• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾರುಖ್‌ ಸಿನಿಮಾ ಮಣಿಸಿದ ಮಹಾಭಾರತ !

By Staff
|

ಜುಲೈ ತಿಂಗಳಿನಲ್ಲಿ ನನ್ನ ಮಗ ಸಿದ್ಧಾರ್ಥನ ನಾಲ್ಕು ಜನ ಭಾರತೀಯ ಗೆಳೆಯರು ಮನೆಯಲ್ಲಿ ಊಟಕ್ಕೆ ಹಾಜರಿದ್ದರು. ಅವರಲ್ಲಿ ಇಬ್ಬರು ಹುಡುಗರು ಮುಂಬೈನಿಂದ ಇಲ್ಲಿ ಓದಲು ಬಂದವರು. ಊಟ ಮುಗಿದ ಮೇಲೆ ಹುಡುಗರೆಲ್ಲಾ ಸಿದ್ಧಾರ್ಥನ ರೂಮಿನಲ್ಲಿ ಸೇರಿಕೊಂಡರು. ‘ಮೈ ಹೂ ನಾ’ ಚಿತ್ರದ ಹಾಡುಗಳು ರೂಮಿನಿಂದ ಜೋರಾಗಿ ಕೇಳಿ ಬರುತ್ತಿತ್ತು. ಜೊತೆಗೆ ನಗು, ಕಿರುಚಾಟ, ಗದ್ದಲಗಳೂ ಕಮ್ಮಿ ಇರಲಿಲ್ಲ. ಹದಿ ಹರೆಯ ! ನಾನೂ ಅದರ ಸುಧೆಯನ್ನು ಸವಿದವಳೇ ಅಲ್ಲವೇ? ಈ ಸಮಯ ಮತ್ತೆ ಬರುವುದಿಲ್ಲ ಎಂದುಕೊಳ್ಳುತ್ತಾ ಅಡಿಗೆ ಮನೆಯ ಕಾರ್ಯ ಕಲಾಪಗಳ ಮುಗಿಸಿದೆ. ಇಷ್ಟರಲ್ಲಿ ನಾಲ್ಕು ಗಂಟೆಯಾಗಿತ್ತು.

ಯಜಮಾನರು ಬೆಂಗಳೂರಿನಿಂದ ತಂದಿದ್ದ ಮಹಾಭಾರತದ ಸಿ.ಡಿ. ನೋಡೋಣ ಎನ್ನಿಸಿತು. ಅದನ್ನು ಹಾಕಿ ಟಿ.ವಿ. ಯ ಮುಂದೆ ಕುಳಿತೆ. ಪಕ್ಕದಲ್ಲಿ ಯಜಮಾನರೂ ಆಸೀನರಾಗಿದ್ದರು. ‘ಮಹಾಭಾರತ್‌’ ಎಂದು ಮಹೇಂದ್ರ ಕಪೂರರ ಕಂಚಿನ ಧ್ವನಿ ಹೊಮ್ಮಿದ ಕೂಡಲೇ ರೂಮಿನ ಬಾಗಿಲು ತೆಗೆದು ಒಬ್ಬೊಬ್ಬರಾಗಿ ಬಂದು ಟಿ.ವಿ. ಯ ಮುಂದೆ ಕುಳಿತರು. ಅಪರೂಪದ ದೃಶ್ಯ ಕಂಡಂತೆ ನಮಗೆ ಬಹಳ ಆಶ್ಚರವಾಯಿತು.

ಶಾರುಖ್‌, ಸಂಜಯ್‌ದತ್‌, ಐಶ್ವರ್ಯಾ ರೈ, ಪ್ರೀತಿ ರಿkುಂಟಾ ಎನ್ನುವ ಯುವಕರಿಗೆ ‘ಮಹಾಭಾರತ’ ?

