• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಥಳನಾಮ ಪುರಾಣ - ಒಂದು ಲಹರಿ

By Staff
|
  • ಟಿ. ಮಹದೇವ ರಾವ್‌; ಬ್ರಾಕ್‌ಪೋರ್ಟ್‌, ನ್ಯೂಯಾರ್ಕ್‌

trao@brockport.edu

Prof. T. Mahadev Rao‘ಯೋಳ್ಕೊಳ್ಳಕ್‌ ಒಂದೂರು, ತಲೆ ಮ್ಯಾಗೊಂದ್‌ ಸೂರು’ ಅಂತ ಹಾಡಿದ್ದಾರೆ ರಾಜರತ್ನಂ. ಊರು ಯಾವುದಾದರೇನು, ಅದು ನನ್ನೂರು ಎಂಬುದೇ ಮುಖ್ಯ. ನಾನು ಇಂಥ ಊರಿನವನು ಅಂತ ಹೇಳಿಕೊಳ್ಳೋದೇ ಒಂದು ಹೆಮ್ಮೆ. ಒಂದೊಂದು ಊರಿಗೂ ಒಂದು ಹೆಸರಿದೆ. ಹೆಸರೊಂದೇ ಏಕೆ, ಇತಿಹಾಸ ಸ್ಥಳ ಪುರಾಣಗಳೇ ಇವೆ. ನಮ್ಮ ನಾಡಿನಲ್ಲಿ ಊರ ಹೆಸರುಗಳ ವೈವಿಧ್ಯವನ್ನು ಗಮನಿಸಿದ್ದೀರಾ?

ಕೆಲವು ಹೆಸರುಗಳು ‘ಊರು’ ಎಂದು ಕೊನೆಯಾಗುತ್ತವೆ: ಬೆಂಗಳೂರು, ಮೈಸೂರು ಇತ್ಯಾದಿ. ಕೆಲವು ‘ನಗರ’ ಗಳು: ರಾಮನಗರ, ಜಯನಗರ, ಚಾಮರಾಜನಗರ, ಹೊಸನಗರ ಇತ್ಯಾದಿ. ಇನ್ನು ‘ಹಳ್ಳಿ’ಗಳಂತೂ ಸರ್ವೇಸಾಮಾನ್ಯ: ತಂಬ್ರಹಳ್ಳಿ (ನನ್ನ ತವರು), ತೀರ್ಥ ಹಳ್ಳಿ. ಹಳ್ಳಿ ಚಿಕ್ಕ ಊರೇನೂ ಆಗಬೇಕಿಲ್ಲ : ಹುಬ್ಬಳ್ಳಿ. ಪಟ್ಟಣಗಳೂ ಬೇಕಾದಷ್ಟಿವೆ: ಚನ್ನಪಟ್ಟಣ, ಪಿರಿಯಾ ಪಟ್ಟಣ, ಬಸವಾಪಟ್ಟಣ. ಊರೆಂಬುದು ಒಂದು ಸ್ಥಳ ಅಲ್ಲವೆ? ಇಲ್ಲಿ ಸ್ಥಳಗಳಿವೆ: ಧರ್ಮಸ್ಥಳ. ಪುರಗಳಿವೆ: ವಿಜಯಪುರ, ಸುರಪುರ. ಪೇಟೆಗಳಿವೆ: ಹೊಸಪೇಟೆ, ಡಾಬಸ್‌ ಪೇಟೆ. ಕೊಪ್ಪ, ಕೊಪ್ಪಲು, ಹಟ್ಟಿಗಳೂ ಇವೆ: ಬನ್ನಿಕೊಪ್ಪ, ಗೋಣಿಕೊಪ್ಪಲು, ನಾಯಕನ ಹಟ್ಟಿ., ಬನಹಟ್ಟಿ . ಹತ್ತಾರು ಸಂದ್ರಗಳಿವೆ: ಅಮ್ಮಸಂದ್ರ, ಕ್ಯಾತ್ಸಂದ್ರ. ವಾಡ, ವಾಡಿ ಗಳಿವೆ: ಧಾರವಾಡ, ವಾಡಿ, ಬಾಗೇವಾಡಿ. ಗುಂದಗಳು, ಗುಪ್ಪಗಳು ಇವೆ - ನರಗುಂದ, ನವಿಲುಗುಂದ, ಸಿರುಗುಪ್ಪ, ತಾಳಗುಪ್ಪ.

