ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ನಯಾಗರ ಅನುಭವ

By Staff
|
Google Oneindia Kannada News

ರಾತ್ರಿಯಾದಂತೆಯೇ ಜಲಪಾತದ ಮೇಲೆ ಬಣ್ಣ ಬಣ್ಣದ ಲೈಟ್‌ ಹಾಕುತ್ತಾರೆ. ಆ ದೃಶ್ಯವನ್ನು ನೋಡಲಿಕ್ಕೆ ಎರಡು ಕಣ್ಣು ಸಾಲುವುದಿಲ್ಲ. ಇಡೀ ಜಲಪಾತ, ಗುಲಾಬಿ, ಹಸಿರು, ಬಿಳಿ, ಹಳದಿ ಹೀಗೆ ಬಣ್ಣ ಬಣ್ಣದ ಸೀರೆ ಉಟ್ಟಂತೆ ಭಾಸವಾದರೆ, ಆ ತುಂತುರುಗಳು ಬಣ್ಣವನ್ನು ಪ್ರತಿಫಲಿಸಿ ಇಡೀ ವಾತಾವರಣವನ್ನು ಬಣ್ಣದಿಂದ ತುಂಬಿಬಿಡುತ್ತವೆ. ಸ್ವರ್ಗದಲ್ಲಿ ನಿಂತಿರುವ ಭಾಸವಾಗುತ್ತದೆ. ಎಷ್ಟು ರಮಣೀಯ ! ಏನು ಅದ್ಭುತ ! ಆ ದೃಶ್ಯ ನೋಡಿದರೆ ಯಾರಾದರೂ ನಿಬ್ಬೆರಗಾಗಲೇಬೇಕು.

ವಿಶೇಷ ಸಂದರ್ಭಗಳಲ್ಲಿ, ರಾತ್ರಿ ಬಿರುಸು-ಬಾಣಗಳ ಪ್ರದರ್ಶನವೂ ಇರುತ್ತದೆ. ಇತ್ತ ಜಲಪಾತದ ಬಣ್ಣ, ಅತ್ತ ಬಾಣ-ಬಿರುಸುಗಳ ಬಣ್ಣ, ಎರಡೂ ಮೇಳೈಸಿ ಇಡೀ ವಾತಾವರಣ ಅದ್ಭುತವಾಗಿ ಗೋಚರಿಸುತ್ತದೆ. ಇದು ಯಾವ ಮಾಯನಗರಿಯ ಜಲಧಾರೆಯೋ, ಯಾವ ಶೃಂಗಾರ ಲೀಲೆಯ ಲಾಸ್ಯವೋ, ಎಲ್ಲ ರಸಗಳಿಂದ ಕೂಡಿದ ನರ್ತನವೋ ಎಂಬಂತೆ ಭಾಸವಾಗಿ ಕವಿ ಹೃದಯವನ್ನು ಸೂರೆ ಹೊಡೆಯುವ ದೃಶ್ಯ. ಜಲಪಾತದ ಮೇಲೆ ನಿಂತು ನೋಡಿದರೆ, ರಭಸದಿಂದ ಮುನ್ನುಗ್ಗುವ ಜಲಧಾರೆ. ಅಲ್ಲಿಯೇ ನಿಂತು ಕೆಳಗೆ ನೋಡಿದರೆ, ನೀರು ಬಂಡೆಗೆ ಅಪ್ಪಳಿಸಿ, ಹನಿಯಾಗಿ ಮಾರ್ಪಾಟು ಹೊಂದಿ, ಹತ್ತಿಯಂತೆ ಉದುರುತ್ತಾ ಮುಂದೆ ಸಾಗುವ ದೃಶ್ಯ. ಬಲಗಡೆ ನಿಂತು ನೋಡಿದರೆ ಒಂದು ಪ್ರತ್ಯೇಕ, ಸಣ್ಣ ಜಲಪಾತ, ಅದರ ರಭಸ ಹೇಳತೀರದು. ರಾತ್ರಿಯಾದರೂ, ಅದಕ್ಕೆ ಕೊಡುವ ಬಣ್ಣವೇ ಬೇರೆ, ಇಡೀ ಜಲಪಾತವನ್ನು ಒಂದು ಬಣ್ಣದಿಂದ ಅಲಂಕರಿಸಿದರೆ, ಈ ಪುಟ್ಟ ಜಲಪಾತವನ್ನು (ಬ್ರೈಡಲ್‌ ಫಾಲ್ಸ್‌ ಎಂದು ಕರೆಯಲಾಗುವ) ಬೇರೆ ಬಣ್ಣದಿಂದ ತುಂಬಿರುತ್ತಾರೆ.