ಸ್ವಲ್ಪ ಹೊತ್ತು ನೋಡಿ ಹೋಗ್ತಾರೇನೋ? ಎಂದು ಟಿ.ವಿ. ಕಡೆ ನನ್ನ ದೃಷ್ಟಿ ಹಾಯಿಸಿದೆ. ಕುಂತಿಗೆ ಮಕ್ಕಳನ್ನು ಪಡೆವ ವರ, ಕರ್ಣ ಜನನ, ಪಾಂಡುವಿನೊಡನೆ ಮದುವೆ, ಪಾಂಡುವಿಗೆ ಶಾಪ, ಅವರುಗಳು ತಪಸ್ಸಿಗೆ ಹೊರಟಿದ್ದು, ಪಾಂಡವರ ಜನನ ಮತ್ತು ಮಾದ್ರಿಯ ಸಹಗಮನ ಇವುಗಳನ್ನು ಒಳಗೊಂಡ ಸಿ.ಡಿ. ಅದಾಗಿತ್ತು. ಸಿ.ಡಿ. ಮುಗಿಯುವ ತನಕ ಯಾರೂ ತುಟಿಕ್‌ಪಿಟಿಕ್‌ ಎನ್ನಲಿಲ್ಲ. ಮಧ್ಯೆ ಎರಡು ಸಲ ಕಾಫಿಯ ಸಮಾರಾಧನೆಯೂ ನಡೆಯಿತು.

ಸಿ.ಡಿ. ಮುಗಿದಾಗ ನಾವಿದ್ದೇವೆ ಎಂಬುದನ್ನು ಮರೆತಿದ್ದ ಪ್ರಿಯಾಂಕ್‌ ಹಿಂದಿಯಲ್ಲಿ ‘ಶಾಪ್‌, ವರ್‌ ಎ ಸಬ್‌ ಝೂಟ್‌, ಶಾಯದ್‌ ಪಾಂಡು ಕೊ ಕುಚ್‌ ಪ್ರಾಬ್ಲಂ ಹೋಗಾ, ಇ ಸೀ ಲಿ ಯೇ ಕುಂತಿ ಕೋ ದೂಸ್‌ ರೋ ಸೆ ಬಚ್ಚಾ ಹು ಆ’ ಎಂದನು. (ಶಾಪ, ವರ ಎಲ್ಲವೂ ಸುಳ್ಳು, ಪಾಂಡುವಿಗೆ ಏನೋ ತೊಂದರೆ ಇತ್ತೇನೋ ಆದ್ದರಿಂದ ಕುಂತಿಗೆ ಇನ್ನೊಬ್ಬರಿಂದ ಮಕ್ಕಳಾಯಿತು). ಮಿಕ್ಕ ಹುಡುಗರು ತಕ್ಷಣ ಕಣ್ಣು ಸನ್ನೆ ಮಾಡಿದಾಗ ನಾವಿರುವುದನ್ನು ಕಂಡು ನಾಲಿಗೆ ಕಚ್ಚಿಕೊಂಡನು.

ನಿಖಿಲ್‌ ಎಂಬ ಹುಡುಗ ನಾವು ಭಾರತದಲ್ಲಿ ಇದ್ದಾಗ ‘ಮಹಾಭಾರತ’ ಸರಣಿ ಟಿ.ವಿ.ಯಲ್ಲಿ ನೋಡಿದ್ದು ಈಗ ಮತ್ತೆ ಮೊದಲ ಸಲ ನೋಡಿದಂತೆ ಆಯಿತು ಎಂದನು.

ಮಹಾಭಾರತವೇ ಹಾಗೆ, The Greatest Epic of all Time ಮತ್ತೆ ಮತ್ತೆ ಓದಬೇಕೆನಿಸುತ್ತದೆ. ಪ್ರತಿಸಲ ಓದಿದಾಗ ಹೊಸ ಹೊಸ ಅಂಶಗಳು ಕಂಡುಬರುತ್ತದೆ ಮತ್ತು ಹೊಸ ಹೊಸ ವಿಷಯಗಳನ್ನು ಕಲಿಯುತ್ತೇವೆ ಎಂದು ಉತ್ತರವಿತ್ತರು ನನ್ನವರು.

