ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಜಗವೊಂದು ನ್ಯಾಯಾಲಯ !

By Staff
|
Google Oneindia Kannada News
Triveni Srinivasa Rao ಕೆ.ತ್ರಿವೇಣಿ ಶ್ರೀನಿವಾಸರಾವ್‌
ಇಲಿನಾಯ್‌, ಅಮೆರಿಕಾ
(ತವರು : ಕಡೂರು - ಚಿಕ್ಕಮಗಳೂರು ಜಿಲ್ಲೆ)

[email protected]

Scale of Justice ನನಗೆ ಮೊದಲಿನಿಂದಲೂ ಚಲನಚಿತ್ರ, ಧಾರಾವಾಹಿಗಳಲ್ಲಿ ಬರುವ, ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯ ದೃಶ್ಯಗಳೆಂದರೆ ಬಹಳ ಆಸಕ್ತಿ. ಆದರೆ ನನಗೆ ಈ ನ್ಯಾಯಾಲಯಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬ ಬಗ್ಗೆ ಅಷ್ಟೇನೂ ತಿಳುವಳಿಕೆ ಇಲ್ಲ. ನನ್ನ ಸೋದರಮಾವನವರೊಬ್ಬರು ಶಿವಮೊಗ್ಗದ ಪ್ರಖ್ಯಾತ ವಕೀಲರಾಗಿರುವುದೊಂದೇ ನ್ಯಾಯಾಂಗದೊಡನೆ ನನಗಿರುವ ನಂಟು!

ಒಮ್ಮೆ ನಮ್ಮ ಮಾವನವರಲ್ಲಿ ಕೇಳಿದ್ದೆ - ‘ಎಲ್ಲಾ ಸಿನಿಮಾಗಳಲ್ಲೂ ತೋರಿಸುವ ನ್ಯಾಯಾಲಯದ ಅತಿ ಸಾಮಾನ್ಯ ದೃಶ್ಯಗಳು - ನ್ಯಾಯದೇವತೆ ಕಣ್ಣಿಗೆ ಕಪ್ಪುಪಟ್ಟಿಯನ್ನು ಕಟ್ಟಿಕೊಂಡು ನ್ಯಾಯದ ತಕ್ಕಡಿಯನ್ನು ಕೈಲಿ ಹಿಡಿದಿರುವುದು, ‘ನ್ಯಾಯ ಎಲ್ಲಿದೆ?’ ಭಂಗಿಯಲ್ಲಿ ನಿಂತಿರುವ ಆರೋಪಿಗಳು, ತರ್ಕಬದ್ಧವಾಗಿ, ಪ್ರಾಸಬದ್ಧವಾಗಿ, ನಿರರ್ಗಳವಾಗಿ ತಮ್ಮ ವಾದ-ವಿವಾದವನ್ನು ಮಂಡಿಸುತ್ತಿರುವ ವಕೀಲರುಗಳು, ಆಸಕ್ತಿಯಿಂದ ವೀಕ್ಷಿಸಿ ತಲೆದೂಗುತ್ತಿರುವ ಜನಸ್ತೋಮ.... ಇದೇ ದೃಶ್ಯ ಎಲ್ಲಾ ಕೋರ್ಟುಗಳಲ್ಲೂ ಇರುವುದು ನಿಜವೇ?’ - ಎಂದು. ಬಹಳ ಸರಸ ಸ್ವಭಾವದವರಾದ ಅವರು, ನ್ಯಾಯದೇವತೆಯ ಪ್ರತಿಮೆ ಎಲ್ಲಾ ಕೋರ್ಟುಗಳಲ್ಲಿ ಕಡ್ಡಾಯವಲ್ಲದಿದ್ದರೂ, ವಕೀಲರ ಗದ್ದಲ ಮಿತಿಮೀರಿದಾಗ ನ್ಯಾಯಾಧೀಶರು ಥೇಟು ಸಿನಿಮಾದಲ್ಲಿ ತೋರಿಸುವಂತೆಯೇ ತಮ್ಮ ಬಳಿ ಇರುವ ಚಿಕ್ಕ ಸುತ್ತಿಗೆಯಿಂದ ಮೇಜನ್ನು ಮೂರು ಬಾರಿ ಕುಟ್ಟುವುದು ಮಾತ್ರ ನಿಜ ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು.

