• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸುಬ್ಬುಲಕ್ಷ್ಮಿ: ಅಗಲಿದ ಅನರ್ಘ್ಯರತ್ನಕ್ಕೆ ಅಭಿಮಾನದ ಅಶ್ರುತರ್ಪಣ

By Staff
|
  • ವಾಣಿ ಅರವಿಂದ್‌

vaniarvind@yahoo.com

M.S. Subbulakshmi as Meeraಮಧುರೈ ಷಣ್ಮುಖವಡಿವು ಸುಬ್ಬಲಕ್ಷ್ಮಿ ಎನ್ನುವ ಪೂರ್ಣ ನಾಮಧೇಯದ ‘ಎಂ.ಎಸ್‌’, ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸುಪ್ರಸಿದ್ಧವಾದ ಹೆಸರು. ಈಗ ನಮ್ಮನ್ನೆಲ್ಲ ಅಗಲಿ ಪರಮಾತ್ಮನೊಂದಿಗೆ ಐಕ್ಯರಾದರೂ ಅವರು ಹಾಡಿದ ‘ಕೌಸಲ್ಯಾ ಸುಪ್ರಜಾ ರಾಮ...’ ಸುಪ್ರಭಾತ ಅವರ ಕೋಗಿಲೆಕಂಠವನ್ನು ಅಜರಾಮರವಾಗಿಸಿದೆ; ಇವತ್ತಿಗೂ ಕೂಡ ಸಾವಿರಾರು ಮಂದಿಯ ಮನೆಗಳಲ್ಲಿ ಬೆಳಗಿನ ವೇಳೆ ವೆಂಕಟೇಶ ಸುಪ್ರಭಾತ ಖಂಡಿತವಾಗಿಯೂ ಕೇಳಿ ತೇಲಿ ಬರುತ್ತಿರುತ್ತದೆ; ಪ್ರಪಂಚದಾದ್ಯಂತದ ಎಷ್ಟೋ ದೇವಾಲಯಗಳಲ್ಲಿ, ಎಂ.ಎಸ್‌ ಧ್ವನಿಮುದ್ರಿಕೆಯಿಂದ ಯಾವುದೋ ಒಂದು ಸ್ತೋತ್ರ ಮೊಳಗುತ್ತಿರುತ್ತದೆ.

ಹಾಡಿನ ದನಿಯ ಒಡತಿ ನಮ್ಮನ್ನಗಲಿದ್ದಾರೆ; ಹಾಡು, ಧ್ವನಿ ಶಾಶ್ವತವಾಗಿವೆ!

ಸುಬ್ಬುಲಕ್ಷ್ಮಿಯವರ ಜನನ 1916ರಲ್ಲಿ. ತಾಯಿ ಷಣ್ಮುಖವಡಿವು ಅವರಿಂದ ಸಂಗೀತ ಕಲಿಕೆ ಪ್ರಾರಂಭ. ಜೊತೆಗೆ ವೀಣಾವಾದನದ ತರಬೇತಿ. ಇವರ ಮತ್ತೊಂದು ಹೆಸರು ಕುಂಜಮ್ಮ. ತಮ್ಮ 10ನೇ ವಯಸ್ಸಿನಲ್ಲಿ ಇವರ ಮೊದಲ ಗಾನಮುದ್ರಿಕೆ ಹೊರಬಂತು. ತಮ್ಮ 17ನೇ ಹರಯದಲ್ಲಿ ಮದ್ರಾಸ್‌ ಸಂಗೀತ ಅಕಾಡೆಮಿಯಲ್ಲಿ ಪದಾರ್ಪಣ ಮಾಡಿದವರಿಗೆ ಮತ್ತೆ ಹಿಂತಿರುಗಿ ನೋಡುವ ಸಂದರ್ಭ ಬರಲಿಲ್ಲ. ಮುಂದೆ ಅವರನ್ನು ಪ್ರೊತ್ಸಾಹಿಸಿ, ಅವರಲ್ಲಿದ್ದ ನಿಜವಾದ ಸಂಗೀತ ಪ್ರತಿಭೆಯನ್ನು ಹೊರ ತರಲು ಸಂಪೂರ್ಣ ಸಹಕಾರ ಕೊಟ್ಟವರು ಅವರ ಪತಿ ದಿವಂಗತ ಸದಾಶಿವಮ್‌ ಅವರು. 1944ರಲ್ಲಿ ಬಿಡುಗಡೆಯಾದ ‘ಮೀರ’ ಚಿತ್ರದಲ್ಲಿನ ಅವರ ಸಂಗೀತ, ನಟನೆ ಎಲ್ಲವೂ ಪ್ರಶಂಸನೀಯ.

