ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಲ್ಯಾಪ್‌ ಟಾಪ್‌’ ಹೆಗಲಿಗೇರಿಸುವಾಗ ಬಳೆಗಾರನ ನೆನಪು

By Staff
|
Google Oneindia Kannada News
  • ರಾಮಚಂದ್ರ ಭಟ್‌ ಕೆ ಆವರ್ಸೆ, ಸಿಂಗಾಪುರ.
    [email protected]
Ramachandra Bhat K Avarse, Singaporeಇಂದು ಬೆಳಗ್ಗೆ ಕಣ್ತೆರೆದು ಗಡಿಯಾರದ ಮುಖವನ್ನು ನೊಡಿದಾಗ, ಅರರೆ! ಇದೇಕೆ ಮುಳ್ಳುಗಳು ನಿನ್ನೆಗಿಂತಲೂ ವೇಗವಾಗಿ ಓಡುತ್ತಿವೆಯಲ್ಲಾ ಎಂದೆನಿಸಿತು. ಆಗ ನ್ಯೂಟನ್‌ ಮೂರನೇ ನಿಯಮ - ಪ್ರತಿಯಾಂದು ಕ್ರಿಯೆಗೂ ಅದಕ್ಕೆ ಸಮನಾದ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇರುತ್ತದೆ - ನೆನಪಿಗೆ ಬಾರದಿದ್ದರೂ, ಗಂಟೆ ಇಷ್ಟಾಗಿ ಹೋಯಿತಲ್ಲಾ ಎಂಬ ಕ್ರಿಯೆಗೆ ಬೆಳಗ್ಗಿನ ಪ್ರತಿಕ್ರಿಯೆಗಳೆಲ್ಲ ರಭಸಗೊಂಡವು. ಆಗಲೆ ನೋಡಿ, ಎಲ್ಲಾ ಕೆಲಸಗಳೂ ಯಾಂತ್ರಿಕತೆಯ ಗಾಲಿಗೆ ಅಂಟಿಕೊಳ್ಳಲಾರಂಭಿಸಿದವು.

ಗಡಿಬಿಡಿಯಲ್ಲೆ ಸ್ನಾನಾದಿ ಕರ್ಮಗಳನ್ನೆಲ್ಲಾ ಮುಗಿಸಿ, ಬೆಳಗ್ಗಿನ ಉಪಾಹಾರ ಎನ್ನುವ ಹಣೆಪಟ್ಟಿಯಲ್ಲಿ ಏನಿಂದು? ಎಂದು Ready to Eat ಸಾಲಿನಲ್ಲಿ ಹೊರಗೆ ಇಣುಕುತ್ತಿದ್ದ ಚಪಾತಿಯಾಂದನ್ನು ನಾನ್‌-ಸ್ಟಿಕ್‌ ಮೇಲೆ ಹಾಕಿದೆ. ಎಲ್ಲಿಯವರಗೆ ಬಂದಿದೆ ನಮ್ಮ ತಂತ್ರಜ್ಞಾನ - ಗಂಟೆಗಳಲ್ಲಿ ಆಗುತ್ತಿದ್ದ ತಿಂಡಿಗಳು ತಕರಾರಿಲ್ಲದೆ ನಿಮಿಷಮಾತ್ರದಲ್ಲಿ ತಯಾರಾಗುತ್ತಿವೆ. ಇಷ್ಟಿದ್ದೂ ನನ್ನ ನಿದ್ರೆಯು ಈ ನಿಮಿಷಗಳಿಗೂ ಕತ್ತರಿ ಹಾಕಿಸಿತ್ತೆ ? ಚಪಾತಿ ಹೊಟ್ಟೆಗಿಳಿಯುತ್ತಿದ್ದಂತೆ, ಲ್ಯಾಪ್‌ ಟಾಪ್‌ (ಯಾ ನೋಟ್‌ ಬುಕ್‌) ಹೆಗಲಿಗೇರಿತ್ತು. ದಡಬಡನೆ ಹೆಜ್ಜೆ ಹಾಕಿ ಹವಾನಿಯಂತ್ರಿತ ಬಸ್ಸಿನೊಳಗೆ ಕಾಲಿಟ್ಟು , access card ನಿಂದ ಕುಂಯ್‌ ಅನಿಸಿ, ಸೀಟೊಂದರಲ್ಲಿ ಆಸೀನನಾದಾಗ, ಅಬ್ಬಾ! ಬೆಳಗ್ಗಿನ ಗಡಿಬಿಡಿಗೆ ಸ್ವಲ್ಪ ಬ್ರೇಕ್‌ ಬಿದ್ದಿತ್ತು.