‘ನ್ಯಾಯಾಲಯ’ ಪದವನ್ನು ಕನ್ನಡದಲ್ಲಿ ಬರೆಯುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಸ್ವಲ್ಪವೇ ವ್ಯತ್ಯಾಸವಾದರೂ ‘ನ್ಯಾಯಲಯ’ ಎಂದಾಗಿ ವಿರುದ್ಧ ಅರ್ಥವನ್ನೇ ಹೊರಡಿಸಿಬಿಡುತ್ತದೆ! ಅದಿರಲಿ, ಕೋರ್ಟಿನ ಮೆಟ್ಟಿಲು ಹತ್ತಿದವರಿಗೆಲ್ಲಾ ನ್ಯಾಯ ಸಿಗುವುದು ನಿಜವೇ? ನ್ಯಾಯಾಧೀಶರು ಎಷ್ಟೇ ನಿಷ್ಪಕ್ಷಪಾತಿಯಾಗಿದ್ದರೂ, ಸತ್ಯ ಪರಾಯಣರೇ ಆಗಿದ್ದರೂ, ಅವರು ನೀಡುವ ನ್ಯಾಯ ವಕೀಲರ ವಾದವನ್ನು ಮಾತ್ರ ಅವಲಂಬಿಸಿರುತ್ತದೆಯಲ್ಲವೇ? ಉದಾಹರಣೆಗೆ ನಮ್ಮ ಕೃಷ್ಣರಾಜಸಾಗರದಲ್ಲಿ ದಿನ ಬಳಕೆಗೇ ಸಾಕಷ್ಟು ನೀರಿಲ್ಲದಿದ್ದರೂ ಅದನ್ನು ನ್ಯಾಯಾಲಯದೆದುರು ಸಮರ್ಥವಾಗಿ ವಿವರಿಸುವಲ್ಲಿ, ನಮ್ಮ ಕಡೆಯ ವಕೀಲರು ವಿಫಲರಾಗಿದ್ದರಿಂದ ಕರ್ನಾಟಕ ಸರಕಾರ ಮುಖಭಂಗ ಅನುಭವಿಸಬೇಕಾಗಿ ಬಂದ ಪ್ರಸಂಗವನ್ನು ಸ್ವಾಭಿಮಾನೀ ಕನ್ನಡಿಗರು ಇಷ್ಟು ಬೇಗ ಮರೆತಿರಲಾರರು!

ನಮ್ಮ ದೇಶದಲ್ಲಂತೂ ಈಗ ಅನೇಕ ಜನ ಪ್ರಸಿದ್ಧ ಕ್ರಿಮಿನಲ್‌ ಲಾಯರ್‌ಗಳಿದ್ದಾರೆ. ಒಬ್ಬ ಎಂತಹುದೇ ದೊಡ್ಡ ಅಪರಾಧ ಮಾಡಿರಲಿ, ಈ ವಕೀಲರುಗಳನ್ನು ಹಿಡಿದು ಅವರು ಕೇಳುವಷ್ಟು ಭಾರೀ ಮೊತ್ತ ಒಪ್ಪಿಸಿಬಿಟ್ಟರೆ ಸರಿ, ಅವನು ಕೇಸಿನಲ್ಲಿ ಗೆದ್ದಂತೆಯೇ ಎಂಬ ಭಾವನೆ ಇದೆ. ಈ ವಕೀಲರುಗಳು ತಮ್ಮ ಪ್ರಚಂಡ, ವಿತಂಡ ವಾದಗಳಿಂದ ಕಪ್ಪನ್ನು ಬಿಳಿಯೆಂದು ಸಾಧಿಸಬಲ್ಲರು, ಎತ್ತನ್ನು ಕತ್ತೆಯಾಗಿಸಬಲ್ಲರು! ಇಂತಹ ವಕೀಲರುಗಳು ತಮ್ಮ ಕಕ್ಷಿದಾರನನ್ನು ಏನಾದರೂ ಮಾಡಿ ಉಳಿಸಲು ನೋಡುತ್ತಾರೆಯೇ ಹೊರತು ನ್ಯಾಯ ಯಾವ ಕಡೆಗಿದೆ ಎಂಬುದು ಅವರಿಗೆ ನಿಜವಾಗಿಯೂ ಮುಖ್ಯವಾಗಿರುತ್ತದೆಯೇ?

