• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಟ್ಸ್‌ಕನ್ನಡವೆಂಬ ಮಾಮರ ಹಾಡಲಿಕ್ಕೆ ಸ್ಫೂರ್ತಿ ಸೆಲೆಯಾಯಿತು !

By Staff
|

ಶಾಮ್‌,

ನಾನು ಮೊಟ್ಟಮೊದಲು ಬರೆದ ಪ್ರಬಂಧ ಪ್ರಕಟವಾಗಿದ್ದು ದಟ್ಸ್‌ಕನ್ನಡದಲ್ಲಿಯೇ. ಆ ಹಂತದಲ್ಲಿ ನನಗೆ ನೀವು ಕೊಟ್ಟ ಪ್ರೋತ್ಸಾಹ, ಉತ್ತೇಜನವನ್ನು ನಾನೆಂದಿಗೂ ಮರೆಯಲಾರೆ. ಅದಕ್ಕಾಗಿ ಮತ್ತೊಮ್ಮೆ ನನ್ನ ಧನ್ಯವಾದಗಳು. ನನ್ನಂತೆಯೇ ದಟ್ಸ್‌ಕನ್ನಡದ ನೆರಳಿನಲ್ಲಿ ಬೆಳಕಿಗೆ ಬಂದ ಉದಯೋನ್ಮುಖರು ಬಹಳ ಜನರಿದ್ದಾರೆ. ಎಳೆಯ ಲೇಖಕರ ಪ್ರತಿಭೆಯನ್ನು ಗುರುತಿಸಿ, ಅವರ ‘ಬೆನ್ನುತಟ್ಟುವ’ ನಿಮ್ಮಂತಹ ಸಂಪಾದಕರ ಸಂತತಿ ಸಾವಿರವಾಗಲಿ!

ಫಿಲಿಡೆಲ್ಫಿಯಾದಲ್ಲಿ ನಡೆದ ‘ವಸಂತೋತ್ಸವ’ ಕಾರ್ಯಕ್ರಮದ ಬಗೆಗೆ ನಿಮಗೆ ತಿಳಿದೇ ಇದೆ. ಅದೇ ಸಮಾರಂಭದಲ್ಲಿ ‘ನಮ್ಮ ಬರಹಗಾರರು’ ಎಂಬ ಕಾರ್ಯಕ್ರಮವನ್ನು ಶ್ರೀಮತಿ ನಳಿನಿಮಯ್ಯರವರು ನಡೆಸಿಕೊಟ್ಟರು. ಇದರಲ್ಲಿ ಕಥಾವಿಭಾಗವನ್ನು ಗುರುಪ್ರಸಾದ್‌ ಕಾಗಿನೆಲೆ, ಲಘು ಬರಹ - ಜೋಷಿ, ಕವನ - ಎಂ. ಎಸ್‌. ನಟರಾಜ್‌, ಅನುವಾದ - ವಿಶ್ವನಾಥ್‌ ಹುಲಿಕಲ್‌ ಮತ್ತು ಲಲಿತ ಪ್ರಬಂಧ ವಿಭಾಗದಿಂದ ನನ್ನನ್ನು ಆರಿಸಿದ್ದರು. ಆ ಸಂದರ್ಭದಲ್ಲಿ ನಮ್ಮ ಅನಿಸಿಕೆಗಳನ್ನು ಆರು ನಿಮಿಷಗಳ ಕಾಲದ ಚಿಕ್ಕ ಭಾಷಣದ ಮೂಲಕ ಸಭಿಕರೊಡನೆ ಹಂಚಿಕೊಳ್ಳುವ ಅವಕಾಶವಿತ್ತು. ನಾನು ಅಂದು ಓದಿದ ಕಿರುಭಾಷಣವನ್ನು ಇದರ ಜೊತೆಯಲ್ಲಿ ನಿಮ್ಮ ಓದಿಗೆ ಕಳಿಸಿರುತ್ತೇನೆ.