Tribute to M.S. Subbulakshmiಸುಬ್ಬುಲಕ್ಷ್ಮಿಯವರ ಕಂಠದಿಂದ ಹೊರಹೊಮ್ಮುತ್ತಿದ್ದ ಸಂಗೀತ ದೈವತ್ವದ ಕಡೆಗೊಯ್ಯುವಂಥದ್ದು. ತ್ಯಾಗರಾಜರ ‘ಓ ರಂಗಶಾಯಿ’, ದೀಕ್ಷಿತರ ‘ರಂಗಪುರವಿಹಾರ’, ಶ್ಯಾಮಾ ಶಾಸ್ತ್ರಿಗಳ ‘ದೇವಿ ಬ್ರೋವ’ ಹೀಗೆ ಪಟ್ಟಿ ಮಾಡುತ್ತ ಹೋದರೆ ಒಂದೇ ಎರಡೇ! ಪುರಂದರ ದಾಸರ ‘ಜಗದೋದ್ಧಾರನ’ ದೇವರನಾಮವನ್ನು ಈ ಮಹಾತಾಯಿ ಹಾಡಿದರಂತೂ ಮಾತೆಯ ಮಮತೆಯ ವಾತ್ಸಲ್ಯ ಉಕ್ಕಿ ಹರಿಯುತ್ತದೆ. ಇನ್ನು ಭಜನೆಗಳಲ್ಲಿ ‘ವೈಷ್ಣವ ಜನ ತೋ....’ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಅಚ್ಚುಮೆಚ್ಚು.

* * *

ಎಂ.ಎಸ್‌. ಹಾಡಿದರೆಂದರೆ ಆ ಸಂಗೀತಾಮೃತವು ರಾಗ, ತಾಳ, ಭಾವ, ಶೃತಿ, ಸ್ಪಷ್ಟತೆ ಇವೆಲ್ಲದರ ಪ್ರಮಾಣಬಧ್ಧ ಸಂಯೋಗ. ಅವರು ತನ್ನಾತ್ಮ-ಪರಮಾತ್ಮನಿಗೆ ಹಾಡುತ್ತಿದ್ದರು. ಆದ್ದರಿಂದಲೇ ಇರಬೇಕು ಅವರ ಕಂಠಕ್ಕೆ ಆ ಮೋಡಿ ಮಾಡುವ ಶಕ್ತಿ ಇದ್ದದ್ದು. ಏನೊಂದೂ ಆಡಂಬರವಿಲ್ಲದ ಸರಳ ಆದರೆ ಅಷ್ಟೇ ಸಂಕೀರ್ಣವಾದುದು ಅವರ ಪಾಂಡಿತ್ಯ. ಗುರುಗಳಾದ ಖ್ಯಾತ ಸಂಗೀತಗಾರ ದಿವಂಗತ ಶ್ರೀ ಶೆಮ್ಮಂಗುಡಿ ಶೀನಿವಾಸ ಅಯ್ಯರ್‌ ಅವರು ಹೇಳಿದಂತೆ ‘ಸುಬ್ಬುಲಕ್ಷ್ಮಿಅವರದ್ದು ಕಲ್ಮಷ ರಹಿತ ಸಂಗೀತ’. ಪ್ರತಿಯಾಂದು ಕೃತಿಯಲ್ಲೂ ನೈಜತೆ ಹಾಗೂ ಸ್ಪಷ್ಟತೆ ಎದ್ದು ಕಾಣುತ್ತಿತ್ತು. ಹಾಡುವ ಪ್ರತಿಯಾಂದು ಸ್ವರದ ಅರಿವು ಅವರಿಗೆ ಚೆನ್ನಾಗಿ ಇರುತ್ತಿತ್ತು. ಕರ್ನಾಟಕ ಶೈಲಿಯ ಸಂಗೀತಕ್ಕಷ್ಟೇ ಸೀಮಿತವಾಗಿರದೆ ಹಿಂದುಸ್ತಾನಿ ಸಂಗೀತ ಪ್ರಕಾರದಲ್ಲೂ ನೈಪುಣ್ಯ ಸಾಧಿಸಿದ್ದರು. ಗುರು ಪಂಡಿತ್‌ ನಾರಾಯಣ ರಾವ್‌ ವ್ಯಾಸ್‌ ಅವರಲ್ಲಿ ಹಿಂದುಸ್ತಾನಿ ಸಂಗೀತದ ತರಬೇತಿ ಪಡೆದಿದ್ದರು.