ಪ್ರಿಯಾಂಕ್‌ ಹೇಳಿದ some problem ಬಗ್ಗೆ positive approach ಕೊಡಬೇಕು ಎಂದು ಅನಿಸಿತು :

ಪಾಂಡುವಿನಿಂದ ಮಕ್ಕಳಾಗುವ ಸಾಧ್ಯತೆ ಇರಲಿಲ್ಲವೇನೋ? ಆದ್ದರಿಂದ ಕುಂತಿಯ ಅಂದಿನ ‘ನಿಯೋಗ’- temporary relationship ನಿಂದಾಗಿ ಮಕ್ಕಳನ್ನು ಪಡೆದಳು. ಅಂದಿನ ಸಮಾಜದಲ್ಲಿ ಪತಿಯಿಂದ ಮಕ್ಕಳಾಗುವ ಸಾಧ್ಯತೆ ಇಲ್ಲದಿದ್ದಲ್ಲಿ ಈ ಪದ್ಧತಿ ಜಾರಿಯಲ್ಲಿತ್ತು. ಇದಕ್ಕೆ ಪತಿ ಮತ್ತು ಸಮಾಜದ ಅಂಗೀಕಾರವೂ ಇತ್ತು. ರಾಜನಿಗೆ ಮಕ್ಕಳಾಗದಿದ್ದಲ್ಲಿ ಸಿಂಹಾಸನದ ಉತ್ತರಾಧಿಕಾರಿಗೋಸ್ಕರವಾಗಿ ವಿವೇಕ, ಜ್ಞಾನಿಯುಳ್ಳ ಮಹರ್ಷಿಗಳಿಂದ ವೀರ್ಯದಾನ ನಡೆಯುತ್ತಿತ್ತು. ಈ ಸನ್ಯಾಸಿಗಳು ವೀರ್ಯದಾನ ಮಾಡಿದ ನಂತರ ಹೊರಟುಹೋಗುತ್ತಿದ್ದರು. ಮತ್ತೆ ಇವರಿಗಾಗಲೀ ದಾನ ಪಡೆದ ಹೆಣ್ಣಿಗಾಗಲೀ ಸಂಬಂಧ ಇರುತ್ತಿರಲಿಲ್ಲ. ಆಗ ಮಕ್ಕಳಾಗದಿದ್ದಲ್ಲಿ ಪಿತೃಗಳಿಗೆ ಮುಕ್ತಿಯಿಲ್ಲ ಎಂಬ ನಂಬಿಕೆ ಬಲವಾಗಿತ್ತು.