ವಂದನೆಗಳೊಡನೆ,

- ತ್ರಿವೇಣಿ

*

ಬರಹ - ಬದುಕು

K. Triveni Srinivasaraoನಾನು ಭಾರತದಿಂದ ಅಮೆರಿಕಾಕ್ಕೆ ಬಂದ ಹೊಸದರಲ್ಲಿ ಒಂದು ರೀತಿಯ ಒಂಟಿತನ, ಮಾನಸಿಕ ತೊಳಲಾಟ, ಸಾಂಸ್ಕೃತಿಕ ಶೂನ್ಯತೆಯನ್ನು ಅನುಭವಿಸಿದೆ. ಈ ಏಕಾಂಗಿತನದಿಂದ ಹೊರಬರಲು ನಾನು ಏನಾದರೂ ದಾರಿ ಕಂಡುಕೊಳ್ಳಲೇಬೇಕಿತ್ತು. ಆಗ ನನ್ನ ನೆರವಿಗೆ ಬಂದಿದ್ದು ನನ್ನ ಬರವಣಿಗೆ. ಮೊದಲಿನಿಂದಲೂ ನನಗೆ ಮನಸ್ಸಿಗೆ ಅನ್ನಿಸಿದ ಭಾವನೆಗಳನ್ನು ಕವನದ ಮೂಲಕ, ಸಣ್ಣ ಕಥೆಯ ಮೂಲಕ ವ್ಯಕ್ತಪಡಿಸುವ ಹವ್ಯಾಸವಿತ್ತು. ಅದರೆ ಲೇಖನ ಅಥವಾ ಲಲಿತಪ್ರಬಂಧವನ್ನು ಬರೆಯಲು ನಾನು ಎಂದೂ ಮನಸ್ಸು ಮಾಡಿರಲಿಲ್ಲ. ಆದರೆ ಕವನಗಳಿಗಿಂತ ಲೇಖನಗಳ ಮೂಲಕ ಇನ್ನೂ ಹೆಚ್ಚು ಹೆಚ್ಚು ಜನರನ್ನು ತಲುಪಬಹುದು ಎಂದು ನನಗೆ ತಿಳಿದಿತ್ತು. ಎಷ್ಟೆಂದರೂ ಕವನದ ಹರವು ಸಣ್ಣದು. ಪ್ರಬಂಧ ಹಾಗಲ್ಲ, ನನಗೆ ಏನು ಹೇಳಬೇಕಾಗಿದೆಯೋ ಅದನ್ನು ನಾನು ಈ ಮಾಧ್ಯಮದ ಮೂಲಕ ಸಮರ್ಥವಾಗಿ ಹೇಳಬಹುದು ಎಂದು ಅನ್ನಿಸಿತು. ನಾಗತಿಹಳ್ಳಿ ಚಂದ್ರಶೇಖರ, ರವಿ ಬೆಳಗೆರೆ, ಜೋಗಿ, ಜಯಂತ ಕಾಯ್ಕಿಣಿ ಮುಂತಾದವರ ಬರಹಗಳೆಂದರೆ ನನಗೆ ಮೊದಲಿನಿಂದಲೂ ಬಹಳ ಇಷ್ಟ . ಆಕರ್ಷಕವಾಗಿ ಓದುಗರ ಮನಸೂರೆಗೊಳ್ಳುವಂತೆ ಬರೆಯುವ ಈ ಲೇಖಕರುಗಳು ನನ್ನಲ್ಲಿಯೂ ಕೂಡ ಪ್ರಬಂಧಗಳ ಬಗೆಗೆ ಒಲವು ಮೂಡಿಸಿದರು. ಓದುಗರಿಗೆ ಅತಿ ಭಾರವೆನಿಸದ ಹಾಗೆ, ಸುಲಲಿತವಾಗಿ ಓದಿಸಿಕೊಳ್ಳುವ ಹಾಗೆ ಬರೆಯಲು ಪ್ರಯತ್ನಿಸಿದೆ. ನನ್ನದೇ ಆದ ಸರಳವಾಗಿ, ಸುಲಭವಾಗಿ ಬರೆಯುವ ಶೈಲಿಯಾಂದನ್ನು ರೂಢಿಸಿಕೊಂಡೆ. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯೂ ಆದೆ.