ಒಂದರೆಕ್ಷಣ ನೆನಪುಗಳ ಸುರುಳಿ ಬಿಚ್ಚತೊಡಗಿತ್ತು. ಮನಸ್ಸು ಹಾಯಾಗಿ ಸಮುದ್ರದಾಚೆಗಿನ ನನ್ನ ದೇಶದ ಆ ಹಳ್ಳಿಜೀವನದಲ್ಲಿ ಸಂಚರಿಸುತ್ತಿತ್ತು. ನನ್ನಪ್ಪ ಯಾ ಮನೆಯವರೊ ಅಥವ ಊರವರೊ ಬೆಳಗ್ಗೆಯ ಸುಖನಿದ್ರೆಯಿಂದ ಎದ್ದವರು ಗಡಿಯಾರದ ಮುಖವನ್ನು ನೋಡುತ್ತಾರೆಯೆ? ಅವರಿಗೆ ಕೋಳಿಯ ಕೂಗಿನಿಂದಲೆ ಸುಪ್ರಭಾತವಾಗಬೇಕಾದರೆ ಗಡಿಯಾರದ ಮುಖದರ್ಶನದ ಅವಶ್ಯಕತೆಯಾದರೂ ಏನು? ಬದಲಾಗಿ ಮನೆಯಲ್ಲಿ ಕೆಲವರು ‘ಕರಾಗ್ರೇ ವಸತೇ ಲಕ್ಷ್ಮೀ, ಕರ ಮಧ್ಯೆ....’ ಎಂದು ಕರವನ್ನು ನೋಡಿದರೆ, ಇನ್ನು ಕೆಲವರು ಎದ್ದು ಗೋ ಮುಖ ದರ್ಶನ ಮಾಡುತ್ತಾರೆ. ಸರಿ, ತೋಟದ ಮಧ್ಯದಲ್ಲಿರುವ ನಮ್ಮ ಮನೆಯಿಂದ ಒಬ್ಬೊಬ್ಬರೆ ಹೊರಗೆ ಬಂದು ಕೆರೆದಂಡೆಯತ್ತ ನಡೆಯುತ್ತಾರೆ. ಅಲ್ಲಿ ಅವರ ಮುಖ ಮಾರ್ಜನ. ಮನೆಗೆ ಹಿಂತಿರುಗಿದಾಗ ಅಮ್ಮನಿಂದಲೊ, ಚಿಕ್ಕಮ್ಮನಿಂದಲೊ ತಯಾರಾದ ಬಿಸಿಬಿಸಿ ಕಾಫಿ ರೆಡಿ. ಅಪ್ಪ, ಅಮ್ಮ, ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜ, ಅಜ್ಜಿ, ತಮ್ಮಂದಿರು, ತಂಗಿಯರ ತುಂಬು ಕುಟುಂಬದ ಸದಸ್ಯರೆಲ್ಲರ ಹಾಜರಾತಿಯೋ ಎಂಬಂತೆ, ಎಲ್ಲರೂ ಒಟ್ಟಾಗಿ ಕೂತು ಕಾಫಿ ಹೀರಲು ಆರಂಭಿಸುತ್ತಾರೆ. ‘ಆಕಾಶವಾಣಿ-ಪ್ರದೇಶ ಸಮಾಚಾರ’ ಎಂದು ಬಾನುಲಿಯಿಂದ ಕೇಳಿಬಂದಾಗ ಆ ಕಡೆ ಆಲೈಸುವರು. ‘ಇಂದಿನ ಕಾರ್ಯಕ್ರಮಗಳ ವಿವರ’ ಬಂದಾಗ, ಅಪ್ಪ, ಚಿಕ್ಕಪ್ಪ, ಅಜ್ಜ ಇಂದೇನಾದರೂ ಯಕ್ಷಗಾನದ ಪ್ರಸಂಗವೇನಾದರೂ ಇರಬಹುದೋ ಎಂದು ಆಲಿಸಿದರೆ, ಅಮ್ಮ, ಚಿಕ್ಕಮ್ಮ, ಜಾನಪದ ಗೀತೆಗಳನ್ನೇನಾದರೂ ಕೇಳಬಹುದೇ ಎಂದು ಗಮನ ಹರಿಸುತ್ತಾರೆ. ಇನ್ನು ಅಜ್ಜಿಗೋ ಆಗೊಮ್ಮೆ ಈಗೊಮ್ಮೆ ಪ್ರಸಾರವಾಗುವ ‘ಹಸೆ ಹಾಡು’ ಎಂದರೆ ಬಹು ಇಷ್ಟ .