ಪಾಂಡು, ಧೃತರಾಷ್ಟ್ರರ ಜನನವೂ ಕೂಡ ಹೀಗೆಯೇ? ಶಂತನುವಿನ ನಂತರ ಭೀಷ್ಮ ಮದುವೆ ಆಗಲಿಲ್ಲ. ವಿಚಿತ್ರವೀರ್ಯನಿಗೆ ಮದುವೆ ಆಗಿತ್ತು. ಮಕ್ಕಳಾಗಿರಲಿಲ್ಲ. ಚಿತ್ರಾಂಗದ ದ್ವಂದ್ವ ಯುದ್ಧದಲ್ಲಿ ಮಡಿದನು. ಸಿಂಹಾಸನಕ್ಕೆ ಉತ್ತರಾಧಿಕಾರಿ ಬೇಕಿತ್ತು. ಆದ್ದರಿಂದ ವ್ಯಾಸರಿಂದ ಧೃತರಾಷ್ಟ್ರ, ಪಾಂಡುವಿನ ಜನನ. ಧೃತರಾಷ್ಟ್ರ, ಪಾಂಡು ಇವರು ಕೂಡ ವ್ಯಾಸರ ಮಕ್ಕಳಲ್ಲವೇ? ಅವರನ್ನು ವ್ಯಾಸರ ಮಕ್ಕಳೆಂದು ಯಾರೂ ಹೇಳುವುದಿಲ್ಲ. ಹಾಗೆಯೇ ಕುಂತಿಯ ಮಕ್ಕಳ biological father ಬೇರೆ ಆದರೂ ನಕುಲ, ಭೀಮ, ಅರ್ಜುನಾದಿಗಳು ‘ಪಾಂಡು’ ಪುತ್ರರು ಎಂದೇ ಕರೆಯಲ್ಪಟ್ಟರು. ಇದರ ಬಗ್ಗೆ ಅಂದಿನ ಸಮಾಜ ಎಲ್ಲೂ ಚಕಾರ ಎತ್ತಿಲ್ಲ. ಇದರಿಂದ ಈ ಪದ್ಧತಿ ಜಾರಿಯಲ್ಲಿತ್ತು ಎಂದು ತಿಳಿದು ಬರುತ್ತದೆ. ಆದರೆ ಈ ಪದ್ಧತಿ ಜನಸಾಮಾನ್ಯರಿಗೂ ಅನ್ವಯಿಸುತ್ತಿತ್ತೇ? ಇದರ ಬಗ್ಗೆ ನನಗೆ ತಿಳಿದಿಲ್ಲ.

ಈಗ ಕಾಲ ಬದಲಾಗಿದೆ ಬಿಡಿ. ಐರೋಪ್ಯ ದೇಶಗಳಲ್ಲಿ ಬಾಡಿಗೆ ತಾಯಿ (surrogate mother) ಗರ್ಭವನ್ನು ಬಾಡಿಗೆಗೆ ಪಡೆದು ಮಗು ಪಡೆಯುತ್ತಾರೆ. ಆಗಿನ ಕಾಲದಲ್ಲಿ ‘ನಿಯೋಗ’ ಹಣಕ್ಕಾಗಿ ನಡೆಯದೆ, ವಂಶೋಭಿವೃದ್ಧಿಗಾಗಿ ನಡೆಯಿತು ಎಂದು ದಡಬಡನೆ ಹೇಳಿ ಮುಗಿಸಿದೆ. ಆ ಕ್ಷಣದಲ್ಲಿ ನನ್ನ ಉತ್ತರ ಸಮಂಜಸವೆನಿಸಿತು.

ಅಷ್ಟರಲ್ಲಿ ಸಿದ್ಧಾರ್ಥ - ‘ದ್ರೌಪದಿಗೆ ಐದು ಜನ ಗಂಡಂದಿರು’ ಎಂದು ಕೇಳಿ ಅರ್ಧಕ್ಕೇ ಪ್ರಶ್ನೆ ನಿಲ್ಲಿಸಿದ.

ದ್ರೌಪದಿ ಒಬ್ಬಳಿಗೆ ಮಾತ್ರ ‘ಬಹು ಪತಿತ್ವ’! ಇನ್ನಾರ ಉಲ್ಲೇಖನವೂ ಬರುವುದಿಲ್ಲ. ದ್ರುಪದ ಐದು ಜನರಿಗೆ ಮಗಳನ್ನು ಮದುವೆ ಮಾಡಿ ಕೊಡಲು ಮೊದಲು ಒಪ್ಪಲಿಲ್ಲ. ಅರ್ಜುನ ಸ್ವಯಂವರದಲ್ಲಿ ದ್ರೌಪದಿಯನ್ನು ಗೆದ್ದದ್ದು, ಮಿಕ್ಕವರಿಗೆ ಹೇಗೆ ದ್ರೌಪದಿ ಪತ್ನಿಯಾಗಲು ಸಾಧ್ಯ ಎಂಬ ಪ್ರಶ್ನೆ ಎದ್ದಿತು. (ದ್ರೌಪದಿ ಹಿಂದಿನ ಜನುಮದಲ್ಲಿ ಪತಿಂದೇಹಿ ಎಂದು ಐದು ಸಲ ಈಶ್ವರನನ್ನು ವರ ಕೇಳಿದ್ದಳು ಅದಕ್ಕಾಗಿ ಅವಳಿಗೆ ಐವರು ಪತಿಗಳು ಎಂದು ಹೇಳಿ ಮದುವೆಗೆ ಹಿರಿಯರನ್ನು ವ್ಯಾಸರು ಒಪ್ಪಿಸಿದರು). ದ್ರೌಪದಿಯ ‘ಬಹು ಪತಿತ್ವ’ ಕ್ಕೆ ಕರ್ಣ ಕುಹಕವಾಡಿ, ವೇಶ್ಯೆ ಎಂದು ತುಂಬಿದ ಸಭೆಯಲ್ಲಿ ಚುಚ್ಚು ನುಡಿಗಳನ್ನಾಡಿದನು. ‘ಬಹು ಪತ್ನಿತ್ವ’ ಇದು ಜಾರಿಯಲ್ಲಿತ್ತು.