ಇನ್ನೊಂದೆಡೆ ಗವಿಯಾಂದರ ಮುಖಾಂತರ, ಅಂದರೆ ಲಿಫ್ಟ್‌ನಿಂದ ಕೆಳಗಿಳಿದು ಹೋಗಿ, ತೀರ ಸಮೀಪದ ಬಂಡೆಯ ಹತ್ತಿರ ಹೋಗಿ ಜಲಪಾತದ ರಭಸವನ್ನು ಅನುಭವಿಸುವುದನ್ನು, ಶಬ್ದಗಳಲ್ಲಿ ವರ್ಣಿಸುವದು ಸಾಧ್ಯವಿಲ್ಲ. ‘ಹರಿಕೇನ್‌ ಡೆಕ್‌’ ಎಂದು ಕರೆಯಲಾಗುವ ಈ ಸ್ಥಳಕ್ಕೆ ಹೋಗುವ ಮುಂಚೆ, ಪ್ಲಾಸ್ಟಿಕ್‌ ಅಂಗಿಗಳು, ಜಾರದೇ ಇರಲಿ ಎಂದು ಚಪ್ಪಲಿಗಳನ್ನು ಕೊಡುತ್ತಾರೆ. ಎಲ್ಲರೂ ಒಂದೇ ಬಣ್ಣದ ಪ್ಲಾಸ್ಟಿಕ್‌ ಹೊದಿಕೆಯಲ್ಲಿ ಕೆಳಕ್ಕೆ ಇಳಿದು, ಅಲ್ಲಿ ಕಟ್ಟಿಗೆ ಸೇತುವೆ ಮುಖಾಂತರ ಸ್ವಲ್ಪ ಮುಂದೆ ನಡೆದರೆ, ತೀರಾ ಜಲಪಾತದ ಬುಡಕ್ಕೇ ಬಂದಿರುತ್ತೇವೆ. ಮೇಲಿನಿಂದ ಬೀಳುವ ರಭಸಕ್ಕೆ ನೀರು ಜೋರಾಗಿ ಬಂದು ಮೈಗೆಲ್ಲ ಮುತ್ತಿಡುತ್ತದೆ. ಮೇಲೆ ನೋಡಿದರೆ, ಮೈಮೇಲೆ ಜಲಪಾತ ಏರಿ ಬಂದಂತೆ ಆಗುತ್ತದೆ. ಆಗ ಎಲ್ಲರೂ, ಕೇಕೆ ಹಾಕಿ, ಅತಿ ಆನಂದದಿಂದ ಮೈಯೆಲ್ಲ ತೋಯಿಸಿಕೊಂಡು ಆನಂದ ಪಡುತ್ತಾರೆ. ಮೇಲೆ ನೋಡಲು ಆಗದಷ್ಟು ನೀರಿನ ಸಿಂಚನವಾಗುತ್ತಿರುತ್ತದೆ. ಆದಾಗ್ಯೂ ಕಷ್ಟಪಟ್ಟು ಮೇಲೆ ನೋಡಿದರೆ, ಬೀಳುವ ಜಲಧಾರೆ ಆಕಾಶದಿಂದಲೇ ಬೀಳುತ್ತದೆಯೇನೊ ಎನ್ನಿಸುತ್ತದೆ. ದೊಡ್ಡ ಗಾತ್ರದ ಈ ಧಾರೆಯನ್ನು ನೋಡುವುದು, ಮೈಯನ್ನು ನೀರಿನಿಂದ ತೋಯಿಸಿಕೊಳ್ಳುವುದು, ಅಗೊಮ್ಮೆ ಈಗೊಮ್ಮೆ ಹಿತವಾಗಿ ಬೀಸುವ ಗಾಳಿ... ಮನಸ್ಸಿಗೆ ಅದೇನೋ ಸಂತಸ. ದೇಹಕ್ಕೂ ಕಣ್ಣಿಗೂ ಹಿತಾನುಭವ! ಎಷ್ಟೇ ಪ್ರಯತ್ನಪಟ್ಟರೂ ಸುಮ್ಮನೇ ನೋಡಿ ಬರುವುದು, ನಿರ್ಭಾವುಕವಾಗಿ ಉಳಿಯುವುದು ಅಸಾಧ್ಯ. ಮನಸ್ಸಿನಲ್ಲಿ ಅದುಮಿಟ್ಟ ಆನಂದ ತಂತಾನೇ ಕೇಕೆಯ ರೂಪ ತಾಳುತ್ತದೆ.

