ಕೆಸಿಎ : ಸಂಭ್ರಮದ ಯುಗಾದಿಯಾಂದಿಗೆ ಚುನಾವಣೆ ಬೇವುಬೆಲ್ಲ
ದಕ್ಷಿಣ ಕ್ಯಾಲಿಫೋರ್ನಿಯಾ ಕನ್ನಡ ಸಂಘದ ಯುಗಾದಿ ಹಬ್ಬದ ಆಚರಣೆ ಪ್ರಾರಂಭವಾಗಿದ್ದು ಚುನಾವಣೆಯಿಂದಲೇ. ಮೊದಲೇ ಬಂದು ಬ್ಯಾಲೆಟ್ ಬಾಕ್ಸ್ ಹಿಡಿದವರು ಸೂರ್ಯಪ್ರಕಾಶ್. ಬಂದವರಿಗೆ ಬೇವು ಬೆಲ್ಲ ಹಂಚಿದ ಚಲನ್ ಮನೆಯವರು, ಚುನಾವಣೆಯೂ ಬೇವುಬೆಲ್ಲ ಇದ್ದಂತೆ ಎನ್ನುವ ಮಾತಿನ ಸುಳಿವನ್ನು ಕೊಟ್ಟಂತಿತ್ತು.
ಈ ಬಾರಿಯ ಚುನಾವಣೆಗೆ ಸದಸ್ಯರೂ ಬಹಳ ಸಂಖ್ಯೆಯಲ್ಲಿ ಬಂದು ಬಹಳ ಉತ್ಸಾಹದಿಂದ ಭಾಗವಹಿಸಿದ್ದು ಒಂದು ಉತ್ತೇಜಕರ ವಿಷಯ. ಚುನಾವಣೆಯಲ್ಲಿ ಭಾಗವಹಿಸಿದ್ದೇ ಅಲ್ಲ , ಚುನಾವಣೆಯಲ್ಲಿ ನಿಂತ ಅಭ್ಯರ್ಥಿಗಳಿಗೆ ಹುರಿದುಂಬಿಸುತ್ತಿದ್ದುದು ಹೊಸರೀತಿಯ ಬೆಳವಣಿಗೆ. ಪ್ರತಿ ಬಾರಿ ಚುನಾವಣೆಗೆ ಎಷ್ಟು ಅಭ್ಯರ್ಥಿಗಳಿದ್ದಾರೆಂಬುದು ಅರಿವಿಲ್ಲದೇ ಕಡೇ ಗಳಿಗೆಯಲ್ಲಿ ಬಂದು ಕೇಳುತ್ತಿದ್ದ ಪ್ರಸಂಗಗಳು ಇರುತ್ತಿದ್ದವು. ಆದರೀ ಸಲ ಚುನಾವಣಾ ಬಿಸಿ ಎಲ್ಲರಿಗೂ ತಟ್ಟಿದಂತಿತ್ತು. ಎಲ್ಲ ಸದಸ್ಯರು ಮುಂಗಡವಾಗಿಯೇ ಅಭ್ಯರ್ಥಿಗಳ ನಿರ್ಧಾರ ಮಾಡಿಕೊಂಡು ಬಂದತ್ತಿತ್ತು.
ಚುನಾವಣಾ ಫಲಿತಾಂಶಕ್ಕೆ ಕಾಯುತ್ತಿದ್ದೀರಲ್ಲವೇ? ತಡೆಯಿರಿ. ಇನ್ನೂ ಚುನಾವಣೆ ನಡೆಯುತ್ತಿದೆ. ಸಮಯಕ್ಕೆ ಸರಿಯಾಗಿ ತಮ್ಮ ಅಧ್ಯಕ್ಷಗಿರಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿ ಕೊಂಡುಬಂದು, ಹೊರ ಹೊರಟು ನಿಂತಿರುವ ನಾಗರಾಜ್ ತಮ್ಮ ಕಡೆಯ ಕಾರ್ಯಕ್ರಮದಲ್ಲೂ ಮಿಂಚಿದರು. ಮಳೆಯ ಪ್ರಯುಕ್ತ ಸದಸ್ಯರು ತಡವಾಗಿ ಬರುತ್ತಿದ್ದರೂ, ಸರಿಯಾದ ವೇಳೆಗೆ ಕಾರ್ಯಕ್ರಮ ಪ್ರಾರಂಭಿಸಿದ ನಾಗರಾಜ್ ಜೈ ಎನಿಸಿಕೊಂಡರು. ಖಜಾಂಚಿ ನಾಗನಗೌಡ ವಾರ್ಷಿಕ ವರದಿಯನ್ನು ಓದಿದ ನಂತರ ಅಧ್ಯಕ್ಷರಿಂದ ಭಾಷಣ, ನಂತರ ಮಹಾಸಭೆ ಮುಕ್ತಾಯವಾಯಿತು.