ಈ ಅಮೆರಿಕಾದ ಯಾಂತ್ರಿಕ ಜಗತ್ತಿನಿಂದ ಬೇಸತ್ತು ನಾನು ಬರೆದ ಮೊಟ್ಟ ಮೊದಲನೆಯ ಲೇಖನ - ‘ಶಬ್ದಸೂತಕದಲ್ಲಿ ನಾವು ಕಳಕೊಂಡ ನಿಶ್ಯಬ್ದ ಸುಖ’. ಸ್ವಲ್ಪ ಅಳುಕಿನಿಂದಲೇ ಬರೆದ ಈ ಲೇಖನ, ದಟ್ಸ್‌ಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದಾಗ ನನ್ನ ನಿರೀಕ್ಷೆಗೆ ಮೀರಿದ ಜನಮೆಚ್ಚುಗೆ ಒದಗಿಬಂದಿತು. ನಾನು ಬರೆದಿದ್ದನ್ನು ಯಾರಾದರೂ ಓದುತ್ತಾರೆ, ಓದಿ ಮೆಚ್ಚುತ್ತಾರೆ ಎಂಬ ಭಾವನೆಯೇ ಲೇಖಕರಿಗೆ ಮತ್ತೆ, ಮತ್ತೆ ಮತ್ತಷ್ಟು ಬರೆಯುವ ಉತ್ತೇಜನ ನೀಡುತ್ತದೆ ಎಂಬುದು ನನ್ನ ನಂಬಿಕೆ. ಅದೇ ವೇಳೆಗೆ ಕನ್ನಡ ಚಿತ್ರರಂಗದ ಖ್ಯಾತ ಚಿತ್ರತಾರೆಯಾದ ಪಂಡರಿಬಾಯಿಯವರು ತಮ್ಮ ಕಡೆಗಾಲದಲ್ಲಿ ಚಿಕಿತ್ಸೆಗಾಗಿ ಪರದಾಡಿದ ಘಟನೆ ನನ್ನ ಮನಸ್ಸನ್ನು ಬಹುವಾಗಿ ಕಲಕಿದಾಗ ನಾನು ಬರೆದಿದ್ದು - ‘ತಾರೆಗಳ ತೋಟದ ಮುಸ್ಸಂಜೆಗಳು’ - ಎಂಬ ಲೇಖನ. ಇದು ದಟ್ಸ್‌ಕನ್ನಡ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿಯೂ ಕೂಡ ಪ್ರಕಟವಾಗಿ ಬಹಳ ಜನರ ಮನಸೆಳೆಯಿತು. ಆಮೇಲೆ ನಾನು ನನ್ನ ಅಚ್ಚುಮೆಚ್ಚಿನ ಕವನಗಳ ಜೊತೆಗೆ ಪ್ರಬಂಧಗಳತ್ತಲೂ ಸೆಳೆಯಲ್ಪಟ್ಟೆ.

ಇಲ್ಲಿ ಅಮೆರಿಕಾದಲ್ಲಿ ಕುಳಿತು ಬರೆಯುವಾಗ ಭಾರತದಲ್ಲಿ ಬರೆಯುವುದಕ್ಕಿಂತ ಹೆಚ್ಚು ಮುಕ್ತಮನಸ್ಸಿನಿಂದ ಬರೆಯಬಹುದು ಎಂಬುದು ನನ್ನ ಭಾವನೆ . ಇಲ್ಲಿಂದ ಅಲ್ಲಿಯ ಬದುಕನ್ನು ನೋಡುವಾಗ ಯಾವುದೇ ಪೂರ್ವಾಗ್ರಹಗಳಿಲ್ಲದೆ ಬರೆಯುವುದು ಸಾಧ್ಯ. ಜೊತೆಗೆ ಇಲ್ಲಿಯ ಸಾಮಾಜಿಕ, ರಾಜಕೀಯ ಜೀವನವನ್ನು ನಮ್ಮದರೊಡನೆ ಹೋಲಿಸಿ ನೋಡುವ ಅವಕಾಶ ಇಲ್ಲಿದೆ. ನಾನು ಭಾರತದಲ್ಲಿದ್ದುಕೊಂಡು ಬರೆಯುತ್ತಿದ್ದಾಗ ಮನಸ್ಸಿನಲ್ಲಿ ಒಂದು ತರಹದ ಅಂಜಿಕೆ, ಭಯ ಇರುತ್ತಿತ್ತು. ನನ್ನ ಬರವಣಿಗೆ ನೋಡಿ ಯಾರು ಏನನ್ನುತ್ತಾರೋ, ಏನು ತಿಳಿಯುತ್ತಾರೋ ಎಂಬ ಆತಂಕ ನನ್ನನ್ನು ಸದಾ ಕಾಡುತ್ತಿತ್ತು. ಇಲ್ಲಿ ನನಗೆ ನಿಜವಾಗಿಯೂ ನಿರ್ಭೀತಿಯ, ನಿರ್ಭಿಡೆಯ ವಾತಾವರಣ ಲಭ್ಯವಾಗಿದೆ. ನನಗನ್ನಿಸಿದ್ದನ್ನು ಯಾರ ಮುಲಾಜಿಲ್ಲದೆ ನೇರವಾಗಿ ಹೇಳುವಂತಹ ಮನಸ್ಥೈರ್ಯ, ಮನೋಬಲ ನನಗೆ ಸಿಕ್ಕಿದ್ದು ಇಲ್ಲಿಯೇ ಅನ್ನುವುದನ್ನು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ನನ್ನ ಮನೆಯ ವಾತಾವರಣ ಕೂಡ ನನ್ನ ಬರವಣಿಗೆಗೆ ಪೂರಕವಾಗಿ ಇದ್ದುದ್ದರಿಂದ, ನನ್ನ ಪತಿ ಮತ್ತು ಮಕ್ಕಳ ಸಹಕಾರದಿಂದ ನಾನು ಇವತ್ತು ಈ ಒಂದು ಹಂತದವರೆಗೆ ಬೆಳೆದು ಬರಲು ಸಾಧ್ಯವಾಯಿತು.