M.S. Subbulakshmiಕರ್ನಾಟಕ ಸಂಗೀತ ಹಾಡುಗಾರಿಕೆಯನ್ನು ಪಾಶ್ಚಿಮಾತ್ಯ ದೇಶಗಳಿಗೆ ಮೊದಲ ಬಾರಿ ಪರಿಚಯಿಸಿದ ಹೆಗ್ಗಳಿಕೆ ಸುಬ್ಬುಲಕ್ಷ್ಮಿಯವರದು. 1966ರ ವಿಶ್ವಸಂಸ್ಥೆಯ ದಿನದಂದು ಎಂ. ಎಸ್‌. ಹಾಡಿದ, ಆಗಿನ ಕಂಚಿಶ್ರೀಗಳಾದ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ಬರೆದ ‘ಮೈತ್ರಿಮ್‌ ಭಜತ’ ಚಿರಕಾಲ ನೆನಪಿನಲ್ಲಿ ಉಳಿಯುವಂಥದ್ದು.

ಸಂಗೀತ ಕ್ಷೇತ್ರಕ್ಕೆ ಅಪಾರ ಕೊಡುಗೆಯನ್ನು ನೀಡಿರುವ ಎಮ್‌.ಎಸ್‌, ಮಿಕ್ಕಂತೆಯೂ ಮಾಡಿರುವ ದಾನ ಧರ್ಮಗಳಿಗೆ, ಕೈಗೊಂಡ ಸೇವಾಕಾರ್ಯಗಳಿಗೆ ಎಣಿಕೆಯೇ ಇಲ್ಲ. ನೂರಾರು ವಿದ್ಯಾಸಂಸ್ಥೆಗಳಿಗೆ, ಅನೇಕ ಪರಿಹಾರ ನಿಧಿಗಳಿಗೆ ಕೊಡುಗೈ ದಾನಿಯಾಗಿರುವುದರಲ್ಲಿ ಅವರು ಎಂದೆಂದಿಗೂ ಮುಂದೆ.

ಸಾಧನೆಯ, ಕಲಾರಾಧನೆಯ ವಿನಮ್ರ ಹಾದಿಯಲ್ಲಿ ಸುಬ್ಬುಲಕ್ಷ್ಮಿಯವರು ಬಾಚಿಕೊಂಡಿರುವ ಪ್ರಶಸ್ತಿಗಳು ಅನೇಕ. ಅವುಗಳಲ್ಲಿ ಮುಖ್ಯವಾದವು:

* ಪದ್ಮ ಭೂಷಣ (1954)

* ಸಂಗೀತ ಕಲಾನಿಧಿ (1968) ಬಿರುದು ಪಡೆದ ಪ್ರಪ್ರಥಮ ಮಹಿಳೆ

* ರಾಮೊನ್‌ ಮ್ಯಾಗ್ಸೆಸೆ ಪ್ರಶಸ್ತಿ (1974)

* ಪದ್ಮ ವಿಭೂಷಣ (1975)

* ಕಾಳಿದಾಸ ಸಮ್ಮಾನ (1988)

* ರಾಷ್ಟ್ರದ ಸಮಗ್ರತೆಗಾಗಿ ಇಂದಿರಾ ಗಾಂಧಿ ಪ್ರಶಸ್ತಿ (1990)

* ಭಾರತ ರತ್ನ (1998)

M.S. Subbulakshmi1997ರಲ್ಲಿ ಪತಿ ಸದಾಶಿವಂ ನಿಧನರಾದ ಮೇಲೆ ಸುಬ್ಬುಲಕ್ಷ್ಮಿಬಹಿರಂಗ ಸಭೆಗಳಲ್ಲಿ ಹಾಡುವುದನ್ನು ನಿಲ್ಲಿಸಿದ್ದರು.

ಸಂಗೀತದ ಮೂಲಕ ಸಾಕ್ಷಾತ್ಕಾರವನ್ನು ಕಂಡುಕೊಂಡ ಇವರ ನೆನಪು ಹಾಗೂ ಕಂಚಿನಂತಹ ಕಂಠ ಎಂದೆಂದೂ ನಮ್ಮ ಮನಗಳಲ್ಲಿ ಹಸಿರಾಗಿ ಉಳಿಯುವುದರಲ್ಲಿ ಸಂದೇಹವೇ ಇಲ್ಲ.

ಅಂತಹ ಆ ಅನರ್ಘ್ಯರತ್ನ ಪ್ರತಿಭೆಯ ಆತ್ಮಕ್ಕಿದೋ ನನ್ನ ಅನಂತಾನಂತ ವಂದನೆಗಳು.

ಭಜ ಗೋವಿಂದಂ ಭಜ ಗೋವಿಂದಂ ಗೋವಿಂದಂ ಭಜ ಮೂಢ ಮತೇ...

ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X