ಇತ್ತೀಚಿನ ದಿನಗಳಲ್ಲಿ ಬೆಳಗ್ಗೆ ಗಂಜಿಯೂಟಕ್ಕೆ ಬದಲಾಗಿ ಕಾಫಿ-ತಿಂಡಿ ಮಾಡುವ ಪರಿಪಾಠ ಬಂದಿತ್ತು. ಹಾಗೆ ತಿಂಡಿ ತಿನ್ನುತ್ತಾ ಆ ದಿನದ ದಿನಚರಿಯ ಬಗ್ಗೆ, ಒಂದಿಷ್ಟು ಚರ್ಚೆಗಳಾಗಿ ಮನೆಯಿಂದ ಹೊರ ಹೊರಟರೆ ಮತ್ತೆ ಬರುವುದು ಮಧ್ಯಾಹ್ನದ ಊಟಕ್ಕೆ.

ಊಟದ ವೇಳೆ ಅವರ ಕೆಲಸದ ಬಗ್ಗೆ, ಉದಾಹರಣೆಗೆ ಈ ತೋಟದ ಕೆಲಸ ಮುಗಿಸಲು ಇನ್ನು ಎಷ್ಟು ದಿವಸ ಬೇಕಾಗಬಹುದು? ಸ್ವಲ್ಪ ಬೇಗ ಮುಗಿಸಬೇಕಾದರೆ ಎಷ್ಟು ಆಳು ಕೆಲಸದವರನ್ನು ನೇಮಿಸಿಕೊಳ್ಳಬೇಕು? ಇತ್ಯಾದಿ ವಿಷಯಗಳನ್ನು ಚರ್ಚಿಸುತ್ತಿದ್ದರೆ ನನಗಿಂದು ನನ್ನ ಕೆಲಸದ ಶೆಡ್ಯೂಲ್‌, ಡೆಡ್‌ ಲೈನ್‌, ಮುಂತಾದ ಶಬ್ದಗಳ ನೆನಪಾಗುತ್ತದೆ. ಕೆಲಸದ ವಿಷಯದಲ್ಲಿ ನಾನು ಕೂಡ ಕೂಲಿಯಲ್ಲದೆ ಮತ್ತೇನು? ನಾನು ಮಾತ್ರ ಸೂಟು-ಬೂಟು ಹಾಕಿಕೊಂಡು, ಮ್ಯಾನೇಜರ್‌ ಒಡೆಯನ ಮಾತಿನಂತೆ ನಡೆಯುವ, ಕೈಲೊಂದು ಲ್ಯಾಪ್‌ ಟಾಪ್‌ ಹಿಡಿದು ಓಡಾಡೊ ಹೈ-ಟೆಕ್‌ ಕೂಲಿಯಾಳು.

ಬೆಳಗ್ಗೆ ಲ್ಯಾಪ್‌ ಟಾಪ್‌ ಹೆಗಲಿಗೇರಿಸಿದ ಪರಿಯು ನಮ್ಮೂರ ಬಳೆಗಾರನ ನೆನಪಿಗೂ ಕಾರಣವಾಯ್ತು. ಆ ನಮ್ಮೂರ ಬಳೆಗಾರ ಮನೆ ಬಾಗಿಲಿಗೆ ಬಂದಾಗ, ತೆರ ತೆರನಾದ ಬಳೆಗಳನ್ನು ನೋಡಲು ಅಜ್ಜಿ, ಅಮ್ಮ, ಚಿಕ್ಕಮ್ಮ ಮತ್ತು ತಂಗಿಯರೆಲ್ಲ ಗುಂಪಾಗಿ ಕುಳಿತುಕೊಳ್ಳುತ್ತಿದ್ದರು. ಅವರು ಬಳೆಗಳನ್ನು ಆರಿಸತೊಡಗಿದಾಗ, ಅವರ ಮಾತುಗಳ ಕಡೆಗೆ ಗಮನ ಹರಿಸಿದರೆ ನಮ್ಮೂರ ಜಾತ್ರೆ, ಹಬ್ಬ, ಯಾರ್ಯಾರ ಮನೆಯಲ್ಲಿ ಮದುವೆ ಮುಂಜಿಗಳಿವೆ ಎಲ್ಲವೂ ಒಮ್ಮೆಲೆ ತಿಳಿಯುತ್ತಿತ್ತು. ಇದರೊಂದಿಗೆ ನಮ್ಮ ಪುರಾಣ ಪುಣ್ಯ ಕಥೆಯ ನಾರದನಂತೆ, ಬಳೆಗಾರನು ತನ್ನ ಸುದ್ದಿ ಸಂಗ್ರಹದ ಭಾಂಡಾರದಿಂದ, ಇವರಿಗೆ ತಿಳಿಯದ ವಿಷಯಗಳಿದ್ದರೆ ತಿಳಿಸುತ್ತಿದ್ದ. ಹೀಗೆ ಬಳೆಗಾರ ಎನ್ನುವ ಪಾತ್ರದ ಸುತ್ತ ಎಷ್ಟೊಂದು ವಿಷಯಗಳು. ಇಷ್ಟೆಲ್ಲ ನೆನಪು ಮಾಡಿಕೊಳ್ಳಲು ನನ್ನ ಲ್ಯಾಪ್‌ ಟಾಪ್‌ ಕಾರಣವಾಯ್ತು.