ಅಮೆರಿಕಾ-ಕೆನಡ ದೇಶಗಳನ್ನು ಬೇರ್ಪಡಿಸುವ ಈ ಜಲಪಾತದ ಎತ್ತರ, ಆಳ, ಹರಿಯುವ ನೀರಿನ ಪ್ರಮಾಣ ಹೇಳ ತೀರದು. ನದಿಯ ಪಾತ್ರ, ಆಳ ತುಂಬಾ ದೊಡ್ಡದಾಗಿದೆ. ಜಲಪಾತದ ಮೇಲೆ ಹರಿಯುವ ನದಿಯ ತೆರೆಗಳು ಬಹಳ ಬೀಸು-ಬೀಸಾಗಿ ಬರುತ್ತವೆ. ಜಲಪಾತದಿಂದ ಬಿದ್ದ ನೀರು, ನೀರೇ ಎನ್ನಿಸದಷ್ಟು ಬಿಳಿ ಬಣ್ಣ ತಳೆದು, ಓತಪ್ರೋತವಾಗಿ ಬೀಳುತ್ತದೆ. ನೀರು ಧುಮುಕುವುದನ್ನು ನೋಡಿದರೆ ಮೈ-ಮನಸ್ಸು, ಕಣ್ಣು ದಣಿಯಬೇಕು. ಎಷ್ಟು ನೋಡಿದರೂ ಸಾಕಾಗದ ದೃಶ್ಯ. ನೀರು ಬೀಳುವ ಸ್ಥಳಕ್ಕೆ ಅನುಗುಣವಾಗಿ ಇಡೀ ಜಲಪಾತವನ್ನು ಎರಡು ಭಾಗಗಳಾಗಿ ವಿಂಗಡಿಸಬಹುದು, ಒಂದು ಅಮೇರಿಕಾದ ಫಾಲ್ಸ್‌ . ಇನ್ನೊಂದು, ಕೆನಡಾ ಫಾಲ್ಸ್‌. ಜಲಪಾತದ ದರ್ಶನಕ್ಕೆ ಜನರನ್ನು ಶಿಸ್ತಿನಿಂದ, ನಿಯಮಕ್ಕನುಸಾರವಾಗಿ ಕರೆದುಕೊಂಡು ಹೋಗುತ್ತಾರೆ. ಬೋಟಿನ ಸಹಾಯದಿಂದ ಅತೀ ಸಮೀಪದಲ್ಲಿ ಒಯ್ದು ಕರೆ ತರುತ್ತಾರೆ. ಗಾಳಿಯ ರಭಸಕ್ಕೆ, ನೀರಿನ ತುಂತುರು ಹನಿಗಳು ಎಲ್ಲರಿಗೂ ಸಿಡಿದು ತಂಪಾಗಿಸುತ್ತದೆ. ಮನಸ್ಸಿಗೆ ಉಲ್ಲಾಸವೆನಿಸುತ್ತದೆ. ಬೀಳುವ ಜಲಪಾತದ ಎರಡೂ ಬದಿಗೂ ಹಸಿರಾದ ದೊಡ್ಡ ಗಿಡಗಳು. ನದಿಯಲ್ಲಿರುವ ಬೋಟ್‌ ಗಳು, ಮೈಮೇಲೆ ಎರಚುವ ತುಂತುರುಗಳು, ಇವೆಲ್ಲ ಮನಸ್ಸಿಗೆ ಮುದ ನೀಡುತ್ತವೆ. ಶಬ್ದಕ್ಕೆ ಹೆದರಿಕೆಯೂ ಆಗುತ್ತದೆ. ವರ್ಣಿಸಲು ಬಾರದಂತಹ ರುದ್ರರಮಣೀಯ ದೃಶ್ಯ.

ನಯಾಗರಾಕ್ಕೆ ನಯಾಗರವೇ ಸಾಟಿ. ವರ್ಣಿಸಿದಷ್ಟ್ಟೂ ತೀರದ, ಪದಗಳಲ್ಲಿ ಹಿಡಿದಿಡಲಾಗದ ಸೊಬಗು ಈ ಜಲಧಾರೆಯದು. ಇದನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿರುವ ರೀತಿಯೂ ಮೆಚ್ಚುಗೆಗೆ ಪಾತ್ರವಾಗುತ್ತವೆ. ಒಟ್ಟಿನಲ್ಲಿ , ಜೀವನದಲ್ಲಿ ಇದೊಂದು ಮರೆಯಲಾಗದ ಅನುಭವ.

ಓ ನಯಾಗರಾ, ನೀನು ಕಟ್ಟಿಕೊಟ್ಟ ನೆನಪಿನ ಬುತ್ತಿಗೆ ಧನ್ಯವಾದ.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X