ಯುಗಾದಿ ಹಬ್ಬಕ್ಕೆ ಸದಸ್ಯರೆಲ್ಲರನ್ನೂ ರಂಜಿಸಲು ಸ್ಯಾನಹೊಸೆಯಿಂದ ಕರೆಸಲಾಗಿದ್ದ ‘ಸುರಭಿ’ ವಾದ್ಯಗೋಷ್ಠಿ ಗೆಳೆಯರು ಸುಶ್ರಾವ್ಯವಾದ ಕನ್ನಡ ಚಿತ್ರಗೀತೆಗಳನ್ನು ಹಾಡಿ ಎಲ್ಲರ ಮನಗೆದ್ದರು. ಸುಮಾರು ಎರಡು ಘಂಟೆಗಳ ಕಾಲ ರಂಜಿಸಿದ ನಂತರ ಎಲ್ಲರ ಕುತೂಹಲ ಚುನಾವಣೆಯ ಪಲಿತಾಂಶದತ್ತ ತಿರುಗಿತ್ತು. ಚುನಾವಣಾಧಿಕಾರಿ ಪದ್ಮನಾಭ ತ್ಯಾಮಗೊಂಡ್ಲು ಅವರು ಫಲಿತಾಂಶದ ಪಟ್ಟಿಯಾಂದಿಗೆ ಮೈಕಾಸುರನನ್ನು ಕೈಯಲ್ಲಿ ಹಿಡಿದಾಗ ಭಾಗವಹಿಸಿದ ಆಭ್ಯರ್ಥಿಗಳಲ್ಲೇಕೆ ಸದಸ್ಯರಲ್ಲೂ ಕುತೂಹಲದ ಜ್ವರ.
ಯಾವುದೇ ಕ್ರಮದಲ್ಲಿ ಇರದ ಪಟ್ಟಿಯನ್ನು ಓದುತ್ತಾ ಹೋದಂತೆ ಗೆದ್ದ ಅಭ್ಯರ್ಥಿಗಳನ್ನು ರಂಗದ ಮೇಲೆ ಕರೆಯಲಾಯಿತು. ಆ ಪಟ್ಟಿ ಹೀಗಿತ್ತು:
- ಸುಮಾ ಭಟ್
- ವಲ್ಲೀಶ ಶಾಸ್ತ್ರಿ
- ಸುದರ್ಶನ್ ಚಲನ್
- ಶಂಖಂ ಜಗನ್ನಾಥ್
- ಹೊಸ್ಕೆರೆ ಸೋಮಶೇಖರ್
- ಪಾರ್ಥ ರಾಮಶಾಸ್ತ್ರಿ
- ನಾಗನಗೌಡ
- ವಿಜಯ ಕೊಟ್ರಪ್ಪ
ಮೌನ ಮುರಿದು, ನಿಧಾನವಾಗಿ ಚುನಾವಣಾಧಿಕಾರಿಗಳು ಕರೆದರು-
ಸುಮಾ ಮೂರ್ತಿ.
ಆಗ, ಸುಮಾ ಮೂರ್ತಿಯವರಿಗಾದ ಆನಂದ ಹೇಳತೀರದು.
ಚುನಾವಣೆಯಲ್ಲಿ ಗೆದ್ದು ವಿಜೇತರಾದವರು ಮೇಲಿನ 9 ಮಂದಿಯಾದರೆ, ಸೋತು ಗೆದ್ದವರು ಚುನಾವಣೆಯಲ್ಲಿ ಸೋತವರು. ಚುನಾವಣೆಗೆ ನಿಂತಿರುವುದೇ ಗೆದ್ದಂತೆ, ನನ್ನ ದೃಷ್ಟಿಯಲ್ಲಿ. ಏಕೆಂದರೆ, ಬಹಳಷ್ಟು ಜನ ಯಾವಾಗ ಕೇಳಿದರೂ, ‘ಯಾವ ಕೆಲಸಕ್ಕೆ ಕೇಳಿದರೂ ನಾನು ಹಾಜರ್’ ಅಂತ ಹೇಳ್ತಾರ್ಯೆ ಹೊರ್ತು, ಕೆಲಸದ ಸಮಯದಲ್ಲಿ ಇರುವುದಿಲ್ಲ. ಚುನಾವಣೆಗೆ ನಿಂತ ಅಭ್ಯರ್ಥಿಗಳು ತಾವು ನಿಜವಾಗಲೂ ಮುಂದೆ ಬರ್ತೀವಿ ಅನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವುದು ಸೋಲುವುದು ಬೇರೆ ವಿಚಾರ. ಚುನಾವಣೆಗೆ ನಿಂತು ತಾನು ಕನ್ನಡ ಸೇವೆ ಮಾಡಲು ಮುಂದೆ ಬಂದಿದ್ದೇನೆ ಎನ್ನುವುದನ್ನು ತೋರಿಸಿದ್ದಾರಲ್ಲಾ , ಅದೇ ಅವರ ಗೆಲುವು.
ವಿಜೇತ ಅಭ್ಯರ್ಥಿಗಳಿಗೆ ಶುಭಾಶಯಗಳು. ಮುಂದಿನ ಮಹತ್ತರ ಕಾರ್ಯ ಅಧ್ಯಕ್ಷ ಪದವಿ. ಅದಕ್ಕೆ ಕಾದು ನೋಡಿ...












Click it and Unblock the Notifications