ಈಗ ಹಿಂದಿ ಚಿತ್ರನಟ ಸಲ್ಮಾನ್‌ಖಾನನ ಪ್ರಕರಣವನ್ನೇ ನೋಡಿ- ಬೇಕರಿಯಲ್ಲಿ ದುಡಿದು ನಿದ್ರಿಸುತ್ತಿದ್ದ ಶ್ರಮಜೀವಿಯನ್ನು ಚಿರನಿದ್ರೆಯ ತಾಣಕ್ಕೆ ಅಟ್ಟಿದ ಈತನಿಗೆ ಇನ್ನೂ ಶಿಕ್ಷೆಯಾಗಿಲ್ಲ. ವಿಚಾರಣೆ ನಡೆಯುತ್ತಿದೆಯಾದರೂ ಅವನು ಕೇಸಿನಿಂದ ಹೇಗಾದರೂ ಪಾರಾಗಿ ಬರುವ ಸಾಧ್ಯತೆಯೇ ಹೆಚ್ಚು. ಇಂತಹವನ ಪರವಾಗಿ ವಾದಿಸುತ್ತಿರುವ ಜಾಣ ವಕೀಲ ತನ್ನ ಸಿರಿವಂತ ಕಕ್ಷಿದಾರನನ್ನು ನ್ಯಾಯದ ಹಿಡಿತಕ್ಕೆ ಅಷ್ಟು ಸುಲಭವಾಗಿ ಒಪ್ಪಿಸಲಾರ! ಈಗಾಗಲೇ ಇಂತಹದೇ ಪ್ರಕರಣಗಳಲ್ಲಿ ಸಿಕ್ಕು ಬಿದ್ದು, ಸಲೀಸಾಗಿ ಹೊರಬಂದಿರುವ ಅನೇಕ ಗಣ್ಯರ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ.

ಹಿಂದಿಯ ಹಿರಿಯ ನಟ ರಾಜಕುಮಾರ್‌ನ ಸುಪುತ್ರ ಪುರು ರಾಜಕುಮಾರ್‌, ನಟ ಆದಿತ್ಯ ಪಾಂಚೋಲಿ...... ಇವರನ್ನೆಲ್ಲ ಯಾವುದೇ ಶಿಕ್ಷೆಯಿಲ್ಲದೆ, ತೀರಾ ನಗಣ್ಯವಾದ ಮೊತ್ತವನ್ನು ದಂಡವಾಗಿ ಪಡೆದು, ಬಿಟ್ಟು ಬಿಡಲಾಯಿತು. ಸಲ್ಮಾನ್‌ಖಾನ್‌ ಪ್ರಕರಣದಲ್ಲಿ ಒಬ್ಬ ವ್ಯಕ್ತಿ ಮಾತ್ರ ಸಾವನ್ನಪ್ಪಿದ್ದರೆ, ಇವರುಗಳ ಕಾರಿನಡಿ ಸಿಕ್ಕು ಹತರಾದವರ ಸಂಖ್ಯೆ ಒಂದಕ್ಕಿಂತ ಹೆಚ್ಚು! ಅಂದರೆ, ಶ್ರೀಮಂತರು ತಮ್ಮ ಹಣದಿಂದ ಕಾರು, ಬಂಗಲೆಗಳನ್ನು ಕೊಳ್ಳುವಂತೆ ನ್ಯಾಯವನ್ನೂ ಕೂಡ ಕೊಳ್ಳಬಲ್ಲರೇನು? ಅಥವಾ ಅವರಿಗೇ ಬೇರೆ ನ್ಯಾಯವಿದೆಯೇ?

ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪು ವ್ಯತಿರಿಕ್ತವಾಗಿ ಹೊರಬಂದಾಗ ಜನ ಮಾತಾಡಿಕೊಳ್ಳುವುದುಂಟು - ‘ಬಿಡು, ಅವನಿಗೆ ಮನುಷ್ಯರ ಕೋರ್ಟಿನಲ್ಲಿ ಶಿಕ್ಷೆಯಾಗದಿದ್ದರೇನು? ದೇವರ ನ್ಯಾಯಾಲಯದಲ್ಲಿ ಶಿಕ್ಷೆಯಾಗುವುದು ಖಂಡಿತ’’ ಎಂದು. ಸರಿ, ಇಲ್ಲಿ ತಪ್ಪು ಮಾಡಿದ ಆತನಿಗೆ ಪರಲೋಕದಲ್ಲಿ ದಂಡನೆಯಾಗುತ್ತದೆ ಎಂದಿಟ್ಟುಕೊಂಡರೂ, ‘ಗೆದ್ದವನು ಸೋತ, ಸೋತವನು ಸತ್ತ’ ಎಂಬ ಗಾದೆ ಮಾತಿನಂತೆ ಈಗಾಗಲೇ ಇಹಲೋಕದ ಕೋರ್ಟಿಗೆ ಅಲೆದು ಅಲೆದು, ಕೈ ಬರಿದಾಗಿಸಿಕೊಂಡು, ಸೋತು ಸತ್ತಂತಿರುವ ಬಡಪಾಯಿಯ ಗತಿ ಏನು? ತನ್ನ ಧನಬಲವನ್ನು ಬಳಸಿಕೊಂಡು ನ್ಯಾಯಾಲಯದ ಜಾಳು ಜರಡಿಯಿಂದ ತೂರಿಕೊಂಡು ಈಗಾಗಲೇ ಹೊರ ಬಂದಿರುವ ಬಲಿಷ್ಟ, ತನ್ನ ವಿರುದ್ಧ ದನಿ ಎತ್ತಿ, ಸೋತು ಹೈರಾಣಾಗಿರುವ ದುರ್ಬಲನನ್ನು ಮತ್ತೆ ಹಿಡಿದು ಹಣಿಯಲಾರನೆಂಬುದಕ್ಕೆ ಯಾವ ಖಾತರಿ?