ಇಲ್ಲಿ ಸಂಜೆ ಸೂರ್ಯನನ್ನು ನೋಡದೆ ತುಂಬಾ ದಿನಗಳಾದುವು. ಒಮ್ಮೆ ಬೆಳಗ್ಗೆ ಆಫೀಸ್‌ ಎನ್ನುವ ಎ.ಸಿ. ಜೈಲ್‌ನೊಳಗೆ ಸೇರಿದರೆ ಮತ್ತೆ ಹೊರಗೆ ಬರುವ ಸಮಯ ಗೊತ್ತಿಲ್ಲ. ಸಂಜೆಯ ಹೊತ್ತಿಗೆ ಅಜ್ಜ, ಅಪ್ಪ, ಚಿಕ್ಕಪ್ಪ ಇವರಿಗೆ ಒಂದು ಸುತ್ತು ಪೇಟೆಗೆ ಹೋಗಿ, ‘ಅಡ್ಡ’ದಲ್ಲಿ ಕುಳಿತು, ಸ್ನೇಹಿತರೊಂದಿಗೆ ಹರಟಿಗಳಾಗದೆ ಸಮಾಧಾನವಿಲ್ಲ. ಅಲ್ಲಿ ಕಟ್ಟೆಯ ಪಕ್ಕದ ಕಾಕನ ಅಂಗಡಿಯಲ್ಲಿ ಬೀಡಿ ಸೇದಿ ಖುಷಿಪಡುವವರು ಕೆಲವರಾದರೆ, ನಿಶೆಯ ಹೊತ್ತಿಗೆ ನಶಾ ಏರಿಸುವಲ್ಲಿ ಸುಖಪಡುವವರು ಹಲವರು.

ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ಆದ ಬದಲಾವಣೆಗಳೆಷ್ಟು ? ಕೆಲಸ, ತೃಪ್ತಿ, ಮನರಂಜನೆ, ಇತ್ಯಾದಿಗಳ ವ್ಯಾಖ್ಯಾನಗಳು ಅಜ್ಜ-ಅಜ್ಜಿಯರ ಕಾಲಕ್ಕೆ ಒಂದು ತೆರನಾದರೆ, ಅಪ್ಪ-ಅಮ್ಮರ ಕಾಲಕ್ಕೆ ಇನ್ನೊಂದು ಪರಿ. ನನ್ನ ಅಪ್ಪ, ಅಮ್ಮ- ಇವರಿಗೆ ಸಾಫ್ಟ್‌ ವೇರ್‌ ಶಬ್ದದ ಸ್ಪೆಲ್ಲಿಂಗ್‌ ಗೊತ್ತಿಲ್ಲದಿದ್ದಾಗ, ಮಗ ಸಾಫ್ಟ್‌ ವೇರ್‌ ಇಂಜಿನೀಯರ್‌ ಆಗಿ ವಿದೇಶದಲ್ಲಿ ನೆಲೆಸಿದಾಗ ಈ ಕೆಲಸ ಕಾರ್ಯಗಳನ್ನು ಎಷ್ಟರಮಟ್ಟಿಗೆ ತುಲನೆ ಮಾಡಲು ಸಾಧ್ಯ? ನಮ್ಮೂರ ಪರಿಸರ, ಅಲ್ಲಿನ ಸಾಮಾಜಿಕ ವ್ಯವಸ್ಥೆ ಎಲ್ಲವೂ ನೆನಪುಗಳಾಗಿ ಉಳಿದು, ಹೆಚ್ಚಾಗಿ ಆ ಸುರುಳಿಗಳನ್ನು ಬಿಚ್ಚಲೂ ಸಮಯವಿಲ್ಲದೆ ಯಾಂತ್ರಿಕತೆಯ ಜೀವನದ ಗಾಲಿಗೆ ಸಿಕ್ಕಿದೆ. ಪಕ್ಕದಲ್ಲಿ ಟಿಕ್‌ ಟಿಕ್‌ ಗಡಿಯಾರ ನನ್ನನ್ನು ಅಣಕಿಸುತ್ತಿದೆ ‘ನಾಳೆಯೂ ಮತ್ತೆ ಹಿಂದೆ ಬೀಳುವೆಯಾ?’ ಎಂದು.

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X