕೊನೆಗೆ ಉಳಿದಿರುವುದು ರಾಬರ್ಟ್‌ ರೂಲ್‌ ಆಫ್‌ ಲಾ!!

ಅಕ್ಕ ನಿರ್ದೇಶಕ ಮಂಡಳಿಗೆ ಕಳೆದ ಮೇನಲ್ಲಿ ಚುನಾವಣೆಗಳು ನಡೆದು ನಿದೇಶಕರ ಆಯ್ಕೆ ಸಲೀಸಾಗಿ ನಡೆದಿತ್ತು. ಆದರೆ, ಕಾರ್ಯಕಾರಿ ಸಮಿತಿಗೆ ಮತದಾನ ಬೇಡ, ಸಹಮತದಿಂದ ಸ್ಥಾನಗಳ ಹಂಚಿಕೆ ಆಗಲಿ ಎನ್ನುವುದು ಕೆಲವು ಹಿರಿಯ ಸದಸ್ಯರ ಅಭಿಪ್ರಾಯವಾಗಿತ್ತು. ಸಹಮತದ ಗೊಡವೆಯೇ ಬೇಡ, ಭೇಷರತ್ತಾಗಿ, ಸ್ನೇಹ ವಾತಾವರಣದಲ್ಲಿ ಚುನಾವಣೆಗಳು ನಡೆದುಹೋಗಲಿ ಎಂಬ ಇನ್ನುಳಿದ ಸದಸ್ಯರ ಅಭಿಪ್ರಾಯಕ್ಕೆ ಮನ್ನಣೆ ದೊರೆತು ಮತದಾನ ನಡೆಯಿತು. ಪ್ರಜಾಪ್ರಭುತ್ವ ಅಷ್ಟರಮಟ್ಟಿಗೆ ಪ್ರತಿಷ್ಠಾಪನೆ ಆಯಿತು. ಒಟ್ಟು ಮತದಾರರ ಸಂಖ್ಯೆ 41. ಚಲಾಯಿತ ಮತಗಳು 36.

ನೂತನ ಪದಾಧಿಕಾರಿಗಳ ಸಂಪೂರ್ಣ ಪಟ್ಟಿ ಯನ್ನು ನೀಡುವ ಅಧಿಕೃತ ಪ್ರಕಟಣೆಯನ್ನು ಅಕ್ಕ ಚುನಾವಣಾ ಅಧಿಕಾರಿಗಳಿಂದ ನಿರೀಕ್ಷಿಸಲಾಗುತ್ತಿದೆ. ಚುನಾವಣಾ ಅಧಿಕಾರಿಗಳಾದ ಡಾ. ಆಂಜನಪ್ಪ ಅವರು ಚುನಾವಣಾ ಕಾನೂನುಗಳನ್ನು ಆದ್ಯಂತವಾಗಿ ಪರಿಶೀಲಿಸುತ್ತಿದ್ದು ಇನ್ನೆರಡು ವಾರದೊಳಗೆ ಫಲಿತಾಂಶ ಹೊರಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

Suggested Reading: Roberts Rules of Order Revised- by General Henry M. Robert
Suggested Browsing : AKKA Directors Special

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X