ನಮ್ಮ ನ್ಯಾಯಾಲಯಗಳ ವಿಳಂಬ ನೀತಿಯಂತೂ ಎಲ್ಲರಿಗೂ ಗೊತ್ತಿರುವಂತಹುದೇ. ಮಧ್ಯವಯಸ್ಸು ಮೀರಿದ ವ್ಯಕ್ತಿಯಾಬ್ಬ ಯಾವುದಾದರೂ ಅಪರಾಧದಲ್ಲಿ ಸಿಕ್ಕಿಕೊಂಡಲ್ಲಿ, ನೂರೆಂಟು ವಿಚಾರಣೆಗಳು ನಡೆದು ತೀರ್ಪು ಹೊರಬರುವಷ್ಟರಲ್ಲಿ, ಅವನು ಈ ಲೋಕದಿಂದಲೇ ಬಿಡುಗಡೆಯಾಗಿ ಹೋಗಿರಬಹುದು. ಆಗ ನ್ಯಾಯಾಲಯ ಕೊಡುವ ತೀರ್ಪಿನಿಂದ ಆಗುವ ಪ್ರಯೋಜನವಾದರೂ ತಾನೇ ಏನು? ಅಲ್ಲದೆ ಈ ವಿಚಾರಣೆಗಳಿಗೆ ಮಾಡಿದ ವೆಚ್ಚ ಕೂಡ ವ್ಯರ್ಥ!

ಇದೇ ಮಾತು ಏನೂ ಅಪರಾಧವನ್ನೇ ಮಾಡದೆ ಶಿಕ್ಷೆ ಅನುಭವಿಸಿದವರಿಗೂ ಅನ್ವಯವಾಗುತ್ತದೆ. ನ್ಯಾಯಾಲಯ ಅವರನ್ನು ನಿರಪರಾಧಿಗಳೆಂದು ಘೋಷಿಸಿ, ಸೆರೆಮನೆಯಿಂದ ಹೊರ ಪ್ರಪಂಚಕ್ಕೆ ಕಳಿಸುವಷ್ಟರಲ್ಲಿ, ಜೈಲಿನ ಕತ್ತಲೆ ಕೋಣೆಯಲ್ಲಿ ಬಾಳಿನ ಬಹು ಮುಖ್ಯ ವರ್ಷಗಳನ್ನು ಕಳೆದ ಅವರಲ್ಲಿ, ಹೊಸಜೀವನದ ಬಗ್ಗೆ ಕಿಂಚಿತ್ತೂ ಉತ್ಸಾಹ ಉಳಿದಿರುವುದಿಲ್ಲ! ಈ ಮೊದಲು ಕಟ್ಟಿಕೊಂಡಿದ್ದ ಚಂದದ ಬದುಕು ಅವರು ಹೊರಬರುವ ವೇಳೆಗೆ ಸರ್ವನಾಶವಾಗಿ ಹೋಗಿರುತ್ತದೆ! ‘ವಿಳಂಬಿತ ನ್ಯಾಯ ತಿರಸ್ಕೃತ ನ್ಯಾಯಕ್ಕೆ ಸಮ’ ಎಂಬ ಹೇಳಿಕೆಯಲ್ಲಿ ಅದೆಷ್ಟು ಅರ್ಥ ಅಡಗಿದೆ?