‘ನಿಯೋಗ ಪದ್ಧತಿ’ ಒಪ್ಪಿದ್ದ ಸಮಾಜದಲ್ಲಿ ಇದ್ದ ಕುಂತಿ ಕರ್ಣನನ್ನು ತ್ಯಜಿಸಿದ್ದು ಏಕೆ? ಎಂದು ಕೇಳಿದ ಸುದೀಪ.

ನಿಯೋಗಕ್ಕೆ ಪತಿ, ಸಮಾಜದ ಅಂಗೀಕಾರ ಇತ್ತು. ಆದರೆ ಕುಂತಿ ಕರ್ಣನನ್ನು ಪಡೆದಾಗ ಕನ್ಯೆ, ರಾಜಕುವರಿ. ಸಮಾಜಕ್ಕೆ ಹೆದರಿ ಮಗುವನ್ನು ನದಿಯಲ್ಲಿ ತೇಲಿ ಬಿಟ್ಟಳು. ಕನ್ಯೆಯಾಗಲೀ, ಹುಡುಗನಾಗಲೀ ಮದುವೆಯ ಮೊದಲು ಯಾರೊಡನೆಯೂ ದೈಹಿಕ ‘ಸಂಬಂಧ’ ಇಟ್ಟುಕೊಳ್ಳುವ ಪದ್ಧತಿ ಅಂದಿನ ಸಮಾಜದಲ್ಲೂ ಜಾರಿಯಲ್ಲಿರಲಿಲ್ಲ. ಇಂದೂ ಅದು ನಮ್ಮಲ್ಲಿ ಜಾರಿಯಲ್ಲಿಲ್ಲ.

ಲಾಕ್ಷಾಗೃಹ ಮತ್ತು ಇಂದ್ರಪ್ರಸ್ಥದ ಅರಮನೆ ಅಂದಿನ ವಿಜ್ಞಾನದ ಒಂದು ನಿದರ್ಶನ. ಲಾಕ್ಷಾಗೃಹ ಕಟ್ಟಲು ಅರಗು, ಮೇಣ, ಮಣ್ಣು, ಮರದ ಪುಡಿ ಉಪಯೋಗಿಸಿದ್ದರು. ಇಂದ್ರಪ್ರಸ್ಥದ ಅರಮನೆಯಲ್ಲಿ ‘ಗ್ರಾನೈಟ್‌’ ತರಹದ ಕಲ್ಲುಗಳನ್ನು ಬಳಸಿದ್ದರೋ ಏನೋ? optical illusion, ನೀರಿಲ್ಲದ ಕಡೆ ನೀರು ಇರುವ ಭ್ರಮೆ, ಬೆಂಕಿಯ ಭ್ರಮೆ ಮೂಡಿಸಿ ಕಟ್ಟಿದ ಅರಮನೆಯ ಸೊಬಗು ಅಂದಿನ arichitecture(ವಾಸ್ತು ಶಿಲ್ಪ) ಮತ್ತು ರಾಸಾಯನಿಕ ವಸ್ತುಗಳ ಉಪಯೋಗದ ಬಗ್ಗೆ ಉತ್ತಮ ಉದಾಹರಣೆ.