ಊರ ಹತ್ತಿರ ನೀರಿರಬೇಕಲ್ಲವೆ? ಕೆಲವು ಊರುಗಳಿಗೆ ಜಲಾಶಯದ ಹೆಸರುಗಳಿವೆ. ಇಲ್ಲಿ ಕೆರೆಗಳಿವೆ: ತರೀಕೆರೆ, ಅರಸೀಕೆರೆ. ಬಾವಿಗಳೂ ಇವೆ: ತೊಂಡೇಭಾವಿ, ಹಂಸಭಾವಿ. ಅಷ್ಟೇ ಏಕೆ? ಹೊಳೆ, ಸಮುದ್ರ, ಸಾಗರಗಳೂ ಇವೆ: ಐತಿಹಾಸಿಕ ಐಹೊಳೆ ಇದೆ. ಬಳ್ಳಾರಿ ಜಿಲ್ಲೆಯಲ್ಲಿ ಸಮುದ್ರವಂತೂ ಇಲ್ಲ, ಆದರೆ ಅಂಕಸಮುದ್ರ, ಹಂಪಸಾಗರ ಎಂಬ ಗ್ರಾಮಗಳಿವೆ. ಒಂದೇ ಊರಿನ ಹೆಸರನ್ನು ಬೇರೆ ಬೇರೆ ಜನ ಎರಡು ಬೇರೆ ಹೆಸರಿನಿಂದ ಕರೆಯುವುದೂ ಉಂಟು. ಕರ್ನಾಟಕದ ಮಧ್ಯದಲ್ಲಿರುವ ದಾವಣಗೆರೆಯನ್ನೇ ತೆಗೆದುಕೊಳ್ಳಿ: ಮೈಸೂರಿನವರಿಗೆ ಅದು ದಾವಣಗೆರೆ, ನದಿ ದಾಟಿ ಹೋದರೆ ಅದು ಡಾವಣಗೇರಿ.

ಊರ ಸುತ್ತಲೂ ಕೋಟೆ ಇರುವುದೂ ಉಂಟು. ಕೆಲವು ಕೋಟೆಗಳು: ಹೊಸಕೋಟೆ, ಮೇಲುಕೋಟೆ. ಕೆಲವು ದುರ್ಗಗಳು: ಚಿತ್ರದುರ್ಗ, ರಾಮದುರ್ಗ. ಕೋಟೆ ಕಲ್ಲಿಂದ ಕಟ್ಟಿದ್ದಲ್ಲವೆ? ಇನ್ನು ‘ಕಲ್ಲು’ಗಳೂ ಇವೆ: ಇಳಕಲ್ಲು, ಪಟ್ಟದಕಲ್ಲು. ‘ಗಡ’ ಎಂದರೂ ಕೋಟೆಯೇ: ಪಾವಗಡ, ಗಜೇಂದ್ರಗಡ. ಕೋಟೆ ಬೆಟ್ಟದ ಮೇಲಲ್ಲವೇ ಇರುವುದು? ಬೆಟ್ಟಗಳೂ ಇವೆ, ಗಿರಿಗಳೂ ಇವೆ: ನಂದಿಬೆಟ್ಟ, ಮಧುಗಿರಿ, ರಾಮಗಿರಿ.

ಊರುಗಳಿಗೆ ಕೆಲವು ವಿಶೇಷಣಗಳು ಅಂಟಿಕೊಂಡಿರುವುದೂ ಉಂಟು: ‘ಚಿಕ್ಕ’ಬಳ್ಳಾಪುರ, ‘ತಿರುಮಕೂಡಲು’ ನರಸೀಪುರ, ‘ಹಿರೇ’ ಹಡಗಲಿ, ‘ಕೊಕ್ಕರೆ’ ಬೆಳ್ಳೂರು, ‘ರಾಣಿ’ ಬೆನ್ನೂರು, ಮುಂತಾಗಿ. ಗಿಕಾರಾಂತಗಳು ತುಂಬಾ ಇವೆ: ಕೂಡ್ಲಿಗಿ, ಕುಷ್ಟಗಿ, ಕರಜಗಿ, ಬ್ಯಾಡಿಗಿ.

ಊರ ಹೆಸರುಗಳ ಬಗ್ಗೆ ಸಂಶೋಧನೆ ಮಾಡಿದರೆ ಇನ್ನೂ ಎಷ್ಟೋ ಸ್ವಾರಸ್ಯಕರ ವಿಷಯಗಳು ಹೊರಹೊಮ್ಮಬಹುದೇನೋ. ಸದ್ಯಕ್ಕೆ ನನಗೆ ಹೊಳೆಯುತ್ತಿರುವುದು ಇಷ್ಟೇ. ಅಂದಹಾಗೆ ನಿಮ್ಮೂರು ಯಾವುದು? ನಿಮ್ಮೂರಿನ ವೈಶಿಷ್ಟ್ಯ ಎಂಥದು ? ಊರು, ಹಳ್ಳಿ, ನಗರ, ದುರ್ಗ, ವಾಡಿ, ಸಂಧ್ರ, ಪಟ್ಟಣ ಮುಂತಾದ ಹೆಸರುಗಳ ಬಗ್ಗೆ ನಿಮಗೆ ತಿಳಿದಿರುವ ಸ್ವಾರಸ್ಯಕರ ವಿಷಯಗಳನ್ನು ಬರೆದು ತಿಳಿಸುವಿರಲ್ಲವೆ?

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more