ದಿನ ನಿತ್ಯ ಪತ್ರಿಕೆ ಓದುವ ಅಭ್ಯಾಸವಿದ್ದವರಿಗೆಲ್ಲಾ ತಿಳಿದೇ ಇರುತ್ತದೆ. ಕೊಲೆ, ಸುಲಿಗೆ, ದರೋಡೆ, ಇಲ್ಲದ ಮಾನ ನಷ್ಟವಾಯಿತೆಂದು ಹೂಡುವ ಮೊಕದ್ದಮೆಗಳು..... ಪತ್ರಿಕೆಗಳ ಬಹುಪಾಲು ಜಾಗವನ್ನು ಇಂತಹ ವಾರ್ತೆಗಳೇ ಆಕ್ರಮಿಸಿರುತ್ತವೆ! ಪ್ರತಿದಿನ ತಣ್ಣಗೆ ನಡೆದು ಹೋಗುವ ಅದೆಷ್ಟು ಅಪರಾಧಗಳು! - ಅವುಗಳನ್ನು ಬಯಲಿಗೆಳೆಯುವ ಪೋಲೀಸರು, ಅದರ ಜಾಡು ಹಿಡಿದು, ತನಿಖೆ ನಡೆಸಿ, ವರ್ಣರಂಜಿತ ವರದಿ ಬರೆಯುವ ಪತ್ರಕರ್ತರು, ಇದೇ ವೃತ್ತಿಯಾಗಿರುವ ವಕೀಲರುಗಳು, ಕಾಸು ಎಣಿಸಿಕೊಂಡೇ ಕಟಕಟೆ ಏರುವ ಸಾಕ್ಷಿದಾರರು....... ಈ ಸಂತೆಗದ್ದಲದಲ್ಲಿ ಸತ್ಯ ಅದೆಲ್ಲಿ ಅಡಗಿರುತ್ತದೋ? ನ್ಯಾಯ ಇನ್ನೆಲ್ಲಿ ಕಣ್ತಪ್ಪಿಸಿ ಅಲೆಯುತ್ತಿರುತ್ತದೋ? ಕಂಡೂ ಕಾಣದಂತೆ, ಸಿಕ್ಕೂ ಸಿಗದಂತೆ ಸತಾಯಿಸುತ್ತಿರುವ ಈ ಸತ್ಯ, ನ್ಯಾಯಗಳನ್ನು ಪಾತಾಳದಲ್ಲಿ ಹೊಕ್ಕು ಶೋಧಿಸಿ ತರಬಲ್ಲ ಧೀರರು ಎಲ್ಲಿಹರು?

ಯಾವುದಾದರೂ ಒಬ್ಬ ಅಪರಾಧಿಗೆ ನ್ಯಾಯಾಲಯದಲ್ಲಿ ತಕ್ಕ ಶಿಕ್ಷೆಯಾದರೂ ಸಾಕು, ನಮ್ಮಂತಹ ಜನಸಾಮಾನ್ಯರ ಮುಖದ ಮೇಲೆ ಭರವಸೆಯ ಒಂದು ನಗು ದೊಡ್ಡದಾಗಿ ಅರಳುತ್ತದೆ. ಆ ಕ್ಷಣದಲ್ಲಿ ಸಾವಿರಾರು ಅಪರಾಧಿಗಳು ನ್ಯಾಯದ ಕಬಂಧ ಬಾಹುಗಳಿಂದ ತಪ್ಪಿಸಿಕೊಂಡು ರಾಜಾರೋಷವಾಗಿ ನಮ್ಮೆದುರೇ ತಿರುಗುತ್ತಿರುವ ಕಟುಸತ್ಯ ನಮಗೆ ಮರೆತೇ ಹೋಗಿರುತ್ತದೆ. ನಾವು ನ್ಯಾಯಾಂಗದ ಸುರಕ್ಷಿತ ನೆರಳಿನಲ್ಲಿದ್ದೇವೆ ಎಂಬ ಕ್ಷೇಮ ಭಾವನೆ ಮನಸ್ಸಿನಲ್ಲಿ ಮೂಡುತ್ತದೆ. ನಮ್ಮೆಲ್ಲರ ಈ ನಂಬಿಕೆಯನ್ನು ಚಿರಾಯುವಾಗಿಸಲು ನಮ್ಮ ನ್ಯಾಯ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲಿ! ನಮ್ಮ ತುಟಿಗಳ ಮೇಲೆ ಅರಳಿದ ಮಂದಹಾಸ ಬಹುಕಾಲ ಉಳಿಯಲಿ!!


ವಾರ್ತಾ ಸಂಚಯ
ಮುಂಬಯಿ: ಆಫ್ರಿಕಾ ನ್ಯಾಯಾಧೀಶರಿಂದ ಯುವತಿಯ ಮಾನಭಂಗ


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X