ಬರೆದಿದ್ದು ಪ್ರಕಟವಾಗಿ, ಜನರ ಕಣ್ಣಿಗೆ ಬಿದ್ದಾಗ ಮಾತ್ರ ಬರೆದ ಬರಹಕ್ಕೊಂದು ಸಾರ್ಥಕ್ಯ! ಇಲ್ಲದಿದ್ದರೆ, ಎಷ್ಟೇ ಚೆನ್ನಾಗಿ ಬರೆದ ಬರಹ ಕೂಡ ಅನಾಮಿಕವಾಗಿ, ಮೂಲೆಗುಂಪಾಗಿ ಉಳಿದುಹೋಗುವ ಸಾಧ್ಯತೆಗಳೇ ಹೆಚ್ಚು. ಆದರೆ ನನ್ನ ವಿಷಯದಲ್ಲಿ ಹೀಗಾಗಲಿಲ್ಲ. ನಾನು ಬರೆದಿದ್ದನ್ನು ಪ್ರೀತಿಯಿಂದ ಕೈಗೆತ್ತಿಕೊಂಡು, ಎದೆಗೆ ಒತ್ತಿಕೊಂಡು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿದ ಸಂಪಾದಕರುಗಳಿಗೆ ಕೂಡ ನನ್ನ ಯಶಸ್ಸಿನಲ್ಲಿ ಪಾಲುಂಟು. ನನ್ನ ಪ್ರತಿಯಾಂದು ಲೇಖನವನ್ನೂ ಓದಿ, ಇ-ಪತ್ರಗಳ ಮೂಲಕ, ದೂರವಾಣಿಯ ಮೂಲಕ ತಮ್ಮ ಮೆಚ್ಚಿಗೆ, ಅಭಿನಂದನೆಗಳ ಮಹಾಪೂರವನ್ನೇ ನನ್ನ ಮೇಲೆ ಹರಿಸಿದ ನನ್ನ ಓದುಗರಿಗೆ ನಾನು ಚಿರಋಣಿ. ತಪ್ಪಿದ್ದಾಗ ತಿದ್ದಿ, ಸರಿ ಇದ್ದಾಗ ಮೆಚ್ಚಿಕೊಂಡು, ನನ್ನ ಬರವಣಿಗೆಯನ್ನು ಜೀವಂತವಾಗಿರಿಸಿದ್ದು ಮುಖ್ಯವಾಗಿ ನನ್ನ ಸಹಲೇಖಕರು. ಅವರೆಲ್ಲರಿಗೆ ಕೂಡ ನನ್ನ ಆತ್ಮೀಯ ವಂದನೆಗಳು. ಇವತ್ತಿನ ದಿನ ಈ ನಾಲ್ಕು ಮಾತಾಡುವ ಮೂಲಕ ನನ್ನ ಈ ಆತ್ಮ ನಿವೇದನೆಗೊಂದು ಅವಕಾಶ ಒದಗಿಸಿದ್ದಕ್ಕಾಗಿ ನಿಮಗೆಲ್ಲರಿಗೂ ನನ್ನ ಅನಂತ ನಮನಗಳು!

ನಮಸ್ಕಾರ!

- ಕೆ. ತ್ರಿವೇಣಿ ಶ್ರೀನಿವಾಸರಾವ್‌

ಇಲಿನಾಯ್‌ ಅಮೆರಿಕಾ

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more