ಗಾಂಧಾರಿಯಿಂದ ಗರ್ಭದಿಂದ ಹೊರ ಬಿದ್ದ ಭ್ರೂಣದ ಪಿಂಡಗಳನ್ನು ವ್ಯಾಸರು ತುಪ್ಪದ ಪಾತ್ರೆಯಲ್ಲಿ ಇಟ್ಟು ಸಂರಕ್ಷಿಸಿದರಂತೆ. ಒಂದಲ್ಲಾ, ಎರಡಲ್ಲಾ, ಒಟ್ಟು ನೂರೊಂದು. ಮಗು ಬೆಳೆಯಲು ಬೇಕಾದ ತಾಯ ಗರ್ಭದ ಶಾಖ, ಆಹಾರ, ನೀರುಗಳನ್ನು ಹೇಗೆ ಒದಗಿಸಿರಬಹುದು.

ಸಂಜಯನ ದಿವ್ಯ ದೃಷ್ಟಿ ಅಬ್ಬಾ! ಇಂದು ಮನೆಯಲ್ಲಿ ಟಿ.ವಿ. ಯ ಮುಂದೆ ಕುಳಿತು ವಿಶ್ವವನ್ನು ನೋಡುತ್ತೇವೆ. ಅಂದು ಯುದ್ಧ ನಡೆಯುವಾಗ ಯುದ್ಧ ಭೂಮಿಯಲ್ಲಿ ಇಲ್ಲದೆ ಕುಳಿತೆಡೆಯಲ್ಲಿ ಧೃತರಾಷ್ಟ್ರನಿಗೆ running commentary ಕೊಟ್ಟ ಸಂಜಯ. ಇದು ಹೇಗೆ ಸಾಧ್ಯವಾಯಿತು.

ದುರ್ಯೋಧನ ಹಲವು ಗಂಟೆಗಳ ಕಾಲ ನೀರಿನಲ್ಲಿ ಅಡಗಿ ಕೂತದ್ದು, ‘ಜಲ ಸ್ತಂಭನ’ ಇವೆಲ್ಲವೂ ಇಂದಿಗೂ ಕೌತುಕ, ಅಚ್ಚರಿ ಮೂಡಿಸಿ ಯೋಚಿಸುವಂತೆ ಮಾಡುತ್ತದೆ ಎನ್ನುತ್ತಿದ್ದಂತೆಯೇ- ನಿಖಿಲ್‌, ಗಂಟೆ ಏಳಾಯಿತು, ನಾವು ಹಾಸ್ಟಲ್‌ಗೆ ವಾಪಸ್‌ ಹೋಗಬೇಕು ಎಂದನು. ಚಪಾತಿ, ದಾಲ್‌ ಮಾಡುತ್ತೇನೆ ಊಟ ಮಾಡಿಕೊಂಡು ಹೋಗಿ ಎಂದು ಹೇಳಿ ಮತ್ತೆ ಅಡಿಗೆ ಮನೆಯ ಕಡೆ ನಡೆದೆ.

ನಮಗಂತೂ ಸಂತೋಷ, ಆಶ್ಚರ್ಯ ಹುಡುಗರು ಮಹಾಭಾರತದ ಬಗ್ಗೆ ಇಷ್ಟಾದರೂ ವಿಷಯಗಳನ್ನು ತಿಳಿದುಕೊಂಡು, ಕುತೂಹಲ ತೋರಿಸಿದರಲ್ಲಾ ಎಂದು ಹೆಮ್ಮೆಯೂ ಆಯಿತು. ಈ ವಿಷಯಗಳ ಬಗ್ಗೆ ಚರ್ಚೆ, ವಿಚಾರ ವಿನಿಯಮಗಳು ಜೀವನ ಪೂರ್ತಿ ಮಾಡಿದರೂ ವೇಳೆ ಸಾಕಾಗುವುದಿಲ್ಲ.

ಶಾರುಖ್‌ನ ‘ಮೈ ಹೂ ನಾ’ ಮರೆತೇ ಹೋಗಿ ಮಹಾಭಾರತ ‘ಹಮ್‌ ಹೈ ನಾ’ ಸ್ಥಾನ ಸ್ಥಾಪಿಸಿತ್ತು.

ಈ ಹದಿಹರೆಯದ ವಯಸ್ಸಿನವರಿಗೆ ಎಲ್ಲದ್ದಕ್ಕೂ ಪ್ರಶ್ನೆ. ನಾವು ಇದೇ ವಯಸ್ಸಿನವರಿದ್ದಾಗ ಪ್ರಶ್ನೆಗಳು ಮನದಲ್ಲಿ ಎದ್ದರೂ ಕೇಳುವ ಧೈರ್ಯವೂ ಇರಲಿಲ್ಲ, ಯಾರೂ ಮುಕ್ತ ಪ್ರಶ್ನೆಗಳಿಗೆ ಉತ್ತರವೂ ಕೊಡುತ್ತಿರಲಿಲ್ಲ. ‘ತಲೆಹರಟೆ’, ದೊಡ್ಡವರಾದ ಮೇಲೆ ನಿಮಗೇ ತಿಳಿಯುತ್ತದೆ ಎಂಬ ಉತ್ತರ ಸಿದ್ಧವಾಗಿರುತ್ತಿತ್ತು. ಇಂದಿನ ಹುಡುಗರಿಗೆ ಎಲ್ಲ ವಿಷಯಕ್ಕೂ ವಿವರಣೆ ಅತ್ಯಗತ್ಯ, ವಿವರಣೆ ಸಿಗದೆ ಅರ್ಥವಾಗದಿದ್ದಲ್ಲಿ ‘ನಾನ್ಸೆನ್ಸ್‌’. ತಂದೆ ತಾಯಿಯರ ಜೊತೆ ಕೂತು ಮುಕ್ತವಾಗಿ ವಿಷಯಗಳನ್ನು ಚರ್ಚಿಸುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಕೂಡ ನಿರ್ಭೀತಿಯಿಂದ ಹೇಳುತ್ತಾರೆ. ಈ ಮುಕ್ತ ಚರ್ಚೆ, ಅಭಿಪ್ರಾಯಗಳ ವಿಚಾರ ವಿನಿಮಯ genereshan gap ಕಮ್ಮಿ ಮಾಡುತ್ತದೆ ಎಂದು ನನ್ನ ಅನಿಸಿಕೆ.

ನಿಖಿಲ್‌, ಸುದೀಪ್‌, ಪ್ರದೀಪ್‌, ಪ್ರಿಯಾಂಕ್‌ ಚಪಾತಿ ತಿಂದು ವಿದಾಯ ಹೇಳಿ ಹೊರಟರು. ಇವರುಗಳು ಬಂದಾಗಲೆಲ್ಲ ಕ್ರಿಕೆಟ್‌, ಪಿಕ್ಚರ್‌, ಪಾಲಿಟಿಕ್ಸ್‌ ಎಂದು ಮಾತನಾಡುತ್ತಿದ್ದ ನಮಗೆ ಇಂದು ಅವರ ಹೊಸಮುಖದ ಕಿರು ಪರಿಚಯವಾಯಿತು.

ಸ್ವಾಮಿ ಚಿನ್ಮಯಾನಂದರು ಹೇಳಿರುವಂತೆ youth are not use less but they are used less ಎಂಬ ಅರ್ಥಪೂರ್ಣ ಮಾತುಗಳು ನೆನಪಿಗೆ ಬಂದವು.

ಮುಖಪುಟ / ಎನ್‌ಆರ್‌ಐ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more